
ಯುರೋಪ್ನ ಕ್ರೊಯೇಷಿಯಾ ಕರಾವಳಿಯ ಅಡ್ರಿಯಾಟಿಕ್ ಸಮುದ್ರದ ಆಳದಲ್ಲಿ 2,000 ಕ್ಕೂ ಹೆಚ್ಚು ವರ್ಷಗಳಿಂದ ಮುಳುಗಿ ಬಿದ್ದಿದ್ದ ಬೃಹತ್ ಪುರಾತನ ಹಡಗೊಂದರ ಭಗ್ನಾವಶೇಷಗಳನ್ನು (Shipwreck) ಪುರಾತತ್ವ ತಜ್ಞರು ಪತ್ತೆಹಚ್ಚಿದ್ದಾರೆ. ಈ ಐತಿಹಾಸಿಕ ಶೋಧನೆಯಲ್ಲಿ ಪ್ರಾಚೀನ ಕಾಲದ ನಾವಿಕರು ಬಳಸುತ್ತಿದ್ದ ಅಪರೂಪದ ಮಣ್ಣಿನ ಪಾತ್ರೆಗಳು, ಪುರಾತನ ನಾಣ್ಯಗಳು ಹಾಗೂ ನಾವಿಕರ ವೈಯಕ್ತಿಕ ಹೆಸರುಗಳನ್ನು ಕೆತ್ತಲಾಗಿರುವ ಅಪರೂಪದ ಶಾಸನಗಳು ಪತ್ತೆಯಾಗಿವೆ. ಕ್ರೊಯೇಷಿಯಾ ಸಂರಕ್ಷಣಾ ಸಂಸ್ಥೆಯ (Croatian Conservation Institute) ನೇತೃತ್ವದಲ್ಲಿ ನಡೆದ ಆಳ ಸಮುದ್ರದ ಸಂಶೋಧನೆಯಲ್ಲಿ ಕ್ರೊಯೇಷಿಯಾದ ಪ್ರಸಿದ್ಧ 'ವಿಸ್' (Vis) ದ್ವೀಪದ ಕೊಮಿಝಾ ಪಟ್ಟಣದ ಬಳಿ ಇರುವ 'ಜ್ಞಿಲ್ನಾ ಕೊಲ್ಲಿ'ಯಲ್ಲಿ (Gnjilna Bay) ಈ ಜಲಾವೃತ ಇತಿಹಾಸ ಬಯಲಾಗಿದೆ.
ಜ್ಞಿಲ್ನಾ ಕೊಲ್ಲಿಯ ಪ್ರದೇಶದಲ್ಲಿ ಈ ಮೊದಲು ಪ್ರಾಚೀನ ಕಾಲದ ಕೆಲವು ಜಾಡಿಗಳ ತುಂಡುಗಳು ಮಾತ್ರ ಲಭ್ಯವಾಗಿದ್ದವು. ಆದರೆ 2023 ರಿಂದ 2025 ರ ಅವಧಿಯಲ್ಲಿ ಕೈಗೊಳ್ಳಲಾದ ಸುಸಜ್ಜಿತ ನೀರೊಳಗಿನ ಉತ್ಖನನದ (Underwater Excavation) ವೇಳೆ ಸಮುದ್ರದಾಳದಲ್ಲಿ ಭಾರಿ ಪ್ರಮಾಣದ ಅವಶೇಷಗಳು ಸುಸ್ಥಿತಿಯಲ್ಲಿರುವುದು ಕಂಡುಬಂದಿದೆ.
ಸಂಶೋಧಕರು ಈ ಹಡಗಿನ ಮರದ ರಚನೆಯ ಪ್ರಮುಖ ಭಾಗವನ್ನು ಪತ್ತೆಹಚ್ಚಿದ್ದು, ಇದರಲ್ಲಿ ಹಡಗಿನ ತಳಭಾಗದ ಮರದ ರಚನೆ (Keel) ಹಾಗೂ ಸುಮಾರು 20 ಅಡಿ ಉದ್ದದ ಸುಸ್ಥಿತಿಯಲ್ಲಿರುವ ಮರದ ಹಲಗೆಗಳು (Wooden Planking) ಸೇರಿವೆ. ಇದರೊಂದಿಗೆ ಹಡಗಿನ ಸಲಕರಣೆಗಳು, ಪ್ರಾಚೀನ ನಾಣ್ಯಗಳು, ಪ್ರಾಣಿಗಳ ಮೂಳೆಗಳು ಹಾಗೂ ವೈವಿಧ್ಯಮಯ ಸೆರಾಮಿಕ್ ಪಾತ್ರೆಗಳು ಲಭ್ಯವಾಗಿವೆ. ಈ ಹಡಗು ಕ್ರಿಸ್ತಪೂರ್ವ 4 ನೇ ಅಥವಾ 3 ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಅಂದರೆ ಸುಮಾರು 2,300 ವರ್ಷಗಳಷ್ಟು ಹಳೆಯದಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಈ ಉತ್ಖನನದಲ್ಲಿ ಕುಡಿಯುವ ಗ್ಲಾಸ್ಗಳು (Drinking Cups), ತಟ್ಟೆಗಳು, ಬೌಲ್ಗಳು ಹಾಗೂ ವೈನ್ ಸೇರಿದಂತೆ ದ್ರವ ಪದಾರ್ಥಗಳನ್ನು ಸುರಿಯಲು ಬಳಸುತ್ತಿದ್ದ ಸಣ್ಣ ಸಣ್ಣ ಮಣ್ಣಿನ ಪಾತ್ರೆಗಳು ಪತ್ತೆಯಾಗಿವೆ. ಲಭ್ಯವಾಗಿರುವ ಗ್ರೀಕ್ ಸೆರಾಮಿಕ್ ಪಾತ್ರೆಗಳ ಗುಣಮಟ್ಟ, ಅಪರೂಪದ ವಿನ್ಯಾಸ ಹಾಗೂ ಅವುಗಳು ಕಂಪ್ಲೀಟ್ ಆಗಿ ಸಂರಕ್ಷಿಸಲ್ಪಟ್ಟಿರುವ ರೀತಿ ಅತ್ಯಂತ ಅಪರೂಪದ್ದು ಎಂದು ಸಂಸ್ಥೆ ತಿಳಿಸಿದೆ.
ಆದರೆ ಈ ಶೋಧನೆಯ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ ಕೆಲವು ಕಪ್ಪು ಬಣ್ಣದ ಲೇಪನ ಹೊಂದಿದ್ದ ಮಣ್ಣಿನ ಪಾತ್ರೆಗಳ ಮೇಲೆ ಕೆತ್ತಲಾಗಿರುವ ಸಣ್ಣ ಶಾಸನಗಳು/ಗುರುತುಗಳು! ಈ ಗುರುತುಗಳು ಆ ಕಾಲದ ನಾವಿಕರ ವೈಯಕ್ತಿಕ ಹೆಸರುಗಳ ಸಂಕ್ಷಿಪ್ತ ರೂಪಗಳಾಗಿರಬಹುದು (Abbreviated Names) ಎಂದು ಪುರಾತತ್ವ ಶಾಸ್ತ್ರಜ್ಞರು ಶಂಕಿಸಿದ್ದಾರೆ. ಈ ಪಾತ್ರೆಗಳನ್ನು ತಯಾರಿಸಿದ ನಂತರದ ಅವಧಿಯಲ್ಲಿ ಈ ಹೆಸರುಗಳನ್ನು ಕೆತ್ತಿರುವುದರಿಂದ, ಹಡಗಿನಲ್ಲಿದ್ದ ಉನ್ನತ ಮಟ್ಟದ ನಾವಿಕರು ಅಥವಾ ಸಿಬ್ಬಂದಿ ತಮ್ಮ ಸ್ವಂತ ವಸ್ತುಗಳನ್ನು ಗುರುತಿಸಲು ಹೀಗೆ ಹೆಸರು ಕೆತ್ತಿಸಿಕೊಂಡಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹಡಗಿನಲ್ಲಿ ವೈನ್ ಹಾಗೂ ಆಲಿವ್ ಎಣ್ಣೆಯನ್ನು ಸುದೀರ್ಘ ಪ್ರಯಾಣದ ವೇಳೆ ಸಾಗಿಸಲು ಬಳಸಲಾಗುತ್ತಿದ್ದ 'ಕೊರಿಂಥಿಯನ್ ಟೈಪ್ ಬಿ ಆಂಫೊರೇ' (Corinthian type B amphorae) ಎಂಬ ಬೃಹತ್ ಸೆರಾಮಿಕ್ ಜಾಡಿಗಳು ಸಹ ಪತ್ತೆಯಾಗಿವೆ. ಕ್ರೊಯೇಷಿಯಾದ ಪೂರ್ವ ಅಡ್ರಿಯಾಟಿಕ್ ಕರಾವಳಿಯಲ್ಲಿ ಇಂತಹ ಗ್ರೀಕ್ ಮಣ್ಣಿನ ಪಾತ್ರೆಗಳನ್ನು ಹೊತ್ತೊಯ್ಯುತ್ತಿದ್ದ ಹಡಗುಗಳು ಸಿಗುವುದು ತೀರಾ ವಿರಳವಾಗಿದ್ದು, ಈ ಹಿಂದೆ ಕೇವಲ ಎರಡು ಪ್ರಕರಣಗಳು ಮಾತ್ರ ವರದಿಯಾಗಿದ್ದವು.
ಸಂಶೋಧಕರು ಆರಂಭದಲ್ಲಿ ಈ ಜಾಡಿಗಳ ತುಂಡುಗಳು ಹಾಗೂ ಹಡಗಿನ ಲಂಗರಿನಲ್ಲಿದ್ದ ಸೀಸದ (Lead) ಭಾಗವನ್ನು ಪರೀಕ್ಷಿಸಿ ಹಡಗಿನ ಕಾಲಘಟ್ಟವನ್ನು ನಿರ್ಧರಿಸಿದ್ದರು. ತದನಂತರದ ಉತ್ಖನನದಲ್ಲಿ ನೆರೆಯ 'ಹ್ವಾರ್' (Hvar) ದ್ವೀಪದಲ್ಲಿದ್ದ ಪುರಾತನ ಗ್ರೀಕ್ ವಸಾಹತುವಾದ 'ಫಾರೋಸ್'ಗೆ (Pharos) ಸೇರಿದ ಅಪರೂಪದ ನಾಣ್ಯವೊಂದು ಸಿಕ್ಕಿದ್ದು, ಕಾಲಘಟ್ಟವನ್ನು ಮತ್ತಷ್ಟು ಖಚಿತ ಮಾಡಿದೆ.
ಕ್ರೊಯೇಷಿಯಾ ಸಂರಕ್ಷಣಾ ಸಂಸ್ಥೆಯ ನೀರೊಳಗಿನ ಪುರಾತತ್ವ ವಿಭಾಗದ ಜುರಿಕಾ ಬೆಜಾಕ್ (Jurica Bezak) ಅವರ ನೇತೃತ್ವದಲ್ಲಿ 'ವಿಸ್' ದ್ವೀಪದ ಡೈವಿಂಗ್ ಸೆಂಟರ್ಗಳ ಸಹಯೋಗದೊಂದಿಗೆ ಈ ಮಹತ್ವದ ತನಿಖೆ ನಡೆಯುತ್ತಿದೆ. ವಿಸ್ ಹಾಗೂ ಹ್ವಾರ್ ದ್ವೀಪಗಳಲ್ಲಿ ಗ್ರೀಕ್ ವಸಾಹತುಗಳು ಸಕ್ರಿಯವಾಗಿದ್ದ ಕಾಲದಲ್ಲಿ, ಅಡ್ರಿಯಾಟಿಕ್ ಸಮುದ್ರದಲ್ಲಿ ನಡೆಯುತ್ತಿದ್ದ ಪ್ರಾಚೀನ ನೌಕಾಯಾನ, ಜಾಗತಿಕ ವ್ಯಾಪಾರ ಹಾಗೂ ಹಡಗಿನಲ್ಲಿದ್ದ ಜನರ ದೈನಂದಿನ ಜೀವನವನ್ನು ಶೋಧಿಸಲು ಈ ಸಂಶೋಧನೆ ಭಾರಿ ನೆರವಾಗಲಿದೆ. ಅದರಲ್ಲೂ ವಿಶೇಷವಾಗಿ ಪಾತ್ರೆಗಳ ಮೇಲಿರುವ ಹೆಸರುಗಳು ಸಾವಿರಾರು ವರ್ಷಗಳ ಹಿಂದೆ ಕಡಲ ಸಾಹಸ ಕೈಗೊಂಡಿದ್ದ ಮಾನವ ಕುಲದ ನೈಜ ಸಂಪರ್ಕವನ್ನು ತೆರೆದಿಟ್ಟಿವೆ.