ಸ್ಕೀಯಿಂಗ್‌ನಲ್ಲಿ ಕೊಡಗಿನ ಯುವತಿಯ ಸಾಧನೆ: ತರಬೇತಿಗಾಗಿ ಆರ್ಥಿಕ ನೆರವಿನ ನಿರೀಕ್ಷೆ

Apr 29, 2022, 11:44 AM IST

ಸ್ಕೀಯಿಂಗ್ (skiing sports) ಸಾಮಾನ್ಯವಾಗಿ ಐರೋಪ್ಯ ದೇಶಗಳೇ ಪಾರಮ್ಯ ಸಾಧಿಸಿರುವ ವಿಶೇಷ ಕ್ರೀಡೆಯಿದು. ಹಿಮ ಪರ್ವತಗಳ ಮಧ್ಯೆ ಕಾಲಿಗೆ ಪಟ್ಟಿಕಟ್ಟಿಕೊಂಡು ಕೈಯಲ್ಲಿ ಕೋಲು ಹಿಡಿದು ಶರವೇಗದಲ್ಲಿ ಮುನ್ನುಗ್ಗುವ ಈ ಕ್ರೀಡೆ ಯೂರೋಪ್ ದೇಶಗಳಲ್ಲಿ (Europe Country) ಬಹಳ ಜನಪ್ರಿಯ. ನಮ್ಮಲ್ಲಿ ಕ್ರಿಕೆಟ್ ಅಂತೆ ಆ ದೇಶದಲ್ಲಿ ವಿವಿಧ ಬಗೆಯ ಸ್ಕೀಯಿಂಗ್ ಆಡುತ್ತಾರೆ. 

ಆದ್ರೆ ಭಾರತದಲ್ಲಿ ಸ್ಕೀಯಿಂಗ್ ಆಡಲು ಜಮ್ಮು ಕಾಶ್ಮೀರ, ಲಡಾಕ್ ಹಿಮಾಚಲ್ ಪ್ರದೇಶದ ಕೆಲವೊಂದು ಭಾಗ ಬಿಟ್ಟರೆ ಬೇರೆಲ್ಲೂ ಸಾಧ್ಯವಿಲ್ಲ. ಇಲ್ಲೂ ಕೂಡ ಸೀಸನ್ ನಲ್ಲಿ ಮಾತ್ರ ಸ್ಕೀಯಿಂಡ ಆಡಬಹುದು. ಅದೂ ಕೂಡ ಸೇನೆಯ ಮಂದಿಯಷ್ಟೇ ಆಡ್ತಾರೆ. ಸಾರ್ವಜನಿಕ ವ್ಯಕ್ತಿಗಳು ಸ್ಕೀಯಿಂಗ್ನಲ್ಲಿ ಭಾಗಿಯಾಗುವುದು ಇಲ್ಲವೇ ಇಲ್ಲ. ಆದ್ರೆ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಪೇರೂರು ಗ್ರಾಮದ ನಿವಾಸಿ ತೆಕ್ಕಡ ರಚನಾ ಎಂಬ ಯುವತಿ ಈ ಕ್ರೀಡೆಯಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರ ಹೊಮ್ಮಿ, ನಾಲ್ಕು ಚಿನ್ನದ ಪದಕ ಬಾಚಿಕೊಂಡಿದ್ದಾರೆ. 

8 ವರ್ಷವಾದ್ರೂ ಮುಗಿದಿಲ್ಲ ಕಾಮಗಾರಿ: ಸೋಮವಾರಪೇಟೆ ಹಾಕಿ ಕ್ರೀಡಾಂಗಣ ಈಗ ಪುಂಡರ ತಾಣ!

ವಿಶೇಷ ಅಂದ್ರೆ ಕಾಲೇಜು ದಿನಗಳ ಬಳಿಕ ಪರ್ವತಾರೋಹಣ ತರಬೇತುದಾರರಾಗಿ ಜಮ್ಮು ಕಾಶ್ಮೀರದ ಲಡಾಕ್‌ಗೆ ತೆರಳಿದ್ದರು. ಈ ಸಂದರ್ಭ ಅಲ್ಲಿ ಸೈನಿಕರು ಸ್ಕೀಯಿಂಗ್ ಮಾಡುವುದನ್ನ ನೋಡಿ ತಾವೂ ಕೂಡ ಅದರಲ್ಲಿ ತೊಡಗಿಕೊಂಡಿದ್ದಾರೆ. ಆದ್ರೆ ಕಲಿಸಲು ಗುರುಗಳು ಇರಲಿಲ್ಲ. ಯೂ ಟ್ಯೂಬ್ ನೋಡಿ ಅದರಲ್ಲಿ ತಂತ್ರಗಳನ್ನ ಕಲಿತು ನಿಧಾನವಾಗಿ ಸ್ಕೀಯಿಂಗ್ ಪಟ್ಟುಗಳನ್ನ ಕಲಿತಿದ್ದಾರೆ. ಇದಾಗಿ ಕೇವಲ ಮೂರೇ ತಿಂಗಳಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧಿಯಾಗಿ ಕರ್ನಾಟಕದ ಮೊತ್ತ ಮೊದಲ ಮತ್ತು ಏಕೈಕ ಸ್ಪರ್ಧಿಯಾಗಿ ಪಾಲ್ಗೊಂಡು ವಿಜಯಮಾಲೆ ಧರಿಸುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಇವರು 10ಕ್ಕೂ ಅಧಿಕ ಪದಕಗಳನ್ನ ಬಾಚಿಕೊಂಡಿದ್ದಾರೆ.  2021ರ ಖೇಲೋ ಇಂಡಿಯಾ ವಿಂಟರ್ ಸ್ಪೋರ್ಟ್ಸ್ ನಲ್ಲಿ ಕ್ರಾಸ್ ಕಂಟ್ರಿ ಸ್ಕೀಯಿಂಗ್ ವಿಭಾಗದಲ್ಲಿ ಒಂದು ಚಿನ್ನ ಮತ್ತು ಕಂಚು ಗೆದ್ದಿದ್ದಾರೆ. ಈ ವರ್ಷ ಗುಲ್ಮಾರ್ಗ್ ಮತ್ತು ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ  ಒಂದು ಚಿನ್ನ ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. 

2023ರಲ್ಲಿ ಅಂತಾರಾಷ್ಟ್ರೀಯ ಸ್ಕೀಯಿಂಗ್ ಸ್ಪರ್ಧೆ ಸ್ಲೋವೇನಿಯಾ ದೇಶದಲ್ಲಿ ನಡೆಯಲಿದೆ. ಈ ಸ್ಪರ್ಧೆಗೆ ಇವರು ತಯಾರಾಗುತ್ತಿದ್ದಾರೆ. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ವಿಂಟರ್ ಒಲಿಂಪಿಕ್ಸ್ಗೆ ಸ್ಪರ್ಧಿಸಲು ಅವಕಾಶ ದೊರೆಯುತ್ತೆ.  ಸ್ಪೇನ್‌ನಲ್ಲಿ ನಡೆಯುವ ಈ ವಿಂಟರ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿ ದೇಶಕ್ಕಾಗಿ ಒಂದು ಪದಕ ಗೆಲ್ಲಬೇಕೆನ್ನುವುದು ಈಕೆಯ ದೃಢ ಸಂಕಲ್ಪ. ಆದ್ರೆ ವಿದೇಶಕ್ಕೆ ಹೋಗಿ ತರಬೇತಿ ಪಡೆಯಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ.

ಮದುವೆ ಉಡುಪು ಸಂಗ್ರಹಿಸಿ ಬಡ ಹೆಣ್ಮಕ್ಕಳಿಗೆ ನೆರವು ನೀಡುವ ಯುವತಿ

 ಒಂದು ಜೊತೆ ಸ್ಕೀಯಿಂಗ್ ಪರಿಕರ ಖರೀದಿಸಲೇ ಎಷ್ಟೋ ಲಕ್ಷ ರೂಪಾಯಿ ಖರ್ಚು ಮಾಡಬೇಕು. ಅಂತಹದ್ರಲ್ಲಿ ಇನ್ನು ಊಟ ವಸತಿ, ತರಬೇತಿ, ಪ್ರಯಾಣ ಅಂತ ಕನಿಷ್ಟ 25 ಲಕ್ಷ ರೂ ಬೇಕಾಗುತ್ತದೆ. ಅಷ್ಟೆಲ್ಲಾ ಹೊಂದಿಸಲು ತಮ್ಮಿಂದ ಅಸಾಧ್ಯ ಎನ್ನುತ್ತಾರೆ ರಚನಾ. ಮಗಳ ಕನಸನ್ನು ಈಡೇರಿಸಲು ಈಗಾಗಲೇ ರಚನಾರ ತಂದೆ ತಾಯಿ ಬಹಳಷ್ಟು ಕಷ್ಟಪಟ್ಟಿದ್ದಾರೆ. ಮೈ ತುಂಬಾ ಸಾಲ ಮಾಡಿಕೊಂಡಿದ್ದಾರೆ. ಮುಂದೇನು ಅಂತಾನೂ ಇವರಿಗೆ ಗೊತ್ತಿಲ್ಲ.  ಈ ಹಿಂದೆ ಮಂಗಳೂರಿನ  ಉದ್ಯಮಿ ರೊನಾಲ್ಡ್ ಕೊಲಾಸ್ ದೊಡ್ಡ ಮಟ್ಟದಲ್ಲಿ ಇವರಿಗೆ ಸಹಾಯ ಮಾಡಿದ್ದರು. ಜೊತೆಗೆ ಅದ್ವೈತ್ ಹುಂಡೈನ ಎಸ್‌ವಿಎಸ್ ಗುಪ್ತ ಅವರು ಕೂಡ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದ್ದರು ಜೊತೆಗೆ ಕೊಡಗಿನ ಜನತೆ, ವಿವಿಧ ಕೊಡವ ಸಮಾಜಗಳು ಮತ್ತು ಸಂಘ ಸಂಸ್ಥೆಗಳು ಬಹಳಷ್ಟು ಆರ್ಥಿಕ ನೆರವನ್ನು ನೀಡಿದ್ದವು ಎಂದು ಇವರು ನೆನೆಯುತ್ತಾರೆ.

ಇದುವರೆಗೂ ವಿವಿಧ ದಾನಿಗಳ ನೆರವಿನಿಂದ ಒಂದು ಹಂತದ ಸಾಧನೆ ಮಾಡಿದ್ದಾರೆ. ಇನ್ನೂ ಸಾಧಿಸಲು ಬಹಳಷ್ಟಿದೆ. ದಕ್ಷಿಣ ಭಾರತದ ಗುಡ್ಡಗಾಡುವಿನ ಯುವತಿಯೊಬ್ಬಳು ಪರಿಚಯವೇ ಇಲ್ಲದ ಕ್ರೀಡೆಯೊಂದರಲ್ಲಿ ಇಷ್ಟೊಂದು ಸಾಧನೆ ಮಾಡುವುದು ಸಾಮಾನ್ಯದ ಮಾತಲ್ಲ. ಇವಳಿಗೆ ಇನ್ನಷ್ಟು ನೆರವು ಸಿಕ್ಕಿದರೆ ಮುಂದೊಂದು ದಿನ ಖಂಡಿತವಾಗಿಯೂ ದೇಶದ ಗೌರವ ಹೆಚ್ಚಿಸುತ್ತಾಳೆ ಎಂಬ ನಂಬಿಕೆ ಕ್ರೀಡಾ ಪ್ರಿಯರದ್ದು.