ಕಳೆದ ವರ್ಷದ ವೇಸ್ಟ್ ಮುಂದಿನ ವರ್ಷಕ್ಕೆ ಬೇಕಾ? ಮನೆ ಕ್ಲೀನಿಂಗ್‍ಗೆ ಇದೇ ರೈಟ್ ಟೈಮ್!

By Suvarna News  |  First Published Dec 31, 2019, 2:59 PM IST

ಮನೆಯ ತುಂಬಾ ಬೇಡದ ವಸ್ತುಗಳು ತುಂಬಿದ್ದರೂ ಅದನ್ನು ಸ್ವಚ್ಛಗೊಳಿಸಲು ಸಮಯವಿಲ್ಲವೆಂದು ಮುಂದೆ ಹಾಕುತ್ತ ವರ್ಷವೇ ಕಳೆದು ಹೋಗಿದೆ. ಮತ್ತೊಂದು ಹೊಸ ವರ್ಷ ಹೊಸ್ತಿಲಿಗೆ ಬಂದು ನಿಂತಿದೆ. ಹೀಗಾಗಿ ಹಳೆಯ ಅನಗತ್ಯ ಭಾರವನ್ನು ಹೊರಹಾಕಿ ಮನೆ ಸ್ವಚ್ಛಗೊಳಿಸಲು ಇದೇ ಸರಿಯಾದ ಸಮಯ. 


ಮನೆ ಸ್ವಚ್ಛವಾಗಿದ್ದರೆ ಮನಸ್ಸು ಕೂಡ ಶುದ್ಧವಾಗಿರುತ್ತದೆ ಎನ್ನುತ್ತಾರೆ. ನಿಜ, ನಮ್ಮ ಆರೋಗ್ಯ ಮತ್ತು ಮನಸ್ಸಿನ ಮೇಲೆ ನಾವು ವಾಸಿಸುವ ಪರಿಸರ ಗಾಢ ಪ್ರಭಾವ ಬೀರುತ್ತದೆ. ಮನೆಯಲ್ಲಿ ಅನಗತ್ಯವಾದ ವಸ್ತುಗಳು ತುಂಬಿದ್ದರೆ ಮನಸ್ಸಿಗೆ ಏನೋ ಕಿರಿಕಿರಿಯಾಗುವುದು ಗ್ಯಾರಂಟಿ. ಆದರೆ, ಇದು ತಿಳಿದಿದ್ದರೂ ಅವುಗಳನ್ನು ಮನೆಯಿಂದ ಹೊರಹಾಕಿ ಕ್ಲೀನ್ ಮಾಡುವ ಮನಸ್ಸು ಮಾಡಲ್ಲ.

ಜೇಬಿನಲ್ಲಿ ಈ ವಸ್ತುಗಳಿದ್ದರೆ ಅದೃಷ್ಟವೋ ಅದೃಷ್ಟ

Latest Videos

undefined

ಅವುಗಳೊಂದಿಗೇ ಅಡ್ಜೆಸ್ಟ್ ಮಾಡಿಕೊಂಡು ಇದ್ದು ಬಿಡುತ್ತೇವೆ. ಇವೆಲ್ಲ ಯಾಕೆ ಹೇಳುತ್ತಿದ್ದೇನೆ ಅಂದ್ರೆ ಹೊಸ ವರ್ಷ ಬಂದೇ ಬಿಟ್ಟಿದೆ. ಹೊಸ ವರ್ಷದ ಪ್ರಾರಂಭದಲ್ಲಿ ಕಳೆದು ಹೋದ ವರ್ಷದಲ್ಲಿ ಮನೆಯೊಳಗೆ ತಂದು ತುಂಬಿಸಿಟ್ಟಿರುವ ಅನಗತ್ಯ ವಸ್ತುಗಳನ್ನು ಹೊರಗೆಸೆಯದೆ ಹೋದರೆ ಆ ಭಾರ ಮತ್ತಷ್ಟು ಹೆಚ್ಚಿ ಮನೆಯ ಅಂದಗೆಡಿಸುವ ಜೊತೆಗೆ ಮನಸ್ಸಿನ ನೆಮ್ಮದಿಯನ್ನು ಕೆಡಿಸಿ ಬಿಡಬಲ್ಲದು. ಅಷ್ಟೇ ಅಲ್ಲ, ಅನಗತ್ಯ ವಸ್ತುಗಳನ್ನು ಹೊರಗೆಸೆದರೆ ಸ್ಥಳಾವಕಾಶವೂ ಹೆಚ್ಚಿ, ಹೊಸ ವಸ್ತುಗಳಿಗೆ ಜಾಗವೂ ಸಿಗುತ್ತದೆ. 

ಹಳೇ ನ್ಯೂಸ್‍ಪೇಪರ್, ಬಾಕ್ಸ್‍ಗಳಿಗೆ ಗೇಟ್‍ಪಾಸ್: ಕೆಲವರಿಗೆ ಹಳೇ ನ್ಯೂಸ್ ಪೇಪರ್‍ಗಳನ್ನು ವರ್ಷವಿಡೀ ಜೋಪಾನ ಮಾಡುವ ಅಭ್ಯಾಸವಿರುತ್ತದೆ. ಇದರಿಂದ ಮನೆಯಲ್ಲಿ ಒಂದಿಷ್ಟು ಜಾಗ ಹಾಳಾಗುವ ಜೊತೆಗೆ ಧೂಳು ಕೂರಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಹೊಸ ವರ್ಷಕ್ಕೆ ಹಳೇ ನ್ಯೂಸ್‍ಪೇಪರ್, ಬಳಸದ ನೋಟ್‍ಬುಕ್ ಅಥವಾ ಪುಸ್ತಕಗಳನ್ನು ಹೊರಗೆಸೆಯಿರಿ. ಮನೆಗೆ ಎಲೆಕ್ಟ್ರಾನಿಕ್ ಸಾಮಗ್ರಿಗಳು ಅಥವಾ ಏನಾದರೂ ಹೊಸ ವಸ್ತುಗಳನ್ನು ತಂದಾಗ ಅವುಗಳ ಬಾಕ್ಸ್‍ಗಳನ್ನು ಹಾಗೆಯೇ ಮನೆಯಲ್ಲಿಟ್ಟಿರುತ್ತೇವೆ. ಆದರೆ, ದಿನ ಕಳೆದಂತೆ ಮನೆಗೆ ಹೊಸ ಹೊಸ ವಸ್ತುಗಳು ಆಗಮಿಸಿ ಬಾಕ್ಸ್‍ಗಳ ಸಂಖ್ಯೆ ಹೆಚ್ಚಿ ಹೊರೆಯಾಗುತ್ತವೆ. ಹೀಗಾಗಿ ಇಂಥ ಬಾಕ್ಸ್‍ಗಳನ್ನು ಮನೆಯಿಂದ ಹೊರಹಾಕಲು ಇದು ಸರಿಯಾದ ಸಮಯ.

ವಾರ್ಡ್‍ರೋಪ್ ತೆರೆದು ನೋಡಿ: ವಾರಕ್ಕೊಮ್ಮೆ ಶಾಪಿಂಗ್‍ಗೆ ಹೋಗಿ ಇಷ್ಟವಾದ ಡ್ರೆಸ್‍ಗಳನ್ನೆಲ್ಲ ಖರೀದಿಸಿ ತಂದು ವಾರ್ಡ್‍ರೋಪ್‍ನಲ್ಲಿಟ್ಟಿರುತ್ತೇವೆ. ಎರಡ್ಮೂರು ಬಾರಿ ಹಾಕಿದ ಮೇಲೆ ಆ ಡ್ರೆಸ್ ಮೇಲಿನ ಆಕರ್ಷಣೆ ತಗ್ಗುತ್ತದೆ. ಮತ್ತೊಂದಿಷ್ಟು ಹೊಸ ಡ್ರೆಸ್‍ಗಳನ್ನು ಖರೀದಿಸಿ ವಾರ್ಡ್‍ರೋಪ್‍ಗೆ ಸೇರಿಸುತ್ತೀರಿ. ಹೀಗೆ ನಿಮ್ಮ ವಾರ್ಡ್‍ರೋಪ್ ಡ್ರೆಸ್‍ಗಳಿಂದ ತುಂಬಿ ಹೋಗುತ್ತದೆ. ಆದರೂ ನೀವು ಅದಕ್ಕೆ ಹೊಸ ಡ್ರೆಸ್ ತಂದು ತುಂಬಿಸುವುದನ್ನು ನಿಲ್ಲಿಸುವುದಿಲ್ಲ. ನೀವ್ಯಾಕೆ ಹೊಸ ವರ್ಷಕ್ಕೆ ನಿಮ್ಮ ವಾರ್ಡ್‍ರೋಪ್ ಕ್ಲೀನ್ ಮಾಡಬಾರದು? ಬಳಸದ, ಹಳೆಯ ಡ್ರೆಸ್‍ಗಳನ್ನೆಲ್ಲ ಒಂದು ಬ್ಯಾಗ್‍ಗೆ ಹಾಕಿ ಅನಾಥಾಶ್ರಮಕ್ಕೆ ಅಥವಾ ನಿರ್ಗತರಿಗೆ ಬಟ್ಟೆ ಹಂಚುವ ಎನ್‍ಜಿಒಗಳಿಗೆ ನೀಡಿ. ಇದರಿಂದ ನಿಮ್ಮ ವಾರ್ಡ್‍ರೋಪ್ ಕ್ಲೀನಾಗುವ ಜೊತೆಗೆ ಮನಸ್ಸಿಗೂ ಖುಷಿ ಸಿಗುತ್ತದೆ.

ಅಡುಗೆ ಮನೆಯಲ್ಲೊಮ್ಮೆ ಕಣ್ಣು ಹಾಯಿಸಿ: ಅನಗತ್ಯ ವಸ್ತುಗಳಿರುವ ಇನ್ನೊಂದು ತಾಣವೆಂದರೆ ಅಡುಗೆಮನೆ. ಖಾಲಿಯಾದ ಸಾಫ್ಟ್ ಡ್ರಿಂಕ್ಸ್ ಬಾಟಲಿಗಳು, ಅನಗತ್ಯವಾದ ಡಬ್ಬಗಳನ್ನು ಹೊರಗೆ ಎಸೆಯಿರಿ. ಹಾಳಾದ ದಿನಸಿ ಸಾಮಗ್ರಿಗಳನ್ನು ಮರೆಯದೆ ಕಸದ ಬುಟ್ಟಿಗೆ ಎಸೆಯಿರಿ. ಡಬ್ಬಗಳನ್ನು ಸ್ವಚ್ಛವಾಗಿ ತೊಳೆದು ಜೋಡಿಸಿಡಿ.

ಶೂ ಸ್ಟ್ಯಾಂಡ್ ಭಾರ ತಗ್ಗಿಸಿ: ನೀವು ಬಳಸದ ಶೂ, ಚಪ್ಪಲಿಗಳನ್ನು ಶೂ ಸ್ಟ್ಯಾಂಡ್‍ನಲ್ಲಿಟ್ಟಿರುತ್ತೀರಿ. ಎಸೆಯಬೇಕು ಎಂದು ಮನಸ್ಸಿನಲ್ಲಿ ಅಂದ್ಕೊಂಡಿರುತ್ತೀರಿ. ಆದರೆ, ಅದು ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಹೊಸ ವರ್ಷದ ಪ್ರಾರಂಭದಲ್ಲಿ ಮರೆಯದೆ ಈ ಕೆಲಸವನ್ನು ಮಾಡಿ ಮುಗಿಸಿ. 

ಡೇಟ್ ಬಾರ್ ಆದ ಮೆಡಿಸಿನ್ಸ್ ಡಸ್ಟ್ ಬಿನ್ ಸೇರಲಿ: ಅವಧಿ ಮುಗಿದ ಔಷಧಗಳನ್ನು ಕೆಲವೊಮ್ಮೆ ಎಸೆಯದೆ ಹಾಗೆಯೇ ಇಟ್ಟುಕೊಂಡಿರುತ್ತೇವೆ. ಈ ಔಷಧಗಳಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಲದೆ, ಮನೆಯ ಸದಸ್ಯರು ಡೇಟ್ ನೋಡದೆ ಮಾತ್ರೆ ಅಥವಾ ಸಿರಪ್ ಬಳಸಿದರೆ ತೊಂದರೆ ಕಟ್ಟಿಟ್ಟ ಬುತ್ತಿ. 

ದುರಸ್ತಿಗೂ ಬಗ್ಗದ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಹೊರ ತೆಗೆಯಿರಿ: ಹಾಳಾದ ಮಿಕ್ಸಿ, ಟ್ರಿಮ್ಮರ್, ಇಸ್ತ್ರಿಪೆಟ್ಟಿಗೆ, ಮೊಬೈಲ್....ಹೀಗೆ ಬಳಕೆಯಾಗದೆ ಮನೆಯ ಮೂಲೆ ಸೇರಿರುವ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಹೊರಗೆಸೆಯಿರಿ. 

ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!

ಅವಧಿ ಮೀರಿದ ಸೌಂದರ್ಯ ಪ್ರಸಾಧನಗಳ ಮೇಲೆ ಪ್ರೀತಿ ಬೇಡ: ನಿಮ್ಮ ಮೇಕಪ್ ಕಿಟ್‍ನಲ್ಲಿ ಅವಧಿ ಮೀರಿದ ಕ್ರೀಮ್‍ಗಳು, ಪೌಡರ್‍ಗಳು, ಲಿಪ್‍ಸ್ಟಿಕ್‍ಗಳು ಸಾಕಷ್ಟಿರಬಹುದು. ಅವುಗಳನ್ನೆಲ್ಲ ಬಳಸದೆ ಸುಮ್ಮನೆ ಇಟ್ಟಿರುವುದರಿಂದ ಹೊರೆಯೇ ಹೊರತು ಏನೂ ಪ್ರಯೋಜನವಿಲ್ಲ. ಹೀಗಾಗಿ ಅವುಗಳಿಗೆ ಗೇಟ್‍ಪಾಸ್ ನೀಡಿ.

ಕಿತ್ತು ಹೋದ ಆಟಿಕೆಗಳ ಮೇಲೆ ಮಮಕಾರ ಬೇಡ: ಮಕ್ಕಳಿರುವ ಮನೆಯಲ್ಲಿ ಆಟಿಕೆಗಳಿಗೆ ಒಂದು ರೂಮ್ ಬೇಕಾಗಬಹುದು. ಅಷ್ಟು ಜಾಗವನ್ನು ಅವು ಆಕ್ರಮಿಸಿಕೊಂಡಿರುತ್ತವೆ. ಮುರಿದು ಹೋದ, ಬಣ್ಣ ಕಳೆದುಕೊಂಡ, ಮಕ್ಕಳು ಬಳಸದ ಆಟಿಕೆಗಳನ್ನು ಆಯ್ದು ಹೊರಗೆ ಹಾಕುವ ಕಾರ್ಯವನ್ನು ಈ ವರ್ಷದ ಪ್ರಾರಂಭದಲ್ಲೇ ಮಾಡಿಬಿಡಿ. ಹೊಸ ವರ್ಷಕ್ಕೆ ಮನೆ, ಮನವನ್ನೆಲ್ಲ ಶುದ್ಧಗೊಳಿಸುವ ಮೂಲಕ ಹೊಸ ವಸ್ತು, ವಿಚಾರಗಳ ಆಗಮನಕ್ಕೆ ಸಜ್ಜುಗೊಳ್ಳೋಣ.
 

click me!