ದಿನಗಳು ಕಳೆದ ಹಾಗೆ ನಟ ದರ್ಶನ್ ಕುರಿತಾಗಿ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ನಟ ನಟಿಯರು ಮಾತನಾಡಲು ಆರಂಭಿಸಿದ್ದಾರೆ. ಕೆಲವರು ದರ್ಶನ್ ವಿರೋಧವಾಗಿ ಮಾತನಾಡಿದ್ದರೆ, ಇನ್ನೂ ಕೆಲವರು ದರ್ಶನ್ ಮಾಡಿದ್ದೇ ಸರಿ ಎನ್ನುವ ಅರ್ಥದಲ್ಲಿ ಅವರನ್ನು ಬೆಂಬಲಿಸಿದ್ದಾರೆ.
ಬೆಂಗಳೂರು (ಜೂ.26): ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಅವರ ಪ್ರೇಯಸಿ ಪವಿತ್ರಾ ಗೌಡಗೆ ಈಗ ಬೆ<ಬಲ ವ್ಯಕ್ತವಾಗುತ್ತಿದೆ. ನ್ಯಾಯಾಂಗ ಬಂಧನದಲ್ಲಿರುವ ಇಬ್ಬರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅನುಕಂಪದ ಅಲೆ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಸ್ಯಾಂಡಲ್‌ವುಡ್‌ನ ಕೆಲ ತಾರೆಯರು ದರ್ಶನ್ ಪರವಾಗಿ ಮಾತನಾಡಿದ್ದಾರೆ. ಇಂದು ದರ್ಶನ್ ಜೊತೆ ಚಿಂಗಾರಿ ಸಿನಿಮಾದಲ್ಲಿ ನಟಿಸಿದ್ದ ನಟಿ ಭಾವನಾ ರಾಮಣ್ಣ ಕೂಡ ಏನೇ ಆದರೂ ನಾನು ದರ್ಶನ್ ಪರವಾಗಿಯೇ ನಿಲ್ಲುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಇದರ ನಡುವೆ ನಿರೂಪಕಿ ವಿಜೆ ಹೇಮಲತಾ ಕೂಡ ದರ್ಶನ್ ಪರವಾಗಿ ಪೋಸ್ಟ್ ಮಾಡಿದ್ದಲ್ಲದೆ, ರೇಣುಕಾಸ್ವಾಮಿಯನ್ನು ಹೀರೋ ಮಾಡ್ಬೇಡಿ ಅದರಲ್ಲಿ ಅರ್ಥವಿಲ್ಲ ಎಂದು ತಮ್ಮ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದರೊಂದಿಗೆ ದರ್ಶನ್ ಮೇಲಿನ ತಮ್ಮ ಗೌರವ ಎಂದಿಗೂ ಕಡಿಮೆ ಆಗೋದಿಲ್ಲ ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ದರ್ಶನ್‌ರನ್ನು ತಬ್ಬಿಕೊಂಡಿರುವ ಫೋಟೋವನ್ನೂ ಕೂಡ ಹೇಮಲತಾ ಹಂಚಿಕೊಂಡಿದ್ದಾರೆ.
ನಿರೂಪಕಿ ಹೇಮಲತಾ ತಮ್ಮ ಪೋಸ್ಟ್‌ನಲ್ಲಿ, Finally couldn’t stop myself!! ಸಾವಿರ ಜನ ಸಾವಿರ ಮಾತನಾಡಲಿ ಒಮ್ಮೆ ಬೆಳೆದ ಸ್ನೇಹಕ್ಕೆ ಕಡಲಿನಸ್ಟಿರುವ ಪ್ರೀತಿಗೆ ನಾವೆಲ್ಲರೂ ಋಣಿಗಳೇ..ಸ್ನೇಹವೆಂಬ ಸಂಕೋಲೆಯಲಿ ಒಮ್ಮೆ ಸಿಕ್ಕಿಕೊಂಡರೆ ಕೊಂಡಿ ಕಳಚುವುದಿಲ್ಲ...ಅಂದಿಗೂ ಇಂದಿಗೂ ಎಂದೆಂದಿಗೂ ಮರೆಯುವುದಿಲ್ಲ, ಬಿಡುವುದಿಲ್ಲ, ಬಿಟ್ಟುಕೊಡುವುದಿಲ್ಲ. ಈ ಘಟನೆಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ, ಕಾನೂನಿನ ಮುಖಾಂತರ ಅಂತ್ಯವನ್ನಾಡಿ ಎಲ್ಲಾ ಕಳಂಕವನ್ನು ತೊಳೆದುಕೊಂಡು ಹೊರಗೆ ಬನ್ನಿ. ನಿಮ್ಮ ಮೇಲಿರುವ ಪ್ರೀತಿ ಗೌರವ ಎಂದಿಗೂ ಕಮ್ಮಿ ಆಗುವುದಿಲ್ಲ. Kindly stop making #renukaswamy a Hero here!! No point!! #dboss' ಎಂದು ಅವರು ಬರೆದುಕೊಂಡಿದ್ದಾರೆ. ಹೀಗೆ ಬರೆದುಕೊಂಡಿರವ ವಿಜೆ ಹೇಮಲತಾ ತಮ್ಮ ಕಾಮೆಂಟ್ ಸೆಕ್ಷನ್‌ಅನ್ನು ಮಾತ್ರ ಆಫ್ ಮಾಡಿಕೊಂಡಿದ್ದಾರೆ.
ಘಟನೆ ಏನು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಪ್ರಕರಣದಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಬಂಧನವಾಗಿತ್ತು. ಫೆಬ್ರವರಿಯಿಂದಲೂ ದರ್ಶನ್ ಅವರ ಪ್ರೇಯಸಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ. ಈತನ ಅಕೌಂಟ್‌ಅನ್ನು ಬ್ಲಾಕ್ ಮಾಡಿದರೂ ಕೂಡ ಬೇರೆ ಬೇರೆ ಅಕೌಂಟ್‌ನಿಂದ ಪವಿತ್ರಾಗೆ ಮೆಸೇಜ್ ಮಾಡುತ್ತಿದ್ದ. ಟಾರ್ಚರ್ ತಾಳಲಾರದೆ ಪವಿತ್ರಾ ಗೌಡ ಈ ವಿಚಾರವನ್ನು ಮನೆಗೆಲಸದ ವ್ಯಕ್ತಿ ಪವನ್‌ಗೆ ತಿಳಿಸಿದ್ದಳು.ಇದು ದರ್ಶನ್‌ಗೂ ಗೊತ್ತಾಗಿದೆ. ಆ ನಂತರ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಸಿದ ದರ್ಶನ್ ಪಟ್ಟಣಗೆರೆಯ ಶೆಡ್‌ನಲ್ಲಿ ಮನಬಂದಂತೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಸ್ವಾಮಿ ಅಲ್ಲಿಯೇ ಸಾವು ಕಂಡಿದ್ದಾನೆ. ಬಳಿಕ ಶವವನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಇನ್ನೊಂದು ಗ್ಯಾಂಗ್‌ಗೆ ಒಪ್ಪಿಸಲಾಗಿತ್ತು. ಅದಕ್ಕಾಗಿ 30 ಲಕ್ಷ ರೂಪಾಯಿಯನ್ನು ನೀಡಿದ್ದರು. ಈ ಹಣ ದರ್ಶನ್ ಅವರೇ ನೀಡಿದ್ದು ಎನ್ನಲಾಗುತ್ತಿದೆ.
ರತಿ ಅಂತ ಹೆಂಡ್ತಿ ಇದ್ರು ಕೋತಿಯಂಥ ಗೆಳತಿ ಯಾಕೆ ಬೇಕು: ದರ್ಶನ್‌ಗೆ ಉಮಾಪತಿ ಟಾಂಗ್!
ಹಣ ಪಡೆದ ಇನ್ನೊಂದು ಗ್ಯಾಂಗ್ ಶವವನ್ನು ಸುಮ್ಮನಹಳ್ಳಿ ಸತ್ ಅನುಗ್ರಹ ಅಪಾರ್ಟ್‌ಮೆಂಟ್‌ನ ಬದಿಯಲ್ಲಿರುವ ರಾಜಾಕಾಲುವೆಯಲ್ಲಿ ಎಸೆದು ಹೋಗಿದ್ದಾರೆ. ಆ ಬಳಿಕ ತಾವೇ ಕೊಲೆ ಮಾಡಿದ್ದಾಗಿ ಪೊಲೀಸ್ ಠಾಣೆಗೆ ಬಂದು ಹೇಳಿದ್ದಲ್ಲದೆ, ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದೇವೆ ಎಂದಿದ್ದರು. ಆದರೆ, ಪೊಲೀಸರ ವಿಚಾರಣೆಯ ವೇಳೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದರಿಂದ ಪೊಲೀಸರು ಮತ್ತಷ್ಟು ವಿಚಾರಣೆ ಮಾಡಿದ್ದಾರೆ. ಬಳಿಕ ಪ್ರಕರಣದಲ್ಲಿ ದರ್ಶನ್ ಪಾತ್ರವಿರೋದು ಬಯಲಾಗಿತ್ತು. ಈಗ ದರ್ಶನ್ ಜುಲೈ 4ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.
'ಕಾನೂನಿಗಿಂತ ಯಾರೂ ದೊಡ್ಡವರಲ್ಲ..' ದರ್ಶನ್ ಕೇಸ್ ಉಲ್ಲೇಖಿಸಿ ರಮ್ಯಾ ಪೋಸ್ಟ್!