ರೌಡಿಯೊಬ್ಬ ಹುಡುಗಿಗೆ ತಾಳಿ ಕಟ್ಟಿದ. ಅವಳು ಮರು ಮಾತಾಡದೇ ಅವನ ಲೈಫ್ ಪಾರ್ಟನರ್ ಆದಳು. ಇದೊಂದು ಸೀರಿಯಲ್ ಕಥೆ. ಈ ಸೀರಿಯಲ್‌ಗಳು ಸಮಾಜಕ್ಕೆ ಕೊಡೋ ಸಂದೇಶ ಏನು? ಟಿಆರ್‌ಪಿಗೋಸ್ಕರ ಈ ರೀತಿ ದಾರಿ ತಪ್ಪಿಸೋದು ಸರೀನಾ?
ಕನ್ನಡದಲ್ಲಿ ನಂ.1 ಸೀರಿಯಲ್ ಅಂತ ಗುರುತಿಸಿಕೊಂಡಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ತಗೊಳ್ಳಿ. ತನ್ನಿಂದ ಸ್ನೇಹಾ ಎಲ್ಲಿ ದೂರ ಆಗ್ತಾಳೋ ಅನ್ನೋ ಭಯದಲ್ಲಿ ಸ್ನೇಹಾ ಗಮನಕ್ಕೆ ಬಾರದ ಹಾಗೆ ಕಂಠಿ ಅವಳಿಗೆ ತಾಳಿ ಕಟ್ಟಿ ಬಿಡ್ತಾನೆ. ಎಷ್ಟೇ ವಿರೋಧ ಇದ್ದರೂ ಐಎಎಸ್ ಮಾಡೋ ಕೆಪ್ಯಾಸಿಟಿ ಇರೋ ಬುದ್ಧಿವಂತ ಹೆಣ್ಮಗಳು ಬೈಕೊಂಡ್ರೂ ಅವನ ಮನೆ ಸೇರ್ತಾಳೆ. ಸ್ಟಾರ್ ಸುವರ್ಣ ಸೀರಿಯಲ್‌ನಲ್ಲಿ 'ನೀನಾದೆ ನಾ' ಅನ್ನೋದೊಂದು ಸೀರಿಯಲ್ ಬರ್ತಿದೆ. ಅದರಲ್ಲೂ ವಿಕ್ರಂ ಅನ್ನೋ ರೌಡಿ ಸಿಟ್ಟಿನಲ್ಲಿ ಒಬ್ಬಳು ಹುಡುಗಿಗೆ ತಾಳಿ ಕಟ್ಟೇ ಬಿಡ್ತಾನೆ. ಅವಳು ತಾಳಿಯನ್ನು ನೋಡಿ ಅವನ ಮನೆಗೆ ಬರ್ತಾಳೆ. ಇಪ್ಪತ್ತೊಂದನೇ ಶತಮಾನದಲ್ಲಿ ಜಗತ್ತು ಟೆಟ್ರಾ ಸೆಕೆಂಡ್ ವೇಗದಲ್ಲಿ ಮುನ್ನುಗ್ಗುತ್ತಿರುವ ಕಾಲದಲ್ಲಿ, ಎಐ ಮೂಲಕ ನ್ಯೂಸ್ ಆ್ಯಂಕರನ್ನೇ ಸೃಷ್ಟಿಸೋ ಕಾಲದಲ್ಲಿ ನಮ್ಮ ಸೀರಿಯಲ್‌ಗಳು ತಾಳಿ ಭಾಗ್ಯದ ಬಗ್ಗೆ ಪಾಠ ಮಾಡೋಕೆ ಶುರು ಹಚ್ಚಿಕೊಂಡಿವೆ. ಹಾಗೆ ನೋಡಿದರೆ ಈ ಸೀರಿಯಲ್‌ಗಳ ಕಾಲಘಟ್ಟ ಸರಿ ಸುಮಾರು ಹತ್ತೊಂಭತ್ತನೆಯ ಶತಮಾನ ಅನ್ನಬಹುದೇನೋ..
ಭಾರತೀಯ ಸಂಸ್ಕೃತಿ, ಸಂಪ್ರದಾಯಗಳಿಗೆ ಒಂದು ಘನತೆ ಇದೆ. ಸಾವಿರಾರು ವರ್ಷಗಳಿಂದ ಹರಿದುಬಂದ ಮಹಾನ್ ಜ್ಞಾನದ ಹರಿವಿದೆ. ವೇದ, ಉಪನಿಷತ್ತುಗಳಂಥಾ ಉನ್ನತ ಕಾರ್ಯಗಳು ಜಗತ್ತಿನಲ್ಲೇ ಮತ್ತೆಲ್ಲೂ ಆದ ಉದಾಹರಣೆಗಳಿಲ್ಲ. ನಮ್ಮದು ವೇದ ಮೂಲದ ವಿಶಾಲ ಮನಸ್ಥಿತಿ, ಸಮಾನ ಗೌರವ, ವಸುದೈವ ಕುಟುಂಬಕಂ ಅನ್ನೋ ತತ್ವವನ್ನು ಜಗತ್ತಿಗೆ ಸಾರಿ ಹೇಳಿದ ಭಾರತೀಯ ಪರಂಪರೆ. ನಮ್ಮ ವೇದ, ಉಪನಿಷತ್ತುಗಳು ಆತ್ಮದ ಮಹತ್ವವನ್ನು ಹೇಳುತ್ತವೆ. ಆತ್ಮ ಎಲ್ಲಿತನಕ ಶರೀರದಲ್ಲಿ ಇರುತ್ತೋ ಅಲ್ಲಿತನಕ ಮಾತ್ರ ನಮಗೆ ಅಸ್ತಿತ್ವ. ಆತ್ಮ ದೇಹ ಬಿಟ್ಟು ಹೋದ ಬಳಿಕ ದೇಹ ತ್ಯಾಜ್ಯ ಅಷ್ಟೇ. ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ. ಆತ್ಮ ತನ್ನ ಅಸ್ತಿತ್ವಕ್ಕಾಗಿ ಹೆಣ್ಣು ಅಥವಾ ಗಂಡು ದೇಹವನ್ನು ಪ್ರವೇಶಿಸುತ್ತದೆ. ಆದರೆ ನಾವು ಆತ್ಮ ಧರಿಸಿದ ದೇಹಕ್ಕೆ ಕೊಡುವ ಬೆಲೆಯನ್ನು ಆತ್ಮಕ್ಕೆ ಕೊಡುತ್ತಿಲ್ಲ. ನಮ್ಮದೆಲ್ಲ ಒಂಥರಾ ಹಣ್ಣಿನ ತಿರುಳನ್ನು ಬಿಟ್ಟು ಸಿಪ್ಪೆ ತಿನ್ನುವ ಮೈಂಡ್‌ಸೆಟ್ ಆಗಿಬಿಟ್ಟಿದೆ.
ರಿಯಲ್ ಲೈಫಲ್ಲೂ ಕಂಠಿ-ಸ್ನೇಹಾ ಜೊತೆಯಾಗ್ಬೇಕೆಂತಾರೆ ಪ್ರೇಕ್ಷಕರು! ಈ ನಟನ ಬಗ್ಗೆ ಒಂದಿಷ್ಟು
ಆಯ್ತು, ಈ ತಾಳಿ ಅನ್ನೋದು ನಮ್ಮ ಪರಂಪರೆ (Tradition), ಸಂಸ್ಕೃತಿ (Culture), ಈಶ್ವರ ಪಾರ್ವತಿಗೆ ಕಟ್ಟಿದ, ಮತ್ತೊಂದು ಮೊದಲೊಂದು ಅಂತೆಲ್ಲ ತಾಳಿ ಭಾಗ್ಯದ ಕತೆ ಹೇಳೋ ಸೀರಿಯಲ್‌ಗಳು ನಮ್ಮ ಸಂಸ್ಕೃತಿ, ಪರಂಪರೆಯನ್ನು ಎಷ್ಟು ಸರಿಯಾಗಿ ಅರ್ಥಮಾಡಿಕೊಂಡಿವೆ. ಮನೆಯವರ ಜೊತೆಗೆ ಈ ಸೀರಿಯಲ್ ನೋಡುವ ಪುಟ್ಟ ಮಗುವೊಂದು ಕೇಳುವ ಪ್ರಶ್ನೆಗೆ ಇವರಲ್ಲಿ ಉತ್ತರ ಇದೆಯಾ? ಈ ಜನರೇಶನ್‌ನವರು ಡೇಟಿಂಗ್ ಮಾಡೋದನ್ನು, ಹುಡುಗರ ಜೊತೆಗೆ ಮುಕ್ತವಾಗಿ ಓಡಾಡೋದನ್ನು ಪಾಶ್ಚಾತ್ಯ ಸಂಸ್ಕೃತಿ ಅಂತ ಹೀಗಳೆಯೋ ನಾವು ನಮ್ಮ ಸಂಸ್ಕೃತಿಯನ್ನು ಬಿಂಬಿಸೋ ರೀತಿ ಹೇಗಿದೆ?
ಅಷ್ಟಕ್ಕೂ ವೇದ ಕಾಲದಲ್ಲಿ ಈ ತಾಳಿ ಕಟ್ಟೋ ಪರಂಪರೆ ಇರಲಿಲ್ಲ. ಇದೆಲ್ಲ ಆಮೇಲೆ ಮನುಷ್ಯ ತನ್ನ ಅನುಕೂಲಕ್ಕಾಗಿ ಮಾಡಿಕೊಂಡಿದ್ದು. ಇದೊಂದು ಐಡಿಫಿಕೇಶನ್ ಪರ್ಪಸ್ ಅಷ್ಟೇ. ನಮ್ಮ ಮದುವೆಯಲ್ಲಿ ಧಾರೆಗೆ ಪ್ರಾಧಾನ್ಯವಿದೆ. ಅದು ನಾವೀಗ ಅರ್ಥ ಮಾಡಿಕೊಂಡ ಹಾಗೆ ಹೆಣ್ಣನ್ನು ಅವಳ ಹೆತ್ತವರು ಗಂಡಿಗೆ ಧಾರೆ ಎರೆದುಕೊಡುವ ಸಂಕುಚಿತ ಅರ್ಥದಲ್ಲಿ ಅಲ್ಲ. ಹೆಣ್ಣನ್ನು ಗಂಡಿಗೂ, ಗಂಡನ್ನು ಹೆಣ್ಣಿಗೂ ಪರಸ್ಪರ ಧಾರೆ ಎರೆದು ನೀಡುವುದನ್ನು ತಿಳಿಸುವ ಉನ್ನತ ಚಿಂತನೆ ನಮ್ಮ ಪರಂಪರೆಯದು. ಮುಂದೆ ಅನ್ಯ ದೇಶೀಯರು ದಾಳಿಗಳಾದಾಗ ಈ ತಾಳಿಯನ್ನು ವಿಜೃಂಭಿಸುವ, ಅದನ್ನು ಪೂಜಿಸುವ ಪರಂಪರೆ ಬೆಳೆಯಿತು.
ಅದನ್ನು ಈ ಕಾಲದಲ್ಲಿ ಮತ್ತೂ ವಿಜೃಂಭಿಸುವ, ಆ ಮೂಲಕ ನಮ್ಮ ಹೆಣ್ಮಕ್ಕಳನ್ನು ಮತ್ತಷ್ಟು ದುರ್ಬಲರನ್ನಾಗಿ ಮಾಡುವ ಕೆಲಸಕ್ಕೆ ನಮ್ಮ ಸೀರಿಯಲ್‌ಗಳು ಮುಂದಾಗ್ತಿದ್ದಾವೆ. ಪದೇ ಪದೇ ಇಂಥವನ್ನು ನೋಡಿದ ನಮ್ಮ ಜನ ಅದೇ ಸತ್ಯ ಅಂತ ನಂಬುತ್ತಿದ್ದಾರೆ. ಇಂಥದ್ದನ್ನು ಹೊರಗಿನವರ್ಯಾರಾದರೂ ನೋಡಿದರೆ ಇದೇ ನಮ್ಮ ಸಂಸ್ಕೃತಿ ಅಂತ ತಿಳಿಯೋ ಅಪಾಯ ಇದೆ. ಇಂಥದ್ದೊಂದು ಸಂದಿಗ್ಧಕ್ಕೆ ನಮ್ಮ ಸೀರಿಯಲ್‌ಗಳನ್ನು ನಮ್ಮನ್ನು ದೂಡ್ತಿರೋದು ನಿಜಕ್ಕೂ ನಾಚಿಕೆಗೇಡು.
ಗಂಡ ಹೆಂಡತಿ ಸೀರಿಯಲ್ ನಾಯಕಿ ನಿರುಷಾ ಗೌಡ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ