ಭಾರತದಲ್ಲಿದೆ ಜಗತ್ತಿನ ಏಕೈಕ ತೇಲುವ ವನ್ಯಜೀವಿ ಅಭಯಾರಣ್ಯ !

By Web DeskFirst Published Nov 22, 2019, 6:04 PM IST
Highlights

ತೇಲುವ ಹೋಟೆಲ್ ನೋಡಿರುತ್ತೀರಿ, ತೇಲುವ ಮನೆ ಬಗ್ಗೆ ಕೇಳಿರುತ್ತೀರಿ, ತೇಲುವ ಉದ್ಯಾನ ಇದೆ ಎಂದೂ ಗೊತ್ತು... ಆದರೆ ತೇಲುವ ವನ್ಯಜೀವಿ ಅಭಯಾರಣ್ಯದ ಬಗ್ಗೆ ತಿಳಿದಿದ್ಯಾ? ಇದು ಭಾರತದಲ್ಲೇ ಇದೆ ಎಂದರೆ ನಂಬ್ತೀರಾ?

ನೀವು ಜಗತ್ತಿನ ಅತಿ ಸುಂದರ ದೇಶ ಸ್ವಿಜರ್‌ಲ್ಯಾಂಡ್‌ಗೆ ಹೋಗಿದ್ದೀರೆಂದು ಹೇಳಿಕೊಳ್ಳಬಹುದು, ತಿಂಗಳಿಗೊಮ್ಮೆ ಶಾಪಿಂಗ್ ಮಾಲ್‌ಗೆ ಹೋಗಿ ಬಂದಷ್ಟೇ ಸಲೀಸಾಗಿ ಪ್ಯಾರಿಸ್ ಸುತ್ತಿ ಬರಬಹುದು. ವಿಲಕ್ಷಣ ದೇಶವಾದ ದಕ್ಷಿಣ ಅಮೆರಿಕಕ್ಕೆ ಹೋಗಿ ಬಂದದ್ದನ್ನು ಕೊಚ್ಚಿಕೊಳ್ಳಬಹುದು, ಅಮೆರಿಕದಲ್ಲಿ ನೋಡಿದ್ದರ ದೊಡ್ಡ ಪಟ್ಟಿಯೇ ನೀಡಬಹುದು. ಆದರೆ, ಅಲ್ಲಿ ಎಲ್ಲಿಯೂ ನೀವು ಇಲಿಗಳನ್ನು ಪೂಜಿಸುವ, ಅವುಗಳಿಂದಲೇ ತುಂಬಿರುವ ದೇಗುಲ ನೋಡಿರಲು ಸಾಧ್ಯವಿಲ್ಲ, ಹೆಜ್ಜೆಹೆಜ್ಜೆಗೂ ಬದಲಾಗುವ ಸಂಸ್ಕೃತಿ ಕಾಣಲು ಸಾಧ್ಯವಿಲ್ಲ, ಮೂಳೆಗಳಿಂದ ತುಂಬಿರುವ ಕೆರೆ ಕಾಣುವುದಿಲ್ಲ, ವಾಹನವನ್ನು ಸೆಳೆದುಬಿಡುವ ಮ್ಯಾಗ್ನೆಟಿಕ್ ಗುಡ್ಡವನ್ನು ನೋಡಲು ಸಾಧ್ಯವಿಲ್ಲ, 

ತೇಲುವ ವನ್ಯಜೀವಿ ಅಭಯಾರಣ್ಯವನ್ನು ಖಂಡಿತಾ ನೋಡಿರಲು ಸಾಧ್ಯವೇ ಇಲ್ಲ! ಏಕೆಂದರೆ ಇವನ್ನು ನೋಡಬೇಕು, ನೋಡಿದ್ದನ್ನು ಹೇಳಿಕೊಳ್ಳಬೇಕೆಂದರೆ ಪಾಸ್‌ಪೋರ್ಟ್‌ರಹಿತ ಪ್ರಯಾಣವನ್ನೇ ಮಾಡಬೇಕು. 
ಹೌದು, ಇವೆಲ್ಲವೂ ಇರುವುದು ಭಾರತದಲ್ಲೇ.  ಅದರಲ್ಲೂ ಜಗತ್ತಿನ ಏಕೈಕ ತೇಲುವ ವನ್ಯಜೀವಿ ಅಭಯಾರಣ್ಯ ನಮ್ಮದೇ ದೇಶದಲ್ಲಿದೆ ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. 

ಏಕ್ ದಿನ ಕಾ ಸುಲ್ತಾನ್ ಆಗಲು ಜೈಪುರ ಅರಮನೆ ಮುಕ್ತ

ಎಲ್ಲಿದೆ?
ಮಣಿಪುರದಲ್ಲಿ 40 ಚದರ ಅಡಿಗಳಿಗೆ ಹರಡಿ ನಿಂತಿರುವ ಈ ತೇಲುವ ವನ್ಯಜೀವಿ ಅಭಯಾರಣ್ಯ ಲೋಕ್‌ಟಕ್ ಲೇಕ್‌ನ ಒಂದು ಪ್ರಮುಖ ಭಾಗ. ಉತ್ತರ ಭಾರತದ ಅತಿ ದೊಡ್ಡ ಫ್ರೆಶ್ ವಾಟರ್ ಲೇಕ್ ಎಂಬ ಹೆಗ್ಗಳಿಕೆ ಇರುವ ಲೋಕ್‌ಟಕ್ ಲೇಕ್, ತನ್ನ ವಿಭಿನ್ನ ಹಾಗೂ ವಿಶಿಷ್ಠ ನೋಟದಿಂದ ಎಲ್ಲರನ್ನೂ ಸೆಳೆಯುವ ಗುಣ ಹೊಂದಿದೆ. ಆರಂಭದಲ್ಲಿ ಇದರ ನಡುವೆ ತೇಲುವ ಭೂಮಿ(ಫುಮ್ಡಿ)ಯನ್ನು 1966ರಲ್ಲಿ ಅಭಯಾರಣ್ಯ ಎಂದು ಘೋಷಿಸಲಾಗಿತ್ತು. ಆದರೆ, ಇಲ್ಲಿರುವ ಅಪರೂಪದ ಪ್ರಾಣಿ, ಅಳಿವಿನಂಚಿನಲ್ಲಿರುವ ಡ್ಯಾನ್ಸಿಂಗ್ ಜಿಂಕೆಯನ್ನು ರಕ್ಷಿಸುವ ಸಲುವಾಗಿ ಇದನ್ನು ರಾಷ್ಟ್ರೀಯ ಉದ್ಯಾನವನ ಎಂದು 1977ರಲ್ಲಿ ಘೋಷಿಸಲಾಯಿತು. ಈ ಕೈಬುಲ್ ಲಮ್ಜಾವ್ ನ್ಯಾಷನಲ್ ಪಾರ್ಕ್ ಕುರಿತು 'ದಿ ರಿಟರ್ನ್ ಆಫ್ ಸಾಂಘೈ' ಎಂಬ ಚಲನಚಿತ್ರ ಕೂಡಾ ಇದೆ. 

ಜೀವವೈವಿಧ್ಯದಿಂದ ಸಮದ್ಧವಾಗಿರುವ ಈ ಪಾರ್ಕ್ ಸುಮಾರು 4000 ಮೀನುಗಾರರು ಹಾಗೂ ಪ್ರಾಣಿಗಳಿಗೆ ಜೀವನ ಕಟ್ಟಿಕೊಟ್ಟಿದೆ. ಇಲ್ಲಿ ಮೀನುಗಾರರ ಮಕ್ಕಳಿಗಾಗಯೇ ತೇಲುವ ಎಲಿಮೆಂಟರಿ ಶಾಲೆಯನ್ನು ಕೂಡಾ ತೆರೆಯಲಾಗಿದೆ. ಇದು ನ್ಯಾಷನಲ್ ಪಾರ್ಕ್ ಎನಿಸಿಕೊಳ್ಳಲು ಕಾರಣವಾದ ಸಾಂಘೈ(ನರ್ತಿಸುವ ಜಿಂಕೆ)ಯನ್ನು ಇಲ್ಲಿನ ಜನರು ಮನುಷ್ಯ ಹಾಗೂ ಪ್ರಕೃತಿಯನ್ನು ಬೆಸೆದ ಪ್ರಾಣಿ ಎಂದು ಪೂಜಿಸುತ್ತಾರೆ. ಇದು ಮಣಿಪುರದ ರಾಜ್ಯ ಪ್ರಾಣಿ ಕೂಡಾ. 
ಇಷ್ಟಾದರೂ ಮೊದಲೇ ಅಳಿವಿನಂಚಿನಲ್ಲಿರುವ ಸಾಂಘೈಗಳ ಬದುಕು ಸುರಕ್ಷಿತವಾಗಿಲ್ಲ. ಮೀನುಗಾರಿಕೆ, ಬೇಟೆ ಅವುಗಳ ದೊಡ್ಡ ಶತ್ರುವಾಗಿದ್ದರೆ, ಇದರೊಂದಿಗೆ ಅವು ನಿಂತ ತೇಲುವ ನೆಲ ಕೂಡಾ ಇಲ್ಲಿ ಬೆಳೆಯುತ್ತಿರುವ ಮರಗಳ ಭಾರಕ್ಕೆ ಬಾಗತೊಡಗಿದೆ. 

ಭಾರತದಲ್ಲಿ ಪ್ರೀ ವೆಡ್ಡಿಂಗ್ ಶೂಟ್‌ಗಿದು ಬೆಸ್ಚ್ ಪ್ಲೇಸ್

ಏನೇನಿದೆ ಇಲ್ಲಿ?
ಈ ಕೈಬುಲ್ ಲಮ್ಜಾವ್ ನ್ಯಾಷನಲ್ ಪಾರ್ಕ್‌ ವೈವಿಧ್ಯಮಯ ಸಸ್ಯಜಾತಿಗಳು ಹಾಗೂ ಪ್ರಾಣಿಗಳಿಗೆ ತವರಾಗಿದೆ. ಗೋಲ್ಡನ್ ಕ್ಯಾಟ್, ಹಾರುವ ನರಿ, ಸಾಂಬಾರ್, ಇಲಿಯ ಜಾತಿಗೆ ಸೇರಿದ ಶ್ರಿವ್, ಬಿದಿರ ಇಲಿ, ಜಂಗಲ್ ಕ್ಯಾಟ್, ಸೀಲ್, ಕರಡಿ, ಉಭ್ಯವಾಸಿಗಳು, ಮೀನುಗಳು, ಅಪರೂಪದ ಪಕ್ಷಿಗಳು ಮುಂತಾದವು ಇಲ್ಲಿ ಯತೇಚ್ಛವಾಗಿ ವಾಸಿಸುತ್ತಿವೆ. 

ಫುಮ್ಡಿ
ಇದರ ಸುತ್ತ ಹರಡಿರುವ ಲೋಕ್‌ಟಕ್ ಕೆರೆಯಲ್ಲಿ ಸತ್ತು ಕೊಳೆತ ಸಸ್ಯಸಂಕುಲ ಅಲ್ಲಲ್ಲಿ ಹಸಿರು ವೃತ್ತವಾಗಿ ಹರಡಿ ಕಣ್ಣಿಗೆ ವಿಶಿಷ್ಠ ಆನಂದ ನೀಡುತ್ತದೆ. ಇದನ್ನು ಸ್ಥಳೀಯ ಭಾಷೆಯಲ್ಲಿ ಫುಮ್ಡಿ ಎಂದು ಕರೆಯಲಾಗುತ್ತದೆ. ಇಟಾಯ್ ಹೈಡ್ರೋಪವರ್ ಆಣೆಕಟ್ಟು ಕಟ್ಟಿದ ಬಳಿಕ ಕೆರೆಯ ನೀರು ವರ್ಷವಿಡೀ ಏರಿಕೆಯಾಗಿದ್ದು, ಈ ಫುಮ್ಡಿಗಳು ನೆಲದಿಂದ ನ್ಯೂಟ್ರಿಶನ್ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಫುಮ್ಡಿಗಳು ಅಗಲಗಲ ಚದುರುತ್ತಾ ತೆಳ್ಳಗಾಗುತ್ತಿವೆ. ಇದೂ ಕೂಡಾ ಸಾಂಘೈ ಅಳಿವಿಗೆ ಕಾರಣವಾಗುತ್ತಿದೆ. 

ಹೋಗುವುದು ಹೇಗೆ?
ವಾಯುಮಾರ್ಗ: ಹತ್ತಿರದ ಏರ್‌ಪೋರ್ಟ್ ಮಣಿಪುರದ ರಾಜಧಾನಿ ಇಂಫಾಲ್‌ನದು. ಇಲ್ಲಿಂದ ಪಾರ್ಕ್‌ಗೆ 53 ಕಿಲೋಮಿಟರ್,

ರೈಲು: ದಿಮಾಪುರ ರೈಲ್ವೆ ನಿಲ್ದಾಣ
ವಸತಿ ವ್ಯವಸ್ಥೆ: ಪಾರ್ಕ್‌ನೊಳಗೇ ಉಳಿಯಲು ವ್ಯವಸ್ಥೆಗಳಿವೆ. 

ವೀಕೆಂಡ್ ಟ್ರಿಪ್‌ಗೆ ಬೆಂಗಳೂರಿನ ಸುತ್ತಲಿನ ಸ್ಥಳಗಳಿವು

click me!