ಭಾರತದ ಸ್ನೇಕ್ ವಿಲೇಜ್ ಎಂದೇ ಹೆಸರಾಗಿರುವ ಈ ಊರಿನಲ್ಲಿ ಜನರು ಹಾವನ್ನು ಸಾಕುಪ್ರಾಣಿಯಂತೆ ನೋಡಿಕೊಳ್ಳುತ್ತಾರೆ.. ಪುಟ್ಟ ಮಗು ಕೂಡಾ ಇಲ್ಲಿ ನಾಗರಹಾವಿನೊಡನೆ ಆಟಿಕೆ ಎಂಬಂತೆ ಆಡುತ್ತಾ ಬೆಳೆಯುತ್ತದೆ. ಊರಿನಲ್ಲಿ ಜನರಿಗಿಂತಾ ಹಾವುಗಳ ಸಂಖ್ಯೆಯೇ ಹೆಚ್ಚಿದೆ!
ಹಾವುಗಳನ್ನು ಹಿಂದೂಗಳೆಲ್ಲರೂ ಪೂಜಿಸುತ್ತಾರೆ. ಅದರಲ್ಲೂ ನಾಗರಹಾವು ಬಹಳ ಶ್ರೇಷ್ಠ. ಹಾಗಂತ ಯಾರೂ ಅದನ್ನು ಎತ್ತಿ ಮುದ್ದಾಡಲು ಹೋಗುವುದಿಲ್ಲ. ಪೂಜೆ ಮಾಡಿ ಕೈ ಮುಗಿದು ಆಶೀರ್ವಾದ ಬೇಡುತ್ತಾರಷ್ಟೇ.. ಎಷ್ಟೇ ಪೂಜ್ಯ ಭಾವನೆ ಇದ್ದರೂ ಹಾವು ಕಂಡರೆ ಮಾರು ದೂರ ಹಾರುತ್ತಾರೆ. ಆದರೆ, ಇಲ್ಲೊಂದು ಊರಿದೆ, ಇಲ್ಲಿ ಮನೆಮನೆಯಲ್ಲೂ ಹಾವುಗಳು ಸಾಕುಪ್ರಾಣಿಗಳಾಗಿವೆ. ಅದು ಯಾವುದೋ ಅಲಂಕಾರದ ಹಾವಲ್ಲ.. ವಿಷಕಾರಿ ನಾಗರ ಹಾವು. ಮಕ್ಕಳು ಈ ಹಾವುಗಳೊಂದಿಗೆ ಭಯವಿಲ್ಲದೆ ಆಡುತ್ತಾರೆ, ದೊಡ್ಡವರು ಅವನ್ನು ತಮ್ಮ ಮನೆಯ ಸದಸ್ಯನೆಂಬಂತೆ ಪ್ರೀತಿಯಿಂದ ಕಾಳಜಿ ವಹಿಸಿ ನೋಡಿಕೊಳ್ಳುತ್ತಾರೆ. ಹಾಗಂಥ ಹಾವನ್ನು ಅವರು ಬುಟ್ಟಿಯೊಳಗೆ ತುಂಬಿಡುವುದಿಲ್ಲ.. ಬದಲಿಗೆ ಮನೆಯಲ್ಲಿ ಎಲ್ಲಿ ಬೇಕಾದರೂ ಓಡಾಡಿಕೊಂಡಿರುವ ಸ್ವಾತಂತ್ರ್ಯ ಹಾವಿಗಿದೆ. ಅಯ್ಯೋ, ಏನಪ್ಪಾ ಇದು ವಿಷಕಾರಿ ಹಾವಿನೊಂದಿಗಿರಲು ಸಾಧ್ಯವೇ? ಹೀಗೂ ಉಂಟೆ ಎಂದು ಅಚ್ಚರಿ ಪಡ್ತಿದೀರಾ?
ಈ ವಿಲಕ್ಷಣ ಸ್ಥಳ ಇರೋದು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ. ಪುಣೆಯಿಂದ ಸುಮಾರು 200 ಕಿಮೀ ದೂರದಲ್ಲಿರುವ ಶೆಟ್‌ಫಾಲ್ ಗ್ರಾಮ ಹಾವಿನ ಹಳ್ಳಿಯೇ ಆಗಿದೆ. ಇಲ್ಲಿ ಈ ಅಪಾಯಕಾರಿ ಜಾತಿಯ ಹಾವುಗಳನ್ನು ಕುಟುಂಬದ ಸದಸ್ಯರಂತೆ ಪರಿಗಣಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಈ ಹಾವುಗಳಿಗೆ ಮನೆಯಲ್ಲಿ ಎಲ್ಲಿ ಬೇಕಾದರೂ ಇರುವ ಸ್ವಾತಂತ್ರ್ಯವಿದೆ. ಹಳ್ಳಿಯಲ್ಲಿ, ಈ ಹಾವುಗಳು ಇತರ ನಿವಾಸಿಗಳಂತೆ ಮುಕ್ತವಾಗಿ ವಿಹರಿಸಲು ಅನುಮತಿಸಲಾಗಿದೆ.
ಈ ಹಳ್ಳಿಯ ಆರಂಭದ ದಿನಗಳಿಂದಲೂ ನಾಗರಹಾವುಗಳು ಇಲ್ಲಿ ವಾಸಿಸುತ್ತಿದ್ದು, ಮಾನವರು ಕಳೆದ ಕೆಲವು ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ನಾಗರಹಾವು ಮನುಷ್ಯರಿಗೆ ಹೆದರುವುದಿಲ್ಲ ಮತ್ತು ಪ್ರತಿಯಾಗಿ, ಮನುಷ್ಯರು ಹಾವಿಗೆ ಹೆದರುವುದಿಲ್ಲ.. ಗ್ರಾಮದಲ್ಲಿ ಹಾವುಗಳ ಸಂಖ್ಯೆ ಮನುಷ್ಯರ ಸಂಖ್ಯೆಗಿಂತ ಹೆಚ್ಚಿದೆ ಎಂದು ತಿಳಿದರೆ ನೀವು ಬೆಚ್ಚಿ ಬೀಳುತ್ತೀರಿ.
ಇವರು ಇಂದಿನ ಶಹಜಹಾನ್; ಪತ್ನಿಗಾಗಿ 7 ಕೋಟಿ ರೂ. ವೆಚ್ಚದ ದೇವಾಲಯ ನಿರ್ಮಿಸಿದ ಪತಿ!
ಇಲ್ಲಿ ಇಷ್ಟೊಂದು ಹಾವುಗಳು ಏಕೆ ಕಾಣಸಿಗುತ್ತವೆ ಎಂಬ ಪ್ರಶ್ನೆ ಈ ಗ್ರಾಮಕ್ಕೆ ಭೇಟಿ ನೀಡುವ ಜನರ ಮನದಲ್ಲಿ ಆಗಾಗ ಮೂಡುತ್ತದೆ. ನಿಮ್ಮ ಮಾಹಿತಿಗಾಗಿ, ಈ ಗ್ರಾಮದ ಪರಿಸರವು ಶುಷ್ಕವಾಗಿರುವುದರಿಂದ, ಇದು ಹಾವುಗಳಿಗೆ ಸಂಪೂರ್ಣವಾಗಿ ಅನುಕೂಲಕರವಾಗಿದೆ. ಇದರೊಂದಿಗೆ, ಈ ಗ್ರಾಮದ ಪ್ರದೇಶವು ಬಯಲು ಪ್ರದೇಶವಾಗಿದೆ ಮತ್ತು ಹಾವುಗಳು ಹೆಚ್ಚಾಗಿ ಇಂತಹ ಬಯಲು ಪ್ರದೇಶಗಳಲ್ಲಿ ಕಂಡು ಬರುತ್ತವೆ. ಇಲ್ಲಿ ನಾಗರ ಹಾವುಗಳು ತಮ್ಮ ಸ್ವಂತ ಮನೆ ಎಂಬಂತೆ ಜನರ ಮನೆಗಳಲ್ಲಿ ಸುತ್ತಾಡುತ್ತವೆ, ಈ ಮನೆಗಳಲ್ಲಿ ಹಾವುಗಳು ತಮ್ಮನ್ನು ಮನುಷ್ಯರೊಂದಿಗೆ ಅತ್ಯಂತ ಸುರಕ್ಷಿತವೆಂದು ಪರಿಗಣಿಸುತ್ತವೆ.
ಈ ಅಪಾಯಕಾರಿ ಹಾವುಗಳು ಇಲ್ಲಿನ ಪ್ರತಿಯೊಂದು ಮನೆಯಲ್ಲೂ ಕಂಡುಬರುತ್ತವೆ. ಹಾವುಗಳಿಗೆ ಹೆಚ್ಚಿನ ಕಾಳಜಿ ವಹಿಸಿ ಗ್ರಾಮಸ್ಥರು ಆಹಾರ ನೀಡುತ್ತಾರೆ. ಈ ಹಾವುಗಳಿಗೆ ಮನೆಯಲ್ಲಿ ಒಂದು ನಿರ್ದಿಷ್ಟ ಸ್ಥಳವಿದೆ. ಮಕ್ಕಳು ಹಾವುಗಳೊಂದಿಗೆ ಆಟವಾಡುತ್ತಿರುತ್ತಾರೆ, ಗ್ರಾಮದಲ್ಲಿ ಈ ಹಾವುಗಳು ಯಾರಿಗೂ ಕಚ್ಚಿಲ್ಲ.
ರಂಗುರಂಗಿನ ಹೋಳಿಹಬ್ಬಕ್ಕೆ ಸಜ್ಜಾದ ಮಹಾನಗರ: ರತಿ-ಮನ್ಮಥರ ಮೂರ್ತಿಗೆ ಬೇಡಿಕೆ
ಹಾವಿನ ಹಳ್ಳಿಯಲ್ಲಿ ಪ್ರತಿಯೊಂದು ನಿವಾಸವು ಬಹುತೇಕ ದೇವಸ್ಥಾನದಂತೆ ನಾಗರಹಾವುಗಳಿಗಾಗಿ ಪ್ರತ್ಯೇಕ ಸ್ಥಳವನ್ನು ಹೊಂದಿವೆ. ಈ ನಿರ್ದಿಷ್ಟ ಹಾವಿನ ಆವಾಸ ಸ್ಥಾನವನ್ನು ದೇವಸ್ತಾನಂ ಎಂದು ಕರೆಯಲಾಗುತ್ತದೆ ಮತ್ತು ಜನರು ಈ ಹಾವುಗಳನ್ನು ಪೂಜಿಸುತ್ತಾರೆ. ಶೆಟ್‌ಫಾಲ್ ಗ್ರಾಮದ ಜನರು ನೃತ್ಯ ಅಥವಾ ಸಂಗೀತದ ಮೂಲಕ ಹಾವುಗಳೊಂದಿಗೆ ಸಂವಹನ ನಡೆಸಬಹುದು ಎಂದು ನಂಬುತ್ತಾರೆ. ಈ ಮಟ್ಟದ ಸ್ನೇಹ ಹೇಗೆ ಸಾಧಿಸಿದ್ದು ಎಂದರೆ, ಯಾರೂ ವಿವರಿಸಲು ಸಾಧ್ಯವಿಲ್ಲ. ಆದರೆ ವಿವರಿಸಲಾಗದ ಮಾತ್ರಕ್ಕೆ ಅದು ನಿಜವಲ್ಲ ಎಂದೂ ಅರ್ಥವಲ್ಲ.
ಬಹುಷಃ ನಾವು ಹಾವುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅವುಗಳನ್ನು ಭಯದಿಂದ ನೋಡುವುದು ಬಿಟ್ಟು ಸ್ನೇಹದಿಂದ ನೋಡಿದರೆ ಅವೂ ಕೂಡಾ ನಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳಬಹುದೇನೋ.. ಇಷ್ಟಕ್ಕೂ ಯಾವ ಯಾವು ಕೂಡಾ ನಾವು ತೊಂದರೆ ಮಾಡದಿದ್ದರೆ ಅವಾಗಿಯೇ ಹುಡುಕಿ ಬಂದು ಕಚ್ಚುವುದಿಲ್ಲ ಎಂಬುದಂತೂ ಸತ್ಯವಷ್ಟೇ..