ಟ್ರಿಪ್ ಯಾರಿಗೆ ಇಷ್ಟವಾಗಲ್ಲ ಹೇಳಿ? ರಜೆ ಸಿಕ್ಕರೆ ಸಾಕು ಊರು ಸುತ್ತಬೇಕು ಎನ್ನುವವರಿದ್ದಾರೆ. ಪ್ಲಾನ್ ಮಾಡಿ ಟ್ರಿಪ್ ಗೆ ಹೋಗೋದು ಬೇರೆ, ಯಾವುದೇ ಪ್ಲಾನ್ ಇಲ್ಲದೆ ಪ್ರವಾಸಕ್ಕೆ ಹೊರಡೋದು ಬೇರೆ. ಥಟ್ ಅಂತಾ ಪ್ರವಾಸ ನಿಗದಿಯಾದ್ರೆ ಬ್ಯಾಗ್ ಪ್ಯಾಕಿಂಗ್ ತಲೆನೋವಾಗುತ್ತದೆ. ಆದ್ರೆ ಕೆಲ ಟಿಪ್ಸ್ ಪಾಲಿಸಿದ್ರೆ ಎಲ್ಲವೂ ಸರಳ.
ಕೆಲವರಿಗೆ ಪ್ರಯಾಣ (Travel)ವೆಂದ್ರೆ ತುಂಬಾ ಇಷ್ಟ. ತಿಂಗಳಿಗೊಮ್ಮೆ ಪ್ರವಾಸಕ್ಕೆ ಹೋಗ್ತಾರೆ. ಮತ್ತೆ ಕೆಲವರು ವರ್ಷ (Year)ಕ್ಕೊಮ್ಮೆಯಾದ್ರೂ ಪ್ರವಾಸಿ ಸ್ಥಳಗಳಿಗೆ ಹೋಗಿ ಬರ್ತಾರೆ. ಪ್ರವಾಸದ ಪ್ಲಾನ್ (Plan) ಮೊದಲೇ ಆಗಿದ್ದರೆ ನಾವು ವಾರದ ಮೊದಲೇ ಪ್ಯಾಕಿಂಗ್ ಶುರು ಮಾಡ್ತೇವೆ. ಅಲ್ಲಿನ ಹವಾಮಾನವನ್ನು ಚೆಕ್ ಮಾಡಿ ಅದಕ್ಕೆ ಸೂಕ್ತವಾದ ಬಟ್ಟೆಗಳನ್ನು ಖರೀದಿ ಮಾಡ್ತಾವೆ. ವಾರಕ್ಕಿಂತ ಮೊದಲು ಶಾಪಿಂಗ್ ಜೋರಾಗಿರುತ್ತದೆ. ಆದರೆ ಕೆಲವೊಮ್ಮೆ ದಿಢೀರನೆ ಪ್ರವಾಸದ ಪ್ಲಾನ್ ಆಗಿರುತ್ತದೆ. ಶಾಪಿಂಗ್ ಇರಲಿ ಬಟ್ಟೆ ಪ್ಯಾಕಿಂಗ್ ಗೂ ಸಮಯವಿರುವುದಿಲ್ಲ. ಆಗ ಟೆನ್ಷನ್ ಆಗೋದು ಸಾಮಾನ್ಯ. ಈ ಗಜಿಬಿಜಿಯಲ್ಲಿ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಲು ಮರೆಯುತ್ತೇವೆ. ಹೋಗ್ತಿರುವ ಜಾಗ,ಟಿಕೆಟ್ ಬುಕ್ಕಿಂಗ್,ಹೊಟೇಲ್ ಬುಕ್ಕಿಂಗ್,ಅಲ್ಲಿನ ಹವಾಮಾನ ಯಾವುದನ್ನೂ ಗಮನಿಸಲು ಸಾಧ್ಯವಾಗುವುದಿಲ್ಲ. ನೀವು ದಿಢೀರ್ ಅಂತಾ ಪ್ರವಾಸದ ಪ್ಲಾನ್ ಮಾಡಿದ್ದರೆ ಟೆನ್ಷನ್ ಆಗ್ಬೇಡಿ. ಕೆಲವು ಸಲಹೆಗಳನ್ನು ಸದಾ ನೆನಪಿಡಿ. ಅದನ್ನು ಆ ಸಂದರ್ಭದಲ್ಲಿ ಅನುಸರಿಸುವ ಮೂಲಕ, ನಿಮ್ಮ ಎಲ್ಲಾ ಅಗತ್ಯ ವಸ್ತುಗಳನ್ನು ಯಾವುದೇ ಆತರವಿಲ್ಲದೆ ಪ್ಯಾಕ್ ಮಾಡಬಹುದು. ಇಂದು ದಿಢೀರ್ ಪ್ರವಾಸದ ವೇಳೆ ಪ್ಯಾಕಿಂಗ್ ಹೇಗಿರಬೇಕು ಎಂಬುದನ್ನು ಹೇಳ್ತೇವೆ ಕೇಳಿ.
ಪ್ರಯಾಣಕ್ಕೆ ಪ್ಯಾಕ್ ಮಾಡುವುದು ಹೇಗೆ?
ಚೆಕ್ ಲೀಸ್ಟ್ ತಯಾರಿಸಿ : ಪ್ರವಾಸಕ್ಕೆ ಪ್ಯಾಕಿಂಗ್ ಮಾಡುವ ಮೊದಲು, ಪ್ರವಾಸದಲ್ಲಿ ಬಳಸುವ ಎಲ್ಲಾ ಅಗತ್ಯ ವಸ್ತುಗಳನ್ನು ಮೊದಲು ಪಟ್ಟಿ ಮಾಡಿ. ಪಟ್ಟಿ ಮಾಡಿದ ನಂತ್ರ ನಿಮಗೆ ಪ್ಯಾಕಿಂಗ್ ಸುಲಭವಾಗುತ್ತದೆ. ಪಟ್ಟಿ ಮಾಡಿದ ನಂತ್ರ ಇನ್ನೊಮ್ಮೆ ಅದನ್ನು ಪರಿಶೀಲಿಸಿ. ನಂತ್ರ ಪಟ್ಟಿ ಪರಿಶೀಲಿಸುತ್ತ ಪ್ಯಾಕಿಂಗ್ ಆರಂಭಿಸಿ.
HOLI 2022: ಈ ನಗರದಲ್ಲಿ 12 ದಿನ ನಡೆಯುತ್ತೆ ಬಣ್ಣದೋಕುಳಿ, ಇಲ್ಲಾಗಲೇ ಶುರುವಾಗಿದೆ ಹೋಳಿ!
ಮೆಡಿಕಲ್ ಕಿಟ್ : ಪ್ರವಾಸ ಒಂದು ದಿನದ್ದಾಗಿರಲಿ ಇಲ್ಲ ಒಂದು ವಾರದ್ದಾಗಿರಲಿ ಮೆಡಿಕಲ್ ಕಿಟ್ ಅತ್ಯಗತ್ಯ. ಸ್ಥಳ ಬದಲಾವಣೆ ನಿಮ್ಮನ್ನು ಅನಾರೋಗ್ಯಕ್ಕೊಳಪಡಿಸಬಹುದು. ಟ್ರಾವೆಲ್ ನಿಂದ ದೇಹ ದಣಿಯಬಹುದು. ಇಲ್ಲವೆ ಪ್ರವಾಸದ ವೇಳೆ ಸಣ್ಣಪುಟ್ಟ ಗಾಯಗಳಾಗಬಹುದು. ಹಾಗಾಗಿ ಬ್ಯಾಂಡೆಡ್ ನಿಂದ ಹಿಡಿದು ಜ್ವರ,ತಲೆನೋವಿನ ಮಾತ್ರೆಗಳನ್ನು ಅವಶ್ಯಕವಾಗಿಟ್ಟುಕೊಳ್ಳಿ. ನೀವು ಪ್ರತಿ ದಿನ ಔಷಧಿ ಸೇವಿಸುತ್ತಿದ್ದರೆ ಅದನ್ನು ತಪ್ಪದೆ ಪ್ಯಾಕ್ ಮಾಡಿ.
ಅಗತ್ಯ ದಾಖಲೆ : ಪ್ರಯಾಣದ ಟಿಕೆಟ್, ಗುರುತಿನ ಚೀಟಿ, ಪ್ರಯಾಣದಲ್ಲಿ ಬಳಸುವ ಪಾಸ್‌ಪೋರ್ಟ್‌ನಂತಹ ಅಗತ್ಯ ದಾಖಲೆಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ನೀವು ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ, ಕಾರ್ ಪೇಪರ್ಸ್ ಮತ್ತು ಡ್ರೈವಿಂಗ್ ಲೈಸೆನ್ಸ್ ನಿಮ್ಮೊಂದಿಗೆ ಇರಿಸಿಕೊಳ್ಳಲು ಮರೆಯಬೇಡಿ.
ಸರಿಯಾದ ವಿಧಾನವಿರಲಿ : ಒಂದು ಅಗತ್ಯ ದಾಖಲೆ,ಇನ್ನೊಂದು ಮೇಕಪ್ ಐಟಂ ಮತ್ತೊಂದು ಮಾತ್ರೆ ಹೀಗೆ ಒಂದೊಂದನ್ನು ಬ್ಯಾಗ್ ಗೆ ಹಾಕಿ ಗೊಂದಲ ಸೃಷ್ಟಿ ಮಾಡಿಕೊಳ್ಳಬೇಡಿ. ಮೊದಲು ನೀವು ತೆಗೆದುಕೊಂಡು ಹೋಗುವ ಬ್ಯಾಗ್ ತೂಕ ಚೆಕ್ ಮಾಡಿ. ನಂತ್ರ ಒಂದೊಂದೇ ಕ್ಯಾಟಗರಿಯಲ್ಲಿ ಬ್ಯಾಗ್ ಪ್ಯಾಕ್ ಮಾಡಿ. ಅಂದ್ರೆ ಮೆಡಿಕಲ್ ಅಂದಾಗ ಅದಕ್ಕೊಂದು ಕಿಟ್ ಮಾಡಿ ಅದ್ರಲ್ಲೇ ಎಲ್ಲ ಮಾತ್ರೆ,ಔಷಧಿ ಇರುವಂತೆ ನೋಡಿಕೊಳ್ಳಿ. ಮೆಡಿಕಲ್ ಕಿಟ್ ಸಂಪೂರ್ಣವಾದ್ಮೇಲೆ ಮೇಕಪ್ ಕಿಟ್ ಗೆ ಕೈ ಹಾಕಿ.
Bengaluru ಕುರಿತ ಈ ವಿಷಯಗಳು ಸ್ವತಃ ಬೆಂಗಳೂರಿಗರಿಗೇ ಗೊತ್ತಿಲ್ಲ!
ಬಟ್ಟೆ ಪ್ಯಾಕಿಂಗ್ : ಬಟ್ಟೆ ಪ್ಯಾಕ್ ಮಾಡುವಾಗ ಇಸ್ತ್ರಿ ಬಗ್ಗೆ ಗಮನ ನೀಡಿ. ಅನೇಕ ಬಾರಿ ಇಸ್ತ್ರಿ ಮಾಡಲು ಸಮಯವಿರುವುದಿಲ್ಲ. ಅಂಥ ಸಂದರ್ಭದಲ್ಲಿ ಇಸ್ತ್ರಿ ಅಗತ್ಯವಿಲ್ಲದ ಬಟ್ಟೆ ಪ್ಯಾಕ್ ಮಾಡಿ. ಹಾಗೆ ನೈಟ್ ಡ್ರೆಸ್,ಅಂಡರ್ ಗಾರ್ಮೆಂಟ್ಸ್ ಗಳನ್ನು ಬೇರೆ ಬೇರೆಯಾಗಿ ಪ್ಯಾಕ್ ಮಾಡಿ.
ಬಾತ್ ರೂಂ ಐಟಂ : ಅನೇಕ ಸ್ಥಳಗಳಲ್ಲಿ ನಿಮಗೆ ಸೋಪ್,ಶಾಂಪೂ ಸಿಗುವುದಿಲ್ಲ. ಕೆಲವೊಮ್ಮೆ ಅಲ್ಲಿ ನೀಡುವ ಉತ್ಪನ್ನಗಳು ನಿಮಗೆ ಅಲರ್ಜಿಯನ್ನುಂಟು ಮಾಡಬಹುದು. ಹಾಗಾಗಿ ನಿಮಗೆ ಅಗತ್ಯವಿರುವ ವಸ್ತುಗಳನ್ನು ಮರೆಯದೇ ಪ್ಯಾಕ್ ಮಾಡಿ.
ಪ್ರಯಾಣ ಡಿಜಿಟಲ್ ಆಗಿರಲಿ : ಫೋನ್ ಅತ್ಯಗತ್ಯ. ಹಾಗಾಗಿ ಫೋನ್ ಜೊತೆ ಚಾರ್ಜರ್, ಲ್ಯಾಪ್ ಟಾಪ್ ಬ್ಯಾಗ್ ಹೀಗೆ ನಿಮಗೆ ಅಗತ್ಯವಿರುವ ಎಲ್ಲ ಡಿಜಿಟಲ್ ವಸ್ತುಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ. ಪ್ರಯಾಣದ ವೇಳೆ ದಾರಿ ಹುಡುಕಲು,ಪ್ರಸಿದ್ಧ ಸ್ಥಳ ಹಾಗೂ ಹೊಟೇಲ್ ಸರ್ಚ್ ಮಾಡಲು ಮೊಬೈಲ್ ಅನಿವಾರ್ಯ ಎಂಬುದು ನೆನಪಿರಲಿ.
ಆಹಾರ : ಪ್ರಯಾಣದ ವೇಳೆ ನೀರು ಹಾಗೂ ಕೆಲ ಆಹಾರದ ಪ್ಯಾಕ್ ಅತ್ಯಗತ್ಯ. ಡ್ರೈ ಫ್ರೂಟ್ಸ್ ಹಾಗೂ ಬಿಸ್ಕತ್ ಬ್ಯಾಗ್ ನಲ್ಲಿರುವಂತೆ ನೋಡಿಕೊಳ್ಳಿ.