ಲಡಾಖ್ ಅಮೃತಯಾತ್ರೆ-2022: ಭಾಗ-8, ಲೇಹ್‌ ಗೆ ಹೋಗೋಣ, ಬಾರೋ ಲೇ...!

By Suvarna News  |  First Published Sep 17, 2022, 5:16 PM IST

12 ದಿನಗಳ ನಮ್ಮ ಹಿಮಾಲಯನ್ ಯಾತ್ರೆಯ ಮೊದಲನೆಯ ಹಂತದ ಕಚ್ಚಾರಸ್ತೆಯ ಪ್ರಯಾಣಕ್ಕೆ ನಮಗೆ ಆಗಸ್ಟ್ 15ರ ಮರುದಿನವೇ ಸ್ವಾತಂತ್ರ್ಯ ದೊರಕಿತು. ಮುಂದೆ ಲಡಾಖ್ ಪ್ರಾಂತ್ಯದ ರಾಜಧಾನಿ ಲೇಹ್ ವರೆಗೂ ನಮ್ಮನ್ನು ಕೊಂಡೊಯ್ದದ್ದು ನುಣುಪಾದ ಹೆದ್ದಾರಿ. ಹಾಗಂತ, ಆ 280 ಕಿ.ಮೀ. ಪ್ರಯಾಣ ಬೋರು ಹೊಡೆಸಲಿಲ್ಲ. ಕೇಳೇ ಇರದ ಕೆಲವು ವಿಷಯಗಳನ್ನು ಆ ಪ್ರಯಾಣ ನಮ್ಮ ಮುಂದೆ ತೆರೆದಿಟ್ಟಿತು. ಏನದು? ಮುಂದೆ ಓದಿ..


-ರವಿಶಂಕರ್‌ ಭಟ್‌

ಆಫ್ಘನ್ ನಲ್ಲಿದ್ದಂತೆ ಕರ್ಸ್ತೇ ಖಾರ್ ನಲ್ಲೂ ಬುದ್ಧ
ಪನಿಖಾರ್‌ನಲ್ಲಿ ತಂಗಿದ್ದ ನಾವು ಯಾತ್ರೆಯ 6ನೇ ದಿನ ಲಡಾಖ್ ಪ್ರಾಂತ್ಯದ ರಾಜಧಾನಿ ಲೇಹ್ ತಲುಪುವುದು ಎಂದು ನಿರ್ಧಾರವಾಗಿತ್ತು. ಕಳೆದ 3-4 ದಿನಗಳಂತೆ ಕಚ್ಚಾ ರಸ್ತೆಯ ಸಾಹಸ ಮಾಡಬೇಕಿರಲಿಲ್ಲ. ಲೇಹ್ ವರೆಗೂ ಹೆದ್ದಾರಿ. ಅಷ್ಟೂ ದೂರಕ್ಕೆ ಟಾರು ರಸ್ತೆ. ಮಧ್ಯೆ ಸಾಕಷ್ಟು ಜನವಸತಿ ಪ್ರದೇಶಗಳು. ಪನಿಖಾರ್‌ನಿಂದ ಹೊರಡುವ ಮುನ್ನವೇ ಗೂಗಲಮ್ಮನ ಬಳಿ ಒಂದಷ್ಟು ಮಾಹಿತಿ ಕೇಳಿದ್ದೆವು. ಅಲ್ಲೇ ಐದ್ಹತ್ತು ಕಿ.ಮೀ. ದೂರದಲ್ಲಿ ವಿಶಿಷ್ಟ ಬೌದ್ಧಕೇಂದ್ರವೊಂದಿದೆ ಎಂದಿದ್ದಳಾಕೆ. ನಾವು ತಂಗಿದ್ದ ಹೋಮ್‌ಸ್ಟೇಯ ಮಾಲಿಕನೂ ಅದರ ಮಾರ್ಗ ತಿಳಿಸಿದ್ದ. ಕಾರ್ಗಿಲ್ ಹೆದ್ದಾರಿಯಲ್ಲಿ 25 ಕಿ.ಮೀ. ಸಾಗಿದರೆ ಸಂಕೂ ಎಂಬ ಊರು ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿ 5 ಕಿ.ಮೀ. ಹೋದರೆ ಕರ್ಸ್ತೇ ಖಾರ್ ಎಂಬ ಪುಟ್ಟ ಹಳ್ಳಿ ಸಿಗುತ್ತದೆ. ಅಲ್ಲಿ ಬೆಟ್ಟದಲ್ಲಿನ ಕಲ್ಲನ್ನೇ ಕೊರೆದು ಬುದ್ಧನ ಪ್ರತಿಮೆಯೊಂದನ್ನು ಕೆತ್ತಲಾಗಿದೆ ಎಂಬುದು ನಮಗೆ ಸಿಕ್ಕ ಮಾಹಿತಿ. ಎಲ್ಲರೂ ಆಲೂ ಪರೋಟ ಹೊಟ್ಟೆಗಿಳಿಸಿ, ಅದರ ಮೇಲೊಂದು ಚಹಾ ಆಗಿ typical ಕಾಶ್ಮೀರಿ ಪ್ರದೇಶದ ಸೌಂದರ್ಯೆ ಸವಿಯುತ್ತಾ ಪ್ರಯಾಣ ಆರಂಭಿಸಿದೆವು. 

Tap to resize

Latest Videos

5 ದಿನದಲ್ಲಿ ಸುಮಾರು 700 ಕಿ.ಮೀ. ಬೈಕು ಸವಾರಿ ಮಾಡಿದ್ದ ನಾನು ಬದಲಾವಣೆಗೆಂದು ಜೀಪು ಏರಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಕುದುರೆ ಏರಿದ್ದು ಅನಂತನ ಸೋದರ ಅನಿಲ್. ದಿಲೀಪ ತಾನು ಏರಿ ಬಂದಿದ್ದ ಹಿಮಾಲಯನ್‌ ಸ್ಕ್ರ್ಯಾಮ್ 411ನಲ್ಲಿ ಪ್ರಯಾಣ ಮುಂದುವರಿಸಿದ. ನಮಗಿದ್ದ ಮಾಹಿತಿಯಂತೆಯೇ ಕರ್ಸ್ತೇ ಖಾರ್ ತಲುಪಿದೆವು. ಅಲ್ಲೊಂದಿಷ್ಟು ಮಕ್ಕಳು ಟಾಫಿ ದೇ ದೋ ಟಾಫಿ ಎನ್ನುತ್ತಾ ಹತ್ತಿರ ಬಂದರು. ಪ್ರವಾಸಿಗರು ಬಿಸ್ಕತ್ತು, ಚಾಕೋಲೆಟ್ ಕೊಟ್ಟು ಅಭ್ಯಾಸ (Habit) ಮಾಡಿಸಿದ್ದಾರಂತೆ ಅವರಿಗೆ. ಇಲ್ಲದವರ ಬಳಿ ಹಣ ಕೇಳುತ್ತಾರಂತೆ ಮಕ್ಕಳು. ನಾವು ಆ ಅಭ್ಯಾಸಕ್ಕೆ ಪ್ರೋತ್ಸಾಹ ಕೊಡದೆ ಒಂದೆಡೆ ವಾಹನಗಳನ್ನು ನಿಲ್ಲಿಸಿದೆವು. ಅಲ್ಲಲ್ಲಿ ಆ ಪ್ರದೇಶದ ಜೀರ್ಣೋದ್ಧಾರ ಕೆಲಸವಾಗುತ್ತಿತ್ತು. ಬಹುಶಃ ಸರ್ಕಾರವೇ ಆ ಐತಿಹಾಸಿಕ ಸ್ಥಳದ ಸಂರಕ್ಷಣೆ, ಅಭಿವೃದ್ಧಿ ಕೈಗೆತ್ತಿಕೊಂಡಿರಬೇಕು. 

ಲಡಾಖ್ ಅಮೃತ ಯಾತ್ರೆ–2022 ಭಾಗ-4: ಥ್ಯಾಂಕ್ಯೂ ಬ್ರೋ ಥ್ಯಾಂಕ್ಯೂ!

ಕಾಲುದಾರಿಯಲ್ಲಿ ಸುಮಾರು 200 ಮೀ. ಸಾಗಿರಬಹುದು, ಬಲಗಡೆಗೆ ಬುದ್ಧನ ದರ್ಶನವಾಯಿತು. ಹೆಸರು ಮೈತ್ರೇಯಿ ಬುದ್ಧ. ಎತ್ತರ ಸುಮಾರು 7 ಮೀಟರು. 7ನೇ ಶತಮಾನದಲ್ಲಿ ಕೆತ್ತಿದ ಮೂರ್ತಿಯಂತೆ (Statue). ಅದನ್ನು ನೋಡುತ್ತಿದ್ದಂತೆ ನೆನಪಾದದ್ದು ಅಫ್ಘಾನಿಸ್ತಾನದ ಬಮಿಯಾನ್‌ನಲ್ಲಿ ತಾಲಿಬಾನ್ ಉಗ್ರರಿಂದ 2001ರಲ್ಲಿ ನಾಶಗೊಂಡ 6ನೇ ಶತಮಾನದ ಬೃಹದಾಕಾರದ ಬುದ್ಧನ ವಿಗ್ರಹಗಳು. ಹೂ ಬ ಹೂ ಅಲ್ಲಿನಂತೆಯೇ ಇಲ್ಲೂ ಬೆಟ್ಟದ ಶಿಲೆಯನ್ನೇ ಕೆತ್ತಿ ಬುದ್ಧನ ವಿಗ್ರಹ ಕಡೆಯಲಾಗಿತ್ತು. ವಿನ್ಯಾಸ, ಗಾತ್ರ ಮಾತ್ರ ವ್ಯತ್ಯಾಸ. ಅಲ್ಲಿನ ಪರಿಸರವೂ ಅಷ್ಟೆ. ಬೆಟ್ಟ, ಕಣಿವೆಯ ನಡುವೆ ಹಳೆಯ ಮಣ್ಣಿನ ಕಟ್ಟಡಗಳು. ಚಿತ್ರಗಳಲ್ಲಿ ನೋಡಿದ ಇರಾನೋ, ತಜಕ್ ಅಥವಾ ಕಜಕಿಸ್ತಾನವೋ ಎಂಬಂತಿತ್ತು. ಅಷ್ಟು ದಿನ ಸಾಹಸ ಯಾನ (Adventure travel) ಕೈಗೊಂಡಿದ್ದ ನಾವು ಈಗ ಅಪ್ಪಟ ಪ್ರವಾಸಿಗರಂತೆ ಐತಿಹಾಸಿಕ ತಾಣವೊಂದರ ವೀಕ್ಷಣೆ ಮಾಡಿ ಕಾರ್ಗಿಲ್‌ನತ್ತ ಪ್ರಯಾಣ ಮುಂದುವರಿಸಿದೆವು.

ಕಾರ್ಗಿಲ್ ನಲ್ಲಿ ಸಿಕ್ಕಿದ ಉಪ್ಪು ಚಹಾ !
ಸಂಕೂಗೆ ಬಂದು ಬಲಕ್ಕೆ ತಿರುಗಿ ಸುಮಾರು 40 ಕಿ.ಮೀ. ಹೆದ್ದಾರಿ ಕ್ರಮಿಸಿದರೆ ಐತಿಹಾಸಿಕ ಕಾರ್ಗಿಲ್ ಪಟ್ಟಣ. ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿರುವುದು ಎರಡೇ ಎರಡು ಜಿಲ್ಲೆಗಳು. ಕಾರ್ಗಿಲ್ ಮತ್ತು ಲೇಹ್. ಕಾರ್ಗಿಲ್ ಪಟ್ಟಣ ಎಂದರೆ ನಮ್ಮ ಸೈನಿಕರು 1999ರಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದರಲ್ಲ, ಆ ಜಾಗವಲ್ಲ. ಅದೆಲ್ಲ ಇರುವುದು ಕಾರ್ಗಿಲ್ ಪಟ್ಟಣದಿಂದ ವಾಯವ್ಯ, ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ. ಇದು ಜಿಲ್ಲಾ ಕೇಂದ್ರ ಅಷ್ಟೆ. ದಕ್ಷಿಣದ ಜನ್ಸ್‌ ಖಾರ್‌ನಿಂದ ಆಗಮಿಸಿ, ಎಡಕ್ಕೆ ಪಶ್ಚಿಮ ದಿಕ್ಕಿನಲ್ಲಿ ಸಾಗಿದರೆ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರ. ಬಲಕ್ಕೆ ಪೂರ್ವ ದಿಕ್ಕಿನಲ್ಲಿ ಪ್ರಯಾಣಿಸಿದರೆ ಲಡಾಖ್ ರಾಜಧಾನಿ ಲೇಹ್. ಕಾರ್ಗಿಲ್‌ನಿಂದ ಲೇಹ್ ಸುಮಾರು 210 ಕಿ.ಮೀ. ದೂರ. ಮುಂದೆ ಲೇಹ್ ವರೆಗೂ ಪೆಟ್ರೋಲ್ ಬಂಕ್ ದುರ್ಲಭ ಆದ ಕಾರಣ ಅರೆಹೊಟ್ಟೆಯಲ್ಲಿದ್ದ ವಾಹನಗಳಿಗೆ ಮತ್ತೆ ಇಂಧನ ಭರ್ತಿ ಮಾಡಿಕೊಂಡೆವು. ಮಧ್ಯಾಹ್ನ 12 ಆಗಿತ್ತು. ನಮ್ಮ ಗಂಟಲುಗಳೂ ಪಸೆ ಬೇಡುತ್ತಿದ್ದವು. ಆಗ ಮಾನಸ ಒಂದೊಳ್ಳೆ ಸಲಹೆ ನೀಡಿದಳು. ಇಲ್ಲಿ ನಮ್‌ಕೀನ್‌ ಚಾಯ್‌ ಅಂತೊಂದು ರೀತಿಯ ಚಹಾ ಸಿಗುತ್ತಂತೆ, ಕುಡಿದು ನೋಡೋಣ ಅಂದಳು. ಪಟ್ಟಣದ ಹೊರವಲಯದ ಹೋಟೆಲೊಂದರಲ್ಲಿ ಕೇಳಿದಾಗ ಅದು ಲಭ್ಯವಿತ್ತು. 

ಲಡಾಖ್ ಅಮೃತ ಯಾತ್ರೆ – 2022 ಭಾಗ-5: ಜನ್ಸ್ಕಾರ್ ರೈಡ್ - ಏಕಾಗ್ರತೆ, ಕೌಶಲ್ಯ, ಮನೋಬಲ, ಸಾಮರ್ಥ್ಯ ಪರೀಕ್ಷೆ!

ಕಾಶ್ಮೀರಿ ಚಾಯ್, ನೂನ್ ಚಾಯ್, ಶೀರ್ ಚಾಯ್ ಅಥವಾ ಪಿಂಕ್ ಟೀ ಎಂದೆಲ್ಲ ಕರೆಸಿಕೊಳ್ಳುವ ಆ ಚಹಾ ಕಾಶ್ಮೀರ ಪ್ರದೇಶದಲ್ಲಿ ಬಹಳ ಪ್ರಸಿದ್ಧ. ಹಾಗೆ ಅದಕ್ಕೆ ಬೇಡಿಕೆ ಸಲ್ಲಿಸಿ ಎಲ್ಲರೂ ಮೊಬೈಲಿನಲ್ಲಿ ಮುಳುಗಿದರು. ಕಾರ್ಗಿಲ್‌ನಲ್ಲಿ ಬಹುತೇಕ ಎಲ್ಲ ಮೊಬೈಲ್ ನೆಟ್‌ವರ್ಕೂ ಸಿಗುತ್ತದೆ. ಐದಾರು ದಿನಗಳಿಂದ ನೆಟ್ಟಗೆ ನೆಟ್‌ವರ್ಕ್ ಸಿಗದೆ ಚಡಪಡಿಸಿದ್ದವರೆಲ್ಲ ತುರ್ತು ಸಂದೇಶಗಳಿಗೆ ಉತ್ತರಿಸುವುದು, ಕರೆಗಳನ್ನು ಮಾಡುವುದು ಇತ್ಯಾದಿಗಳಲ್ಲಿ ತೊಡಗಿಕೊಂಡಿದ್ದಂತೆ ನೂನ್ ಚಾಯ್ ಆಗಮನವಾಯಿತು. ನಮ್ಮಲ್ಲಿ ಸಿಗುವ ಚಹಾದಂತೆ ಕಂದು ಬಣ್ಣದಲ್ಲಿರದೆ ಗುಲಾಬಿ ಬಣ್ಣದಲ್ಲಿತ್ತದು. ಹಬೆಯಾಡುತ್ತಿದ್ದ ಚಹಾವನ್ನು (Tea) ಬಿಸಿಬಿಸಿಯಾಗಿಯೇ ಹೀರೋಣವೆಂದು ತುಟಿಗೊತ್ತಿಕೊಂಡರೆ ಮುಖ ಹುಳ್ಳಗಾಯಿತು. ಉಪ್ಪೋ ಉಪ್ಪು (Salt). ಮಾನಸ ನಮ್‌ಕೀನ್‌ ಚಾಯ್ ಎಂದಿದ್ದಳಾದರೂ ತೀರಾ ಸಕ್ಕರೆಯೇ ಹಾಕದ ಉಪ್ಪು ರುಚಿಯ ಪೇಯ ಅಂದುಕೊಂಡಿರಲಿಲ್ಲ. ಗ್ರೀನ್ ಟೀ ಎಲೆ, ಹಾಲು, ಅಡುಗೆ ಸೋಡಾ ಅದರ ಮುಖ್ಯ ಕಚ್ಚಾವಸ್ತುಗಳಂತೆ. ನೂನ್ ಅಂದರೆ ಕಾಶ್ಮೀರಿ ಭಾಷೆಯಲ್ಲಿ ಉಪ್ಪಂತೆ. ವಿಶಿಷ್ಟವಾದ ಜಾಡಿಯಲ್ಲಿ ಬೇಯಿಸಿ ಆ ಚಹಾ ತಯಾರಿಸುತ್ತಾರಂತೆ. ಕೆಲವೆಡೆ ಅದರ ಮೇಲೆ ಒಂಚೂರು ಬೆಣ್ಣೆ ಹಾಕುವುದೂ ಉಂಟಂತೆ. ಹೀಗೆ, ಸಾದಾ ಚಹಾದ ಮನಸ್ಥಿತಿಯಿಂದ ಹೊರಬಂದು ನಮ್‌ಕೀನ್‌ ಚಹಾವನ್ನು ಸವಿದೆವು.

ರಾಷ್ಟ್ರೀಯ ಹೆದ್ದಾರಿ-1 ಉದ್ದಕ್ಕೂ ಪಾಸೋಪಾಸು !
ಕಾರ್ಗಿಲ್‌ನಿಂದ ಲೇಹ್‌ಗೆ ಸಾಗುವುದು ರಾಷ್ಟ್ರೀಯ ಹೆದ್ದಾರಿ 1ರಲ್ಲಿ. ಹೆಸರಿಗೆ ತಕ್ಕಂತೆ ರಾಷ್ಟ್ರೀಯ ಹೆದ್ದಾರಿಯೇ. ಉದ್ದಕ್ಕೂ ಟಾರು ರಸ್ತೆ. ಬಹುತೇಕ ಲಡಾಖ್‌ನಾದ್ಯಂತ ಇರುವಂತೆ ಉದ್ದಕ್ಕೂ ಒಂದು ಬದಿಯಲ್ಲಿ ಬೆಟ್ಟ, ಮತ್ತೊಂದು ಬದಿಯಲ್ಲಿ ಕಣಿವೆಗಳ ಹಾದಿ. ಒಂದೊಂದೇ ಬೆಟ್ಟಗಳನ್ನು ಏರಿಳಿಯುತ್ತಾ ಸಾಗಬೇಕು. ಲೇಹ್ ತಲುಪುವಷ್ಟರಲ್ಲಿ ಇಂಥ ಅನೇಕ ಏರಿಳಿಕೆ ಆಗುತ್ತವಾದರೂ, ಪ್ರಮುಖವಾಗಿ ಎರಡು ಪರ್ವತ ಶ್ರೇಣಿಗಳು ಎದುರಾಗುತ್ತವೆ. ಮೊದಲಿಗೆ ಸಿಗುವುದು ಸಮುದ್ರ ಮಟ್ಟದಿಂದ ಸುಮಾರು 12200 ಅಡಿ ಎತ್ತರದ ನಮಿಕ್ ಲಾ. ಅದು ಕಾರ್ಗಿಲ್‌ನಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ. ಮತ್ತೊಂದು 35 ಕಿ.ಮೀ. ಸಾಗಿದರೆ 13500 ಅಡಿ ಎತ್ತರದ ಫೋಟು ಲಾ ಸಿಗುತ್ತದೆ. ಶ್ರೀನಗರ-ಲೇಹ್ ಹೆದ್ದಾರಿಯಲ್ಲೇ ಅತ್ಯಂತ ಎತ್ತರದ ಪ್ರದೇಶ. ರಸ್ತೆಯುದ್ದಕ್ಕೂ ಬಂಜರು ಬೆಟ್ಟಗಳ ಶ್ರೇಣಿಯೇ ಇರುವುದರಿಂದ ಅಡಿಗಡಿಗೂ ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದ ಜಾಗ.

ಕಣ್ಣಿಗೆ ಕಾಣದ ಹಳ್ಳಿಯ ಬಗ್ಗೆ ಕೇಳಿದ್ದೀರಾ?
ನಮಿಕ್ ಲಾದಿಂದ ಫೋಟು ಲಾ ಕಡೆಗೆ ಪ್ರಯಾಣಿಸುವಾಗ ಇದ್ದಕ್ಕಿದ್ದಂತೆ ನಿಮಗೆ ಒಂದು ಫಲಕ ಕಾಣುತ್ತದೆ. ಜಬಾಯುಲ್ ಹೆನಾಸ್ಕು. ಅರ್ಥಾತ್ The Invisible Village. ಪ್ರಾಚೀನ ರೇಷ್ಮೆ ಮಾರ್ಗವಿದ್ದಾಗ ಪ್ರಮುಖ ನಿಲುಗಡೆ ಕೇಂದ್ರವಂತೆ ಅದು. ಈಗ ಹೆದ್ದಾರಿಯಿಂದ ಸಾಕಷ್ಟು ದೂರದಲ್ಲಿದೆ. ಬೆಟ್ಟವೊಂದರ ಮರೆಯಲ್ಲಿರುವ ಕಾರಣ ಇದಕ್ಕೆ ಕಾಣದ ಹಳ್ಳಿ (Village) ಎಂದು ಹೆಸರು ಬಂತು ಎನ್ನುತ್ತಾರೆ ಸ್ಥಳೀಯರು. ಹಿಂದೊಮ್ಮೆ ಪಾಕಿಸ್ತಾನ ದಾಳಿ ನಡೆಸಿದಾಗ ಬೆಟ್ಟದ ಹಿಂದಿದ್ದ ಈ ಹಳ್ಳಿ ಕಾಣದೆ ಮುಂದೆ ಬಂದಿದ್ದರೆಂದು ಪ್ರತೀತಿ. ಈಗ ಬಹುತೇಕ ಪಾಳು ಬಿದ್ದಿದೆ. ಸುಮಾರು 250 ಮಂದಿ ಇಲ್ಲಿ ವಾಸವಿದ್ದಾರಂತೆ. ಮಣ್ಣಿನಿಂದ ಕಟ್ಟಿದ ಮನೆಗಳುಳ್ಳ, ಒಂದೂ ಆಧುನಿಕ ಮನೆ ಇರದ ಹಳ್ಳಿಯಿದು. ದೂರದಿಂದಲೇ ಅದನ್ನು ನೋಡಿ ಮುಂದೆ ಸಾಗಿದೆವು.

ಲಡಾಖ್ ಅಮೃತ ಯಾತ್ರೆ – 2022 ಭಾಗ-6. ಪುರ್ನೆಯಿಂದ 52 ಕಿ.ಮೀ. ಸಾಗಲು 4 ತಾಸು !

ದೂರದರ್ಶನಕ್ಕೆ ನೋಡಲು ಹೋದರೆ ನಾಯಿ ಅಟ್ಟಿಸಿಕೊಂಡು ಬಂತು
ಫೋಟು ಲಾ ಪಾಸ್ ತಲುಪಿ ಅಲ್ಲೊಂದಷ್ಟು ಫೋಟೋಗ್ರಫಿ ಎಲ್ಲ ಆಯಿತು. ಆ ಪಾಸ್ ಪಕ್ಕದಲ್ಲೇ ಒಂದೆರಡು ಪುಟ್ಟ ಡೇರೆಗಳಿದ್ದವು. ಸೇನಾ ವಾಹನವೂ ಇತ್ತು. ಒಂದು ಡೇರೆಯ ಬಳಿ ಆ್ಯಂಟೆನಾ ಹಾಗೂ ಟವರ್ ಇದ್ದವು. ಆ ಡೇರೆಯ ಮುಂದಿದ್ದ ಫಲಕ ನನ್ನನ್ನು ಆಕರ್ಷಿಸಿತು. ಪ್ರಸಾರ ಭಾರತಿ-ದೂರದರ್ಶನ ಎಂದು ಬರೆದಿತ್ತು. ಸ್ವಜಾತಿ ಪ್ರೇಮ ನೋಡಿ. ಅರೆ, ಇಂಥ ದುರ್ಗಮ ಸ್ಥಳದಲ್ಲೂ ದೂರದರ್ಶನ ಇದೆಯಲ್ಲ, ವಿಚಾರಿಸೋಣ ಎಂದು ನಾಲ್ಕು ಹೆಜ್ಜೆ ಅತ್ತ ತೆರಳಿದ್ದೆ ಅಷ್ಟೆ. ಇದ್ದಕ್ಕಿದ್ದಂತೆ ಎರಡು ನಾಯಿಗಳು ಗಹಗಹಿಸುತ್ತ ಬಂದವು. ಇನ್ನೇನು ಕಾಲಿಗೆ ಬಾಯಿ ಹಾಕಿ ಬಿಟ್ಟವು ಅಂದುಕೊಂಡು ಛೂ ಛೂ ಎನ್ನುತ್ತ ಹಿಂದಡಿಯಿಟ್ಟೆ. ಅದೆಲ್ಲಿತ್ತೋ, ಹಿಂದಿನಿಂದ ಮತ್ತೊಂದು ನಾಯಿ (Dog) ಗುರ್ರೆನ್ನುತ್ತ ಬಂತು. ಸುತ್ತ ಮೂರು ನಾಯಿಗಳು ಗರ್ಜಿಸುತ್ತಿವೆ. ಬಾಗಿ ಕಾಲಿನ ಚಪ್ಪಲಿ ಕೈಗೆತ್ತಿಕೊಂಡು ಕೈ ಬೀಸುತ್ತ, ಕಲ್ಲೆಸೆಯುವಂತೆ ನಟಿಸುತ್ತ ಮತ್ತೆ ರಸ್ತೆಗೆ ಬಂದೆ. ಮೊದಲೆರಡು ನಾಯಿಗಳು ತಮಗೇನೂ ಗೊತ್ತಿಲ್ಲವೆಂಬಂತೆ ಸ್ವಸ್ಥಾನ ಸೇರಿದವು. ಕಡೆಯಲ್ಲಿ ಬಂದ ನಾಯಂತೂ ನನ್ನನ್ನು ಅಟ್ಟಿಸಿಯೇ ಸಿದ್ಧ ಎಂಬಂತೆ ಕೆಕ್ಕರಿಸಿ ನೋಡುತ್ತಿತ್ತು. ಆಮೇಲೆ ಅರ್ಥವಾಯಿತು, ಅದು ಅಲ್ಲಿನ ಸೇನೆಯವರು ಸಾಕಿದ ನಾಯಿಗಳು. ಆ ಪ್ರದೇಶಕ್ಕೆ ಯಾರು ಬಂದರೂ ಅಟ್ಟಿಸುತ್ತವೆ. ಅವುಗಳ ವ್ಯಾಪ್ತಿಯಿಂದ ಹೊರಗಿದ್ದರೆ ಏನೂ ಮಾಡುವುದಿಲ್ಲ ಎಂದು. ಸದ್ಯ ಕಚ್ಚಲಿಲ್ಲ ಎಂದುಕೊಳ್ಳುತ್ತ ತೆಪ್ಪಗೆ ಜೀಪ್ ಏರಿದೆ. ಉಳಿದ ಐದೂ ಜನ ಮುಸಿಮುಸಿ ನಗುತ್ತಿದ್ದರು.

ಲಮಾಯೂರಿನಲ್ಲೊಂದು ಚಂದಿರನ ಅಂಗಳ !
ಅಲ್ಲಿಂದ 15 ಕಿ.ಮೀ. ಇಳಿದರೆ ಲಮಾಯೂರು ಎಂಬ ತುಸು ದೊಡ್ಡ ಊರು ಸಿಗುತ್ತದೆ. ನಾವು ಪದುಮ್‌ನಿಂದ ಲಿಂಗ್‌ ಶೆಡ್‌ ಮೂಲಕ ಬಂದಿದ್ದರೆ ಇಲ್ಲಿಗೇ ಬಂದು ಸೇರಬೇಕಿತ್ತು. ಇಲ್ಲಿಂದ ಕೆಳಗೆ ವೀಕ್ಷಿಸಿದರೆ ಬೃಹತ್ ಮರಳು ಮಿಶ್ರಿತ ಏರು ತಗ್ಗಿನ ಪ್ರದೇಶವೊಂದು ಕಾಣುತ್ತದೆ. ಇದು Moonland ಎಂದೇ ಪ್ರಸಿದ್ಧ. ಚಂದಿರನ ಅಂಗಳದಂತೆಯೇ ಕಾಣುವುದರಿಂದ ಈ ಹೆಸರು ಬಂತೆನ್ನುತ್ತಾರೆ. ಅದನ್ನೂ ಕಣ್ತುಂಬಿಕೊಂಡು, ಕ್ಯಾಮರಾದಲ್ಲಿ ತುಂಬಿಸಿಕೊಂಡು ಮುಂದೆ ಸಾಗಿದೆವು.

ಲಡಾಖ್ ಅಮೃತ ಯಾತ್ರೆ–2022: ಭಾಗ-7, ಅದೊಂದು ಹಾದಿಯ ಸಾಹಸ ಯಾನ ಕೈಗೂಡಲೇ ಇಲ್ಲ!

ಮ್ಯಾಗ್ನೆಟಿಕ್ ಹಿಲ್‌ ನಲ್ಲಿ ಮ್ಯಾಗ್ನೆಟ್ ಇದೆಯಾ?
ಲೇಹ್ ಇನ್ನೂ 115 ಕಿ.ಮೀ. ದೂರವಿತ್ತು. ಸಂಜೆ ಆಗತೊಡಗಿತ್ತು. ಸುಮಾರು 90 ಕಿ.ಮೀ. ಸಾಗುತ್ತಿದ್ದಂತೆ ಒಂದು ಫಲಕ ಕಾಣಿಸಿತು. ಮ್ಯಾಗ್ನೆಟಿಕ್ ಹಿಲ್ ಎಂದು ಬರೆದಿತ್ತು. ಅಲ್ಲಿನ ವಿಶೇಷ ಎಂದರೆ ಇಳಿಜಾರಿನಲ್ಲಿ ನಿಲ್ಲಿಸಿದ ವಾಹನ ಮುಂದಕ್ಕೆ ಜಾರುವ ಬದಲು ಹಿಂದಕ್ಕೆ ಚಲಿಸುತ್ತದೆ. ಜೀಪನ್ನು ನ್ಯೂಟ್ರಲ್‌ಗೆ ಹಾಕಿ ನಾಲ್ಕೈದು ಬಾರಿ ಪರಿಶೀಲಿಸಿದೆವು. ಮುಂದೆ ಇಳಿಜಾರಿನಂತೆ ಕಾಣುವ ಕಡೆ ಹೋಗುವ ಬದಲು ಹಿಮ್ಮುಖವಾಗಿ ಚಲಿಸತೊಡಗಿತು. ಬೈಕುಗಳಲ್ಲಿ ಆ ಪರೀಕ್ಷೆ ಮಾಡಲು ಸಾಧ್ಯವಿರಲಿಲ್ಲ. ಮುಂದೆ ನಿಜವಾಗಿ ಇಳಿಜಾರು ಇತ್ತೋ ಅಥವಾ ನಮಗೆ ಹಾಗೆ ಅನ್ನಿಸುತ್ತಿತ್ತೋ ಎಂದೆಲ್ಲ ಅಂದುಕೊಂಡು ಲೇಹ್ ಕಡೆ ದೌಡಾಯಿಸಿದೆವು. ಆಗಲೇ ಸಂಜೆ 7 ಆಗಿತ್ತು. ಮೋಡವೂ ಇತ್ತು. ಮಳೆ ಹನಿಯತೊಡಗಿತ್ತು. ಕತ್ತಲೂ ಕವಿಯುತ್ತಿತ್ತು.

ಲೇಹ್ ಗೆ ಬಂದ್ಯಾ, ಬಾರಲೇ ಅಂತಾನೆ ಆಂಧ್ರದ ಹುಡುಗ
ಲೇಹ್ ನಗರ ತಲುಪುತ್ತಿದ್ದಂತೆ ಕತ್ತಲಾವರಿಸಿತ್ತು. ನಗರ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಆಯಾಸವೂ ಆಗಿತ್ತು. ಹಾಗಾಗಿ, ಮೊದಲೇ ನಿರ್ಧರಿಸಿದ್ದಂತೆ ಜನಜಂಗುಳಿಯಿಂದ ತುಸು ದೂರವೇ ಇದ್ದ ಅವಲೋಕ್ ಹೋಮ್‌ಸ್ಟೇಗೆ ತೆರಳಿದೆವು. ಅದನ್ನು ನಡೆಸುತ್ತಿದ್ದುದು ವಂಶಿಕೃಷ್ಣ. 25-26 ವರ್ಷದ ತರುಣ. ಜತೆಗಿಬ್ಬರು ಸೇರಿ ಹೋಮ್‌ಸ್ಟೇ ನಿರ್ವಹಿಸುತ್ತಾರೆ. ಕೆಲಸದ ಆಳುಗಳಿಲ್ಲ. ಇವರೇ ಎಲ್ಲ. ಆಂಧ್ರಪ್ರದೇಶದ ವಿಶ್ವವಿಖ್ಯಾತ ತಿರುಪತಿ ಅವನ ಮೂಲ ಊರು. ಬೆಂಗಳೂರಿನ ಯಾವುದೋ ಹೋಟೆಲ್‌ನಲ್ಲಿ ಶೆಫ್‌ ಆಗಿದ್ದನಂತೆ. ದಿಲೀಪ-ಮಾನಸರಿಗೆ ಹಳೆಯ ಪರಿಚಯ. ಲೇಹ್‌ನಲ್ಲಿ ಆಂಧ್ರ ಫುಡ್‌ ಬೇಕಾದರೆ ನನ್ನಲ್ಲಿಗೆ ಬನ್ನಿ ಅಂತಾನೆ ಅವನು. ಉತ್ತರ ಭಾರತೀಯ ಅಡುಗೆ ಸೇವಿಸಿ ನಾಲಗೆ ಜಡ್ಡುಗಟ್ಟಿದ್ದರೆ, ತುರ್ತಾಗಿ ದಕ್ಷಿಣ ಭಾರತೀಯ ಆಹಾರ ಬೇಕಿದ್ದರೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸ್ವಲ್ಪ ಚಿಲ್ ಮಾಡಬೇಕಾಗಿದ್ದರೆ ಅಲ್ಲಿಗೆ ಹೋಗಿ ತಂಗಬಹುದು. ಮಕ್ಕಳೊಂದಿಗೆ ಕುಟುಂಬಸಮೇತರಾಗಿ ಉಳಿಯುವಂತಹ ಜಾಗವಲ್ಲ. ಅಂತಹ ಪರಿಸರ ಸೃಷ್ಟಿಸುವುದು ಅವನ ಉದ್ದೇಶವೂ ಆಗಿದ್ದಂತಿಲ್ಲ. ಮುಂದೆ ನುಬ್ರಾ ಕಣಿವೆಯಲ್ಲಿ ಇದೇ ರೀತಿಯ ತಂಗುದಾಣವೊಂದನ್ನು ತೆರೆಯುವ ಉದ್ದೇಶವಿದೆ ಬ್ರೋ ಅಂತಾನೆ ವಂಶಿ.

ಮುಂದಿನ ಕಂತಿನಲ್ಲಿ: ಮರುಭೂಮಿ, ಹುಲ್ಲುಗಾವಲು, ಬಟಾಬಯಲು ಎಲ್ಲವೂ ಇರುವ ಬೇರೆಯೇ ಗ್ರಹ! 450 ಕಿಲೋಮೀಟರು ಪೆಟ್ರೋಲ್ ಬಂಕೇ ಇಲ್ಲ! ಅಲ್ಲಿ ರಸ್ತೆಯೇ ಕೊಚ್ಚಿ ಹೋಗಿತ್ತು, ಮುಂದೆ ಹೋಗಿದ್ದು ಹೇಗೆ? ಆ ಊರಿಗೂ, ಚೀನಾ ಗಡಿಗೂ ಬರೀ 40 ಕಿಲೋಮೀಟರು! ಎಲ್ಲೆಲ್ಲೂ ಸೇನೆ, ಸೈನಿಕರು, ಸೇನಾ ವಾಹನ, ಸೇನಾ ಶಿಬಿರ

click me!