ಲಡಾಖ್ ಅಮೃತಯಾತ್ರೆ-2022: ಭಾಗ-12, ನೋಡಿದಷ್ಟೂ ಮುಗಿಯೋದಿಲ್ಲ ಲೇಹ್ !

By Suvarna News  |  First Published Sep 22, 2022, 3:56 PM IST

ಬರೋಬ್ಬರಿ 9 ದಿನಗಳ ನಾನ್ ಸ್ಟಾಪ್ ಓಟಕ್ಕೆ ವಿರಾಮ. ಲಡಾಖ್ ರಾಜಧಾನಿ ಲೇಹ್ ಸುತ್ತಾಟದ ಸಂಭ್ರಮ. ಸಮೀಪದಲ್ಲೇ ಇರುವ ಸ್ವರ್ಗಸದೃಶ ಹಳ್ಳಿಯೊಂದಕ್ಕೆ ಪ್ರಯಾಣ. ಅಲ್ಲಿ ಸ್ಥಿತಪ್ರಜ್ಞ ಧ್ಯಾನಸ್ಥನಾಗಿ ಕುಳಿತಿದ್ದ ಬುದ್ಧನ ದರ್ಶನ. ಬಳಿಕ ದೇಶದ ಸೈನಿಕರ ಸಾಹಸಕ್ಕೆ, ಸ್ಮಾರಕಕ್ಕೆ ನಮನ. ಲೇಹ್ ಮಾರುಕಟ್ಟೆಯಲ್ಲಿ ತುಪ್ಪಕ್ಕಾಗಿ ಹುಡುಕಾಟ, ಉಡುಗೊರೆಗೆ ತಡಕಾಟ. ಇದಿಷ್ಟು ಯಾತ್ರೆಯ 10ನೇ ದಿನದ ಹೈಲೈಟ್ಸ್. ವಿವರಕ್ಕೆ ಮುಂದೆ ಓದಿ...


-ರವಿಶಂಕರ್ ಭಟ್‌

ಪ್ರಯಾಣದ ಯೋಜನೆಯಲ್ಲಿ ಮತ್ತೊಂದು ಸಣ್ಣ ಬದಲಾವಣೆ
13 ದಿನಗಳ ನಮ್ಮ ಯಾತ್ರೆಯ ಸಾಹಸಯಾನ ಮುಕ್ತಾಯದ ಹಂತಕ್ಕೆ ತಲುಪಿತ್ತು. ಇನ್ನು ಲೇಹ್ ನಿಂದ ಚಂಡೀಗಢಕ್ಕೆ ಮರಳಬೇಕಿತ್ತು. ಅದು ಸುಮಾರು 750 ಕಿ.ಮೀ. ಹಾದಿ. ಕನಿಷ್ಠ 2, ಗರಿಷ್ಠ 3 ದಿನಗಳ ಪ್ರಯಾಣ. ನಮಗಿನ್ನೂ 4 ದಿನಗಳ ಕಾಲಾವಕಾಶ ಇತ್ತು. ಲೇಹ್ ನಿಂದ ಹೊರಟು ಮನಾಲಿ ತಲುಪಿ ಅಲ್ಲಿ ಒಂದು ದಿನ ಕಳೆಯುವ ಯೋಜನೆ ಒಂದಾದರೆ, ಲೇಹ್ ನಲ್ಲೇ ಒಂದು ದಿನ ಸುತ್ತಾಡಿ ಮರುದಿನ ಹೊರಡುವುದು ಇನ್ನೊಂದು ಚಿಂತನೆ ಆಗಿತ್ತು. ಮತ್ಯಾವಾಗ ಲೇಹ್ ಗೆ ಬರುತ್ತೇವೋ ಗೊತ್ತಿಲ್ಲ. ಮಾತ್ರವಲ್ಲ, ಮತ್ತೆ ಬರುತ್ತೇವೋ ಇಲ್ಲವೋ ಗೊತ್ತಿಲ್ಲ. ಇಷ್ಟು ದೂರ ಬಂದು ಲೇಹ್ ಪಟ್ಟಣವನ್ನು ಮುಟ್ಟಿ ಹೋಗುವುದಕ್ಕಿಂತ ಒಂಚೂರು ಸುತ್ತಾಡಿ ತಿಳಿದು ಹೋಗುವುದು ಉತ್ತಮ ಎಂಬ ಅಭಿಪ್ರಾಯ ಅನೇಕರಿಂದ ಬಂತು. ಹಾಗಾಗಿ, ಆಗಸ್ಟ್ 20ಕ್ಕೆ ಮರುಪ್ರಯಾಣ ಆರಂಭಿಸಬೇಕಿದ್ದ ನಾವು, ಅಂದು ಅಲ್ಲೇ ಸುತ್ತಾಡುವುದು, ಮರುದಿನ ಮರುಪ್ರಯಾಣ ಆರಂಭಿಸುವುದು ಎಂಬ ನಿರ್ಧಾರಕ್ಕೆ ಬಂದೆವು. ನಿಮಗೆ ಒಂದೊಳ್ಳೆ ಜಾಗ ಹೇಳುತ್ತೇನೆ. ಬಹಳ ಪ್ರಶಾಂತವಾದ ವಾತಾವರಣ. ದೇಹ, ಮನಸ್ಸು ಎರಡಕ್ಕೂ ತಂಪಾಗಿರುತ್ತದೆ. ಅಲ್ಲೊಂದು ಬುದ್ಧವಿಹಾರವೂ ಇದೆ, ಬೃಹತ್ ಬುದ್ಧನ ವಿಗ್ರಹವೂ ಇದೆ ಎಂದು ವಂಶಿ ಹೇಳಿದ್ದ. 

Latest Videos

undefined

ದಾರಿಯಲ್ಲೇ ಕಾಣ ಸಿಕ್ಕಿತು ಸಿಂಧೂ-ಜನ್ಸ್ ಖಾರ್ ನದಿಗಳ ಸಂಗಮ
ವಂಶಿ ಹೇಳಿದ್ದನ್ನು ಗೂಗಲಮ್ಮನ ಮುಂದಿಟ್ಟು ಆಶೀರ್ವಾದ ಬೇಡಿದ್ದೆವು. ಆಕೆ ತಥಾಸ್ತು ಎಂದಿದ್ದಳು. ಬೆಳಗ್ಗೆ ತಿಂಡಿ ತಿಂದು ಹೊರಟದ್ದು ಲೇಹ್ ನಿಂದ 50 ಕಿ.ಮೀ. ದೂರದಲ್ಲಿರುವ ನೇ (Ney) ಎಂಬ ಗ್ರಾಮದತ್ತ. ಕಾರ್ಗಿಲ್ ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-1 ರಲ್ಲಿ 30 ಕಿ.ಮೀ. ಸಾಗಿದರೆ ಸಂಗಮ್ ವ್ಯೂ ಪಾಯಿಂಟ್ ಎಂಬ ಜಾಗಕ್ಕೆ ತಲುಪುತ್ತೇವೆ. ಅಲ್ಲಿ ಕೆಳಕ್ಕೆ ದೃಷ್ಟಿ ಹಾಯಿಸಿದರೆ ನಮ್ಮ ಯಾತ್ರೆಯುದ್ದಕ್ಕೂ ಅಲ್ಲಲ್ಲಿ ಸಾಂಗತ್ಯ ನೀಡಿದ ಜನ್ಸ್ ಖಾರ್ ಹಾಗೂ ಸಿಂಧೂ ನದಿಗಳ ಸಂಗಮ ಕಾಣ ಸಿಗುತ್ತದೆ. ಅಲ್ಲಿಂದ ಸಿಂಧೂ ನದಿಯಾಗಿಯೇ ಹರಿಯುವ ಅದು ಉತ್ತರಾಭಿಮುಖವಾಗಿ ಸಾಗಿ ಪಾಕ್ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಹರಿದು ಪಶ್ಚಿಮಕ್ಕೆ ತಿರುಗಿ ಉತ್ತರ ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರದ ಕಡೆ ಮುಖ ಮಾಡುತ್ತದೆ. ಉತ್ತರ ಭಾರತದಲ್ಲಿ ಗಂಗೆ ಇದ್ದಂತೆ, ಪಾಕಿಸ್ತಾನದ ಜೀವನದಿಯಾಗಿ ಹರಿದು ಕರಾಚಿ ಸಮೀಪ ಸಮುದ್ರದಲ್ಲಿ ಲೀನವಾಗುತ್ತದೆ.

ಲಡಾಖ್ ಅಮೃತ ಯಾತ್ರೆ–2022: ಭಾಗ-7, ಅದೊಂದು ಹಾದಿಯ ಸಾಹಸ ಯಾನ ಕೈಗೂಡಲೇ ಇಲ್ಲ!

ಬರೋಬ್ಬರಿ 3600 ಕಿ.ಮೀ. ಉದ್ದದ ನದಿ (River) ಇದು. ಭಾರತದಲ್ಲಿ ಹರಿಯುವ ಅತಿ ಉದ್ದದ ಎಂಬ ಖ್ಯಾತಿಯ, ವಿಶ್ವದಲ್ಲಿ 20 ಅತಿ ಉದ್ದದ ನದಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯ ಮಹಾ ನದಿ ಇದು. ಲೇಹ್ ಸಮೀಪದಲ್ಲಿ ಜನ್ಸ್ ಖಾರ್ ನದಿಯನ್ನು ಹೊಟ್ಟೆಗಿಳಿಸಿಕೊಳ್ಳುವಂತೆ ದಾರಿಯುದ್ದಕ್ಕೂ ಅನೇಕ ನದಿಗಳನ್ನು ತನ್ನ ಒಡಲಿಗೆ ಸೇರಿಸಿಕೊಂಡು ಸಾಗುವ ಮಹಾ ನದಿಯ ಸಾಮೀಪ್ಯ ಭಾಗ್ಯ ನಮ್ಮದಾಗಿತ್ತು. ಸಂಗಮದಲ್ಲಿ ಸಮಯ ಹಾಗೂ ಆಸಕ್ತಿ ಇದ್ದವರಿಗೆಂದೇ ರಿವರ್ ರಾಫ್ಟಿಂಗ್ ಮತ್ತಿತರೆ ಸಾಹಸ ಕ್ರೀಡೆಗಳಿವೆ. ಅದಕ್ಕಾಗಿ ಕಣಿವೆ ಇಳಿದು ನದಿ ತಟಕ್ಕೆ ತಲುಪಬೇಕಿತ್ತು. ನಮಗೆ ಅಷ್ಟು ಸಮಯ ಇರಲಿಲ್ಲವಾದ ಕಾರಣ ನಾವು ನೇ ಗ್ರಾಮದತ್ತ (Village) ಪ್ರಯಾಣ ಬೆಳೆಸಿದೆವು.

ನೇ ಗೊಂಪಾದಲ್ಲಿ ತಣ್ಣನೆ ಕುಳಿತ ಬುದ್ಧ ದರ್ಶನದ ಮುದ
ನೇ ಗ್ರಾಮವನ್ನು ತಲುಪಲು ಜನ್ಸ್ ಖಾರ್-ಸಿಂಧೂ ನದಿ ಸಂಗಮದಿಂದ ಇನ್ನೂ 10 ಕಿ.ಮೀ. ಮುಂದಕ್ಕೆ ಸಾಗಿ ಬಲಕ್ಕೆ ತಿರುಗಿ ಮತ್ತೆ 10 ಕಿ.ಮೀ. ಪ್ರಯಾಣಿಸಬೇಕು. ಆದರೆ, ನಾವು ಗೂಗಲಮ್ಮ ಮಾಡಿದ ಎಡವಟ್ಟಿನಿಂದಾಗಿ ಇನ್ನೂ 5 ಕಿ.ಮೀ. ಮುಂದೆ ಹೋಗಿ ಬಲಕ್ಕೆ ತಿರುಗಿದೆವು. ಟಾರು ರಸ್ತೆಯಿಂದ ಕಚ್ಚಾರಸ್ತೆ ಆರಂಭವಾಯಿತು. ಜನವಸತಿ ಕ್ಷೀಣಿಸುತ್ತಾ ಸಾಗಿತು. ಅದ್ಯಾವುದೋ ಬೆಟ್ಟದ ಮಧ್ಯದಲ್ಲಿ 7-8 ಕಿ.ಮೀ. ಸಾಗಿದರೆ ಇದ್ದಕ್ಕಿದ್ದಂತೆ ಕಣಿವೆಯೊಂದು ಪ್ರತ್ಯಕ್ಷವಾಯಿತು. ಹಾಗೇ ಮುಂದೆ ಸಾಗಿದರೆ ಹಳೆಯ ಬೌದ್ಧ ಮಂದಿರವೊಂದು ಕಂಡು ಬಂತು. ಅಲ್ಲಿ ಟಾರು ರಸ್ತೆ ನಿರ್ಮಾಣವಾಗಿತ್ತು. ಬಲಕ್ಕೂ ರಸ್ತೆ (Road)ಯೊಂದು ಹೋಗುತ್ತಿತ್ತು. ನಾವು ಬಲಕ್ಕೆ ತಿರುಗುವ ಬದಲು ಮುಂದುವರಿದೆವು. ಒಂದೆರಡು ಕಿ.ಮೀ. ಸಾಗಿದರೆ ಬುದ್ಧನ ವಿಗ್ರಹ (Statue) ಕಾಣಿಸಿತು. ನಾವು ಬುದ್ಧವಿಹಾರ ಎಲ್ಲಿದೆ ಎಂದು ಗೂಗಲಮ್ಮನನ್ನು ಕೇಳಿದೆವು. ಇನ್ನೂ ನಾಲ್ಕೈದು ಕಿ.ಮೀ. ಹೋಗಬೇಕು ಎಂದಳಾಕೆ.

ಲಡಾಖ್ ಅಮೃತಯಾತ್ರೆ-2022: ಭಾಗ-8, ಲೇಹ್‌ ಗೆ ಹೋಗೋಣ, ಬಾರೋ ಲೇ...!

ಹಾಗೇ ಮುಂದುವರಿಯುತ್ತಿದ್ದರೆ ರಸ್ತೆ ಆ ಗ್ರಾಮಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದಂತೆ ಅನಿಸಿತು. ಒಂದಷ್ಟು ಇಳಿಮುಖವಾಗಿ ಸಾಗಿ, ಮತ್ತೊಂದಷ್ಟು ತಿರುವುಗಳಲ್ಲಿ ತಿರುಗಿ, ಮೇಲಕ್ಕೆ ಹೋಗುತ್ತಿದ್ದ ರಸ್ತೆಯಲ್ಲಿ ಪ್ರಯಾಣಿಸಿ ಬಂದರೆ ಅದೇ ಹಳೆಯ ಬೌದ್ಧ ಮಂದಿರದ ಎದುರು ನಮ್ಮನ್ನು ತಂದು ಬಿಟ್ಟ ಗೂಗಲಮ್ಮ ಮತ್ತೊಮ್ಮೆ ನಮ್ಮನ್ನು ಏಮಾರಿಸಿದ್ದಳು. ಆ ಬೌದ್ಧಮಂದಿರದಲ್ಲಿ ಯಾರೂ ಇರಲಿಲ್ಲ. ಸುಮ್ಮನೆ ಅದರ ಸುತ್ತ ಓಡಾಡಿ ಮತ್ತೆ ವಾಹನ ಹತ್ತಿ ಬೌದ್ಧ ವಿಗ್ರಹ ಇದ್ದ ಕಡೆಗೆ ಹೋದೆವು. 85 ಅಡಿ ಎತ್ತರದ ಧ್ಯಾನಸ್ಥ ಬುದ್ಧನ ವಿಗ್ರಹ ಅದು. ಅದರ ಎದುರು ಬೌದ್ಧ ವಿಹಾರ. ಅಲ್ಲೊಬ್ಬ ಲಾಮಾ ಹೊರತುಪಡಿಸಿದರೆ ಇನ್ಯಾರೂ ಇರಲಿಲ್ಲ. ಆತನ ಅನುಮತಿ ಪಡೆದು ಮಂದಿರದ ಒಳಗೆ ಸುತ್ತಾಡಿ, ಹೊರಗಿನ ಅಂಗಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೆ ಆತ ಬಂದು ಕೈತುಂಬಾ ಒಣಹಣ್ಣುಗಳನ್ನು ನೀಡಿದ. ಬಾದಾಮಿ, ಉತ್ತುತ್ತೆ, ಒಣದ್ರಾಕ್ಷಿ, ಒಣ ಜರದಾರು (Apricot) ಹೊಟ್ಟೆಗಿಳಿಸಿ, ಪಕ್ಕದಲ್ಲಿ ಹರಿಯುತ್ತಿದ್ದ ತೊರೆಯಿಂದ ಮೊಗೆದು ನೀರು ಕುಡಿದೆವು. ಒಂದಿಷ್ಟು ಫೋಟೋಗಳನ್ನು ತೆಗೆದು ಬೌದ್ಧವಿಹಾರದ ಆವರಣದಲ್ಲಿದ್ದ ಜರದಾರು ಮರಗಳಿಂದ ಒಂದಿಷ್ಟು ತಾಜಾ ಹಣ್ಣುಗಳನ್ನು ಕಿತ್ತು ರುಚಿ ನೋಡಿದೆವು. ಹುಳಿಮಿಶ್ರಿತ ಸಿಹಿ ಹಣ್ಣುಗಳವು. ಬಿದ್ದು ಹಾಳಾಗುತ್ತಿದ್ದವು. ಇಷ್ಟ ಬಂದಷ್ಟು ಕೊಯ್ದು ತಿಂದೆವು. ಅಷ್ಟರಲ್ಲಿ ಮಂದಿರದ ಪಕ್ಕದಲ್ಲೇ ಮನೆಯಂತಿದ್ದ ಕಟ್ಟಡದಿಂದ ಹೊರಬಂದ ಯುವತಿಯೊಬ್ಬಳು ಕೈಯಲ್ಲಿ ಕೋಕಕೋಲಾ ಬಾಟಲಿ ಹಿಡಿದು ಕುಡಿಯಿರಿ ಎಂದು ಆಹ್ವಾನಿಸಿದಳು.

ಅದು ಹೋಟೆಲ್ ಇರಬೇಕು. ಬಹುಶಃ ಮಾರಾಟ ಮಾಡುತ್ತಿರಬೇಕು ಅಂದುಕೊಂಡೆವು. ಕೋಕ್ ಬೇಡ, ಚಹಾ ಇದೆಯಾ ಎಂದು ಕೇಳಿದೆವು. ಆಕೆ, ಬೇರೊಂದು ಹಣ್ಣಿನ ಜ್ಯೂಸ್ ಇದೆ, ಕುಡಿಯಿರಿ ಎಂದಳು. ನಾವು ಬೇಡವೆಂದರೆ ಬೇಸರ ಮಾಡಿಕೊಂಡಳು. ಸರಿ, ಕೊಡಿ ಅದನ್ನೇ ಕುಡಿಯುತ್ತೇವೆ ಎಂದರೆ ಕೋಕ್, ಟ್ರಾಪಿಕಾನಾ ಜ್ಯೂಸ್ ಬಾಟಲಿಗಳನ್ನು ಮುಂದಿಟ್ಟು ಒಂದಷ್ಟು ಲೋಟಗಳನ್ನೂ ನೀಡಿದಳು. ತಿನ್ನಲು ಬಿಸ್ಕತ್ ಕೊಡಲಾ ಎಂದಳು. ನಾನು ಆ ಲಾಮಾನ ಸೋದರಿ. ಈ ಮಂದಿರವನ್ನು ಅವರೇ ನೋಡಿಕೊಳ್ಳುವುದು. ನಮ್ಮ ಮನೆ ಇಲ್ಲೇ ಹತ್ತಿರದಲ್ಲಿದೆ. ಅಣ್ಣನಿಗೆ ಆಹಾರ (Food) ಮತ್ತಿತರೆ ವ್ಯವಸ್ಥೆಗಾಗಿ ನಾನು ಇಲ್ಲಿಗೆ ಬರುತ್ತೇನೆ. ಭಕ್ತರು (Devotees) ತಂದುಕೊಟ್ಟ ಪಾನೀಯ, ಆಹಾರ ಪದಾರ್ಥಗಳನ್ನು ಇಲ್ಲಿಗೆ ಬರುವ ಪ್ರವಾಸಿಗರಿಗೆ ಹಂಚುತ್ತೇವೆ ಎಂದು ಆಕೆ ಹೇಳಿದಾಗಲೇ ಅರಿವಾದದ್ದು ಅದು ಹೋಟೆಲ್ ಅಲ್ಲ, ಧರ್ಮಾರ್ಥ ಸೇವೆ ಎಂದು. ಅಲ್ಲಿನವರ ಮುಗ್ಧ ಆತಿಥ್ಯದ ಪರಿ ಕಂಡು ಬೆರಗಾದೆವು. ಆಕೆಗೆ ನಾವು ಹಾಗೇ ಹೊರೆಟೆವು ಎಂದು ಬೇಸರವಾಗದಿರಲಿ ಎಂದು ಆ ತಂಪುಪಾನೀಯವನ್ನು ಕುಡಿದು, ಮಂದಿರದ ಹುಂಡಿಗೆ ಕೈಲಾದಷ್ಟು ಕಾಣಿಕೆ ಸಲ್ಲಿಸಿ ಅವರಿಬ್ಬರಿಗೆ ಧನ್ಯವಾದಗಳನ್ನೂ ಹೇಳಿ ನೇ ಗ್ರಾಮದ ಸೌಂದರ್ಯ ಸವಿಯಲು ಹೊರಟೆವು.

ಲಡಾಖ್ ಅಮೃತಯಾತ್ರೆ - 2022: ಭಾಗ-9, ಹಾನ್‌ಲೇ... ಅದು ಬೇರೆಯೇ ಗ್ರಹ !

ಪ್ರಶಾಂತ, ಮನೋಲ್ಲಾಸ ನೀಡುವ ತಾಣ ನೇ ಎಂಬ ಗ್ರಾಮ
18ರಿಂದ 20 ಚದರ ಕಿ.ಮೀ. ವಿಸ್ತೀರ್ಣದಲ್ಲಿರುವ ಪ್ರಶಾಂತ ಹಳ್ಳಿಯದು. ಸುತ್ತಲೂ ಬೋಳು ಬೆಟ್ಟ. ಥೇಟು ಲಡಾಖ್ ಪ್ರಾಂತ್ಯದ ಇತರೆ ಬೆಟ್ಟಗಳ ಹಾಗೆ. ನಡುವೆ ಕಣಿವೆಯಲ್ಲಿ ಹಳ್ಳಿ. ಅಲ್ಲಿ ಹೆಚ್ಚಿನವು ಮಣ್ಣಿನ ಮನೆಗಳು. ಬಹಳ ಕಿಕ್ಕಿರಿದ ಹಳ್ಳಿಯೇನಲ್ಲ. ಒಂದೊಂದು ಮನೆಯ ಸುತ್ತಲೂ ಗದ್ದೆ, ತೋಟ. ಗದ್ದೆಯಲ್ಲಿ ಹೆಚ್ಚಾಗಿ ಗೋಧಿ ಬೆಳೆಯುತ್ತಾರೆ. ಅಲ್ಲಲ್ಲಿ ಭತ್ತದ ಬೆಳೆಯೂ ಉಂಟು. ತೋಟ ಅಂದರೆ ಸೇಬು, ಜರದಾರು (Apricot) ಮರ-ಗಿಡಗಳಿಂದ ಕೂಡಿದ ಸಮೃದ್ಧ ತೋಟ. ದೂರದ ಬೆಟ್ಟಗಳಿಂದ ಇಳಿದು ಗ್ರಾಮದ ಮಧ್ಯೆ ಜುಳುಜುಳು ಎನ್ನುತ್ತ ಸಾಗುವ ಶುಭ್ರ ನೀರಿನ ಹೊಳೆ. ಅದಕ್ಕೆ ಅಲ್ಲಲ್ಲಿ ಜಮೀನುಗಳ ಎಡೆಯಲ್ಲಿ ಸುಳಿದು ಬಂದು ಸೇರುವ ನೈಸರ್ಗಿಕ ತೊರೆಗಳು. ಅವುಗಳ ನೀರು ಅಂದರೆ, ಯಾವ ಬ್ರಾಂಡಿನ ಮಿನರಲ್ ವಾಟರೂ ಅದಕ್ಕೆ ಸಾಟಿಯಲ್ಲ, ಅಷ್ಟು ಪರಿಶುದ್ಧ. ಗ್ರಾಮದ ರಸ್ತೆಯ ಇಕ್ಕೆಲಗಳಲ್ಲೂ ಹಾಸಿದಂತಿದ್ದ ಮೆತ್ತನೆಯ ಹುಲ್ಲು. ಅಲ್ಲಲ್ಲಿ ಮೇಯುತ್ತಿದ್ದ ಹಸು-ಕರುಗಳು. ವಂಶಿ ಹೇಳಿದ್ದು ಅಕ್ಷರಶಃ ನಿಜವಾಗಿತ್ತು. ದೇಹ, ಮನಸ್ಸು ಎರಡಕ್ಕೂ ಮುದ ನೀಡುವ ತಾಣ ಅದಾಗಿತ್ತು.

ಐದೇ ನಿಮಿಷದಲ್ಲಿ ಆತ್ಮೀಯಳಾದ ಸ್ಟೆನ್ ಜಿನ್ ದೀದಿ
ಅದೊಂದು ತೊರೆಯ ಬಳಿ ಕುಳಿತು ನಾವೆಲ್ಲ ಸಂಭ್ರಮಿಸುತ್ತಿದ್ದರೆ, ಆ ಹೆಣ್ಣು ಮಗಳು ತನ್ನ ಹಸುವನ್ನು ಮೇಯಿಸುತ್ತ ಬಂದು ನಾವು ಇದ್ದಲ್ಲಿಂದ ತುಸು ದೂರದಲ್ಲಿ ಕಟ್ಟಿ ಹಾಕಿದಳು. ನಾನು ಸುಮ್ಮನಿರಲಾರದೆ ಆಕೆಯನ್ನು ಮಾತಿಗೆಳೆದೆ. ಹೆಸರು ಸ್ಟೆನ್ ಜಿನ್ ದೀದಿ. ಗಂಡನಿಗೆ ಲೇಹ್ ನಲ್ಲಿ ಕೆಲಸ. ಇಬ್ಬರು ಮಕ್ಕಳು ಪಿಯುಸಿ, ಹೈಸ್ಕೂಲು ಓದುತ್ತಿದ್ದರು. ಉಭಯ ಕುಶಲೋಪರಿ ನಂತರ, ಇಲ್ಲಿ ಜಾಗ ಸಿಗುತ್ತಾ ಎಂದು ಕೇಳಿದೆ. ಯಾಕೆ ಎಂದು ಕೇಳಿದಳು. ಖರೀದಿ ಮಾಡಿ ಉಳಿದುಕೊಳ್ಳೋಕೆ ಅಂದೆ. ಕೃಷಿ ಭೂಮಿ (Land) ಯಾರೂ ಕೊಡುವುದಿಲ್ಲ, ಖಾಲಿ ಜಾಗ ಕೊಟ್ಟರೂ ಕೊಡಬಹುದು. ಆದರೆ, ಆ ಸಾಧ್ಯತೆ ಕಮ್ಮಿ ಅಂದಳು. ನಿಮಗ್ಯಾಕೆ ಜಾಗ, ನಮ್ಮ ಮನೆಗೇ ಬಂದು ಉಳಿದುಕೊಳ್ಳಿ ಅಂದಳು. ವಯಸ್ಸಾದ ಮೇಲೆ ನಾವು ಇಲ್ಲಿಗೆ ಬಂದು ಆಶ್ರಮ ಮಾಡಿ ನೆಲೆಸಬೇಕು ಅಂತಿದ್ದೇವೆ ಎಂದು ತಮಾಷೆ ಮಾಡಿದೆ. ಆಕೆ ನಗಾಡಿದಳು. ನೀವು ಪೇಟೆ ಮಂದಿ, ಜೀವನ ಪೂರ್ತಿ ಓಟದ ಬದುಕು, ಅಟ್ಟಿ ಅಟ್ಟಿ ಹಣ ಸಂಪಾದಿಸುವುದೇ ನಿಮ್ಮ ಗುರಿ, ಬಿಡುವು ಮಾಡಿಕೊಂಡು ಆರಾಮವಾಗಿರುವುದಕ್ಕೆ ನಿಮಗೆಲ್ಲಿದೆ ಸಮಯ ಎಂದು ವಾಸ್ತವ ದರ್ಶನ ಮಾಡಿದಳು.

ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗಿಂತಲೂ ಎತ್ತರದ ರಸ್ತೆ ಉಮ್ಲಿಂಗ್ ಲಾ!

ಮನೆಗೆ ಬನ್ನಿ ಚಹಾ (Tea) ಕುಡಿದು ಹೋಗಿ ಎಂದು ಆಹ್ವಾನವಿತ್ತವಳಿಗೆ, ಹೊರಡಬೇಕು ತಡವಾಗುತ್ತದೆ ಎಂದೆ. ಇಲ್ಲೇ ಗೊತ್ತಾಯ್ತಲ್ಲ, ನಿಮ್ಮ ಇಡೀ ಗುಂಪಿನಲ್ಲಿ ಕಂಜೂಸ್ ಆದ್ಮಿ ನೀನು... ಎಂದು ಪದೇ ಪದೇ ಆತ್ಮೀಯವಾಗಿ ಕಾಲೆಳೆದಳು. ನಾನು ಮೂಲತಃ ಲೇಹ್ ಪಟ್ಟಣದವಳು. ಮದುವೆ (Marriage) ಆದ ಮೇಲೆ ನೇ ಗ್ರಾಮದಲ್ಲಿ ನೆಲೆಸಿದ್ದೇನೆ. ತವರು ಮನೆಗೆ ಹೋದರೂ, ಸಂಜೆ ವೇಳೆಗೆ ಇಲ್ಲಿಗೆ ಬರುತ್ತೇನೆ. ನನಗೆ ಆ ಗಿಜಿಗಿಜಿ ಪಟ್ಟಣಕ್ಕಿಂತ ಈ ಹಳ್ಳಿಯ ವಾತಾವರಣವೇ ಇಷ್ಟ ಎಂದಾಗ ನಮಗೆ ಮತ್ತಷ್ಟು ಇಷ್ಟವಾದಳು. ಕೇವಲ ಐದಾರು ನಿಮಿಷಗಳ ಮಾತುಕತೆಯಲ್ಲಿ ಯಾವುದೋ ಜನ್ಮದ ಬಂಧುವಿನಷ್ಟು ಆತ್ಮೀಯಳಾದಳು. ಫೋನ್ ನಂಬರ್ ತೆಗೆದುಕೊಂಡು ಇನ್ನೊಮ್ಮೆ ಬಂದರೆ ಕುಟುಂಬಸಮೇತರಾಗಿ ನಮ್ಮ ಮನೆಯಲ್ಲೇ ಉಳಿಯಬೇಕು ಎಂದು ವಾಗ್ದಾನ ಪಡೆದು ನಮ್ಮನ್ನು ಬೀಳ್ಕೊಟ್ಟಳು.

ಸೈನಿಕರ ಸಾಹಸಗಾಥೆ ಹೇಳುವ ಹಾಲ್ ಆಫ್ ಫೇಮ್, ಯುದ್ಧಸ್ಮಾರಕ
ಅಷ್ಟರಲ್ಲಾಗಲೇ ಮಧ್ಯಾಹ್ನ 3.30 ಕಳೆದಿತ್ತು. ಒಣಹಣ್ಣು, ತಾಜಾ ಹಣ್ಣು, ತಂಪು ಪಾನೀಯದಿಂದಾಗಿ ಹಸಿವು ಅಡಗಿತ್ತು. ಇನ್ನು ಲೇಹ್ ಗೆ ಹೋಗಿಯೇ ಏನಾದರೂ ತಿಂದರಾಯ್ತೆಂದು ಅಲ್ಲಿಂದ ಹೊರಟೆವು. ನಮ್ಮ ಮುಂದಿನ ಕಾರ್ಯಕ್ರಮ ಲೇಹ್ ನಲ್ಲಿದ್ದ ಸೈನಿಕ ಸ್ಮಾರಕ ಹಾಗೂ ಸೇನೆಯ ಹಾಲ್ ಆಫ್ ಫೇಮ್ ಭೇಟಿ. ಲೇಹ್ ಪಟ್ಟಣಕ್ಕಿಂತ 5 ಕಿ.ಮೀ. ಮುಂಚಿತವಾಗಿಯೇ ಸಿಗುತ್ತದೆ ಅದು. ಕಾರ್ಗಿಲ್ ಸೇರಿದಂತೆ ಜಮ್ಮು-ಕಾಶ್ಮೀರದ ಅನೇಕ ಯುದ್ಧಗಳ ವಿವರ ಹಾಗೂ ಸೈನಿಕರ ಸಾಹಸಗಳನ್ನು ಬಿಂಬಿಸುವ ಹಾಗೂ ಹಲವಾರು ಯುದ್ಧ ಸ್ಮರಣಿಕೆಗಳ ಸಂಗ್ರಹ ಇರುವ ಕೇಂದ್ರವದು. ಅದರ ಹಿಂದೆ ವಿಶಾಲವಾದ ಯುದ್ಧ ಸ್ಮಾರಕ. ಅದರ ಮಗ್ಗುಲಲ್ಲಿ ಕಾಶ್ಮೀರಿ ರಣಭೂಮಿಯಲ್ಲಿ ಮಡಿದವರ ನೆನಪಿನಲ್ಲಿ ಕಲ್ಲುಗಳನ್ನು ನೆಡಲಾಗಿತ್ತು. ಅದಕ್ಕೆ ತಲಾ 250 ರೂ. ಪ್ರವೇಶ ದರ. ಮಾರ್ಗದರ್ಶಕರ ವಿವರಣೆ ಬೇಕಾದರೆ ಪ್ರತ್ಯೇಕ ದರ. ಅದು ಹೆಚ್ಚಿನ ಸಮಯ ಬೇಡುತ್ತದೆಂದು ನಾವು ಹಾಗೇ ಒಳ ಹೋದೆವು. ಎಷ್ಟು ಬೇಗ ಎಂದರೂ ಕನಿಷ್ಠ ಒಂದೂವರೆ ತಾಸಾದರೂ ಬೇಕು ಅದನ್ನು ಪೂರ್ತಿ ವೀಕ್ಷಿಸಲು. ಕಾಶ್ಮೀರ-ಲಡಾಖ್ ಪ್ರಾಂತ್ಯದಲ್ಲಿ ಸೇನಾ ಕಾರ್ಯಾಚರಣೆಯ ಇತಿಹಾಸದ ಬಗ್ಗೆ ಒಂದಷ್ಟು ತಿಳಿದುಕೊಂಡು ಹೊರಬಂದೆವು. ಯುದ್ಧ ಸ್ಮಾರಕವನ್ನೂ ವೀಕ್ಷಿಸಿದೆವು. ಆಗ ಗಂಟೆ 6 ಕಳೆದಿತ್ತು. ರಾತ್ರಿ 8ಕ್ಕೆ ಅದೇ ಯುದ್ಧ ಸ್ಮಾರಕದ ಎದುರು ಲೇಸರ್ ಶೋ ಇತ್ತು. ಅಷ್ಟು ಹೊತ್ತು ಅಲ್ಲೇನು ಮಾಡುವುದು ಎಂದು ಇನ್ನೊಂದು ಜಾಗ ನೋಡಲು ಹೊರಟೆವು.

ಲಡಾಖ್ ಅಮೃತಯಾತ್ರೆ-2022: ಭಾಗ-11, ಎರಡೇ ಅಡಿ ಅಂತರದಲ್ಲಿ ನನ್ನ ಪ್ರಾಣ ಉಳಿಯಿತು !

ಇಡೀ ಲೇಹ್ ಪಟ್ಟಣಕ್ಕೆ ಕಿರೀಟದಂತಿರುವ ಶಾಂತಿ ಸ್ತೂಪ
ವಿಶ್ವಶಾಂತಿಗಾಗಿ ಜಪಾನ್ ಹಾಗೂ ಟಿಬೆಟ್ ಲಾಮಾಗಳು ಕೂಡಿ ನಿರ್ಮಿಸಿದ ಸ್ತೂಪ ಅದು. 1983ರಲ್ಲಿ ನಿರ್ಮಾಣ ಆರಂಭವಾಗಿ 1991ರಲ್ಲಿ ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ ಅವರಿಂದ ಉದ್ಘಾಟಿಸಲ್ಪಟ್ಟ ಶಾಂತಿ ಸ್ತೂಪವು ಲೇಹ್ ಪಟ್ಟಣದ ಉತ್ತರ ತುದಿಯಲ್ಲಿದೆ. ಕಾಲ್ನಡಿಗೆಯಲ್ಲಿ ಏರುವುದಾದರೆ ಕನಿಷ್ಠ 500 ಮೆಟ್ಟಲು ಹತ್ತಬೇಕು. ವಾಹನದಲ್ಲಿ ಹೋಗುವುದಾದರೆ, ಅದರ ಬುಡದಲ್ಲೇ ಪಾರ್ಕಿಂಗ್ ಸೌಲಭ್ಯವಿದೆ. ನಾವು ಅಲ್ಲಿಗೆ ತಲುಪಿದಾಗ ಸುಮಾರು 6.30 ಆಗಿತ್ತು. ಸ್ತೂಪದ ಸುತ್ತಲಿನ ವಿಶಾಲವಾದ ಜಾಗದಿಂದ ಇಡೀ ಲೇಹ್ ಪಟ್ಟಣದ ದರ್ಶನವಾಗುತ್ತದೆ. ಅದನ್ನು ನೋಡಿ, ಸ್ತೂಪದ ಸುತ್ತ ಸುತ್ತಾಡಿ ಅಲ್ಲಿಂದ ಹೊರಡುವಾಗ 7 ಗಂಟೆಯಾಗಿತ್ತು. ಹೊಟ್ಟೆಗೇನೂ ಬಿದ್ದಿರಲಿಲ್ಲ. ದಾರಿ ಮಧ್ಯದಲ್ಲಿ ಸಿಕ್ಕ ರೆಸ್ಟೋರೆಂಟ್ ಒಂದರಲ್ಲಿ ಸ್ಯಾಂಡ್ ವಿಚ್ ಹಾಗೂ ಚಹಾ ಸೇವಿಸುವಷ್ಟರಲ್ಲಿ 7.45 ಕಳೆದೇ ಹೋಯಿತು. ಇನ್ನು 15 ನಿಮಿಷದಲ್ಲಿ ಲೇಸರ್ ಶೋ ಆರಂಭ. ವಂಶಿಯ ಹೋಮ್ ಸ್ಟೇಯಲ್ಲಿ ನಮಗೊಬ್ಬ ಆಂಧ್ರ ಮೂಲದ ಸೇನಾಧಿಕಾರಿಯ ಪರಿಚಯ ಆಗಿತ್ತು.

ಅವರ ಕುಟುಂಬ ಇರುವುದು ಬೆಂಗಳೂರಲ್ಲಂತೆ. ಲೇಸರ್ ಶೋ ನೋಡಲು ಬನ್ನಿ, ಬಂದಾಗ ನನಗೆ ಕರೆ ಮಾಡಿ ಅಂದಿದ್ದರು. ಹಾಗೆ ಅವರಿಗೆ ಕರೆ ಮಾಡಿ ಹೋದರೆ ಆಸನ ಕಾದಿರಿಸಿದ್ದರು. ಸುಮಾರು ಒಂದು ತಾಸಿನ ಶೋ ಅದು. ನಾವು ಹಾಲ್ ಆಫ್ ಫೇಮ್ ನಲ್ಲಿ ಏನು ನೋಡಿ, ಓದಿದ್ದೆವೋ ಅದನ್ನು ದೃಶ್ಯ-ಧ್ವನಿ ರೂಪದಲ್ಲಿ ಪ್ರಸ್ತುತಪಡಿಸುವ ಪ್ರದರ್ಶನ ಅದು. ಒಂದೊಂದು ಘಟನೆಯೂ ರೋಚಕ. ದೇಶಕ್ಕಾಗಿ ಮಡಿದ ಒಬ್ಬೊಬ್ಬ ಸೈನಿಕರ ಕತೆ ಕೇಳುತ್ತಿದ್ದಂತೆ ರಕ್ತ ಕುದಿಯುತ್ತದೆ. ಅವರ ತ್ಯಾಗ, ಬಲಿದಾನದಿಂದ ನಾವು ಇವತ್ತು ಇಷ್ಟು ನೆಮ್ಮದಿಯಾಗಿದ್ದೇವೆಂದು ಸಾವಿರದೊಂದನೇ ಸಲ ಮನಸ್ಸಲ್ಲೇ ಅಂದುಕೊಂಡು ಅಗಲಿದ ಸೈನಿಕರ ನೆನೆಸಿ ಭಾರವಾದ ಹೃದಯದೊಂದಿಗೆ ಅಲ್ಲಿಂದ ಹೊರಟೆವು.

ಲೇಹ್ ಮಾರುಕಟ್ಟೆಯಲ್ಲಿ ತುಪ್ಪಕ್ಕಾಗಿ ಹುಡುಕಾಟ
ಗಂಟೆ 9.30 ಕಳೆದಿತ್ತು. ನಾವು ಊಟಕ್ಕೆ ಬರುವುದಿಲ್ಲ ಎಂದು ವಂಶಿಗೆ ಹೇಳಿದ್ದೆವು. ಸ್ಥಳೀಯ ಆಹಾರ ಸೇವಿಸಬೇಕೆಂದಿದ್ದರು ಎಲ್ಲರೂ. ಲೇಹ್ ಮಾರುಕಟ್ಟೆಯ ಏಷ್ಯನ್ ಕಾರ್ನರ್ ರೆಸ್ಟೋರೆಂಟ್ ನಲ್ಲಿ ತುಪ್ಪ ಎಂಬೊಂದು ಖಾದ್ಯ ಸಿಗುತ್ತಂತೆ. ನೂಡಲ್ಸ್ ರೀತಿಯದು ಅದನ್ನು ಟ್ರೈ ಮಾಡೋಣ ಅಂತ ಮಾನಸ-ದೀಪ್ತಿ ಹೇಳಿದರು. ಆಯ್ತೆಂದು ಅದನ್ನು ಹುಡುಕುತ್ತಾ ಅಲ್ಲಿಗೆ ಹೋದೆವು. ಸುಲಭವಾಗಿಯೇ ಜಾಗ ಸಿಕ್ಕಿತು. ಎಲ್ಲರಿಗೂ ತುಪ್ಪ ಆರ್ಡರ್ ಮಾಡಿದೆವು. ಕಡೆಗೆ ನೋಡಿದರೆ ಅದರ ಸರಿಯಾದ ಹೆಸರು ತುಪ್ಪ ಅಲ್ಲ ಥುಕ್ ಪಾ (Thukpa). ಆಡುಭಾಷೆಯಲ್ಲಿ ತುಪ್ಪ ಆಗಿತ್ತು. ಬೋಗುಣಿಗಳಲ್ಲಿ ಆ ಖಾದ್ಯ ಬಂತು. ಪ್ಲೈನ್ ಸೂಪ್ ನಲ್ಲಿ ಚೈನೀಸ್ ನೂಡಲ್ಸ್ ಹಾಗೂ ತರಕಾರಿ ಹಾಕಿದರೆ ಹೇಗಿರಬಹುದೋ, ಸುಮಾರಾಗಿ ಹಾಗಿತ್ತು ಅದರ ರುಚಿ. ಹಸಿವೂ (Hungry) ಆಗಿದ್ದರಿಂದ ಚೆನ್ನಾಗಿಯೇ ತಿಂದೆವು. ರಾತ್ರಿ 11 ಆದರೂ ಮಾರುಕಟ್ಟೆಯಲ್ಲಿ ಬೀದಿ ಬದಿ ಮಳಿಗೆಗಳು ಇನ್ನೂ ಪೂರ್ತಿ ಮುಚ್ಚಿರಲಿಲ್ಲ. ಐದೇ ನಿಮಿಷದಲ್ಲಿ ತಡಕಾಡಿ ಅಲ್ಲೊಂದೆರಡು ದಿಢೀರ್ ಖರೀದಿ ಮಾಡಿದೆವು. ಮರುದಿನ ಸುದೀರ್ಘ ಪ್ರಯಾಣ (Travel)ವಿತ್ತು. ಬೆಳಗ್ಗೆ ಬೇಗ ಹೊರಡಬೇಕಿತ್ತು. ಹೋಮ್ ಸ್ಟೇಗೆ ಹೋಗಿ ಪ್ಯಾಕಿಂಗ್ ಎಲ್ಲ ಮುಗಿಸಿ ಬಹುತೇಕ ಬ್ಯಾಗುಗಳನ್ನು ಜೀಪಿಗೆ ತುಂಬಿ ಹಾಸಿಗೆಗೆ ಒರಗಿಕೊಂಡೆವು.

ಮುಂದಿನ ಕಂತಿನಲ್ಲಿ: ಒಂದೇ ದಿನ 450 ಕಿ.ಮೀ. ಪ್ರಯಾಣ. ದಾರಿಯಲ್ಲಿ ಸಿಕ್ಕವು 3 ಎತ್ತೆತ್ತರದ ಪಾಸ್ ಗಳು. ಈ ಜನ್ಮದಲ್ಲೇ ಕಂಡಿರದಷ್ಟು ಘಾಟಿ ತಿರುವುಗಳು. ನಿರ್ಮಾನುಷ ಪ್ರದೇಶದ ಬಟಾಬಯಲಿನಲ್ಲಿ 35-40 ಕಿ.ಮೀ. ಒಂದೇ ರಸ್ತೆ. ಬೆಂಕಿಪೊಟ್ಟಣಕ್ಕಿಂತ ಚಿಕ್ಕದಾಗಿ ಕಾಣುವ ಕಣಿವೆಗೆ ಬಿದ್ದ ಟ್ರಕ್. ಗಾಟಾ ಲೂಪ್ ನಲ್ಲಿ ಲಾರಿ ಕ್ಲೀನರ್ ಭೂತ. ಬೆಟ್ಟದಿಂದ ಉದುರಿ ಬೀಳುತ್ತಿದ್ದ ಕಲ್ಲು-ಬಂಡೆಗಳ ನಡುವೆ ರಾತ್ರಿ ವೇಳೆ ಅಪಾಯಕಾರಿ ಪ್ರಯಾಣ.

click me!