ಸೊರಬ್ಬಿ ಹಳ್ಳದಿಂದ ಉಗಮ, 50 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆ!

By Web Desk  |  First Published Nov 19, 2019, 9:01 AM IST

ಹಕ್ಕಿಗಳ ಚಿಲಿಪಿಲಿ ಕಲರವ, ತಂಪಾದ ವಾತಾವರಣ ಹಾಗೂ ಹಚ್ಚ ಹಸಿರಿನ ವನಸಿರಿ ಮಧ್ಯೆ ಚಿಮ್ಮಿಕೊಂಡು ಹರಿದೋಡುವ ಸಾತೋಡಿ ಜಲಪಾತವು ಸೌಂದರ್ಯ ಮತ್ತು ಮೋಹಕತೆಯನ್ನು ಅರೆದು ಹೊಯ್ದಿರುವಂತಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಈ ಜಲಧಾರೆ ನಿಸರ್ಗದ ಮಧ್ಯೆ ಹಾಲಿನಂತೆ ಧುಮ್ಮಿಕ್ಕುತ್ತಿದೆ. ಈ ಜಲಪಾತಕ್ಕೆ ಸಾತೊಡ್ಡಿ ಎಂದೂ ಹೆಸರಿದೆ.


ವರ್ಷವಿಡೀ ತನ್ನ ವೈಯಾರದಿಂದ ಪ್ರವಾಸಿಗರ ಮನ ಗೆಲ್ಲುವ ಸಾತೋಡಿ ಜಲಪಾತವನ್ನು ಮಳೆಗಾಲದ ವೇಳೆ ನೋಡಲು ಎರಡು ಕಣ್ಣು ಸಾಲದು. ಈ ಜಲಪಾತವು ಕಾಳಿ ಉಪನದಿಯಾದ ಸೊರಬ್ಬಿ ಹಳ್ಳದಿಂದ ಉಗಮವಾಗಿದೆ. ಸುಮಾರು 50 ಅಡಿ ಎತ್ತರದಿಂದ ವಿಶಾಲವಾಗಿ ಕೆಳಗೆ ಬೀಳುತ್ತಾ ಝೇಂಕಾರ ಮಾಡಿ ನದಿ ಸೇರುತ್ತದೆ.

ದಾಂಡೇಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುವ ಸಾತೋಡಿ ಜಲಪಾತ ದಟ್ಟಕಾನನದ ನಡುವೆ ಸೇರಿಕೊಂಡಿದೆ. ಅಗಲವಾಗಿ ಮತ್ತು ವಿಸ್ತಾರವಾಗಿ ಹರಿಯುವ ಝರಿಯು ನಂತರ ಕೊಡನಳ್ಳಿ ಜಲಾಶಯದ ಮೂಲಕ ಕಾಳಿ ನದಿಯನ್ನು ಸೇರುತ್ತದೆ. ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಅರಣ್ಯ ಇಲಾಖೆಯ ಅನುಮತಿ ಪತ್ರ ಪಡೆದು ಸುಮಾರು 2 ಕಿ.ಮೀ ಕಚ್ಚಾ ರಸ್ತೆಯಲ್ಲಿ ನಡೆದು ಸಾಗಿದರೆ ಪ್ರವಾಸಿಗರಿಗೆ ಜಲಪಾತದ ಸೌಂದರ್ಯ ಕಾಣುತ್ತದೆ. ಸಾತೋಡಿಗೆ ಅನೇಕ ಕಡೆಗಳಿಂದ ಪ್ರವಾಸಿಗರು ಬಂದು ಹೋಗಿದ್ದಾರೆ. ವಿದೇಶಿಯರೂ ಕಣ್ತುಂಬಿಸಿಕೊಂಡಿದ್ದಾರೆ.

Tap to resize

Latest Videos

ಜಲಾಶಯ, ಜಲಧಾರೆಗಳತ್ತ ಜನಸಾಗರ

ಸಾತೋಡಿ ಜಲಪಾತವನ್ನು ಕಂಡವರು ಇದನ್ನು ಚಿಕ್ಕ ನಯಾಗರ ಜಲಪಾತಕ್ಕೆ ಹೋಲಿಸಿದ್ದುಂಟು. ನಿತ್ಯ ಹರಿದ್ವರ್ಣದ ಕಾಡುಗಳು ಹಾಗು ಮುಗಿಲೆತ್ತರದ ಬೆಟ್ಟಗಳಲ್ಲಿ ಹುಟ್ಟಿಪ್ರಪಾತಕ್ಕೆ ಧುಮುಕುವ ಜಲಧಾರೆ ನಿಧಾನವಾಗಿ ಪ್ರವಹಿಸುತ್ತಾ ಕಣಿವೆಗಳಲ್ಲಿ ನದಿಯಾಗಿ ಹರಿಯುವ ಪರಿ ಅನನ್ಯ.

ಹಾಗೆಯೇ ಜಲಪಾತದ ಹತ್ತಿರ 4 ಕಿ.ಮೀ ಕಾಳಿ ನದಿಯ ಹಿನ್ನೀರಿನ ದಂಡೆಯ ಮೇಲೆ ಕೊರೆವ ಚಳಿಯಲ್ಲಿ ಸಾಗಿದರೆ ಮನಸ್ಸಿಗೆ ಸಿಗುವ ಉಲ್ಲಾಸವೇ ಬೇರೆ. ಹರಿಯುವ ನೀರಿನಲ್ಲಿ ಸ್ನಾನ ಮಾಡುವ ಅನುಭವ ಅದ್ಭುತ. ಭಾರಿ ಗಾತ್ರದ ಹಾಸುಕಲ್ಲಿನ ಮೇಲೆ ಚಿತ್ತಾರ ಮಾಡಿದ್ದಾರೆನ್ನುವಂತಹ ಅನುಭವವಾಗುತ್ತದೆ. ಎಷ್ಟೇ ದೂರದಿಂದ ಬಂದರೂ ಸಾತೋಡಿ ಜಲಪಾತ ಮನಸ್ಸನ್ನು ತಂಪು ಮಾಡುವುದಂತು ನಿಜ.

ರಾಮನಿಗಾಗಿ ಶಬರಿ ಕಾದ ಜಾಗದಲ್ಲಿ ಈಗಲೂ ಚಿಮ್ಮುತ್ತೆ ನೀರು!

ಜಲಪಾತಕ್ಕೆ ತೆರಳಲು ಇರುವ ಸೌಲಭ್ಯ

ಬೆಂಗಳೂರಿನಿಂದ 450 ಕಿಮೀ ದಾರಿ. ಶಿರಸಿಯಿಂದ 75.8 ಕಿ.ಮೀ ಮತ್ತು ದಾಂಡೇಲಿಯಿಂದ 80 ಕಿ.ಮೀ ಇದೆ. ಯಲ್ಲಾಪುರದಿಂದ 27 ಕಿ.ಮೀ ದೂರ ಸಾಗಬೇಕು. ಆನಗೋಡ ಮಾರ್ಗದಲ್ಲಿ ಕ್ರಮಿಸಬೇಕು. ಸ್ವಂತ ವಾಹನದಲ್ಲಿ ತೆರಳುವುದು ಉತ್ತಮ. ಮಳೆಗಾಲದಲ್ಲಿ ಜಲಪಾತಕ್ಕೆ 8 ರಿಂದ 10 ಕಿ.ಮೀ ದಾರಿಯನ್ನು ನಡಿಗೆಯಲ್ಲಿ ಕ್ರಮಿಸುವುದು ರೋಚಕ ಮತ್ತು ಅನಿವಾರ್ಯ.

click me!