20 ರು. ನೋಟಿನಲ್ಲಿದೆ ಅಂಡಮಾನ್‌ನ ದೃಶ್ಯ; ಹಿಂದಿದೆ ಇಂಟ್ರೆಸ್ಟಿಂಗ್ ಕಾರಣ!

By Web Desk  |  First Published Oct 15, 2019, 1:03 PM IST

ಸಮುದ್ರದ ನೀಲ ಬೆಚ್ಚಗಿನ ನೀರಿಗೆ ಸುತ್ತ ಮೈಯೊಡ್ಡಿ ರಿಲ್ಯಾಕ್ಸ್ ಮಾಡುತ್ತಿದೆ ಅಂಡಮಾನ್ ನಿಕೋಬಾರ್ ದ್ವೀಪಸಮೂಹ. ಇದು ಭಾರತಕ್ಕೇ ಸೇರಿದುದಾದರೂ ಇದರ ಕುರಿತ ಹಲವಷ್ಟು ವಿಷಯಗಳಿಂದ ನಾವು ದೂರವೇ ಉಳಿದಿದ್ದೇವೆ. 


ಸುಂದರ ನೀಲಿ, ಹಸಿರು ಬೀಚ್‌ಗಳು, ಕಣ್ಣು ಹಾಯಿಸಿದಲ್ಲೆಲ್ಲ ಕಲಾಕೃತಿಯಂಥ ನೋಟ, ಅಂಡರ್‌ವಾಟರ್ ವಂಡರ್ಸ್, ಲೈಫ್‌ಟೈಂನಲ್ಲಿ ಮರೆಯದ ಅನುಭವ ನೀಡೋ ವಾಟರ್‌ಸ್ಪೋರ್ಟ್ಸ್... ಭಾರತದ ಭಾಗವಾದರೂ ದೂರದಲ್ಲಿ ದ್ವೀಪಸಮೂಹವಾಗಿ ನಿಂತು ಪ್ರವಾಸಿಗರನ್ನು ಅಯಸ್ಕಾಂತದಂತೆ ಸೆಳೆಯುತ್ತಿದೆ ಅಂಡಮಾನ್ ಆ್ಯಂಡ್ ನಿಕೋಬಾರ್ ದ್ವೀಪಸಮೂಹ. ಸುಮಾರು 572 ದ್ವೀಪಗಳ ಗುಚ್ಛವಾಗಿದ್ದರೂ 36ಕ್ಕೆ ಮಾತ್ರ ಪ್ರವಾಸಿಗರಿಗೆ ಎಂಟ್ರಿ ಇದೆ.

ದೇಶದಲ್ಲೇ ಅತಿ ಉದ್ದದ ರೈಲುಗಳಿವು; ನೀವು ಪಯಾಣಿಸಿದ್ದೀರಾ?

Tap to resize

Latest Videos

ಈ ದ್ವೀಪಗಳಲ್ಲಿ ದಕ್ಷಿಣ ಭಾರತೀಯರು, ಬೆಂಗಾಲಿಗಳು ಹಾಗೂ ದಕ್ಷಿಣ ಏಷ್ಯಾದ ಜನರು ಮನೆ ಮಾಡಿಕೊಂಡಿದ್ದು, ಕೆಲ ದ್ವೀಪಗಳಲ್ಲಿ ಇನ್ನೂ ಕೂಡಾ ಕಾಡುಮನುಷ್ಯರು ಆಧುನಿಕ ಜಗತ್ತಿನ ಪರಿವೇ ಇಲ್ಲದೆ ಆರಾಮಾಗಿ ಬೇಟೆಯ ಜೀವನ ನಡೆಸುತ್ತಿದ್ದಾರೆ. 

ಹವಳದ ದಿಬ್ಬಗಳು, ಅತಿ ದೊಡ್ಡ ಜಾತಿಯ ಏಡಿಗಳು, ಬೃಹತ್ ಆಮೆಗಳು, ವರ್ಣರಂಜಿತ ಮೀನುಗಳು ಹಾಗೂ ಬಹಳ ಸುಂದರವಾದ ಚಿಟ್ಟೆಗಳಿಗೆ ಮನೆಯಾಗಿವೆ ಈ ದ್ವೀಪಗಳು. ಅಂಡಮಾನ್ ನಿಕೋಬಾರ್ ಸುಂದರವಾಗಿದೆ ಎಂದು ಎಲ್ಲರಿಗೂ ಗೊತ್ತು. ಆದರೆ, ಈ ದ್ವೀಪಗಳ ಬಗ್ಗೆ ಹೆಚ್ಚು ಗೊತ್ತಿಲ್ಲದ ವಿಷಯಗಳನ್ನು ತಿಳಿಸುತ್ತೇವೆ ಓದಿ.

1. 'ಅಂಡಮಾನ್' ಹಾಗೂ 'ನಿಕೋಬಾರ್' ಎಂಬ ಹೆಸರು ಬಂದಿದ್ದು ಹನುಮಂತನಿಂದ!

ಅಂಡಮಾನ್ ಎಂಬ ಹೆಸರನ್ನು ಹನುಮಾನ್ ಎಂಬ ಹೆಸರಿನಿಂದ ತೆಗೆದುಕೊಳ್ಳಲಾಗಿದೆ. ಹೌದು, ಮಲಾಯ್ ಭಾಷೆಯಲ್ಲಿ ನಮ್ಮ ಆಂಜನೇಯನನ್ನು ಹಂಡುಮಾನ್ ಎಂದು ಕರೆಯುತ್ತಾರೆ. ಅದೇ ಹೆಸರಿನಿಂದ ಅಂಡಮಾನ್ ದ್ವೀಪಕ್ಕೆ ಈ ಹೆಸರು ಬರಲಾಗಿದೆ. ಇನ್ನು ನಿಕೋಬಾರ್ ಎಂಬುದು ನಕ್ಕವರಂ ಎಂಬ ತಮಿಳು ಭಾಷೆಯ ಪದದಿಂದ ತೆಗೆದುಕೊಳ್ಳಲಾಗಿದೆ. ಎಂದರೆ ನಗ್ನರಿರುವ ಭೂಮಿ ಎಂದರ್ಥ ಎಂದು 1050 ಎಡಿಯ ತಂಜಾವೂರ್ ಶಾಸನದಲ್ಲಿ ಕೆತ್ತಲಾಗಿದೆ. ನಿಕೋಬಾರ್‌ನಲ್ಲಿ ಕಾಡುಮನುಷ್ಯರು ನಗ್ನರಾಗಿರುವುದು ಇದಕ್ಕೆ ಕಾರಣ.

2. ದ್ವೀಪದಲ್ಲಿ ಅಂಡಮಾನೀಸ್ ಅಥವಾ ನಿಕೋಬಾರೀಸ್ ಭಾಷೆ ಇಲ್ಲ

ನಿಮಗೆ ಆಶ್ಚರ್ಯವಾಗಬಹುದು, ಆದರೆ ಇಲ್ಲಿ ಅತ್ಯಂತ ಹೆಚ್ಚಾಗಿ ಬಳಕೆಯಾಗುವ ಭಾಷೆ ಬೆಂಗಾಳಿ. ನಂತರದಲ್ಲಿ ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆ ಮಾತನಾಡುತ್ತಾರೆ. ಅಂಡಮಾನ್ ಕ್ರಿಯೋಲ್ ಹಿಂದಿಯನ್ನು ಕೂಡಾ ವಾಣಿಜ್ಯ ಭಾಷೆಯಾಗಿ ಇಲ್ಲಿ ಬಳಸಲಾಗುತ್ತದೆ. 

ಜಗತ್ತಿನ ಎತ್ತರದ ಯುದ್ಧಭೂಮಿಯಲ್ಲಿ ಯೋಧರ ಬದುಕು ಹೇಗಿರುತ್ತದೆ ಗೊತ್ತಾ?

3. ಕಚಲ್ ದ್ವೀಪದಲ್ಲಿ ಈ ಸಹಸ್ರಮಾನದ ಮೊದಲ ಸೂರ್ಯೋದಯವಾಗಿದ್ದು!

ರಾಯಲ್ ಗ್ರೀನ್‌ವಿಚ್ ಲ್ಯಾಬೋರೇಟರಿ ಹೇಳುವವರೆಗೂ ನಿಕೋಬಾರ್ ದ್ವೀಪದ ಸಮೀಪ ಇರುವ ಕಚಲ್ ದ್ವೀಪದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಭೂಮಿಯ ಮೇಲೆ 2000 ಸಹಸ್ರಮಾನದಲ್ಲಿ ಮೊದಲ ಸೂರ್ಯನ ಕಿರಣಗಳನ್ನು ಪಡೆಯುವ ಮನುಷ್ಯರಿಲ್ಲದ ಮೊದಲ ಸ್ಥಳ ಕಚಲ್ ದ್ವೀಪ ಎಂದು ಲ್ಯಾಬೋರೇಟರಿ ಹೇಳಿತ್ತು. 2000ನೇ ಇಸವಿಯಲ್ಲಿ ಭಾರತವು ಕಚಲ್‌ನಲ್ಲಾದ ಮೊದಲ ಸೂರ್ಯೋದಯದ ನೆನಪಿಗಾಗಿ ಅದನ್ನು ಬಿಂಬಿಸುವ ಸ್ಟಾಂಪ್ ಒಂದನ್ನು ತಂದಿದೆ. 

4. ಜಗತ್ತಿನ ಅತಿ ದೊಡ್ಡ ಸಮುದ್ರ ಆಮೆಗಳ ತವರು

ಹಾಕ್ಸ್‌ಬಿಲ್, ಹಸಿರು ಆಮೆ ಹಾಗೂ ಲೆದರ್‌ಬ್ಯಾಕ್ ಎಂದು ಕರೆಸಿಕೊಳ್ಳುವ ಅತಿ ದೊಡ್ಡ ಸಮುದ್ರ ಆಮೆಗಳ ತವರಾಗಿರುವ ನಿಕೋಬಾರ್ ದ್ವೀಪವು, ಇದೇ ಕಾರಣಕ್ಕೆ ಜಾಗತಿಕವಾಗಿ ಪ್ರಾಮುಖ್ಯತೆ ಪಡೆದಿದೆ. 

5. ಪೂರ್ವ ಶಿಲಾಯುಗದ ಸಮುದಾಯವಿನ್ನೂ ಇಲ್ಲಿ ಬದುಕಿದೆ!

ಜಗತ್ತಿನಲ್ಲೇ ಬಹಳ ಪ್ರತ್ಯೇಕವಾಗಿ ವಾಸ ಮಾಡುತ್ತಿರುವ, ನಾಗರಿಕ ಪ್ರಪಂಚದೊಂದಿಗೆ ಬೆರೆಯಲಿಚ್ಛಿಸದ ಆದಿವಾಸಿಗಳು ಉತ್ತರ ಸೆಂಟಿನೆಲ್ ದ್ವೀಪವನ್ನು ತಮ್ಮ ತವರಾಗಿಸಿಕೊಂಡು ಅಲ್ಲಿನ ಸ್ವಾಮ್ಯತೆ ಕಾಪಾಡಿಕೊಂಡಿದ್ದಾರೆ. ಸುಮಾರು 300 ಸಂಖ್ಯೆಯಲ್ಲಿರುವ ಪೂರ್ವ ಶಿಲಾಯುಗಕ್ಕೆ ಸೇರಿದ ಈ ಸೆಂಟಿನೆಲೀಸ್, ನಾಗರಿಕ ಜಗತ್ತಿನ ಯಾರೊಬ್ಬರೇ ತಮ್ಮ ದ್ವೀಪಕ್ಕೆ ಕಾಲಿರಿಸಿದರೂ ತಮ್ಮ ಬಿಲ್ಲು ಬಾಣ ಪ್ರಯೋಗಿಸಿ ಅವರ ಕತೆ ಮುಗಿಸುವಷ್ಟು ಅಪಾಯಕಾರಿಯಾಗಿದ್ದಾರೆ. ಆಫ್ರಿಕಾದಿಂದ ಬಂದ ಮೊದಲ ಮಾನವ ಜೀವಿಗಳ ನೇರ ತಲೆಮಾರು ಇವರೆಂದು ನಂಬಲಾಗಿದ್ದು, 60,000 ವರ್ಷಗಳಿಗಿಂತಲೂ ಹಿಂದಿನಿಂದ ಇವರು ಅಂಡಮಾನ್ ದ್ವೀಪಗಳಲ್ಲಿ ವಾಸವಾಗಿದ್ದಾರೆ. 

ಸುಖ ಪ್ರಯಾಣಕ್ಕೆ ಸಪ್ತ ಸೂತ್ರಗಳು!

6. ಡುಗಾಂಗ್ ಈ ದ್ವೀಪಸಮೂಹಗಳ ರಾಜ್ಯ ಪ್ರಾಣಿ

ದಪ್ಪನೆಯ ಗಿಡ್ಡ ಕಾಲಿನ, ಉಭಯವಾಸಿ ಸಮುದ್ರ ಹಸು ಎಂದೆನಿಸಿಕೊಳ್ಳುವ ಡುಗಾಂಗ್ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ರಾಜ್ಯ ಪ್ರಾಣಿ. ಇಲ್ಲಿನ ಸಮುದ್ರಗಳೊಳಗಿನ ಹುಲ್ಲುಗಳನ್ನು ತಿಂದು ಬದುಕುವ ಡುಗಾಂಗ್‌ಗಳು ರಿಚೀ ಪರ್ಯಾಯ ದ್ವೀಪ, ನಾರ್ಥ್ ರೀಫ್, ಲಿಟಲ್ ಅಂಡಮಾನ್ ಹಾಗೂ ನಿಕೋಬಾರ್‌ನ ಕೆಲವೆಡೆಗಳೆಲ್ಲಿ ಕಾಣಸಿಗುತ್ತವೆ. 

7. ಮೀನುಗಾರಿಕೆಗಿಲ್ಲಿ ಅವಕಾಶವಿಲ್ಲ

ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ಸುಮಾರು ನಾಲ್ಕು ದಶಕಗಳಿಂದ ವಾಣಿಜ್ಯ ಉದ್ದೇಶಕ್ಕಾಗಿ ಮೀನುಗಾರಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗಾಗಿಯೇ ಈ ಸಮುದ್ರದ ನೀರಿನಲ್ಲಿ ಮೀನುಗಳು ಪೂರ್ಣ  ವಯಸ್ಸಾದ ಬಳಿಕವೇ ಸಾಯುತ್ತವೆ. ಅಷ್ಟೇ ಅಲ್ಲ, ಈ ನೀರಿನಲ್ಲಿ ಡಾಲ್ಫಿನ್‌ಗಳು, ತಿಮಿಂಗಿಲ, ಡುಗಾಂಗ್ಸ್, ಸಮುದ್ರ ಆಮೆ, ಸೇಲ್ಫಿಶ್ ಮುಂತಾದವು ಹೆಚ್ಚಿನ ಸಂಖ್ಯೆಯಲ್ಲಿ ನಿಶ್ಚಿಂತವಾಗಿ ವಾಸ ಮಾಡುತ್ತಿವೆ.

ಹಂಪಿ: ದೇವಸ್ಥಾನ ನೋಡುವುದ ಬಿಟ್ಟು ಇನ್ನೇನು ಮಾಡ್ಬಹುದು?

8. ಭಾರತದ ಏಕೈಕ ಜೀವಂತ ಜ್ವಾಲಾಮುಖಿ ಇಲ್ಲಿದೆ

ಬ್ಯಾರೆನ್ ಐಲ್ಯಾಂಡ್ ಕೇವಲ ಭಾರತದ ಏಕೈಕ ಜೀವಂತ ಜ್ವಾಲಾಮುಖಿಯಷ್ಟೇ ಅಲ್ಲ, ದಕ್ಷಿಣ ಏಷ್ಯಾದಲ್ಲಿ ಇದು ಒಂದೇ ಇರುವುದು. ಪೋರ್ಟ್ ಬ್ಲೇರ್‌ನಿಂದ ಈಶಾನ್ಯಕ್ಕೆ 135 ಕಿಲೋಮೀಟರ್ ದೂರದಲ್ಲಿ ಇರುವ 3 ಕಿಲೋಮೀಟರ್ ಉದ್ದದ ದ್ವೀಪದಲ್ಲಿ ಈ ಜ್ವಾಲಾಮುಖಿ ಇದೆ.  9. 20 ರುಪಾಯಿ ನೋಟಿನಲ್ಲಿರುವುದು ಅಂಡಮಾನ್ ನಿಕೋಬಾರ್ ದ್ವೀಪದ ಚಿತ್ರ ಯಾವತ್ತಾದರೂ 20 ರುಪಾಯಿ ನೋಟಿನಲ್ಲಿರುವ ಚಿತ್ರವನ್ನು ಗಮನಿಸಿದ್ದೀರಾ? ಹಸಿರಿನಿಂದ ತುಂಬಿದ ತೀರ ಪ್ರದೇಶ ಈ ಕೆಂಪು ನೋಟಿನಲ್ಲಿದ್ದು, ಇದು  ನಾರ್ಥ್ ಬೇ ಐಲ್ಯಾಂಡ್‌ನದ್ದಾಗಿದೆ. 

click me!