ಭಾರತಕ್ಕೆ ಎಂಜಿ ಮೋಟಾರ್ ಗ್ರ್ಯಾಂಡ್ ಎಂಟ್ರಿ! ಹುಟ್ಟಿಸಿದೆ ಸಂಚಲನ

By Web DeskFirst Published Dec 1, 2018, 5:43 PM IST
Highlights

ನೀವು ಚೀನಾದಲ್ಲಿ ಓಡಾಡುತ್ತಿದ್ದರೆ ಅಲ್ಲಿ ನಿಮ್ಮ ಕಣ್ಣಿಗೆ ಬೀಳುವ ಐದರಲ್ಲಿ ಒಂದು ಕಾರು ಅಲ್ಲಿನ ಶಾಂಘೈ ಅಟೋಮೋಟಿವ್ ಇಂಡಸ್ಟ್ರಿ ಕಾರ್ಪೋರೇಷನ್ (ಎಸ್‌ಎಐಸಿ) ಕಂಪನಿಯದ್ದಾಗಿರುತ್ತದೆ. ಅಷ್ಟು ದೊಡ್ಡ ಕಂಪನಿ ಅದು. ಇದೀಗ ಎಸ್‌ಎಐಸಿ ಅಧೀನದ ಎಂಜಿ ಮೋಟಾರ್ ಭಾರತಕ್ಕೆ ಬಂದಿದೆ. 2019ರಲ್ಲಿ ಎಂಜಿ ಮೋಟಾರ್ ಸಿ-ಸೆಗ್‌ಮೆಂಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ. ಈ ಸಂದರ್ಭದಲ್ಲಿ ಕಂಪನಿ ಕುರಿತು, ಆ ಕಂಪನಿಗಳ ಕಾರಿನ ಕುರಿತ ವರದಿ ಇಲ್ಲಿದೆ

ಭಾರತೀಯರ ಸದ್ಯದ ಫೇವರಿಟ್ ಕಾರುಗಳು ಅಂದ್ರೆ ಮಧ್ಯಮ ಗಾತ್ರದ ಎಸ್‌ಯುವಿಗಳು. ಅತ್ತ ದೊಡ್ಡವೂ ಅಲ್ಲದ ಇತ್ತ ಸಣ್ಣವೂ ಅಲ್ಲದ ಎಸ್‌ಯುವಿಗಳು ತಟ್ಟನೆ ಗಮನ ಸೆಳೆಯುತ್ತಿವೆ. ಅದಕ್ಕಾಗಿಯೇ ಬಹುತೇಕ ಕಾರು ಕಂಪನಿಗಳು ಆ ವಿಭಾಗಕ್ಕೆ ಕಣ್ಣಿಟ್ಟಿವೆ ಮತ್ತು ಅವರವರ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಕಾರು ಉತ್ಪಾದನೆ ಮಾಡುತ್ತಲೂ ಇವೆ. ಈ ವಿಭಾಗದಲ್ಲಿ ಸದ್ಯ ಭಾರತದಲ್ಲಿರುವ ಎಲ್ಲಾ ಕಾರು ಕಂಪನಿಗಳಿಗೆ ಭಾರಿ ಸ್ಪರ್ಧೆ ನೀಡಲು ಕಂಪನಿಯೊಂದು ದೇಶದೊಳಗೆ ಬಲಗಾಲಿಟ್ಟು ಬಂದಿದೆ. ಅದರ ಹೆಸರು ಎಂಜಿ ಮೋಟಾರ್. ಪೂರ್ತಿ ಹೆಸರು ಮಾರಿಸ್ ಗ್ಯಾರೇಜಸ್ ಮೋಟಾರ್.

ಈ ಸಂಸ್ಥೆ ಮುಂದಿನ ವರ್ಷದ ಮಧ್ಯಂತರದಲ್ಲಿ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಲಿದೆ. ಮೂಲತಃ ಇದು ಬ್ರಿಟಿಷ್ ಕಂಪನಿ. ಆದರೆ ಈಗ ಚೀನಾದ ಶಾಂಘೈ ಅಟೋಮೋಟಿವ್ ಇಂಡಸ್ಟ್ರಿ ಕಾರ್ಪೋರೇಷನ್(ಎಸ್‌ಎಐಸಿ) ಸಂಸ್ಥೆಯ ಒಡೆತನದಲ್ಲಿದೆ. ಚೀನಾದಲ್ಲಿ ಎಸ್‌ಎಐಸಿ ಅತ್ಯಂತ ದೊಡ್ಡ ಕಾರು ಕಂಪನಿ. ಎಷ್ಟು ದೊಡ್ಡದು ಎಂದರೆ ಕಳೆದ ವರ್ಷ ಈ ಕಂಪನಿಯ 70 ಲಕ್ಷ ಕಾರುಗಳು ಮಾರಾಟವಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಕಾರುಗಳ ಮೇಲೆ ಚೀನಾದವರಿಗೆ ಭಾರೀ ಪ್ರೀತಿ. ಇಂಥಾ ಕಂಪನಿ ಇದೀಗ ಭಾರತಕ್ಕೆ ಬಂದಿದೆ.

ಗುಜರಾತ್‌ನಲ್ಲಿ ಉತ್ಪಾದನಾ ಘಟಕ ಈ ಸಂಸ್ಥೆ ಚೀನಾದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಕಾರು ಉತ್ಪಾದನೆ ಹೊಂದಿದೆ. ಅಲ್ಲಿ ಅನೇಕ ಕೆಲಸ ರೋಬೋಟ್‌ಗಳ ಮೂಲಕವೇ ನಡೆಯುತ್ತಿದೆ. ಅಂಥದ್ದೇ ಅತ್ಯಾಧುನಿಕ ಕಾರು ಉತ್ಪಾದನಾ ಘಟಕವನ್ನು ಗುಜರಾತ್‌ನ ಹಲೋಲ್ ನಲ್ಲಿ ಸ್ಥಾಪಿಸಲಾಗಿದೆ. ಈಗಾಗಲೇ 300 ಮಂದಿಗೆ ಕೆಲಸ ಸಿಕ್ಕಿದೆ. ನಿಧಾನಕ್ಕೆ 1500 ಮಂದಿಗೆ ಉದ್ಯೋಗ ನೀಡುವ ಯೋಜನೆ ಕಂಪನಿಗಿದೆ. ಕಡಿಮೆ ಬೆಲೆಯಲ್ಲಿ ಒಳ್ಳೆಯ ಕಾರು ನೀಡಬೇಕು ಅನ್ನುವುದು ಕಂಪನಿ ಆಲೋಚನೆ. ಹಾಗಾಗಿ ಸಂಪೂರ್ಣ ಕಾರು ಭಾರತದಲ್ಲೇ ಉತ್ಪಾದನೆಯಾಗಲಿದೆ. ಅದ್ಭುತ ಉತ್ಪಾದನಾ ಘಟಕ ರೆಡಿಯಾಗಿದೆ. ಆರಂಭದಲ್ಲಿ ವರ್ಷಕ್ಕೆ 80000 ಕಾರು ತಯಾರಿಸುವ ಘಟಕ ಸಿದ್ಧವಾಗಲಿದೆ. ಮುಂದೆ ಅದು ವರ್ಷಕ್ಕೆ 2 ಲಕ್ಷ ಕಾರು ಉತ್ಪಾದಿಸುವಂತಹ ಘಟಕವನ್ನು ಸ್ಥಾಪಿಸಲಿದೆ.

ಇದನ್ನೂ ಓದಿ: ಪೇಟಿಎಂನಿಂದ ಬಳಕೆದಾರರಿಗೆ ಹೊಸ ಸೌಲಭ್ಯ

ಅಂದಾಜು ಬೆಲೆ ರು.20 ಲಕ್ಷ ಆಸುಪಾಸು:

ಈಗಾಗಲೇ ಮುಂದಿನ ವರ್ಷ ಎಸ್‌ಯುವಿ ಕಾರು ನೀಡುವುದಾಗಿ ಕಂಪನಿ ಘೋಷಿಸಿದೆ. ಆರಂಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಎಸ್‌ಯುವಿ ಬರಲಿದೆ. ಸದ್ಯಕ್ಕೆ ಈ ಕುರಿತು ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ 7 ಸೀಟ್‌ಗಳ ಎಸ್‌ಯುವಿ ತಯಾರಿಸಬಹುದು ಎನ್ನಲಾಗಿದೆ. 

ಎಲ್ಲರೂ ತಿರುಗಿ ನೋಡುವ ಹಾಗೆ ಎಂಟ್ರಿ ನೀಡಬೇಕು ಅಂತ ಕಂಪನಿ ಬಯಸಿರುವುದರಿಂದ ಬೆಲೆಯೂ ಕಡಿಮೆ ಇರಬಹುದು. ಒಂದು ಮೂಲದ ಪ್ರಕಾರ ಬೆಲೆ ರು.20 ಲಕ್ಷ ಆಸುಪಾಸು ಇರಬಹುದು. ಇದರ ಗಾತ್ರ ನೋಡಿದರೆ ಹ್ಯೂಂಡೈನ ಟಕ್ಸನ್ ಕಾರಿಗೆ ಭಾರೀ ಸ್ಪರ್ಧೆಯೊಡ್ಡುವುದು ನಿಶ್ಚಿತ ಎನ್ನಲಾಗಿದೆ.

ಅದ್ಭುತ ಕಾರು, ಸೂಪರ್ ಟೆಕ್ನಾಲಜಿ ಎಂಜಿ ಮೋಟಾರ್ ಕಂಪನಿ ಭಾರತದಲ್ಲಿ ಬಿಡುಗಡೆ ಮಾಡುತ್ತದೆ ಎನ್ನಲಾದ ಎಸ್ ಯುವಿಯನ್ನೇ ಹೋಲುವ ಎಸ್‌ಯುವಿಗಳು ಚೀನಾದಲ್ಲಿ ಸೂಪರ್‌ಹಿಟ್ ಆಗಿವೆ. ಅದರಲ್ಲಿ ಒಂದು ಎಸ್‌ಯುವಿಯ ಹೆಸರು ಎಂಜಿ ಎಚ್‌ಎಸ್. ಈ ಎಸ್‌ಯುವಿ ಡ್ರೈವ್ ಮಾಡುವ ಅವಕಾಶವನ್ನು ಕಂಪನಿ ಒದಗಿಸಿತ್ತು. ಈ ಎಸ್‌ಯುವಿಯನ್ನು ಒಮ್ಮೆ ನೋಡಿದರೆ ಸಾಕು ಥಟ್ ಅಂತ ಅದರ ಮೇಲೆ ಪ್ರೀತಿ ಹುಟ್ಟುತ್ತದೆ. ಲವ್ ಅಟ್ ಫಸ್ಟ್ ಸೈಟ್. ಅಷ್ಟು ಚೆಂದದ ವಿನ್ಯಾಸ. ಯಾವಾಗ ಕಾರಿನ ಡ್ರೈವಿಂಗ್ ಸೀಟ್ ಮೇಲೆ ಕೂರುತ್ತೇವೋ ಆಗ ಆ ಪ್ರೀತಿ ಎರಡು ಪಟ್ಟಾಗುತ್ತದೆ.

ಕಾಲ ಕಳೆದಂತೆ ಪ್ರೀತಿಸಿದವರು ಬದಲಾಗಿ ಅವರ ಮೇಲೆ ಪ್ರೀತಿ ಕಡಿಮೆಯಾಗಬಹುದು. ಆದರೆ ಈ ಕಾರಿನ ಮೇಲೆ ಡ್ರೈವ್ ಮಾಡ್ತಾ ಮಾಡ್ತಾ ಲವ್ವ ಜಾಸ್ತಿಯಾಗುತ್ತಾ ಹೋಗುತ್ತದೆ. ಅದಕ್ಕೆ ಕಾರಣ ಈ ಎಸ್‌ಯುವಿಯಲ್ಲಿ ಇರುವ ಅತ್ಯಾಧುನಿಕ ತಂತ್ರಜ್ಞಾನ. ಯಾವ ರಸ್ತೆಯಲ್ಲೇ ಓಡಿಸಿ, ಎಷ್ಟು ವೇಗವಾಗಿ ಬೇಕಾದರೂ ಓಡಿಸಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ನಿಲ್ಲಿಸಬಹುದು. ಐಸ್ ರಸ್ತೆಯಲ್ಲಿರಲಿ, ಮಣ್ಣು ರಸ್ತೆಯಿರಲಿ, ಗುಡ್ಡವಿರಲಿ, ಕಲ್ಲಿರಲಿ ಮರಳಿರಲಿ ಎಲ್ಲಿ ಬೇಕಾದರೂ ತಕ್ಷಣ ಬ್ರೇಕ್ ಹಾಕಿದರೂ ಕಾರು ಅಲ್ಲಾಡುವುದಿಲ್ಲ. ಅಂಥಾ ಶಕ್ತಿಶಾಲಿ ಕಾರು ಅದು. ಸೇಫ್ಟಿಗಂತೂ ದೊಡ್ಡ ಪ್ರಾಧಾನ್ಯತೆ. ಭಾರಿ ಶಕ್ತಿ ಇರುವ ದೇಹ ಮತ್ತು ಹೃದಯ ಈ ಕಾರುಗಳಿಗೆ ಇದೆ.

ಸಾಮಾನ್ಯವಾಗಿ ಲಕ್ಷುರಿ ಕಾರುಗಳಲ್ಲಿ ಕ್ರೂಸ್ ಕಂಟ್ರೋಲ್ ಫೀಚರ್ ಇರುತ್ತದೆ. ಅಂದ್ರೆ ಒಮ್ಮೆ ಗಂಟೆಗೆ ಇಂತಿಷ್ಟು ಅಂತ ವೇಗ ಸೆಟ್ ಮಾಡಿ ಇಟ್ಟುಬಿಟ್ಟರೆ ಅದೇ ವೇಗದಲ್ಲಿ ಕಾರು ಹೋಗುತ್ತಿರುತ್ತದೆ. ಗಂಟೆಗೆ 50 ಕಿಮೀ ವೇಗಕ್ಕೆ ಸೆಟ್ ಮಾಡಿದರೆ ಅಷ್ಟೇ ವೇಗವಾಗಿ ಕಾರು ಸಾಗುತ್ತಾ ಇರುತ್ತದೆ. ಆದರೆ ಈ ಎಸ್‌ಯುವಿಗಳಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ತಂತ್ರಜ್ಞಾನ ಇದೆ. ಕಾರು ಸಾಗುತ್ತಿದ್ದಂತೆಯೇ ಮುಂದಿನ ಕಾರು ನಿಧಾನವಾಯಿತು ಅಂತಿಟ್ಟುಕೊಂಡರೆ ನಾವು ಗಾಬರಿಯಾಗಬೇಕಾದ ಅವಶ್ಯಕತೆಯಿಲ್ಲ. ನಮ್ಮ ಕಾರು ಆ ಕಾರಿನ ವೇಗಕ್ಕೆ ತಕ್ಕಂತೆ ವೇಗ ಬದಲಿಸಿಕೊಳ್ಳುತ್ತದೆ. ಹಾಗಾಗಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹಾಕಿಕೊಂಡರೆ ಯಾವುದೇ ಟೆನ್‌ಷನ್ ಇಲ್ಲದೆ ಕಾರನ್ನು ಓಡಿಸಬಹುದು. ಇಂಥಾ ಅನೇಕ ಇಂಟರೆಸ್ಟಿಂಗ್ ಫೀಚರ್‌ಗಳು ಈ ಎಸ್‌ಯುವಿನಲ್ಲಿದೆ. ವಿಶೇಷ ಅಂದ್ರೆ ಅತ್ಯಾಧುನಿಕ ತಾಂತ್ರಿಕತೆ ಹೊಂದಿರುವ ಎಂಜಿ ಕಾರುಗಳು ಭಾರತದಲ್ಲಿ ಬಿಡುಗಡೆಯಾಗಲಿವೆ. ಈ ತಾಂತ್ರಿಕತೆ ಬೇರೆ ಕಾರುಗಳಲ್ಲಿ ಇಲ್ಲ ಎನ್ನಲಾಗಿದೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಇಂಟರ್‌ನೆಟ್ :

ಈಗ ಭಾರತ ಮೊಬೈಲ್ ಕ್ಷೇತ್ರವನ್ನು ಆಳುತ್ತಿರುವುದು ಮೊಬೈಲ್ ಕಂಪನಿಗಳು. ಕಡಿಮೆ ಬೆಲೆಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ನೀಡಿ ಗ್ರಾಹಕರನ್ನು ತಮ್ಮ ತೆಕ್ಕೆಗೆಳೆದುಕೊಳ್ಳುವುದರಲ್ಲಿ ಚೀನಾ ಕಂಪನಿಗಳು ಎಕ್ಸ್‌ಪರ್ಟ್‌ಗಳು. ಅದೇ ಮಾದರಿ ಆಟೋಮೊಬೈಲ್ ಕ್ಷೇತ್ರದಲ್ಲೂ ಬರಲಿದೆ. ಅದು ಎಂಜಿ ಮೋಟಾರ್ ಮೂಲಕ. ಅದಕ್ಕೆ ಸಾಕ್ಷಿ ಈ ಕಂಪನಿಯ ಎಸ್‌ಯುವಿಗಳು.

ಪ್ರಸ್ತುತ ಜಗತ್ತನ್ನು ಆಳುತ್ತಿರುವುದು ಎರಡು ವಿಷಯಗಳು. ಒಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್. ಇನ್ನೊಂದು ಇಂಟರ್‌ನೆಟ್. ಇವೆರಡನ್ನೂ ಸಮರ್ಥವಾಗಿ ಬಳಸಿಕೊಳ್ಳುವುದು ಅವರಿಗೆ ಗೊತ್ತಿದೆ. ಎಂಜಿ ಮೋಟಾರ್ ಕಂಪನಿ ಕೂಡ ಅವೆರಡನ್ನೂ ಬಳಸಿಯೇ ಕಾರು ಉತ್ಪಾದನೆ ಮಾಡುತ್ತಿದೆ. ಅದರಿಂದ ಈ ಕಾರುಗಳು ಬೇಕೆ ಕಾರುಗಳಿಗಿಂತ ಸ್ವಲ್ಪ ವರ್ಷ ಮುಂದೆ ಇರುತ್ತವೆ. ಇನ್ನು ಹಾರ್ಡ್‌ವೇರ್ ಉತ್ಪನ್ನಗಳ ಬಗೆಗಂತೂ ಅವರನ್ನು ಪ್ರಶ್ನೆ ಮಾಡುವ ಹಾಗೆಯೇ ಇಲ್ಲ. ಅದಕ್ಕೆ ಪುರಾವೆ ಎಂಜಿ ಮೋಟಾರ್ ಕಾರುಗಳ ಇಂಟೀರಿಯರ್. ಎಷ್ಟು ಸೊಗಸಾಗಿ ಡಿಸೈನ್ ಮಾಡಿರುತ್ತಾರೆ ಎಂದರೆ ನೋಡುತ್ತಾ ಮರುಳಾಗಬೇಕು.

ಏಷ್ಯಾದ ಅತಿದೊಡ್ಡ ಟೆಸ್ಟ್ ಗ್ರೌಂಡ್:


ಎಂಜಿ ಮೋಟಾರ್‌ನವರು ಆಟೋಮೊಬೈಲ್ ಕ್ಷೇತ್ರವನ್ನು ಹೇಗೆ ಆಳುತ್ತಿದ್ದಾರೆ ಎಂದರೆ ಅವರಲ್ಲಿ ಈ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳೂ ಇವೆ. ಅದಕ್ಕೆ ಒಂದು ಉದಾಹರಣೆ ಗ್ವಾಂಡೆ ಪ್ರೂವಿಂಗ್ ಗ್ರೌಂಡ್. ಶಾಂಘೈನಲ್ಲಿ ಇರುವ ಏಷ್ಯಾದ ಅತಿ ದೊಡ್ಡ ಕಾರ್ ಟೆಸ್ಟ್ ಮೈದಾನ ಇದು. ಸುಮಾರು 5.67 ಚದರ ಕಿಲೋಮೀಟರ್ ವ್ಯಾಪ್ತಿಯ ಟೆಸ್ಟ್ ಗ್ರೌಂಡ್. ಈ ಗ್ರೌಂಡ್‌ನಲ್ಲಿ 60 ರೀತಿಯ ವಿಶಿಷ್ಟ ರಸ್ತೆಗಳಿವೆ. ಐಸ್ ರಸ್ತೆಗಳು, ಮರಳಿನ ರಸ್ತೆಗಳು, ಸಿಮೆಂಟ್ ರಸ್ತೆಗಳು, ಹಂಪ್ ಇರುವ ರಸ್ತೆಗಳು, ಗುಂಡಿ ಇರುವ ರಸ್ತೆಗಳು ಹೀಗೆ ಎಲ್ಲಾ ರೀತಿಯ ರಸ್ತೆಗಳಲ್ಲೂ ಎಂಜಿ ಮೋಟಾರ್ ಕಂಪನಿಯ ಕಾರುಗಳನ್ನು ಟೆಸ್ಟ್ ಮಾಡಲಾಗುತ್ತದೆ. ಕಾರಿನ ಶಕ್ತಿ, ಮೈಲೇಜು, ಅದರ ಸಸ್ಪೆನ್ಷನ್ ಶಕ್ತಿ ಎಲ್ಲವನ್ನೂ ಟೆಸ್ಟ್ ಮಾಡಲಾಗುತ್ತದೆ. ಅಲ್ಲಿ ಓಕೆ ಆದರೆ ಮಾತ್ರ ಕಾರು ಆಚೆ ಬರುತ್ತದೆ. 

ಪ್ರಪ್ರಥಮ ಎಲೆಕ್ಟ್ರಿಕ್ ಎಸ್‌ಯುವಿ ಬರಲಿದೆ:

ಆರಂಭದಲ್ಲಿ ಪೆಟ್ರೋಲ್, ಡೀಸೆಲ್ ಇಂಜಿನ್ ಎಸ್‌ಯುವಿ ಲೋಕಾರ್ಪಣೆಗೊಳಿಸಲಿರುವ ಕಂಪನಿ 2020ಕ್ಕೆ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಈಗಾಗಲೇ ಚೀನಾದಲ್ಲಿ ಎಲೆಕ್ಟ್ರಿಕ್ ಎಸ್‌ಯುವಿಗಳು ಸೂಪರ್‌ಡ್ಯೂಪರ್ ಹಿಟ್. ಹಾಗಾಗಿ ಆಟೋಮೊಬೈಲ್ ಕ್ಷೇತ್ರ ಈ ಕಾರನ್ನು ತೆರೆದ ಕಣ್ಣುಗಳಿಂದ ಕಾಯುತ್ತಿದೆ. ಭಾರತದಲ್ಲಿ ಈ ಕಾರು ಹಿಟ್ ಆಗಿಬಿಟ್ಟರೆ ಎಂಜಿ ಮೋಟಾರ್ ಬೇರೆ ಹಂತಕ್ಕೆ ಹೋಗುವುದು ಖಂಡಿತ.

ಕ್ಷಣಗಣನೆ ಆರಂಭ:
ಎಂಜಿ ಮೋಟಾರ್ ಕಾರು ಬಿಡುಗಡೆ ಮಾಡುವ ಕ್ಷಣಗಳಿಗೆ ಈಗಲೇ ನಿರೀಕ್ಷೆ ಆರಂಭವಾಗಿದೆ. ಈಗಾಗಲೇ 48 ಡೀಲರ್ ಗಳು ಕಂಪನಿಯ ಜೊತೆ ಸೇರಿದ್ದಾರೆ ಎನ್ನಲಾಗಿದೆ. ಇಂಟರೆಸ್ಟಿಂಗ್ ಅಂದ್ರೆ ಎಂಜಿ ಮೋಟಾರ್ ಕಂಪನಿ ದಕ್ಷಿಣ ಭಾರತದ ಕಾರು ಮಾರುಕಟ್ಟೆಯನ್ನು ಜಾಸ್ತಿ ಗಮನದಲ್ಲಿ ಇಟ್ಟುಕೊಂಡಿದೆ. ಯಾಕೆಂದರೆ ದಕ್ಷಿಣ ಭಾರತ ಲಕ್ಷುರಿ ಮತ್ತು ಎಸ್‌ಯುವಿ ಕಾರು ಮಾರುಕಟ್ಟೆಯ ಹಾಟ್ ಫೇವರಿಟ್. ಎಂಜಿ ಮೋಟಾರ್ ಕಾರುಗಳು ಕೆಲವೇ ತಿಂಗಳಲ್ಲಿ ಭಾರತದ ರಸ್ತೆಗೆ ಬರುವುದು ನಿಶ್ಚಿತ. ಮುಂದಿನದು ದೇವರ ಚಿತ್ತ.

-ಕನ್ನಡಪ್ರಭ ವಾರ್ತೆ ಶಾಂಘೈ

click me!