ಟೆಲಿಕಾಂ ಕಂಪನಿಗಳೇಕೆ ನಷ್ಟದಲ್ಲಿ ಮುಳುಗಿವೆ? ಜಿಯೋ ಕಾರಣವೋ?

By Kannadaprabha NewsFirst Published Nov 18, 2019, 5:02 PM IST
Highlights

ವೊಡಾಫೋನ್‌ ಭಾರತದ ಕಾರ್ಪೋರೇಟ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂದರೆ 50,922 ಕೋಟಿ ರು. ನಷ್ಟಎದುರಿಸಿದ್ದು, ಸರ್ಕಾರ ನೆರವಿಗೆ ಧಾವಿಸದಿದ್ದರೆ ಭಾರತದಲ್ಲಿ ತನ್ನ ಅಸ್ತಿತ್ವ ಕಷ್ಟಎಂದೂ ಹೇಳಿಕೊಂಡಿದೆ. ಇನ್ನು ಏರ್‌ಟೆಲ್‌ ಕೂಡ 23,044 ಕೋಟಿ ರು. ನಷ್ಟದಾಖಲಿಸಿದೆ.

ಇತ್ತೀಚೆಗೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ ಭಾರೀ ನಷ್ಟದಿಂದ ಮುಚ್ಚುವ ಹಂತ ತಲುಪಿತ್ತು. ಬಳಿಕ ಸರ್ಕಾರದ ಮಧ್ಯಪ್ರವೇಶದಿಂದಾಗಿ ಸದ್ಯ ಉಸಿರಾಡುತ್ತಿದೆ. ಇದರ ಬೆನ್ನಲ್ಲೇ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ವೊಡಾಫೋನ್‌ ಐಡಿಯಾ ಹಾಗೂ ಏರ್‌ಟೆಲ್ ಸಂಸ್ಥೆಗಳು ಎರಡನೇ ತ್ರೈಮಾಸಿಕದಲ್ಲಿ ಭಾರಿ ನಷ್ಟವನ್ನು ದಾಖಲಿಸಿವೆ.

ವೊಡಾಫೋನ್‌ ಭಾರತದ ಕಾರ್ಪೋರೇಟ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂದರೆ 50,922 ಕೋಟಿ ರು. ನಷ್ಟಎದುರಿಸಿದ್ದು, ಸರ್ಕಾರ ನೆರವಿಗೆ ಧಾವಿಸದಿದ್ದರೆ ಭಾರತದಲ್ಲಿ ತನ್ನ ಅಸ್ತಿತ್ವ ಕಷ್ಟಎಂದೂ ಹೇಳಿಕೊಂಡಿದೆ. ಇನ್ನು ಏರ್‌ಟೆಲ್‌ ಕೂಡ 23,044 ಕೋಟಿ ರು. ನಷ್ಟದಾಖಲಿಸಿದೆ.

ಕೊನೆಗೂ ಬಯಲಾಯ್ತು ಚಂದ್ರಯಾನ- 2 ವೈಫಲ್ಯದ ಹಿಂದಿನ ಕಾರಣ!

ಟೆಲಿಕಾಂ ಕಂಪನಿಗಳೂ ಕೂಡ ಭಾರತದ ಅರ್ಥವ್ಯವಸ್ಥೆಯ ಹಿಂದಿನ ಶಕ್ತಿಯಾಗಿದ್ದು, ಹೀಗೆ ಒಂದರ ಹಿಂದೊಂದು ಟೆಲಿಕಾಂ ಕಂಪನಿಗಳು ನಷ್ಟಅನುಭವಿಸುತ್ತಿರುವುದು ಸರ್ಕಾರವನ್ನು ಚಿಂತೆಗೀಡು ಮಾಡಿದೆ. ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬ ವಿಸ್ತೃತ ಮಾಹಿತಿ ಇಲ್ಲಿದೆ.

ಒಟ್ಟು 74,000 ಕೋಟಿ ನಷ್ಟ!

ವೊಡಾಫೋನ್‌ ಐಡಿಯಾ ಮತ್ತು ಭಾರತಿ ಏರ್‌ಟೆಲ್‌ ಟೆಲಿಕಾಂ ಕಂಪನಿಗಳು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದರೂ ಸೆಪ್ಟೆಂಬರ್‌ಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ಒಟ್ಟು 74,000 ಕೋಟಿ ರು. ನಷ್ಟವಾಗಿದೆ ಎಂದು ಹೇಳಿಕೊಂಡಿವೆ. ಸೆಪ್ಟೆಂಬರ್‌ಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ವೊಡಾಫೋನ್‌ ಇಂಡಿಯಾ 50,921 ಕೋಟಿ ನಷ್ಟಅನುಭವಿಸಿದ್ದರೆ, ಏರ್‌ಟೆಲ್‌ 23,045 ಕೋಟಿ ನಷ್ಟವುಂಟಾಗಿದೆ ಎಂದು ಹೇಳಿದೆ.

ತ್ರೈಮಾಸಿಕದಲ್ಲಿ ಭಾರತದ ಕಾರ್ಪೋರೇಟ್‌ ಕಂಪನಿಯೊಂದು ಇಷ್ಟೊಂದು ದೊಡ್ಡ ಮಟ್ಟದ ನಷ್ಟಅನುಭವಿಸಿದ್ದು ಇದೇ ಮೊದಲು. 2018ರ ಡಿಸೆಂಬರ್‌ನಲ್ಲಿ ಟಾಟಾ ಮೋಟಾರ್‌ 26,961 ಕೋಟಿ ನಷ್ಟವುಂಟಾಗಿದೆ ಎಂದಿತ್ತು. ವೊಡಾಫೋನ್‌ ಕಳೆದ ವರ್ಷದ ತ್ರೈಮಾಸಿಕದಲ್ಲಿಯೂ 4,974 ಕೋಟಿ ನಷ್ಟಅನುಭವಿಸಿತ್ತು.

2019ರ ಜೂನ್‌ನಲ್ಲೂ 4,874 ಕೋಟಿ ರು. ನಷ್ಟಅನುಭವಿಸಿತ್ತು. ಕುಮಾರಮಂಗಲಂ ಬಿರ್ಲಾ ಅವರ ಐಡಿಯಾ ಕಂಪನಿಯನ್ನು ವೊಡಾಫೋನ್‌ ಇಂಡಿಯಾದಲ್ಲಿ ವಿಲೀನ ಮಾಡಿದ ಬಳಿಕ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿತ್ತು. ಆದಾಗ್ಯೂ ವಿಲೀನ ಮಾಡಿದಾಗಿನಿಂದ ಕಂಪನಿ ನಷ್ಟದಲ್ಲೇ ಸಾಗಿದೆ.

ವೊಡಾಫೋನ್‌ಗೆ 50000 ಕೋಟಿ ನಷ್ಟ!

ನಷ್ಟಕ್ಕೆ ಕಾರಣ ಏನು?

ಏರ್‌ಟೆಲ್‌ ಹಾಗೂ ವೊಡಾಫೋನ್‌ ಕಂಪನಿಗಳ ನಷ್ಟಕ್ಕೆ ಸುಪ್ರೀಂಕೋರ್ಟ್‌ ಆದೇಶ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಪ್ರಕರಣದಲ್ಲಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ತರಂಗಾಂತರ ಬಳಕೆ ಮತ್ತು ಲೆಸನ್ಸ್‌ ಶುಲ್ಕವನ್ನು ದಂಡ, ಬಡ್ಡಿ ಸಮೇತ ಪಾವತಿಸಬೇಕೆಂದು ಇತ್ತೀಚೆಗೆ ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಈ ಉದ್ದೇಶಕ್ಕೆ ಅವುಗಳು ತಮ್ಮ ಆದಾಯದ ಬಹುಭಾಗವನ್ನು ತೆರಬೇಕಾಗಿ ಬಂದಿದೆ. ಹೀಗಾಗಿ ಅವುಗಳ ನಷ್ಟಪ್ರಮಾಣ ಅಧಿಕವಾಗಿದೆ. ಭಾರ್ತಿ ಏರ್‌ಟೆಲ್‌, ವೊಡಾಫೋನ್‌, ಎಂಟಿಎನ್‌ಎಲ್‌ ಮತ್ತು ಬಿಎಸ್‌ಎನ್‌ಎಲ್‌ ಸೇರಿದಂತೆ ಪ್ರಮುಖ ದೂರ ಸಂಪರ್ಕ ಕಂಪನಿಗಳು ಪರವಾನಗಿ ಶುಲ್ಕ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ 92,642 ಕೋಟಿ ರು. ಬಾಕಿ ಉಳಿಸಿಕೊಂಡಿವೆ. ಅದರಲ್ಲಿ ವೊಡಾಫೋನ್‌ 62,187 ಕೋಟಿ ಮತ್ತು ಏರ್‌ಟೆಲ್‌ 44,150 ಕೋಟಿ ಪಾವತಿಸಬೇಕಿದೆ.

ಎಜಿಆರ್‌ ಅಂದರೆ ಏನು?

ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜೊತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್‌ (ಒಟ್ಟು ಆದಾಯ) ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್‌ನಲ್ಲಿ ಒಂದಷ್ಟುಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸನ್ಸ್‌ ಶುಲ್ಕ ಎಂದೂ ಕರೆಯಲಾಗುತ್ತದೆ. ಇದರ ಜೊತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

ಜಿಯೋ ಕಾಲಿಟ್ಟಾಗಿನಿಂದ ನಷ್ಟ

3 ವರ್ಷದ ಹಿಂದೆ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಭಾರತದ ಟೆಲಿಕಾಂ ಮಾರುಕಟ್ಟೆಗೆ ಲಗ್ಗೆ ಇಟ್ಟು, ಅತ್ಯಂತ ಕಡಿಮೆ ದರದಲ್ಲಿ ಕರೆ ಮತ್ತು ಡೇಟಾ ಸೌಲಭ್ಯವನ್ನು ನೀಡಿ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿತು. ಹೊಸದಾಗಿ ಪ್ರಾರಂಭವಾಗಿದ್ದರೂ ಸದ್ಯ 30 ಕೋಟಿ ಬಳಕೆದಾರರನ್ನು ಜಿಯೋ ಒಳಗೊಂಡಿದೆ. ಪರಿಣಾಮ ಇತರೆ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಕಳೆದುಕೊಂಡು ನಷ್ಟದತ್ತ ಸಾಗಿದವು.

ಹೀಗಿರುವಾಗಲೇ ಸುಪ್ರೀಂಕೋರ್ಟ್‌ ಎಜಿಆರ್‌ ಅಸ್ತ್ರ ಪ್ರಯೋಗಿಸಿತು. ಇದು ಟೆಲಿಕಾಂ ಕಂಪನಿಗಳನ್ನು ಸಂಪೂರ್ಣ ನಷ್ಟದತ್ತ ಕೊಂಡೊಯ್ದಿತು. ಮಾರುಕಟ್ಟೆಯಲ್ಲಿ ಕಳೆದ 3 ವರ್ಷಗಳಿಂದ ಜಿಯೋ ಅಬ್ಬರ ಜೋರಾಗಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಸೇವೆಗಳನ್ನು ನೀಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಭಾರತದಲ್ಲಿ ವೊಡಾಫೋನ್‌ ಮುಚ್ಚುತ್ತಾ?

ವೊಡಾಫೋನ್‌ ಭಾರತದಲ್ಲಿ ತನ್ನ ಉದ್ಯಮವನ್ನು ಮುಚ್ಚಿದರೂ ಮುಚ್ಚಬಹುದು ಎಂಬ ವರದಿಗಳಿವೆ. ಇದಕ್ಕೆ ಪುಷ್ಟಿನೀಡುವಂತೆ ಸ್ವತಃ ವೊಡಾಫೋನ್‌ ಕೇಂದ್ರ ಸರ್ಕಾರ ನೆರವಿಗೆ ಬಾರದಿದ್ದರೆ ಭವಿಷ್ಯದಲ್ಲಿ ನಮ್ಮ ಇರುವಿಕೆ ಅನುಮಾನ ಎಂದು ಹೇಳಿದೆ. ಕೇವಲ ಎಜಿಆರ್‌ ಹೊರೆ ಮಾತ್ರವಲ್ಲದೆ ವೊಡಾಫೋನ್‌ ಪ್ರತಿ ತಿಂಗಳು ತನ್ನ ಲಕ್ಷಾಂತರ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಮಾರುಕಟ್ಟೆಯಲ್ಲಿಯೂ ಬೇಡಿಕೆ ಇಳಿಮುಖವಾಗುತ್ತಿದೆ.

ಈ ಎಲ್ಲದರ ಪರಿಣಾಮ ವೊಡಾಫೋನ್‌ ಆರ್ಥಿಕ ಸ್ಥಿತಿ ಮೇಲೆ ಭಾರೀ ಹೊಡೆತ ಬಿದ್ದಿದೆ. ಒಂದು ವೇಳೆ ಭಾರತದಲ್ಲಿ ವೊಡಾಫೋನನ್ನು ಮುಚ್ಚಿದರೆ ಭಾರತದ ಬ್ಯಾಂಕಿಂಗ್‌ ಮತ್ತು ಆರ್ಥಿಕ ವಲಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಸದ್ಯ ಭಾರತ ತೀವ್ರ ಆರ್ಥಿಕ ಹಿಂಜರಿತ ಅನುಭವಿಸುತ್ತಿದೆ. ಈ ಸಂದರ್ಭದಲ್ಲಿ ವೊಡಾಫೋನನ್ನು ಭಾರತದಲ್ಲಿ ಮುಚ್ಚಿದರೆ ಸಾವಿರಾರು ನೌಕರರು ಬೀದಿಗೆ ಬಂದು ನಿರುದ್ಯೋಗ ಸಮಸ್ಯೆ ಮತ್ತಷ್ಟುಹೆಚ್ಚುತ್ತದೆ. ಆದರೆ ವೊಡಾಫೋನ್‌ ಬಳಕೆದಾರರು ಚಿಂತಿಸಬೇಕಿಲ್ಲ. ಏಕೆಂದರೆ ಗ್ರಾಹಕರು ಬೇರೊಂದು ನೆಟ್‌ವರ್ಕ್ಗೆ ವಲಸೆ ಹೋಗಬಹುದು. ನಿಮ್ಮ ಫೋನ್‌ ನಂಬರ್‌ ಬದಲಿಸಬೇಕಾಗಿಲ್ಲ.

ಡಿಜಿಟಲ್‌ ಇಂಡಿಯಾಗೆ ದೊಡ್ಡ ಪೆಟ್ಟು

ಭಾರತದ ಡಿಜಿಟಲ್‌ ಇಂಡಿಯಾ ಕನಸು ನೆಲೆ ನಿಂತಿರುವುದೇ ಟೆಲಿಕಾಂ ಸೆಕ್ಟರ್‌ಗಳ ಮೇಲೆ. ಆದರೆ ಭಾರತದ ಡಿಜಿಟಲ್‌ ಇಂಡಿಯಾ ಕನಸನ್ನು ನನಸು ಮಾಡಲು ಎಷ್ಟುಟೆಲಿಕಾಂ ಕಂಪನಿಗಳು ಶಕ್ತವಾಗಿವೆ ಎಂಬುದಕ್ಕೆ ಉತ್ತರ ಬಹುಶಃ ನಿರಾಸೆಯುಂಟು ಮಾಡುತ್ತದೆ. ಏಕೆಂದರೆ ಭಾರತದಲ್ಲಿ ಜಿಯೋ ಹೊರತಾಗಿ ಬಹುತೇಕ ಎಲ್ಲಾ ಟೆಲಿಕಾಂ ಕಂಪನಿಗಳು ನಷ್ಟದಿಂದ ಮುನ್ನಡೆಯುತ್ತಿವೆ. ಇದಕ್ಕೆ ಮುಖ್ಯ ಕಾರಣ ಸರ್ಕಾರದ ಅಸ್ಥಿರ ನಿಯಂತ್ರಣಾ ವ್ಯವಸ್ಥೆ ಎಂಬುದು ತಜ್ಞರ ಅಭಿಮತ. ಟೆಲಿಕಾಂ ಕಂಪನಿಗಳ ಬೆನ್ನೆಲುಬೇ ಡಿಜಿಟಲ್‌ ಸವೀರ್‍ಸ್‌ ಮತ್ತು ಷೇರುದಾರರು. ಆದರೆ ನಷ್ಟದಲ್ಲಿ ಸಾಗುತ್ತಿರುವುದರಿಂದ ಷೇರುದಾರರು ಷೇರು ಖರೀದಿಗೆ ಮುಂದಾಗುತ್ತಿಲ್ಲ. ಇದು ಭಾರತದ 5 ಟ್ರಿಲಿಯನ್‌ ಡಾಲರ್‌ ಕನಸಿಗೂ ತೊಡಕಾಗುವುದರಲ್ಲಿ ಸಂಶಯವಿಲ್ಲ.

ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ, ಏರ್‌ಟೆಲ್‌ ಪ್ರಾಬಲ್ಯ?

ಒಂದು ವೇಳೆ ತೀವ್ರ ನಷ್ಟದಿಂದಾಗಿ ವೊಡಾಫೋನ್‌ ಭಾರತದಲ್ಲಿ ತನ್ನ ವ್ಯವಹಾರ ಸ್ಥಗಿತಗೊಳಿಸಿದರೆ ಭಾರತೀಯ ಟೆಲಿಕಾಂ ಮಾರುಕಟ್ಟೆಕೇವಲ ದ್ವಿಸ್ವಾಮ್ಯದ ಮಾರುಕಟ್ಟೆಯಾಗಲಿದೆ. ಅಂದರೆ ಜಿಯೋ ಮತ್ತು ಏರ್‌ಟೆಲ್‌ ಮಾತ್ರ ಉಳಿಯಲಿವೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಕೂಡ ನಷ್ಟದಲ್ಲಿ ಮುಂದುವರೆಯುತ್ತಿರುವುದರಿಂದ ಅವು ಪುನಶ್ಚೇತನಗೊಂಡರೂ ಅದಕ್ಕೆ ಸಾಕಷ್ಟುಸಮಯ ಹಿಡಿಯುತ್ತದೆ. ಆದರೆ, ಏಕಸ್ವಾಮ್ಯ ಮತ್ತು ದ್ವಿಸ್ವಾಮ್ಯ ಯಾವುದೇ ಮಾರುಕಟ್ಟೆಯ ಬೆಳವಣಿಗೆ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಅಲ್ಲ.

ಬಿಎಸ್‌ಎನ್‌ಎಲ್‌ ಕೂಡ ನಷ್ಟದಲ್ಲಿ

ಭಾರೀ ಪ್ರಮಾಣದಲ್ಲಿ ವ್ಯವಹಾರ ಹೊಂದಿದ್ದ ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂ ಸಂಸ್ಥೆಗಳ ಪೈಪೋಟಿಗೆ ಸಿಲುಕಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ. 2015-16ರಲ್ಲಿ ನಿಗಮ 4,859 ಕೋಟಿ, 2016-17ರಲ್ಲಿ 4,793 ಕೋಟಿ, 2017-18ರಲ್ಲಿ 7,993 ಕೋಟಿ, 2018-19ರಲ್ಲಿ 14,202 ಕೋಟಿ ನಷ್ಟಹೊಂದಿದೆ ಎಂದು ಸಂಸತ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದರ ಪುನಶ್ಚೇತನಕ್ಕೆ ಮುಂದಾದ ಕೇಂದ್ರ ಸರ್ಕಾರ ಎಂಟಿಎನ್‌ಎಲ್‌ ಮತ್ತು ಬಿಎಸ್‌ಎನ್‌ಎಲ್‌ಗಳನ್ನು ವಿಲೀನ ಮಾಡಿ, 69000 ಕೋಟಿ ಉತ್ತೇಜನಾ ಪ್ಯಾಕೇಜ್‌ ಘೋಷಿಸಿದೆ. ಹೀಗಾಗಿ ಬಿಎಸ್‌ಎನ್‌ಎಲ್‌ ಅಲ್ಪ ಮಟ್ಟಿಗೆ ಉಸಿರಾಡುತ್ತಿದೆ.

ಬೇರೆ ಟೆಲಿಕಾಂ ನೆಟ್‌ವರ್ಕ್ಗಳೊಂದಿಗೆ ಪೈಪೋಟಿ ನಡೆಸಲು 4ಜಿ ತಂತ್ರಜ್ಞಾನ ಸಂಪರ್ಕವನ್ನು ಕೇಂದ್ರ ಸರ್ಕಾರ ತನ್ನ ಖರ್ಚಿನಲ್ಲೇ ಬಿಎಸ್‌ಎನ್‌ಎಲ್‌ಗೆ ಒದಗಿಸುವುದಾಗಿ ಹೇಳಿದೆ. ಆದರೆ ತೀವ್ರ ನಷ್ಟಕ್ಕೆ ಸಿಲುಕಿದ್ದ ಬಿಎಸ್‌ಎನ್‌ಎಲ್‌ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಕಷ್ಟುಕಾಲಾವಕಾಶ ಬೇಕಾಗುತ್ತದೆ.

ಜಿಯೋ ಒಂದೇ ಲಾಭದಾಯಕವಾಗಿ ನಡೆಯುತ್ತಿದೆ!

ರಿಲಯನ್ಸ್‌ ಜಿಯೋ ಭಾರತದ ಹೊಸ ಹಾಗೂ ಅತ್ಯಂತ ಲಾಭದಾಯಕ ಟೆಲಿಕಾಂ ಕಂಪನಿ. ಭಾರತದ ಟೆಲಿಕಾಂ ಕ್ಷೇತ್ರದ ಗೇಮ… ಚೇಂಜರ್‌ ಎಂದೇ ಹೆಸರಾಗಿರುವ ಜಿಯೋ ಕಂಪನಿಯ ನಿವ್ವಳ ಲಾಭದಲ್ಲಿ ಈ ಬಾರಿಯೂ ಏರಿಕೆ ಕಂಡುಬಂದಿದೆ.

ಕಳೆದ ಡಿಸೆಂಬರ್‌ 2018ರ ಅವಧಿಯಲ್ಲಿ ಜಿಯೋ ನಿವ್ವಳ ಲಾಭ ಶೇ.65ರಷ್ಟುಏರಿಕೆ ಕಂಡು ಒಟ್ಟು 831 ಕೋಟಿ ರು. ಆಗಿತ್ತು. ಪ್ರಸಕ್ತ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 990 ಕೋಟಿ ಲಾಭ ಗಳಿಸಿದ್ದಾಗಿ ಘೋಷಿಸಿಕೊಂಡಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಕರೆ ಹಾಗೂ ಡೇಟಾ ಸೌಲಭ್ಯ ಒದಗಿಸುತ್ತಿರುವುದರಿಂದ ಗ್ರಾಹಕರು ಜಿಯೋದತ್ತ ವಾಲುತ್ತಿದ್ದಾರೆ.

- ಕೀರ್ತಿ ತೀರ್ಥಹಳ್ಳಿ 

click me!