ಗಾಂಧಿ-ನೆಹರು ಓಕೆ! ಸಾವರ್ಕರ್ ಯಾಕೆ? ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನಾ? ಹೇಡಿನಾ?

By Suvarna NewsFirst Published May 28, 2020, 4:05 PM IST
Highlights

ದೇಶ ಕಂಡ ಅಪ್ರತಿಮ ಸ್ವಾಂತತ್ರ್ಯ ಹೋರಾಟಗಾರರಲ್ಲಿ ವೀರ ಸಾವರ್ಕರ್ ಸಹ ಒಬ್ಬರು. ಇಂಥ ದೇಶ ಭಕ್ತನ ಹೆಸರನ್ನು ರಸ್ತೆಯೊಂದಕ್ಕೆ ಇಡಲು ಹೊರಟಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ತಮ್ಮ ಸರಕಾರದಲ್ಲಿ ಕಂಡ ಕಂಡ ರಸ್ತೆಗಳಿಗೆ ನೆಹರು, ಗಾಂಧಿ ಕುಟುಂಬಸ್ಥರ ಹೆಸರು ನಾಮಕರಣ ಮಾಡಿುರವ ಕಾಂಗ್ರೆಸ್‌, ಸಾವರ್ಕರ್ ಅಂದರ ಏಕೆ ಉರಿದು ಬೀಳುತ್ತಿದೆ?

ಬೆಂಗಳೂರಿನ ರಸ್ತೆಯೊಂದಕ್ಕೆ ವೀರ ಸಾವರ್ಕರ್ ಹೆಸರಿಡುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಸಾವರ್ಕರ್ ಹೆಸರು ಕೇಳಿದರೆ ಸಾಕು ಉರಿದು ಬೀಳುವ ಕಾಂಗ್ರೆಸ್ ನಾಯಕರು, ಸಾವರ್ಕರ್ ವಿರೋಧಿ ಆಂದೋಲನವನ್ನ ಮುಂದುವರಿಸಿದ್ದಾರೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ ಅನ್ನೋದು ಕಾಂಗ್ರೆಸ್ನ ವಾದ. ಸಾವರ್ಕರ್, ಗಾಂಧಿ ಹತ್ಯೆಯ ಸಂಚುಕೋರರಲ್ಲೊಬ್ಬ ಅನ್ನೋ ಆರೋಪ ಕಾಂಗ್ರೆಸ್ನದ್ದು. ಸಾವರ್ಕರ್ ಮಹಾನ್ ದೇಶಪ್ರೇಮಿ ಎನ್ನುತ್ತಿದೆ ಬಿಜೆಪಿ. ಈ ಮಧ್ಯೆ ಒಂದಷ್ಟು ಜನ ನಮ್ಮ ರಸ್ತೆಗೆ ಕನ್ನಡಿಗರ ಹೆಸರಿಡೋದನ್ನ ಬಿಟ್ಟು ಸಾವರ್ಕರ್ ಹೆಸರಿಡೋದು ಯಾಕೆ ಅನ್ನೋ ಪ್ರಶ್ನೆ ಎತ್ತಿದ್ದಾರೆ. ನೆಹರು ಕುಟುಂಬದ ಗಾಂಧಿಗಳ ಹೆಸರಿನ ಬೋರ್ಡುಗಳನ್ನ ಬೀದಿ ಬೀದಿಗಳಲ್ಲಿ ನೆಟ್ಟಾಗ ಸುಮ್ಮನಿದ್ದವರಿಗೆ ಈಗ ಕನ್ನಡಿಗರ ಹೆಸರಿಡಬೇಕು ಅನ್ನೋದು ನೆನಪಾಗಿದೆ. ಇದರ ಹಿಂದೆ ರಾಜಕೀಯ ಅಜೆಂಡಾ ಬಿಟ್ಟರೆ ಬೇರೇನಿಲ್ಲ. ವೀರ ಸಾವರ್ಕರ್ ಹೆಸರು ಹೇಳಿದರೇ ಕೆಲವರು ಉರಿದು ಬೀಳುವುದ್ಯಾಕೆ..? ಸಾವರ್ಕರ್ ಸ್ವತಂತ್ರ್ಯ ಹೋರಾಟಗಾರನಲ್ಲವಾ..? ಬ್ರಿಟಿಷರ ಜತೆ ಸೇರಿದ್ದರಾ..? ಗಾಂಧಿ ಹತ್ಯೆ ಸಂಚಿನಲ್ಲಿ ಸಾವರ್ಕರ್ ಭಾಗಿಯಾಗಿದ್ದರಾ..? ಹಿಂದುತ್ವವನ್ನ ಪ್ರತಿಪಾದಿಸಿದ್ದೇ ಸಾವರ್ಕರ್ ಮಾಡಿದ ತಪ್ಪಾ..?  ಸಾವರ್ಕರ್ ಬಗ್ಗೆ ಇತಿಹಾಸ ಹೇಳೋದೇನು...

ಮಹಾನ್ ಕ್ರಾಂತಿಕಾರಿ ಸಾವರ್ಕರ್
ಕಿಚ್ಚು, ಆತ್ಮಾಭಿಮಾನ, ದೇಶಭಕ್ತಿ, ಸಮರ್ಪಣೆ, ಇವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್. ಬ್ರಿಟಿಷ್ ಸಾಮ್ರಾಜ್ಯಕ್ಕೆ ದಿಟ್ಟ ಸವಾಲಾಗಿ ನಿಂತು ದೇಶಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ, ಮತ್ತು ಆ ಕಾರಣಕ್ಕಾಗಿಯೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ, ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿ ವೀರ ಸಾವರ್ಕರ್.

ಸೇತುವೆಗೆ ಸಾವರ್ಕರ್ ಹೆಸರು: ಉರಿದುಬಿದ್ದ ಮಾಜಿ ಸಿಎಂಗಳು

ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನ ಜಗತ್ತಿಗೆ ಸಾರಿದ್ದರು..!
ವಿನಾಯಕ ದಾಮೋದರ ಸಾವರ್ಕರ್‌ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ 1883ರಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ ಚಳವಳಿಯಲ್ಲಿ ತಮ್ಮನ್ನ ತೊಡಗಿಸಿಕೊಂಡ ಸಾವರ್ಕರ್, ಬಾಲಗಂಗಾಧರ ತಿಲಕರು ಆರಂಭಿಸಿದ ಸ್ವರಾಜ್ಯ ಪಕ್ಷದ ಸದಸ್ಯರಾದ್ರು. 1906 ನೇ ಇಸವಿಯಲ್ಲಿ ಸಾವರ್ಕರ್ ಉನ್ನತ ಕಾನೂನು ವ್ಯಾಸಂಗಕ್ಕಾಗಿ ಲಂಡನ್ಗೆ ಹೋದರು. ಲಂಡನ್ನಿನಲ್ಲಿ ಓದುವಾಗಲೇ ಫ್ರೀ ಇಂಡಿಯಾ ಎಂಬ ಸಂಘಟನೆ ಮೂಲಕ ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನೆಲ್ಲಾ ಸಂಘಟಿಸಿ ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವೇ ತಮ್ಮ ದ್ಯೇಯ ಎಂದು ಸಾರಿದರು. ಬ್ರಿಟೀಷರು ಸಿಪಾಯಿ ದಂಗೆ ಎಂದು ಬಿಂಬಿಸಿದ್ದ ಹೋರಾಟವನ್ನ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ-1857 ಎಂಬ ಪುಸ್ತಕ ಬರೆದು ಜಗತ್ತಿಗೆ ಸಾರಿದವರು ಸಾವರ್ಕರ್. 

ಬ್ರಿಟಿಷ್ ಸೈನ್ಯಾಧಿಕಾರಿಯ ಹತ್ಯೆ,  ಸಾವರ್ಕರ್ ಬಂಧನ..!
ಸಾವರ್ಕರ್ ಅವರ ಹಿಂಬಾಲಕನಾಗಿದ್ದ ಕ್ರಾಂತಿಕಾರಿ ಮದನಲಾಲ್‌ ಧಿಂಗ್ರ ಬ್ರಿಟೀಷ್ ಇಂಡಿಯಾದ ಸೈನ್ಯಾಧಿಕಾರಿಯಾಗಿದ್ದ ಕರ್ಜನ್‌ ವೈಲಿಯನ್ನು ಲಂಡನ್ನಲ್ಲೇ ಹತ್ಯೆಗೈದ. ಈ ಹತ್ಯೆಯನ್ನು ಬೆಂಬಲಿಸಿ ಮಾತನಾಡಿದ್ದ ಸಾವರ್ಕರ್, ಮದನ್ಲಾಲ್ನನ್ನ ಹುತಾತ್ಮ ಹೋರಾಟಗಾರ ಎಂದು ಕರೆದಿದ್ದರು. ಲಂಡನ್ನಲ್ಲಿದ್ದುಕೊಂಡೇ ಭಾರತದಲ್ಲಿ ಸಶಸ್ತ್ರ ಹೋರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ ಸಾವರ್ಕರ್ ಅವರನ್ನ 1910ರಲ್ಲಿ ಪ್ಯಾರಿಸ್ನಲ್ಲಿ ಬಂಧಿಸಲಾಯಿತು. ಬಂಧನ ತಪ್ಪಿಸಿಕೊಳ್ಳಲೆಂದೇ ಸಾವರ್ಕರ್ ಲಂಡನ್ನಿಂದ ಪ್ಯಾರಿಸ್ಗೆ ಹೋಗಿ ಅಲ್ಲಿ ತಲೆಮರೆಸಿಕೊಂಡಿದ್ದರು. ಹಡಗಿನಲ್ಲಿ ಸಾವರ್ಕರ್ ಅವರನ್ನ ಭಾರತಕ್ಕೆ ಕರೆತರುತ್ತಿದ್ದಾಗ ಶೌಚಗೃಹದ ಕಿಟಕಿಯಿಂದ ಸಮುದ್ರಕ್ಕೆ ಹಾರಿ ನಾಲ್ಕೈದು ಮೈಲಿ ಈಜಿ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಬ್ರಿಟಿಷ್‌ ನೌಕಾಧಿಕಾರಿಗಳು ಸಾವರ್ಕರ್ ಅವರನ್ನ ಹಿಡಿದು ಭಾರತಕ್ಕೆ ಕರೆ ತಂದರು. 

ಸಾವರ್ಕರ್ಗೆ 50 ವರ್ಷ ಕರಿನೀರ ಶಕ್ಷೆ.
ಲಂಡನ್ನಿಂದ ಕರೆತಂದ ಸಾವರ್ಕರ್ ಅವರನ್ನ ಬಾಂಬೆಯ ಯರವಾಡ ಜೈಲಿನಲ್ಲಿಡಲಾಯ್ತು. ಅವರ ಮೇಲೆ ನಾಸಿಕ್ ಕಲೆಕ್ಟರ್ ಜಾಕ್ಸನ್ ಎಂಬುವರ ಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಲಾಯ್ತು. ಇದರ ಜತೆಗೆ ಬ್ರಿಟಿಷ್ ಚಕ್ರಾಧಿಪತ್ಯದ ವಿರುದ್ಧ ಷಡ್ಯಂತ್ರ ನಡೆಸಿದ ಆರೋಪವನ್ನ ತಲೆಗೆ ಕಟ್ಟಲಾಯ್ತು. 1911ರಲ್ಲಿ ಸಾವರ್ಕರ್ 28 ವರ್ಷ ವಯಸ್ಸಿನವರಾಗಿದ್ದಾಗ 50 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿ ಅವರನ್ನ ಅಂಡಮಾನ್ನ ಸೆಲ್ಯುಲರ್ ಜೈಲಿಗೆ ವರ್ಗಾವಣೆ ಮಾಡಲಾಯ್ತು..

ಸಾವರ್ಕರ್ ಹೆಸರು: ಬದಲಾಯಿಸುವ ಪ್ರಶ್ನೆಯೇ ಇಲ್ಲ

ಕರಿನೀರ ಕಠೋರ ಶಿಕ್ಷೆ ಅನುಭವಿಸಿದ್ದ ಸಾವರ್ಕರ್
ಅಂಡಮಾನ್ನ ಸೆಲ್ಯುಲರ್ ಜೈಲು ಆ ಕಾಲಕ್ಕೆ ಭೂಮಿಯ ಮೇಲಿನ ನರಕವಾಗಿತ್ತು. ಬ್ರಿಟಿಷರ ವಿರುದ್ಧ ಹೋರಾಟ ಸಂಘಟಿಸುತ್ತಿದ್ದ ಕ್ರಾಂತಿಕಾರಿಗಳನ್ನ ಈ ಜೈಲಿನಲ್ಲಿಟ್ಟು ಕೊಳೆಸಲಾಗ್ತಿತ್ತು. ಅಲ್ಲಿ ಹೊಲಸು ನೆಲದ ಮೇಲೆಯೇ ಜೀವನ, ಅದರ ಜತೆಗೆ ಕಾವಲುಗಾರರಿಂದ ಬಡಿಸಿಕೊಳ್ಳಬೇಕು. ಕೈಕಾಲುಗಳಿಗೆ ಬೇಡಿ. ಮನುಷ್ಯ ಮಾತ್ರರಾದವರು ತಿನ್ನಲು ಸಾಧ್ಯವಾಗದಂತಹ ಆಹಾರ, ಒರಟು ಬಟ್ಟೆಯ ತುಂಡು ಅಂಗಿ, ತುಂಡು ಚಡ್ಡಿ. ಸದಾ ಕಷ್ಟಗಳ ಬೆಟ್ಟದಡಿಯಲ್ಲಿ ವಾಸ. ತಿಂಗಳಿಗೂಮ್ಮೆ ಮೂರು ತಂಬಿಗೆ ನೀರಲ್ಲೇ ಸ್ನಾನ ಮುಗಿಸಬೇಕು. ಇಂತಹ ಜೈಲಿನಲ್ಲಿ ಸಾವರ್ಕರ್ ಅವರನ್ನ ಎಣ್ಣೆಯ ಗಾಣಕ್ಕೆ ಹೂಡಲಾಗ್ತಿತ್ತು. ಒಂದು ಬಾರಿಗೆ 30 ಪೌಂಡ್ ಎಣ್ಣೆ ಬರುವ ತನಕ ಗಾಣದಲ್ಲಿ ತಿರುಗಲೇಬೇಕು. ಇಂತಹ ಕ್ರೌರ್ಯದ ವಾತಾವರಣದಲ್ಲಿ 13 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದರು ಸಾವರ್ಕರ್.. 

ಕ್ಷಮಾಪಣೆ ಕೇಳಿ ಆರು ಪತ್ರ ಬರೆದಿದ್ದ ಸಾವರ್ಕರ್
ಬರೊಬ್ಬರಿ ಐವತ್ತು ವರ್ಷಗಳ ಘೋರ ಶಿಕ್ಷೆಗೆ ಗುರಿಯಾಗಿದ್ದ ಸಾವರ್ಕರ್ ಬ್ರಿಟೀಷ್ ಸರ್ಕಾರಕ್ಕೆ ಕ್ಷಮಾಪಣೆ ಕೋರಿ ಆರು ಪತ್ರಗಳನ್ನ ಬರೆದಿದ್ದರು. ತಮ್ಮ ಶಿಕ್ಷೆಯನ್ನ ಕಡಿತಗೊಳಿಸಿ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಐದು ಕ್ಷಮಾಪಣೆ ಮನವಿಗಳನ್ನ ತಿರಸ್ಕರಿಸಿದ್ದ ಬ್ರಿಟಿಷನ್ ಸರ್ಕಾರ 1924ರಲ್ಲಿ ಸಾವರ್ಕರ್ ಅವರನ್ನ ಹಲವು ಷರತ್ತುಗಳನ್ನ ಹಾಕಿ ಬಿಡುಗಡೆ ಮಾಡಿತು. ಸಾವರ್ಕರ್ ಅವರನ್ನ ಇವತ್ತು ಟೀಕಿಸುವವರಿಗೆ ಇದೇ ಆಧಾರ. ಬ್ರಿಟೀಷರಿಂದ ಕ್ಷಮೆ ಕೇಳಿದ ಸಾವರ್ಕರ್ ಹೇಡಿ ಎಂದು ಕಾಂಗ್ರೆಸ್ಸಿಗರು ಟೀಕಿಸುತ್ತಾರೆ. ಯಾವ ಕಾಂಗ್ರೆಸ್ಸಿಗರು ಇಂತಹ ಕ್ರೂರ ಶಿಕ್ಷೆ ಅನುಭವಿಸಿದ್ದಾರೆ ಹೇಳಿ..? ಐವತ್ತು ವರ್ಷ ನರಕದಂತಹ ಜೈಲಿನಲ್ಲೇ ಕೊಳೆತು ಸಾವರ್ಕರ್ ಸಾಯಬೇಕಿತ್ತೇ..? ಕ್ಷಮಾಪಣೆಯ ತಂತ್ರದ ಮೂಲಕ ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗುವುದು ಸಾವರ್ಕರ್ ಅವರ ಉದ್ದೇಶವಾಗಿತ್ತು.

ಹಿಂದೂ ಮಹಾಸಭಾ ಅಧ್ಯಕ್ಷರಾದ ಸಾವರ್ಕರ್
ಮೊಹಮದ್ ಅಲಿ ಜಿನ್ನಾ ಭಾರತದಲ್ಲಿ ಮುಸ್ಲಿಂ ಲೀಗ್ ಅನ್ನು ಬಲಪಡಿಸಿ, ಪ್ರತ್ಯೇಕ ದೇಶಕ್ಕಾಗಿ ಹೋರಾಟ ಆರಂಭಿಸಿದಾಗ, ಇದರ ವಿರುದ್ಧವಾಗಿ ರಾಜಕೀಯ ಹೋರಾಟಕ್ಕಿಳಿದವರು ಸಾವರ್ಕರ್. 1937ರಲ್ಲಿ ಸಾವರ್ಕರ್ ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆಯಾದರು. ಜಿನ್ನಾ ಮತ್ತು ಕಾಂಗ್ರೆಸ್ ಮಧ್ಯದ ಬಿನ್ನಾಭಿಪ್ರಾಯಗಳು ದೇಶದಲ್ಲಿ ಹಿಂದೂ-ಮುಸ್ಲಿಮರ ಮಧ್ಯೆ ಕಂದಕ ಸೃಷ್ಟಿಗೆ ಕಾರಣವಾಯ್ತು. ಮುಸ್ಲಿಮರನ್ನ ಗಾಂಧಿ ಅಗತ್ಯಕ್ಕಿಂತಲೂ ಹೆಚ್ಚಾಗಿ ಓಲೈಸುತ್ತಿದ್ದಾರೆ ಎಂಬ ಕಾರಣಕ್ಕೆ ಗಾಂಧೀಜಿಯ ಕಡು ಟೀಕಾಕಾರರಾಗಿದ್ದರು ಸಾವರ್ಕರ್. ಭಾರತದ ಸ್ವಾತಂತ್ರ್ಯ ಹೋರಾಟ ಗಾಂಧಿ ಕೇಂದ್ರಿತ ವಾಗುತ್ತಿರೋದನ್ನ ಸಾವರ್ಕರ್ ಬಹಿರಂತಗವಾಗಿ ವಿರೋಧಿಸುತ್ತಿದ್ದರು. ಗಾಂಧೀಜಿ ಕರೆ ನೀಡಿದ್ದ ಭಾರತ ಬಿಟ್ಟು ತೊಲಗಿ ಚಳುವಳಿಯನ್ನೂ ವಿರೋಧಿಸಿದ್ದ ಸಾವರ್ಕರ್, ಹಿಂದೂಗಳು ವಿಶ್ವಯುದ್ಧದಲ್ಲಿ ಬ್ರಿಟೀಷರನ್ನು ಬೆಂಬಲಿಸುವ ಮೂಲಕ ರಾಜಕೀಯ ಮತ್ತು ಮಿಲಿಟರಿ ಶಕ್ತಿಗಳಾಗಿ ರೂಪುಗೊಳ್ಳಬೇಕು. ಆ ನಂತರ ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟಕ್ಕಿಳಿಯಬೇಕು ಎಂದು ಪ್ರತಿಪಾದಿಸಿದ್ದರು..

ಅಖಂಡ ಭಾರತದ ವಿಭಜನೆಯ ಕಡು ವಿರೋಧಿಯಾಗಿದ್ದ ಸಾವರ್ಕರ್
ಗಾಂಧೀ, ನೆಹರು ಮತ್ತು ಸರ್ದಾರ್ ಪಟೇಲ್ ಭಾರತದ ವಿಭಜನೆಗೆ ಒಪ್ಪಿಕೊಂಡಿದ್ದನ್ನ ಸಾವರ್ಕರ್ ವಿರೋಧಿಸಿದ್ದರು.  ಭಾರತದ ವಿಭಜನೆ ಹಿಂದೂಸ್ಥಾನದ ಅಖಂಡತೆಯ ಮೇಲೆರಗಿದ ಗಲ್ಲುಶಿಕ್ಷೆ ಎಂದು ಖಂಡಿಸಿದ್ದರು ಸಾವರ್ಕರ್. . ಎರಡನೇ ಮಹಾಯುದ್ಧದಲ್ಲಿ ನಲುಗಿ ಹೋಗಿದ್ದ ಬ್ರಿಟೀಷರಿಗೆ ಭಾರತ ಬೇಡದ ಕೂಸಾಗಿತ್ತು. ಭಾರತವನ್ನ ಬಿಟ್ಟು ಕೈತೊಳೆದುಕೊಳ್ಳಬೇಕೆಂದುಕೊಂಡಿದ್ದ ಬ್ರಿಟೀಷರಿಗೆ ಅವತ್ತಿನ ಕಾಂಗ್ರೆಸ್ ನಾಯಕರಿಗಿದ್ದ ಅಧಿಕಾರ ದಾಹ, ಜಿನ್ನಾಗಿದ್ದ ಮುಸ್ಲಿಂ ದೇಶದ ವ್ಯಾಮೋಹ ಎಲ್ಲವೂ ಅರ್ಥವಾಗಿತ್ತು. ಅದರ ಪರಿಣಾಮ ಅಖಂಡ ಭಾರತ ವಿಭಜನೆಯಾಗಿ ಸ್ವಾತಂತ್ರ್ಯದ ಹೆಸರಲ್ಲಿ ಭಾರತ ಎರಡು ತುಂಡಾಯ್ತು..

ಹೇಡಿ ಸಾವರ್ಕರ್‌ಗೆ ನನ್ನನ್ನು ಹೋಲಿಸಬೇಡಿ: ದೊರೆಸ್ವಾಮಿ

ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಭಾಗಿಯಾಗಿದ್ದರಾ..?
ಗಾಂಧೀಜಿ ಹತ್ಯೆ ಸಂಚಿನಲ್ಲಿ ಸಾವರ್ಕರ್ ಭಾಗಿಯಾಗಿದ್ದರು ಅನ್ನೋದು ಹಲವು ಕಾಂಗ್ರೆಸ್ಸಿಗರು ಮತ್ತು ಕಮ್ಯುನಿಸ್ಟರ ಆರೋಪ. ಗಾಂಧಿಯನ್ನ ಕೊಂದ ನಾತೂರಾಮ್ ಗೋಡ್ಸೆ ಹಿಂದೂ ಮಹಾಸಭಾದ ಸದಸ್ಯನಾಗಿದ್ದ. ಸಾವರ್ಕರ್ ಹಿಂದೂ ಮಹಾಸಭಾದ ಪ್ರಶ್ನಾತೀತ ನಾಯಕರಾಗಿದ್ದರು, ದೇಶ ವಿಭಜನೆ ಮತ್ತು ಮುಸ್ಲಿಮರ ಅತಿಯಾದ ಓಲೈಕೆ ವಿಚಾರದಲ್ಲಿ ಗಾಂಧಿಯ ಕಡು ಟೀಕಾಕಾರರಾಗಿದ್ದ ಸಾವರ್ಕರ್ ಅವರಿಗೆ ಗಾಂಧಿ ಹತ್ಯೆಯ ಮಾಸ್ಟರ್ ಮೈಂಡ್ ಪಟ್ಟ ಕಟ್ಟಿ ಬಂಧಿಸಲಾಯ್ತು. ಗಾಂಧಿ ಹತ್ಯೆಗೂ ಮುನ್ನ ನಾತೂರಾಮ್ ಗೋಡ್ಸೆ ಮತ್ತು ಇತರ ಆರೋಪಿಗಳನ್ನ ಸಾವರ್ಕರ್ ಭೇಟಿಯಾಗಿದ್ದರು ಎಂದು ಆರೋಪಿಸಲಾಯ್ತು. ಆದ್ರೆ ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರ ಸಾಬೀತಾಗದೇ ಬಿಡುಗಡೆಯಾದ್ರು. ನ್ಯಾಯಾಲಯದಲ್ಲಿ ನಾತೂರಾಮ್ ಗೋಡ್ಸೆ ಗಾಂಧಿಯನ್ನು ಕೊಂದ ಸಂಪೂರ್ಣ ಜವಾಬ್ದಾರಿಯನ್ನ ತಾನೇ ಹೊರುತ್ತೇನೆ ಎಂದು ಸಾರಿ ಹೇಳಿದ್ದ.  

ಹಿಂದೂ ರಾಷ್ಟ್ರವಾದ ಪ್ರತಿಪಾದಿಸಿದ್ದ ಸಾವರ್ಕರ್
ವೀರ ಸಾವರ್ಕರ್ ಯಾವತ್ತಿಗೂ ಆರ್ಎಸ್ಎಸ್ನ ಸದಸ್ಯರಾಗಿರಲೇ ಇಲ್ಲ. ಹಿಂದೂ ಮಹಾಸಭಾದ ಪ್ರಶ್ನಾತೀತ ನಾಯಕರಾಗಿದ್ದ ಸಾವರ್ಕರ್ ಹಿಂದೂ ರಾಷ್ಟ್ರವಾದವನ್ನ ಬಲವಾಗಿ ಪ್ರತಿಪಾದಿಸಿದವರು. ಭಾರತದ ನೆಲವನ್ನ ಪುಣ್ಯಭೂಮಿ ಎಂದು ನಂಬಿರುವವರೆಲ್ಲರೂ ಹಿಂದೂಗಳೇ ಎಂದವರು. ಹಿಂದುತ್ವ ಅಂದಕೂಡಲೇ ಆತ ಮುಸ್ಲಿಂ ವಿರೋಧಿ ಎಂದು ಬಿಂಬಿಸೋ ರಾಜಕಾರಣ ಅವತ್ತಿಗೂ ಇತ್ತಲ್ಲ. ಆ ರಾಜಕಾರಣಕ್ಕೆ ಬಲಿಯಾಗಿ ಮುಸ್ಲಿಂ ವಿರೋಧಿ ಅನ್ನೋ ಕಳಂಕ ಹೊತ್ತುಕೊಂಡವರು ಸಾವರ್ಕರ್. ಅವರು ವಿರೋಧಿಸಿದ್ದು ಮುಸ್ಲಿಮರನ್ನಲ್ಲ.. ಮುಸ್ಲಿಂ ಓಲೈಕೆ ರಾಜಕಾರಣವನ್ನ, ದೇಶವನ್ನ ಒಡೆಯಲು ನಿಂತ ಮುಸ್ಲಿಂ ಲೀಗ್ ಅನ್ನ, ಮುಸ್ಲಿಂ ಮೂಲಭೂತವಾದವನ್ನ. 

ಸಾವರ್ಕರ್ ಅವರನ್ನ ಬಂಧಿಸಿದ್ದ ನೆಹರು ಸರ್ಕಾರ
ಗಾಂಧಿ ಹತ್ಯೆ ಪ್ರಕರಣದಲ್ಲಿ ಖುಲಾಸೆಯಾದ ನಂತರ ಸಾವರ್ಕರ್ ಅವರನ್ನ ರಾಜಕೀಯ ಚಟುವಟಿಕೆಗಳಿಂದ ದೂರವಿರುವಂತೆ ನೆಹರು ಸರ್ಕಾರ ನೋಡಿಕೊಂಡಿತ್ತು. ಸಾವರ್ಕರ್ ಮಾಡುತ್ತಿದ್ದ ಹಿಂದೂ ಕ್ರಾಂತಿಕಾರಿ ಭಾಷಣಗಳನ್ನೇ ಗುರಿಯಾಗಿಸಿಕೊಂಡು ಸಾವರ್ಕರ್ ಮೇಲೆ ಕೇಸು ದಾಖಲಿಸಿ ಬಂಧಿಸಿತ್ತು ನೆಹರು ಸರ್ಕಾರ. ಬಂಧನದಿಂದ ಬಿಡುಗಡೆಯಾದ ನಂತರವೂ ಸಾವರ್ಕರ್ ಹಿಂದುತ್ವವನ್ನ ಪ್ರತಿಪಾದಿಸುತ್ತಿದ್ದರು. ಅಸ್ಪೃಷ್ಯತೆಯನ್ನ ತೊಡೆದು ಹಾಕುವ ಕೆಲಸದಲ್ಲೂ ಸಾವರ್ಕರ್ ನಿರತರಾಗಿದ್ದರು..

ಸಾವರ್ಕರ್ ಕಾಲಿನ ಧೂಳಿಗೂ ದೊರೆಸ್ವಾಮಿ ಸಮವಲ್ಲ

ಆತ್ಮಹತ್ಯೆಯಲ್ಲ.. ಆತ್ಮಾರ್ಪಣೆ ಎಂದಿದ್ದ ಸಾವರ್ಕರ್..!
1963ರಲ್ಲಿ  ಪತ್ನಿ ಯಮುನಾ ಮೃತರಾದ ನಂತರ ಸಾವರ್ಕರ್ ಒಬ್ಬಂಟಿಯಾಗ್ತಾರೆ. 13 ವರ್ಷಗಳ ಅಂಡಮಾನ್ ಜೈಲಿನ ಘೋರ ಶಿಕ್ಷೆಯ ಪರಿಣಾಮ ವೃದ್ಧಾಪ್ಯದಲ್ಲಿ ಸಾವರ್ಕರ್ ಅವರನ್ನ ಹಿಂಡಿ ಹಾಕಿತ್ತು. 1966ರಲ್ಲಿ ದೇಹ ತ್ಯಾಗ ಮಾಡುವ ನಿರ್ಧಾರಕ್ಕೆ ಬಂದ ಸಾವರ್ಕರ್ ಅನ್ನ, ನೀರು, ಔಷಧ ಎಲ್ಲವನ್ನೂ ತ್ಯಜಿಸಿ ಆತ್ಮಾರ್ಪಣೆ ಮಾಡಿಕೊಂಡರು. ಸಾಯುವ ಮುನ್ನ ‘ಆತ್ಮಹತ್ಯೆಯಲ್ಲ.. ಆತ್ಮಾರ್ಪಣೆ’ ಎಂಬ ಲೇಖನ ಬರೆದಿದ್ದ ಸಾವರ್ಕರ್, ಜೀವನದ ಗುರಿ ಮುಗಿದ ಮೇಲೆ, ಸಮಾಜಕ್ಕೆ ಕೆಲಸ ಮಾಡುವ ಶಕ್ತಿ ಇಲ್ಲದ ಮೇಲೆ ಬದುಕು ಅಂತ್ಯಗೊಳಿಸುವುದೇ ಉಳಿದಿರುವ ದಾರಿ ಎಂದಿದ್ದರು..

- ಶಶಿಶೇಖರ ಪಿ, ಸುವರ್ಣ ನ್ಯೂಸ್

click me!