* ಮುಂಗಾರುಪೂರ್ವ ಮಳೆ ಅಬ್ಬರದಿಂದ ಕೃಷಿ ಚಟುವಟಿಕೆ ಚುರುಕು
* ಜೋಳ, ಹೆಸರು, ಸೂರ‍್ಯಕಾಂತಿ, ಹತ್ತಿ, ತಂಬಾಕು ಬಿತ್ತನೆ ಶುರು
* ರೈತರು ಕೃಷಿ ಇಲಾಖೆ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದು
ಸಂಪತ್ ತರೀಕೆರೆ
ಬೆಂಗಳೂರು(ಜೂ.09): ಪ್ರಸಕ್ತ ಸಾಲಿನ (2021-22ನೇ) ಸಾಲಿನ ಮುಂಗಾರು ಪೂರ್ವ ಹಂಗಾಮಿನಲ್ಲಿ ಸಾಮಾನ್ಯ ಮಳೆಗಿಂತ (105 ಮಿ.ಮೀ) ಉತ್ತಮ ಮಳೆಯಾಗಿದ್ದು (159 ಮಿ.ಮೀ) ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಮಿ ಸಿದ್ಧತೆ ಹಾಗೂ ಕಾರ್ಯಗಳು ಚುರುಕುಗೊಂಡಿದ್ದು, ಈವರೆಗೂ 3.06 ಲಕ್ಷ ಹೆಕ್ಟೇರ್‌ಗೂ ಅಧಿಕ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ.
ರಾಜ್ಯದಲ್ಲಿ ಕೃಷಿ ಚಟುವಟಿಕೆ ದೃಷ್ಟಿಯಿಂದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಪೂರ್ವ ಮುಂಗಾರು ಮಳೆಯಿಂದಾಗಿ ಮಂಡ್ಯ, ಚಾಮರಾಜನಗರ, ಹಾಸನ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಬೇಸಾಯ ಚುರುಗೊಂಡಿದ್ದು ಜೋಳ, ಹೆಸರು, ಉದ್ದು, ಆಲಸಂದೆ, ಎಳ್ಳು, ಸೂರ್ಯಕಾಂತಿ, ಹತ್ತಿ, ತಂಬಾಕು ಇತ್ಯಾದಿ ಬೆಳೆಗಳ ಬಿತ್ತನೆ ಆರಂಭಗೊಂಡಿದೆ.
ಕರಾವಳಿ, ಮಲೆನಾಡು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ನೈಋುತ್ಯ ಮಾರುತ ಮಳೆಯು ಪ್ರಾರಂಭವಾದ ನಂತರ ಭೂಮಿ ಸಿದ್ಧತೆ ಹಾಗೂ ಬಿತ್ತನೆ ಪ್ರಾರಂಭಗೊಂಡಿದ್ದು, ಮೇ ಅಂತ್ಯದ ವೇಳೆಗೆ ಸುಮಾರು 3.06 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಕನ್ನಡಪ್ರಭಕ್ಕೆ ಮಾಹಿತಿ ನೀಡಿದೆ.
ಕೂಡ್ಲಿಗಿ: ಬಿತ್ತನೆ ಬೀಜ ಖರೀದಿಗೆ ಲಾಕ್‌ಡೌನ್ ಅಡ್ಡಿ
ಏಕದಳ ಧಾನ್ಯಗಳು:
ನೀರಾವರಿ ಪ್ರದೇಶದಲ್ಲಿ ಭತ್ತ(3 ಸಾವಿರ ಹೆಕ್ಟೇರ್), ಮೆಕ್ಕೆಜೋಳ (1 ಸಾವಿರ ಹೆಕ್ಟೇರ್). ಮಳೆಯಾಶ್ರಿತ ಪ್ರದೇಶದಲ್ಲಿ ಭತ್ತ (8 ಸಾವಿರ ಹೆಕ್ಟೇರ್), ಜೋಳ (18 ಸಾವಿರ ಹೆಕ್ಟೇರ್), ಮೆಕ್ಕೆಜೋಳ (38 ಸಾವಿರ ಹೆಕ್ಟೇರ್), ಸಜ್ಜೆ (1 ಸಾವಿರ ಹೆಕ್ಟೇರ್), ತೃಣ ಧಾನ್ಯಗಳು(1 ಸಾವಿರ ಹೆಕ್ಟೇರ್) ಹೀಗೆ ಒಟ್ಟು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ (ಶೇ.2.25). ಕಳೆದ ವರ್ಷ ಇದೇ ವೇಳೆಗೆ ಕೇವಲ 61 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು.
ದ್ವಿದಳ ಧಾನ್ಯಗಳು:
ಮಳೆಯಾಶ್ರಿತ ಪ್ರದೇಶದಲ್ಲಿ ಈ ಬಾರಿ ತೊಗರಿ (2 ಸಾವಿರ ಹೆಕ್ಟೇರ್), ಉದ್ದು (10 ಸಾವಿರ ಹೆಕ್ಟೇರ್), ಹೆಸರು (25 ಸಾವಿರ ಹೆಕ್ಟೇರ್), ಅಲಸಂದೆ ಮತ್ತು ಇತರೆ (31 ಸಾವಿರ ಹೆಕ್ಟೇರ್), ಅವರೆ (1 ಸಾವಿರ ಹೆಕ್ಟೇರ್) ಸೇರಿದಂತೆ 69 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷದಲ್ಲಿ 99 ಸಾವಿರ ಹೆಕ್ಟೇರ್(ಶೇ.3.26)ನಲ್ಲಿ ಬಿತ್ತನೆಯಾಗಿತ್ತು.
ಎಣ್ಣೆ ಕಾಳುಗಳು:
ಶೇಂಗಾ (7 ಸಾವಿರ ಹೆಕ್ಟೇರ್), ಎಳ್ಳು (9 ಸಾವಿರ ಹೆಕ್ಟೇರ್), ಸೂರ್ಯಕಾಂತಿ (18 ಸಾವಿರ ಹೆಕ್ಟೇರ್), ಸೋಯಾ ಅವರೆ (1 ಸಾವಿರ ಹೆಕ್ಟೇರ್) ಸೇರಿದಂತೆ 36 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ.
ವಾಣಿಜ್ಯ ಬೆಳೆಗಳು:
ನೀರಾವರಿ ಪ್ರದೇಶದಲ್ಲಿ ಹತ್ತಿ (1 ಸಾವಿರ ಹೆಕ್ಟೇರ್), ಕಬ್ಬು (31 ಸಾವಿರ ಹೆಕ್ಟೇರ್). ಮಳೆಯಾಶ್ರಿತ ಪ್ರದೇಶದಲ್ಲಿ ಹತ್ತಿ (30 ಸಾವಿರ ಹೆಕ್ಟೇರ್), ಕಬ್ಬು (11 ಸಾವಿರ ಹೆಕ್ಟೇರ್), ತಂಬಾಕು (58 ಸಾವಿರ ಹೆಕ್ಟೇರ್) ಸೇರಿ 99 ಸಾವಿರ ಹೆಕ್ಟೇರ್(ಶೇ 9.37)ನಲ್ಲಿ ಬಿತ್ತನೆಯಾಗಿದೆ. ಹೀಗೆ ಮಳೆಯಾಶ್ರಿತ ಮತ್ತು ನೀರಾವರಿ ಒಟ್ಟು ಸೇರಿ 3.06 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.
ಗಂಗಾವತಿ: 14 ಲಕ್ಷ ಮೊತ್ತದ ಬೀಜ ದಾಸ್ತಾನು ಜಪ್ತಿ
135 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆ ಗುರಿ
2021-22ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 77 ಲಕ್ಷ ಹೆಕ್ಟೇರ್, ಹಿಂಗಾರಿನಲ್ಲಿ 28 ಲಕ್ಷ ಹೆಕ್ಟೇರ್ ಹಾಗೂ ಬೇಸಿಗೆ ಹಂಗಾಮಿನಲ್ಲಿ 5 ಲಕ್ಷ ಹೆಕ್ಟೇರ್ ಹೀಗೆ ಒಟ್ಟು 110 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಕೈಗೊಳ್ಳುವ ಗುರಿ ಹೊಂದಲಾಗಿದೆ. ಇದರಿಂದ 135.48 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳು ಮತ್ತು 15.23 ಲಕ್ಷ ಮೆಟ್ರಿಕ್ ಟನ್ ಎಣ್ಣೆ ಕಾಳುಗಳ ಉತ್ಪಾದನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.
ಕಳೆದ ಸಾಲಿನಲ್ಲಿ ಲಾಕ್‌ಡೌನ್ ಮತ್ತು ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದರೂ ಕೂಡಾ ರೈತರು ಉತ್ತಮ ಸಾಧನೆ ಮಾಡಿದ್ದರು. ಇದರಿಂದ ನಿರೀಕ್ಷೆಗಿಂತ ಹೆಚ್ಚು ಆಹಾರ ಧಾನ್ಯ ಉತ್ಪಾದನೆಯಾಗಿತ್ತು. ಈ ಬಾರಿಯು ಕೃಷಿ ಇಲಾಖೆ ರೈತರಿಗೆ ಅಗತ್ಯವಾದ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರವನ್ನು ಒದಗಿಸಲು ಬದ್ಧವಾಗಿದೆ. ರೈತರು ಕೃಷಿ ಇಲಾಖೆ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದು ಎಂದು ಕೃಷಿ ಇಲಾಖೆ ನಿರ್ದೇಶಕ ಡಾ. ಶ್ರೀನಿವಾಸ್ ತಿಳಿಸಿದ್ದಾರೆ.