ಕರ್ನಾಟಕ ನಾಗರಿಕ ಸೇವಾ ನಿಯಮ ‘16ಎ’ ರದ್ದತಿಯಿಂದ ಸಮಸ್ಯೆ, ಸಿ,ಡಿ ದರ್ಜೆ ಪೊಲೀಸರೇ ಮುಖ್ಯ ಟಾರ್ಗೆಟ್. ವರ್ಗಾವಣೆಯಿಲ್ಲದೆ ಪೊಲೀಸ್ ಸಿಬ್ಬಂದಿ ಹೈರಾಣು. ರಜೆ ಸಿಗದೆ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಲಕ್ಷಾಂತರ ಪೊಲೀಸ್ ಸಿಬ್ಬಂದಿ.
ಸಂದೀಪ್ ವಾಗ್ಲೆ
ಮಂಗಳೂರು (ಅ.17): ರಾಜ್ಯ ಸರ್ಕಾರದ ‘ಸಿ’ ಮತ್ತು ‘ಡಿ’ ಗ್ರೂಪ್ ನೌಕರರಿಗೆ ತಾವು ನೇಮಕಗೊಂಡ ಜಿಲ್ಲೆ (ಅಂದರೆ ನೇಮಕಾತಿಯಾದ ಘಟಕ)ಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆಯನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಿಂದಾಗಿ ವಿಶೇಷವಾಗಿ, ರಜೆ ಸಿಗದೆ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಲಕ್ಷಾಂತರ ಪೊಲೀಸ್ ಸಿಬ್ಬಂದಿ ಅಕ್ಷರಶಃ ಹೈರಾಣಾಗಿದ್ದಾರೆ. ಈ ಹಿಂದೆ, ಪೊಲೀಸ್ ಸಿಬ್ಬಂದಿ ತನ್ನ ಪತಿ/ ಪತ್ನಿ ಬೇರೆ ಜಿಲ್ಲೆಯಲ್ಲಿ ಸರ್ಕಾರಿ ಸೇವೆಯಲ್ಲಿದ್ದರೆ (ಪೊಲೀಸ್ ಅಥವಾ ಬೇರೆ ಇಲಾಖೆಯಾಗಿದ್ದರೂ) ಆ ಜಿಲ್ಲೆಗೆ ವರ್ಗಾವಣೆ ಪಡೆದುಕೊಳ್ಳಬಹುದಿತ್ತು. ಮಾತ್ರವಲ್ಲದೆ, ಸಾಮಾನ್ಯ ವರ್ಗಾವಣೆಯ ಮೂಲಕವೂ ಸ್ವಂತ ಜಿಲ್ಲೆಗೆ ತೆರಳಬಹುದಿತ್ತು. ಆದರೆ ಕಳೆದ ವರ್ಷ ಸರ್ಕಾರವು ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡಿ ನಿಯಮ ‘16ಎ’ಯನ್ನೇ ರದ್ದುಗೊಳಿಸಿದ್ದರಿಂದ ‘ಸಿ’ ಮತ್ತು ‘ಡಿ’ ದರ್ಜೆ ಸಿಬ್ಬಂದಿ ಶಾಶ್ವತವಾಗಿ ಬೇರೆ ಜಿಲ್ಲೆಗೆ ವರ್ಗಾವಣೆಯಾಗಿ ಹೋಗಲು ಸಾಧ್ಯವೇ ಇಲ್ಲದಂತಾಗಿದೆ. ತಿಂಗಳಾನುಗಟ್ಟಲೆ ತಮ್ಮ ಕುಟುಂಬದಿಂದ ದೂರ ಇರುವುದರಿಂದ ಇಡೀ ಪೊಲೀಸ್ ವ್ಯವಸ್ಥೆಯ ಕಾರ್ಯ ನಿರ್ವಹಣೆ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಎಲ್ಲ ಆದೇಶಗಳು ರದ್ದು: ಪೊಲೀಸ್ ಇಲಾಖೆಗೇ ಸಂಬಂಧಿಸಿದಂತೆ, ನೇಮಕಾತಿಯಾದ ಜಿಲ್ಲೆಯಲ್ಲಿ 7 ವರ್ಷ ಕರ್ತವ್ಯ ನಿರ್ವಹಿಸಿದ ಬಳಿಕ ಬೇರೆ ಜಿಲ್ಲೆಗೆ ವರ್ಗಾವಣೆ ಪಡೆಯಲು ನಾಲ್ಕೈದು ವರ್ಷಗಳ ಹಿಂದಷ್ಟೆಆದೇಶ ಹೊರಡಿಸಲಾಗಿತ್ತು. ಆದರೆ 2021ರ ಹೊಸ ಆದೇಶದಲ್ಲಿ ಇದನ್ನೂ ರದ್ದುಗೊಳಿಸಲಾಗಿದೆ. ಮಾತ್ರವಲ್ಲದೆ ಪತಿ/ಪತ್ನಿ ಪ್ರಕರಣದಲ್ಲೂ ವರ್ಗಾವಣೆ ರದ್ದುಗೊಳಿಸಿದೆ. ಹೀಗಾಗಿ ಸಿ ಮತ್ತು ಡಿ ಪೊಲೀಸ್ ಸಿಬ್ಬಂದಿ ತಮ್ಮ ಕುಟುಂಬವನ್ನು ದೂರದೂರಿನಲ್ಲಿ ಬಿಟ್ಟು ಶಾಶ್ವತವಾಗಿ ನೇಮಕಾತಿಯಾದ ಜಿಲ್ಲೆಯಲ್ಲೇ ಕೊಳೆಯುವಂತಾಗಿದೆ.
ಊರಿಗೆ ಹೋಗಲು ರಜೆ ಸಿಗಲ್ಲ!: ಈ ಹೊಸ ಆದೇಶ ಬಹುತೇಕ ಸರ್ಕಾರಿ ಇಲಾಖೆಗಳಿಗೆ ಅನ್ವಯಿಸುತ್ತದೆ. ಬೇರೆ ಇಲಾಖೆಗಳಲ್ಲಾದರೆ 2,4ನೇ ಶನಿವಾರ, ಭಾನುವಾರ, ಇತರ ರಜೆಗಳೆಲ್ಲ ಸೇರಿ ವರ್ಷಕ್ಕೆ ಏನಿಲ್ಲವೆಂದರೂ 140- 150ರಷ್ಟುರಜೆ ತೆಗೆಯುವ ಅವಕಾಶವಿದೆ. ಆ ರಜೆಯಲ್ಲಿ ಊರಿಗೆ ಹೋಗಬಹುದು, ಕುಟುಂಬದ ಯೋಗಕ್ಷೇಮ ನೋಡಿಕೊಳ್ಳಬಹುದು. ಆದರೆ ಆದರೆ ಪೊಲೀಸ್ ಇಲಾಖೆಯಲ್ಲಿ ಭಾನುವಾರ ಬಿಡಿ, ರಾಷ್ಟ್ರೀಯ ಆಚರಣೆಗಳು, ಹಬ್ಬ ಹರಿದಿನಗಳು ಮಾತ್ರವಲ್ಲದೆ ವೀಕ್ಲಿ ಆಫ್ ಕೂಡ ಸಿಗಲ್ಲ. ಅಪರೂಪಕ್ಕೆ ಒಂದೊಂದು ರಜೆ ಸಿಕ್ಕಿದರೂ ತಾನು ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಾನದಲ್ಲೇ ಇರಬೇಕು. ಆರೇಳು ತಿಂಗಳಿಗೊಮ್ಮೆ ನಾಲ್ಕೈದು ದಿನ ರಜೆ ಸಿಕ್ಕಿದರೆ ಅದೇ ಹೆಚ್ಚು! ಈ ಬಗ್ಗೆ ಪ್ರಶ್ನಿಸಬೇಕೆಂದರೆ ಪೊಲೀಸರು ಸಂಘಟನೆ ಕಟ್ಟುವಂತಿಲ್ಲ, ಪ್ರತಿಭಟನೆ ಮಾಡುವಂತಿಲ್ಲ!
ಖಿನ್ನತೆಯತ್ತ ಪೊಲೀಸರು!: ಹೊಸ ಆದೇಶ ಜಾರಿಯಾದ ಮೇಲೆ ಇದೇ ಕಾರಣ ಇಟ್ಟುಕೊಂಡು ಕೆಳ ಹಂತದ ಸಿಬ್ಬಂದಿ ಮೇಲೆ ಪೊಲೀಸ್ ಮೇಲಧಿಕಾರಿಗಳ ದಬ್ಬಾಳಿಕೆ ಹೆಚ್ಚಿದೆ. ಅದರಲ್ಲೂ ವರ್ಗಾವಣೆ ಆಗದೆ ನವ ವಿವಾಹಿತ ದಂಪತಿ, ಈಗಷ್ಟೇ ಮಗುವಾದ ದಂಪತಿಯ ಪಾಡಂತೂ ದೇವರಿಗೇ ಪ್ರೀತಿ. ನಾಗರಿಕರ ರಕ್ಷಣೆ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಿಬ್ಬಂದಿಗೆ ತಮ್ಮದೇ ಕುಟುಂಬದ ಭೇಟಿ- ರಕ್ಷಣೆಗೆ ಅವಕಾಶ ಸಿಗದೆ ಬಹಳಷ್ಟುಮಂದಿ ಪೊಲೀಸರು ಖಿನ್ನತೆಗೆ ಜಾರುತ್ತಿದ್ದಾರೆ. ಆದಷ್ಟುಬೇಗ ಈ ನರಕ ಯಾತನೆಯಿಂದ ಮುಕ್ತಿ ದೊರಕಿಸುವಂತೆ ಅಳಲು ತೋಡಿಕೊಂಡಿದ್ದಾರೆ.
ಪಿಎಸ್‌ಐ ನೇಮಕಾತಿ: ಪ್ರಶ್ನೆಪತ್ರಿಕೆ 1ರಲ್ಲೂ ಅಕ್ರಮ, ಬ್ಲೂಟೂತ್ ಬಳಕೆ ಪತ್ತೆ..!
ಎ, ಬಿ ದರ್ಜೆ ಅಧಿಕಾರಿಗಳಿಗಿಲ್ಲ ನಿರ್ಬಂಧ!: ಕರ್ನಾಟಕ ನಾಗರಿಕ ಸೇವಾ ನಿಯಮದ ‘16ಎ’ ರದ್ದುಗೊಳಿಸಿರುವ ಬಿಸಿ ‘ಎ’ ಮತ್ತು ‘ಬಿ’ ದರ್ಜೆ ಅಧಿಕಾರಿಗಳಿಗೆ ತಟ್ಟಿಲ್ಲ. ಎ ಮತ್ತು ಬಿ ದರ್ಜೆಯ ಅಧಿಕಾರಿಗಳು ರಾಜ್ಯಾದ್ಯಂತ ಎಲ್ಲಿಗೆ ಬೇಕಾದರೂ ವರ್ಗಾವಣೆ ಮಾಡಿಸಿಕೊಳ್ಳಬಹುದು. ಇವರಿಗೆ ಪತಿ/ ಪತ್ನಿ ವರ್ಗಾವಣೆಯೂ ಸಿಗುತ್ತದೆ. ಆದರೆ ಅನ್ಯಾಯ ಆಗಿರುವುದು ‘ಸಿ’ ಮತ್ತು ‘ಡಿ’ ದರ್ಜೆ ಸಿಬ್ಬಂದಿಗೆ ಮಾತ್ರ ಎನ್ನುವುದು ವ್ಯವಸ್ಥೆಯ ಲೋಪವನ್ನು ತೋರಿಸಿದೆ.
Shivamogga: ಕ್ರೀಡಾ ಸಾಧಕರು ಪೊಲೀಸ್ ಇಲಾಖೆಗೆ ಸೇರಲು ಶೇ.2 ಮೀಸಲಾತಿ
ಪೊಲೀಸ್ ಇಲಾಖೆಯಲ್ಲಿ ಬಹುತೇಕ ‘ಸಿ’ ಮತ್ತು ‘ಡಿ’ ದರ್ಜೆ ಸಿಬ್ಬಂದಿ ಬೇರೆ ಜಿಲ್ಲೆಗಳಲ್ಲಿ ನೇಮಕಾತಿ ಹೊಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲ ವರ್ಷಗಳ ಬಳಿಕವಾದರೂ ವರ್ಗಾವಣೆಯ ಮೂಲಕ ಕುಟುಂಬವನ್ನು ಸೇರುವ ನಿರೀಕ್ಷೆಯಿತ್ತು. ಆದರೆ ಕಳೆದ ವರ್ಷ ವರ್ಗಾವಣೆ ರದ್ದುಗೊಳಿಸಿದ್ದರಿಂದ ಈ ಎಲ್ಲ ಕನಸುಗಳು ಕನಸಾಗಿಯೇ ಉಳಿಯುವಂತಾಗಿದೆ. ಸರ್ಕಾರ ಮುತುವರ್ಜಿ ವಹಿಸಿ ಈ ಆದೇಶವನ್ನು ವಾಪಸ್ ತೆಗೆದುಕೊಂಡು ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು. ಕನಿಷ್ಠ ಪೊಲೀಸ್ ಇಲಾಖೆಯನ್ನಾದರೂ ಇದರಿಂದ ಮುಕ್ತಿಗೊಳಿಸಬೇಕು.
- ಹೆಸರು ಹೇಳಲಿಚ್ಛಿಸದ ಪೊಲೀಸ್ ಸಿಬ್ಬಂದಿ