Latest Videos

ಅಂಜಲಿ ಹತ್ಯೆ ಪ್ರಕರಣ: ನಮ್ಮ ಸರ್ಕಾರದಲ್ಲಿ ಎನ್‌ಕೌಂಟರ್ ಆಗಿದ್ದರೆ ಇಂದು ಇಂಥ ಪ್ರಕರಣ ನಡೆಯುತ್ತಿರಲಿಲ್ಲ: ಯತ್ನಾಳ್

By Ravi JanekalFirst Published May 21, 2024, 6:36 PM IST
Highlights

ಹುಬ್ಬಳ್ಳಿ-ಧಾರವಾಡದಲ್ಲಿ ಹಾಡಹಗಲೇ ಕೊಲೆಗಳಾಗುತ್ತಿವೆ. ಕೆಲ ತಿಂಗಳ ಹಿಂದೆ ನೇಹಾ ಹಿರೇಮಠ ಕೊಲೆ ಆಯ್ತು. ಈಗ ಅಂಜಲಿ ಕೊಲೆಯಾಗಿದೆ. ಕಾನೂನು‌ ಸುವ್ಯವಸ್ಥೆ ಹದಗೆಟ್ಟಿರುವುದೇ ಇದಕ್ಕೆ ಕಾರಣ ಎಂದ ರಾಜ್ಯ ಸರ್ಕಾರದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ (ಮೇ.21): ಹುಬ್ಬಳ್ಳಿ-ಧಾರವಾಡದಲ್ಲಿ ಹಾಡಹಗಲೇ ಕೊಲೆಗಳಾಗುತ್ತಿವೆ. ಕೆಲ ತಿಂಗಳ ಹಿಂದೆ ನೇಹಾ ಹಿರೇಮಠ ಕೊಲೆ ಆಯ್ತು. ಈಗ ಅಂಜಲಿ ಕೊಲೆಯಾಗಿದೆ. ಕಾನೂನು‌ ಸುವ್ಯವಸ್ಥೆ ಹದಗೆಟ್ಟಿರುವುದೇ ಇದಕ್ಕೆ ಕಾರಣ ಎಂದ ರಾಜ್ಯ ಸರ್ಕಾರದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ಇಂದು ಅಂಜಲಿ‌ ಮನೆಗೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ, ಹುಬ್ಬಳ್ಳಿ ಧಾರವಾಡದಲ್ಲಿ ಪೊಲೀಸರದ್ದು ಭಯವಿಲ್ಲ. ಕ್ರಿಮಿನಲ್‌ಗಳು ರಾಜಾರೋಷವಾಗಿ ಗಾಂಜಾ- ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ. ಈ  ಹಾವಳಿಯಿಂದಲೇ ಅವಳಿ ನಗರಗಳಲ್ಲಿ ದಿನನಿತ್ಯ ಕೊಲೆ, ದರೋಡೆಗಳು ನಡೆಯುತ್ತಿವೆ. ಅಂಜಲಿ ಹತ್ಯೆ ಬಳಿಕ ಗೃಹ‌ ಮಂತ್ರಿಗಳು ತರಾತುರಿಯಲ್ಲಿ ಬಂದು ಮೂರ್ನಾಲ್ಕು ಅಧಿಕಾರಿಗಳನ್ನ ಅಮಾನತ್ತು ಮಾಡಿದ್ದಾರೆ. ಸರ್ಕಾರ ತಮ್ಮ‌ ವೈಫಲ್ಯವನ್ನ‌ ಪೊಲೀಸ್ ಅಧಿಕಾರಿಗಳ‌ ಅಮಾನತ್ತು ಮಾಡುವ ಮೂಲಕ ಮರೆಮಾಚುತ್ತಿದ್ದಾರೆ. ರಾಜಕೀಯ ಒತ್ತಡದಿಂದ ಪೊಲೀಸರು‌ ಇಲ್ಲಿ ಮುಕ್ತವಾಗಿ ಕಾರ್ಯನಿರ್ವಹಿಸಲು‌ ಆಗುತ್ತಿಲ್ಲ ಎಂದು ಆರೋಪಿಸಿದರು.

ಗ್ರೇಸ್ ಮಾರ್ಕ್ಸ್‌ ನೀಡಿದರೂ ಕಾಂಗ್ರೆಸ್‌ ಸರ್ಕಾರ ಜಸ್ಟ್ ಪಾಸಾಗಲ್ಲ: ಬಿಜೆಪಿ ಅಭ್ಯರ್ಥಿ ಕಾಗೇರಿ ಲೇವಡಿ

ಇದು ಹುಬ್ಬಳ್ಳಿ-ಧಾರವಾಡಕ್ಕೆ ಮಾತ್ರ ಸೀಮಿತ ಅಲ್ಲ, ಬೆಂಗಳೂರು‌ ಸೇರಿದಂತೆ ರಾಜ್ಯದೆಲ್ಲೆಡೆ ಗಾಂಜಾ, ಅಫೀಮು ರಾಜಾರೋಷವಾಗಿ ಮಾರಾಟವಾಗುತ್ತಿದೆ. ಗೃಹಮಂತ್ರಿಗಳದು ಕೇವಲ‌ ಕಠಿಣ ಕ್ರಮ‌ ಅನ್ನೋದು ಒಂದು ಡೈಲಾಗ್ ಆಗಿಬಿಟ್ಟಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು‌ ಆಗದಿದ್ದರೆ ರಾಜೀನಾಮೆ‌‌ ನೀಡಿ ಬೇರೆ ಇಲಾಖೆ ನೋಡಿಕೊಳ್ಳಲಿ. ಒಬ್ಬ ದಲಿತ ಸಚಿವರಾಗಿರೋದ್ರಿಂದ‌ ಗೃಹ ಸಚಿವರನ್ನ ತುಳಿಯುತ್ತಿದ್ದಾರೆ. ಒಲ್ಲದ ಮನಸ್ಸಿನಿಂದ ಸಚಿವರು ಗೃಹ‌‌ ಇಲಾಖೆ‌ ಜವಾಬ್ದಾರಿ‌ ತೆಗೆದುಕೊಂಡಿದ್ದಾರೆ ಎಂದರು.

ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ:

ಮೃತರ ಕುಟುಂಬಕ್ಕೆ ರಕ್ಷಣೆ ನೀಡುವುದು ಬಿಟ್ಟು ಆರೋಪಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್. ರಾಜ್ಯದಲ್ಲಿ ನಡೆದಿರೋ‌ ಅರಾಜಕತೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು. ನಮಗೆ ಸಿದ್ಧರಾಮಯ್ಯ ಅವರದ್ದೂ ಭಯ ಇಲ್ಲ‌, ಡಿಕೆಶಿ ಬಗ್ಗೆಯೂ ಭಯ ಇಲ್ಲ. ಸರ್ಕಾರದ ವೈಫಲ್ಯದ ಬಗ್ಗೆ ಅಧಿವೇಶನದಲ್ಲಿ‌ ಗಂಭೀರವಾಗಿ ಚರ್ಚೆ ಮಾಡಲಾಗುವುದು ಎಂದರು.

ಇನ್ನು ಬಿಜೆಪಿ ಆಡಳಿತಾವಧಿಯಲ್ಲಿ ಹತ್ಯೆಗಳ ಕುರಿತು ಗೃಹ‌ಸಚಿವರ ಆರೋಪ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಮ್ಮ ಆಡಳಿತಾವಧಿಯಲ್ಲಿ ಎನ್‌ಕೌಂಟರ್‌ಗಳಾಗಿದ್ದರೆ ಇಂದು ಈ‌ ರೀತಿ‌ ಕೃತ್ಯಗಳಾಗುತ್ತಿರಲಿಲ್ಲ. ಈ‌ ಹಿಂದೆ‌ ಬಸವರಾಜ ಬೊಮ್ಮಾಯಿ ಹಾಗೂ ಆರಗ ಜ್ಞಾನೇಂದ್ರ ಮಾಡಿದ ತಪ್ಪಿನಿಂದಾಗಿ‌ ಜನ ಬುದ್ದಿ ಕಲಿಸಿದ್ದಾರೆ. ಈಗಾಗಲೇ ನಮ್ಮ‌ ಪಕ್ಷಕ್ಕೂ ಜನ ಸರಿಯಾದ ಬುದ್ಧಿ ಕಲಿಸಿದ್ದಾರೆ. ಕೆ.ಜೆ.ಹಳ್ಳಿ, ಡಿ.ಜೆ.‌ಹಳ್ಳಿ‌‌ ಗಲಭೆ‌ ನಡೆದಾಗಲೇ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿರಲಿಲ್ಲ ಎಂದು ಸ್ವಪಕ್ಷದ ವಿರುದ್ಧ ಯತ್ನಾಳ್ ಕಿಡಿಕಾರಿದರು.

ರಾಜ್ಯದಲ್ಲಿ ಗ್ಯಾರಂಟಿ ಜಾರಿಯಾದ ನಂತರ ಎಂಎಲ್‌ಎ ಹಾಗೂ ಜಿಲ್ಲಾ ಉಸ್ತುವಾರಿಗಳಿಗೆ ಉತ್ಪನ್ನ‌ ಕಡಿಮೆಯಾಗಿದೆ. ಪೊಲೀಸ್ ಅಧಿಕಾರಿಗಳಿಂದ ಕೋಟಿ‌ ಕೋಟಿ‌ ಹಣ ವಸೂಲಿ ಮಾಡುತ್ತಾರೆ. ಇದರಿಂದ‌ ಗಾಂಜಾ ಅಫೀಮು ಅವ್ಯಾಹತವಾಗಿ ಮಾರಾಟವಾಗ್ತಿದೆ. ಪರೋಕ್ಷವಾಗಿ ಇವರೇ ಮಾರಾಟ ಮಾಡ್ತಿದ್ದಾರೆ. ಪೊಲೀಸರ ವರ್ಗಾವಣೆ ಮಾಡಿ ದುಡ್ಡು‌ ತಿನ್ನೋದೇ ಶಾಸಕರ‌ ಕೆಲಸವಾಗಿದೆ ಎಂದ ಆರೋಪಿಸಿದರು.

ಬಾಡಿಗೆ ಮನೆಯಲ್ಲಿ ಮಹಿಳೆ ಜೊತೆ ವಿವಾಹಿತ ಪೊಲೀಸ್ ಪೇದೆ ನೇಣುಬಿಗಿದು ಆತ್ಮಹತ್ಯೆ!

ಫೋಟೋ‌ ಫೋಸ್ ಗೆ ಬರುವ ಅವಶ್ಯಕತೆ ಇಲ್ಲ ಎಂಬ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ಮೈಸೂರು ವಿಮಾನ‌‌ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ನಾಮಕರಣ ಮಾಡುವಂತೆ ಅಧಿವೇಶನದಲ್ಲಿ ಮಾತನಾಡಿದವರು ಅಬ್ಬಯ್ಯ. ಅವರಿಗೆಲ್ಲಿ ಹತ್ಯೆಯಾದವರ ಕುಟುಂಬದ ಬಗ್ಗೆ ಕಾಳಜಿ ಬರಬೇಕು? ಅವರಿಗೆ ಹಿಂದೂಗಳ‌ ಮತ ಬೇಕಾಗಿಲ್ಲ. ಅವರ ಓಟ್ ಬ್ಯಾಂಕ್ ಬೇರೆ ಇದೆ ಇಲ್ಲಿನ‌ ಸ್ಥಳೀಯ ಶಾಸಕರಾಗಿ ಮೊದಲು ಬಂದು‌ ಸಾಂತ್ವನ‌ ಹೇಳುವ ಕೆಲಸ ಮಾಡಬೇಕಿತ್ತು. ಆದ್ರೆ ಅಧಿಕಾರಿಗಳನ್ನ‌ ವರ್ಗಾವಣೆ ಮಾಡಿಕೊಂಡು ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎಂದರು ಇದೇ ವೇಳೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಫೋನ್ ಟ್ಯಾಪಿಂಗ್ ಆರೋಪ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಈ‌ ಬಗ್ಗೆ ನನಗೆ ಮಾಹಿತಿ ಇಲ್ಲ, ಮಾಡಿದ್ದರೂ ಕೂಡ ಕಾಂಗ್ರೆಸ್ ಸರ್ಕಾರದಲ್ಲಿ ದೊಡ್ಡ ತಿಮಿಂಗಲ ಎಂದು ಕಾಂಗ್ರೆಸ್ ಸರ್ಕಾರದ ಆ ನಾಯಕನ ಕೈವಾಡ ಇದರಲ್ಲಿದೆ ಎಂದರು.

click me!