ನೀಲಗಿರಿ, ಅಕೇಶಿಯಾ ತೆಗೆದರೆ ಸಾಕೇ? ಬಯಲುಸೀಮೆಯ ಪ್ರಶ್ನೆಗಳಿಗೆ ಉತ್ತರ ಕೊಡುವವರಾರು?

By Suvarna News  |  First Published Feb 8, 2020, 7:21 PM IST
  • ಬಯಲುಸೀಮೆಯ ಬರಪೀಡಿತ  ಕೋಲಾರ, ಚಿಕ್ಕಬಳ್ಳಾಪುರ , ಬೆಂಗಳೂರು ಗ್ರಾಮಾಂತರ  ಜಿಲ್ಲೆಗಳಲ್ಲಿ ಅಂತರ್ಜಲದ ಕುಸಿತ
  • ನೀಲಗಿರಿ ಮತ್ತು ಅಕೇಶಿಯಾ ತೆರವು ಮಾಡುವುದು ಅನಿವಾರ್ಯ ಮತ್ತು ಸ್ವಾಗತಾರ್ಹ
  • ಆದರೆ, ಬಯಲುಸೀಮೆ ಮಂದಿ ಕೇಳುತ್ತಿರುವ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು?

ಬಯಲುಸೀಮೆಯ ಬರಪೀಡಿತ  ಕೋಲಾರ, ಚಿಕ್ಕಬಳ್ಳಾಪುರ , ಬೆಂಗಳೂರು ಗ್ರಾಮಾಂತರ  ಜಿಲ್ಲೆಗಳಲ್ಲಿ ಅಂತರ್ಜಲದ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲೊಂದಾದ ನೀಲಗಿರಿ ಮತ್ತು ಅಕೇಶಿಯಾ ತೆರವು ಮಾಡುವುದು ಅನಿವಾರ್ಯ ಮತ್ತು ಸ್ವಾಗತಾರ್ಹ. ಆದರೆ ಇದೊಂದರಿಂದಲೇ ನಮ್ಮ ಅಂತರ್ಜಲ ಅಭಿವೃದ್ಧಿಯಾಗುತ್ತದೆ ಎಂದು ನಂಬುವುದೂ ಅಸಾಧ್ಯ .

ಜಿಲ್ಲಾಡಳಿತಗಳಿಗೆ , ಸರ್ಕಾರಗಳಿಗೆ ಗೊತ್ತಿರುವ ಹಾಗೆ ನಮ್ಮ ಕೋಲಾರ , ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಕೇಂದ್ರ ಅಂತರ್ಜಲ ಮಂಡಳಿ ಮತ್ತು ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯವರ ಅಧ್ಯಯನದ ವರದಿಯ ಆಧಾರದಂತೆ ಹತ್ತಾರು ವರ್ಷಗಳ ಹಿಂದೆಯೇ "ಅಂತರ್ಜಲ ಅತೀ ಬಳಕೆ ವಲಯ" ಎಂದು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

Tap to resize

Latest Videos

ಹೀಗಿರುವಾಗ ಅಂತರ್ಜಲಕ್ಕೆ ನೇರವಾಗಿ ಕಾರಣವಾದ ಮತ್ತು ಮಾರಕವಾದ ಮರಳುಗಾರಿಕೆಯನ್ನು , ಮರಳುನಿಕ್ಷೇಪಗಳು ಸಂಪೂರ್ಣ ಖಾಲಿಯಾಗುವವೆರೆಗೂ ಬೆಂಗಳೂರಿಗೆ ಅಕ್ರಮ ಸಾಗಾಣಿಕೆ ನಡೆಸಿದವರಾರು, ಅವರಿಗೆಲ್ಲಾ ಅನುಮತಿ ಮತ್ತು ಪರವಾನಗಿ ಕೊಟ್ಟವರಾರು ?

ಇದನ್ನೂ ನೋಡಿ | ಚಿಕ್ಕಬಳ್ಳಾಪುರ: ಜೀವಂತ ಸಮಾಧಿಯಾಗ ಹೊರಟ ಢೋಂಗಿ ಬಾಬಾನಿಗೆ ಬಿತ್ತು ಒದೆ...

ಅಂತರ್ಜಲ ಮರು ಪೂರಣಕ್ಕೆ ತಮ್ಮ ಕೊಡುಗೆಯನ್ನು ಕೊಡುತ್ತಿರುವ ಬೆಟ್ಟ ಗುಡ್ಡಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ , ಮಲೇಷಿಯಾ ಮರಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಸಹಾ ನಮ್ಮ ಜಿಲ್ಲೆಗಳಲ್ಲಿನ ಕಲ್ಲು ಕರಗಿಹೋಗುವವರೆಗೂ ಬೆಂಬಿಡದ ಎಮ್ ಸ್ಯಾಂಡ್ (M-SAND) ದಂಧೆಗೆ ಅನುಮತಿ ಮತ್ತು ಪರವಾನಗಿಗಳನ್ನು ನಿರಾಕರಿಸದೆ ಅಥವಾ ನಿಷೇಧಿಸದೇ, ಅವರಿಗೆಲ್ಲಾ NOC ಕೊಟ್ಟವರಾರು ಮತ್ತೆ ಕಲ್ಲು ಗಣಿ ಉದ್ಯಮಿಗಳಿಂದ ಕಮೀಷನ್ ತಿನ್ನುತ್ತಿರುವವರಾರು ?

ದೇಶದಲ್ಲಿಯೇ ಅತೀ ಹೆಚ್ಚು ಕೆರೆಗಳನ್ನು ಹೊಂದಿರುವ ನಮ್ಮ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಮಳೆರಾಯ ಸಮಯಕ್ಕೆ ಸರಿಯಾಗಿ ಬರದಿದ್ದರೂ ಕನಿಷ್ಠ ಎರಡು-ಮೂರು ವರ್ಷಗಳಿಗೊಮ್ಮೆ ಬರುವ  ಸೈಕ್ಲೋನ್  ಮಾದರಿಯ ಮಳೆಯನ್ನೂ ಶೇಖರಿಸಿಕೊಳ್ಳಲಾಗದ ಹಾಗೆ ಕೆರೆಗಳ ಜಲಾನಯನ ಪ್ರದೇಶದ ಹಳ್ಳ ,ಕೊಳ್ಳ ,ಕಾಲುವೆ , ರಾಜಕಾಲುವೆಗಳು ಒತ್ತುವರಿಯಾಗಿವೆ. 

ಇದನ್ನೂ ನೋಡಿ | ಕೋಲಾರದಲ್ಲೊಂದು ಅತ್ಯಾಧುನಿಕ ಆಸ್ಪತ್ರೆ; 4 ತಿಂಗಳಾದ್ರೂ ಉದ್ಘಾಟನಾ ಭಾಗ್ಯವೇ ಇಲ್ಲ..!...

ಕೆರೆಗಳ ಜಾಲ ಮಾಯವಾಗಿದೆ, ಹೀಗಾಗಿ ಇತ್ತೀಚಿಗೆ 2015 , 2017 ,ಮತ್ತು 2019 ರಲ್ಲಿ ಬಂದ ಸೈಕ್ಲೋನ್ ಮಾದರಿಯ ಅತೀ ದೊಡ್ಡ ಮಳೆಯಿಂದಲೂ ಸಹಾ ಶೇಕಡಾ 90 ರಷ್ಟು ಕೆರೆಗಳಿಗೆ ಒಂದು ಹನಿ ನೀರೂ ಹರಿದುಬರದೆ ಆಂಧ್ರ , ತಮಿಳುನಾಡಿನ ಕಡೆಗೆ ಪರಿಶುದ್ಧವಾದ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.

ಕೆರೆಗಳಲ್ಲಿ ಜಾಲಿ ಬೆಳೆಸಿದ್ದಾರೆ,  ಇದಕ್ಕೆಲ್ಲಾ ಕಠಿಣವಾದ ಕಾನೂನುಗಳಿದ್ದರೂ ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರೆವು ಗೊಳಿಸದೇ, ಕೆರೆಗಳಲ್ಲಿನ ಜಾಲಿ ಮರಗಳನ್ನು  ಕೀಳದ ಅಧಿಕಾರಶಾಹಿಗಳ ದಿವ್ಯ ನಿರ್ಲಕ್ಷ್ಯ ತೆಯ ಹೊಣೆ ಹೊರುವವರಾರು ?

ಅನೇಕ ವರ್ಷಗಳಿಂದ ಯಾವುದೇ ಅವೈಜ್ಞಾನಿಕ ಅಧ್ಯಯನವಿಲ್ಲದೆ ನಿರ್ಮಾಣವಾಗುತ್ತಿರುವ ಚೆಕ್ ಡ್ಯಾಮ್‌ಗಳ ನಿರ್ಮಾಣದಿಂದ ನೂರಾರು ಕೋಟಿ ಗುತ್ತಿಗೆದಾರರಿಗೆ ಸಂದಾಯವಾಗಿದೆಯೇ ಹೊರತು ಫಲಿತಾಂಶ ಮಾತ್ರ ಶೂನ್ಯ , ಇದರ ಕುರಿತಾದ ಮೌಲ್ಯಮಾಪನ ಮಾಡುವವರಾರು ?

ನಮ್ಮ ಜಿಲ್ಲೆಗಳಲ್ಲಿ ರೈತರು ತಮ್ಮ ಬೆವರಿನ ಹಣದಲ್ಲಿ ಕಟ್ಟಿರುವ ಸಾವಿರಾರು ಕಲ್ಲು ಕಟ್ಟಡದ ಬಾವಿಗಳು , ರೈತರು ತಮ್ಮ ರಕ್ತ ಬಸಿದು ಕೊರೆಸಿದ ಲಕ್ಷಾಂತರ ಕೊಳವೆಬಾವಿಗಳಿವೆ. ಅವುಗಳಲ್ಲಿ ಸಾವಿರಾರು ಕೊಳವೆ ಬಾವಿಗಳು ವಿಫಲವಾಗಿವೆ, ಇಂತಹ ಬಾವಿ ಮತ್ತು ಕೊಳವೆ ಬಾವಿಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಜಲ ಮರುಪೂರಣ ಮಾಡುವ ಜೊತೆಗೆ ರೈತರಿಗೆ ಆರ್ಥಿಕವಾಗಿ ನೆರವಾಗಲು ಅವಕಾಶವಿದ್ದರೂ ಸಂಬಂಧಪಟ್ಟ ಇಲಾಖೆಗಳು ಜಾಣ ಮೌನ ವಹಿಸಿರುವುದೇಕೆ ?

ಇದನ್ನೂ ನೋಡಿ | ತಾಯಿಯ ಕೊಂದಿದ್ದ ವಿಚಾರ ಪ್ರಿಯಕರನಿಗೆ ಗೊತ್ತಿರಲಿಲ್ಲ! ಸತ್ಯ ಬಾಯ್ಬಿಟ್ಟ ಅಮೃತಾ...

ತೀವ್ರ ಜಲಸಂಕಷ್ಟದಲ್ಲಿರುವ ಜಿಲ್ಲೆಗಳ ಕೃಷಿ ಜಲನಿರ್ವಹಣೆಗೆ ( Effective Water Management In Agriculture ) ರೈತರ ಕೊಳವೆಬಾವಿಗಳ ಅಂತರ್ಜಲದ ಮಾಪನ ಮಾಡಿಸುವ , ನಿರಂತರವಾಗಿ ಪ್ರತಿಯೊಬ್ಬ ರೈತನ ಕೃಷಿ ಭೂಮಿಯಲ್ಲಿ ಕಾಲಕಾಲಕ್ಕೆ ಮಣ್ಣಿನ ತೇವಾಂಶ , ತಾಪಮಾನ , ಹವಾಮಾನ ಆದಾರದ ಮೇಲೆ ನೀರಿನ ಬೇಡಿಕೆ ಮತ್ತು ಪೂರೈಕೆಯ ಮುನ್ಸೂಚನೆ ಯಂತಹ ವೈಜ್ಞಾನಿಕ ಮಾಹಿತಿಗಳನ್ನು ಒದಗಿಸಬಹುದಾದ ಡಾಪ್ಲರ್ ರಾಡಾರ್‌ಗಳನ್ನು ಅಳವಡಿಸುಂತಹ ದೂರದೃಷ್ಟಿಯ ಮುಂದಾಲೋಚನೆಯಂತಹ ತುರ್ತು ಕ್ರಮಗಳ ಕುರಿತು ಸರ್ಕಾರದ ಗಮನ ಸೆಳೆಯದೆ , ನಮ್ಮ ಆಶಯಗಳೆಲ್ಲಾ ಕೇವಲ ನೀಲಗಿರಿ ತೆರುವಿನಲ್ಲೇ ನಿಂತುಬಿಡುವುದು ಸಮಂಜಸವಲ್ಲ.

ಹಿರಿಯ ಅಧಿಕಾರಿಗಳೂ ಸಹ ರಾಜಕಾರಣಿಗಳಂತೆ ಜನಪ್ರಿಯತೆ ತಂದುಕೊಡುವ ಕಾರ್ಯಕ್ರಮಗಳಿಗೇ ಸೀಮಿತವಾಗದೆ , ಅವೈಜ್ಞಾನಿಕ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಆಗಿರುವ  ವೈಫಲ್ಯಗಳು, ಆಗಿರುವ ಅನಾಹುತಗಳ ಮೌಲ್ಯಮಾಪನ ನಡೆಸಿ ಈಗಲಾದರೂ ವಾಸ್ತವದ ನೆಲೆಗಟ್ಟಿನಲ್ಲಿ ಗಂಭೀರವಾಗಿ ಚಿಂತಿಸುವ ಕಾಲ ಬಂದಿದೆ ಎಂಬುದು ನಮ್ಮ ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ಯುವಶಕ್ತಿಯ ವಿನಂತಿಯಾಗಿದೆ.

-ಆಂಜನೇಯ ರೆಡ್ಡಿ ಆರ್

click me!