Kannada Sahitya Sammelana: ಪರ್ಯಾಯ ಸಮ್ಮೇಳನ ಅವರ ಹಕ್ಕು: ಎಚ್.ಎಸ್.ವೆಂಕಟೇಶಮೂರ್ತಿ

By Govindaraj S  |  First Published Jan 6, 2023, 10:57 AM IST

ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ. ನಿಕಟಪೂರ್ವ ಅಧ್ಯಕ್ಷ ಎಚ್.ಎಸ್.ವೆಂಕಟೇಶ ಮೂರ್ತಿ ಅವರಿಲ್ಲಿ ಮಾತಾಡಿದ್ದಾರೆ. 


ಪ್ರಿಯಾ ಕೆರ್ವಾಶೆ

* ನೀವು ಅಧ್ಯಕ್ಷರಾಗಿ ವರ್ಷಗಳ ಬಳಿಕ ಮತ್ತೆ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಎರಡು ವರ್ಷಗಳಲ್ಲಿ ಕನ್ನಡ ಮನಸ್ಸುಗಳನ್ನು ಖಾಲಿತನ ಆವರಿಸಿತ್ತು ಅನ್ನೋ ಭಾವ 
ಇದೆಯಾ?

ವಾಸ್ತವವಾಗಿ ನಾನು ಅಧ್ಯಕ್ಷ ಭಾಷಣ ಮಾಡುವಾಗಲೇ ಹೇಳಿದ್ದೆ, ಮುಂದಿನ ಅಧ್ಯಕ್ಷರು ಬರುವವರೆಗೆ ಕನ್ನಡದ ಕೆಲಸ ಮಾಡುತ್ತೇನೆ ಎಂದು. ರಾಜ್ಯದ ಮೂಲೆ ಮೂಲೆಗೆ ಹೋಗಿ ಅಲ್ಲಿನ ಯುವಕರಿಗೆ ಪಂಪ, ರನ್ನ, ಕುಮಾರವ್ಯಾಸ ಮೊದಲಾದವರ ಪರಿಚಯ ಮಾಡಿಸುವ ಆಸೆ ಇತ್ತು. ಇದಕ್ಕೆ ಅಂದಿನ ಕಸಾಪ ಅಧ್ಯಕ್ಷ ಮನು ಬಳಿಗಾರ್ ಒಪ್ಪಿಗೆ ನೀಡಿ ಸೂಕ್ತ ವ್ಯವಸ್ಥೆ ಮಾಡುವ ಭರವಸೆಯನ್ನೂ ನೀಡಿದ್ದರು. ದುರಾದೃಷ್ಟವಶಾತ್ ಕೋವಿಡ್ ಬಾಧಿಸಿತು. ೨ ವರ್ಷ ಮನೆಯಿಂದ ಹೊರಗೇ ಬರಲಿಲ್ಲ. ಆದರೆ ವ್ಯರ್ಥವಾಗಿ ಕಳೆಯಲಿಲ್ಲ. ಬೆಳಗ್ಗೆ ೪ರಿಂದ ೬ ಗಂಟೆಯವರೆಗೆ ಸತತವಾಗಿ ಬುದ್ಧನ ಮಹಾಕಾವ್ಯ ಬರೆದೆ. ನಿತ್ಯ ನಿರಂತರ ಸತತ ಕೆಲಸ. ಶೂನ್ಯ ಕಾಲವನ್ನು ಪೂರ್ಣತೆ ಪಡೆಯುವಂತೆ ಪರಿಶ್ರಮ ವಹಿಸಿದೆ. ಜನ ಕೊಟ್ಟ ಗೌರವಕ್ಕೆ ಕೃತಜ್ಞತಾಪೂರ್ವಕವಾಗಿ ಇದನ್ನು ಮುಂದಿನ ಸಮ್ಮೇಳನದಲ್ಲಿ ಕನ್ನಡ ಓದುಗರಿಗೆ ಅರ್ಪಿಸುತ್ತೇನೆ ಅಂದುಕೊಂಡೆ. ಈ ಸಮ್ಮೇಳನದಲ್ಲಿ ಅದನ್ನು ಕನ್ನಡ ಜನತೆಗೆ ಅರ್ಪಿಸುತ್ತಿದ್ದೇನೆ. 

Tap to resize

Latest Videos

undefined

*ನಿಮ್ಮ ಅಧ್ಯಕ್ಷತೆಯ ಹಿಂದಿನ ಸಮ್ಮೇಳನದ ಬಗ್ಗೆ ಇದ್ದ ನಿರೀಕ್ಷೆಗಳು ಈಡೇರಿವೆಯೆ?
ನಿರೀಕ್ಷೆ ಇತ್ತು. ಆಮೇಲೆ ನಿರಾಶೆ ಆಗಲಿಲ್ಲ. ಆದರೆ ಕನ್ನಡದ ಹೆಸರಿನಲ್ಲಿ ಲಕ್ಷಾಂತರ ಜನ ಒಟ್ಟು ಸೇರುವುದನ್ನು ನೋಡುವುದೇ ಸಂಭ್ರಮ. ಕನ್ನಡ ಪುಸ್ತಕ ಮಾರಾಟವಾಗುತ್ತಿದ್ದವು, ನಿತ್ಯ ೫ ಲಕ್ಷ ಜನ ಬರುತ್ತಿದ್ದರು. ಅಭಿಮಾನದ ಮಹಾಪೂರ. ಈ ಸಂದರ್ಭ ಕನ್ನಡದ ಅಸ್ಮಿತೆ, ಅಸ್ತಿತ್ವ ಅನುಭವಕ್ಕೆ ಬಂತು. ಈ ನಡುವೆ ಕನ್ನಡ ಮಾಧ್ಯಮಕ್ಕಾಗಿ ಅಷ್ಟೆಲ್ಲ ಕೂಗಾಡಿದ್ದಾಯ್ತು, ಆದರೆ ಏನೂ ಆಗಲಿಲ್ಲ. ಇರೋದೇ ಹೀಗೆ ಅನಿಸಿತು. ಹಾಗಂತ ಇದು ವ್ಯರ್ಥ ಅಲ್ಲ. ಕನ್ನಡ ಅಭಿಮಾನವನ್ನು ಜಾಗರಣೆ ಮಾಡುವ ಕೆಲಸ ಸಮ್ಮೇಳನ ಮಾಡುತ್ತೆ. ಇದು ಆಗುತ್ತಾ ಇರಬೇಕು. ಇದು ದುಂದು ವೆಚ್ಚ ಖಂಡಿತಾ ಅಲ್ಲ.

Haveri: ಧ್ವಜಾರೋಹಣದ ಮೂಲಕ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

* ಹಾವೇರಿಯಲ್ಲಿ ಸಮ್ಮೇಳನ ಮಾಡುವ ಬಗ್ಗೆ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅಪಸ್ವರ ಕೇಳಿಬಂತು..
ಈ ಸಮ್ಮೇಳನದ ಬಳಿಕವಾದರೂ ಅಲ್ಲಿ ಒಂದಿಷ್ಟು ವ್ಯವಸ್ಥೆಗಳಾಗಲಿ ಅನ್ನುವ ಆಶಯ ನನ್ನದು. ಅನಾರೋಗ್ಯ ಇದ್ದರೂ ನಾನೂ ಒಂದು ದಿನ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ. ಈ ಬಾರಿಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರಿಗೆ ಕನ್ನಡ ಬಾವುಟ ಹಸ್ತಾಂತರಿಸುವ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. 

* ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಕನ್ನಡ ಸಾಹಿತ್ಯ ಪರಿಷತ್ತು, ಸಮ್ಮೇಳನ ಸಾಹಿತಿಗಳದ್ದಲ್ಲ, ಕನ್ನಡಿಗರದ್ದು ಅನ್ನುವ ಮಾತು ಹೇಳಿದ್ದಾರೆ. ಈ ಬಗ್ಗೆ?
ಪ್ರಜಾಪ್ರಭುತ್ವದಲ್ಲಿ ಇದೆಲ್ಲ ಸಹಜ. ಎಲೆಕ್ಷನ್‌ಗೆ ನಿಲ್ಲುತ್ತಾರೆ. ಸಾಹಿತ್ಯದಲ್ಲಿ ಆಸಕ್ತಿ, ಕನ್ನಡದಲ್ಲಿ ಆಸಕ್ತಿ ಇರುವ ಕೆಲವರು, ಬೇರೆ ಬೇರೆ ಆಸಕ್ತಿಗಳಿರುವ ಇನ್ನೂ ಕೆಲವರು ಅಧ್ಯಕ್ಷರಾಗ್ತಾರೆ. ಇದನ್ನು ಒಪ್ಪಿಕೊಳ್ಳಲೇಬೇಕು. ನಾನು ಎಲೆಕ್ಷನ್‌ನಲ್ಲಿ ಗೆದ್ದಿದ್ದೀನಿ ಅಂತಾರವರು. ಈ ಬಗ್ಗೆ ಸಾಹಿತ್ಯ ಪರಿಷತ್ತಿನ ಮೂಲಭೂತ ಸ್ಟ್ರಕ್ಚರ್‌ನಲ್ಲೇ ಬದಲಾವಣೆ ಮಾಡಬಹುದಾ ನೋಡಬೇಕು. ಹಿಂದೆಲ್ಲ ಶುದ್ಧಾಂಗ ಸಾಹಿತಿಗಳು, ದೊಡ್ಡ ಮಹಾನುಭಾವರೇ ಪರಿಷತ್ತಿಗೆ ಹೋಗಿ ಕಸ ಗುಡಿಸುತ್ತಿದ್ದರು. ಕನ್ನಡದ ಬಗ್ಗೆ ಅವರಿಗೆ ಅಂಥಾ ಅಪಾರ ಗೌರವ, ಶ್ರದ್ಧೆ. ಆ ಕಾಲ ಬೇರೆ. ಈ ಕಾಲ ಬೇರೆ. ಈಗ ಕಸಾಪದಲ್ಲಿ ಸವಲತ್ತುಗಳಿವೆ. ಅವುಗಳ ಸದ್ಭಳಕೆ ಆಗಬೇಕಷ್ಟೇ. ಹಾಗಂತ ಸಾಹಿತಿಗಳೇ ಕಸಾಪ ಅಧ್ಯಕ್ಷರಾಗಬೇಕು ಅನ್ನೋದು ನನ್ನ ಅಭಿಮತ ಅಲ್ಲ. ಸಾಹಿತ್ಯದ ಬಗ್ಗೆ ಪ್ರೀತಿ, ಗೌರವ ಇರುವಂಥವರಾದರೆ ಒಳ್ಳೆಯದು. ಅದನ್ನು ನಾವು ನಿರೀಕ್ಷೆ ಮಾಡುತ್ತೇವೆ. ಇನ್ನು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಸಮ್ಮೇಳನ ಅನ್ನೋದರಲ್ಲೇ ಸಾಹಿತ್ಯ ಇದೆಯಲ್ಲಾ. ಸಾಹಿತ್ಯದ ಸ್ಥಾನ ಇದರಲ್ಲೇ ಅಡಕವಾಗಿದೆಯಲ್ಲಾ..

* ಈ ಬಾರಿಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರಿಗೆ ಅವಕಾಶ ಕೊಟ್ಟಿಲ್ಲ ಅನ್ನೋ ಆರೋಪ ಇದೆ?
ಇದಕ್ಕೆ ಉತ್ತರ ಕೊಡೋದು ಕಷ್ಟ. ನಮಗೆ ಕೊಡಬೇಕಾದಷ್ಟು ಪ್ರಾಧಾನ್ಯತೆ ಕೊಟ್ಟಿಲ್ಲ ಅಂತ ಕೆಲವು ಲೇಖಕರು ಹೇಳ್ತಾರೆ. ನಾವು ಕೊಟ್ಟಿದ್ದೀವಿ ಅಂತ ಕಸಾಪದವರು ಹೇಳ್ತಾರೆ. ಇದನ್ನು ಬಗೆಹರಿಸೋದು ಯಾರು? ಇದಕ್ಕೆಲ್ಲಿ ನ್ಯಾಯಾಲಯ? ತೀರ್ಪು ಕೊಡೋದು ಹೇಗೆ? ಅಂಕಿ ಸಂಖ್ಯೆಯಿಂದ ತೀರ್ಮಾನ ಮಾಡಬಹುದಾ? ಒಬ್ಬ ಮಹಾನ್ ಲೇಖಕ ಇದ್ದರೆ ಅದರ ತೂಕವೇ ಬೇರೆ ಆಗುತ್ತಲ್ವಾ? ಕನ್ನಡದ ಹೆಮ್ಮೆಯ ಲೇಖಕರಾದ ನಿಸಾರ್, ಷರೀಫರನ್ನು ಧರ್ಮದ ಆಧಾರದಲ್ಲಿ ಪರಿಗಣಿಸಲಾಗುವುದಿಲ್ಲವಲ್ಲ! ಆದರೆ ಎಲ್ಲರಿಗೂ ಪ್ರಾತಿನಿಧ್ಯವಂತೂ ಸಿಗಬೇಕು. 

* ಪರ್ಯಾಯ ಸಮ್ಮೇಳನದ ಅಲೆ ಎದ್ದಿದೆ ಈಗ..
 ಹೀಗಲ್ಲದೇ ಜನ ತಮ್ಮ ಅತೃಪ್ತಿಯನ್ನು ಹೇಗೆ ತೋರಿಸಬೇಕು? ಕೆಲವರಿಗೆ ಸಿಗಬೇಕಾದ್ದು ಸಿಕ್ಕಿಲ್ಲ ಅನಿಸಿರುತ್ತೆ. ಅವರು ತಾವು ಪರ್ಯಾಯ ಸಮ್ಮೇಳನ ಮಾಡುತ್ತೇವೆ ಅಂದರೆ ಅದು ಅವರ ಅಧಿಕಾರ, ಸ್ವಾತಂತ್ರ್ಯ. ಮಾಡಬಾರದು ಅನ್ನೋದು ತಪ್ಪಾಗುತ್ತೆ. ಇದರಿಂದ ಕೆಲವು ಒಳ್ಳೆಯ ಅಂಶಗಳು ಹೊರಬರಬಹುದು. ಹಿಂದೆಯೂ ಅಡಿಗರ ಅಧ್ಯಕ್ಷತೆಯಲ್ಲಿ ಪರ್ಯಾಯ ಸಮ್ಮೇಳನ ಆಗಿತ್ತು. ಕೊನೆಗೆ ಏನಾಯ್ತು ಅನ್ನೋ ಪ್ರಶ್ನೆ ಬೇರೆ. ಹೊಸ ವಿಚಾರಗಳು ಹೊರಬಂದರೆ ಉತ್ತಮ. ವ್ಯವಸ್ಥೆಯನ್ನು ವಿರೋಧಿಸುವ ಶಕ್ತಿಗಳು ಯಾವತ್ತೂ ಇರುತ್ತವೆ, ಇರಬೇಕು ಸಹ. ಅದು ಅಪರಾಧ ಅಲ್ಲ. ಸಾಧ್ಯವಾದರೆ ನಾನೂ ಹೋಗಿ ಅವರ ಮಾತುಗಳನ್ನು ಕೇಳುತ್ತೇನೆ. ಪರ್ಯಾಯ ಸಮ್ಮೇಳನದಿಂದ ಲಾಭ ಆದರೆ ಸಂತೋಷ.

* ದೊಡ್ಡರಂಗೇಗೌಡರ ಬಗ್ಗೆ?
ನಾವೆಲ್ಲ ಒಟ್ಟಿಗೆ ಬರವಣಿಗೆ ಶುರು ಮಾಡಿದವರು. ಆಮೇಲೆ ಅವರು ಸಿನಿಮಾಕ್ಕೆ ಹೋದರು, ಅಲ್ಲಿ ಒಳ್ಳೆಯ ಹೆಸರು ಮಾಡಿದರು. ಚಿತ್ರಗೀತೆಗಳಿಗೆ ಜಾನಪದದ ಸ್ಪರ್ಶವನ್ನು ಕೊಟ್ಟರು. ಆಳವಾಗಿ ಅವರನ್ನು ಅಭ್ಯಾಸ ಮಾಡೋಕೆ ಸಾಧ್ಯವಾಗಿಲ್ಲ. ಆದರೆ ನನಗೆ ಬಹಳ ಆತ್ಮೀಯ ಗೆಳೆಯರು. 

* ಅವರ ಸಮ್ಮೇಳನಾಧ್ಯಕ್ಷತೆ ಬಗ್ಗೆ ಖುಷಿ ಇದೆಯಾ?
ಯಾರು ಬಂದರೂ ನಮಗೆ ಖುಷಿಯೇ. ಕನ್ನಡದ ಒಬ್ಬ ಲೇಖಕರಾಗಿ ಅವರಿಗೆ ಪ್ರಾತಿನಿಧ್ಯ. ಅದನ್ನೆಲ್ಲ ತಕ್ಕಡಿ ಹಿಡಿದು ನೋಡೋದಕ್ಕಾಗಲ್ಲವಲ್ಲ. ದೊಡ್ಡರಂಗೇಗೌಡರು ನಮ್ಮ ಗೆಳೆಯ, ಅಭಿಮಾನ ನಮಗೆ. ಲೇಖಕರಾಗಿ ಪರಸ್ಪರ ಈ ಸೌಜನ್ಯ ಇರಲೇಬೇಕು. ಎಲ್ಲರಿಗೂ ಚೆನ್ನಾಗಿಯೇ ಬರೀಬೇಕು ಅಂತ ಆಸೆ ಇದ್ದೇ ಇರುತ್ತಲ್ವಾ?

* ಸಮ್ಮೇಳನದಲ್ಲಿ ರಾಜಕೀಯ ಪರ ನಿಲುವುಗಳನ್ನ ಪ್ರದರ್ಶಿಸೋದು ಎಷ್ಟರ ಮಟ್ಟಿಗೆ ಸರಿ?
ಸಮ್ಮೇಳನ ರಾಜಕೀಯ ಪರ ಅಭಿಪ್ರಾಯ ಪ್ರದರ್ಶನಕ್ಕೆ ಬಳಕೆ ಆಗಬಾರದು. ಹಿಂದೆ ಚಂಪಾ ಈ ರೀತಿ ಮಾತನಾಡಿದಾಗ ಆ ವೇದಿಕೆಯಲ್ಲಿ ನಾನೂ ಇದ್ದೆ. ಯಾಕಿದು ಅಂತ ಕೇಳಿದಾಗ ನನಗನಿಸಿದ್ದನ್ನು ಪ್ರಾಮಾಣಿಕವಾಗಿ ಹೇಳ್ತೀನಿ, ಆತ್ಮಕ್ಕೆ ನಿಷ್ಠವಾಗಿ ಮಾತಾಡ್ತೀನಿ ಅಂದರು. ಅದಕ್ಕೆ ಬಂದ ವಿರೋಧವನ್ನೂ ಧೈರ್ಯವಾಗಿ ಎದುರಿಸಿದರು. ಅದನ್ನು ಸರಿ ತಪ್ಪು ಅಂತ ತೀರ್ಮಾನಿಸೋದಕ್ಕೆ ನನಗಿಷ್ಟ ಇಲ್ಲ. ಆದರೆ ಪರಿಷತ್ತಿನ ಮೂಲಭೂತ ರಚನೆಯ ವಿನ್ಯಾಸ ಇದಕ್ಕೆ ಒಪ್ಪಲ್ಲ. 

Kannada Sahitya Sammelana: ಹಾವೇರಿ ಪುಣ್ಯಭೂಮಿ, ತಫೋಭೂಮಿ: ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ

* ಕಸಾಪಕ್ಕೆ ರಾಜಕೀಯ ನಿಲುವುಗಳು ಇರಬೇಕಾ?
ಇರಬಾರದು. ಅದು ಶುದ್ಧಾಂಗ ಕನ್ನಡ ಭಾಷೆ, ಸಾಹಿತ್ಯಕ್ಕೆ ತನ್ನನ್ನು ಬದ್ಧ ಮಾಡಿಕೊಂಡು ಕೆಲಸ ಮಾಡಬೇಕಾದ ಸಂಸ್ಥೆ. ಕನ್ನಡ ಭಾಷೆ ಸಾಹಿತ್ಯಕ್ಕೆ ತೊಂದರೆ ಆದರೆ ಅದು ರಾಜಕಾರಣದ ವಿರುದ್ಧ ಕೂಡ ತನ್ನ ಭಿನ್ನಾಭಿಪ್ರಾಯವನ್ನು ಹೇಳಬಹುದು. ಚಳವಳಿಯಂಥದ್ದನ್ನು ಕೂಡ ಹುಟ್ಟುಹಾಕಬಹುದು. ಕನ್ನಡದ ಹಿತರಕ್ಷಣೆಯೇ ಅದರ ಗುರಿ. ಅದಕ್ಕಿಂತ ಆಚೆಗಿನ ರಾಜಕೀಯ ಹಿತಾಸಕ್ತಿಗಳು ಅದಕ್ಕಿರಬಾರದು. 

* ಸಮ್ಮೇಳನ ಬಲಪಂಥದ ಕಡೆ ವಾಲುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ?
ಈ ಎಡ, ಬಲ ಅನ್ನೋದರ ಬಗ್ಗೆ ನಾನು ಯೋಚನೆ ಮಾಡಿದವನಲ್ಲ. ಬುದ್ಧ ಹೇಳಿದ ಮಧ್ಯಮ ಮಾರ್ಗ ಉತ್ತಮ ಅಂತ ನಂಬಿದವನು. ಯಾವ ಬದಿಗೆ ವಾಲುವುದೂ ಸತ್ಯ ರಕ್ಷಣೆಗೆ ಪೂರಕ ಆಗಿರಲ್ಲ. ಎಡಕ್ಕೆ ಅಥವಾ ಬಲಕ್ಕೆ ವಾಲೋದು ಅಂದರೆ ಆ ಪಂಥದ ಅಪೇಕ್ಷೆಗಳನ್ನು ಈಡೇರಿಸೋದು. ನಮಗೆ ಎಡ ಬಲಕ್ಕಿಂತ ಮೂಲಭೂತವಾದ ಸತ್ಯವನ್ನು ನೋಡೋದು ಮುಖ್ಯ. ಯಾವುದೇ ರಾಜಕೀಯ ಸಿದ್ಧಾಂತಕ್ಕೆ ಕಟ್ಟು ಬೀಳದೇ ಮನಸ್ಸನ್ನು ಮುಕ್ತವಾಗಿ ಇಟ್ಟುಕೊಳ್ಳಬೇಕು. ಧರ್ಮದ ಪ್ರೀತಿಯೂ ಉಗ್ರ ಮಟ್ಟಕ್ಕೆ ಹೋದಾಗ ಧರ್ಮವೇ ಬೇಡ ಅಂತ ಅನಿಸಿ ಬಿಡುತ್ತದೆ. ಧರ್ಮವಾಗಲಿ, ಪಂಥವಾಗಲಿ ಸೌಮ್ಯವಾಗಿದ್ದರೆ ಅದಕ್ಕೆ ಬೆಳಕನ್ನು ಕೊಡುವ ಶಕ್ತಿ ಇರುತ್ತೆ. ಇಲ್ಲವಾದರೆ ಅದು ಬೆಂಕಿ ಆಗಿ ಬಿಡುತ್ತದೆ!

click me!