ಇನ್ನು 2-3 ತಿಂಗಳಲ್ಲಿ ಜಾತಿಗಣತಿ ವರದಿ ಸಲ್ಲಿಕೆ: ಜಯಪ್ರಕಾಶ ಹೆಗ್ಡೆ

By Kannadaprabha News  |  First Published Aug 3, 2023, 10:51 AM IST

'ಯಾವ ಮಕ್ಕಳಿಗೆ ತಂದೆ-ತಾಯಿ ಯಾರು ಎಂದು ಗೊತ್ತಿರುವುದಿಲ್ಲವೋ, ಬಾಲ ಮಂದಿರ ಮತ್ತಿತರ ಕಡೆ ಬೆಳೆದಿರುವ, ಮಕ್ಕಳನ್ನು ಅತಿ ಹಿಂದುಳಿದ ವರ್ಗಕ್ಕೆ ಸೇರಿಸಿ, ಮೀಸಲಾತಿ ಕೊಡಬೇಕೆಂದು ಶಿಫಾರಸು ಮಾಡಿದ್ದೇವೆ. ಈ ಮೀಸಲಾತಿಯನ್ನು ಹಿಂದುಳಿದ ವರ್ಗದೊಳಗೆ ಕೊಡಬೇಕಾಗುತ್ತದೆ' - ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ


ಮುಖಾಮುಖಿ ಸಂದರ್ಶನ

ಜಯಪ್ರಕಾಶ್‌ ಹೆಗ್ಡೆ, ಅಧ್ಯಕ್ಷ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

Latest Videos

undefined

- ಎಂ.ಆರ್‌.ಚಂದ್ರಮೌಳಿ

ಮೀಸಲಾತಿ ಎಂಬುದು ರಾಜಕೀಯ ಅಸ್ತ್ರವಾಗಿ ಪರಿವರ್ತಿತ ಕಾಲಘಟ್ಟವಿದು. ಮತ ಬೇಟೆಗಾಗಿ ನಿರ್ದಿಷ್ಟಸಮುದಾಯಗಳನ್ನು ಒಲೈಸುವ ರಾಜಕೀಯ ಪಕ್ಷಗಳ ಧೋರಣೆಯಿಂದಾಗಿ ಮೀಸಲಾತಿ ಎಂಬುದು ಅತ್ಯಂತ ಸಂಕೀರ್ಣ ರಾಜಕೀಯ ಸವಾಲಾಗಿ ಪರಿಣಮಿಸಿದೆ. ರಾಜಕೀಯ ಪಕ್ಷಗಳ ಈ ಆಟಕ್ಕೆ ಪೂರಕವಾಗಿ ಸಮುದಾಯಗಳು ನಡೆಸುವ ಮೀಸಲಾತಿ ಪೈಪೋಟಿ ಅಂತಿಮವಾಗಿ ರಾಜಕೀಯ ಪಕ್ಷಗಳಿಗೇ ನುಂಗಲಾಗದ ತುತ್ತಾದ ಪರಿಸ್ಥಿತಿಯನ್ನು ಇತಿಹಾಸದಲ್ಲಿ ಕಾಣಬಹುದು. ವೀರಶೈವ-ಲಿಂಗಾಯತ, ಪಂಚಮಸಾಲಿ, ಮುಸ್ಲಿಂ, ಒಕ್ಕಲಿಗ ಸೇರಿದಂತೆ ಹಲವು ಸಮುದಾಯಗಳು ಮೀಸಲಿಗೆ ರಸ್ತೆಗಿಳಿದು ಹೋರಾಟಕ್ಕೆ ಮುಂದಾಗಿದ್ದು, ಅಧಿಕಾರಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಮೀಸಲಾತಿಯ ಬಹುತೇಕ ಹೊರೆಯನ್ನು ಹೊರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ರಾಜಕೀಯ ಮೇಲಾಟದ ನಡುವೆಯೂ ಸಣ್ಣ ಪುಟ್ಟಸಮುದಾಯಗಳಿಗೆ ನ್ಯಾಯ ಒದಗಿಸುವ ದೊಡ್ಡ ಹೊಣೆ ನಿಭಾಯಿಸಲು ತುಸು ಹೆಚ್ಚೇ ಶ್ರಮ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಕಾಲಘಟ್ಟದಲ್ಲೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ.ಜಯಪ್ರಕಾಶ್‌ ಹೆಗ್ಡೆ ಅವರದ್ದು ಹಗ್ಗದ ಮೇಲಿನ ನಡಿಗೆ. ಸ್ಪಷ್ಟನಿಲುವು, ಸರಳ ನಡೆ-ನುಡಿಗೆ ಹೆಸರಾಗಿದ್ದರೂ ಸಂಕೀರ್ಣ ರಾಜಕೀಯ ಸವಾಲೆನಿಸಿದ ಮೀಸಲಾತಿಗೆ ಮರು ವರ್ಗೀಕರಣವನ್ನು ಹೆಗ್ಡೆ ನಿಭಾಯಿಸಿದ್ದು ಹೇಗೆ? ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಆಯೋಗದ ಶಿಫಾರಸು ಏನಾಗಿತ್ತು? ಮುಸ್ಲಿಂ ಮೀಸಲಾತಿಗೆ ಕೊಕ್‌ ನೀಡುವ ಮುನ್ನ ಆಯೋಗವನ್ನು ಸರ್ಕಾರ ವಿಚಾರಿಸಿತ್ತೆ? ತೀವ್ರ ಕುತೂಹಲ ಮೂಡಿಸಿರುವ ಆಯೋಗದ ಅಂತಿಮ ವರದಿ ಯಾವಾಗ ಬರುತ್ತದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಜಯಪ್ರಕಾಶ್‌ ಹೆಗ್ಡೆ.

ಲಿಂಗಾಯತ ಹಾಗೂ ಒಕ್ಕಲಿಗರಿಗೆ ಹೊಸ ಮೀಸಲಾತಿ ಅದೇಶಕ್ಕೆ ಸುಪ್ರೀಂಕೋರ್ಚ್‌ ತಡೆ ನೀಡಿತು. ಇದು ಆಯೋಗಕ್ಕೆ ಹಿನ್ನಡೆ ಅಲ್ಲವೇ?

ಇಲ್ಲ, ನಮ್ಮ ವರದಿ ಆಧಾರದಲ್ಲಿ ಹೊಸ ಮೀಸಲಾತಿಯನ್ನು ಸರ್ಕಾರ ಮಾಡಲಿಲ್ಲ. ಅದನ್ನೇ ಕೋರ್ಚ್‌ ಸಹ ಹೇಳಿದೆ. ನಾವು ಸಹ ಅಂತಿಮ ವರದಿ ಕೊಟ್ಟನಂತರವೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದ್ದೆವು. ಪ್ರಮುಖವಾಗಿ ಮೀಸಲಾತಿ ಮರು ವರ್ಗಿಕರಣ ಆಗಬೇಕೆಂದು ಹೇಳಿದ್ದೇವೆ. ಆದರೆ ಸರ್ಕಾರ ತನ್ನದೇ ಆದ ನಿರ್ಧಾರ ತೆಗೆದುಕೊಂಡಿದೆ.

ನಮಗೆ ಸಿದ್ಧಾಂತಕ್ಕಿಂತ ರಾಜ್ಯದ ಹಿತ ಮುಖ್ಯ; ಮೈತ್ರಿ ಆಯ್ಕೆ ಮುಕ್ತವಾಗಿರಿಸಿದ್ದೇವೆ: ಎಚ್‌ಡಿಕೆ

ಹೀಗೆ ಆಯೋಗದ ಶಿಫಾರಸಿಗೆ ಭಿನ್ನವಾಗಿ ಸರ್ಕಾರ ಮೀಸಲಾತಿ ನೀಡುವುದಾದರೆ ಆಯೋಗದ ರಚನೆ ಉದ್ದೇಶ ವಿಫಲವಾದಂತಲ್ಲವೇ?

ನೋ, ಕಮೆಂಟ್ಸ್‌.

ಮೀಸಲಾತಿ ನೀಡುವುದು, ತೆಗೆಯುವುದು ರಾಜಕಾರಣದ ಲಾಭಕ್ಕಾಗಿ ನಡೆಯುವ ಪ್ರಕ್ರಿಯೆ ಆಗಿದೆಯಾ?

ಈ ಪ್ರಶ್ನೆಯನ್ನು ಅವರನ್ನೇ ಕೇಳಬೇಕು, ನಾವು ಹೇಳಲು ಬರುವುದಿಲ್ಲ.

ವರದಿ ನೀಡುವ ವಿಷಯದಲ್ಲಿ ನಿಮಗೆ ರಾಜಕೀಯ ಒತ್ತಡವಿತ್ತೆ?

ಒತ್ತಡ ಅಂತ ಅಲ್ಲ. ಕಾಲಮಿತಿ ನಿಗದಿ ಮಾಡಿಕೊಂಡು ವರದಿ ಕೊಡಲು ಆಗುವುದಿಲ್ಲ. ಯಾಕೆಂದರೆ ಈ ವಿಷಯ ಕೋರ್ಚ್‌ ಪರಿಶೀಲನೆಗೆ ಒಳಪಡುತ್ತದೆ. ಹಾಗಾಗಿ ಉತ್ತಮವಾಗಿ ವರದಿ ಕೊಡಬೇಕಾಗುತ್ತದೆ. ಕೋರ್ಚ್‌ಗೆ ಹೋಗಿ ನಮಗೆ ಹಿನ್ನಡೆಯಾಗಬಾರದು ಎಂಬುದು ನಮ್ಮ ಮನಸ್ಸಿನಲ್ಲಿ ಇದೆ.

ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ಸರ್ಕಾರ ತೆಗೆದಿತ್ತು. ಈ ವಿಚಾರದಲ್ಲಿ ಆಯೋಗಕ್ಕೆ ಅಧಿಕಾರವಿಲ್ಲವೇ?

ಯಾವುದೇ ಬದಲಾವಣೆ ಮಾಡಬೇಕಾದರೆ ಆಯೋಗಕ್ಕೆ ವರದಿ ಕೇಳಬೇಕು. ಆಯೋಗದ ವರದಿ ಆಧರಿಸಿ ಮೀಸಲಾತಿ ಕೊಡಬೇಕಾಗುತ್ತದೆ. ಆದರೆ ಮುಸ್ಲಿಮರಿಗೆ ನೀಡುವಾಗ ಯಾರನ್ನೂ ಕೇಳಿರಲಿಲ್ಲ, ನಾವು ಕೊಟ್ಟಿರಲಿಲ್ಲ. ಈಗ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ತೆಗೆದ ಕಾರಣ ಅವರು ನೇರವಾಗಿ ಕೋರ್ಟ್ಗೆ ಹೋಗಿದ್ದಾರೆ.

ಹೋಗಲಿ, ಕಾಂತರಾಜು ವರದಿ ಗತಿಯೇನು?

ಕಾಂತರಾಜು ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲವೆಂದು ಕಾನೂನಿನ ತೊಡಕು ಇದೆ. ಪ್ರತಿ ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಮಾಡಿರಬೇಕು ಎಂದು ಕಾನೂನು ಹೇಳುತ್ತದೆ. ಅವರು ಸಹಿ ಮಾಡದೇ ಇದ್ದ ಕಾರಣ ಅದು ವರದಿ ಆಗುವುದಿಲ್ಲ. ಹೀಗಾಗಿ ಸರ್ಕಾರ ವರದಿ ಸ್ವೀಕರಿಸಲಿಲ್ಲ. ಆದರೆ ವರದಿಯಲ್ಲಿನ ದತ್ತಾಂಶವನ್ನು ಪಡೆಯಬಹುದು. ದತ್ತಾಂಶದಲ್ಲಿ ತಪ್ಪುಗಳಿಲ್ಲ. ಶಿಕ್ಷಕರು ದತ್ತಾಂಶ ಸಂಗ್ರಹಿಸಿದ್ದಾರೆ. ಅದನ್ನು ಬಳಸಿಕೊಂಡು, ವರದಿಯಲ್ಲಿನ ಒಳ್ಳೆಯ ಅಂಶ ತೆಗೆದುಕೊಂಡು ಬದಲಾವಣೆ ಮಾಡುತ್ತೇವೆ. ಕೇವಲ ಬದಲಾವಣೆ ನಮ್ಮ ಉದ್ದೇಶವಲ್ಲ, ಒಳ್ಳೆಯ ವರದಿ ಕೊಡಬೇಕು ಎಂಬುದು ನಮ್ಮ ಆಸೆಯಾಗಿದೆ. ಈ ನಿಟ್ಟಿನಲ್ಲಿ ಬದಲಾವಣೆ ಮಾಡಲು ಐವರು ತಜ್ಞರ ಸಮಿತಿ ರಚಿಸಿದ್ದೇವೆ. ಹಿಂದುಳಿದವರಿಗೆ ಸಾಮಾಜಿಕ, ಶೈಕ್ಷಣಿಕ ಮೀಸಲಾತಿ ಕೊಡಬೇಕಾಗುತ್ತದೆ. ಸಂವಿಧಾನದ ಪರಿಚ್ಛೇದ 15(4) ಹಾಗೂ 16(4) ಅಡಿಯಲ್ಲಿ ಮಾನದಂಡ ಆಧಾರದ ಮೇಲೆ ಎಷ್ಟುವೇಯ್ಟೇಜ್‌ ಕೊಡಬೇಕು ಎಂದು ನಿರ್ಧರಿಸಿದ ನಂತರ ವರದಿ ಕೊಡಬೇಕಾಗುತ್ತದೆ.

ಆದರೆ ಕಾಂತರಾಜು ವರದಿಗೆ ಪ್ರಮುಖವಾಗಿ ಲಿಂಗಾಯತ, ಒಕ್ಕಲಿಗ ಸಮುದಾಯದ ಆಕ್ಷೇಪವಿದೆಯಲ್ಲ?

ಸಮೀಕ್ಷೆ ಕುರಿತು ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ, ಹೊರಗಡೆ ಅಭಿಪ್ರಾಯ ಏನೇ ಇರಬಹುದು. ದತ್ತಾಂಶ ಸಂಗ್ರಹ ಮಾಡಿದ ಶಿಕ್ಷಕರು, ಅಧಿಕಾರಿಗಳಿಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇರಲಿಲ್ಲ. ಅವರು ಮನೆ ಮನೆಗೆ ಹೋಗಿ ದತ್ತಾಂಶ ಸಂಗ್ರಹಿಸಿದ್ದಾರೆ. ಹಾಗೆ ನೋಡಿದರೆ ಎಲ್ಲವೂ ಅನುಮಾನದ ಮೇಲೆ ನಡೆಯುತ್ತದೆ. ಈಗ ಆರು ಕೋಟಿ ಜನಸಂಖ್ಯೆ ಇದ್ದಲ್ಲಿ, ವ್ಯತ್ಯಾಸ ಶೇ.20ರಷ್ಟುಕಂಡು ಬಂದಿರಬಹುದು, ಅದಕ್ಕೆ ದತ್ತಾಂಶ ಸಂಗ್ರಹಿಸಲು ಆಗದೇ ಇರಬಹುದು. ವಿಶೇಷವಾಗಿ ಬೆಂಗಳೂರು ನಗರದಲ್ಲಿ ದತ್ತಾಂಶ ಕಡಿಮೆ ಆಗಿರಬಹುದು. ಅಪಾರ್ಚ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಒಳಗೆ ಹೋಗಲು ಬಿಟ್ಟಿರಲಿಕ್ಕಿಲ್ಲ. ಇದು ಕಾರಣ ಇರಬಹುದು.

ಅಂದರೆ, ಪರಿಷ್ಕೃತ ವರದಿ ಮೂಲ ವರದಿಗಿಂತ ಭಿನ್ನವಾಗಿರುತ್ತದೆಯೇ?

ಗೊತ್ತಿಲ್ಲ, ಈಗ ಕಾಂತರಾಜು ವರದಿ ಸಂಪೂರ್ಣವಾಗಿ ತೆಗೆದುಹಾಕಬೇಕು ಎಂಬ ಉದ್ದೇಶ ನಮ್ಮದಲ್ಲ, ಕಾಂತರಾಜು ವರದಿಯಲ್ಲಿನ ಒಳ್ಳೆಯ ಅಂಶಗಳನ್ನೆಲ್ಲ ಮುಂದುವರಿಸುತ್ತೇವೆ. ವರದಿ ನೀಡಿ ಆರೇಳು ವರ್ಷವಾಗಿರುವುದರಿಂದ ಸ್ವಲ್ಪ ಬದಲಾವಣೆ ಆಗಿಯೇ ಆಗುತ್ತದೆ. ಸ್ವಲ್ಪ ಪರ್ಸೆಂಟೇಜ್‌ ಸೇರಿಸಬೇಕಾಗುತ್ತದೆ.

ಅಂತಿಮ ವರದಿ ಸಲ್ಲಿಕೆಗೆ ಎಷ್ಟುಕಾಲ ಬೇಕಾಗಬಹುದು?

ಗರಿಷ್ಠ ಮೂರು ತಿಂಗಳ ಒಳಗೆ ವರದಿ ಸಿದ್ಧ ಮಾಡಬೇಕು ಎಂಬ ಉದ್ದೇಶವಿದೆ. ನಮ್ಮ ಅಧಿಕಾರಾವಧಿ ನವೆಂಬರ್‌ಗೆ ಕೊನೆಗೊಳ್ಳುವುದರಿಂದ ಅಷ್ಟರೊಳಗೆ ಮಾಡಲೇಬೇಕು. ಇದರ ಜೊತೆಗೆ ವರ್ಗಗಳ ಮರು ವರ್ಗೀಕರಣ ಮಾಡಬೇಕಾಗಿದೆ. 10 ವರ್ಷಕ್ಕೊಮ್ಮೆ ಮರು ವರ್ಗೀಕರಣ ಆಗಬೇಕು ಎಂದಿದೆ. ಆದರೆ 20 ವರ್ಷವಾದರೂ ಮೀಸಲಾತಿಯ ಮರು ವರ್ಗೀಕರಣ ಆಗಿಲ್ಲ. ಹಾಗಾಗಿ ಲಭ್ಯವಿರುವ ದತ್ತಾಂಶ ನೋಡಿಕೊಂಡು ಮಾಡಬೇಕಾಗುತ್ತದೆ.

ಇಷ್ಟೆಲ್ಲಾ ಮಾಡುವುದು ದೀರ್ಘವಾದ ಪ್ರಕ್ರಿಯೆಯಾಗುತ್ತದೆ. ಇದನ್ನೆಲ್ಲಾ ಮಾಡಲು ಸಾಧ್ಯವೆ?

ಮಾಡಿಯೇ ಮಾಡುತ್ತೇವೆ, ಫುಲ್‌ ಟೈಮ್‌ ಕೆಲಸ ಮಾಡಬೇಕಾಗುತ್ತದೆ. ಈಗಾಗಲೇ ನಮ್ಮಲ್ಲಿ ದತ್ತಾಂಶ ಇರುವುದರಿಂದ ಬೇಗ ಮಾಡಲು ಅವಕಾಶವಿದೆ. ದತ್ತಾಂಶ ಆರೇಳು ವರ್ಷದ ಹಿಂದಿನದ್ದಾಗಿರುವುದರಿಂದ ತಜ್ಞರ ಜೊತೆ ಚರ್ಚಿಸಿ ಎಷ್ಟುಪ್ರೊಜೆಕ್ಷನ್‌ ಕೊಡಬಹುದು ಎಂದು ನಿರ್ಧರಿಸಬೇಕಾಗುತ್ತದೆ.

ಆಯೋಗ ಪುನಃ ಸಮೀಕ್ಷೆ ಅಥವಾ ಆಕ್ಷೇಪಣೆಗೆ ಆಹ್ವಾನಿಸುವ ಪ್ರಕ್ರಿಯೆ ಮಾಡುತ್ತದೆಯೇ?

ಇಲ್ಲ, ಲಭ್ಯವಿರುವ ದತ್ತಾಂಶ ಹಾಗೂ ವರದಿಯಲ್ಲಿನ ಒಳ್ಳೆಯ ಅಂಶಗಳನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ಯಾವುದೇ ಸಮೀಕ್ಷೆ ಮಾಡಿದಾಗ ಸ್ವಲ್ಪ ವ್ಯತ್ಯಾಸ ಇದ್ದೇ ಇರುತ್ತದೆ.

ಅನಾಥ ಮಕ್ಕಳು, ಪೋಷಕರು ಇಲ್ಲದ ಮಕ್ಕಳಿಗೆ ಯಾವ ರೀತಿ ಮೀಸಲಾತಿ ನೀಡಿದ್ದೀರಿ, ಮೀಸಲಾತಿ ಎಲ್ಲಿಂದ ನೀಡುತ್ತೀರಿ?

ಯಾವ ಮಕ್ಕಳಿಗೆ ತಂದೆ-ತಾಯಿ ಯಾರು ಎಂದು ಗೊತ್ತಿರುವುದಿಲ್ಲವೋ, ಬಾಲ ಮಂದಿರ ಮತ್ತಿತರ ಕಡೆ ಬೆಳೆದಿರುವ, ಮಕ್ಕಳನ್ನು ಅತಿ ಹಿಂದುಳಿದ ವರ್ಗಕ್ಕೆ ಸೇರಿಸಿ, ಮೀಸಲಾತಿ ಕೊಡಬೇಕೆಂದು ಶಿಫಾರಸು ಮಾಡಿದ್ದೇವೆ. ಈ ಮೀಸಲಾತಿಯನ್ನು ಹಿಂದುಳಿದ ವರ್ಗದೊಳಗೆ ಕೊಡಬೇಕಾಗುತ್ತದೆ.

ಅಲೆಮಾರಿ/ಅರೆ ಅಲೆಮಾರಿ ಜಾತಿಗಳಿಗೆ ಪ್ರಮಾಣ ಪತ್ರ ನೀಡುವ ಸಂಬಂಧ ಆಯೋಗ ಮಾಡಿದ ಶಿಫಾರಸು ಯಾವ ಹಂತದಲ್ಲಿದೆ?

ಅಲೆಮಾರಿಯಲ್ಲಿ ಈಗ 47 ಜಾತಿ ಬರುತ್ತದೆ. ಇವರು ತಮಗೆ ಪ್ರಮಾಣ ಪತ್ರ ನೀಡುವಾಗ ‘ಅಲೆಮಾರಿ/ಬುಡಕಟ್ಟು ಎಂದು ಕೊಡಬೇಕೆಂಬ ಬೇಡಿಕೆ ಇತ್ತು. ಹೀಗಾಗಿ ‘ಅಲೆಮಾರಿ ಎಂದು ಸೇರಿಸಲು ಆಯೋಗ ಶಿಫಾರಸು ಮಾಡಿದೆ, ಆದರೆ ‘ಬುಡಕಟ್ಟು’ ಎಂದು ಬರೆಯಲು ಆಯೋಗ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ.

ಸದ್ಯ ಆಯೋಗದ ಮುಂದೆ ಎಷ್ಟುಮನವಿಗಳು ಇವೆ, ಅವು ಯಾವ ಹಂತದಲ್ಲಿದೆ?

ನಾವು ಬಂದ ಮೇಲೆ 40-45 ಮನವಿ ಇತ್ತು. ಈಗಾಗಲೇ 34 ವರದಿಗಳನ್ನು ಸರ್ಕಾರಕ್ಕೆ ನೀಡಿದ್ದೇವೆ. ಜೊತೆಗೆ ಅನಾಥ ಮಕ್ಕಳ ವರದಿ ಸಹ ಸೇರಿದೆ. ಇನ್ನೂ ಸಹ ಸಾಕಷ್ಟುಮನವಿ ಬರಬಹುದು. ಆದರೆ ಬಹುತೇಕ ಮನವಿಗಳು ತಿರಸ್ಕೃತವಾಗುವಂತದ್ದಾಗಿದೆ. ಉಳಿದಂತೆ ಆಯೋಗ ಶಿಫಾರಸು ಮಾಡಿದವುಗಳು ಸರ್ಕಾರದ ಮುಂದೆ ಬಾಕಿ ಇದೆ. ಅದನ್ನು ಸೇರ್ಪಡೆ ಮಾಡುವಂತೆ ಆಯೋಗ ಫಾಲೋ ಅಪ್‌ ಮಾಡುತ್ತಿದೆ. ಈ ಬಗ್ಗೆ ಆಯೋಗ ಪಟ್ಟಿಮಾಡಿ ಸರ್ಕಾರಕ್ಕೆ ಕಳಿಸಲಾಗುವುದು.

ಈ ರೀತಿಯ ಜಾತಿಗಳು ಎಷ್ಟಿವೆ? ಇವರನ್ನು ಯಾವ ಪ್ರವರ್ಗಕ್ಕೆ ಸೇರ್ಪಡೆ ಮಾಡಲು ಶಿಫಾರಸು ಮಾಡುತ್ತೀರಿ?

ಜಾಸ್ತಿ ಇಲ್ಲ. ಇವರಲ್ಲಿ ಕೆಲವರು ಪ್ರವರ್ಗ-1ಕ್ಕೆ, ಇನ್ನೂ ಕೆಲವರು 2ಎಗೆ ಬರುತ್ತಾರೆ. ನಾವು ಶಿಫಾರಸು ಮಾಡಿ ಕಳಿಸುತ್ತೇವೆ. ಸರ್ಕಾರ ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಉಳಿದಂತೆ ನಾವು ವೀರಶೈವ-ಲಿಂಗಾಯತ ಸಮುದಾಯವನ್ನು ಒಂದು ಕಡೆ ತರಲು ಪ್ರಯತ್ನ ಮಾಡಿದ್ದೇವೆ. ಈಗಾಗಲೇ ವೀರಶೈವ ಲಿಂಗಾಯತ ಅಂತ ಇದೆ, ಕೆಲವು ಉಪಜಾತಿ ಹಾಕಿದ್ದಾರೆ. ಎಲ್ಲವನ್ನೂ ಸೇರಿಸಿ ಒಂದು ಪಟ್ಟಿಮಾಡಿದ್ದೇವೆ.

ಮುಖಾಮುಖಿ ಸಂದರ್ಶನ: ಎಚ್‌ಡಿಕೆ ಕಾಲದ ವರ್ಗಾವಣೆ ಮಾಹಿತಿ ಹೊರಬರಲಿ - ಚಲುವರಾಯಸ್ವಾಮಿ

ಅಂತಿಮ ವರದಿ ಯಾವಾಗ ನಿರೀಕ್ಷಿಸಬಹುದು?

ಬಹುಶಃ ವರದಿಯನ್ನು 2-3 ತಿಂಗಳಲ್ಲಿ ಕೊಡುತ್ತೇವೆ.

ನೀವು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರಂತೆ ಹೌದಾ?

ಸರ್ಕಾರ ಬದಲಾವಣೆಯಾದ ನಂತರ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಹಾಗೆಯೇ ಬಸವರಾಜ ಬೊಮ್ಮಾಯಿ ಅವರನ್ನು ಕಂಡಿದ್ದೇನೆ. ಆದರೆ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು ಸೆನ್ಸೆಷನ್‌ ಆಗಲಿಲ್ಲ. ಆದರೆ ಈಗ ಆಯೋಗದ ಅಧ್ಯಕ್ಷನಾಗಿರುವುದರಿಂದ ಯಾವುದೇ ರಾಜಕೀಯ ಪಕ್ಷದ ಸದಸ್ಯನಾಗಲು ಬರುವುದಿಲ್ಲ. ನವೆಂಬರ್‌ 26ಕ್ಕೆ ಅಧಿಕಾರದ ಅವಧಿ ಮುಗಿಯುತ್ತದೆ. ಅಲ್ಲಿವರೆಗೆ ಯಾವುದೇ ರಾಜಕೀಯ ಹೇಳಿಕೆ ನೀಡುವುದಿಲ್ಲ.

click me!