ಸುಮ್ಮನಹಳ್ಳಿ ಮೇಲ್ಸೇತುವೆ ಮೇಲ್ಭಾಗದಲ್ಲಿ ಬಿದ್ದ ದೊಡ್ಡ ಗುಂಡಿಗೆ ಕಾರಣ ಏನು ಎಂಬುದನ್ನು ತಿಳಿಯುವುದಕ್ಕೆ ಬಿಬಿಎಂಪಿ ನೇಮಿಸಿದ ಸಿವಿಲ್-ಎಡ್ ಟೆಕ್ನೋಕ್ಲಿನಿಕ್ ಸಂಸ್ಥೆಯ ತಜ್ಞರ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಡ್ರೋನ್ ಬಳಸಿ ತಪಾಸಣೆ ನಡೆಸಿದೆ.
ಬೆಂಗಳೂರು(ನ.05): ಸುಮ್ಮನಹಳ್ಳಿ ಮೇಲ್ಸೇತುವೆ ಮೇಲ್ಭಾಗದಲ್ಲಿ ಬಿದ್ದ ದೊಡ್ಡ ಗುಂಡಿಗೆ ಕಾರಣ ಏನು ಎಂಬುದನ್ನು ತಿಳಿಯುವುದಕ್ಕೆ ಬಿಬಿಎಂಪಿ ನೇಮಿಸಿದ ಸಿವಿಲ್-ಎಡ್ ಟೆಕ್ನೋಕ್ಲಿನಿಕ್ ಸಂಸ್ಥೆಯ ತಜ್ಞರ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಡ್ರೋನ್ ಬಳಸಿ ತಪಾಸಣೆ ನಡೆಸಿದೆ.
ಕಳೆದ ಶುಕ್ರವಾರ ರಾತ್ರಿ ನಗರದ ರಿಂಗ್ ರಸ್ತೆಯ ಸುಮ್ಮನಹಳ್ಳಿಯ ಮೇಲ್ಸೇತುವೆ ಮೇಲ್ಭಾಗದಲ್ಲಿ ದೊಡ್ಡ ಗುಂಡಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಗುಂಡಿ ಸೃಷ್ಟಿಗೆ ಕಾರಣ ತಿಳಿಯಲು ನಗರದ ಸಿವಿಲ್-ಎಡ್ ಟೆಕ್ನೋಕ್ಲಿನಿಕ್ ಸಂಸ್ಥೆ ನೇಮಿಸಿದ್ದರು.
ಬ್ರಿಡ್ಜ್ ನಲ್ಲಿ ಭಾರೀ ಗುಂಡಿ : ಸಂಚಾರ ಮಾರ್ಗ ಬದಲಾಗಿ ಕಿ.ಮೀವರೆಗೂ ಟ್ರಾಫಿಕ್ ಜಾಮ್.
ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಸಿವಿಲ್-ಎಡ್ ಸಂಸ್ಥೆಯ ಮುಖ್ಯಸ್ಥ ಮೋಹನ್ ಕುಮಾರ್ ನೇತೃತ್ವದ ತಂಡ ಮೇಲ್ಸೇತುವೆ ಪರಿಶೀಲನೆ ನಡೆಸಿ ಗುಂಡಿ ಬಿದ್ದ ಸ್ಥಳದ ಮೇಲ್ಸೇತುವೆ ನಿರ್ಮಾಣಕ್ಕೆ ಬಳಸಿದ ಕಬ್ಬಿಣ, ಮರಳು, ಸಿಮೆಂಟ್ ಹಾಗೂ ಜಲ್ಲಿ ಮಾದರಿ ಸಂಗ್ರಹಿಸಿದರು.
ಪರಿಶೀಲನೆಗೆ ಡ್ರೋನ್ ಬಳಕೆ:
ಗುಂಡಿ ಬಿದ್ದ ಸ್ಥಳ ಮಾತ್ರವಲ್ಲದೇ ಇಡೀ ಮೇಲ್ಸೇತುವೆಯ ಪರಿಶೀಲನೆಗೆ ಬಿಬಿಎಂಪಿ ಸೂಚನೆ ನೀಡುವುದರಿಂದ ಸಿವಿಲ್-ಎಡ್ ಸಂಸ್ಥೆ ಪರಿಶೀಲನೆಗೆ ಡ್ರೋನ್ ಬಳಸುತ್ತಿದೆ. ಮೇಲ್ಸೇತುವೆಯ ಮೂಲೆ ಮೂಲೆಯನ್ನು ತಪಾಸಣೆ ನಡೆಸಲಾಗುತ್ತಿದ್ದು, ಫೋಟೋ, ವಿಡಿಯೋ ಚಿತ್ರಗಳನ್ನು ಡ್ರೋನ್ ಸಹಾಯದೊಂದಿಗೆ ದಾಖಲಿಸುತ್ತಿದೆ. ಇಡೀ ಸೇತುವೆ ಪರಿಶೀಲನೆ ಮತ್ತು ಮಾದರಿ ಸಂಗ್ರಹಿಸಲು ಮೂರರಿಂದ ನಾಲ್ಕು ದಿನ ಬೇಕಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಮೋಹನ್ ಕುಮಾರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ತಪಾಸಣೆ, ಮಾದರಿ ಸಂಗ್ರಹ:
ಸೇತುವೆ ನಿರ್ಮಾಣಕ್ಕೆ ಬಳಸಿದ ಕಬ್ಬಿಣ, ಸಿಮೆಂಟ್, ಮರಳು, ಕಾಂಕ್ರೀಟ್ ಮಾದರಿಗಳನ್ನು ಫೋಟೋ ಮತ್ತು ವಿಡಿಯೋ ದಾಖಲೆಯೊಂದಿಗೆ ಸಂಗ್ರಹಿಸಲಾಗುತ್ತದೆ. ಜತೆಗೆ ಕಂಬ (ಪಿಲ್ಲರ್), ಅಡ್ಡ ಕಂಬ(ಭೀಮ್), ಬೇರಿಂಗ್ ಹಾಗೂ ಸೇತುವೆಯನ್ನು ನಕ್ಷೆಗೆ ಅನುಸಾರವಾಗಿ ನಿರ್ಮಿಸಲಾಗಿದೆ ಅಥವಾ ನಕ್ಷೆ ಉಲ್ಲಂಘಿಸಲಾಗಿದೆಯೇ ಎಂಬ ಅಂಶಗಳನ್ನು ಪರಿಶೀಲಿಸಲಾಗುವುದು. ಸಂಪೂರ್ಣ ಮಾಹಿತಿ ಪಡೆದು ಮಾದರಿಗಳನ್ನು ಪರೀಕ್ಷಿಸಿ ವರದಿ ಸಿದ್ಧಪಡಿಸಿ ಬಿಬಿಎಂಪಿಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿದೇಶದ ಸ್ಪೆಷಲ್ ಸಿಮೆಂಟ್‌ಗೆ ಶಿಫಾರಸು
ಸೇತುವೆ ಮೇಲಿನ ಗುಂಡಿ ಭರ್ತಿಗೆ ಈಗಾಗಲೇ ಸಿವಿಲ್-ಎಡ್ ಟೆಕ್ನೋಕ್ಲಿನಿಕ್ ಸಂಸ್ಥೆ ಸ್ಪೆಷಲ್ ಸಿಮೆಂಟ್ ಶಿಫಾರಸು ಮಾಡಿದೆ. ಈ ಸಿಮೆಂಟ್‌ನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಈ ಸಿಮೆಂಟ್‌ನಲ್ಲಿ ಸಿದ್ಧ ಪಡಿಸಿದ ಕಾಂಕ್ರಿಟ್ ಕೇವಲ 24 ಗಂಟೆಯಲ್ಲಿ ಗಟ್ಟಿಯಾಗುತ್ತದೆ. 48 ಗಂಟೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬಹುದಾಗಿದೆ. ಸಾಮಾನ್ಯ ಸಿಮೆಂಟ್‌ಗಿಂತ ಐದಾರು ಪಟ್ಟು ದುಬಾರಿಯಾಗಿದೆ. ಸಾಮಾನ್ಯ ಸಿಮೆಂಟ್ ಬಳಕೆ ಮಾಡಿದರೆ ಕ್ಯೂರಿಂಗ್‌ಗೆ 28 ದಿನ ಬೇಕಾಗಲಿದೆ. ಆ ಕಾರಣಕ್ಕೆ ವಿಶೇಷ ಸಿಮೆಂಟ್‌ಗೆ ಶಿಫಾರಸು ಮಾಡಲಾಗಿದೆ ಎಂದು ಮೋಹನ್ ಕುಮಾರ್ ತಿಳಿಸಿದ್ದಾರೆ.
ನಾಳೆಯಿಂದ ಗುಂಡಿ ಭರ್ತಿ
ಬುಧವಾರದ ವೇಳೆಗೆ ಬರುವ ವಿಶೇಷ ಸಿಮೆಂಟ್‌ನಿಂದ ಗುಂಡಿ ಭರ್ತಿ ಮಾಡಲಾಗುವುದು. ನಂತರ ಮತ್ತೆ ಪರಿಶೀಲನೆ ನಡೆಸಿ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ.
ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ, ವಾಹನ ಸವಾರರೇ ಹುಷಾರ್..!