ಬೆಂಗಳೂರು (ಮೇ.15): ಕೊರೋನಾ ವಿರುದ್ಧ ಹೋರಾಡಲು ನವೀನ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಲು ಐಐಎಸ್ಸಿ ಮತ್ತು ಡಿಆರ್‌ಡಿಒ ನಂತಹ ಸಂಸ್ಥೆಗಳು ಮಾಡಿದ ಪ್ರಯತ್ನಗಳು ಶ್ಲಾಘನೀಯ. ಐಐಎಸ್ಸಿ ಅಭಿವೃದ್ಧಿಪಡಿಸಿದ ಲಸಿಕೆ ಬೆಚ್ಚಗಿನ ತಾಪಮಾನದಲ್ಲಿ ಸಂಗ್ರಹಿಸಬಹುದು ಮತ್ತು ಡಿಆರ್‌ಡಿಒ ಅಭಿವೃದ್ಧಿಪಡಿಸಿದ 2-ಡಿಜಿ ಔಷಧ ಮತ್ತು ಆಕ್ಸಿಕೇರ್ ವ್ಯವಸ್ಥೆಯು ಕೋವಿಡ್ -19 ವಿರುದ್ಧದ ಯುದ್ಧದಲ್ಲಿ ಪ್ರಮುಖ ಅಸ್ತ್ರವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
DRDO ಅಭಿವೃದ್ಧಿಪಡಿಸಿದ 1.5 ಲಕ್ಷ ಆಕ್ಸಿಕೇರ್ ಯುನಿಟ್ ಖರೀದಿಗೆ ಕೇಂದ್ರ ಗ್ರೀನ್ ಸಿಗ್ನಲ್! .
undefined
ಬೆಂಗಳೂರಿನ ಸಿ.ವಿ.ರಾಮನ್ ನಗರದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ರೋಗಿಗಳ ತುರ್ತು ಚಿಕಿತ್ಸೆಗೆ ನೆರವಾಗಬಲ್ಲುದು ಎಂದು ನಿರೀಕ್ಷಿಸಲಾಗಿರುವ 2-ಡಿಜಿ ಔಷಧ ಹಾಗೂ ರೋಗಿಗಳಿಗೆ ಆಮ್ಲಜನಕವನ್ನು ಪರಿಣಾಮಕಾರಿಯಾಗಿ ಪೂರೈಸಬಲ್ಲ ಆಕ್ಸಿಕೇರ್ ಯಂತ್ರದ ಬಗ್ಗೆ ಮಾಹಿತಿ ಪಡೆದ ಬಳಿಕ ಅವರು ಪ್ರತಿಕ್ರಿಯೆ ನೀಡಿದರು.
ಔಷಧ ಮಾಹಿತಿ:
ಸಚಿವರಿಗೆ 2-ಡಿಜಿ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, 2-ಡಿಜಿ ಔಷಧ ಕೋವಿಡ್ ರೋಗಿಗಳು ಬೇಗನೇ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಆಮ್ಲಜನಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಡಿಆರ್‌ಡಿಒ ಸಂಸ್ಥೆಯ ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (ಐಎನ್‌ಎಂಎಎಸ್) ಹೈದರಾಬಾದ್‌ನ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಸಹಯೋಗದೊಂದಿಗೆ 2-ಡಿಜಿ ಅಭಿವೃದ್ಧಿ ಪಡಿಸಿದೆ. ಕ್ಲಿನಿಕಲ್ ಪ್ರಯೋಗಾಲಯದಲ್ಲಿ ಧನಾತ್ಮಕ ಪರಿಣಾಮ ಕಂಡುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೊರೋನಾ ತುರ್ತು ಚಿಕಿತ್ಸೆಗೆ 2ಡಿಜಿ ‘ಸಂಜೀವಿನಿ’; ರೋಗಿಗಳಲ್ಲಿ ಶೀಘ್ರ ಚೇತರಿಕೆ
ಆಕ್ಸಿಕೇರ್ ಯಂತ್ರ:
ಕೋವಿಡ್ ರೋಗಿಗಳಿಗೆ ಆಮ್ಲಜನಕವನ್ನು ಪರಿಣಾಮಕಾರಿಯಾಗಿ ಬಳಸಲು ಪೂರಕವಾದ ಆಕ್ಸಿಕೇರ್ ವ್ಯವಸ್ಥೆಯನ್ನು ಡಿಆರ್‌ಡಿಒ ಆಭಿವೃದ್ಧಿಪಡಿಸಿದೆ. ರೋಗಿಗಳ ಆಮ್ಲಜನಕದ ಮಟ್ಟವನ್ನು ಆಧಾರಿಸಿ ಇದು ಸ್ವಯಂಚಾಲಿತವಾಗಿ ಆಮ್ಲಜನಕದ ಪೂರೈಕೆಯನ್ನು ನಿರ್ವಹಿಸುತ್ತದೆ. ಇದು ಆಸ್ಪತ್ರೆಯಲ್ಲಿ ಹಾಗೆಯೇ ಟೆಲಿ-ಸಮಾಲೋಚನೆಯ ಸಂದರ್ಭದಲ್ಲಿ ಸಹಕಾರಿಯಾಗಿದೆ. ಏನಾದರೂ ತೊಂದರೆ ಕಾಣಿಸಿಕೊಂಡರೆ ತಕ್ಷಣವೇ ಆಡಿಯೋ ಎಚ್ಚರಿಕೆಯನ್ನು ರವಾನಿಸುತ್ತದೆ. ಇದರ ಜೊತೆಯಲ್ಲಿ, ಆಮ್ಲಜನಕವನ್ನು ಸಮರ್ಥವಾಗಿ ಬಳಸುವುದಕ್ಕಾಗಿ ನಾನ್-ರಿಬ್ರೀಥರ್ ಮಾಸ್ಕ್ (ಎನ್‌ಆರ್‌ಎಂ) ಅನ್ನು ಆಕ್ಸಿಕೇರ್ ಸಿಸ್ಟಂಗಳೊಂದಿಗೆ ಸಂಯೋಜಿಸಲಾಗಿದ್ದು ಇದು ಆಮ್ಲಜನಕವನ್ನು ಶೇ. 30-40 ರಷ್ಟುಉಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಇದೇ ವೇಳೆ, ನವದೆಹಲಿಯ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಯಿತು. ಸಂಸ್ಥೆಯ ನಿರ್ದೇಶಕಿ ಮಂಜುಳಾ, ಡಿಇಬಿಇಎಲ್ ನಿರ್ದೇಶಕ ಡಾ. ಯು.ಕೆ. ಸಿಂಗ್, ಎಲ್ ಆರ್‌ಡಿಇ ನಿರ್ದೇಶಕ ಪಿ. ರಾಧಾಕೃಷ್ಣ, ಎಸ್ಟೇಟ್ ಮ್ಯಾನೇಜರ್ ಜೆ.ಡಿ.ಜಿ. ಪ್ರಸಾದ್ ರಾಜು, ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ, ನಿರ್ದೇಶಕ ಓಂಪ್ರಕಾಶ್ ಪಾಟೀಲ್, ಡ್ರಗ್ಸ್ ಕಂಟ್ರೋಲ್ ಇಲಾಖೆಯ ಅಮರೇಶ್ ತುಂಬಗಿ, ನಗರ ಜಿಲ್ಲೆಯ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಮತ್ತಿತರರಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona