ಬೆಂಗಳೂರು (ಮೇ.18): ಕೊರೋನಾ ವೇಳೆ ಅನೇಕ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದು ಅನಾಥ ಮಕ್ಕಳನ್ನು ದತ್ತು ಪಡೆಯುವ ನಿಯಮ ಬದಲಾವಣೆ ಮಾಡಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಬೆಂಗಳೂರಿಲ್ಲಿಂದು ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ತಂದೆ ತಾಯಿ ಕಳೆದುಕೊಂಡ ಮಗುವನ್ನು ಮೊದಲು ಇಲಾಖೆಯ ಮೂಲಕ ಪಡೆದುಕೊಂಡು ನಂತರ ಆ ಮಗುವನ್ನು ಅವರನ್ನು ನೋಡಿಕೊಳ್ಳುವವರಿಗೆ ನೀಡುತ್ತೇವೆ. ಅನಾಥ ಮಕ್ಕಳ ಗುರುತಿಸುವಿಕೆ ಮತ್ತು ಪುನರ್ವಸತಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.
ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ಸಾವು : ಅನಾಥನಾದ ಮಗ ...
ರಕ್ಷಣೆ ಅಗತ್ಯತೆ ಇರುವ ಮಕ್ಕಳಿಗೆ ಮಗುವಿನ ಹತ್ತಿರದ ಸಂಬಂಧಿಗಳು ಆರೈಕೆ ಮಾಡಲು ಇಚ್ಛಿಸಿದ್ದಲ್ಲಿ ಅವರನ್ನು ಬಾಲನ್ಯಾಯ ಕಾಯಿದೆ 2015 ರ ಅನ್ವಯ ಫಿಟ್ ಪರ್ಸನ್ ಎಂದು ಗುರುತಿಸಿ ಮಗುಬಿನ ತಾತ್ಕಾಲಿಕ ಆರೈಕೆಯನ್ನು ಅವರಿಗೆ ವಹಿಸಲಾಗುತ್ತದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ವಾಟ್ಸಪ್ ಗಳಲ್ಲಿ ಬರುವ ವದಂತಿಗಳಿಗೆ ಕಿವಿಗೊಡದೇ ಸರ್ಕಾರದ ನಿಯಮಾವಳಿಯಂತೆ ಮಕ್ಕಳ ರಕ್ಷಣೆ ಮತ್ತು ದತ್ತು ಕ್ರಮ ಮಾಡಲು ಮಾತ್ರ ಅವಕಾಶ ಒದಗಿಸಲಾಗುತ್ತದೆ. ರಾಜ್ಯದಲ್ಲಿ ಸದ್ಯ ಕೋವಿಡ್ ನಿಂದಾಗಿ ಇಬ್ಬರು ಮಕ್ಕಳು ಅನಾಥವಾದ ಮಾಹಿತಿ ಬಂದಿದೆ. ದತ್ತು ಪ್ರಕ್ರಿಯೆ ಬಗ್ಗೆ ಎಚ್ಚರಿಕೆ ವಹಿಸಲಾಗುವುದು. ಯಾರೂ ಕೂಡ ನೇರವಾಗಿ ಇಂತಹ ಕಾರ್ಯಕ್ಕೆ ಕೈಹಾಕಬಾರದು. ಪ್ರತಿ ಜಿಲ್ಲೆಯಲ್ಲಿ ಸೇವಾ ಕಾರ್ಯಪಡೆ ಮಾಡುತ್ತೇವೆ. ಸ್ವಯಂ ಸೇವಕರು ಇದರಲ್ಲಿ ಕೈಜೋಡಿಸಬಹುದು ಎಂದರು.
ಸಹಾಯವಾಣಿ : ಕೋರೋನಾ ಭಾದಿತರಾದ ಮಕ್ಕಳನ್ನು ಗುರುತಿಸಲು 1098 ಮಕ್ಕಳ ಸಹಾಯವಾಣಿ ಮಾಡಲಾಗಿದೆ. ಕೋವಿಡ್ ಸೋಂಕಿಗೆ ಒಳಗಾದ ಮಕ್ಕಳ ಆರೈಕೆಯನ್ನು ಆದ್ಯತೆಯ ಮೇರೆಗೆ ಕುಟುಂಬದ ವಾತಾವರಣದಲ್ಲಿ ನೊಡಿಕೊಲ್ಳುವುದು ಇಲಾಖೆಯ ಕರ್ತವ್ಯವಾಗಿದೆ ಎಂದು ಅವರು ಸಚಿವೆ ಜೊಲ್ಲೆ ಹೇಳಿದರು.
ತಂದೆ - ತಾಯಿ ಬಲಿ ಪಡೆದ ಕೊರೋನಾ : ಅನಾಥವಾದ ಪುಟ್ಟ ಮಗು .
ಮಕ್ಕಳ ಮೇಲೆ ಪರಿಣಾಮ : ಇನ್ನು ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಶಶಿಕಲಾ ಜೊಲ್ಲೆ ಹೇಳಿದರು.
ಮೂರನೇ ಅಲೆಯನ್ನು ಎದುರಿಸುವ ಬಗ್ಗೆ ತಳಮಟ್ಟದಲ್ಲಿ ಜಾಗೃತಿ ವಹಿಸಿದ್ದೇವೆ. ಮಕ್ಕಳಿಗೆ ಬೇಕಾದ ಎಲ್ಲಾ ರೀತಿಯ ಪೌಷ್ಠಿಕ ಆಹಾರ ನೀಡಲು ಕ್ರಮ ಕೈಗೊಂಡಿದ್ದೇವೆ. ಅನಾಥ ಮಕ್ಕಳಿಗೆ ಭಾಗ್ಯಲಕ್ಷ್ಮೀ ಮಾದರಿ ಯೋಜನೆಯ ನೆರವು ನೀಡಲು ಸಿಎಂ ಅವರನ್ನು ಕೋರಲಾಗುವುದು. ದಾನಿಗಳ ಮೂಲಕವೂ ನೆರವು ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು ಶಶಿಕಲಾ ಜೊಲ್ಲೆ.
25 ಅಂಗನವಾಡಿ ಕಾರ್ಯಕರ್ತೆಯರು ಸಾವು : ರಾಜ್ಯದಲ್ಲಿ ಕೋವಿಡ್ ಕರ್ತವ್ಯದಿಂದ 25 ಮಂದಿ ಅಂಗನವಾಡಿ ಕಾರ್ಯಕರ್ತೆಯರು ಮೃತಪಟ್ಟಿದ್ದಾರೆ. 5 ಕಾರ್ಯಕರ್ತೆಯರ ಕುಟಂಬಕ್ಕೆ ತಲಾ 30 ಲಕ್ಷ ನೀಡಲಾಗಿದೆ. 20 ಕುಟುಂಬಗಳಿಗೆ ಪರಿಹಾರ ಬಿಡುಗಡೆಯಾಗಿದೆ. ಎರಡು ದಿನದಲ್ಲಿ ಸರ್ಕಾರ ಕುಟುಂಬಗಳಿಗೆ ಪರಿಹಾರ ವಿತರಿಸಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಸಂಕಷ್ಟ ಕಾಲದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ನಿರ್ವಹಿಸುತ್ತಲೂ ಇದ್ದಾರೆ ಎಂದರು.
ಕ್ವಾರಂಟೈನ್ ಸೌಲಭ್ಯ :ಕೋವಿಡ್ ಬಾಧಿತ ಮಕ್ಕಳಿಗಾಗಿ 0-6 ವಯೋಮಾನದ ಮಕ್ಕಳಿಗಾಗಿ ಕ್ವಾರಂಟೈನ್ ಸೌಲಭ್ಯ ಮಾಡುತ್ತಿದ್ದೇವೆ. ತಾತ್ಕಾಲಿಕ ಆರೈಕೆ ಸೌಲಭ್ಯಕ್ಕಾಗಿ 30 ಜಿಲ್ಲೆಗಳಲ್ಲಿ ವಿಶೇಷ ದತ್ತು ಸಂಸ್ಥೆಗಳಲ್ಲಿ ಪ್ರತ್ಯೇಕ ಸೌಲಭ್ಯವನ್ನು ಮಾಡಲಾಗುವುದು. 7-18 ವಯಸ್ಸಿನಲ್ಲಿ ಮಕ್ಕಳ ಕ್ವಾರಂಟೈನ್ ಸೌಲಭ್ಯ ಮತ್ತು ತಾತ್ಕಾಲಿಕ ಸೌಲಭ್ಯಕ್ಕಾಗಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಫಿಟ್ ಫೆಸಿಲಿಟಿಸ್ ಸೆಂಟರ್ ಮಾಡಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುವ ಸಂಭವ. ಈ ಹಿನ್ನೆಲೆಯಲ್ಲಿ ಒಂದು ರೆಸಿಡೆನ್ಸಿಯಲ್ ಶಾಲೆಯನ್ನು 0-18 ವಯೋ ಗುಂಪಿನ ಎಲ್ಲಾ ಮಕ್ಕಳ ಕ್ವಾರಂಟೈನ್ ಹಾಗೂ ತಾತ್ಕಾಲಿಕ ಪುನರ್ವಸತಿ ಸೌಲಭ್ಯಕ್ಕಾಗಿ ಸಿದ್ಧಪಡಿಸಲಾಗುತ್ತಿದೆ. ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವೆ ಜೊಲ್ಲೆ ತಿಳಿಸಿದರು.