ಉಕ್ಕಿದ ನದಿಗಳು, ತುಂಬುತ್ತಿವೆ ಡ್ಯಾಂ: ಒಂದೇ ವಾರದಲ್ಲಿ ಬದಲಾಯ್ತು ಬರದ ಚಿತ್ರಣ..!

By Kannadaprabha News  |  First Published Jul 23, 2023, 3:29 AM IST

ಒಂದೇ ವಾರದಲ್ಲಿ ಬದಲಾಯ್ತು ಉತ್ತರ ಕರ್ನಾಟಕದ ಹಲವೆಡೆ ಇದ್ದ ಬರದ ಛಾಯೆ, ಮುಂಗಾರು ಚುರುಕು, ‘ಮಹಾ’ ಮಳೆ: ಡ್ಯಾಂ, ಬ್ಯಾರೇಜಲ್ಲಿ ನೀರು ಶೇ.20 ಹೆಚ್ಚಳ


ಬೆಳಗಾವಿ(ಜು.23):  ಜುಲೈ ತಿಂಗಳ ಮೊದಲಾರ್ಧದ ವರೆಗೆ ಕೈಕೊಟ್ಟಮುಂಗಾರು ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಆವರಿಸಿದ್ದ ಬರದ ವಾತಾವರಣ ಕೊಂಚ ಬದಲಾಗಿದೆ. ಕಳೆದೊಂದು ವಾರದಿಂದ ಈ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಸೇರಿ ಹಲವು ಜಲಾಶಯಗಳು ಹಾಗೂ ಬ್ಯಾರೇಜ್‌ಗಳ ನೀರಿನ ಒಳಹರಿವು ಶೇ.15ರಿಂದ 20ರಷ್ಟು ಹೆಚ್ಚಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

ಈ ಮಧ್ಯೆ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರವೂ ಮಳೆ ಮುಂದುವರಿದಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ, ಭೀಮಾ ಸೇರಿ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಪ್ರವಾಹದ ಆತಂಕ ಶುರುವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಮುಳುಗಡೆಯಾಗಿರುವ 14 ಸೇತುವೆಗಳು ಯಥಾಸ್ಥಿತಿಯಲ್ಲಿದ್ದು, ನದಿ ಸಮೀಪದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಬೈಲಹೊಂಗಲದಲ್ಲಿ ಮನೆಯೊಂದರ ಛಾವಣಿ ಕುಸಿದು 13 ಮಂದಿಗೆ ಗಾಯಗಳಾಗಿವೆ.

Tap to resize

Latest Videos

ಉತ್ತರದಲ್ಲಿ ಮತ್ತೆ ಮಳೆ ಅಬ್ಬರ: ಹಿಮಾಚಲದಲ್ಲಿ 3 ಸಾವು, ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 26ಕ್ಕೇರಿಕೆ

ಬದಲಾಯ್ತು ಬರದ ಚಿತ್ರಣ: 

ಕಳೆದೊಂದು ವಾರದ ಹಿಂದೆ ಉತ್ತರ ಕರ್ನಾಟಕದಲ್ಲಿ ಬರದ ವಾತಾವರಣ ಇತ್ತು. ಆದರೆ ವಾರದಿಂದೀಚೆಗೆ ಬೆಳಗಾವಿ, ಯಾದಗಿರಿ, ಕಲಬುರಗಿ, ಬೀದರ್‌ನಲ್ಲಿ ಸುರಿಯುತ್ತಿರುವ ಮಳೆ ಈ ಭಾಗದ ಚಿತ್ರಣವನ್ನೇ ಬದಲಾಯಿಸಿದೆ. ಜೂನ್‌ನಿಂದ ಜು.12ರವರೆಗೆ ಕಿತ್ತೂರು ಕರ್ನಾಟಕ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕೇವಲ ಶೇ.10ರಿಂದ 15ರಷ್ಟಿತ್ತು. ಹೀಗಾಗಿ ರೈತರಲ್ಲಿ ಬೆಳೆ ಕೈಕೊಡುವ ಆತಂಕ ಮನೆ ಮಾಡಿತ್ತು. ಆದರೆ, ಜು.14ರ ನಂತರ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯ ಪಶ್ಚಿಮಘಟ್ಟಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂದ್‌ಗಂಗಾ, ಹಿರಣ್ಯಕೇಶಿ, ಮಹದಾಯಿ ಸೇರಿ ಬಹುತೇಕ ನದಿಗಳ ನೀರಿನಮಟ್ಟದಿಢೀರ್‌ ಏರಿಕೆಯಾಗಿದೆ.

ಜು.14ರಂದು ಆಲಮಟ್ಟಿ ಡ್ಯಾಂನಲ್ಲಿ 8,327 ಕ್ಯುಸೆಕ್‌ ಒಳಹರಿವಿತ್ತು. ಇದೀಗ ಅದರ ಹತ್ತುಪಟ್ಟು ಅಂದರೆ 83, 945 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಅಂದರೆ ಶೇ.36.15ರಷ್ಟುನೀರಿನ ಸಂಗ್ರಹ ಕೇವಲ ಒಂದೇ ವಾರದಲ್ಲಾಗಿದೆ. ಇನ್ನು ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಹಿಡಕಲ್‌ ಜಲಾಶಯದಲ್ಲಿ ಕಳೆದ ವಾರ ಶೇ.12ರಷ್ಟು ಮಾತ್ರ ನೀರಿತ್ತು. ಇದೀಗ ಆ ಮಟ್ಟಶೇ.30ತಲುಪಿದೆ. ಕಳೆದ ವಾರ ಶೇ.19ರಷ್ಟಿದ್ದ ಮಲಪ್ರಭಾ ಜಲಾಶಯದ ನೀರಿನ ಸಂಗ್ರಹವೂ ಈಗ ಶೇ.25.71ಕ್ಕೆ ಏರಿಕೆಯಾಗಿದೆ.

ಇನ್ನು ಕಲ್ಯಾಣ ಕರ್ನಾಟಕ ಭಾಗದ ಗುರುಸಣಗಿ ಬ್ಯಾರೇಜ್‌ನ ನೀರಿನ ಮಟ್ಟವೂ ಏರಿಕೆಯಾಗಿದ್ದು, ಭೀಮಾ ನದಿಗೆ 35 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ನದಿ ತೀರದಲ್ಲಿರುವ ಕಂಗಳೇಶ್ವರ, ವೀರಾಂಜನೇಯ ದೇಗುಲಗಳು ಮುಳುಗಡೆಯಾಗಿವೆ. ಮಲೆನಾಡಲ್ಲಿ ತಡವಾಗಿಯಾದರೂ ಮಳೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯಪುರ ಭಾಗದ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಶನಿವಾರ ಒಂದೇ ದಿನ ಸುಮಾರು 41,572 ಕ್ಯುಸೆಕ್‌ ಹರಿದು ಬಂದಿದೆ. ಈ ಮುಂಗಾರು ಹಂಗಾಮಿನಲ್ಲಿ ಜಲಾಶಯಕ್ಕೆ ಇಷ್ಟೊಂದು ಪ್ರಮಾಣದಲ್ಲಿ ನೀರು ಹರಿದು ಬಂದದ್ದು ಇದೇ ಮೊದಲು. ಇದರಿಂದ ಈ ಭಾಗದ ರೈತರಲ್ಲಿ ಆವರಿಸಿದ್ದ ಬರದ ಆತಂಕ ಕೊಂಚ ಮಟ್ಟಿಗೆ ತಗ್ಗಿದೆ. ಇದರ ಜತೆಗೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳದಲ್ಲೂ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರುವಂತೆ ಮಾಡಿದೆ.

ಮಲೆನಾಡು, ಕರಾವಳಿಯಲ್ಲಿ ಅಬ್ಬರದ ಮಳೆ:

ಮಲೆನಾಡು ಜಿಲ್ಲೆಗಳಾದ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಅಬ್ಬರದ ಮಳೆ ಮುಂದುವರಿದಿದೆ. ಕೊಡಗಿನಲ್ಲಿ ಭಾರೀ ಗಾಳಿ ಸಹಿತ ಸುರಿದ ಮಳೆಗೆ ಹಲವು ಕಡೆ ಮರ, ವಿದ್ಯುತ್‌ ಕಂಬಗಳು ರಸ್ತೆಗೆ ಉರುಳಿ ಬಿದ್ದು ಹಲವು ಗ್ರಾಮಗಳಲ್ಲಿ ಕತ್ತಲು ಆವರಿಸಿದೆ. ಮಡಿಕೇರಿ ತಾಲೂಕಿನ ಬಾಡಗ ಶಾಲೆ ಮೇಲೆ ವಿದ್ಯುತ್‌ ಕಂಬ ಉರುಳಿಬಿದ್ದರೂ ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬಾರದ ಹಿನ್ನೆಲೆಯಲ್ಲಿ ಸಂಭಾವ್ಯ ಅಪಾಯ ತಪ್ಪಿದೆ. ಹಾರಂಗಿ ಜಲಾಶಯ ಭರ್ತಿಯಾಗಲು ಇನ್ನು ಕೇವಲ 6 ಅಡಿ ಅಷ್ಟೇ ಬಾಕಿ ಇದ್ದು, ನದಿಗೆ ನೀರು ಹೊರಬಿಡುವ ಸಾಧ್ಯತೆ ಇದೆ. ಏತನ್ಮಧ್ಯೆ, ಕೇರಳವನ್ನು ಸಂಪರ್ಕಿಸುವ ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಬರೆ ಕುಸಿತ ಉಂಟಾಗಿದ್ದು, ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಕೊಡಗಿನಲ್ಲಿ ಮತ್ತೆ ಭೂ ಕುಸಿತ ಭೀತಿ: ಐದು ದಿನಗಳ ಭರ್ಜರಿ ಮಳೆಗೆ ಧರೆಗುರುಳಿದ ಮರ, ವಿದ್ಯುತ್‌ ಕಂಬಗಳು

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೈಋುತ್ಯ ಮುಂಗಾರು ಮತ್ತಷ್ಟುಚುರುಕಾಗಿದ್ದು, ಇಡೀ ದಿನ ಎಡೆಬಿಡದೆ ಮಳೆಯಾಗಿದೆ. ಮಂಗಳೂರಿನಲ್ಲಿ ಕೃತಕ ನೆರೆಯಿಂದಾಗಿ ತಗ್ಗುಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದೆ. ಕುಮಾರಧಾರಾ ನದಿ ನೀರಿನಮಟ್ಟಏರಿಕೆಯಾಗಿ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಕದ್ರಾ ಜಲಾನಯನ ಪ್ರದೇಶದಲ್ಲಿ ಕೆಲ ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂನಿಂದ 51 ಸಾವಿರ ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಇದರಿಂದ ಕದ್ರಾ-ಕಾರವಾರ ರಸ್ತೆ ಮೇಲೆ ನೀರು ಹರಿಯುತ್ತಿದೆ.

ಜುಲೈನಲ್ಲಿ ವಾಡಿಕೆಗಿಂತ ಶೇ.12 ಹೆಚ್ಚು ಮಳೆ

ಬೆಂಗಳೂರು: ಬರದತ್ತ ಮುಖ ಮಾಡಿದ್ದ ರಾಜ್ಯಕ್ಕೆ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆ ತುಸು ನೆಮ್ಮದಿ ನೀಡಿದೆ. ಜು.1ರಿಂದ ಜು.22ರವರೆಗೆ ವಾಡಿಕೆಯಂತೆ ಸರಾಸರಿ 192 ಮಿ.ಮೀ. ಮಳೆಯಾಗಬೇಕಿದ್ದು, 215 ಮಿ.ಮೀ. ಮಳೆ ಸುರಿದಿದೆ. ಶೇ.12 ಹೆಚ್ಚು ಮಳೆಯಾಗಿದೆ. ಆದರೆ, ಜೂ.1ರಿಂದ ಜು.22ರವರೆಗಿನ ಅವಧಿಯಲ್ಲಿ 392 ಮಿ.ಮೀ. ಮಳೆಯಾಗಬೇಕಿತ್ತು. ಕೇವಲ 302 ಮಿ.ಮೀ. ಮಳೆ ಸುರಿದಿದ್ದು, ಈಗಲೂ ಶೇ.22ರಷ್ಟು ಮಳೆ ಕೊರತೆ ಇದೆ.

click me!