ಮಲ್ಲಕಂಬ ವಿಶ್ವ ಕೂಟದಲ್ಲಿ ಮಿಂಚಿದ ರಾಜ್ಯದ ವೀರಭದ್ರ

ಮುಂಬೈನಲ್ಲಿ ನಡೆದ ಚೊಚ್ಚಲ ಮಲ್ಲಕಂಬ ವಿಶ್ವ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಪಾಲ್ಗೊಂಡ ರಾಜ್ಯದ ಏಕೈಕ ಕನ್ನಡಿಗ ವೀರಭದ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.  ಬೆಳಗಾವಿ ಜಿಲ್ಲೆಯ ವೀರಭದ್ರ ಸಾಧನೆ ಏನು? ಇಲ್ಲಿದೆ.
 


ಮುಂಬೈ(ಫೆ.20): ಮುಂಬೈನಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ವಿಶ್ವ ಮಲ್ಲಕಂಬ ಸ್ಪರ್ಧೆಯ ತಂಡಗಳ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಭಾರತ ಪುರುಷರ ತಂಡದಲ್ಲಿ ಕನ್ನಡಿಗ ಕ್ರೀಡಾಳು ಒಬ್ಬರು ಇದ್ದರು. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೆಂಡವಾಡ ಗ್ರಾಮದವರಾಗಿರುವ ವೀರಭದ್ರ ಮುಧೋಳ್‌, ಚೊಚ್ಚಲ ವಿಶ್ವ ಮಲ್ಲಕಂಬ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಮುತ್ತಿಟ್ಟಭಾರತ ತಂಡದ 6 ಸದಸ್ಯರ ಪೈಕಿ ಒಬ್ಬರಾಗಿದ್ದರು.

ಇದನ್ನೂ ಓದಿ: ಬಲ್ಗೇರಿಯಾ ಬಾಕ್ಸಿಂಗ್‌: ಭಾರತಕ್ಕೆ 3 ಚಿನ್ನದ ಪದಕ

Latest Videos

ಪ್ರಾಚೀನ ಕ್ರೀಡೆಗಳಲ್ಲೊಂದಾದ ಮಲ್ಲಕಂಬ ಕ್ರೀಡೆ ಕ್ರೀಡಾಪಟುಗಳಿಗೆ ದೈಹಿಕ ಸಾಮರ್ಥ್ಯದ ಜೊತೆಯಲ್ಲಿ ಮಾನಸಿಕ ಸ್ಥೈರ್ಯವನ್ನು ನೀಡುತ್ತಿದೆ. ಸದ್ಯ ಮೂಡುಬಿದಿರೆಯ ಆಳ್ವಾಸ್‌ನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವೀರಭದ್ರ, ಮಲ್ಲಕಂಬ ಕ್ರೀಡೆಯ ಜೊತೆಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ‘ಸುವರ್ಣನ್ಯೂಸ್.ಕಾಂ’ ಜೊತೆ ಹಂಚಿಕೊಂಡಿದ್ದಾರೆ.

ಬಾಲ್ಯದಲ್ಲಿ ಯೋಗಾಭ್ಯಾಸ: ಬೆಂಡವಾಡದ ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿ ಓದುವಾಗಲೇ ವೀರಭದ್ರ ಯೋಗಾಭ್ಯಾಸದತ್ತ ವಾಲಿದರು. 6ನೇ ತರಗತಿಗೆ ಗೋಕಾಕ್‌ನ ಮೂಡಲಗಿಯ ಚೈತನ್ಯ ಶಾಲೆಗೆ ಸೇರಿದ ಅವರು, ಉತ್ತಮ ಯೋಗಾಪಟುವಾಗಿದ್ದ ಕಾರಣ ಮಲ್ಲಕಂಬ ಕ್ರೀಡೆಗೆ ಕಾಲಿಟ್ಟರು. ‘ಶಾಲೆಯ ದೈಹಿಕ ಶಿಕ್ಷಕ ಮೆಹಬೂಬ್‌ ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಉತ್ತಮ ಪ್ರೋತ್ಸಾಹ ನೀಡಿದರು. 6ನೇ ತರಗತಿಯಲ್ಲಿ ಓದುವಾಗಲೇ ರಾಷ್ಟ್ರೀಯ ಮಲ್ಲಕಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿದೆ. ಬಳಿಕ ಹೈಸ್ಕೂಲ್‌ ವ್ಯಾಸಂಗವನ್ನು ಮೈಸೂರಿನ ಜೆಎಸ್‌ಎಸ್‌ ಶಾಲೆಯಲ್ಲಿ ಮುಗಿಸಿ, ಪಿಯುಸಿಗೆ ಮೂಡುಬಿದಿರೆಯ ಆಳ್ವಾಸ್‌ಗೆ ಸೇರಿದೆ. ಆಳ್ವಾಸ್‌ನಲ್ಲಿ ಮಲ್ಲಕಂಬದಲ್ಲಿ ಮುಂದುವರಿಯಲು ಮತ್ತಷ್ಟುಪ್ರೋತ್ಸಾಹ ಸಿಕ್ಕಿತು’ ಎಂದು ವೀರಭದ್ರ ಹೇಳಿದ್ದಾರೆ.

ಇದನ್ನೂ ಓದಿ: ಮುಜುಗರಕ್ಕೊಳಗಾದ ರಿಯಲ್‌ ಕಾಶ್ಮೀರ್‌ ಜತೆ BFC ಸ್ನೇಹಾರ್ಥ ಪಂದ್ಯ

ದಿನಕ್ಕೆ 5 ಗಂಟೆ ಕಸರತ್ತು: ವೀರಭದ್ರ ಪ್ರತಿ ದಿನ 5 ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಾರೆ. ಬೆಳಗ್ಗೆ ಎರಡೂವರೆ, ಸಂಜೆ ಎರಡೂವರೆ ಗಂಟೆಗಳ ಕಾಲ ಕಸರತ್ತಿನಲ್ಲಿ ತೊಡಗುತ್ತಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕೂಟಗಳಿದ್ದಾಗ ಹೆಚ್ಚು ಅಭ್ಯಾಸ ನಡೆಸುತ್ತೇವೆ ಎಂದು ವೀರಭದ್ರ ತಿಳಿಸಿದರು.

ಶಾಲೆಗಳಲ್ಲಿ ಮಲ್ಲಕಂಬ ಬರಬೇಕು
ಕರ್ನಾಟಕದಲ್ಲಿ ಮಲ್ಲಕಂಬ ಕ್ರೀಡೆ ಅಳಿವನಂಚಿನಲ್ಲಿದೆ. ಪ್ರಾಚೀನ ಗ್ರಾಮೀಣ ಕ್ರೀಡೆಯಾಗಿದ್ದರೂ ಇತರ ಕ್ರೀಡೆಗಳ ಅಬ್ಬರದಲ್ಲಿ ಮಲ್ಲಕಂಬ ನಶಿಸಿ ಹೋಗುತ್ತಿದೆ. ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಮಲ್ಲಕಂಬವನ್ನು ರಾಜ್ಯ ಕ್ರೀಡೆ ಎಂದು ಘೋಷಿಸಲಾಗಿದೆ. ಅಲ್ಲದೇ ಅಲ್ಲಿನ ಸ್ಥಳೀಯ ಶಾಲೆಗಳಲ್ಲಿ ಮಲ್ಲಕಂಬಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕರ್ನಾಟಕದ ಶಾಲೆಗಳಲ್ಲೂ ಈ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂದು ವೀರಭದ್ರ ಮನವಿ ಮಾಡಿದ್ದಾರೆ.

7 ರಾಷ್ಟ್ರೀಯ ಪದಕ ವಿಜೇತ!
ಯೋಗಾಭ್ಯಾಸದಿಂದ ದೇಹವನ್ನು ಹುರಿಗೊಳಿಸಿ 6ನೇ ತರಗತಿಯಲ್ಲಿದ್ದಾಗಲೇ ರಾಷ್ಟ್ರೀಯ ಪದಕ ಗೆದ್ದಿದ್ದ ವೀರಭದ್ರ, ಬಳಿಕ ಮತ್ತಷ್ಟುಸಾಧನೆಗಳನ್ನು ಮಾಡಿದರು. ಸತತ 5 ವರ್ಷ ರಾಜ್ಯ ಹಾಗೂ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು.

3 ಬಗೆಯ ಮಲ್ಲಕಂಬ ಸ್ಪರ್ಧೆ
ಸ್ಥಿರ ಮಲ್ಲಕಂಬ (70-80 ಸೆ.ಮೀ. ಭೂಮಿಯಲ್ಲಿ ಹೂತಿದ್ದು, ಮೇಲ್ಭಾಗದಲ್ಲಿ 260-280 ಸೆ.ಮೀ. ಎತ್ತರ, ತುದಿಯಲ್ಲಿ 10-18 ಸೆ.ಮೀ. ಕುತ್ತಿಗೆ, ಹಾಗೂ ಅದರ ಮೇಲ್ಭಾಗದಲ್ಲಿ 18-20 ಸೆ. ಮೀ. ನಾಬ್‌ ಇರುತ್ತದೆ. ತೇಗದ ಕಟ್ಟಿಗೆಯಿಂದ ವೃತ್ತಕಾರವಾಗಿ ಮಾಡಲಾದ ಈ ಕಂಬದ ಕೆಳಗಿನ ಸುತ್ತಳತೆ 53-55 ಸೆ. ಮೀ. ಮೇಲ್ಭಾಗದಲ್ಲಿ ಕಡಿಮೆ ಸುತ್ತಳತೆ 30-35 ಸೆ.ಮೀ. ಹೊಂದಿರುತ್ತದೆ. ಕಂಬಕ್ಕೆ ಔಡಲ ಎಣ್ಣೆ ಹಚ್ಚಲಾಗಿರುತ್ತದೆ.)

ನೇತಾಡುವ ಮಲ್ಲಕಂಬ (ಸ್ಥಿರ ಮಲ್ಲಕಂಬವನ್ನು ಮೇಲಿನಿಂದ 170-190 ಸೆ.ಮೀ. ಕತ್ತರಿಸಿದರೆ, ಅದು ನೇತಾಡುವ ಮಲ್ಲಕಂಬ ವಾಗುತ್ತದೆ. ಮೇಲ್ತುದಿಯಲ್ಲಿ ಒಂದು ಕಬ್ಬಿಣದ ಹುಕ್‌ ಹಾಕಿ ನೇತುಬಿಡಲಾಗುವುದು. ಆಗ ಇದರ ಕೆಳ ತುದಿ ನೆಲದಿಂದ 65-70 ಸೆ.ಮೀ. ಮೇಲಿರಬೇಕು.)

ಹಗ್ಗದ ಮಲ್ಲಕಂಬ (ಹಗ್ಗದ ಮಲ್ಲಕಂಬವನ್ನು ವಿಶೇಷ ನೂಲಿನಿಂದ ತಯಾರಿಸಿದ್ದು, 5 ರಿಂದ 5.5 ಮೀ. ಉದ್ದವಲ್ಲದೇ 18-20 ಮಿಲಿ ಮೀಟರ್‌ ಸುತ್ತಳತೆಯನ್ನು ಹೊಂದಿರುತ್ತದೆ.)

ಧನಂಜಯ ಎಸ್‌.ಹಕಾರಿ

click me!