ವಿಶ್ವ ನಂ.9 ಪ್ರಣಯ್, ಪುರುಷರ ಸಿಂಗಲ್‌ಸ್ ಮೊದಲ ಸುತ್ತಿನಲ್ಲಿ ವಿಶ್ವ ನಂ.13, ಚೈನೀಸ್ ತೈಪೆಯ ಚೊಯು ಟೀನ್ ಚೆನ್ ವಿರುದ್ಧ 21-6, 21-19ರಲ್ಲಿ ಗೆಲುವು ಸಾಧಿಸಿದರು.
ನವದೆಹಲಿ(ಜ.17): ಮಂಗಳವಾರ ಆರಂಭಗೊಂಡ ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಆಟಗಾರ ಎಚ್.ಎಸ್.ಪ್ರಣಯ್ ಶುಭಾರಂಭ ಮಾಡಿದ್ದಾರೆ. ಆದರೆ ಯುವ ತಾರೆ ಲಕ್ಷ್ಯ ಸೇನ್ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ. ವಿಶ್ವ ನಂ.9 ಪ್ರಣಯ್, ಪುರುಷರ ಸಿಂಗಲ್‌ಸ್ ಮೊದಲ ಸುತ್ತಿನಲ್ಲಿ ವಿಶ್ವ ನಂ.13, ಚೈನೀಸ್ ತೈಪೆಯ ಚೊಯು ಟೀನ್ ಚೆನ್ ವಿರುದ್ಧ 21-6, 21-19ರಲ್ಲಿ ಗೆಲುವು ಸಾಧಿಸಿದರು.
ಆದರೆ ಸೇನ್, ಭಾರತದವರೇ ಆದ 21ರ ಪ್ರಿಯಾನ್ಶು ರಾಜಾವತ್ ವಿರುದ್ಧ 21-16, 16-21, 13-21ರಲ್ಲಿ ಪರಾಭವಗೊಂಡರು. ಕಿರಣ್ ಜಾರ್ಜ್ ಕೂಡಾ ಮೊದಲ ಸುತ್ತಲ್ಲೇ ಅಭಿಯಾನ ಕೊನೆಗೊಳಿಸಿದರು. ಮಹಿಳಾ ಡಬಲ್‌ಸ್ನಲ್ಲಿ ತ್ರೀಸಾ-ಗಾಯತ್ರಿ, ಪುರುಷರ ಡಬಲ್‌ಸ್ನಲ್ಲಿ ಅರ್ಜುನ್-ಧ್ರುವ್ ಕಪಿಲಾ ಸೋಲನುಭವಿಸಿದರು.
ಹಾಕಿ: ಭಾರತ ಮಹಿಳಾ ತಂಡ ಸೆಮಿಫೈನಲ್‌ಗೆ
ರಾಂಚಿ: ಒಲಿಂಪಿಕ್ಸ್ ಅರ್ಹತಾ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಮಂಗಳವಾರ ನಿರ್ಣಾಯಕ ಪಂದ್ಯದಲ್ಲಿ ಭಾರತ, ಇಟಲಿ ವಿರುದ್ಧ 5-1ರಿಂದ ಜಯಭೇರಿ ಬಾರಿಸಿತು. ಇದರೊಂದಿಗೆ ‘ಬಿ’ ಗುಂಪಿನಲ್ಲಿ ಭಾರತ 3 ಪಂದ್ಯಗಳಲ್ಲಿ 2 ಜಯದೊಂದಿಗೆ 6 ಅಂಕಗಳಿಸಿ 2ನೇ ಸ್ಥಾನಿಯಾಯಿತು. ಅಮೆರಿಕ(09 ಅಂಕ) ಅಗ್ರಸ್ಥಾನಿ ಯಾಗಿಯೇ ಸೆಮೀಸ್‌ಗೇರಿತು.
ಆಸ್ಟ್ರೇಲಿಯನ್ ಓಪನ್‌ನಲ್ಲಿ ಸುಮಿತ್ ನಗಾಲ್ ದಾಖಲೆ..! ಸಂಕಷ್ಟದಲ್ಲಿದ್ದ ಟೆನಿಸಿಗ ಈಗ ಕೋಟಿ ಒಡೆಯ
ಪಂದ್ಯದಲ್ಲಿ ಭಾರತದ ಪರ ಉದಿತಾ(1 ಮತ್ತು 55ನೇ ನಿಮಿಷ), ದೀಪಿಕಾ(41ನೇ ನಿ.), ಸಲೀಮಾ ಟೆಟೆ(45ನೇ ನಿ.), ಹಾಗೂ ನವ್‌ನೀತ್ ಕೌರ್(53ನೇ ನಿ.)ಗೋಲು ಬಾರಿಸಿದರು. ಆರಂಭಿಕ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತು, 2ನೇ ಪಂದ್ಯದಲ್ಲಿ ನ್ಯೂಜಿಲೆಂಡನ್ನು ಮಣಿಸಿದ್ದ ಭಾರತ, ಜ.18ರಂದು ಸೆಮಿಫೈನಲ್‌ನಲ್ಲಿ ಜರ್ಮನಿವಿರುದ್ಧ ಸೆಣಸಾಡಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಅಮೆರಿಕ ಹಾಗೂ ಜಪಾನ್ ಮುಖಾಮುಖಿಯಾಗಲಿವೆ.
ಸಸ್ಪೆಂಡ್ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲ್ಲ: ಸಂಜಯ್
ನವದೆಹಲಿ: ಭಾರತ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಮೇಲೆ ಹೇರಿರುವ ಅಮಾನತು ಪ್ರಶ್ನಿಸಿ ಈ ಮೊದಲು ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದ ಸಂಸ್ಥೆ ಅಧ್ಯಕ್ಷ ಸಂಜಯ್ ಸಿಂಗ್, ಸದ್ಯಕ್ಕೆ ಕಾನೂನು ಹೋರಾಟದ ಬಗ್ಗೆ ಯೋಚಿಸುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಮಂಗಳವಾರ ಪದಾಧಿಕಾರಿಗಳ ಜೊತೆಗಿನ ಸಭೆ ಬಳಿಕ ಮಾತನಾಡಿದ ಅವರು, ಅಮಾನತು ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯದ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದೇವೆ. ಸರ್ಕಾರದ ಜೊತೆ ಮಾತುಕತೆಗೆ ಸಮಯ ಕೇಳಿದ್ದೇವೆ. ಮಾತುಕತೆ ವಿಫಲವಾದರೆ ಮಾತ್ರ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದಿದ್ದಾರೆ.
ಇಂಡೋ-ಆಂಗ್ಲೋ ಟೆಸ್ಟ್: ಮೂವರು ವಿಕೆಟ್ ಕೀಪರ್‌ಗಳಲ್ಲಿ ಕೀಪಿಂಗ್ ಮಾಡೋರ್ಯಾರು..?
ಪ್ರಖರ್ ಆಟ ಕೊಂಡಾಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕೂಚ್ ಬೆಹಾರ್ ಟೊ್ರೀಫಿಯಲ್ಲಿ ಚೊಚ್ಚಲ ಚಾಂಪಿಯನ್ ಕರ್ನಾಟಕ ತಂಡ ಹಾಗೂ ಫೈನಲ್‌ನಲ್ಲಿ ಔಟಾಗದೆ 404 ರನ್ ಗಳಿಸಿದ ಪ್ರಖರ್ ಚತುರ್ವೇದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 79 ವರ್ಷಗಳಲ್ಲಿ ಮೊದಲ ಬಾರಿಗೆ ಕೂಚ್ ಬಿಹಾರ್ ಟ್ರೋಫಿ ಗೆದ್ದಿರುವ ಕರ್ನಾಟಕದ ಅಂಡರ್19 ತಂಡಕ್ಕೆ ಅಭಿನಂದನೆಗಳು. ಈ ಗೆಲುವು ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚಿಸಿದೆ. ಆರಂಭಿಕ ಬ್ಯಾಟರ್ ಪ್ರಖರ್ ಅಜೇಯ 404 ರನ್ ಗಳಿಸಿ ದಾಖಲೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕ ತಂಡವು 890 ರನ್‌ಗಳ ದಾಖಲೆಯ ಮೊತ್ತವನ್ನು ಪೇರಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಯುವ ಆಟಗಾರರು ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.