Asianet Suvarna News Asianet Suvarna News

Asian Games 2023: ಮತ್ತೆ ಬಂತು ಮಿನಿ ಒಲಿಂಪಿಕ್ಸ್..!

ಏಷ್ಯನ್‌ ಗೇಮ್ಸ್‌ ಅಂತಾರಾಷ್ಟ್ರೀಯ ಒಲಂಪಿಕ್‌ ಸಮಿತಿಯಿಂದ ಮಾನ್ಯತೆ ಪಡೆದಿದ್ದು, ಜಾಗತಿಕ ಮಟ್ಟದಲ್ಲಿ ಒಲಿಂಪಿಕ್ಸ್‌ ಬಳಿಕ 2ನೇ ಶ್ರೇಷ್ಠ ಕ್ರೀಡಾಕೂಟ ಎಂದೇ ಕರೆಯಲ್ಪಡುತ್ತದೆ. ಒಲಿಂಪಿಕ್ಸ್‌ ಬಳಿಕ ಅತಿ ಹೆಚ್ಚು ದೇಶಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕಾರಣ ಮಿನಿ ಒಲಿಂಪಿಕ್ಸ್‌ ಎಂಬ ಹೆಸರೂ ಈ ಕ್ರೀಡಾಕೂಟಕ್ಕಿದೆ.

All you need to know about Asian Games kvn
Author
First Published Sep 23, 2023, 6:40 AM IST

ಹಾಂಗ್ಝೂ(ಸೆ.23): 'ಮಿನಿ ಒಲಿಂಪಿಕ್ಸ್‌' ಖ್ಯಾತಿಯ ಏಷ್ಯನ್ ಗೇಮ್ಸ್‌ ಮತ್ತೆ ಬಂದಿದೆ. 19ನೇ ಆವೃತ್ತಿಯ ಕ್ರೀಡಾಕೂಟವು ಚೀನಾದ ಹಾಂಗ್ಝೂ ನಗರದಲ್ಲಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 08ರ ವರೆಗೂ ನಡೆಯಲಿದೆ. ಈಗಾಗಲೇ ಕೆಲ ಸ್ಪರ್ಧೆಗಳು ಆರಂಭಗೊಂಡಿದ್ದರೂ, ಶನಿವಾರ(ಸೆ.23)ರಂದು ಈ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಏಷ್ಯನ್ ಗೇಮ್ಸ್ ಅಂದರೆ ಏನು?, ಕ್ರೀಡಾಕೂಟ ಆರಂಭವಾಗಿದ್ದು ಹೇಗೆ? ಯಾವೆಲ್ಲಾ ರಾಷ್ಟ್ರಗಳು ಸ್ಪರ್ಧಿಸುತ್ತವೆ? ಪದಕ ಗಳಿಕೆಯಲ್ಲಿ ಅತ್ಯಂತ ಯಶಸ್ವಿ ರಾಷ್ಟ್ರ ಯಾವುದು? ಈ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ.

ಏನಿದು ಏಷ್ಯನ್‌ ಗೇಮ್ಸ್‌? 

ಏಷ್ಯನ್ ಗೇಮ್ಸ್‌ ಅಥವಾ ಏಷ್ಯಾಡ್‌ ಎಂದು ಕರೆಯಲ್ಪಡುವ ಕ್ರೀಡಾಕೂಟವು, ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ(ಒಸಿಎ) ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು, ಒಸಿಎ ಅಡಿ ಮಾನ್ಯತೆ ಪಡೆದ 45 ರಾಷ್ಟ್ರಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹವಾಗಿವೆ. 1951ರಲ್ಲಿ ಚೊಚ್ಚಲ ಆವೃತ್ತಿಯ ಏಷ್ಯನ್‌ ಗೇಮ್ಸ್‌ ಭಾರತದ ರಾಜಧಾನಿ ನವದೆಹಲಿಯಲ್ಲಿ ಆಯೋಜನೆಗೊಂಡಿತ್ತು. ಚೊಚ್ಚಲ ಆವೃತ್ತಿಯಿಂದ 1978ರ ವರೆಗೂ ಏಷ್ಯನ್‌ ಗೇಮ್ಸ್‌ ಫೆಡರೇಶನ್‌ ಕ್ರೀಡಾಕೂಟವನ್ನು ಆಯೋಜಿಸುತ್ತಿತ್ತು. ಬಳಿಕ 1982ರಿಂದ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಕ್ರೀಡಾಕೂಟವನ್ನು ನಡೆಸಿಕೊಂಡು ಬರುತ್ತಿದೆ. 19ನೇ ಆವೃತ್ತಿಯು 2022ರಲ್ಲೇ ನಡೆಯಬೇಕಿತ್ತು. ಆದರೆ ಕೋವಿಡ್‌ನಿಂದಾಗಿ ಸಿದ್ಧತೆಗೆ ಅಡೆ ತಡೆಗಳಾದ ಕಾರಣ, ಕ್ರೀಡಾಕೂಟವನ್ನು 2023ಕ್ಕೆ ಮುಂದೂಡಲಾಗಿತ್ತು. 

Asian Games 2023: ಭಾರತಕ್ಕೆ ಟಾಪ್‌-3 ಗುರಿ! ಭಾರತದ ಟಾಪ್‌-10 ಭರವಸೆಯ ಕ್ರೀಡೆಗಳು

ಮಿನಿ ಒಲಿಂಪಿಕ್ಸ್‌ ಖ್ಯಾತಿ! ಏಷ್ಯನ್‌ ಗೇಮ್ಸ್‌ ಅಂತಾರಾಷ್ಟ್ರೀಯ ಒಲಂಪಿಕ್‌ ಸಮಿತಿಯಿಂದ ಮಾನ್ಯತೆ ಪಡೆದಿದ್ದು, ಜಾಗತಿಕ ಮಟ್ಟದಲ್ಲಿ ಒಲಿಂಪಿಕ್ಸ್‌ ಬಳಿಕ 2ನೇ ಶ್ರೇಷ್ಠ ಕ್ರೀಡಾಕೂಟ ಎಂದೇ ಕರೆಯಲ್ಪಡುತ್ತದೆ. ಒಲಿಂಪಿಕ್ಸ್‌ ಬಳಿಕ ಅತಿ ಹೆಚ್ಚು ದೇಶಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕಾರಣ ಮಿನಿ ಒಲಿಂಪಿಕ್ಸ್‌ ಎಂಬ ಹೆಸರೂ ಈ ಕ್ರೀಡಾಕೂಟಕ್ಕಿದೆ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಪ್ರಮುಖ ದೇಶಗಳಾದ ಚೀನಾ, ಜಪಾನ್‌, ಕೊರಿಯಾ, ಭಾರತ ಏಷ್ಯಾಡ್‌ನಲ್ಲೂ ಪಾಲ್ಗೊಳ್ಳುತ್ತಿರುವ ಕಾರಣ ಹಾಗೂ ಒಲಿಂಪಿಕ್ಸ್‌ನ ಹಾಗೆ ಬಹುಕೋಟಿ ಖರ್ಚು ಮಾಡಿ ಈ ಕ್ರೀಡಾಕೂಟ ಆಯೋಜಿಸುವ ಕಾರಣ ಒಲಿಂಪಿಕ್ಸ್‌ನಷ್ಟೇ ಖ್ಯಾತಿ, ಪ್ರಸಿದ್ಧಿ, ಮಹತ್ವ ಏಷ್ಯಾಡ್‌ಗಿದೆ.

ಯಾವ್ಯಾವ ದೇಶಗಳಿಗೆ ಸಿಕ್ಕಿದೆ ಆತಿಥ್ಯ ಭಾಗ್ಯ? ಏಷ್ಯನ್‌ ಗೇಮ್ಸ್‌ಗೆ ಈ ವರೆಗೆ ಭಾರತ (1951 ಮತ್ತು 1982) ಸೇರಿದಂತೆ 9 ದೇಶಗಳು ಆತಿಥ್ಯ ವಹಿಸಿವೆ. ಈ ಪೈಕಿ ಥಾಯ್ಲೆಂಡ್‌ ಗರಿಷ್ಠ ಅಂದರೆ 4 ಬಾರಿ, ಚೀನಾ ಹಾಗೂ ದಕ್ಷಿಣ ಕೊರಿಯಾ ತಲಾ 3 ಬಾರಿ, ಭಾರತ, ಜಪಾನ್‌ ಹಾಗೂ ಇಂಡೋನೇಷ್ಯಾ ತಲಾ 2 ಬಾರಿ, ಫಿಲಿಪ್ಪೀನ್‌, ಇರಾನ್‌ ಹಾಗೂ ಕತಾರ್‌ ತಲಾ 1 ಬಾರಿ ಕ್ರೀಡಾಕೂಟ ಆಯೋಜಿಸಿವೆ. 1966 ಹಾಗೂ 1970ರಲ್ಲಿ ಸತತ 2 ಬಾರಿ ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದ್ದು ವಿಶೇಷ.

ಆತಿಥ್ಯ ಹಕ್ಕು ಪಡೆಯುವುದು ಹೇಗೆ? ಯಾವುದಾದರೂ ರಾಷ್ಟ್ರ ಏಷ್ಯನ್‌ ಗೇಮ್ಸ್‌ಗೆ ಆತಿಥ್ಯ ಹಕ್ಕು ಪಡೆಯಬೇಕಿದ್ದರೆ ಮೊದಲು ಬಿಡ್‌ ಸಲ್ಲಿಸಬೇಕಿದೆ. ಒಂದಕ್ಕಿಂತ ಹೆಚ್ಚು ರಾಷ್ಟ್ರಗಳು ಗೇಮ್ಸ್‌ನ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದರೆ ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾ(ಒಸಿಎ) ತನ್ನ ಸದಸ್ಯ ರಾಷ್ಟ್ರಗಳಿಗೆ ಮತ ಚಲಾಯಿಸುವಂತೆ ಸೂಚಿಸುತ್ತದೆ. ಮತದಾನ ಪ್ರಕ್ರಿಯೆಯಲ್ಲಿ ಗೆಲ್ಲುವ ದೇಶ ಆತಿಥ್ಯ ಹಕ್ಕು ಪಡೆಯಲಿದೆ. 2022ರ ಏಷ್ಯಾಡ್‌ಗೆ 2015ರ ಆಗಸ್ಟ್‌ನಲ್ಲಿ ಚೀನಾದ ಹ್ಯಾಂಗ್ಝೂ ಮಾತ್ರ ಬಿಡ್‌ ಸಲ್ಲಿಸಿತ್ತು, ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಚೀನಾಕ್ಕೆ ಒಸಿಎ ಆತಿಥ್ಯ ಹಕ್ಕು ನೀಡಿತ್ತು.

ಏಷ್ಯನ್‌ ಗೇಮ್ಸ್ ಅನಾವರಣಕ್ಕೆ ಕ್ಷಣಗಣನೆ! ಮೈನವಿರೇಳಿಸಲಿದೆ ಉದ್ಘಾಟನಾ ಸಮಾರಂಭ!

ಯಾರ ಮಡಿಲಿಗೆ ಹೆಚ್ಚು ಪದಕ? ಒಲಿಂಪಿಕ್ಸ್‌ನಲ್ಲೂ ಸದ್ದು ಮಾಡುವ ಚೀನಾ, ಜಪಾನ್‌ ಹಾಗೂ ದಕ್ಷಿಣ ಕೊರಿಯಾದ ಅಥ್ಲೀಟ್‌ಗಳೇ ಏಷ್ಯಾಡ್‌ನಲ್ಲಿ ಈವರೆಗೆ ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದಾರೆ. ಈ ಪೈಕಿ ಚೀನಾ 1974ರಿಂದಷ್ಟೇ ಏಷ್ಯಾಡ್‌ನಲ್ಲಿ ಪಾಲ್ಗೊಳ್ಳುತ್ತಿದ್ದರೂ ಒಟ್ಟಾರೆ ಪದಕ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿರುವುದು ಗಮನಾರ್ಹ. ಈವರೆಗೆ ಚೀನಾದ ಅಥ್ಲೀಟ್‌ಗಳು 1,473 ಚಿನ್ನ ಸೇರಿ 3,187 ಪದಕ ಗೆದ್ದಿದ್ದಾರೆ. ಚೀನಾದ ಹೆಚ್ಚಿನ ಪಾರುಪತ್ಯ ಇರುವುದು ಶೂಟಿಂಗ್‌, ಅಥ್ಲೆಟಿಕ್ಸ್‌, ಈಜು, ಜಿಮ್ನಾಸ್ಟಿಕ್‌ನಲ್ಲಿ. ಇನ್ನು ಚೀನಾಕ್ಕೆ ಪ್ರಬಲ ಪೈಪೋಟಿ ನೀಡುತ್ತಿರುವ ಜಪಾನ್‌ 1032 ಚಿನ್ನ ಸೇರಿ 3054 ಪದಕ ಬಾಚಿಕೊಂಡಿದೆ. ಈಜು, ಅಥ್ಲೆಟಿಕ್ಸ್‌, ಶೂಟಿಂಗ್‌, ಜುಡೊ ಕ್ರೀಡೆಗಳು ಜಪಾನ್ ಅಥ್ಲೀಟ್‌ಗಳಿಗೆ ಹೆಚ್ಚಿನ ಪದಕ ತಂದುಕೊಟ್ಟ ಕ್ರೀಡೆಗಳು. ಇನ್ನು ದ.ಕೊರಿಯಾದ ಈವರೆಗಿನ ಸಾಧನೆ 745 ಚಿನ್ನ ಸೇರಿ 2235 ಪದಕ. ಉಳಿದಂತೆ ಇರಾನ್‌, ಭಾರತ, ಕಜಕಸ್ತಾನ, ಥಾಯ್ಲೆಂಡ್‌, ಉತ್ತರ ಕೊರಿಯಾ, ಚೈನೀಸ್‌ ತೈಪೆ, ಇಂಡೋನೇಷ್ಯಾ ಪದಕ ಗಳಿಕೆಯಲ್ಲಿ ಮುಂಚೂಣಿಯಲ್ಲಿವೆ.

ಏಷ್ಯನ್ ಗೇಮ್ಸ್ ಇಂಟ್ರೆಸ್ಟಿಂಗ್ ಅಂಕಿ-ಅಂಶ:

09 ದೇಶ ಈವರೆಗೆ ಏಷ್ಯನ್‌ ಗೇಮ್ಸ್‌ಗೆ ಆತಿಥ್ಯ ವಹಿಸಿದ ರಾಷ್ಟ್ರಗಳ ಒಟ್ಟು ಸಂಖ್ಯೆ 9.
01 ದೇಶ ಈವರೆಗೆ ಸತತ 2 ಬಾರಿ(1966,1970) ಏಷ್ಯಾಡ್‌ ಆಯೋಜಿಸಿದ ಏಕೈಕ ದೇಶ ಥಾಯ್ಲೆಂಡ್‌.
04 ವರ್ಷ 1951ರಲ್ಲಿ ಆರಂಭಗೊಂಡ ಏಷ್ಯನ್‌ ಗೇಮ್ಸ್‌ ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. 
02 ದೇಶ ಪ್ರತಿ ಏಷ್ಯಾಡ್‌ನಲ್ಲಿ ಕನಿಷ್ಠ 1 ಚಿನ್ನವಾದರೂ ಗೆದ್ದ ರಾಷ್ಟ್ರಗಳು ಕೇವಲ ಎರಡು. ಒಂದು ಭಾರತ, ಮತ್ತೊಂದು ಜಪಾನ್‌.

Follow Us:
Download App:
  • android
  • ios