ಕನ್ನಡ ಕಾರ್ಯಕ್ರಮದಲ್ಲಿ ಹಿಂದಿ ಹಾಡು ಹಾಡಿದಾಗ ಏನಾಯ್ತು? ಓಡೋಡಿ ಬಂದ ಅಧಿಕಾರಿ!

Published : Jun 16, 2025, 05:56 AM IST
Kandiddu

ಸಾರಾಂಶ

ಕಭೀ ಕಭೀ ಮೇರೆ ದಿಲ್‌ ಮೆ’ ಅನ್ನುತ್ತಿದ್ದಂತೆ ಓಡೋಡಿ ಬಂದ ಅಧಿಕಾರಿ । ನಿಲ್ಸಿ ನಿಲ್ಸಿ ಇದು ಕನ್ನಡ ಕಾರ್ಯಕ್ರಮ ಎಂದು ತಾಕೀತು

ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಾಯಕರು ‘ಕಭೀ ಕಭೀ ಮೇರೆ ದಿಲ್ ಮೆ’ ಗೀತೆಯ ನಾಲ್ಕೈದು ಸಾಲು ಹಾಡಿರಬಹುದು. ಈ ಹಾಡು ರವೀಂದ್ರ ಕಲಾಕ್ಷೇತ್ರದೊಳಗೆ ಮಾರ್ದನಿಸುತ್ತಿದ್ದಂತೆ ವೇದಿಕೆಯೆಡೆಗೆ ಗಾಬರಿಯಿಂದ ಓಡಿ ಬಂದ ಅಕಾಡೆಮಿ ರಿಜಿಸ್ಟ್ರಾರ್‌, ನಿಲ್ಸಿ.., ನಿಲ್ಸಿ... ಹಿಂದಿ ಹಾಡು ಹಾಡ್ಬೇಡಿ ಎಂದು ಒಂದೇ ಉಸಿರಿಗೆ ಹೇಳಿದ್ದು ಕೇಳಿ ಎಲ್ಲರು ದಿಗಿಲು ಬಿದ್ದರು.

ಬಾಲಿವುಡ್‌ನ ಅಮಿತಾಬ್‌ ಬಚ್ಚನ್‌-ರಾಖಿ ಅಭಿನಯಿಸಿದ ‘ಕಭೀ ಕಭೀ’ ಚಿತ್ರದ ಎವರ್‌ಗ್ರೀನ್‌ ಹಾಡು ‘ಕಭೀ ಕಭೀ ಮೇರೆ ದಿಲ್‌ ಮೆ...'' ದಶಕಗಳ ಹಿಂದೆ ಯುವ ಹೃದಯಗಳ ಗೆದ್ದ ಗೀತೆ. ಇಂತಹ ಹಾಡು ಕೇಳಿದರೆ ಖುಷಿಪಡುವ ಬದಲು ಗಾಬರಿಯಾದರೆ ಯಾರಿಗೆ ತಾನೇ ಅಚ್ಚರಿಯಾಗಲ್ಲ.

ಇಂಥ ಪ್ರಸಂಗ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಲಲಿತಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಸಂಗೀತ ರಸ ಸಂಜೆ ನಡೆಸಿಕೊಡುತ್ತಿದ್ದ ಸಂಗೀತ ತಂಡ ಸಾಲು ಸಾಲು ಕನ್ನಡದ ಭಾವಗೀತೆಗಳನ್ನು ಹಾಡಿ ರಂಜಿಸುತ್ತಿತ್ತು. ಹಲವು ಭಾವಗೀತೆಗಳನ್ನು ಹಾಡಿ ಮುಗಿಸಿದ ತಂಡದ ಪ್ರಮುಖ ಹಾಡುಗಾರನಿಗೆ ಏನನಿಸಿತೋ? ಸಭೆಯನ್ನುದ್ದೇಶಿಸಿ, ಹಿಂದಿ ಹಾಡು ಹಾಡಬಹುದೇ? ಎಂದು ಕೇಳಿದರು. ಆಗ ಒಂದಿಬ್ಬರು ಹಾಡಿ ಹಾಡಿ... ಎಂದು ಕೂಗಿ ಹೇಳಿದರು. ವೇದಿಕೆಯ ಮೊದಲೆರಡು ಸಾಲಿನಲ್ಲಿ ಕುಳಿತಿದ್ದ ಗಣ್ಯರೆನಿಸಿಕೊಂಡವರಿಗೆ ಏನು ಹೇಳಬೇಕೆಂದು ತೋಚದೆ ತುಟಿ ಬಿಚ್ಚಲಿಲ್ಲ.

‘ಮೌನಂ ಸಮ್ಮತಿ ಲಕ್ಷಣಂ’ ಅಂದುಕೊಂಡ ಹಾಡುಗಾರ ‘ಕಭೀ ಕಭೀ ಮೇರೆ ದಿಲ್ ಮೆ...ಗೀತೆಯ ನಾಲ್ಕೈದು ಸಾಲು ಹಾಡಿರಬಹುದು. ಈ ಹಾಡು ರವೀಂದ್ರ ಕಲಾಕ್ಷೇತ್ರದೊಳಗೆ ಮಾರ್ದನಿಸುತ್ತಿದ್ದಂತೆ ವೇದಿಕೆಯೆಡೆಗೆ ಗಾಬರಿಯಿಂದ ಓಡಿ ಬಂದ ಅಕಾಡೆಮಿ ರಿಜಿಸ್ಟ್ರಾರ್‌ ನೀಲಮ್ಮ ಅವರು, ನಿಲ್ಸಿ.., ನಿಲ್ಸಿ... ಹಿಂದಿ ಹಾಡು ಹಾಡ್ಬೇಡಿ ಎಂದು ಒಂದೇ ಉಸಿರಿಗೆ ಹೇಳಿದ್ದು ಕೇಳಿ ಹಾಡುಗಾರ ಸೇರಿ ಸುತ್ತಮುತ್ತ ಇದ್ದವರಿಗೆಲ್ಲ ಏನಾಯ್ತಪ್ಪ.. ಎಂದು ದಿಗಿಲು.

ಹಾಡುಗಾರ ಕೂಡ ಬೆಚ್ಚಿ, ಏನಾಯ್ತು? ಎಂದು ಪ್ರಶ್ನಾರ್ಥಕವಾಗಿ ನೋಡಿದಾಗ, ‘ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮ. ಕನ್ನಡ ಬಿಟ್ಟು ಬೇರೆ ಹಾಡು ಹಾಡುವಂತಿಲ್ಲ’ ಎಂದು ಸಮಜಾಯಿಸಿ ನೀಡಿದರು. ಇದಕ್ಕೆ ಪೆಚ್ಚು ಮೊರೆ ಹಾಕಿದ ಹಾಡುಗಾರ, ಹಿಂದಿ ಹಾಡು ಹಾಡಿ ಎಂದವರ ಕಡೆಗೆ ಕೆಂಗಣ್ಣಿನಿಂದಲೇ ಗುರಾಯಿಸಿ, ಮತ್ತೊಂದು ಕನ್ನಡ ಭಾವಗೀತೆ ಹಾಡಲು ಶುರು ಮಾಡಿದರು.

ಪ್ರೆಸ್‌ನೋಟ್‌ನಲ್ಲಿ ಚೂಡಿದಾರ್ ಮಾತ್ರ ಇದೆ ಸಾರ್‌...

ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ಪ್ರಥಮ ಸುದ್ದಿಗೋಷ್ಠಿಯಲ್ಲಿ ಚೂಡಿದಾರದ್ದೇ ಸುದ್ದಿ. ಅರೇ ಚೂಡಿದಾರಕ್ಕೂ ಪೊಲೀಸ್ ಕಮಿಷನರ್‌ ಪ್ರೆಸ್‌ಮೀಟ್ಗೂ ಏನ್ ಸಂಬಂಧ ಅಂತೀರಾ?

ವಿಷಯ ಏನಪ್ಪಾ ಅಂದ್ರೆ...ಕಮಿಷನರ್ ಹುದ್ದೆ ಅಲಂಕರಿಸಿದ ಬಳಿಕ ಅಧಿಕೃತವಾಗಿ ಸೀಮಂತ್ ಕುಮಾರ್ ಸಿಂಗ್ ಮೊದಲ ಬಾರಿ ಸುದ್ದಿಗೋಷ್ಠಿ ಕರೆದಿದ್ದರು. ಹಾಗಾಗಿ ವರದಿಗಾರರಿಂದ ಸಭಾಂಗಣ ಹೌಸ್‌ಫುಲ್ ಆಗಿತ್ತು. ದೆಹಲಿಯಿಂದ ಬೆಂಗಳೂರಿಗೆ ಹೊಸ ಚೂಡಿದಾರ ಉಡುಪುಗಳಲ್ಲಿ ಡ್ರಗ್ಸ್ ಅಡಗಿಸಿ ಸಾಗಿಸುತ್ತಿದ್ದ ವಿದೇಶಿ ಮಹಿಳೆ ಬಂಧನ ಪ್ರಕರಣದ ವಿವರಣೆಗೆ ಕಮಿಷನರ್ ಸುದ್ದಿಗೋಷ್ಠಿ ಕರೆದಿದ್ದರು.

ಪ್ರಕರಣದ ವಿವರಣೆ ನೀಡಿದ ಕಮಿಷನರ್ ಅವರಿಗೆ ಬಂಧಿತ ಮಹಿಳೆ ಪೂರ್ವಾಪರ ಕುರಿತು ಪ್ರಶ್ನೆಗಳು ಎದುರಾದವು. ಆಗ ಸೀಮಂತ್ ಕುಮಾರ್ ಅವರು ಎಲ್ಲ ವಿವರ ಪ್ರೆಸ್ ನೋಟ್‌ನಲ್ಲೇ ಕೊಡಲಾಗಿದೆ ಅಂದರು. ಆಗ ತುಂಟ ವರದಿಗಾರನೊಬ್ಬ, ಸರ್‌ ಪ್ರೆಸ್‌ ನೋಟ್‌ನಲ್ಲಿ ಬರೀ ಚೂಡಿದಾರ ಮಾತ್ರವಿದೆ ಎಂದ. ಈ ಮಾತಿಗೆ ಕಮಿಷನರ್ ಆದಿಯಾಗಿ ಎಲ್ಲರಿಗೂ ನಗು.

ಬಳಿಕ ನಗುತ್ತಲೇ ಚೂಡಿದಾರ್ ಜೊತೆ ಪ್ರಕರಣದ ವಿವರ ಇದೆ ನೋಡ್ರೀ ಅಂದ್ರು ಅಧಿಕಾರಿಗಳು. ಇನ್ನೊಬ್ಬ ವರದಿಗಾರ, ಯಾರ್‍ಯಾರಿಗೆ ಯಾವ ಆಸಕ್ತಿ ಇದೆಯೋ ಅದರ ಬಗ್ಗೆ ಆಕರ್ಷಣೆ ಬಿಡಿ ಸರ್... ಎಂದು ಮೆಲ್ಲಗೆ ಉಸುರಿದರು. ಚೂಡಿದಾರ್‌ ಕತೆ ಕೇಳುತ್ತಲೇ ಮೊದಲ ಸುದ್ದಿಗೋಷ್ಠಿಗೆ ಶುಭಂ ಬಿತ್ತು.

-ಸಂಪತ್‌ ತರೀಕೆರೆ

-ಗಿರೀಶ್‌ ಮಾದೇನಹಳ್ಳಿ

 

PREV
Read more Articles on
click me!

Recommended Stories

FIFA World Cup 2026: ವಲಸಿಗ ಕ್ಯಾಂಪ್‌ನಲ್ಲಿ ಜನಿಸಿದ್ದ ನೆಸ್ಸೂರಿ ಈಗ ಆಸ್ಟ್ರೇಲಿಯಾ ಗೆಲುವಿನ ರೂವಾರಿ!
ಗರ್ಭಿಣಿ ತಾಯಿಗೆ ವಿಮಾನವೇರಲು ನಿರಾಕರಿಸಿದ್ದರಿಂದ ಅಮೆರಿಕದಲ್ಲೇ ಹುಟ್ಟಿದ್ದವ ಈಗ ವಿಶ್ವಕಪ್‌ನ ಸ್ಟಾರ್‌!