
ಅದಕ್ಕೆ ವಿಶ್ವನಾಥ್, ‘ಹೌದು ಗುರು, ಬೇಕಿದ್ದರೆ ಸುರೇಶ್ ಅವರನ್ನೇ ಕೇಳಿ. ಮೊನ್ನೆ ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡುವಾಗ ಭಾವಿ ಸಿಎಂ ಆದ ಡಿ.ಕೆ. ಶಿವಕುಮಾರ್ ಅವರು ಎಂದು ಸಂಬೋಧಿಸಿ 50 ಕೋಟಿ ರು. ಅನುದಾನಕ್ಕೆ ಬೇಡಿಕೆ ಇಟ್ಟರು. ಅದರಿಂದ ಖುಷಿಯಾದ ಡಿಸಿಎಂ ಮರುದಿನವೇ 50 ಕೋಟಿ ರು. ಮಂಜೂರು ಮಾಡಿದ್ದಾರೆ’ ಎಂದು ಹೇಳಿ ಎಲ್ಲರನ್ನೂ ಮತ್ತೊಮ್ಮೆ ಅಚ್ಚರಿಗೆ ದೂಡಿದರು.
ವೆರಿ ವೆರಿ ಸಿಂಪಲ್... ಭಾವಿ ಸಿಎಂ ಎಂದು ಹೇಳಿ ಅನುದಾನ ಪಡೆಯಿರಿ. ಭರ್ಜರಿ ಖಾತೆ ಇಟ್ಟುಕೊಂಡಿರುವ ಉಪಮುಖ್ಯಮಂತ್ರಿ ಅವರನ್ನು ಬಾಯಿ ತುಂಬಾ ಹೊಗಳಿದರೆ ಯಾವುದೇ ಮನವಿ ಮಾಡದೇ, ಗಲಾಟೆ, ಗದ್ದಲ ಇಲ್ಲದೇ 24 ಗಂಟೆಯೊಳಗೆ ಅನುದಾನ ಬಿಡುಗಡೆ ಮಾಡುತ್ತಾರಂತೆ.
ಅಚ್ಚರಿ ಆದರೂ ಇದು ನಿಜ, ಈವರೆಗೆ ಯಾರಿಗೂ ಗೊತ್ತಿಲ್ಲದ ಇಂತಹ ರಹಸ್ಯವನ್ನು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಬಹಿರಂಗಪಡಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಬೆಂಗಳೂರು ಅಭಿವೃದ್ಧಿ ಕುರಿತಂತೆ ತಮ್ಮದೇ ಧಾಟಿಯಲ್ಲಿ ವಿಶ್ವನಾಥ್ ಮಾತನಾಡುತ್ತಾ, ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯಲು ನಾವೆಲ್ಲ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಲ್ಲಿ ದುಂಬಾಲು ಬೀಳುತ್ತೇವೆ. ಅವರನ್ನು ಕಾಡಿಬೇಡಿ ಅನುದಾನ ಪಡೆಯುವ ಪ್ರಯತ್ನ ಮಾಡುತ್ತೇವೆ. ಯಾರ್‍ಯಾರದ್ದೋ ಕಾಲಿಗೆ ಬಿದ್ದು, ಕೈ ಹಿಡಿದು ಅನುದಾನ ತರುತ್ತೇವೆ. ಆದರೆ, ನಮ್ಮದೇ ಪಕ್ಷದ ಶಾಸಕ ಬೇಲೂರಿನ ಎಚ್.ಕೆ.ಸುರೇಶ್ ಮಾತ್ರ ಡಿ.ಕೆ.ಶಿವಕುಮಾರ್ ಅವರನ್ನು ‘ಭಾವಿ ಸಿಎಂ’ ಎಂದು ಹೊಗಳಿ ಅಟ್ಟಕ್ಕೇರಿಸಿದ್ದಕ್ಕೆ ಅವರಿಗೆ 50 ಕೋಟಿ ರು. ಅನುದಾನ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.
ಅದನ್ನು ಕೇಳಿದ ಅಕ್ಕಪಕ್ಕದ ಬಿಜೆಪಿ ಶಾಸಕರು, ಇದೇನಣ್ಣ ಹೀಗೆ ಹೇಳುತ್ತಿದ್ದೀಯಾ? ಇದು ನಿಜವೇ ಎಂದು ಅಚ್ಚರಿಯಿಂದ ವಿಶ್ವನಾಥ್ ಅವರನ್ನು ಪ್ರಶ್ನಿಸಿದರು.
ಅದಕ್ಕೆ ವಿಶ್ವನಾಥ್, ‘ಹೌದು ಗುರು, ಬೇಕಿದ್ದರೆ ಸುರೇಶ್ ಅವರನ್ನೇ ಕೇಳಿ. ಮೊನ್ನೆ ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡುವಾಗ ಭಾವಿ ಸಿಎಂ ಆದ ಡಿ.ಕೆ. ಶಿವಕುಮಾರ್ ಅವರು ಎಂದು ಸಂಬೋಧಿಸಿ 50 ಕೋಟಿ ರು. ಅನುದಾನಕ್ಕೆ ಬೇಡಿಕೆ ಇಟ್ಟರು. ಅದರಿಂದ ಖುಷಿಯಾದ ಡಿಸಿಎಂ ಮರುದಿನವೇ 50 ಕೋಟಿ ರು. ಮಂಜೂರು ಮಾಡಿದ್ದಾರೆ’ ಎಂದು ಹೇಳಿ ಎಲ್ಲರನ್ನೂ ಮತ್ತೊಮ್ಮೆ ಅಚ್ಚರಿಗೆ ದೂಡಿದರು.
ಮುಂದುವರಿದು, ‘ಆದ್ರೆ ನಮ್ ಸುರೇಶ್ ಮಾತ್ರ ಬುದ್ಧಿವಂತ. ಭಾವಿ ಸಿಎಂ ಎಂದು ಹೇಳಿದ್ದಾನೆ. ಆದರೆ, ಯಾವಾಗ ಅವರು ಸಿಎಂ ಆಗುತ್ತಾರೆ ಎಂದು ಮಾತ್ರ ಹೇಳದೇ ಬಚಾವಾದ’ ಎಂದು ಹೇಳುವ ಮೂಲಕ ಕೆಲಕಾಲ ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು.
ಇಂತಹ ರಹಸ್ಯ ತಿಳಿದ ಮೇಲೆ ಶಾಸಕರೆಲ್ಲರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಯಾವ್ಯಾವ ರೀತಿ ಹೊಗಳಬೇಕು. ಎಷ್ಟು ಕೋಟಿ ರು. ಅನುದಾನಕ್ಕೆ ಎಷ್ಟು ಹೊಗಳಬೇಕು ಎಂಬ ಲೆಕ್ಕಾಚಾರ ಶುರು ಮಾಡಿದ್ದಾರೆಂಬುದು ಇನ್ನೂ ಗೊತ್ತಾಗಿಲ್ಲ.
ಕೆಲ ನಾಮಪದ ಶಾರ್ಟ್ ಮಾಡಿದರೆ ಅರ್ಥ ಅಪಾರ್ಥವಾಗುವ ಸಾಧ್ಯತೆಯೇ ಹೆಚ್ಚು. ಇದು ಹಲವು ಬಾರಿ ಅಪಾರ್ಥ ಸೃಷ್ಟಿಸುವುದಲ್ಲದೆ ಹಾಸ್ಯ, ಅಪಹಾಸ್ಯಕ್ಕೂ ಕಾರಣವಾಗುತ್ತದೆ.
ಇಂಥದ್ದೇ ಒಂದು ಪ್ರಸಂಗ ಇತ್ತೀಚೆಗೆ ವಿಧಾನ ಪರಿಷತ್‌ನಲ್ಲಿ ನಡೆಯಿತು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಜಾಹೀರಾತು ಶುಲ್ಕ ವಿಧಿಸುವ ವಿಧೇಯಕ ಮಂಡಿಸಿದ್ದರು. ವಿಧೇಯಕ ಕುರಿತು ಪಕ್ಷಾತೀತವಾಗಿ ಸದಸ್ಯರು ಸಲಹೆ, ಸೂಚನೆ ನೀಡುತ್ತಿದ್ದರು. ಈ ವೇಳೆ ಕಾಂಗ್ರೆಸ್‌ನ ಸದಸ್ಯ ಐವಾನ್ ಡಿಸೋಜಾ ಅವರು ಸಹ ಕೆಲ ಬದಲಾವಣೆ ಕುರಿತು ಸಲಹೆ ನೀಡಿದ್ದರು.
ಚರ್ಚೆಗೆ ಉತ್ತರಿಸಿ ವಿವರಣೆ ನೀಡುವ ವೇಳೆ ಸಚಿವ ಬೈರತಿ ಸುರೇಶ್ ಅವರು, ಐವಾನ್ ಡಿಸೋಜಾ ಅವರ ಹೆಸರು ಪ್ರಸ್ತಾಪಿಸಿ ಕೇವಲ ‘ಐವಾನ್’ ಎಂದು ಸಂಬೋಧಿಸಿದರು.
ತಟ್ಟನೆ ಎಚ್ಚೆತ್ತ ಜೆಡಿಎಸ್‌ನ ಸಭಾನಾಯಕ ಭೋಜೇಗೌಡ, ‘ಸಚಿವರೇ ನಿಮಗೆ ಕೈ ಮುಗಿಯುತ್ತೇನೆ. ದಯಮಾಡಿ ಐವಾನ್ ಅನ್ನಬೇಡಿ, ಐವಾನ್ ಡಿಸೋಜಾ ಅಂತ ಕರೆಯಿರಿ’ ಎಂದು ಕೈಮುಗಿದರು. ಭೋಜೇಗೌಡರ ಮಾತಿನ ಉದ್ದೇಶ ಅರ್ಥವಾದ ಕೆಲ ಸದಸ್ಯರೆಲ್ಲರೂ ಗೊಳ್ಳೆಂದು ನಕ್ಕರು.
‘ಐವಾನ್’ ಅಂತ ಮಾತ್ರ ಕರೆದರೆ ಸಮಸ್ಯೆ ಏಕೆಂದರೆ, ‘ಹೈವಾನ್’ ಎಂದರೆ ಉರ್ದು/ಅರೆಬಿಕ್ ಭಾಷೆಯಲ್ಲಿ ಕ್ರೂರ ಪ್ರಾಣಿ ಅಥವಾ ಅನಾಗರಿಕ ಎಂದರ್ಥ. ಹೀಗಾಗಿಯೇ ಬರೀ ‘ಐವಾನ್’ ಎಂದರೆ ಅಪಾರ್ಥದ ಸಮಸ್ಯೆ!
-ಗಿರೀಶ್ ಗರಗ
-ಸಂಪತ್ ತರೀಕೆರಿ