-ಡಾ। ಸುಧಾಕರ ಹೊಸಳ್ಳಿ.
ಸಹಾಯಕ ಪ್ರಾಧ್ಯಾಪಕ,
ಮುಕ್ತ ವಿವಿ, ಮೈಸೂರು
ಆರ್‌ಎಸ್‌ಎಸ್‌ನ ಎರಡನೇ ಸರಸಂಘ ಚಾಲಕರಾಗಿದ್ದ ಮಾಧವ ಸದಾಶಿವರಾವ್ ಗೋಲ್ವಾಲ್ಕರ್ (ಶ್ರೀ ಗುರೂಜಿ) ಯವರು ಫೆಬ್ರವರಿ 19 1906ರಲ್ಲಿ ಜನ್ಮ ತಾಳಿದ್ದು, ಪ್ರತಿವರ್ಷ ಮಾಘ ಬಹುಳ ಏಕಾದಶಿ ದಿವಸದಂದು, ತಿಥಿಯ ಅನುಸಾರ ರಾಷ್ಟ್ರದಾದ್ಯಂತ ಗುರೂಜಿಯವರ ಸಂಸ್ಮರಣಾ, ದಿವಸವನ್ನು ಆಚರಣೆ ಮಾಡಲಾಗುತ್ತದೆ.
ಹಿಂದೂ ಸಮಾಜದ ಜಾಗೃತಿಗಾಗಿ, ಹಿಂದೂ ಸಮಾಜದ ಏಳಿಗೆಗಾಗಿ 1925ರಲ್ಲಿ ಪ್ರಾರಂಭವಾದ ಆರ್‌ಎಸ್‌ಎಸ್‌ಗೆ, ವಿಶಿಷ್ಟ ಬೌದ್ಧಿಕ ನೆಲೆಗಟ್ಟನ್ನು ರೂಪಿಸಿಕೊಟ್ಟವರು ಗುರೂಜಿ. ಡಾ। ಹೆಡ್ಗೆವಾರ್ ಅವರ, ಕಾರ್ಯ ವಿಸ್ತರಣೆಯ ಜೊತೆಗೆ, ಸಂಘದ ಕಾರ್ಯಕರ್ತರಿಗೆ ಪ್ರತ್ಯೇಕ ಬೌದ್ಧಿಕ ಆಯಾಮವನ್ನು ಕಟ್ಟಿಕೊಟ್ಟ ಕೀರ್ತಿಗೆ ಗುರೂಜಿಯವರು ಭಾಜನರಾಗಿದ್ದಾರೆ.
ಸಮಾಜದಲ್ಲಿ ಇದ್ದ ಅನೇಕ ಮೂಲ ಸಮಸ್ಯೆಗಳು ಮತ್ತು ಅವುಗಳ ಮುಂದುವರಿಕೆಯಿಂದ ರಾಷ್ಟ್ರದ ಐಕ್ಯತೆಗಿರುವ ಸವಾಲುಗಳ ಬಗ್ಗೆ, ತಮ್ಮ ಅಗಾಧ ಪಾಂಡಿತ್ಯದ ಮಂಥನದ ಮೂಲಕ ಪರಿಹಾರ ಸೂಚಿಸುವ ಕಾರ್ಯವನ್ನು ಮಾಡಿದ್ದರು.
‘ಸಂಘ’ ವ್ಯಕ್ತಿ ನಿರ್ಮಾಣವನ್ನು, ಆ ಮೂಲಕ ರಾಷ್ಟ್ರ ನಿರ್ಮಾಣವನ್ನು ಅಪೇಕ್ಷಿಸುತ್ತದೆ, ಈ ದಿಸೆಯಲ್ಲಿ ಕಾರ್ಯಕರ್ತರು ಜಾತೀಯತೆ, ಅಸ್ಪೃಶ್ಯತೆ ಅಂತಹ ವಿಷಜಾಲಗಳನ್ನು ಹೇಗೆ? ಭೇದಿಸಬೇಕು, ಅವುಗಳ ಬೆನ್ನು ಮೂಳೆ ಶಿಥಿಲಗೊಳಿಸುವ ಮುಖೇನ ಸಮ ಸಮಾಜದ ನಿರ್ಮಾಣ ಹೇಗೆ ಸಾಕಾರಗೊಳಿಸಬೇಕು ಎನ್ನುವುದನ್ನು ರಾಷ್ಟ್ರದುದ್ದಕ್ಕೂ ಸಂಚಾರ ಮಾಡಿ ಪ್ರೇರಣೆ ನೀಡಿದ್ದರು.
ಈ ನಿಟ್ಟಿನಲ್ಲಿ ಅಂಬೇಡ್ಕರರ, ಪ್ರಯತ್ನದ ದೂರದೃಷ್ಟಿಯ ಬಗೆಗೂ ಸ್ವತಃ ಪ್ರಚಾರ ಮಾಡಿದ್ದರು. ಯಾವುದೋ ಕಾಲಘಟ್ಟದಲ್ಲಿ ಹಿಂದೂ ಸಮಾಜದ ಭಾಗವಾಗಿರುವ ಈ ಅನಿಷ್ಟ ಪದ್ಧತಿಯನ್ನು ತೊಲಗಿಸಲು ಪ್ರತಿಯೊಬ್ಬ ಇಂದು ಸಂಕಲ್ಪ ಮಾಡಬೇಕೆಂಬ ಸಂದೇಶ ನೀಡಿದ್ದರು.
ಇಂತಹ ಸೂಚನಾ ರೂಪದ ಸಂದೇಶದ ಕಾರಣಕ್ಕಾಗಿ ಹಿಂದೂ ಸಂಘದಲ್ಲಿ ಜಾತಿ ಕೇಳುವ ಪದ್ಧತಿಗೆ, ಅಸ್ಪೃಶ್ಯತೆ ಆಚರಣೆಗೆ ಅವಕಾಶವೇ ಇಲ್ಲದಂತಾಗಿದೆ.
ಗುರೂಜಿಯವರ ಸಂಸ್ಮರಣೆಯ ಹಿನ್ನೆಲೆಯಲ್ಲಿ ಅವರು ಸಮಾಜಕ್ಕೆ ಕೊಟ್ಟ ಶ್ರೇಷ್ಠ ಚಿಂತನೆಗಳನ್ನು ಹೀಗೆ ನೋಡಬಹುದು.
ನಮ್ಮಲ್ಲಿ ಕೆಲವರು ಸೆರೆವಾಸ ಅನುಭವಿಸಿದ್ದನ್ನು ತಾವು ವಿಶೇಷ ಮುನ್ನಡೆಯುವ ಮಾರ್ಗವೆಂದು ಭಾವಿಸುವುದು ಉಂಟು, ಸೆರೆವಾಸವನ್ನು ಮಾನ ಸಮ್ಮಾನ ಅಥವಾ ಅಧಿಕಾರ ಪ್ರಾಪ್ತಿಯ ಒಂದು ಪ್ರಮಾಣ ಪತ್ರವೆಂದು ಪರಿಗಣಿಸುತ್ತಾರೆ. ಇದು ಒಂದು ದೊಡ್ಡ ಕೂಡಿಟ್ಟ ನಿಧಿಯಂತೆ ಆಗಿಬಿಟ್ಟಿದೆ. ಆ ನಿಧಿಯ ಪ್ರಮಾಣಕ್ಕೆ, ಅನುಗುಣವಾಗಿ ಸಣ್ಣ ದೊಡ್ಡ ಚೆಕ್ಕುಗಳನ್ನು ನಗದು ಮಾಡಿಸಿಕೊಳ್ಳುವ ಮಾನಸಿಕತೆಯನ್ನು ಕಾಣಲಾಗುತ್ತದೆ. ಇದು ಒಂದು ಅಪರಾಧವೇ ಸರಿ. ಈ ಪ್ರವೃತ್ತಿಯಿಂದ ರಾಷ್ಟ್ರಕ್ಕೆ ಒಳ್ಳೆಯದಾಗುವುದಿಲ್ಲ. ಈ ಮನೋಭಾವನೆ ದೇಶವನ್ನು ಅಪಾಯಕ್ಕೆ ದೂಡುತ್ತದೆ ಎಂದು ಎಚ್ಚರಿಸಿದ್ದರು.
ಆರ್ಯ ಎಂಬುದು ಪ್ರಾಚೀನ ಮತ್ತು ಗೌರವಶಾಲಿ ಶಬ್ದ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಕಳೆದ ಸಾವಿರಾರು ವರ್ಷಗಳಿಂದ ಅದು ಬಳಕೆಯಲ್ಲಿಲ್ಲ. ಬ್ರಿಟಿಷರ ಶಾಸನ ಕಾಲದಲ್ಲಿ ಅವರ ದುಷ್ಟ ಪ್ರಚಾರದಿಂದ ನಮ್ಮ ಮನಸ್ಸಿನಲ್ಲಿ ಆರ್ಯ - ದ್ರಾವಿಡ ವಿವಾದದ ವಿಷಯುಕ್ತ ವಿಚಾರ ಮನೆ ಮಾಡಿದೆ. ಆದುದರಿಂದ ಇಂತಹ ಪಶ್ಚಿಮದ ಕುತಂತ್ರವನ್ನು ದೂರ ತಳ್ಳಿ ಸಾಮರಸ್ಯದ ಭಾವವನ್ನು ಸರ್ವರೂ ಬೆಳಸಿಕೊಳ್ಳಬೇಕು ಎಂದಿದ್ದರು.
3.ಜಾತೀಯತೆ ಜಾದುವಿನಿಂದ ನಶಿಸಿ ಹೋಗಲ್ಲ:
ಫೆಬ್ರವರಿ 2 1969ರಂದು ವೃದ್ಧರೊಬ್ಬರು ನಾನು ಹಿಂದುಳಿದ ಜಾತಿಗೆ ಸೇರಿದವನು, ಸಂಘದಲ್ಲಿ ಹಿಂದುಳಿದವರ ಪ್ರಾತಿನಿಧ್ಯ ಹೆಚ್ಚಿಲ್ಲ ಯಾಕೆ? ಎಂದು ಕೇಳಿದಾಗ.
ಹಿಂದುಳಿದ ಮತ್ತು ಅನುಸೂಚಿತ ಜಾತಿಗಳ ಜನ ತಮ್ಮನ್ನು ಹಿಂದುಳಿದವರು ಮತ್ತು ಅಸ್ಪೃಶ್ಯರೆಂದು ಏಕೆ ತಿಳಿಯಬೇಕು? ಹೃದಯ ಮತ್ತು ಬುದ್ಧಿಗಳ ಮೇಲೆ ಸವಾರಿ ಆಗಿರುವ ಈ ವಿಚಾರ ಈಗಲೂ ಕಾಣಿಸಿಕೊಳ್ಳುವುದು ರಾಜಕೀಯವಾಗಿ ಕೆಲವರಿಗೆ ಅನುಕೂಲಕರವಾದದ್ದು. ಸಂಘ ಇಂತಹ ವಿಕೃತ ವಿಚಾರಗಳಿಂದ ದೂರ ಇದೆ. ಜಾತಿ, ಮತ, ಭಾಷೆ ಮುಂತಾದ ಬೇದಗಳನ್ನು ದೂರ ಮಾಡಿ, ಹಿಂದೂ ಸಮಾಜವನ್ನು ಸಂಘಟಿಸಬೇಕೆಂಬ ಸಂಕಲ್ಪ ಸಂಘದಲ್ಲಿದೆ. ನಾವು 1000 ವರ್ಷಗಳಿಗಿಂತಲೂ ಹೆಚ್ಚು ಕಾಲ ದಾಸ್ಯದಲ್ಲಿ ಇದ್ದದ್ದರಿಂದ ಜಾತೀಯ ಭಾವನೆ ಬಲವಾಗಿ ಬೇರೂರಿದೆ. ಇದನ್ನು ಬೇರು ಸಮೇತ ಕೀಳಲು ನಾವೆಲ್ಲರೂ ಒಗ್ಗಟ್ಟಿನಿಂದ ಪ್ರಯತ್ನ ಮಾಡಬೇಕು ಇದು ಕ್ರಮೇಣ ಮಾಯವಾದಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
4.ಹಿಂದೂ ರಾಷ್ಟ್ರ ಮತ್ತು ಸೆಕ್ಯುಲರಿಸಂ:
ಆಂಗ್ಲ ವ್ಯಕ್ತಿ ಒಬ್ಬ ಭಾರತದಲ್ಲಿ ಸೆಕ್ಯುಲರಿಸಂ ಇದೆ, ನೀವು ಹಿಂದೂ ರಾಷ್ಟ್ರವನ್ನು ಪ್ರತಿಷ್ಠಾಪಿಸ ಬೇಕೆಂದಿದ್ದೀರಿ, ಹಾಗಾದರೆ , ಸೆಕ್ಯುಲರಿಸಂನ ಗತಿ ಏನು? ಎಂದು ಪ್ರಶ್ನಿಸಿದಾಗ, ನಿಮ್ಮಲ್ಲಿ ದೊರೆ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಆಗಿರಬೇಕೆಂಬ ನಿಯಮವಿದೆ, ಹಾಗಾದರೆ ಬ್ರಿಟನ್ ಹೇಗೆ? ಸೆಕ್ಯುಲರ್ ರಾಷ್ಟ್ರವಾಗುತ್ತದೆ? ಹಿಂದುಗಳ ಪ್ರಭುತ್ವ ಇದ್ದ ಮಾತ್ರಕ್ಕೆ ಭಾರತದಲ್ಲಿ ಸೆಕ್ಯುಲರಿಸಂ ಆಚರಣೆಗೆ ಹೇಗೆ ಅಡ್ಡಿಯಾಗುತ್ತದೆ? ಹಿಂದುಗಳ ಮೂಲ ಗುಣವೇ ಜಾತ್ಯತೀತ ಎಂದು ಸಾರಿದ್ದರು.
5.ನಿಜವಾದ ರಾಯಭಾರಿ:
ಯಾವನೇ ಒಬ್ಬ ವ್ಯಕ್ತಿ ಭಾರತದಿಂದ ಹೊರನಾಡಿಗೆ ಹೊರಟಾಗ ತನ್ನ ದೇಶ, ತನ್ನ ರಾಷ್ಟ್ರೀಯ ಸಂಸ್ಕೃತಿ ಮತ್ತು ಜೀವನ ಮೌಲ್ಯಗಳ ಪ್ರತಿನಿಧಿಯಾಗಿ ತಾನು ಹೋಗುತ್ತಿದ್ದೇನೆಂಬ ಅರಿವು ಆತನಲ್ಲಿ ಪ್ರಖರವಾಗಿರಬೇಕು, ಜಗತ್ತು ಅವನ ನಡತೆಯ ಓರೆಗಲ್ಲಿನ ಮೇಲೆ ಆ ದೇಶದ ಮೌಲ್ಯಗಳ ಹಾಗೂ ಮಹಾನತೆಯ ಬೆಲೆ ಕಟ್ಟುತ್ತದೆ. ನಮ್ಮಂತಹ ಶ್ರೇಷ್ಠ ಹಾಗೂ ಪ್ರಾಚೀನ ರಾಷ್ಟ್ರದ ಬಗೆಗಂತೂ ಈ ಮಾತು ಇನ್ನೂ ಹೆಚ್ಚು ನಿಜ. ನಮ್ಮ ನಡವಳಿಕೆಯು ನಮ್ಮ ಉದಾತ್ತ ಸಾಂಸ್ಕೃತಿಕ ಮಟ್ಟಕ್ಕೆ ತಕ್ಕಂತೆ ಇರದೆ ಹೋದರೆ, ಆ ದೇಶಗಳ ದೃಷ್ಟಿಯಲ್ಲಿ ನಮ್ಮ ದೇಶದ ಪ್ರತಿಮೆ ಕಳೆಗುಂದುತ್ತದೆ. ಹಾಗಾಗಿ ನಮ್ಮ ರಾಷ್ಟ್ರದ ಚೈತನ್ಯಪೂರ್ಣ ನಿಜ ಸ್ವರೂಪವನ್ನು ಜಗತ್ತಿಗೆ ಪರಿಚಯಿಸುವ ಪ್ರಜ್ಞೆಯಿಂದಲೇ ಪ್ರವಾಸ ಮಾಡಬೇಕು ಎಂಬಂತ ಗುರಿ ನೀಡಿದ್ದರು.
6.ಸಾಮರಸ್ಯದ ಗುರಿ ಮುಟ್ಟುವವರೆಗೆ ನಿಲ್ಲದಿರಿ:
ನಮ್ಮ ದೇಶದಲ್ಲಿ ವಿಚಿತ್ರಕಾರಿ ಶಕ್ತಿಗಳು ಚುರುಕಾಗಿವೆ. ನಮ್ಮ ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳಲು ವಿದೇಶಿ ರಾಷ್ಟ್ರಗಳು ಹೊಂಚು ಹಾಕುತ್ತಿವೆ. ಕೆಲವು ವರ್ಷಗಳ ಹಿಂದೆ ಅಸ್ಸಾಮಿನ ಭಾಷಾ ಘರ್ಷಣೆಯಲ್ಲಿ ವಿದೇಶಗಳ ಕೈವಾಡ ನಡೆದಿತ್ತು. ಅದೇ ರೀತಿ ಹರಿಜನರ ಮೇಲಿನ ದೌರ್ಜನ್ಯಗಳ ಉತ್ಪ್ರೇಕ್ಷಿತ ವರದಿಗಳನ್ನು ಹಬ್ಬಿಸುವಲ್ಲಿ ಅವರ ಪಾತ್ರ ಹಿರಿದಾದದ್ದೆ. ಹಾಗಾಗಿ ಜಾತಿ, ಮತ, ಪಂಥದ ಸೋಗಿನಲ್ಲಿ ಹಿಂದೂ ಸಮಾಜ ಒಡಕುಂಟಾದರೆ, ದೇಶವೇ ಅಪಾಯಕ್ಕೆ ಸಿಲುಕಲಿದೆ. ಸಾಮರಸ್ಯ ಸಮಾಜವನ್ನು ಸ್ಥಾಪಿಸುವವರಿಗೆ ನಿಮ್ಮ ಹೋರಾಟ ನಿಲ್ಲದಿರಲಿ ಎಂದು ಕಾರ್ಯಕರ್ತರಿಗೆ ಕರೆ ನೀಡಲಾಗಿತ್ತು. ಈ ಎಚ್ಚರಿಕೆ ಇಂದೂ ಕೂಡ ಪ್ರಸ್ತುತವೇ ಆಗಿದೆ.
ಹೀಗೆ ಗುರೂಜಿಯವರು ಸಂಘದ ಕಾರ್ಯಕರ್ತರಿಗೆ ಸಾಮರಸ್ಯದ ಅನೇಕ ಮುಖಗಳನ್ನು ಪರಿಚಯ ಮಾಡಿಸಿದ್ದರು. ಸಹಬಾಳ್ವೆಯ ಮೂಲ ಸತ್ವ ಮತ್ತು ಸ್ವತ್ವವನ್ನು ಬಿಡಿಸಿ ಹೇಳಿದ್ದರು. ಜಾತೀಯತೆಯ ಸಮಸ್ಯೆ ಹೇಗೆ? ರಾಷ್ಟ್ರವನ್ನು ಕಂದಕದಲ್ಲಿ ದೂಡುತ್ತದೆ ಅನ್ನುವುದನ್ನು ಅರ್ಥೈಸುವ ಪ್ರಯತ್ನ ಮಾಡಿದ್ದರು.
ಇಂದು ಸಂಘ ಕಾರ್ಯದಲ್ಲಿ ಸಾಮರಸ್ಯವು ಪ್ರಧಾನ ತತ್ವವಾಗಿದೆ. ಅಸ್ಪೃಶ್ಯತೆಯ ಸುಳಿಯು ಸಂಘದ ಒಳಗೆ ಇಣುಕಲು ಬಿಟ್ಟಿಲ್ಲ. ಬೇರೆಲ್ಲಡೆಗಿಂತ ಶೇಕಡ ನೂರರಷ್ಟು ಅಸ್ಪೃಶ್ಯತೆ ಆಚರಣೆ ನಿಷಿದ್ಧವಾಗಿರುವುದು ಅದು ಸಂಘದ ಚಟುವಟಿಕೆ ಮತ್ತು ಶಾಖೆಯಲ್ಲಿ ಎಂಬುದು ನಿರ್ವಿವಾದ.
ಗುರೂಜಿಯವರ ಸಾಮರಸ್ಯದ ದೃಷ್ಟಿಕೋನದ ಬೆಳಕು ಸಂಘವನ್ನು ಮೀರಿ, ಸಾಮೂಹಿಕವಾಗಿ ರಾಷ್ಟ್ರ ಮುಟ್ಟಲಿ ಎಂಬ ಆಶಯ ಪ್ರಧಾನವಾಗುವುದು ಈ ಹೊತ್ತಿನ ಜರೂರು.