ಅಡಕೆಗೆ ಮತ್ತೊಂದು ವಿಚಿತ್ರ ರೋಗ: ಆತಂಕದಲ್ಲಿ ಬೆಳೆಗಾರರು

By Kannadaprabha News  |  First Published Oct 27, 2019, 2:26 PM IST

ಹಳದಿ ಎಲೆ ರೋಗ ಸೇರಿ ರೋಗಬಾಧೆಗಳಿಂದ ಅಕ್ಷರಶಃ ನಲುಗಿ ಹೋಗಿರುವ ಮಲೆನಾಡಿನ ಅಡಕೆ ಬೆಳೆಗಾರರು ಇದೀಗ ಇನ್ನೊಂದು ಆಘಾತಕ್ಕೆ ಒಳಗಾಗಿದ್ದಾರೆ. ದಿಢೀರನೆ ಈ ವರ್ಷ ಕಾಣಿಸಿಕೊಂಡ ಮರ ಒಣಗಿ ನಾಶವಾಗುವ ವಿಚಿತ್ರ ರೋಗ ಕಳಸ ಭಾಗದಲ್ಲಿ ಕಾಣಿಸಿಕೊಂಡಿದೆ.
 


ಶಿವಮೊಗ್ಗ(ಅ.27): ಹಳದಿ ಎಲೆ ರೋಗ ಸೇರಿ ರೋಗಬಾಧೆಗಳಿಂದ ಅಕ್ಷರಶಃ ನಲುಗಿ ಹೋಗಿರುವ ಮಲೆನಾಡಿನ ಅಡಕೆ ಬೆಳೆಗಾರರು ಇದೀಗ ಇನ್ನೊಂದು ಆಘಾತಕ್ಕೆ ಒಳಗಾಗಿದ್ದಾರೆ. ದಿಢೀರನೆ ಈ ವರ್ಷ ಕಾಣಿಸಿಕೊಂಡ ಮರ ಒಣಗಿ ನಾಶವಾಗುವ ವಿಚಿತ್ರ ರೋಗ ಕಳಸ ಭಾಗದಲ್ಲಿ ಕಾಣಿಸಿಕೊಂಡಿದೆ.

ಇದ್ದಕ್ಕಿದ್ದಂತೆ ಜುಲೈ ತಿಂಗಳ ಭಾರೀ ಮಳೆಯ ಸಂದರ್ಭದಲ್ಲಿ ಕಾಣಿಸಿಕೊಂಡ ಈ ರೋಗ ಕಂಡು ದಿಗ್ರಾ$್ಭಂತರಾದ ರೈತರು ಏನು, ಎತ್ತ ಎಂದು ನೋಡುವಷ್ಟರಲ್ಲಿ ಹರಡತೊಡಗಿದೆ. ಅಕ್ಕಪಕ್ಕದ ತೋಟಗಳ ಮೇಲೆ ತನ್ನ ಆಕ್ರಮಣ ಮುಂದುವರಿಸಿದೆ. ಈ ರೋಗವನ್ನು ಕಂಡು ಅಡಕೆ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದರೆ, ಇತ್ತ ತೋಟಗಾರಿಕಾ ಇಲಾಖೆಯಲಾಗಲಿ, ಅಡಕೆ ಸಂಶೋಧನಾ ಕೇಂದ್ರವಾಗಲೀ, ಕೃಷಿ ವಿವಿಯ ಪ್ರಾದೇಶಿಕ ಕೇಂದ್ರಗಳಾಗಲೀ ತಲೆ ಕೆಡಿಸಿಕೊಂಡೇ ಇಲ್ಲ.

Tap to resize

Latest Videos

ಏನಿದು ರೋಗ ಲಕ್ಷಣ:

ಮರದ ಸುಳಿ ಸುಟ್ಟಂತೆ ಕಾಣುತ್ತಿದೆ. ಗರಿಗಳು ಒಣಗಿ ಸುರುಳಿ ಸುತ್ತಿಕೊಳ್ಳುತ್ತದೆ. ಮರದಿಂದ ಮರಕ್ಕೆ ಹರಡಿ ಇಡೀ ತೋಟವೇ ಬೇಸಿಗೆಯಲ್ಲಿ ನೀರುಣಿಸದ ತೋಟದಂತೆ ಒಣಗಿ ನಿಲ್ಲುತ್ತಿವೆ. ಆಗಸ್ಟ್‌ ತಿಂಗಳಲ್ಲಿ ಒಂದು ತೋಟದಲ್ಲಿ ಈ ರೀತಿಯ ರೋಗ ಕಾಣಿಸಿಕೊಂಡಿತು. ತಕ್ಷಣವೇ ಗಾಬರಿಯಾದ ರೈತರು ಮೂಡಿಗೆರೆಯ ವಿವಿ ಪ್ರಾದೇಶಿಕ ಕೇಂದ್ರವನ್ನು ಸಂಪರ್ಕಿಸಿದರು. ಸ್ಥಳಕ್ಕೆ ಭೇಟಿ ನೀಡಿದ ವಿಜ್ಞಾನಿಗಳು ತೋಟದಲ್ಲಿನ ಮರದ ಮಾದರಿಗಳನ್ನು ಸಂಗ್ರಹಿಸಿ ಕೊಂಡೊಯ್ದರು. ಆದರೆ ಇದುವರೆಗೂ ಇದರ ಫಲಿತಾಂಶ ಏನೆಂದು ಹೇಳಲಿಲ್ಲ.

ಇದರ ಬೆನ್ನಿಗೆ ಸೆಪ್ಟೆಂಬರ್‌ ತಿಂಗಳ ಕೊನೆಯಲ್ಲಿ ಕಳಸ ಸಮೀಪದ ಮರಸಣಿಗೆ, ಮೈದಾಡಿ ಭಾಗದಲ್ಲಿ ಇದೇ ರೀತಿಯ ರೋಗಬಾಧೆ ಕಾಣಿಸಿಕೊಂಡಿತು. ಈ ಬಾರಿ ರೋಗ ವೇಗವಾಗಿ ಹರಡುತ್ತಿರುವುದು ಗೊತ್ತಾಯಿತು. ಮೊದಲಿಗೆ ಒಂದೆರಡು ಮರಗಳಲ್ಲಿ ಕಾಣಿಸಿಕೊಂಡ ರೋಗ ಕೆಲವೇ ದಿನಗಳಲ್ಲಿ ಇಡೀ ತೋಟ ಆವರಿಸಿದೆ. ಪಕ್ಕದ ತೋಟಗಳಲ್ಲಿಯೂ ಈ ರೋಗದ ಚಿನ್ಹೆ ಕಾಣಿಸಿಕೊಂಡಿದೆ.

ಅಡಕೆ ಕೊಳೆ: 70ವರ್ಷಗಳಿಂದಲೂ ಅದೇ ಔಷಧ, ಸಂಶೋಧಕರೇನ್ಮಾಡ್ತಿದ್ದಾರೆ..?

ತಕ್ಷಣವೇ ಗಾಬರಿಗೊಂಡ ರೈತರು ತೋಟಗಾರಿಕಾ ಇಲಾಖೆ, ಸಂಶೋಧನಾ ಕೇಂದ್ರಗಳಿಗೆ ಮನವಿ ಮಾಡಿದರು. ಆದರೆ ಯಾರೂ ಬರಲಿಲ್ಲ. ಕೊನೆಗೆ ಮಾಮ್ಕೋಸ್‌ ಮಧ್ಯ ಪ್ರವೇಶಿಸಿ ವಿಜ್ಞಾನಿಗಳಿಗೆ ರೈತರ ತೋಟಗಳಿಗೆ ಹೋಗುವಂತೆ ಮನವಿ ಮಾಡಿತು. ಈ ಒತ್ತಡದಿಂದಾಗಿ ಶನಿವಾರ ಕಳಸದ ವಿವಿಧ ತೋಟಗಳಿಗೆ ತೆರಳಿದ ತಂಡವು ಮಾದರಿಗಳನ್ನು ಸಂಗ್ರಹಿಸಿದೆ.

ಕಳೆದ ಎರಡೂವರೆ ತಿಂಗಳಲ್ಲಿ ಸುಮಾರು 60-70 ಸಾವಿರ ಅಡಕೆ ಮರಗಳು ಈ ರೋಗ ಬಾಧೆಗೆ ತುತ್ತಾಗಿವೆ ಎಂದು ಈ ಭಾಗದ ರೈತರು ಹೇಳುತ್ತಾರೆ. ಇದು ಹರಡುತ್ತಿರುವ ವೇಗವನ್ನು ಗಮನಿಸಿದರೆ ಕೆಲವೇ ವರ್ಷದಲ್ಲಿ ಇಡೀ ಮಲೆನಾಡನ್ನೂ ಆಕ್ರಮಿಸಬಹುದು ಎಂದು ಭಯ ವ್ಯಕ್ತಪಡಿಸುತ್ತಾರೆ.

ಅಡಿಕೆ ಮರ ಏರಲು ಬಂತು ಹೈಟೆಕ್ ಯಂತ್ರ, ಭಟ್ಟರ ಸಂಶೋಧನೆಗೆ ಮಹೀಂದ್ರಾ ಮೆಚ್ಚುಗೆ

ಸದ್ಯ ಗುಣಪಡಿಸಲಾಗದ ರೋಗ, ಔಷಧಿಯೇ ಇಲ್ಲದ ರೋಗ ಎಂದು ಪರಿಗಣಿಸಲ್ಪಟ್ಟಿರುವ ಹಳದಿ ಎಲೆ ರೋಗ ಒಮ್ಮೆ ತೋಟಕ್ಕೆ ಕಾಲಿಟ್ಟರೆ ಆ ತೋಟ ಸರ್ವನಾಶ ಎಂಬುದು ಗೊತ್ತಾಗಿದೆ. ಈ ರೋಗಕ್ಕೆ 60-70 ವರ್ಷ ಇತಿಹಾಸವಿದೆ. ಅಡಕೆಯ ಕ್ಯಾನ್ಸರ್‌ ಎಂದೇ ಇದನ್ನು ಹೇಳಲಾಗುತ್ತಿದೆ. ಇದರ ಬಗ್ಗೆಯೂ ಗಂಭಿರ ಸಂಶೋಧನೆ ಇದುವರೆಗೂ ನಡೆಯಲಿಲ್ಲ. ಆದರೆ ಈ ರೋಗ ಬಹು ನಿಧಾನವಾಗಿ ಹರಡುತ್ತದೆ. ಒಂದು ತೋಟಕ್ಕೆ ಬಂದರೆ ಇಡೀ ತೋಟ ಆಕ್ರಮಿಸಿಕೊಳ್ಳಲು ಕನಿಷ್ಟಆರೇಳು ವರ್ಷ ಅಥವಾ ಹತ್ತು ವರ್ಷ ತೆಗೆದುಕೊಳ್ಳುತ್ತದೆ. ಕಳೆದ 70 ವರ್ಷಗಳಲ್ಲಿ ಶೃಂಗೇರಿ, ಕೊಪ್ಪ, ಎನ್‌. ಆರ್‌. ಪುರ ತಾಲೂಕಿನ ಕೆಲ ಭಾಗಗಳನ್ನು ಆವರಿಸಿ ಅಲ್ಲಿನ ಅಡಕೆ ತೋಟಗಳನ್ನು ಪೂರ್ಣ ನಾಶ ಮಾಡಿದೆ.

ಆದರೆ ಈಗ ಕಾಣಿಸಿಕೊಂಡಿರುವ ರೋಗ ಬಹಳ ವೇಗವಾಗಿ ಹರಡುತ್ತಿದೆ. ಹಳದಿ ಎಲೆ ರೋಗ ಐದಾರು ವರ್ಷಗಳಲ್ಲಿ ಹರಡುವಷ್ಟುಜಾಗವನ್ನು ಈ ರೋಗ ಕೇವಲ ಐದಾರು ತಿಂಗಳಲ್ಲಿ ಆವರಿಸುತ್ತದೆ.

ತಂಪು ಪರಿಸರ ಕಾರಣ?

ಈ ವರ್ಷದ ವಿಪರೀತ ಮಳೆಯ ಕಾರಣ, ನೆಲೆ, ಪರಿಸರ ತೀವ್ರವಾಗಿ ತಂಪಾಗಿದ್ದು, ಇದರಿಂದ ಈ ರೋಗಬಾಧೆ ಕಾಣಿಸಿಕೊಂಡಿದೆ. ಒಮ್ಮೆ ಮಳೆ ಕಡಿಮೆಯಾದರೆ ಇದು ಕಡಿಮೆಯಾಗುತ್ತದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ತಜ್ಞರು ಹೇಳಿದ್ದಾರೆ. ಆದರೆ ಇದನ್ನು ಒಪ್ಪಲು ರೈತರು ತಯಾರಿಲ್ಲ. ಸಂಶೋಧನೆಯನ್ನೇ ಮಾಡದೆ ಬಾಯಿ ಮಾತಿನಲ್ಲಿ ಇವರು ಹೇಳಿದರೆ ಹೇಗೆ ನಂಬುವುದು ಎಂಬುದು ಒಂದೆಡೆಯಾದರೆ, ಇನ್ನೊಂದೆಡೆ ಈ ಅಂಶ ಕಾರಣವಾಗಿದ್ದರೆ ಇಡೀ ಮಲೆನಾಡಿಗೆ ಈ ರೋಗ ಬರಬೇಕಿತ್ತು. ಆದರೆ ಆಯ್ದ ಕೆಲವೇ ತೋಟಗಳಲ್ಲಿ ಏಕೆ ಕಾಣಿಸಿದೆ ಎಂದು ಪ್ರಶ್ನಿಸುತ್ತಾರೆ. ಇದಕ್ಕಿಂತ ಹೆಚ್ಚು ಮಳೆ ಹಲವು ದಶಕಗಳ ಹಿಂದೆ ಇಲ್ಲಿ ಬಂದಿದೆ. ಆಗ ಯಾಕೆ ರೋಗ ಕಾಣಿಸಿಲ್ಲ ಎಂದು ಮರು ಪ್ರಶ್ನಿಸುತ್ತಾರೆ.

ಆದರೆ ತೋಟಗಾರಿಕೆ ಇಲಾಖೆ, ಅಡಕೆ ಸಂಶೋಧನಾ ಕೇಂದ್ರಗಳು ಯಾವ ಮಟ್ಟದಲ್ಲಿ ಸ್ಪಂದಿಸಬೇಕಿತ್ತೋ ಅ ರೀತಿ ಸ್ಪಂದಿಸಿಲ್ಲ ಎಂದು ನಿಚ್ಚಳ. ತಕ್ಷಣ ಸ್ಥಳಕ್ಕೆ ಹಿರಿಯ ವಿಜ್ಞಾನಿಗಳು ಭೇಟಿ ನೀಡಿ ಸಮಸ್ಯೆಯ ಮೂಲವನ್ನು ಕಂಡು ಹಿಡಿಯಬೇಕು. ಬಳಿಕ ಪರಿಹಾರ ಹುಡುಕಬೇಕು. ಹೀಗಾಗಲೇ ಹಲವು ಕಾರಣಗಳಿಂದ ಜರ್ಝರಿತವಾಗಿರುವ ಅಡಕೆ ಬೆಳೆಗಾರರು ಸಂಪೂರ್ಣ ನಾಶವಾಗಲು ಬಿಡಬಾರದು ಎಂದು ಮನವಿ ಮಾಡಿಕೊಳ್ಳುತ್ತಾರೆ.

ನನ್ನ ತೋಟದ ಪಕ್ಕದಲ್ಲಿ ಈ ರೋಗ ಕಾಣಿಸಿಕೊಂಡಿದೆ. ನನ್ನ ತೋಟಕ್ಕೂ ಹರಡಿದಂತೆ ಕಾಣುತ್ತಿದೆ. ಈಗಾಗಲೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಇದು ಸಹಜವಾಗಿಯೇ ಭಯ ತಂದಿದೆ. ಸರ್ಕಾರ ಇದರ ಬಗ್ಗೆ ಆದ್ಯತೆಯ ಮೇಲೆ ಗಮನ ನೀಡಬೇಕು. ರೈತರ ರಕ್ಷಣೆಗೆ ಬರಬೇಕು ಎಂದು ರೈತ ಪ್ರಸನ್ನ ಹೆಬ್ಬಾರ್‌ ಹೇಳಿದ್ದಾರೆ.

-ಗೋಪಾಲ್‌ ಯಡಗೆರೆ

click me!