ಶಿವಮೊಗ್ಗ(ಸೆ.13): ಅತಿವೃಷ್ಟಿಯಿಂದ ಅಕ್ಷರಶಃ ಕಂಗಾಲಾಗಿರುವ ಮಲೆನಾಡಿನ ಅಡಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಾಗರ ತಾಲೂಕಿನ ಚಿಪ್ಪಳಿ-ಲಿಂಗದಹಳ್ಳಿ ನವೋದಯ ಯುವಕ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ಅಡಕೆ ಕೊಳೆ ರೋಗ ನಿಯಂತ್ರಣಕ್ಕೆ ಕಾಲಮಿತಿಯಲ್ಲಿ ಸಂಶೋಧನಾ ಪರಿಹಾರ ಕಂಡು ಹಿಡಿಯಲು ತೋಟಗಾರಿಕೆ ಇಲಾಖೆ ಮತ್ತು ಕೃಷಿ ಸಂಶೋಧಾನ ಕೇಂದ್ರದ ಅಧಿಕಾರಿಗಳಿಗೆ ಸೇವೆಯಿಂದ ವಜಾ ಎಚ್ಚರಿಕೆಯಡಿ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

70 ವರ್ಷದ ಹಿಂದಿನ ಔಷಧ ಬಿಟ್ಟು ಬೇರೆ ಸಂಶೋಧನೆ ಇಲ್ಲ:

ಪ್ರತಿ ಬಾರಿ ಮಲೆನಾಡಿನ ರೈತರನ್ನು ಹೈರಾಣಾಗಿ ಮಾಡುವ ಕೊಳೆರೋಗದ ನಿಯಂತ್ರಣಕ್ಕೆ ಇದುವರೆಗೆ ಔಷಧ ಕಂಡು ಹಿಡಿಯಲು ಈ ಸಂಶೋಧನಾ ಕೇಂದ್ರಗಳಿಗೆ ಸಾಧ್ಯವಾಗಿಲ್ಲ. ಇದೇ ರೀತಿ ತೋಟಗಾರಿಕಾ ವಿವಿ ಮತ್ತು ಇಲಾಖೆಗಳು ಈ ನಿಟ್ಟಿನಲ್ಲಿ ಸರಿಯಾಗಿ ಕೆಲಸವನ್ನೂ ಮಾಡುತ್ತಿಲ್ಲ. 1940ರ ದಶಕದಲ್ಲಿ ಬ್ರಿಟೀಷ್‌ ವಿಜ್ಞಾನಿ ಡಾ. ಕೋಲ್ಮನ್‌ ಕಂಡು ಹಿಡಿದ ಬೋರ್ಡೋ ಮಿಶ್ರಣದ ಸಿಂಪರಣೆಯ ಹೊರತಾದ ಇನ್ನೊಂದು ಔಷಧ ಕಂಡು ಹಿಡಿಯಲು ನಮ್ಮ ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ ಎಂದರೆ ಇವರ ಕಾರ್ಯವೈಖರಿಯನ್ನೇ ಪ್ರಶ್ನಿಸಬೇಕಾಗುತ್ತದೆ. ಸುಮಾರು 70 ವರ್ಷಗಳ ಕಾಲ ಸಾರ್ವಜನಿಕರ ತೆರಿಗೆ ಹಣವನ್ನು ಸಂಶೋಧನೆಯ ಹೆಸರಲ್ಲಿ ಪೋಲು ಮಾಡುತ್ತಾ ಕಾಲ ಕಳೆಯುತ್ತಿರವ ಈ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡುವ ಜವಾಬ್ದಾರಿಯನ್ನು ಸರ್ಕಾರ ಹೊತ್ತುಕೊಳ್ಳಬೇಕು ಎಂದು ಎಚ್ಚರಿಸಿದೆ.

ಔಷಧ ಕಂಡುಹಿಡಿಯಲು ಕಾಲಮಿತಿ ನೀಡಿ:

ಹೊಸ ಔಷಧವೊಂದನ್ನು ಕಾಲಮಿತಿಯಲ್ಲಿ ಸಂಶೋಧಿಸುವ ಹೊಣೆಗಾರಿಕೆಯನ್ನು ಈ ಅಧಿಕಾರಿಗಳು ಮತ್ತು ವಿಜ್ಞಾನಿಗಳಿಗೆ ಸರ್ಕಾರ ನೀಡಬೇಕು. ಒಂದು ಪಕ್ಷ ಸಂಶೋಧನೆ ಸಾಧ್ಯವಾಗದೆ ಇದ್ದಲ್ಲಿ ಅಂತಹ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ.

ಮಲೆನಾಡು ಎಲ್ಲ ತಾಲೂಕುಗಳಲ್ಲಿ ಕೊಳೆರೋಗ:

ಹವಾಗುಣ ವ್ಯತ್ಯಾಸದಿಂದ ಈ ಬಾರಿ ಅತಿವೃಷ್ಟಿಯಾಗಿದೆ. ಜಿಲ್ಲೆಯ ಎಲ್ಲ ಮಲೆನಾಡು ತಾಲೂಕುಗಳಲ್ಲಿಯೂ ಕೊಳೆ ರೋಗ ಆವರಿಸಿಕೊಂಡಿದೆ. ಬಹುತೇಕ ಎಲ್ಲ ತೋಟಗಳೂ ಕೊಳೆ ರೋಗದಿಂದ ಬಾಧಿತವಾಗಿದೆ. ಸಾಗರ ತಾಲೂಕಿನ ಹಂಸಗಾರು, ಹಕ್ಕರೆ, ಹೊಸಳ್ಳಿ, ಸುಳುಮನೆ, ಶೆಡ್ತಿಕೆರೆ, ವರದಾಮೂಲ, ಲಿಂಗದಹಳ್ಳಿ, ತೆಂಕೋಡು, ಆವಿನಹಳ್ಳಿ ಭಾಗದಲ್ಲಿ ಗೊನೆಯಲ್ಲಿ ಒಂದೇ ಒಂದು ಅಡಕೆಯೂ ಉಳಿದಿಲ್ಲ. ಈಗಾಗಲೇ ಬೋರ್ಡೋ ಮಿಶ್ರಣವನ್ನು ಸಿಂಪರಣೆ ಮಾಡಿದ ಮೇಲೆಯೂ ಈ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಇದಕ್ಕೆ ತೋಟದ ಮಣ್ಣಿನಲ್ಲಿ ಉಂಟಾಗುತ್ತಿರುವ ವ್ಯತ್ಯಾಸವೂ ಕಾರಣವಾಗುತ್ತಿರಬಹುದು ಎಂದಿದ್ದಾರೆ.

ಸಂಶೋಧನಾ ಕೇಂದ್ರದ ವೈಫಲ್ಯದಿಂದ ಕೃಷಿಕರಿಗೆ ಸಂಕಷ್ಟ:

ಮಳೆಗಾಲದಲ್ಲಿ ತೋಟದ ಮಣ್ಣನ್ನು ಪರೀಕ್ಷಿಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲವಾಗಿದೆ. ಹೀಗೆ ಸಂಶೋಧನಾ ಕೇಂದ್ರಗಳ ವೈಫಲ್ಯದಿಂದಾಗಿ ರೈತರು ನಷ್ಟಅನುಭವಿಸಬೇಕಾಗಿದೆ. ಜನರ ತೆರಿಗೆ ಹಣವನ್ನು ಬಳಸಿಕೊಂಡು ಸಂಶೋಧನೆಯ ಹೆಸರಲ್ಲಿ ಕರ್ತವ್ಯನಿರ್ವಹಿಸುತ್ತಾ ಸಂಬಳ ಪಡೆಯುವ ಈ ವಿಜ್ಞಾನಿಗಳ ಕರ್ತವ್ಯಪರತೆ ಕುರಿತು ರೈತರಲ್ಲಿ ಅಸಹನೆ, ಸಂಶಯ ಉಂಟಾಗಿದೆ ಎಂದು ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.

ಗಣೇಶ ಮೆರವಣಿಗೆ : ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿರುವ ಶಿವಮೊಗ್ಗ ನಗರ

ಈ ಬಾರಿ ರೈತರು ದೊಡ್ಡ ಮಟ್ಟದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಇದುವರೆಗೆ ಯಾವ ವಿಜ್ಞಾನಿಯೂ ರೈತರ ಬಳಿ ಬಂದು ಅವರ ಕಷ್ಟಆಲಿಸುವ ಸೌಜನ್ಯ ತೋರಿಲ್ಲ ಎಂದಿದ್ದಾರೆ.

ಸೂಕ್ತ ಪರಿಹಾರ ಘೋಷಣೆಗೆ ಆಗ್ರಹ:

ಇನ್ನೊಂದೆಡೆ ಅಡಕೆ ರೋಗದಿಂದ ರೈತರು ಅಕ್ಷರಶಃ ಬೀದಿಗೆ ಬೀಳುವಂತಾಗಿದೆ. ಮುಂದಿನ ಒಂದು ವರ್ಷವಿಡೀ ಅಡಕೆಯನ್ನೇ ನಂಬಿ ಬದುಕು ಸಾಗಿಸುವ ಅನಿವಾರ್ಯತೆಯಲ್ಲಿರುವ ರೈತರು ಈಗ ಏನು ಮಾಡುವುದೆಂಬ ಚಿಂತೆಗೆ ಬಿದ್ದಿದ್ದಾರೆ. ಸರ್ಕಾರ ತಕ್ಷಣ ಅಡಕೆ ಬೆಳೆಗಾರರ ನೆರವಿಗೆ ಬರಬೇಕು. ಸೂಕ್ತ ಪರಿಹಾರ ಘೋಷಿಸಬೇಕು ಎಂದು ಸಂಘದ ಕಾರ್ಯದರ್ಶಿ ಟಿ. ಎಸ್‌. ಅರುಣ, ಕಲ್ಮನೆ ಗ್ರಾಪಂ ಸದಸ್ಯ ಎಲ್‌. ವಿ. ಅಕ್ಷರ, ಹಾಪ್‌ಕಾಮ್ಸ್‌ ಉಪಾಧ್ಯಕ್ಷ ಎಲ್‌. ವಿ. ಸತೀಶ್‌, ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್‌ ಗೋಳಿಕೊಪ್ಪ ಮತ್ತಿತರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ