ಭಾರತದ ಮಹತ್ವಾಕಾಂಕ್ಷಿ ಎರಡನೇ ಚಂದ್ರಯಾನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಅಣಿಯಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಜುಲೈ 15 ಮುಂಜಾನೆ 2.51 ಕ್ಕೆ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಭಾರತದ ಮಹತ್ವಾಕಾಂಕ್ಷಿ ಎರಡನೇ ಚಂದ್ರಯಾನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಅಣಿಯಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಜುಲೈ 15 ಮುಂಜಾನೆ 2.51 ಕ್ಕೆ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಭಾರತದ ಬಾಹ್ಯಾಕಾಶ ಸಾಧನೆಯನ್ನು ಮತ್ತೊಂದು ಮೈಲಿಗಲ್ಲಿಗೆ ಕೊಂಡೊಯ್ಯುವ ಯೋಜನೆ ಇದಾಗಿದ್ದು, ಇಡೀ ಜಗತ್ತೇ ಇದನ್ನು ಕಾತುರದಿಂದ ವೀಕ್ಷಿಸುತ್ತಿದೆ. ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್‌ನಿಂದ ಚಂದ್ರಯಾನ ನೌಕೆಯನ್ನು ಉಡಾವಣೆ ಮಾಡಲಾಗುತ್ತಿದ್ದು, ಈ ಗಗನನೌಕೆಯು ಒಂದು ಆರ್ಬಿಟರ್ (ಚಂದ್ರನನ್ನು ಸುತ್ತುವ ಕೃತಕ ಉಪಗ್ರಹ), ವಿಕ್ರಮ್ ಹೆಸರಿನ ಲ್ಯಾಂಡರ್ (ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಸಾಧನ) ಮತ್ತು ಪ್ರಜ್ಞಾನ್ ಹೆಸರಿನ ರೋವರ್ (ಚಂದ್ರನ ಮೇಲಿಳಿದು ಸುತ್ತಾಡಲಿರುವ ಯಂತ್ರ) ಅನ್ನು ಹೊತ್ತೊಯ್ಯಲಿದೆ. ಚಂದ್ರಯಾನ-2 ನೌಕೆ ಬಾಕ್ಸ್ ಆಕಾರದಲ್ಲಿದ್ದು, 3.84 ಲಕ್ಷ ಕಿ.ಮೀ.ಗಳಷ್ಟು ದೂರ ಸಾಗಿ ಸೆ.6 ಅಥವಾ ಸೆ.7 ರಂದು ಚಂದ್ರನ ಅಂಗಳಕ್ಕೆ ಪದಾರ್ಪಣೆ ಮಾಡಲಿದೆ.
ಬಾಹ್ಯಾಕಾಶದಲ್ಲಿ ಇಸ್ರೋ ಮೈಲಿಗಲ್ಲು; ಹೀಗಿರಲಿದೆ ಚಂದ್ರಯಾನ-2
ಚಂದ್ರಯಾನ-2 ನೇತೃತ್ವ ಮಹಿಳಾ ವಿಜ್ಞಾನಿಗಳದ್ದು!
ಇದೇ ಮೊದಲ ಬಾರಿಗೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯ ನೇತೃತ್ವವನ್ನು ಇಬ್ಬರು ಮಹಿಳೆಯರು ವಹಿಸಿಕೊಂಡಿದ್ದಾರೆ. ರಿತು ಕರಿಧಾಲ್ ಮತ್ತು ಎಂ.ವನಿತಾ ಚಂದ್ರಯಾನ-2 ಯೋಜನೆ ಸಿದ್ಧಪಡಿಸಿದ ಪ್ರಮುಖ ವಿಜ್ಞಾನಿಗಳು. ರಿತು ಅವರು ಮಿಷನ್ ಡೈರೆಕ್ಟರ್ ಮತ್ತು ವನಿತಾ ಪ್ರಾಜೆಕ್ಟ್ ಡೈರೆಕ್ಟರ್.
ಇವರಿಬ್ಬರು ಈ ಹಿಂದಿನ ಮಂಗಳಯಾನದಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಜೊತೆಗೆ ಟಿ.ಕೆ. ಅನೂರಾಧ, ಎನ್.ವಲಾರ್ಮತಿ, ವಿ.ಆರ್. ಲಲಿತಾಂಬಿಕ, ಸೀತಾ ಸೋಮಸುಂದರಾಮ್, ನಂದಿನಿ ಹರಿನಾಥ್, ಮಿನಲ್ ರೋಹಿತ್, ಮೌಮಿತಾ ದತ್ತ ಸೇರಿದಂತೆ ಇಸ್ರೋದ ಹಲವಾರು ಮಹಿಳಾ ವಿಜ್ಞಾನಿಗಳು ಚಂದ್ರಯಾನ-2 ಯೋಜನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇಸ್ರೋದಲ್ಲಿರುವ ಸುಮಾರು 17000 ಸಿಬ್ಬಂದಿಯಲ್ಲಿ ಶೇ.20 ರಷ್ಟು, ಅಂದರೆ 3500 ಮಂದಿ ಮಹಿಳೆಯರು.
ವಿಜ್ಞಾನ-ಅಧ್ಯಾತ್ಮ: ವಿಜ್ಞಾನಿಯೊಳಗೊಬ್ಬ ಆಸ್ತಿಕನ ಹುಡುಕುತ್ತಾ..!
ಇಸ್ರೋದ ಮುಂದಿನ ಯೋಜನೆ
ಚಂದ್ರಯಾನ-2 ಯಶಸ್ವಿಯಾದ ಬಳಿಕ ಇಸ್ರೋ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಈಗಾಗಲೇ ಸಿದ್ಧಪಡಿಸಿದೆ. ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ 2022 ರ ವರ್ಷ ನಿಗದಿಯಾಗಿದೆ. 1400 ಕೋಟಿ ವೆಚ್ಚದಲ್ಲಿ ಮಾನವನನ್ನು ಗಗನಕ್ಕೆ ಕಳುಹಿಸುವ ಗಗನಯಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಭೂಮಿಯಿಂದ 300-400 ಕಿ.ಮೀ. ದೂರದಲ್ಲಿ ಮಾನವ ಸಹಿತ ಬಾಹ್ಯಾಕಾಶ ನೌಕೆ ಭೂಮಿಯ ಸುತ್ತ ಸುತ್ತುತ್ತಿರುತ್ತದೆ. 5-7 ದಿನಗಳ ಕಾಲ ಇದು ಸಂಚರಿಸಲಿದೆ. ಈ ಅವಧಿಯಲ್ಲಿ ಗಗನಯಾತ್ರಿಗಳು ಸೂಕ್ಷ್ಮ ಗುರುತ್ವದ ಪ್ರಯೋಗ ನಡೆಸಲಿದ್ದಾರೆ. ಅದೇ ವೇಳೆ ಬಾಹ್ಯಾಕಾಶದಲ್ಲಿ ಮಾನವನ ಮೇಲಾಗುವ ಪರಿಣಾಮಗಳನ್ನೂ ಅಧ್ಯಯನ ಮಾಡಲಿದ್ದಾರೆ.
ಚಂದ್ರನ ಮೇಲೆ ಕಾಲಿಡುವ ಮೊದಲ ಮಹಿಳೆ ಸುನೀತಾ?
ಒಟ್ಟು ವೆಚ್ಚ 978 ಕೋಟಿ ರು.!
603 ಕೋಟಿ ವೆಚ್ಚದ ಆರ್ಬಿಟರ್, ಲ್ಯಾಂಡರ್, ರೋವರ್, ನ್ಯಾವಿಗೇಶನ್ ಮತ್ತು ಗ್ರೌಂಡ್ ಸಪೋರ್ಟ್ ನೆಟ್‌ವರ್ಕ್ ಹಾಗೂ 375 ಕೋಟಿ ವೆಚ್ಚದ ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್ ಸೇರಿದಂತೆ ಚಂದ್ರಯಾನ-2 ನ ಒಟ್ಟು ಖರ್ಚು 978 ಕೋಟಿ. ಇದು ನಾಸಾದ ಅಪೋಲೋ ಮಿಷನ್‌ಗಿಂತ ಹೆಚ್ಚು ಶಕ್ತಿಯುತವಾಗಿದ್ದು, ಅದಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಇಸ್ರೋ ಮಹತ್ವದ ಸಾಧನೆಗೈಯಲು ಸಿದ್ಧವಾಗಿದೆ.
2008 ರ ಚಂದ್ರಯಾನ-1 ಕ್ಕೆ ಭಾರತ ಮಾಡಿದ ವೆಚ್ಚ 386 ಕೋಟಿ ರುಪಾಯಿ. 500 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು, 120 ಕ್ಕೂ ಹೆಚ್ಚು ಉದ್ಯಮಗಳು ಚಂದ್ರಯಾನ-2 ನ ಶೇ.60 ರಷ್ಟು ವೆಚ್ಚ ವೆಚ್ಚವನ್ನು ನೋಡಿಕೊಳ್ಳುತ್ತಿವೆ ಎಂದು ಇಸ್ರೋ ಹೇಳಿದೆ. ಅಂದರೆ ಸರ್ಕಾರ ಇದಕ್ಕೆ ಖರ್ಚುಮಾಡುವ ಹಣ ಬಹಳ ಕಡಿಮೆ.
ಚಂದ್ರಯಾನ- 1ರಲ್ಲಿ ನೀರು ಪತ್ತೆ: ಈ ಸಲ ಏನು?
2008 ರಲ್ಲಿ ಇಸ್ರೋ ಚಂದ್ರಯಾನ-1 ರ ಮೂಲಕ ಚಂದ್ರನನ್ನು ಮುಟ್ಟಿ ಮೈಲುಗಲ್ಲು ಸ್ಥಾಪಿಸಿತ್ತು. 2008 ಅಕ್ಟೋಬರ್ 22 ರಂದು ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ ಎಲ್‌ವಿ ಸಿ 11 ರಾಕೆಟ್ ಮೂಲಕ ಉಪಗ್ರ ಹವನ್ನು ಉಡಾವಣೆ ಮಾಡಲಾಗಿತ್ತು.
ಅದು ಶೇ. 80 ರಷ್ಟು ಯಶಸ್ವಿಯಾಗಿತ್ತು. ಜಗತ್ತಿನಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಕೈಗೊಂಡ ಚಂದ್ರಯಾನ ಎಂಬ ಖ್ಯಾತಿ ಆ ಯೋಜನೆಗೆ ಬಂದಿದ್ದರಿಂದ ನಂತರದ ವರ್ಷಗಳಲ್ಲಿ ಇಸ್ರೋ ಮೂಲಕ ನಾನಾ ದೇಶಗಳು ತಮ್ಮ ಉಪಗ್ರಹಗಳನ್ನು ಹಾರಿಬಿಡತೊಡಗಿದವು.
ಎಲ್ಲಕ್ಕಿಂತ ಮುಖ್ಯ ಸಂಗತಿಯೆಂದರೆ, ಚಂದ್ರನ ಉತ್ತರ ಧ್ರುವದಲ್ಲಿ ನೀರಿದೆ ಎಂದು ಮೊಟ್ಟಮೊದಲ ಬಾರಿಗೆ ಆ ಯೋಜನೆಯ ಮೂಲಕ ಭಾರತ ಕಂಡುಹಿಡಿದಿತ್ತು. 1999 ರಲ್ಲಿ ಕ್ಯಾಸಿನಿ ಗಗನನೌಕೆ ಶನಿ ಗ್ರಹದತ್ತ ತೆರಳುತ್ತಿದ್ದಾಗ ಚಂದ್ರನ ತೀರಾ ಸಮೀಪದಲ್ಲಿ ಸಂಚರಿಸಿತ್ತು. ಈ ವೇಳೆ ಗಗನನೌಕೆ ನೀರಿರುವ ಬಗ್ಗೆ ಸಂದೇಶ ನೀಡಿತ್ತಾದರೂ ಆ ಬಗ್ಗೆ ಸ್ಪಷ್ಟತೆ ಇರಲಿಲ್ಲ.
ಆದರೆ ಚಂದ್ರಯಾನ-1 ಕಳುಹಿಸಿದ ಮಾಹಿತಿ ಪ್ರಮುಖ ಸಾಕ್ಷ್ಯವಾಯಿತು. ಅಲ್ಲದೆ ಮ್ಯಾಗ್ನೀಷಿಯಂ, ಅಲ್ಯುಮಿನಿಯಂ, ಸಿಲಿಕಾನ್ ಕೂಡ ಚಂದ್ರನಲ್ಲಿ ಇದೆ ಎಂದು ಪತ್ತೆಹಚ್ಚಿತ್ತು. ಅಲ್ಲಿಯವರೆಗೆ ಅಮೆರಿಕ, ರಷ್ಯಾಕ್ಕೂ ಇದು ತಿಳಿದಿರಲಿಲ್ಲ. ಇಸ್ರೋದ ಚಂದ್ರಯಾನ-1 ನೌಕೆ ಏಪ್ರಿಲ್ 29, 2009 ರ ವರೆಗೆ ಅಂದರೆ 312 ದಿನ ಕಾರ‌್ಯಾಚರಣೆ ಮಾಡಿತ್ತು. ಚಂದ್ರಯಾನ-2 ಮೂಲಕ ಇಸ್ರೋ ಏನು ಪತ್ತೆ ಹಚ್ಚಲಿದೆ ಎಂಬುದು ಕುತೂಹಲ ಮೂಡಿಸಿದೆ.
ರೋವರ್ ಇಳಿಸುವ 4 ನೇ ದೇಶ
ಇದುವರೆಗೆ ಚಂದ್ರನಲ್ಲಿಗೆ ಮೂರೇ ಮೂರು ದೇಶಗಳು ರೋವರ್ ಕಳಿಸಿವೆ. ಸೋವಿಯತ್ ರಷ್ಯಾ, ಅಮೆರಿಕ ಮತ್ತು ಚೀನಾ ಆ 3 ದೇಶಗಳು. ನವೆಂಬರ್ 17, 1970 ರಲ್ಲಿ ರಷ್ಯಾ ಮೊಟ್ಟಮೊದಲ ಬಾರಿಗೆ ರೋವಿಂಗ್ ರಿಮೋಟ್ ಚಾಲಿತ ರೋಬೋಟ್‌ಅನ್ನು ಚಂದ್ರನಲ್ಲಿ ಇಳಿಸಿತ್ತು. ಅದನ್ನು ಲುನೋಖೋದ್-೧ ಎಂದು ಕರೆಯಲಾಗುತ್ತದೆ. ಅದಾದ ಬಳಿಕ ಅಮೆರಿಕ ಮತ್ತು ಚೀನಾ ಈ ಸಾಧನೆ ಮಾಡಿದ್ದವು.
ಭಾರತ ಈ ಚಂದ್ರಯಾನ-2 ನಲ್ಲಿ ಯಶಸ್ವಿಯಾದರೆ ಚಂದ್ರನಲ್ಲಿಗೆ ರೋವರ್ ಕಳುಹಿಸಿದ ೪ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಲ್ಲದೆ ಇದುವರೆಗೆ 10 ದೇಶಗಳು ಸ್ವತಂತ್ರವಾಗಿ ಚಂದ್ರನ ಕಕ್ಷೆಗೆ ಉಪಗ್ರಹ ಕಳಿಸುವಲ್ಲಿ ಯಶಸ್ವಿಯಾಗಿವೆ. ಅವುಗಳಲ್ಲಿ 6 ದೇಶಗಳು ಏಷ್ಯಾ ಖಂಡದವು. ಚೀನಾ, ಜಪಾನ್, ಇರಾನ್, ಇಸ್ರೆಲ್, ಭಾರತ ಮತ್ತು ದಕ್ಷಿಣ ಕೊರಿಯಾ ಆ ಏಷ್ಯನ್ ರಾಷ್ಟ್ರಗಳು.
ಇಸ್ರೋಗಿರುವ ಸವಾಲು ಏನು?
ಚಂದ್ರಯಾನ-2 ಇಸ್ರೋ ಪಾಲಿಗೆ ಅತಿ ದೊಡ್ಡ ಸವಾಲಿನ ಕೆಲಸ. ಮೊದಲನೆಯದಾಗಿ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್‌ಗಳನ್ನು ಹೊತ್ತೊಯ್ಯುವ ಉಡಾವಣಾ ನೌಕೆ ಭಾರೀ ತೂಕ ಹೊಂದಿರುತ್ತದೆ. ಚಂದ್ರನ ಕಕ್ಷೆಯಲ್ಲಿ ಗಗನನೌಕೆಯು ಸಾಫ್ಟ್ ಲ್ಯಾಂಡ್ ಆಗುವುದೇ ಅತ್ಯಂತ ಕಠಿಣ ಸವಾಲು.
ನೇವಿಗೇಶನ್, ನಿಯಂತ್ರಣ ಮತ್ತು ಪ್ರೊಪಲ್ಷನ್ ಸಿಸ್ಟಮ್‌ಗಳು ಹೊಂದಾಣಿಕೆಯಿಂದ ಹಾಗೂ ಸ್ವಯಂಚಾಲಿತವಾಗಿ ಕೆಲಸ ಮಾಡಬೇಕಾಗುತ್ತದೆ. ಇನ್ನೊಂದು ಪಥದ ನಿಖರತೆ. ಚಂದ್ರ ಭೂಮಿಯಿಂದ 3.84 ಲಕ್ಷ ಕಿ.ಮೀ. ದೂರದಲ್ಲಿದೆ. ಹೀಗಾಗಿ ನಿಖರವಾಗಿ ಲ್ಯಾಂಡ್ ಆಗುವುದು ಕಷ್ಟಕರ. ಮತ್ತು ಚಂದ್ರಯಾನದಲ್ಲಿ ಆರ್ಬಿಟರ್, ರೋವರ್ ಮತ್ತು ಲ್ಯಾಂಡರ್‌ಗಳೊಟ್ಟಿಗೆ ಸಂಪರ್ಕ ಸಾಧಿಸುವಾಗ ರೇಡಿಯೋ ಸಿಗ್ನಲ್‌ಗಳು ದುರ್ಬಲವಾಗಿರುತ್ತವೆ.
ಚಂದ್ರನಲ್ಲಿರುವ ಧೂಳು ಲ್ಯಾಂಡರ್ ಮತ್ತು ರೋವರ್ ಕೆಲಸಕ್ಕೆ ಅಡ್ಡಿಯುಂಟು ಮಾಡಬಹುದು. ಅಲ್ಲದೆ ಚಂದ್ರನ ದಕ್ಷಿಣ ಧ್ರುವದ ಬಳಿ ಲ್ಯಾಂಡರ್ ಲ್ಯಾಂಡ್ ಅದ ಬಳಿಕ ರೋವರ್ 500 ಮೀ. ಕ್ರಮಿಸಿ ಮಾಹಿತಿ ಕಲೆ ಹಾಕಬೇಕಾಗುತ್ತದೆ. ಅಲ್ಲದೆ ಅಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಸುಡುವ ಬಿಸಿಲಿದ್ದರೆ, ರಾತ್ರಿ ಹೊತ್ತು ಕೊರೆವ ಚಳಿ ಇರುತ್ತದೆ. ಈ ಎಲ್ಲಾ ಸವಾಲುಗಳನ್ನು ಇಸ್ರೋ ಭೇದಿಸುತ್ತದೆಯೇ ಎನ್ನುವುದನ್ನು ಜಗತ್ತೇ ಕಾತುರದಿಂದ ಕಾಯುತ್ತಿದೆ.
ಶುಕ್ರ ಗ್ರಹದತ್ತ ಇಸ್ರೋ ಚಿತ್ತ: ಗಮನಹರಿಸಿ ಬತ್ತಳಿಕೆಯತ್ತ!
ದಕ್ಷಿಣ ಧ್ರುವ ಆಯ್ಕೆ ಮಾಡಿಕೊಂಡಿದ್ದೇಕೆ?
ಈ ದಕ್ಷಿಣ ಧ್ರುವ ಪ್ರದೇಶದಲ್ಲಿ ಬೃಹತ್ ಹಿಮ ನಿಕ್ಷೇಪಗಳು ಇರುವ ಸಾಧ್ಯತೆಯಿದೆ. ಹೀಗಾಗಿ ಇದು ಮಾನವನ ಇರುವಿಕೆಗೆ ಯೋಗ್ಯವೇ ಎಂದು ಅಧ್ಯಯನ ಮಾಡಲು ಇಸ್ರೋ ಇದೇ ಸ್ಥಳ ಆಯ್ಕೆ ಮಾಡಿಕೊಂಡಿದೆ. ಅಲ್ಲದೆ ಇಲ್ಲಿ ಅತಿ ಹೆಚ್ಚು ಸೂರ್ಯನ ಬೆಳಕು ಬೀಳುತ್ತದೆ. ಚಂದ್ರನ ದಕ್ಷಿಣ ಧ್ರುವವು ಉತ್ತರ ಧ್ರುವಕ್ಕಿಂತ ದೊಡ್ಡದಿದೆ.
ಕಲ್ಲು ಬಂಡೆಗಳು, ಹಳ್ಳ ಕೊಳ್ಳಗಳು ಕಡಿಮೆ ಇದ್ದು, ಸಂಶೋಧನೆಗೆ ಸೂಕ್ತವಾಗಿದೆ. ಜೊತೆಗೆ ಈವರೆಗೆ ಜಗತ್ತಿನ ಯಾವ ದೇಶಗಳೂ ಚಂದ್ರನ ದಕ್ಷಿಣ ಧ್ರುವವನ್ನು ಪ್ರವೇಶಿಸಿಲ್ಲ. ಮತ್ತು ಚಂದ್ರಯಾನ-೧ರ ಮುಂದುವರಿದ ಭಾಗವಾಗಿ ಅದಕ್ಕಿಂತ ಹೆಚ್ಚಿನದನ್ನು ಅಧ್ಯಯನ ಮಾಡುವ ಭರವಸೆಯೊಂದಿಗೆ ಇಸ್ರೋ ಈ ದಿಟ್ಟ ಹೆಜ್ಜೆ ಇಟ್ಟಿದೆ. 2024 ಕ್ಕೆ ಇಲ್ಲಿಗೆ ಮಾನವನ ಕಳಿಸಲಿದೆ ನಾಸಾ ಇದೇ ಮೊದಲ ಬಾರಿಗೆ ಜಗತ್ತಿನ ಯಾವ ದೇಶಗಳೂ ಮಾಡದ ಸಾಧನೆಯನ್ನು ಇಸ್ರೋ ಮಾಡಲು ಹೊರಟಿದೆ.
ಅಂದರೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇದುವರೆಗೂ ಯಾವುದೇ ದೇಶಗಳು ರೋವರ್ ಅನ್ನು ಇಳಿಸಿರಲಿಲ್ಲ. ಈ ಬಾರಿ ಇಸ್ರೋ ದಕ್ಷಿಣ ಧ್ರುವದಲ್ಲೇ ರೋವರ್ ಅನ್ನು ಲ್ಯಾಂಡ್ ಮಾಡಲು ಸಿದ್ಧವಾಗಿದೆ. ಇದೇ ಸ್ಥಳದಲ್ಲಿ 2024 ರಲ್ಲಿ ಮಾನವ ಸಹಿತ ಚಂದ್ರಯಾನ ಕೈಗೊಳ್ಳಲು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸಿದ್ಧತೆ ನಡೆಸುತ್ತಿದೆ. ಈ ಮಹತ್ವಾಕಾಂಕ್ಷಿ ಸಾಧನೆಗೆ ಭಾರತದ ಚಂದ್ರಯಾನ-2 ನೆರವಾಗಲಿದೆ.