Chandrayaan-3 vs Lunar-25: ಆಮೆ-ಮೊಲದ ಸ್ಪೇಸ್‌ ರೇಸ್‌ನಲ್ಲಿ ಗೆಲ್ಲೋದ್‌ ಯಾರು?

By Santosh Naik  |  First Published Aug 11, 2023, 1:39 PM IST

ಬರೋಬ್ಬರಿ 47 ವರ್ಷಗಳ ಬಳಿಕ ರಷ್ಯಾದ ಬಾಹ್ಯಾಕಾಶ ಏಜೆನ್ಸಿ ರೋಸ್ಕೊಸ್ಮೊಸ್, ಚಂದ್ರನ ಅನ್ವೇಷಣೆಗೆ ಲ್ಯಾಂಡರ್‌ಅನ್ನು ಕಳುಹಿಸಿಕೊಟ್ಟಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಇಳಿಸಿದ ಮೊದಲ ದೇಶ ಎನ್ನುವ ಖ್ಯಾತಿ ಪಡೆಯಲು ಭಾರತ ಹಾಗೂ ರಷ್ಯಾ ಪೈಪೋಟಿಗೆ ಇಳಿದಿದೆ.


ಬೆಂಗಳೂರು (ಆ.11): ಆಮೆ ಮತ್ತು ಮೊಲದ ರೇಸ್‌ ಗೊತ್ತಲ್ವಾ? ಅದೇ ರೀತಿಯ ರೇಸ್‌ ಈಗ ಬಾಹ್ಯಾಕಾಶದಲ್ಲಿ ಆರಂಭವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಇಳಿಸಿದ ಮೊದಲ ದೇಶ ಎನಿಸಿಕೊಳ್ಳುವ ಆಸೆಯಲ್ಲಿ ಭಾರತ ಅಂದಾಜು ಒಂದು ತಿಂಗಳ ಹಿಂದೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಚಂದ್ರನತ್ತ ಕಳಿಸಿದೆ. ಈ ಸುದ್ದಿ ಬರೆಯುವ ವೇಳೆಗೆ ಚಂದ್ರಿಂದ ನೌಕೆ ಕೇವಲ 1437 ಕಿಲೋಮೀಟರ್‌ ದೂರದಲ್ಲಿದೆ. ಇದರ ನಡುವೆ ರಷ್ಯಾ ತನ್ನ ಬಹುನಿರೀಕ್ಷಿತ ಮೂನ್‌ ಮಿಷನ್‌ನ ಲೂನಾ-25 ನೌಕೆಯನ್ನು ಶುಕ್ರವಾರ ಚಂದ್ರನತ್ತ ಉಡಾಯಿಸಿದೆ. ಪ್ರಸ್ತುತ ಇರುವ ಮಾಹಿತಿಗಳ ಪ್ರಕಾರ, ರಷ್ಯಾ ಹಾರಿಸಿರುವ ಲೂನಾ-25 ನೌಕೆ ಆಗಸ್ಟ್‌ 21 ರಂದು ಚಂದ್ರನ ಮೇಲೆ ಲ್ಯಾಂಡ್‌ ಆಗುವ ಪ್ರಯತ್ನ ಮಾಡಲಿದ್ದರೆ, ಭಾರತದ ಚಂದ್ರಯಾನ ಆಗಸ್ಟ್‌ 23 ರಂದು ಚಂದ್ರನ ಮೇಲೆ ಇಳಿಯಲಿದೆ. ಇನ್ನು ಚಂದ್ರನ ಮೇಲೂ ಕೂಡ ಭಾರತ ಹಾಗೂ ರಷ್ಯಾದ ನೌಕೆಗಳು ಇಳಿಯುವ ಸ್ಥಳ ಬಹಳ ದೂರವೇನೂ ಇಲ್ಲ. ಅಂದಾಜಿನ ಪ್ರಕಾರ ಎರಡೂ ನೌಕೆಗಳು ಇಳಿಯುವ ಸ್ಥಳ 120 ಕಿಲೋಮೀಟರ್‌ ಅಂತರದಲ್ಲಿದೆ. ಭಾರತದ ನೌಕೆ ಚಂದ್ರನಲ್ಲಿ 69.36S, 32.34E (ಪ್ರಾಥಮಿಕ) ಇಳಿಯಲ್ಲಿದ್ದರೆ, ಇದರಿಂದ ಅಂದಾಜು 120 ಕಿ.ಮೀ ದೂರದಲ್ಲಿರುವ 69.5S, 43.5E ((ಪ್ರಾಥಮಿಕ)) ಸೈಟ್‌ನಲ್ಲಿ ರಷ್ಯಾದ ಲೂನಾ ಇಳಿಯಲಿದೆ.

1976ರ ಬಳಿಕ ರಷ್ಯಾ ಇದೇ ಮೊದಲ ಬಾರಿಗೆ ಚಂದ್ರನ ಅನ್ವೇಷಣೆಗೆ ನೌಕೆಯನ್ನು ಕಳಿಸಿಕೊಟ್ಟಿದೆ. ಆ ದಿನಗಳಲ್ಲಿ ಯುಎಸ್‌ಎಸ್‌ಆರ್‌ ಎನ್ನುವ ಹೆಸರಿನಲ್ಲಿದ್ದ ರಷ್ಯಾ, ಅಮರಿಕದ ಜೊತೆಗೆ ನಡೆಸಿದ್ದ ಸ್ಪೇಸ್‌ ರೇಸ್‌ ಇಂದಿಗೂ ಪ್ರಖ್ಯಾತದಲ್ಲಿದೆ. ಆದರೆ, ಈ ಬಾರಿ ಚಂದ್ರನ ದಕ್ಷಿಣ ಧ್ರುವದ ರೇಸ್‌ನಲ್ಲಿ ಅಮೆರಿಕವಿಲ್ಲ. ಇರೋದು ಭಾರತ. ಹಾಗಂತ ಭಾರತ ಹಾಗೂ ರಷ್ಯಾದ ರೇಸ್‌ ಬಹಳ ಭಿನ್ನ. ಭಾರತ ಚಂದ್ರನ ಮೇಲೆ ಲ್ಯಾಂಡ್‌ ಆಗುವ ನಿಟ್ಟಿನಲ್ಲಿ ಆಮೆಯಂತೆ ಎಚ್ಚರಿಕೆ ಹೆಜ್ಜೆ ಇರಿಸಿದ್ದರೆ, ರಷ್ಯಾ ಮೊಲದಂತೆ ವೇಗವಾಗಿ ಚಂದ್ರನ ತಲುಪುವ ಇರಾದೆಯಲ್ಲಿದೆ. ಆ ಮೂಲಕ ಸ್ಪೇಸ್‌ ಸೂಪರ್‌ಪವರ್‌ ಪಟ್ಟವನ್ನು ಪುನಃ ಪಡೆದುಕೊಳ್ಳುವ ನಿಟ್ಟಿನಲ್ಲಿ ರಷ್ಯಾದ ಬಾಹ್ಯಾಕಾಶ ಏಜೆನ್ಸಿ ರೋಸ್ಕೊಸ್ಮೊಸ್ ಪ್ರಯತ್ನಿಸಲಿದೆ. ಶುಕ್ರವಾರ ಸುಯೇಜ್‌ 2.1ವಿ ರಾಕೆಟ್‌ ಮೂಲಕ ಲೂನಾ 25 ಅನ್ನು ವೊಸ್ಟೊಚ್ನಿ ಕಾಸ್ಮೊಡ್ರೋಮ್‌ನಿಂದ ರೋಸ್ಕೊಸ್ಮೊಸ್ ನಭಕ್ಕೆ ಹಾರಿಸಿದೆ.  ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಸಾಧಿಸುವುದು ಮಿಷನ್‌ನ ಪ್ರಾಥಮಿಕ ಗುರಿಯಾಗಿದೆ. ಹೆಪ್ಪುಗಟ್ಟಿದ ನೀರಿನ ರೀತಿಯಲ್ಲಿರುವ ಪ್ರದೇಶವನ್ನು ಶೋಧನೆ ಮಾಡುವ ಗುರಿ ಹೊಂದಿದೆ.

ರಷ್ಯಾದ ಲುನಾ-25ಗೆ ಶುಕ್ರವಾರ ಇಸ್ರೋ ಕೂಡ ಶುಭಕೋರಿ ಟ್ವೀಟ್‌ ಮಾಡಿದೆ. ಇಸ್ರೋ ಚೇರ್ಮನ್‌ ಎಸ್‌ ಸೋಮನಾಥ್‌ ನೀಡಿರುವ ಮಾಹಿತಿಯ ಪ್ರಕಾರ, ಚಂದ್ರಯಾನ-3ಗಿಂತಲೂ ಮುಂಚಿತವಾಗಿ ಲುನಾ-25 ಚಂದ್ರನ ಮೇಲೆ ಇಳಿಯಲಿದೆ. ಆಗಸ್ಟ್‌ 21ರ ವೇಳೆಗೆ ಇದು ಲ್ಯಾಂಡ್‌ ಆಗಬಹುದು ಎಂದು ಹೇಳಿದ್ದಾರೆ. "ಈಗ ನಾವು 21 ಕ್ಕೆ ಕಾಯುತ್ತೇವೆ. ಚಂದ್ರನ ಮೇಲೆ ಹೆಚ್ಚು ನಿಖರವಾದ ಮೃದುವಾದ ಲ್ಯಾಂಡಿಂಗ್ ಆಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಬೊರಿಸೊವ್ ವೊಸ್ಟೊಚ್ನಿ  ರಷ್ಯಾದ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಚಂದ್ರನ ದಕ್ಷಿಣ ಧ್ರುವದ ಮಹತ್ವವನ್ನು ಈವರೆಗೂ ಯಾರೂ ಶೋಧನೆ ಮಾಡಿಲ್ಲ. ಇತ್ತೀಚಿನ ವರ್ಷಗಳಲ್ಲಿ, ನಾಸಾ ಸೇರಿದಂತೆ ಅನೇಕ ಬಾಹ್ಯಾಕಾಶ ಸಂಸ್ಥೆಗಳ ವೈಜ್ಞಾನಿಕ ತನಿಖೆಗಳು, ಈ ಪ್ರದೇಶದಲ್ಲಿನ ಕುಳಿಗಳ ನೆರಳಿನ ಪದರದಲ್ಲಿ ಅಡಗಿರುವ ನೀರಿನ ಮಂಜುಗಡ್ಡೆಯ ಬಲವಾದ ಪುರಾವೆಗಳನ್ನು ಬಹಿರಂಗಪಡಿಸಿವೆ. 

ಎಲ್ಲಾ ವ್ಯವಸ್ಥೆ ಫೇಲ್‌ ಆದರೂ, ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯೋದು ಖಂಡಿತ: ಇಸ್ರೋ ಚೀಫ್‌

ಇನ್ನು ರಷ್ಯಾದ ಲುನಾ-25 ಚಿಕ್ಕ ಕಾರ್‌ನ ಗಾತ್ರದಲ್ಲಿದೆ. ಚಂದ್ರನ ಮೇಲೆ ಇಳಿಯುವ ಮುನ್ನ ಕೆಲವೊಂದು ಪ್ರಮುಖವಾದ ಕಕ್ಷಗಳನ್ನು ದಾಟಬೇಕಿದೆ. ಐದು ದಿನದ ಪ್ರಯಾಣದ ಬಳಿಕ, ಚಂದ್ರನ ಕಕ್ಷೆಯಲ್ಲಿ ಇದು 5-7 ದಿನಗಳನ್ನು ಕಳೆಯಲಿದೆ. ಈ ವೇಳೆ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿ ಮಾಡಲಾಗಿರುವ ಮೂರು ಲ್ಯಾಂಡಿಂಗ್‌ ಸೈಟ್‌ಗಳ ಪೈಕಿ ಒಂದು ಸೈಟ್‌ಅನ್ನು ಆಯ್ದುಕೊಳ್ಳಲಿದೆ. ಎಲ್ಲಾ ಅಂದುಕೊಂಡಂತೆ ಆದಲ್ಲಿ ಚಂದ್ರಯಾನ-3ಗಿಂತ ಮುಂಚಿತವಾಗಿ ಲುನಾ-25 ಚಂದ್ರನ ಮೇಲೆ ಇಳಿಯಲಿದೆ.

Tap to resize

Latest Videos

Chandrayaan-3: ಭೂಮಿಯನ್ನು ತೊರೆದ 22 ದಿನಗಳ ಬಳಿಕ ಚಂದ್ರನ ಕಕ್ಷೆಗೆ ಸೇರಿದ ಚಂದ್ರಯಾನ-3

click me!