ಕನ್ನಡದ ಪ್ರೇಮ ಕವಿ ಚಿಂತಾಮಣಿಯಿಂದ ಬಂದ ಸಖ ಬಿ.ಆರ್.ಲಕ್ಷ್ಮಣ್ ರಾವ್‌ಗೆ 75ನೇ ವಸಂತದ ಸಂಭ್ರಮ

By Suvarna News  |  First Published Sep 5, 2021, 4:34 PM IST

ಕಾವ್ಯರಸಿಕರ ಪಾಲಿಗೆ ಗೋಪಿಯೇ ಆಗಿರುವ ಬಿ ಆರ್‌ ಲಕ್ಷ್ಮಣರಾಯರಿಗೆ ಇದೀಗ ಎಪ್ಪತ್ತೈದರ ನವೋನ್ಮೇಷ. ಈ ಸಂದರ್ಭದಲ್ಲಿ ಅವರ ವ್ಯಕ್ತಿತ್ವ, ಕಾವ್ಯ ಮತ್ತು ಜೀವನಶೈಲಿಯ ಕುರಿತು ನಾಲ್ಕು ಮಾತು


- ಜೋಗಿ

ಅತ್ಯುತ್ತಮವಾದ ಮದ್ಯ ಕೈವಶವಾದರೆ ಅದನ್ನು ಸತ್ಪಾತ್ರರ ಜೊತೆಗೇ ಸವಿಯಬೇಕು ಎಂದು ನಂಬಿರುವ ಬಿ ಆರ್‌ ಲಕ್ಷ್ಮಣರಾವ್‌, ಅದೇ ಸೂತ್ರವನ್ನು ಕಾವ್ಯದ ವಿಚಾರದಲ್ಲೂ ಅನುಸರಿಸುತ್ತಾ ಬಂದವರು. ತಾವು ಬರೆದ ಪದ್ಯಗಳನ್ನು, ಅನುವಾದಗಳನ್ನು, ನಾಲ್ಕಾರು ಸಾಲು ಟಿಪ್ಪಣಿಗಳನ್ನು ಕೂಡ ಅವರು ಮಿತ್ರರಿಗೆಲ್ಲ ಕಳಿಸುತ್ತಿರುತ್ತಾರೆ. ನಿಮ್ಮ ಓದು ಮತ್ತು ಸ್ಪಂದನೆಗಾಗಿ ಎಂಬ ಸಾಲೂ ಅದರ ಜೊತೆಗಿರುತ್ತದೆ. ಅದಕ್ಕೆ ಯಾರಾದರೂ ಸ್ಪಂದಿಸದೇ ಹೋದರೂ ಅವರು ಚಿಂತೆ ಮಾಡುವುದಿಲ್ಲ. ಕಳಿಸುವುದು ನನ್ನ ಧರ್ಮ ಎಂದು ನಂಬಿರುವ ಬಿಆರೆಲ್‌ ಕಳೆದ ಐವತ್ತು ವರುಷಗಳಿಂದ ನಿರಂತರವಾಗಿ ಬರೆಯುತ್ತಲೇ ಬಂದಿದ್ದಾರೆ. ಅಷ್ಟೇ ತೀವ್ರವಾಗಿ ಬದುಕುವುದನ್ನು ಕೂಡ ಕಲಿಸುತ್ತಾರೆ.

Tap to resize

Latest Videos

undefined

ನಾವಿಬ್ಬರೂ ಸಾಕಷ್ಟುಒಡನಾಡಿದ್ದೇವೆ. ದೇಶ-ವಿದೇಶಗಳನ್ನು ಜತೆಯಾಗಿ ಸುತ್ತಿದ್ದೇವೆ. ಬಾನಯಾನ ಮಾಡಿದ್ದೇವೆ. ತಮಾಷೆ ಮಾಡುತ್ತಾ, ಪರನಿಂದೆಗಳಲ್ಲಿ ತೊಡಗಿಕೊಂಡು, ಕಾವ್ಯವನ್ನು ಮೆಚ್ಚುತ್ತಾ ಕಾಲೆಳೆಯುತ್ತಾ ಹಲವಾರು ರಾತ್ರಿ-ಹಗಲುಗಳನ್ನು ಕಳೆದಿದ್ದೇವೆ. ಅವರು ಕೂಡ ನನ್ನ ಸಿಟ್ಟು, ತಮಾಷೆ, ನಿದ್ದೆಗೆಟ್ಟು ಕೆಲಸ ಮಾಡುವುದು, ಹೇಳಿದ ಸಮಯಕ್ಕೆ ಹೋಗದೇ ಕೈಕೊಡುವುದು, ತಲೆತಪ್ಪಿಸಿಕೊಂಡು ಓಡಾಡುವುದು ಮುಂತಾದ ಸದ್ಗುಣಗಳನ್ನು ಅನುಭವಿಸಿದ್ದಾರೆ. ಅವರ ಎಷ್ಟೋ ಕವಿತೆಗಳನ್ನು ನಾನು ಚೆನ್ನಾಗಿಲ್ಲ ಅಂದಿದ್ದೇನೆ. ನನ್ನ ನಿಲುವು ಮತ್ತು ಅವರ ಅಭಿಪ್ರಾಯ ಅನೇಕ ವಿಚಾರದಲ್ಲಿ ಬೇರೆ ಬೇರೆ ಆಗಿರುವುದೂ ಉಂಟು. ಆದರೆ ಇದ್ಯಾವುದೂ ನನಗೆ ಅವರ ಮೇಲಿರುವ ಗೌರವ, ಅವರಿಗೆ ನನ್ನ ಮೇಲಿರುವ ಪ್ರೀತಿಯನ್ನು ಕಡಿಮೆ ಮಾಡಿಲ್ಲ.

ವೈಯನ್ಕೆಗೆ ಒಂಟೊಂಟಿಯಾಗಿ ಚಿಯರ್ಸ್ ಹೇಳಿ ನೆನಪು ಮಾಡಿಕೊಳ್ಳಿ, ವಿಸ್ಕಿಯ ಘಮ ಹೆಚ್ಚಾಗುತ್ತದೆ!

ನಾನು ಲಕ್ಷ್ಮಣರಾವ್‌ ಅವರನ್ನು ನೋಡಿದ್ದು 1992ರಲ್ಲಿ. ಬೆಂಗಳೂರಿನ ಸಜ್ಜನರಾವ್‌ ಸರ್ಕಲ್ಲಿನಲ್ಲಿ ಕಾಳಿಂಗರಾವ್‌ ಕುರಿತ ಕಾರ್ಯಕ್ರಮವೊಂದು ಏರ್ಪಾಡಾಗಿತ್ತು. ಸೆಪ್ಟೆಂಬರ್‌ ತಿಂಗಳು ಎಂದು ನೆನಪು. ಅಲ್ಲಿಗೆ ಬಂದಿದ್ದ ಲಕ್ಷ್ಮಣರಾವ್‌ ಅವರನ್ನು ಜ್ಯೋತಿ ಮಾತಾಡಿಸಿದ್ದಳು. ಅರೆಗತ್ತಲಿನ ಉದ್ಯಾನದಲ್ಲಿ ಕೊಂಚ ತಲೆತಗ್ಗಿಸಿಕೊಂಡು, ದಪ್ಪ ಕನ್ನಡಕ ಹಾಕಿಕೊಂಡು, ಭುಜ ಒಂಚೂರು ಮೇಲೆತ್ತಿಕೊಂಡು ನಡೆದುಕೊಂಡು ಬಂದು ನನ್ನ ಬಳಿಯೂ ಎರಡು ಮಾತಾಡಿದ್ದರು. ಆಗಷ್ಟೇ ನನ್ನ ಮದುವೆಯಾಗಿತ್ತು. ಮದುವೆಯ ಕುರಿತು ಅವರೊಂದೆರಡು ಸಾಲಿನ ಪದ್ಯ ಕೂಡ ಹೇಳಿ ನಗಿಸಿದ್ದರು.

ಅಲ್ಲಿಂದಾಚೆ ಅವರ ಒಡನಾಟ ಹೆಚ್ಚಾಯಿತು. ನಾವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸಿಗತೊಡಗಿದೆವು. ಸಿ. ಅಶ್ವತ್ಥರ ಮನೆಯಲ್ಲಿ, ತೋಟದಲ್ಲಿ ಭೇಟಿಯಾದೆವು. ಟಿಎನ್‌ ಸೀತಾರಾಮ್‌, ಎಚ್‌ ಎಸ್‌ ವೆಂಕಟೇಶಮೂರ್ತಿ, ಕನ್ನಡವೇ ಸತ್ಯ ರಂಗಣ್ಣ, ಪ್ರಭಾಕರ್‌, ಅವರ ತಮ್ಮ ಶಂಕರ್‌- ಹೀಗೆ ದೊಡ್ಡದೊಂದು ಬಳಗವೇ ಅವರ ಸುತ್ತಲೂ ಇತ್ತು. ನಾನು ಯಾರನ್ನು ಭೇಟಿಯಾಗಲು ಹೋದರೂ ಅಲ್ಲಿ ಲಕ್ಷ್ಮಣರಾವ್‌ ಇರುತ್ತಿದ್ದರು. ಕ್ರಮೇಣ ನಾವಿಬ್ಬರೂ ವಿಸ್ಕಿ-ಸೋಡಾದಂತೆ ಬೆರೆತೆವು. ನಮ್ಮಿಬ್ಬರ ಸಂಜೆಯ ಹವ್ಯಾಸಗಳೂ ವೈಯನ್ಕೆಯವರಿಂದ ಬಂದಿದ್ದಾಗಿತ್ತು. ಹೀಗಾಗಿ ಗುರುಸ್ಮರಣೆಯ ಕಾರ್ಯಕ್ರಮವೂ ಅಲ್ಲಿ ನಡೆಯುತ್ತಿತ್ತು.

ಲಕ್ಷ್ಮಣರಾವ್‌ ಅತ್ಯಂತ ದೊಡ್ಡ ಸ್ನೇಹಬಳಗವನ್ನು ಹೊಂದಿದ ಕವಿ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರಿಗೆ ದೇಶಾದ್ಯಂತ ಓದುಗರು, ಕೇಳುಗರು, ರಸಿಕಮಿತ್ರರು ಇದ್ದಾರೆ. ಅವರನ್ನು ದ್ವೇಷಿಸುವ ಒಬ್ಬರೇ ಒಬ್ಬರನ್ನೂ ನಾನಂತೂ ಕಂಡಿಲ್ಲ. ಬಳ್ಳಾರಿಯ ಮೂಲೆಯಲ್ಲಿ, ಧಾರವಾಡದ ಆಸುಪಾಸಿನಲ್ಲಿ, ಉಡುಪಿಯ ರಥಬೀದಿಯಲ್ಲಿ, ತೀರ್ಥಹಳ್ಳಿಯ ಬೀದಿಗಳಲ್ಲಿ, ಚಿಂತಾಮಣಿಯಿಂದ ಹಿಡಿದು ಚಿಕಾಗೋ ತನಕ ಅವರ ಕಾರುಬಾರು ಅವ್ಯಾಹತ.

ಲಕ್ಷ್ಮಣರಾವ್‌ ಹಾಡುವ ಕವಿ. ಅವರಿಗೆ ರಂಜನೆ ಪ್ರಧಾನ. ಒಣವೇದಾಂತ, ಜಡವಿಮರ್ಶೆ, ಹುಸಿ ತತ್ವಜ್ಞಾನ, ನಿರರ್ಥಕ ಪಂಥಭ್ರಮೆ, ಸ್ವಾನುಕಂಪ, ಕೀಳರಿಮೆಯಂಥ ಯಾವ ಗುಣವೂ ಅವರಲ್ಲಿಲ್ಲ. ಅವರಿಗೆ ಅದು ಇಷ್ಟವಾಗುವುದೂ ಇಲ್ಲ. ಹೀಗಾಗಿ ಅವರ ಜೊತೆಗಿನ ಮಾತುಕತೆ ಸದಾ ಮುಕ್ತವಾಗಿಯೇ ಇರುತ್ತದೆ. ಅವರ ಕವಿತೆಗಳ ಹಾಗೆ ಅವರೂ ಕಾಟ ಕೊಡುವುದಿಲ್ಲ, ಕಷ್ಟಸಹಿಷ್ಣುವಾಗು ಎನ್ನುವುದಿಲ್ಲ. ನಿರರ್ಥಕ ಅನ್ನಿಸುವುದಿಲ್ಲ.

ಪದಗಳ ಸಹವಾಸದಲ್ಲಿ ನೂರೆಂಟು ವರುಷ; ಶಬ್ದಾರ್ಥ ಚಿಂತಾಮಣಿ ಜಿ. ವೆಂಕಟಸುಬ್ಬಯ್ಯ ಸ್ಮರಣೆ!

ನಾವೆಲ್ಲ ಕೊರೋನಾ ಅಂತ ಅಂಜುತ್ತಿದ್ದಾಗ, ಅದೆಲ್ಲಿದೆ ತೋರಿಸಿ ಅಂತ ಮಾಸ್ಕು ಕೂಡ ಹಾಕದೇ ಓಡಾಡುತ್ತಿದ್ದವರು ಅವರು. ಅವರ ಸಂಜೆಯ ವಾಕಿಂಗ್‌, ಮಧ್ಯಾಹ್ನದ ನಿದ್ದೆ, ರಾತ್ರಿಯ ಸುದ್ದಿ, ಮುಂಜಾನೆಯ ಕಾಫಿ, ಸುಬ್ಬಾಭಟ್ಟರ ಮಗಳ ಜತೆಗಿನ ಹರಟೆ- ಎಲ್ಲವೂ ಎಲ್ಲ ಗೆಳೆಯರಿಗೂ ಗೊತ್ತು. ಅವರು ತಮ್ಮ ಪತ್ನಿಯಿಂದ ಏನನ್ನೂ ಮುಚ್ಚಿಡದ ರಹಸ್ಯಾತೀತ ದಿಗಂಬರ. ಗೆಳೆಯರಿಂದಲೂ ಅವರು ಏನನ್ನೂ ಬಚ್ಚಿಟ್ಟಿಲ್ಲ ಎಂದೂ ನಾನು ಹೇಳಬಲ್ಲೆ.

ಕಾವ್ಯರಚನೆ, ಓದು, ಸಿನಿಮಾ, ಸಂಗೀತ, ಸರಸ ಸಲ್ಲಾಪ, ತೀರ್ಥಯಾತ್ರೆ, ಪ್ರಯಾಣ, ಕಾರಣ-ಅಕಾರಣ ಪ್ರೇಮೋಲ್ಲಾಸಗಳ ಚಕ್ರದಲ್ಲಿ ನಿರಂತರ ಸುತ್ತುತ್ತಿರುವ ಬಿಆರೆಲ್‌ ನನ್ನ ಪಾಲಿಗೆ ಅಚ್ಚರಿ. ಅವರ ಕವಿತೆಯ ನಾಯಕರಂತೆ, ಭಾವದಂತೆ, ಆಶಯದ ಹಾಗೆ ಅವರು ಕೂಡ ನಮ್ಮೊಳಗೆ ನೆಲೆಸಿರುವ ಕವಿ.

**

ಬಿ ಆರ್‌ ಲಕ್ಷ್ಮಣರಾವ್‌ ಅವರ ‘ನವೋನ್ಮೇಷ’ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ, ಅವರ ನಿಡುಗಾಲದ ಮಿತ್ರರೂ ಆಗಿರುವ ಹಿರಿಯ ಕವಿ ಎಚ್‌ ಎಸ್‌ ವೆಂಕಟೇಶಮೂರ್ತಿ ಹೇಳಿದ ಒಂದು ಮಾತು ನನ್ನನ್ನು ಇವತ್ತಿಗೂ ಕಾಡುತ್ತಲೇ ಇದೆ. ‘ಲಕ್ಷ್ಮಣಾ, ನೀನು ಇನ್ನೂ ಮಹತ್ವಾಕಾಂಕ್ಷೆಯ ಕವಿತೆಗಳನ್ನು ಬರೆಯಬೇಕು. ಇಷ್ಟರಲ್ಲೇ ತೃಪ್ತನಾಗಬಾರದು’ ಎಂಬ ಆ ಮಾತು ಲಕ್ಷ್ಮಣರಾವ್‌ ಬಗ್ಗೆ ಮತ್ತೆ ಮತ್ತೆ ಯೋಚಿಸುವಂತೆ ಮಾಡಿತು.

ಮತ್ತಷ್ಟುಮಹಾತ್ವಾಕಾಂಕ್ಷೆಯಿಂದ ಬರೆಯುವುದು ಎಂದರೇನು ಎಂಬ ಪ್ರಶ್ನೆಗೆ ನನಗೆ ಕೊನೆಗೂ ಉತ್ತರ ಸಿಗಲಿಲ್ಲ. ಮಹಾಕಾವ್ಯ ಅಂದರೆ ಮಹಾವ್ಯಕ್ತಿಗಳ ಬಗ್ಗೆ ಬರೆಯುವುದೇ, ಸಾವಿರಾರು ಪುಟಗಳ ಕಾವ್ಯ ಬರೆಯುವುದೇ, ಪುರಾಣದ, ಇತಿಹಾಸದ ವ್ಯಕ್ತಿಯನ್ನೋ ವಸ್ತುವನ್ನೋ ಇಟ್ಟುಕೊಂಡು ಬರೆಯುವುದೇ? ಗಾತ್ರದಿಂದಲೋ ಪಾತ್ರದಿಂದಲೋ ಕವಿತೆ ಮಹತ್ವಾಕಾಂಕ್ಷಿ ಆಗುತ್ತದೆಯೇ? ಅಷ್ಟಕ್ಕೂ ಮಹತ್ವಾಕಾಂಕ್ಷೆ ಇರಬೇಕಾದದ್ದು ಕವಿಗೋ, ಕವಿತೆಗೋ ಓದುಗನಿಗೋ? ಒಂದು ನಾಲ್ಕು ಸಾಲಿನ ಕವಿತೆ ಮಹತ್ವಾಕಾಂಕ್ಷೆಯ ಕವಿತೆ ಅನ್ನಿಸಿಕೊಳ್ಳಲಾರದೇ? ಹಾಗಿದ್ದರೆ ನಾವೇಕೆ ಎಜ್ರಾ ಪೌಂಡ್‌ ಬರೆದ ‘ಇನ್‌ ಎ ಸ್ಟೇಷನ್‌ ಆಫ್‌ ದಿ ಮೆಟ್ರೋ’ ಎಂಬ ಎರಡೇ ಸಾಲಿನ ಪದ್ಯವನ್ನು ಮತ್ತೆ ಮತ್ತೆ ಓದುತ್ತೇವೆ. ಯಾವ ಮಹಾಕಾವ್ಯವನ್ನೂ ಬರೆಯದ ಗಂಗಾಧರ ಚಿತ್ತಾಲ, ಪಾಬ್ಲೋ ನೆರುಡಾ, ಬರ್ಟೋಲ್ಟ್‌ ಬ್ರೆಕ್ಟ್- ಮುಂತಾದವರ ಬಗ್ಗೆ ಯಾಕೆ ಇಂಥ ಪ್ರಶ್ನೆ ಕೇಳಿಕೊಳ್ಳುವುದಿಲ್ಲ?

ಯಾರೊಬ್ಬರ ಕವಿತೆಗಳಲ್ಲೂ ಮಹತ್ವಾಕಾಂಕ್ಷೆಯನ್ನು ಹುಡುಕುವ ಪ್ರಯತ್ನವನ್ನು ನಾನಂತೂ ಮಾಡಿಲ್ಲ. ಕವಿತೆ ಹುಟ್ಟಿ, ಜೀವಿಸಿ, ನೆಲೆಸುವ ಪರಿಯಿಂದ ನಾನು ಬೆರಗಾಗಿದ್ದೇನೆ. ಮಹತ್ವಾಕಾಂಕ್ಷೆ ಎಂಬುದು ಕವಿತೆಯ ಆಯಸ್ಸಿಗೆ ಸಂಬಂಧಪಟ್ಟದ್ದು ಅಂತ ನಾನೆಂದೂ ಭಾವಿಸಿಲ್ಲ. ಹೀಗಾಗಿ ನನ್ನೊಳಗೆ ಎಚ್‌ ಎಸ್‌ ವೆಂಕಟೇಶಮೂರ್ತಿಯವರ ‘ಬುದ್ಧಚರಣ’ಕ್ಕಿಂತ ಗಾಢವಾಗಿ ಅವರ ಭಾವಗೀತೆಗಳೇ ನೆಲೆಯಾಗಿವೆ. ಬೇಂದ್ರೆಯವರ ಮಹತ್ವಾಕಾಂಕ್ಷೆಯ ಪದ್ಯಗಳಿಗಿಂತ ಅವರ ಆರಂಭದ ಪ್ರಣಯ, ದಾಂಪತ್ಯ, ಸರಳ ಅಧ್ಯಾತ್ಮದ ಕವಿತೆಗಳನ್ನೇ ನಾನು ಮತ್ತೆ ಮತ್ತೆ ಓದುತ್ತೇನೆ. ಗೋಪಾಲಕೃಷ್ಣ ಅಡಿಗರ ಮಹತ್ವಾಕಾಂಕ್ಷೆಯ ಕವಿತೆ ಯಾವುದು ಎಂಬುದು ನನಗಿನ್ನೂ ಗೊತ್ತಾಗಿಲ್ಲ. ಅವರ ಕವಿತೆಗಳ ಕೆಲವು ಸಾಲುಗಳಷ್ಟೇ ನನಗೆ ದಕ್ಕಿವೆ. ಮಿಕ್ಕ ಸಾಲುಗಳನ್ನು ನನ್ನದಾಗಿಸಿಕೊಳ್ಳಲು ನಾನು ಕಷ್ಟಪಟ್ಟು ಯತ್ನಿಸಲೂ ಇಲ್ಲ. ಅದರಿಂದ ನಾನೇನೋ ಕಳಕೊಂಡೆ ಎಂಬ ಸಂಕಟವೂ ನನಗಿಲ್ಲ.

ವಿಮರ್ಶೆಯ ಉಪಕ್ರಮದಲ್ಲಿರುವ ಒಂದು ಬಗೆಯ ಬೇಟೆಯ ಗುಣವನ್ನು ನಾನಂತೂ ನೋಡುತ್ತಲೇ ಬಂದಿದ್ದೇನೆ. ಕಾವ್ಯವಿಮರ್ಶೆ ಹೆಚ್ಚಿನ ಸಂದರ್ಭದಲ್ಲಿ ‘ಆಗಿರುವ’ ಕವಿತೆಯ ಕುರಿತು ಮಾತನಾಡದೇ, ಆ ಕವಿತೆ ‘ಹೇಗಾಗಬೇಕಿತ್ತು’ ಎನ್ನುವುದನ್ನೇ ಚರ್ಚಿಸುತ್ತದೆ. ಅಂಥ ಪ್ರತಿಯೊಂದು ವಿಮರ್ಶಾತ್ಮಕ ಬರಹವೂ ಅಸಫಲ ಕವಿಯೊಬ್ಬನ ಅತೀವ ಆತ್ಮರತಿಯ ಪ್ರದರ್ಶನವೇ ಆಗಿರುತ್ತದೆ. ಅತ್ಯುತ್ತಮ ಕವಿತೆ ಯಾವುದೆಂದು ತಿಳಿಯಲು ತನ್ನ ಬಳಿ ತಾನೇ ಕಂಡುಕೊಂಡಿರುವ ಮಾನದಂಡಗಳಿವೆ ಮತ್ತು ಆ ಮಾನದಂಡಗಳ ಪರೀಕ್ಷೆಯನ್ನು ಯಾವ ಕವಿತೆ ಗೆಲ್ಲುತ್ತದೆಯೋ ಅದೇ ಅತ್ಯುತ್ತಮ ಎಂಬ ತೀರ್ಮಾನಕ್ಕೂ ವಿಮರ್ಶೆ ಬಂದುಬಿಟ್ಟಿರುತ್ತದೆ.

ಇಂಥ ಹೊತ್ತಲ್ಲಿ, ತನಗಿಷ್ಟವಾದದ್ದನ್ನು ತಣ್ಣಗೆ ಬರೆಯುತ್ತಾ ಹೋಗುವ ಬಿ ಆರ್‌ ಲಕ್ಷ್ಮಣರಾವ್‌, ತೋರಿಕೆಯಿಲ್ಲದೇ ಬರೆಯುತ್ತಿರುವವರು. ಯಾರದೋ ಮಾತಿಗೆ, ಯಾವುದೋ ಚಳವಳಿಗೆ ಸಿಕ್ಕು ಅವರು ತಮ್ಮ ಕಾವ್ಯದ ಹಾದಿಯನ್ನು ಬದಲಾಯಿಸಿಕೊಳ್ಳಲು ಹೋಗಲಿಲ್ಲ. ಸಮನ್ವಯ ಕವಿ ಅಂತ ಕರೆಸಿಕೊಳ್ಳುವ ಸಲುವಾಗಿಯೇ ಬೇರೆ ಶೈಲಿಯ ಪದ್ಯಕ್ಕೆ ಹೊರಳಲಿಲ್ಲ. ತನ್ನ ಅನಿಸಿಕೆ ತನ್ನದು ಮತ್ತು ಅದು ತನ್ನದಾಗಿರುವ ಕಾರಣಕ್ಕೇ ಪ್ರಾಮಾಣಿಕವಾದದ್ದು ಎಂದು ನಂಬಿ ಬರೆಯುವ ಲಕ್ಷ್ಮಣರಾಯರ ಕವಿತೆ ಯಾವತ್ತೂ ಓದುಗಮುಖಿ. ಅದು ವಿಮರ್ಶಾಮುಖಿ ಅಲ್ಲವೇ ಅಲ್ಲ.

**

ಲಕ್ಷ್ಮಣರಾವ್‌ ಕಾವ್ಯ ಅವರಂತೆಯೇ ಚಿರಂತನ. ಅವರ ಕಾವ್ಯಕ್ಕೆ ನಮನ, ಅವರ ಕಾಯಕ್ಕೆ ನವೋನ್ಮೇಷ, ಅವರ ಸ್ನೇಹಕ್ಕೆ ಮುಗುಳ್ನಗೆ, ಸಖ್ಯಕ್ಕೆ ಸಂಭ್ರಮ, ಮಾತಿಗೆ ಬೆರಗು, ಇರುವಿಗೆ ನಿರಂತರತೆಯ ಹಾರೈಕೆ.

**

click me!