* ಜೋಗಿ

ಮಗಳು ಹೇಮಾ ತೀರಿಕೊಂಡಾಗ ಖ್ಯಾತ ಕತೆಗಾರ, ಮಾಲ್ಗುಡಿ ಡೇಸ್ ಸೃಷ್ಟಿಕರ್ತ ಆರ್ ಕೆ ನಾರಾಯಣ್ We are all in the queue. She Jumped the Queue. ತಮ್ಮ ಮಗ ರಾಮು ಸತ್ತಾಗ ದೇವುಡು ಹೇಳಿದ್ದು: Everything is in order, but we don’t know the order.

 ಅತ್ಯಂತ ಜನಪ್ರಿಯ ಕಾದಂಬರಿಕಾರ ಆರ್ನಾಲ್ಡ್ ಬೆನೆಟ್ ಸದಾ ತನ್ನ ಪರ್ಸಿನಲ್ಲಿ 50 ಪೌಂಡ್ ಇಟ್ಟುಕೊಂಡಿರುತ್ತಿದ್ದನಂತೆ. ತನ್ನ ಪುಸ್ತಕ ಓದುತ್ತಿರುವ ಯಾರಾದರೂ ಕಣ್ಣಿಗೆ ಬಿದ್ದರೆ, ಅವರಿಗೆ ಐವತ್ತು ಪೌಂಡ್ ಕೊಡುವ ನಿರ್ಧಾರ ಅವನದು. ಬೆನೆಟ್ ಸತ್ತಾಗ ಅವನ ಜೇಬಲ್ಲಿ ಆ ಮಡಿಚಿಟ್ಟ ನೋಟು ಹಾಗೆಯೇ ಇತ್ತಂತೆ.

ಇಂಟರ್ನೆಟ್ ಇಲ್ಲದ ಕಾಲದಲ್ಲಿ ಇಂಥ ಸಂಗತಿಗಳನ್ನೆಲ್ಲ ಹುಡುಕಿ ಹೇಳುತ್ತಿದ್ದ, ಬರೆಯುತ್ತಿದ್ದ ಗೂಗಲ್ ಸರ್ಚ್ ಇಂಜಿನಿನಂತೆ ಇದ್ದವರು ವೈಯನ್ಕೆ, ಅಲಿಯಾಸ್ ವೈ ಎನ್ ಕೃಷ್ಣಮೂರ್ತಿ. ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳ ಸಂಪಾದಕರಾಗಿದ್ದವರು. ವಂಡರ್-ಕಣ್ಣು ಅಂಕಣ ಬರೆಯುತ್ತಿದ್ದವರು, ಪದ್ಯ ಇಷ್ಟು ಲೈಟಾದರೆ ಹೇಗೆ ಸ್ವಾಮಿ ಮತ್ತು ತೀರ್ಥರೂಪ ಎಂಬ ಎರಡು ಕವನ ಸಂಕಲನ ಬರೆದವರು. ಕನ್ನಡದ ಬಹುತೇಕ ಲೇಖಕರ ಜತೆಗಿದ್ದವರು. ಹೊಸಬರನ್ನು ಬೆಳೆಸಿದವರು. ತಾನು ಕಡಿಮೆ ಬರೆದು ಹೆಚ್ಚು ಬರೆಸಿದವರು. ಇವತ್ತು ಅವರ 95ನೇ ಹುಟ್ಟುಹಬ್ಬ. ಮೇ 16, 1926ರಲ್ಲಿ ಹುಟ್ಟಿದ ವೈಯನ್ಕೆ 1999 ಅಕ್ಟೋಬರ್ 16ರಂದು ಆಕಾಶಮಾರ್ಗದಲ್ಲಿ ಕಣ್ಮರೆಯಾದರು. ಅವರ ಕುರಿತು ನಾನು ಬರೆದ ಸುದೀರ್ಘ ಟಿಪ್ಪಣಿಯೊಂದು ಇಲ್ಲಿದೆ:

ಪದಗಳ ಸಹವಾಸದಲ್ಲಿ ವೆಂಕಟಸುಬ್ಬಯ್ಯ ನೂರೆಂಟು ವರುಷ

ನಮ್ಮ ಮನೆಯಲ್ಲಿ ಬಹಳ ವರ್ಷಗಳ ಕಾಲ ಇದ್ದದ್ದು ಇದೊಂದೇ ಫೋಟೋ. ಮನೆಗೆ ಬಂದವರೆಲ್ಲ ಯಾರಿದು, ನಿಮ್ಮಪ್ಪನಾ ಅಂತ ಕೇಳುತ್ತಿದ್ದರು. ನಾನು 'ಅವರು ಬಿಲ್ಡರ್ ಕೃಷ್ಣಮೂರ್ತಿ ಅಂತ. ತುಂಬ ದೊಡ್ಡ ರಿಯಲ್ ಎಸ್ಟೇಟ್ ಇಟ್ಟುಕೊಂಡವರು. ಈ ಮನೇನ ಕಟ್ಟಿಸಿ ನನಗೆ ಕಾಣಿಕೆಯಾಗಿ ಕೊಟ್ಟರು. ಅವರು ವರುಷಕ್ಕೊಬ್ಬ ಸಜ್ಜನರಿಗೆ ಒಂದು ಮನೆ ಗಿಫ್ಟ್ ಕೊಡುತ್ತಾರೆ' ಎಂದು ಹೇಳಿ ಬಂದವರ ಹೊಟ್ಟೆ ಉರಿಸುತ್ತಿದ್ದೆ.
ಹೀಗೆ ಹೊಟ್ಟೆ ಉರಿಸುವುದನ್ನು ಕಲಿಸಿದ್ದೂ ಅವರೇ. ರಾತ್ರಿ ಬೆಂಗಳೂರು ವಿಹಾರ ಕೇಂದ್ರದಿಂದ ನನ್ನ ಸ್ಕೂಟರಿನಲ್ಲಿ ಮರಳುತ್ತಿರಬೇಕಾದರೆ, ಶಿವಮೊಗ್ಗ ಸುಬ್ಬಣ್ಣ ಮನೆಯ ಮುಂದೆ, ಒಂಚೂರು ನಿಧಾನ ಮಾಡಿ, ಸುಬ್ಬಣ್ಣಾ, ಸುಬ್ಬಣ್ಣಾ, ಸು ತೆಗೆದರೆ ಬಣ್ಣ, ಬ ತೆಗೆದರೆ ಸುಣ್ಣ ಎಂದು ಕಿರುಚಿ, ಸುಬ್ಬಣ್ಣ ಹೊರಗೆ ಬರುವಷ್ಟರಲ್ಲಿ ಮಾಯವಾಗುತ್ತಿದ್ದದ್ದು. ನಾಡಿಗರ ಮನೆ ಮುಂದೆ ಹೋಗುವಾಗ, ನಾಡಿಗಾ ನೀನು ಹೋಗುವುದು ಕಾಡಿಗಾ ಸುಡುಗಾಡಿಗಾ ಅಂತ ಹಾಡುತ್ತಿದ್ದದ್ದು. ರಾಮಚಂದ್ರ ಶರ್ಮರನ್ನು ಕ್ರಿಸ್ತಪೂರ್ವ ವರ್ಮ ಎಂದು ಕರೆಯುತ್ತಿದ್ದದ್ದು. ಲಂಕೇಶರನ್ನೂ ಅನಂತಮೂರ್ತಿಯನ್ನೂ ಏಕಕಾಲಕ್ಕೆ ಬೈಯುತ್ತಲೇ ಮೆಚ್ಚಿಕೊಳ್ಳುತ್ತಿದ್ದದ್ದು, ಪಾಬ್ಲೋ ನೆರುಡಾ ಅಂದರೆ ವಿಶ್ವಸಾಹಿತ್ಯದ ಗರುಡಾ ಅಂತ ಪ್ರಾಸ ತೆಗೆಯುತ್ತಿದ್ದದ್ದು, ರಶ್ಯಕ್ಕೆ ಹೋಗಿ ಬಂದ ಗೋಪಾಲಕೃಷ್ಣಯ್ಯನವರನ್ನು ಗೋಪ್‌ಸ್ಕಿ ಅಂತ ಕರೆಯುತ್ತಾ ಅವರ ಮನೆಗೆ ಪ್ರತಿ ಭಾನುವಾರ ಭೇಟಿ ನೀಡಿ ಅವರನ್ನು ನಗಿಸುತ್ತಿದ್ದದ್ದು.

ಅವರು ವೈಯನ್ಕೆ.  ಅವರು ನನ್ನ ಮತ್ತು ನನ್ನಂಥ ಅನೇಕ ಪತ್ರಕರ್ತರ ಗುರುಗಳು. ಯಾರಾದರೂ ಬೆಳಗ್ಗೆ ಪೋನ್ ಮಾಡಿ, ಇಂಥದ್ದೊಂದು ಸುದ್ದಿ ನಿಮ್ಮಲ್ಲಿ ಬಂದೇ ಇಲ್ಲ, ಬೇರೊಂದು ಪತ್ರಿಕೆಯಲ್ಲಿ ಬಂದಿದೆ ಅಂದರೆ, ಹಾಗಿದ್ರೆ ಆ ಬೇರೊಂದು ಪತ್ರಿಕೇನೇ ಓದ್ಕೋ ಅಂತ ನಿರುಮ್ಮಳವಾಗಿ ಹೇಳುತ್ತಿದ್ದವರು. ಏಳು ಗಂಟೆಯ ನಂತರ ಯಾವತ್ತೂ ಆಫೀಸಿನಲ್ಲಿ ಇದ್ದವರಲ್ಲ. ಸುದ್ದಿಯ ಹಿಂದೆ ಬಿದ್ದವರೂ ಅಲ್ಲ. ಸುದ್ದಿ ಮಿಸ್ಸಾದರೆ ಚಿಂತೆ ಮಾಡಿದವರೂ ಅಲ್ಲ. ಯಾರಾದರೂ ವಾರಪೂರ್ತಿ ಕೆಲಸ ಮಾಡುತ್ತಿದ್ದರೆ, ಬೈದು ರಜೆ ತಗೋ ಅನ್ನುತ್ತಿದ್ದವರು.

ಬೆಳಗ್ಗೆ ಒಂದು ಇಡ್ಲಿ ಬೆಣ್ಣೆ, ಮಧ್ಯಾಹ್ನ ಬಾದಾಮಿ, ಗೋಡಂಬಿ, ದ್ರಾಕ್ಷಿ ತಲಾ ಎರಡೆರಡು ಮತ್ತು ಒಂದು ಗ್ಲಾಸು ಕಾಂಪ್ಲಾನ್, ರಾತ್ರಿ ಹೊಟ್ಟೆ ತುಂಬ ಊಟ, ಅದಕ್ಕೂ ಮುಂಚೆ ಎರಡು ಪೆಗ್ಗು ಸ್ಕಾಚು- ವೈಯನ್ಕೆ ಜೀವನ ಇಷ್ಟೇ. ಮಗುವಿನಷ್ಟೇ ಹಠಮಾರಿ ಮುಗ್ಧರಾಗಿದ್ದ ಅವರು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ನನ್ನ ಮಾತನ್ನೂ ಯಾರೂ ಕೇಳಬೇಡಿ ಅನ್ನುತ್ತಿದ್ದರು. ಸರಿ, ಕೇಳೋಲ್ಲ ಅಂದರೆ, ನೀವು ನನ್ನ ಮಾತನ್ನು ಕೇಳಿದಂತೆ ಆಯಿತಲ್ಲ ಎಂದು ನಗುತ್ತಿದ್ದರು.

ಶ್ರೀಪತಿ ಮತ್ತು ಹೋಮಿಯೋಪತಿ- ಇವೆರಡನ್ನು ಮಾತ್ರ ಗಾಢವಾಗಿ ನಂಬುತ್ತಿದ್ದ ವೈಯನ್ಕೆ ಆಪ್ತರ ಪಟ್ಟಿಯಲ್ಲಿದ್ದವರು ಎಂ ಎಸ್ ತಿಮ್ಮಪ್ಪ, ವಿಶ್ವೇಶ್ವರ ಭಟ್, ರವಿ ಹೆಗಡೆ ಮತ್ತು ನಾನು. ಬಿಟ್ಟರೆ, ಬಾಲಸುಬ್ರಹ್ಮಣ್ಯಂ ಜೊತೆ ಘನರೂಪಿ ಮಾತುಕತೆ. ಎಚ್ ಆರ್ ರಂಗನಾಥ್ ಜೊತೆ ಕ್ರಿಮಿನಾಲಜಿ ಚರ್ಚೆ. ನಾವು ಅವರ ಲಿಕ್ವಿಡ್ ಫ್ರೆಂಡ್ಸ್, ಮಿಕ್ಕವರು ಸಾಲಿಡ್ಡು!
ವೈಯನ್ಕೆಗೆ ಆಪ್ತರಾಗಿದ್ದವರೆಲ್ಲ ಅವರಿಗಿಂತ ಚಿಕ್ಕವರು. ಅವರ ಅರ್ಧವಯಸ್ಸಿನವರು. ತಮ್ಮ ಮಾತು ಅರ್ಥವಾಗದವರನ್ನು ಅವರು ಘಾ ಅಂತ ಕರೀತಿದ್ದರು. ಅರ್ಥ ಆದವರನ್ನು ಅಪಾಯಕಾರಿ ಅನ್ನುತ್ತಿದ್ದರು. ಮಿತ್ರರು ವಿದೇಶಕ್ಕೆ ಹೋಗುವಾಗ ಏನು ತರಲಿ ಅಂತ ಕೇಳಿದರೆ ಸಮ್ ಥಿಂಗ್ ಸ್ಪೆಷಲ್ ಅನ್ನುತ್ತಿದ್ದರು. ಅದೊಂದು ಆ ಕಾಲದ ಪ್ರಸಿದ್ಧ ಸ್ಕಾಚ್ ವಿಸ್ಕಿಯ ಹೆಸರು.

ವಿಶ್ವಾಮಿತ್ರ ಮೇನಕೆ ಡಾನ್ಸ್ ನೋಡೋದು ಏನಕೆ? ಆಸ್ಕ್ ಮಿಸ್ಟರ್ ವೈಯೆನ್ಕೆ!
ಹೀಗೆ ಪದ್ಯ ಬರೆದು ಅವನ್ನು ‘ಕವಿ-ತೆಗಳು’ ಎಂದು ಕರೆದವರು ವೈಯೆನ್ಕೆ. ಇದನ್ನೋದಿದ ಕುತೂಹಲಿಗಳಿಗೆ ಅಂಥ ಮತ್ತಷ್ಟು ಪದ್ಯಗಳು ಕಾದಿದ್ದವು. ‘ಶಂಕರಲಿಂಗೇಗೌಡರು ಹಚ್ಕೊಂಡಿದ್ರು ಪೌಡರು’, ‘ದೂರವಿರು ದೂರ್ವಾಸನೆ, ಬರುತಲಿದೆ ದುರ್ವಾಸನೆ’, ‘ಕಪಿಲವಸ್ತುವಿನ ರಾಜ ಶುದ್ಧೋದನ, ಅವನ ಮಗ ರಾತ್ರೋರಾತ್ರಿ ಎದ್ದೋದನ’- ಮುಂತಾದ ಎರಡೇ ಸಾಲುಗಳ ಕವಿತೆಗಳು. ಈ ಕವಿತೆಗಳ ಸಂಕಲನಕ್ಕ ಅವರಿಟ್ಟ ಹೆಸರು- ಪದ್ಯ ಇಷ್ಟು ಲೈಟಾದರೆ ಹೇಗೆ ಸ್ವಾಮಿ?. ಅದಾದ ನಂತರ ಬಂತು ‘ತೀರ್ಥ-ರೂಪ’. ಅದಕ್ಕೊಂದು ಉಪಶೀರ್ಷಿಕೆ- ‘ಮದ್ಯ ಇಷ್ಟು ಟೈಟಾದರೆ ಹೇಗೆ ಸ್ವಾಮಿ?’ ಅದರಲ್ಲೂ ಪುಟ್ಟ ಪುಟ್ಟ ಪದ್ಯ- ‘ಬೆಳಗ್ಗೆ ಸಂಜೆ ಮಧ್ಯಾಹ್ನ, ಕುಡೀತೀನ್ ನಾನು ಮಧ್ಯಾಹ್ನ, ಪೆಗ್ಗಲ್ ಅಳೀತೀನಿ ಜೀವ್ನಾನ.’

ಹೋಟೆಲ್  ಕೆಲಸಗಾರ ರಾಮು ಕೋಟಿ ನಿರ್ಮಾಪಕನಾದ ಕತೆ

ವೈಯೆನ್ಕೆ ಇದ್ದಿದ್ದೂ ಹಾಗೆಯೇ. ಒಮ್ಮೆ ನಮ್ಮ ಒತ್ತಾಯದ ಮೇರೆಗೆ ಪುತ್ತೂರಿಗೆ ಬಂದಿದ್ದರು ಅವರು. ಎಲ್ಲೇ ಇರಲಿ, ಹೇಗೆ ಇರಲಿ ಏಳು ಗಂಟೆಗೆಲ್ಲ ಅವರು ಹೊರಟುಬಿಡಬೇಕು- ಪಿಎಚ್ಡಿ ಮಾಡುವುದಕ್ಕೆ. ಪಿಎಚ್ಡಿ ಅಂದರೆ Precious hour of drinking. ಅವರು ತಮ್ಮನ್ನು ‘ಸನ್ ಡೌನರ್’ ಎಂದು ಕರೆದುಕೊಳ್ಳುತ್ತಿದ್ದರು. ಅಂದರೆ ಸನ್ ಡೌನ್ ಆಗುತ್ತಿದ್ದಂತೆ ಶುರುವಾಗಬೇಕು ಪಿಎಚ್ಡಿ. ಪುತ್ತೂರಲ್ಲಿ ಯಾರೋ ಕೊಂಚ ಹೊತ್ತು ಜಾಸ್ತಿ ಮಾತಾಡಿದ್ದರು. ಆಗಲೇ ಏಳು ಗಂಟೆಯಾಗಿತ್ತು. ವೈಯೆನ್ಕೆ ಮಾತಾಡುತ್ತಾರೆ ಎಂದು ಘೋಷಿಸಿದ್ದೇ ತಡ, ಎರಡೇ ಎರಡು ಮಾತಾಡಿ ‘ಎಲ್ಲಿ ಕುಂಟಿನಿ?’ ಎಂದು ಕರೆದು ಹೊರಟೇ ಬಿಟ್ಟಿದ್ದರು. ಭಾಷಣದ ಮುಂದಿನ ಭಾಗ ‘ಹೊಟೆಲ್ ರಾಮ’ದಲ್ಲಿ. ವೈಯೆನ್ಕೆಗೆ ಇಷ್ಟವಾಗುವ ಆರಾಮದಲ್ಲಿ. ಜೊತೆಗೆ ದ.ಕ.ದವರಿಗೆ ಟೈಮ್ ಸೆನ್ಸ್ ಇಲ್ಲ ಎಂಬ ಕಂಪ್ಲೇಂಟು.

ಅವರ ಸಮಯಪ್ರಜ್ಞೆಗೆ ನಾನು ಸಂಪೂರ್ಣ ವಿರೋಧಿ. ಏಳು ಗಂಟೆಗೆ ಎಂದರೆ ನಾನು ಎಂಟೂವರೆಗೆ ಹೋಗುತ್ತಿದ್ದೆ. ಆಗೆಲ್ಲ ವೈಯೆನ್ಕೆ ಬೈಯುತ್ತಿದ್ದರು; ನೀವು ಎಲ್ಲಾದರಲ್ಲೂ ಲೇಟು, ಸಾಯೋದೂ ಲೇಟು. ಅದು ಬೈಗಳೋ ಆಶೀರ್ವಾದವೋ ಇವತ್ತಿಗೂ ಅರ್ಥವಾಗಿಲ್ಲ.

ಅವರನ್ನು ಅರ್ಥ ಮಾಡಿಕೊಳ್ಳುವುದು ಸುಲಭದ ಸಂಗತಿಯಾಗಿರಲಿಲ್ಲ. ಅವರು ಯಾವ ಮಾತನ್ನೂ ಪೂರ್ತಿಯಾಗಿ ಆಡಿದ್ದಿಲ್ಲ. ಮೊದಲ ಸಲ ಭೇಟಿಯಾದಾಗ ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ನನಗೆ ದುಭಾಷಿ ಬೇಕಾಯಿತು. ಅವರ ಮನೆಗೆ ನನ್ನನ್ನು ಕರೆದುಕೊಂಡು ಕೊಂಡ ಕೆ. ಸತ್ಯನಾರಾಯಣ ಅವರೇನು ಹೇಳಿದರು ಅನ್ನುವುದನ್ನು ಆಮೇಲೆ ಹೇಳಿದರು. ಆರೆಂಟು ಬಾರಿ ಅವರ ಮಾತು ಕೇಳಿದ ನಂತರ ನನ್ನ ಕಿವಿ ಒಂದು ಹದಕ್ಕೆ ಬಂತು. ಹಾಗಂತ ಅರ್ಥವಾಗಲಿಲ್ಲ ಎಂದು ಮತ್ತೊಮ್ಮೆ ಕೇಳಿದಿರೋ ಬೈಗಳು ಖಾತ್ರಿ. ಒಂದು ಸಲ ಹೇಳೋದಕ್ಕೆ ಅವರಿಗೇ ರೇಜಿಗೆ. ಅದನ್ನೇ ಮತ್ತೆ ಹೇಳಬೇಕು ಅಂದರೆ ಊಹಿಸಿ.

‘ಸಂಸ್ಕಾರ’ ಚಿತ್ರಕ್ಕೆ ಪೂರ್ವಸಂಸ್ಕಾರ ಆದದ್ದು ವೈಯೆನ್ಕೆ ಮನೆಯಲ್ಲಿ. ವಿಷ್ಣುವರ್ಧನ್ ‘ವಂಶವೃಕ್ಷ’ದಲ್ಲಿ ನಟಿಸುವುದಕ್ಕೆ ವೈಯೆನ್ಕೆ ಕಾರಣ. ಲಂಕೇಶ್ ಒಂದು ಕವನಕ್ಕೆ ಧೈರ್ಯವಾಗಿ ‘ದೇಶಭಕ್ತ ಸೂಳೇಮಗನ ಗದ್ಯಗೀತೆ’ ಎಂದು ಹೆಸರಿಟ್ಟದ್ದಕ್ಕೆ ವೈಯೆನ್ಕೆ ಬೆಂಬಲ ಕಾರಣ. ನಿಸಾರರ ಸಂಕಲನಕ್ಕೆ ‘ಮನಸು ಗಾಂಧೀಬಜಾರು’ ಎಂದು ಶೀರ್ಷಿಕೆ ಕೊಟ್ಟದ್ದು ವೈಯೆನ್ಕೆ, ಶರ್ಮರ ಪದ್ಯವನ್ನು ಪ್ರೋತ್ಸಾಹಿಸಿದ್ದೂ ಅವರೇ. ಬಿವಿ ಕಾರಂತರ ರಂಗವಿಹಾರ ಆರಂಭವಾಗಿದ್ದು ವೈಯೆನ್ಕೆ ಮನೆಯಲ್ಲಿ…

ಹೀಗೆ ಗಿರೀಶ್ ಕಾರ್ನಾಡ್, ಸಿಆರ್ ಸಿಂಹ, ಅನಂತಮೂರ್ತಿ, ಲಂಕೇಶ್, ರಾಘವ, ರಾಮಾನುಜನ್, ಶರ್ಮ, ಅಯ್ಯರ್, ನಾಡಿಗ- ಹೀಗೆ ಎಲ್ಲರೂ ವೈಯೆನ್ಕೆ ಪ್ರೀತಿಗೆ ಮತ್ತು ತುಂಟಾಟಕ್ಕೆ ತುತ್ತಾದವರೇ. ಒಮ್ಮೊಮ್ಮೆ ಇದ್ದಕ್ಕಿದ್ದ ಹಾಗೆ ‘ನಡೀರಿ, ನಾಡಿಗರ ಮನೆಗೆ ಹೋಗೋಣ’ ಅಂತ ಬೈಕು ಹತ್ತುತ್ತಿದ್ದರು. ಹೋಗುವಾಗ ನಾಡಿಗರ ಮೇಲೊಂದು ಹಾಡು ಬೇರೆ: ‘ನಾಡಿಗಾ.. ನೀನು ಹೋಗುವುದು ಕಾಡಿಗಾ.. ಸುಡುಗಾಡಿಗಾ..’ ಕಾರಂತರ ‘ಸತ್ತವರ ನೆರಳು’ ನೋಡಿದ ನಂತರದ ಕೆಲವು ದಿನ ಯಾರೇ ಫೋನ್ ಮಾಡಿದರೂ ವೈಯೆನ್ಕೆ ‘ಹಲೋ’ ಅನ್ನುತ್ತಿರಲಿಲ್ಲ. ‘ಗೋವಿಂದ ವಿಠ್ಠಲಾ, ಹರಿಹರಿ ವಿಠ್ಠಾಲ’ ಅನ್ನುತ್ತಿದ್ದರು.
ವೈಯೆನ್ಕೆಗೆ ಅವರದೇ ಆದ ಗೆಳೆಯರ ಬಳಗ ಅನ್ನೋದಿರಲಿಲ್ಲ. ಆ ರಾತ್ರಿಗೆ ಪಿಎಚ್ಡಿಗೆ ಯಾರು ಜೊತೆಯಾಗುತ್ತಿದ್ದರೋ ಅವರು ಅಂದಿನ ಗೆಳೆಯರು. ಗೆಳೆತನ ಎನ್ನುವುದು ಅವರಿಗೆ ಆ ಕ್ಷಣದ ಸತ್ಯ. ದ್ವೇಷ ಮಾತ್ರ ನಿತ್ಯಸತ್ಯ. ಕೆಲವೊಬ್ಬರನ್ನು ಅವರು ಯಾವತ್ತೂ ಹತ್ತಿರ ಬಿಟ್ಟುಕೊಂಡವರೇ ಅಲ್ಲ. ಅವರು ಸಹಿಸಿದ ಎರಡು ಸಂಗತಿಗಳೆಂದರೆ; ನೀಚತನ ಮತ್ತು ವಂಚನೆ. ಅವರನ್ನು ಕಂಡರೆ ಆಗದಿದ್ದವರು- ಗುಂಡು ಹಾಕದೇ ಇದ್ದರೆ ಅದು ‘ನೀಚತನ’, ಅವರಿಗೆ ಗುಂಡು ಕೊಡಿಸದೇ ಹೋದರೆ ಅದು ‘ವಂಚನೆ’ ಎಂದು ತಮಾಷೆಯಾಗಿ ಮಾತಾಡಿಕೊಳ್ಳುತ್ತಿದ್ದರು. ಅದು ವೈಯೆನ್ಕೆಗೆ ಗೊತ್ತಾದಾಗ ಅವರು ‘ಹೇಳೋರ್ ಹೇಳ್ಕೊಳ್ಳಲಿ. ಡಿ ಕೆ ಬೋಸ್’ ಅಂದಿದ್ದರು. ವೈಯೆನ್ಕೆಗೆ ಇಷ್ಟವಾದ ಬೈಗಳು ಅದು. ಡಿಕೆ ಬೋಸ್ ಅಂದರೆ ಬೋಸುಡೀಕೆ ಅಂತ ಕೆಲವರಿಗಷ್ಟೇ ಗೊತ್ತಿತ್ತು.

ಅವರ ಜೊತೆ ಅರ್ಧ ಗಂಟೆ ಕಳೆದರೆ ವಿಶ್ವ ಸುತ್ತಿ ಬಂದ ಅನುಭವವಾಗುತ್ತಿತ್ತು. ನಾವೊಂದು ಹೇಳಿದರೆ, ಅವರು ಹತ್ತು ಹೇಳುತ್ತಿದ್ದರು. ಹೀಗೊಂದು ಕತೆ ಬರೆದಿದ್ದೇನೆ ಎಂದು ಶುರುಮಾಡುವ ಹೊತ್ತಿಗೆ ‘ಹೆನ್ರಿ ಜೇಮ್ಸ್ ಓದಿದ್ದೀಯಾ, ನೈಪಾಲ್ ಕೆಟ್ಟ ರೈಟರ್, ಐರಿಶ್ ಬರ್ನಾಡ್ ಷಾ ಬೆಸ್ಟು, ಐಯ್ಯರಿಶ್ ಕೈಲಾಸಂ ಕೂಡ ಬೆಸ್ಟು, ಸಂಸ್ಕಾರ ಕಾದಂಬರಿ ಚೆನ್ನಾಗಿದೆ, ಕಮೂನ ಪ್ಲೇಗ್ಗಿಂತಲೂ ಚೆನ್ನಾಗಿದೆ’ ಎಂದು ಹಲವರ ಬಗ್ಗೆ ತಿಳಿಸಿಕೊಡುತ್ತಿದ್ದರು. ಕವಿತೆಗಳೂ ನಾಟಕಗಳ ಸಾಲುಗಳೂ ಅವರಿಗೆ ಕಂಠಪಾಠ. ಫ್ರೆಂಚ್  ಪದ್ಯವೊಂದನ್ನು ಅವರು ಕಲಿತು ಹಾಡುತ್ತಿದ್ದರು.

ಜೇಮ್ಸ್ ಬಾಂಡ್ ಸಿನಿಮಾ, ಕಳ್ಳರ ಸಂತೆ, ಠಕ್ಕರ ತರಲೆ, ವಿಚಿತ್ರ ತಿರುವುಗಳಿರುವ ಕಾದಂಬರಿ, ಚಂದದ ದುಬಾರಿ ಕಾರು, ಇಂಗ್ಲಿಷ್ ಸುಂದರಿಯರು, ಪಾಪ್ ಸಂಗೀತ ಎಲ್ಲವನ್ನೂ ಮೆಚ್ಚುತ್ತಿದ್ದರು ವೈಯೆನ್ಕೆ. ಗಂಭೀರ ವಿಮರ್ಶೆಯ ವಿರೋಧಿ ಅವರು. ಗಂಭೀರ ಕಾವ್ಯವೆಂದರೂ ಅವರಿಗೆ ವೈಯಕ್ತಿಕವಾಗಿ ಅಷ್ಟಕ್ಕಷ್ಟೇ. ಆದರೆ ನವ್ಯಕಾವ್ಯ ಬಂದಾಗ ಅದನ್ನು ತೋರಣ ಕಟ್ಟಿ ಕೊಂಬು ಕಹಳೆಗಳೊಂದಿಗೆ ಸ್ವಾಗತಿಸಿದವರು ವೈಯೆನ್ಕೆ. ಅವರಿಗೆ ತುಂಬ ಮೆಚ್ಚುಗೆಯಾದವರು ಸುಬ್ಬಣ್ಣ ರಂಗನಾಥ ಎಕ್ಕುಂಡಿ. ‘ಕುಳಿತರಿಲ್ಲಿ ಮತ್ಯ್ಸಗಂಧಿ, ಉಟ್ಟುಕೊಂಡು ಹರಕುಚಿಂದಿ’ ಎಂಬ ಸಾಲನ್ನಂತೂ ಮತ್ತೆ ಮತ್ತೆ ಹೇಳುತ್ತಿದ್ದರು. ಹಡಗುಗಳ್ಳರ ಕತೆಗಳೆಂದರೆ ಅವರಿಗೆ ಪಂಚಪ್ರಾಣ. ಅಂಥ ಸಿನಿಮಾಗಳನ್ನು ನೋಡುತ್ತಿದ್ದರು. ಜ್ಯಾಕ್ ಲಂಡನ್ ಅವರ ಆದರ್ಶನಾಯಕ. ಖುಷಿಯಾದಾಗ ಗುನುಗುತ್ತಿದ್ದದ್ದು:
Oh my darling, Oh my darling, Oh my darling clementine.
Met a miner, Fortyniner, And his daughter clamentine
ಎಂಬ ಹಾಡನ್ನು.

ವೈಯೆನ್ಕೆ ನವ್ಯಕಾವ್ಯಕ್ಕೇನು ಮಾಡಿದರು, ತಾನಿದ್ದ ಪತ್ರಿಕೆಯ ಜೊತೆ ಸೇರಿ ಹೇಗೆ ಹೊಸ ಕವಿಗಳಿಗೊಂದು ವೇದಿಕೆ ಕಲ್ಪಿಸಿಕೊಟ್ಟರು, ಲಂಕೇಶರ ಅಂಕಣ ಪ್ರಕಟಿಸಿದರು, ಸಿನಿಮಾ ವಿಮರ್ಶೆ ಬರೆಸಿದರು, ಸಿನಿಮಾ ಮಾಡಿಸಿದರು ಎಂಬುದೆಲ್ಲ ಬಹುತೇಕರಿಗೆ ಗೊತ್ತಿರುವ ಸಂಗತಿಗಳೇ. ಅವರ ಕುರಿತು ಬರೆದದ್ದನ್ನು ಓದುತ್ತಿದ್ದರೆ ಅವರೊಬ್ಬ ಹಾಸ್ಯಲೇಖನ, ಹನಿಗವಿ ಎಂಬ ಭಾವನೆ ಉಕ್ಕುವಂಥ ಅನೇಕ ಲೇಖನಗಳು ಬಂದಿವೆ. ಅವರ ಪನ್-ಪಾಂಡಿತ್ಯವನ್ನೇ ಎಲ್ಲರೂ ಪ್ರಧಾನವಾಗಿಟ್ಟುಕೊಂಡು ಮಾತಾಡುತ್ತಾರೆ.

ಅವರ ವೈಯಕ್ತಿಕ ಜೀವನದ ಕುರಿತು ಅವರ ಆತ್ಮೀಯರಿಗೂ ಗೊತ್ತಿದ್ದಂತಿಲ್ಲ. ಯಳಂದೂರಿನಲ್ಲಿ ಹುಟ್ಟಿದ ವೈಯೆನ್ಕೆ ಅವರನ್ನು ಪುಟ್ಟು ಅಂತ ಕರೆಯುತ್ತಿದ್ದರು. ಅವರ ಜೊತೆಗಿದ್ದವರು ಕಿಟ್ಟು. ಈ ಕಿಟ್ಟುಪುಟ್ಟು ಹೇಗೆ ಬೇರೆಯಾದರು? ವೈಯೆನ್ಕೆ ಯೌವನದ ದಿನಗಳಲ್ಲಿ ಯಾರನ್ನೋ ಪ್ರೀತಿಸಿದ್ದು ನಿಜವಾ? ಭಗ್ನಪ್ರೇಮ ಅವರ ಬ್ರಹ್ಮಚರ್ಯಕ್ಕೆ ಕಾರಣವಾ? ಇವನ್ನೆಲ್ಲ ಅವರ ಹತ್ತಿರ ಕೇಳುವ ಹಾಗೆಯೇ ಇರಲಿಲ್ಲ. ಹಾಗಂತ ಇಡೀ ದಿನ ಸಾಹಿತ್ಯದ ಕುರಿತು ಮಾತಾಡುತ್ತಾ ಕೂತರೂ ಅವರಿಗೆ ಸಿಟ್ಟು ಬರುತ್ತಿತ್ತು. ‘ಸಾಹಿತ್ಯದ ಜೀವನದ ಐದು ಪರ್ಸೆಂಟ್ ಇರಬೇಕು ಅಷ್ಟೇ. ಅದನ್ನೇ ಇಡೀ ದಿನ ಹೇಳಿಕೊಂಡು ಓಡಾಡಬಾರದು’ ಅನ್ನುತ್ತಿದ್ದರು. ಗಾಂಧೀಬಜಾರಿನಲ್ಲಿ ಸುಬ್ಬಮ್ಮನ ಅಂಗಡಿಯಲ್ಲಿ ಚಟ್ನಿಪುಡಿ ಚೆನ್ನಾಗಿ ಸಿಗುತ್ತೆ. ಕೋರಮಂಗಲದಲ್ಲಿ ಹತ್ತಿರ ಶರ್ಲಾಕ್ ಹೋಮ್ಸ್ ಅಂತ ಒಂದು ಬಾರಿದೆಯಂತೆ, ನಡೀರಿ ನೋಡ್ಕೊಂಡು ಬರೋಣ. ಯೂಜಿ ಕೃಷ್ಣಮೂರ್ತಿ ಬಂದಿದ್ದಾರೆ ಹೋಗೋಣ. ಅಂಬರೀಷ ವರ್ಮ ಅಂತ ಗುರು ಒಬ್ಬರಿದ್ದಾರೆ. ಅವರಿಗೆ ಮನೆಯ ಅವಶೇಷಗಳ ಅಡಿಯಲ್ಲಿ ಚಕ್ರ ಸಿಕ್ಕಿದೆಯಂತೆ. ಹೀಗೆ ಏನೇನೇನೋ ಆಸಕ್ತಿಗಳು. ಅವನ್ನೆಲ್ಲ ಎಲ್ಲರಿಗೂ ಹಂಚುವ ತವಕ.

ನಮ್ಮ ಗೆಳೆಯನೊಬ್ಬ ಆಗಷ್ಟೇ ಮದುವೆಯಾಗಿದ್ದ. ಒಂದು ರಾತ್ರಿ ಅವರ ಮನೆಯಲ್ಲಿ ಊಟ ಎಂದು ಗೊತ್ತಾಗಿತ್ತು. ಒಂದಷ್ಟು ಗೆಳೆಯರು, ವೈಯೆನ್ಕೆ; ಜೊತೆಗೆ ಬ್ಲೆನ್ಡರ್ಸ್ ಪ್ರೈಡ್’. ಪಿಎಚ್ಡಿ ಮುಗಿದ ನಂತರ ಊಟ. ದಕ್ಷಿಣ ಕನ್ನಡದ ಅಡುಗೆ ಮಾತ್ರ ಗೊತ್ತಿದ್ದ ಅವನ ಮನೆಯಾಕೆ, ಸಾರು, ಪಲ್ಯ, ಹುಳಿ, ಮೊಸರು ಮಾಡಿಟ್ಟಿದ್ದಳು. ಊಟ ಮಾಡುತ್ತಾ ವೈಯೆನ್ಕೆ ‘ನೋ.. ನೋ… ದ.ಕ.ದವರಿಗೆ ಸಾರು ಮಾಡೋಕೆ ಬರೋಲ್ಲ ಅಂದು ಹೇಗೆ ಸಾರು ಮಾಡಬೇಕು ಅಂತ ಪುಟ್ಟ ಭಾಷಣ ಕೊಟ್ಟರು. ಹುಳಿ ಮಾಡೋದು ಹೀಗಲ್ಲ, ನಾಳೆ ಮನೆಗೆ ಬನ್ನಿ ಶ್ರೀಪತಿ ಹೇಳಿಕೊಡ್ತಾನೆ ಅಂದರು. ಮೊಸರು ಮಾಡೋದು ಹೀಗಲ್ಲ. ಹಾಲು ತಂದು ಕೆನೆಗಟ್ಟುವಂತೆ ಕಾಯಿಸಬೇಕು. ನಂತರ ಅದನ್ನು ಮುಚ್ಚಳ ತೆಗೆದಿಟ್ಟು ಆರಲು ಬಿಡಬೇಕು. ಬಿಸಿಯಾರಿದ ನಂತರ ಎರಡು ಚಮಚ ಮಜ್ಜಿಗೆ ಹಾಕಿ ಒಂದು ಮಣೆಯ ಮೇಲಿಡಬೇಕು. ಅದಕ್ಕೊಂದು ಬಟ್ಟೆ ಸುತ್ತಬೇಕು. ಅದಾಗಿ ಏಳು ಗಂಟೆ ನಂತರ ಎತ್ತಿಕೊಂಡು ಹೋಗಿ ಫ್ರಿಜ್ನಲ್ಲಿಡಬೇಕು. ದಕದವರಿಗೆ ಗೊತ್ತಾಗಲ್ಲ’ ಅಂದಿದ್ದರು. ನಾನು ನೀವೇ ಎಲ್ಲರಿಗಿಂತ ದೊಡ್ಡ ದ.ಕ.; ಸಂಪಾ-ದ.ಕ. ಅಂದಿದ್ದೆ.
ವೈಯೆನ್ಕೆಗೆ ಎಲ್ಲೆಲ್ಲೂ. ಎಲ್ಲೆಲ್ಲೋ ಗೆಳೆಯರಿದ್ದರು. ಗೆಳೆಯರು ಕಾರು ಕೊಂಡಾಗ, ಮನೆ ಕಟ್ಟಿದಾಗ ಅವರಿಗೆ ಖುಷಿ. ಎಲ್ಲ ಸಂಭ್ರಮಕ್ಕೂ ಒಂದು ಪಾರ್ಟಿ ಆಗಲೇಬೇಕು. ಚೌಕ ರೂಮು ‘ಗುಂಡು’ ರೂಮು ಆದಾಗಲೇ ಅವರಿಗೆ ತೃಪ್ತಿ. ಕುಡಿಯದೇ ಇದ್ದವರ ಬಗ್ಗೆ ಅವರಿಗೆ ಅಲರ್ಜಿಯೇನೂ ಇರಲಿಲ್ಲ. ಆದರೆ ಅಂಥವರ ಸಂಗ ಅವರಿಗೆ ಇಷ್ಟವಾಗುತ್ತಿರಲಿಲ್ಲ.

ನನ್ನನ್ನು ಕತೆ ಬರೆಯುವಂತೆ, ಅಂಕಣ ಬರೆಯುವಂತೆ ಪ್ರೇರೇಪಿಸಿದ್ದೇ ಅವರು. ನಾನು ಬೆಂಗಳೂರಿಗೆ ಕಾಲಿಟ್ಟ ದಿನಗಳಲ್ಲಿ ವೈಯೆನ್ಕೆ ಹೆಸರು ಸಾಹಿತ್ಯಜಗತ್ತಿಗೆ ಪಾಸ್ಪೋರ್ಟ್ ಮತ್ತು ಪರ್ಮನೆಂಟ್ ವೀಸಾ. ಇಡೀ ದಿನವನ್ನು ಪುಸ್ತಕ, ಸಿನಿಮಾ, ನಾಟಕ, ಗೆಳೆಯರು, ರೇಸು, ಮದ್ಯ ಮತ್ತು ನಿಗೂಢ ಸಂಗತಿಗಳ ಕುರಿತ ವಂಡರ್ನೊಂದಿಗೆ ಕಳೆಯುತ್ತಿದ್ದವರು ಅವರು. ಬೆಳಗ್ಗೆ ಹೋದರೆ ಶೇವ್ ಮಾಡಿಕೊಳ್ಳುತ್ತಲೇ ಇಂಗ್ಲಿಷ್ ಪತ್ರಿಕೆಯ ಕ್ರಾಸ್ವರ್ಡ್ ತುಂಬುತ್ತಾ, ಮಧ್ಯಾಹ್ನ ಹೋದರೆ ಯಾವುದೋ ಪುಸ್ತಕ ಓದುತ್ತಾ, ರಾತ್ರಿ ಹೋದರೆ ‘ಬ್ರಾಹ್ಮಿನ್ಸ್ ಬೇಕರಿ’ಯ ಕಾಂಗ್ರೆಸ್ ಕಡ್ಲೆಬೀಜ ಮತ್ತು ಚೀಸ್ನೊಂದಿಗೆ ‘ಡಿಂಪಲ್’ ಎಂಬ ಸೊಗಸಾದ ಬಾಟಲಿಯಲ್ಲಿರುವ ವಿಸ್ಕಿ ಹೀರುತ್ತಾ ಕೂತಿರುತ್ತಿದ್ದ ವೈಯೆನ್ಕೆ ಮನೆ ನಮ್ಮ ಅನೇಕರ ಪಾಲಿಗೆ ಜಗತ್ತಿನೊಂದು ಕಿಟಕಿಯಾಗಿತ್ತು.

ವೈಯೆನ್ಕೆ ಹುಟ್ಟಿದ್ದು ಮೇ 16. ಅವರನ್ನು ಕೇಳಿದರೆ May or May not ಅನ್ನುತ್ತಿದ್ದರು. ಆದರೆ ಮನೆ ಮುಂದೆ ಮೇ ಫ್ಲವರ್ ಗಿಡ ನೆಟ್ಟಿದ್ದರು. ಅವರ ಮನೆಯ ಹೊರಗಿರುವ ನಾಮಫಲಕದಲ್ಲಿ ವೈ ಎನ್ ಕೃಷ್ಣಮೂರ್ತಿ ಅಂತಿತ್ತು. ಅದರ ಕೆಳಗೆ In ಮತ್ತು out ಅಂತಲೂ ಅದನ್ನು ಅತ್ತಿತ್ತ ಸರಿಸುವುದಕ್ಕೊಂದು ಹಲಗೆಯೂ ಇತ್ತು. ವೈಯೆನ್ಕೆ ಸದಾ ಅದನ್ನು ಇನ್ ಮತ್ತು ಔಟ್ ಗಳ ಮಧ್ಯೆ ಇಟ್ಟಿರುತ್ತಿದ್ದರು. ಕೇಳಿದರೆ ‘ಗುಂಡು ಇನ್ ಆಗುತ್ತೆ, ನಾನು ಔಟ್ ಆಗಲ್ಲ’ ಅಂತ ತಮಾಷೆ ಮಾಡುತ್ತಿದ್ದರು.
(ವೈಯನ್ಕೆ 16.05.1926 - 16.10.1999)

ಮರೆತ ಮಾತು: ವೈಯನ್ಕೆ ಹುಟ್ಟುಹಬ್ಬಕ್ಕೆ ನಾವೊಂದಷ್ಟು ಮಿತ್ರರು ಸೇರಿ ಪಾರ್ಟಿ ಮಾಡುತ್ತಿದ್ದೆವು. ಈ ಸಲದ ಸಂಕಟವೆಂದರೆ ಎಲ್ಲರೂ ಒಟ್ಟಿಗೆ ಸೇರುವಂತಿಲ್ಲ. ವೈಯನ್ಕೆಗೆ ಒಂಟೊಂಟಿಯಾಗಿ ಚಿಯರ್ಸ್ ಹೇಳಬೇಕಾಗಿದೆ. ಸಂಜೆ ಏಳು ಗಂಟೆಗೆ ಒಂದು ಪೆಗ್ ಹಾಕುವವರು ಇವತ್ತು ವೈಯನ್ಕೆ ನೆನಪು ಮಾಡಿಕೊಳ್ಳಿ. ವಿಸ್ಕಿಯ ಘಮ ಹೆಚ್ಚಾಗುತ್ತದೆ.