
ಭಾರತೀಯ ಸಮಾಜದಲ್ಲಿ ಯಾರಾದರೂ 20 ದಾಟಿದರೆ ಸಾಕು, ಪಕ್ಕದ ಮನೆಯವರು, ಪರಿಚಿತರು, ದೂರದ ನೆಂಟರಿಂದ ಹಿಡಿದು ಊರವರವರೆಗೆ ಎಲ್ಲರಿಗೂ ಅವರ ಮದುವೆಯದೇ ಯೋಚನೆಯೇನೋ ಎಂಬಂತೆ ಮದುವೆ ಯಾವಾಗ, ಮದುವೆ ಯಾವಾಗ ಎಂಬ ಪ್ರಶ್ನೆ ಆ ಯುವಕ/ಯುವತಿಯ ಕಿವಿಯಲ್ಲಿ ಮೊಳಗೀ ಮೊಳಗಿ ತಲೆ ಚಿಟ್ಟು ಹಿಡಿದಿರುತ್ತದೆ. ಇಷ್ಟು ಸಾಲದೆಂಬಂತೆ ಅವರಿಗೊಂದು ಜೊತೆ ನೋಡುವ ಕಾಯಕಕ್ಕೆ ಎಲ್ಲೆಲ್ಲಿದ್ದವರೋ ಇಳಿದು ಬಿಡುತ್ತಾರೆ. ಅಬ್ಬಾ, ಅಂತೂ ಇಂತೂ ಮದುವೆಯಾಯ್ತು, ಇನ್ನು ಇವರ ಮದುವೆ ಯಾವಾಗ ಎಂಬ ಪ್ರಶ್ನೆಯಿಂದ ಬಿಡುಗಡೆ ದೊರಕಿತಲ್ಲಾ ಎಂದು ನಿಟ್ಟುಸಿರು ಬಿಡುತ್ತಿದ್ದಂತೆಯೇ ಧುತ್ತೆಂದು ಎದುರಾಗುವ ಮತ್ತೊಂದು ಪ್ರಶ್ನೆ, ಮನೆಗೆ ಮಗು ಬರೋದು ಯಾವಾಗ?!
ಅಮ್ಮನಾದ ಬಳಿಕದ ಸವಾಲುಗಳು ಸುಲಭವಿಲ್ಲ, ಆದರೆ ನೀವು ಒಂಟಿಯಲ್ಲ! .
ಅಲ್ಲಾ, ಈ ಸಮಾಜಕ್ಕೇನು ಬೇರೆ ಕೆಲಸವಿಲ್ಲವೇ? ಯಾರಿಗೆ ಮದುವೆಯಾಗಬೇಕು, ಯಾರಿಗೆ ಮಗುವಾಗಬೇಕು ಎಂದೇ ಲೆಕ್ಕ ಹಾಕುತ್ತಾ ಅದೇ ಕಾಯಕಕ್ಕಿಳಿದ ಕಾರಣಕ್ಕೇ ಬಹುಷಃ ಭಾರತದ ಜನಸಂಖ್ಯೆ 130 ಕೋಟಿ ಮುಟ್ಟಿರುವುದು ಎಂದು ಈ ಪ್ರಶ್ನೆಯ ಕಾಟಕ್ಕೆ ಬೇಸತ್ತ ಪ್ರತಿಯೊಬ್ಬರಿಗೂ ಅನಿಸದಿರದು.
ಅದರಲ್ಲೂ 28ರ ಆಸುಪಾಸಿನಲ್ಲಿ ಮದುವೆಯಾದವರಿಗಂತೂ, ಇನ್ನೂ ಹನಿಮೂನ್ ಫೇಸ್ ಮುಗಿದಿರುವುದಿಲ್ಲ, ಆಗಲೇ ಎಲ್ಲರಿಗೂ ಅವನಿಗೆ/ಅವಳಿಗೆ ವಯಸ್ಸಾಗಿಬಿಟ್ಟರೆ ಎಂಬ ಚಿಂತೆ. ಇದಕ್ಕಾಗಿ ಮದುವೆಯಾದ ಶುರುವಿನಲ್ಲೇ ಶುರು ಹಚ್ಚಿಕೊಳ್ಳುತ್ತಾರೆ ಮಗು ಮಾಡಿಕೊಳ್ಳೋದು ಯಾವಾಗ ಎಂಬ ಪ್ರಶ್ನೆ. ಬರೀ ಪ್ರಶ್ನೆಯಾಗುಳಿಯದೆ ಅದು ಹಿರಿಯರಾಗಿ ತಾವು ಹೇಳಬೇಕಾದುದು ಕರ್ತವ್ಯ ಎಂಬಂತೆ ಎಲ್ಲರೂ ತಮ್ಮ ಮೇಲೇ ಆ ಜೋಡಿಯ ಮಗುವಿನ ಜವಾಬ್ದಾರಿ ಇದೆ ಎಂಬಂತೆ, ಇದು ಮಗು ಮಾಡಿಕೊಳ್ಳಲು ಸರಿಯಾದ ಸಮಯ ಏಕೆಂದರೆ ಎಂದು ಪುಂಖಾನುಪುಂಖವಾಗಿ ಕಾರಣಗಳನ್ನು ಕೊಡುತ್ತಾರೆ. ಅದರಲ್ಲಿ ವಯಸ್ಸಿನಿಂದ ಹಿಡಿದು, ನಮ್ಮ ಮಗುವಿಗೆ ಮಕ್ಕಳಾಗಿ ಅವು ಬೆಳೆಯುವುದನ್ನು ನೋಡುವ ಅದೃಷ್ಟ ಉಳಿಸಿಕೊಡುವವರೆಗೆ ಎಲ್ಲವೂ ಸೇರಿರುತ್ತದೆ. ಇದೆಲ್ಲ ನೋಡುವಾಗ ಮದುವೆಗೆ ಒತ್ತಾಯಿಸಿದ್ದಕ್ಕಿಂತ ಹೆಚ್ಚು ಅರ್ಜೆನ್ಸಿ ಮಗು ಮಾಡುವುದರಲ್ಲಿದೆ ಎನಿಸದಿರದು.
ಕಾಲ ಕೆಟ್ಟೋಗಿಲ್ಲ ಸ್ವಾಮಿ, ನಮ್ಮ ಕಾಲನೇ ಬೆಸ್ಟ್!
ಮೂಗು ತೂರಿಸುವ ನೆರೆಯವರು
ಅಂತೂ ಇವರೆಲ್ಲರಿಂದ ತಪ್ಪಿಸಿಕೊಂಡು ನಗರದ ಅಪರಿಚಿತ ಪರಿಸರದಲ್ಲಿ ಮನೆ ಮಾಡಿಕೊಂಡು ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡಿದ್ದೀರೆಂದು ಇಟ್ಟುಕೊಳ್ಳಿ, ಆಗಲೂ ಅಕ್ಕಪಕ್ಕದ ಮನೆಯ ಆಂಟಿಯರಿಗೆ ಪರಿಚಯವಿಲ್ಲದಿದ್ದರೂ ಇವರಿಗೆ ಮಕ್ಕಳಾಗಿಲ್ಲವೇ ಎಂಬ ಚಿಂತೆ ಕಾಡುತ್ತಿರುತ್ತದೆ. ಕಡೆಗೊಂದು ದಿನ ಮಾತಿಗೆ ಸಿಕ್ಕಾಗ ಅವರು ಆ ಕುರಿತು ತನಿಖೆಯನ್ನೂ ಆರಂಭಿಸುತ್ತಾರೆ. ಕುಟುಂಬ ಕಲ್ಯಾಣ ಯೋಜನೆ ಏನಿದೆ ಎಂದು ವಿಚಾರಿಸಿ, ನಿಂತಲ್ಲಿಯೇ ನಾಲ್ಕು ಸಲಹೆಗಳನ್ನೂ ತೂರುತ್ತಾರೆ.
ಸ್ತ್ರೀರೋಗ ತಜ್ಞರೂ ಹೊರತಲ್ಲ
ಸ್ತ್ರೀರೋಗ ತಜ್ಞರು ಕೂಡಾ ಅವರ ಬಳಿ ಯಾವ ಕಾರಣಕ್ಕೆ ಹೋದರೂ ಮಗು ಮಾಡಿಕೊಳ್ಳುವಂತೆ ಸಲಹೆಗಳನ್ನು ಕೊಡುತ್ತಾರೆ. ಆದರೆ ಇದು ಮಾತ್ರ ಪುಕ್ಕಟೆಯಲ್ಲ! ಅವರ ಬಳಿ ಹೋಗಿದ್ದಕ್ಕೆ ಫೀಸ್ ಕೊಡಲೇಬೇಕಲ್ಲ... ವೈದ್ಯಕೀಯ ದೃಷ್ಟಿಯಿಂದ ಆಕೆ ಹೇಳಿದ್ದೆಲ್ಲ ನಿಜವೇ ಇರಬಹುದು. ಆದರೆ, ಮಗುವಿನ ವಿಷಯದಲ್ಲಿ ಪ್ರತಿ ದಂಪತಿಗೂ ಅವರದೇ ಆದ ಯೋಚನೆಗಳು, ಯೋಜನೆಗಳಿರುತ್ತವೆ ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಏಕೆ?
ಆರೋಗ್ಯಕರವಾಗಿರಲಿ ಮಕ್ಕಳ ಡಯಟ್, ದೂರವಿರಲಿ ಬ್ರೆಡ್ ಬಿಸ್ಕೇಟ್ ಡೋನಟ್!
ಪೋಷಕರ ಮಂತ್ರ- ವಯಸ್ಸು ಹಿಂದೋಡುವುದಿಲ್ಲ
ಮದುವೆಯಾದ ಬಳಿಕ ತಿಂಗಳುಗಳು ವರ್ಷವಾಗಿ ಬದಲಾಗುತ್ತಿದ್ದಂತೆಯೇ ಪೋಷಕರು ಎಮೋಷನಲ್ ಬ್ಲ್ಯಾಕ್‌ಮೇಲ್ ಶುರು ಹಚ್ಚಿಕೊಳ್ಳುತ್ತಾರೆ. ವಯಸ್ಸೇನೂ ಹಿಂದೋಡುವುದಿಲ್ಲ ಎಂದು ಅವರ ಸಲಹೆ ಆರಂಭವಾಗುತ್ತದೆ. ಈ ಟ್ಯಾಕ್ಟಿಕ್ ಉಪಯೋಗಕ್ಕೆ ಬರಲಿಲ್ಲವೆಂದರೆ ಮಗಳ ಮಗು ಹೆರುವ ವಯಸ್ಸಿನಿಂದ ತಮಗೆ ವಯಸ್ಸಾಗುತ್ತಿರುವುದರ ಕುರಿತು ಮಾತು ಹೊರಳಿಸುತ್ತಾರೆ. ಹೇಗೆ ಮಗಳು ಅವರನ್ನು ಮೊಮ್ಮಕ್ಕಳೊಂದಿಗೆ ಆಡುವ ಸಂತೋಷದಿಂದ ವಂಚಿಸುತ್ತಿದ್ದಾಳೆ ಎಂದು ಆರೋಪಿಸತೊಡಗುತ್ತಾರೆ.
ಗುಡ್ ನ್ಯೂಸ್
ಈ ಸಂದರ್ಭದಲ್ಲಿ ಇಡೀ ಸಮಾಜಕ್ಕೆ ತನಗೆ ಮಗುವಾಗುವುದೇ ಗುಡ್ ನ್ಯೂಸಾ, ಸಮಾಜದಲ್ಲಿ ಬೇರೆ ಗುಡ್ ನ್ಯೂಸ್‌ಗಳೇ ಇಲ್ಲದಷ್ಟು ಅದು ಕೆಟ್ಟಿದೆಯೇ ಎಂಬ ಅನುಮಾನವೂ ಕಾಡುತ್ತದೆ. ಉದ್ಯೋಗದಲ್ಲಿ ತಮ್ಮ ಉನ್ನತಿ, ಬದುಕಿನಲ್ಲಿ ಅಭಿವೃದ್ಧಿ ಇದ್ಯಾವುದರ ಬಗ್ಗೆಯೂ ಯಾರಿಗೂ ಪರಿವೇ ಇರುವುದಿಲ್ಲ. ಮಕ್ಕಳ ಕುರಿತು ಆ ಜೋಡಿಯ ಮನಸ್ಥಿತಿ ಏನಿದೆ, ಆರ್ಥಿಕ ಸ್ಥಿತಿಗತಿ ಏನಿದೆ ಯಾವುದಕ್ಕೂ ಯಾರೂ ಬೆಲೆ ಕೊಡುವಂತೆನಿಸುವುದಿಲ್ಲ. ಇದೆಲ್ಲ ನೋಡಿದರೆ ಈಗ ಮಕ್ಕಳನ್ನು ಹೊಂದುವುದು ಒಂದು ಕುಟುಂಬದ ನಿರ್ಧಾರವಾಗಿ ಉಳಿದಿಲ್ಲ. ಬದಲಿಗೆ ಇಡೀ ಸಮಾಜದ ನಿರ್ಧಾರವಾಗಿದೆ. ಮದುವೆಯಾದ ಬಳಿಕ ಮಕ್ಕಳಾಗಲೇಬೇಕು ಎಂಬುದು ಸಾಮಾಜಿಕ ಕಟ್ಟುಪಾಡಿನಂತೆ ಕಾಣುತ್ತಿದೆ.
ನಿಮ್ಮ ಮಗು ತಿರುಗಿ ಹೇಳುತ್ತದೆಯೇ? ಹೀಗ್ ಮಾಡಿ!
ದಯವಿಟ್ಟು ನಿಲ್ಲಿಸಿ
ದಂಪತಿಯು ಅವರಾಯ್ಕೆಯಿಂದಲೋ ಅಥವಾ ಅನಿವಾರ್ಯವಾಗಿಯೋ ಮಗು ಹೊಂದದಿದ್ದರೆ ಅದು ಅವರ ಆಯ್ಕೆ. ಅದನ್ನು ಗೌರವಿಸಬೇಕಾದುದು, ಅವರ ವೈಯಕ್ತಿಕ ಜೀವನದಲ್ಲಿ ಮೂಗು ತೂರಿಸಬಾರದು ಎಂಬುದು ಕಾಮನ್ ಸೆನ್ಸ್. ವಯಸ್ಸು ಮಗು ಮಾಡಿಕೊಳ್ಳುವ ಸಂಬಂಧ ಒಂದು ನಿರ್ಧರಿತ ಅಂಶ ನಿಜ. ಆದರೆ, ಇದು ಈಗಿನ ಕಾಲದಲ್ಲಿ ಗೊತ್ತಿಲ್ಲದವರ್ಯಾರಿದ್ದಾರೆ? ಇಷ್ಟಕ್ಕೂ ಸ್ಟ್ರೆಸ್ ಇದ್ದರೆ ಮಗುವಾಗುವುದು ಕಷ್ಟ ಸಾಧ್ಯ ಎಂದು ವಿಜ್ಞಾನವೇ ಹೇಳಿದೆ. ಅಂಥದರಲ್ಲಿ ಮಗು ಮಾಡಿಕೊಳ್ಳಿ ಎಂಬ ಎಲ್ಲರ ಒತ್ತಡವೇ ಆಕೆಗೆ ಮಗುವಾಗದಿರುವಂತೆ ಮಾಡಬಹುದು! ಹಾಗಾಗಿ, ಜೋಡಿಯೊಂದು ಸಿಕ್ಕರೆ ಸಾಕು, ಗುಡ್ ನ್ಯೂಸ್ ಯಾವಾಗ ಎಂದು ಕೇಳುವ ದುರಭ್ಯಾಸ ಬಿಟ್ಟುಬಿಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.