
ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಬ್ರಿಟನ್‌ನ ರಾಜಕುಮಾರ ವಿಲಿಯಂ ಗಣ್ಯರನ್ನು ನಮಸ್ಕರಿಸುತ್ತಾ ಸ್ವಾಗತಿಸಿದ್ದು ವಿಡಿಯೋ ಆಗಿ ವೈರಲ್ ಆಗಿತ್ತು. ಹಾಗೆಯೇ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕೂಡ ತಮ್ಮ ದೇಶದ ಪ್ರಜೆಗಳಿಗೆ ಭಾರತೀಯ ರೂಢಿಯಂತೆ ನಮಸ್ಕರಿಸಿ, ಶೇಕ್‌ಹ್ಯಾಂಡ್ ಮಾಡುವುದನ್ನು ಅವಾಯ್ಡ್ ಮಾಡಿ ಎಂದು ಹೇಳಿದ್ದರು. ಜಗತ್ತು ನಿಧಾನವಾಗಿ ಭಾರತೀಯ ರೂಢಿಯಾದ, ಎರಡೂ ಕೈಗಳನ್ನು ಎದೆಯ ಮುಂದೆ ತಂದು ಜೋಡಿಸಿ ಮಾಡುವ ನಮಸ್ತೆ ಅಥವಾ ನಮಸ್ಕಾರವನ್ನು ರೂಢಿಸಿಕೊಳ್ಳಲು ಆರಂಭಿಸಿದೆ ಎಂದು ನಂಬಲು ಕಾರಣಗಳಿವೆ. ಆದರೆ ಭಾರತೀಯ ನಮಸ್ಕಾರದ ಹಾಗೆಯೇ, ಶೇಕ್‌ಹ್ಯಾಂಡ್ ಅಲ್ಲದ, ಆದರೆ ಭೇಟಿಯಾಗುವಾಗ ಗೌರವ ಸೂಚಿಸುವಾಗ ಮಾಡುವ ಕೆಲವು ಇತರ ಸನ್ನೆಗಳು ಇವೆ. ಉದಾಹರಣೆಗೆ, ಜಪಾನಿನ ಪದ್ಧತಿಯಲ್ಲಿ ಯಾರಾದರೂ ಅಪರಿಚಿತರು ಅಥವಾ ಪರಿಚಿತರು ಎದುರಾದರೆ ತಲೆಬಾಗಿ ಗೌರವ ಸೂಚಿಸಲಾಗುತ್ತದೆ. ದಕ್ಷಿಣ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದ ಕೆಲವು ಕಡೆ ಬಲಗೈಯನ್ನು ಮುಷ್ಟಿ ಕಟ್ಟಿ ಗಾಳಿಯಲ್ಲಿ ಎತ್ತಲಾಗುತ್ತದೆ. ಇನ್ನು ಕೆಲವು ಕಡೆ ಹೈಫೈ ಎಂಬಂತೆ ಕೈಯನ್ನು ತೋರಿಸಲಾಗುತ್ತದೆ. ಇನ್ನು ಕೆಲವೆಡೆ ಥಂಬ್ಸ್ ಅಪ್ ಎಂಬಂತೆ ಹೆಬ್ಬೆರಳನ್ನು ಎತ್ತಿತೋರಿಸಿ ಗೌರವ ಸಲ್ಲಿಸಲಾಗುತ್ತದೆ. ಕೆಲವೆಡೆ ಸುಮ್ಮನೇ ಕೈಯನ್ನೆತ್ತಿ ಗಾಳಿಯಲ್ಲಿ ಅಲ್ಲಾಡಿಸಿದರೂ ಸಾಕು, ನಮನ ಸಲ್ಲಿಸಿದಂತೆ.
ಇದೇನು ಕೊರೋನಾ ಹೋಗುವವರೆಗೆ ಮಾತ್ರವೇ ಎಂದು ತಿಳಿಯಬೇಡಿ. ಬಹುಶಃ ಕೊರೋನಾ ವೈರಸ್ ಹೋದ ಮೇಲೂ ಹ್ಯಾಂಡ್‌ಶೇಕ್‌ನ ಮೇಲಿನ ಭಯ ಉಳಿಯುವಂತೆ ಕಾಣುತ್ತಿದೆ. ಉದಾಹರಣೆಗೆ, ಶ್ವೇತಭವನದ ಸಲಹೆಗಾರ ಡಾ.ಆಂಥನಿ ಫೌಸಿ ಅವರು, ನಾವಿನ್ನು ಶೇಕ್‌ಹ್ಯಾಂಡ್ ಬಿಟ್ಟುಬಿಡುವುದು ಕ್ಷೇಮ. ಕೊರೋನಾ ಬಂದು ಹೋದ ಮೇಲೂ ಕೂಡ ಎಂದು ಹೇಳಿದ್ದಾರೆ. ಸಿಲಿಕಾನ್ ವ್ಯಾಲಿಯ ಆಡಳಿತಾತ್ಮಕ ಕಚೇರಿಯಲ್ಲಿ ಈಗ ಭೇಟಿ ನೀಡುವ ಯಾರೂ ಶೇಕ್‌ಹ್ಯಾಂಡ್ ಕೊಡುವಂತಿಲ್ಲ. ಕಳೆದ ಒಂದು ತಿಂಗಳಿನಿಂದ ಶೇಕ್‌ಹ್ಯಾಂಡ್‌ನ ದೆಸೆಯೇ ಬದಲಾಗಿದೆ. ಅಮೆರಿಕದ ಪ್ರತಿಷ್ಠತ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್‌ನ ಮ್ಯಾಗಜಿನ್‌ನಲ್ಲಿ ಶೇಕ್‌ಹ್ಯಾಂಡ್‌ನ್ನು ಸದ್ಯಕ್ಕೆ ಜಗತ್ತಿನಾದ್ಯಂತ ನಿಷೇಧಿಸಬೇಕು ಅಲ್ಲವೇ ಎಂಬ ಬಗ್ಗೆ ಚರ್ಚೆಗಳು ನಡದಿವೆ. ಹಲವು ಆಸ್ಪತ್ರೆಗಳು ಹೀಗೆ ಬೋರ್ಡ್ ಹಾಕಿವೆ: ಸೋಂಕು ಒಬ್ಬರಿಂದೊಬ್ಬರಿಗೆ ಹರಡುವುದನ್ನು ತಪ್ಪಿಸಲು ನಾವು ಈ ಪ್ರದೇಶದಲ್ಲಿ ಶೇಕ್‌ಹ್ಯಾಂಡನ್ನು ನಿಷೇಧಿಸಿದ್ದೇವೆ.
ಮಾಸ್ಕ್ ಬಳಕೆ ಬಗ್ಗೆ ಡಾ. ದೇವಿ ಶೆಟ್ಟಿ ಅಮೂಲ್ಯ ಸಲಹೆ
ಕೊಲರಾಡೊ ಯೂನಿವರ್ಸಿಟಿಯ ತಜ್ಞರು ಈ ಹಿಂದೆ ಒಂದು ಅಧ್ಯಯನ ಮಾಡಿದ್ದರು, ಅದರ ಪ್ರಕಾರ, ನಮ್ಮ ಕೈಯಲ್ಲಿ ಸುಮಾರು 150 ಬೇರೆ ಬೇರೆ ಪ್ರಭೇದದ ೩೨೦೦ ಬ್ಯಾಕ್ಟೀರಿಯಾಗಳು ಇರುತ್ತವೆ. ನಾವು ನಮ್ಮ ಜೀವಮಾನದಲ್ಲಿ ಸುಮಾರು 15 ಸಾವಿರ ಬಾರಿ ಇತರರ ಕೈ ಕುಲುಕಬಹುದು. ಅಂದರೆ ಎಷ್ಟು ಬ್ಯಾಕ್ಟೀರಿಯಾಗಳು, ವೈರಸ್‌ಗಳು ಕೈ ಬದಲಾಯಿಸಬಹುದು ಊಹಿಸಿ, ಎಷ್ಟು ಬಗೆಯ ರೋಗಗಳು ಹರಡಬಹುದು ಎಂದು ಅಂದಾಜಿಸಬಹುದು. ರೋಗಗಳು ಮಾತ್ರವೇ ಹರಡಬೇಕಿಲ್ಲ. ಆರೋಗ್ಯಕಾರಿ ಬ್ಯಾಕ್ಟೀರಿಯಾಗಳು ಕೈ ಬದಲಾಗಬಹುದು. ಅದೇನೇ ಇದ್ದರೂ, ಸದ್ಯಕ್ಕೆ ಕೈ ಕುಲುಕುವಿಕೆಯನ್ನು ಕೈ ಬಿಡುವಂತೆಯೂ, ಬದಲಾಗಿ ಮೊಣಕೈಗಳನ್ನು ತಾಕಿಸಿಕೊಳ್ಳುವ ಗ್ರೀಟಿಂಗ್ ವಿಧಾನವನ್ನು ಅಳವಡಿಸಿಕೊಳ್ಳಬಹುದೆಂದೂ ವಿಶ್ವ ಆರೋಗ್ಯ ಸಂಸ್ಥೆಯೇ ಸೂಚಿಸಿದೆ.
ಅಂದ ಹಾಗೆ, ಕೈ ಕುಲುಕುವ ರೂಢಿ ಬಂದದ್ದು ಹೇಗೆ ನಿಮಗೆ ಗೊತ್ತೆ? ಇದು ಆದಿವಾಸಿಗಳು ಪರಸ್ಪರ ಎದುರಾದಾಗ, ತಮ್ಮಲ್ಲಿ ಯಾವ ಶಸ್ತ್ರವೂ ಇಲ್ಲ, ಆದ್ದರಿಂದ ನಾನು ನಿನಗೆ ವೈರಿಯಲ್ಲ ಎಂದು ಸ್ಪಷ್ಟಪಡಿಸಲು ಅನುಸರಿಸುತ್ತಿದ್ದ ವಿಧಾನವಂತೆ. ಗ್ರೀಸ್ ಸಾಮ್ರಾಜ್ಯದಲ್ಲಿ ಇದು ಪರಸ್ಪರ ಹೋರಾಟವಿಲ್ಲದ ಶಾಂತಿಯನ್ನು ಒಪ್ಪಿದ ಚರ್ಯೆಯಾಗಿ ಬದಲಾಯಿತು. ಹಾಗೇ ಇಂದಿಗೂ ನಡೆದುಕೊಂಡು ಬಂದಿದೆ.
ಮಕ್ಕಳಿಗೆ ಕಲಿಸಲೇ ಬೇಕಾದ ಸ್ವಚ್ಛತಾ ಪಾಠಗಳು
ಶೇಕ್‌ಹ್ಯಾಂಡ್ ಎಂಬುದೊಂದು ಕಲೆ; ಅದನ್ನು ಪಳಗಿಸಿಕೊಂಡವನು ಕಾರ್ಪೊರೇಟ್ ವಲಯದಲ್ಲಿ ಮಹತ್ತಾದುದನ್ನು ಸಾಧಿಸಬಲ್ಲ ಎಂದೆಲ್ಲ ಮ್ಯಾನೇಜ್‌ಮೆಂಟ್ ಗುರುಗಳು ಭಾಷಣ ಮಾಡುತ್ತಿದ್ದರು. ಇನ್ನು ಮುಂದೆ, ಶೇಕ್‌ಹ್ಯಾಂಡ್ ಬಿಡುವುದು ಹೇಗೆ, ಬೇರೆ ಥರ ಗ್ರೀಟ್ ಮಾಡುವುದು ಹೇಗೆ ಎಂದೆಲ್ಲ ಭಾಷಣ ಮಾಡಲು ಇವರೆಲ್ಲ ವಿಷಯ ಹುಡುಕಬೇಕಾದೀತೋ ಏನೋ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.