ನಮಗೆ ಬದಲಾವಣೆ ಸಾಧ್ಯವಿದೆ. ಸಾಧ್ಯವೇ ಇಲ್ಲವೆಂದು ಹೇಳಿಕೊಂಡು ಬರಲಾಗುತ್ತಿತ್ತು. ನಾವು ಐಷಾರಾಮಿ, ಉಪಭೋಗತನದ ಜೀವನಕ್ಕೆ ಒಗ್ಗಿಕೊಂಡುಬಿಟ್ಟಿದ್ದೆವು. ಈಗ ಅಷ್ಟೇನೂ ಅಗತ್ಯವಿಲ್ಲ ,ಮನುಷ್ಯನಿಗೆ ಬದುಕಲು ಸರಳವಾದ ಕೆಲವು ಸಂಗತಿಗಳು ಸಾಕು ಎಂದು ಅರ್ಥವಾಗುತ್ತಿದೆ.
ಒಂದು ತಿಂಗಳ ಹಿಂದೆ ಜನರಿಂದ ಗಿಜಿಗುಡುತ್ತಿದ್ದ ಪೇಟೆಗಳ ಬೀದಿಗಳಲ್ಲಿ ಈಗ ನಡೆದಾಡಿದರೆ ನೀರವ ಮೌನ ಕಾಡುತ್ತದೆ. ಹೌದೋ ಅಲ್ಲವೋ ನೀವೇ ನೋಡಿ.
ಆಸ್ಪತ್ರೆಗಳನ್ನು, ಖಾಸಗಿ ಕ್ಲಿನಿಕ್‌ಗಳನ್ನು ನೋಡಿ. ಅಲ್ಲಿ ಸದಾ ಜನ ತುಂಬಿ ತುಳುಕಾಡುತ್ತಿದ್ದರು. ವೈದ್ಯರು ಸದಾ ಬ್ಯುಸಿ. ಮೆಡಿಕಲ್‌ಗಳವರಿಗೆ ತುರಿಸಲೂ ಪುರುಸೊತ್ತಿಲ್ಲ. ರೋಗಿಗಳು ಕ್ಲಿನಿಕ್‌ಗಳಿಂದ ಮೆಡಿಕಲ್‌ಗೂ ಅತ್ತಿಂದಿತ್ತಲೂ ಓಡಾಡುವುದು ರೂಢಿಯಾಗಿತ್ತು. ಈಗ ಮೆಡಿಕಲ್‌ಗಳೇನೋ ಇವೆ. ಆದರೆ ಮೊದಲಿನ ವ್ಯಾಪಾರವಿಲ್ಲ. ಆಸ್ಪತ್ರೆಗಳೂ ತೆರೆದಿವೆ. ಆದರೆ ಜನ ಬರುತ್ತಿಲ್ಲ. ಹಾಗಾದರೆ ಮನುಷ್ಯರನ್ನು ಕಾಡುತ್ತಿದ್ದ ರೋಗಗಳೆಲ್ಲ ಏಕಾಏಕಿ ಮಾಯವಾಗಿಬಿಟ್ಟವೇ?
ಲಾಕ್‌ಡೌನ್ ಎಫೆಕ್ಟ್: ಟೆಕ್ಕಿಗಳಿಂದ ತರಕಾರಿ ಮಾರಾಟ
ಹಾಗೇನೂ ಇಲ್ಲ. ಇದರ ಹಿಂದೆ ಒಂದು ಸರಳ ಕಾರಣವಿದೆ. ಲಾಕ್‌ಡೌನ್ ಕಾರಣದಿಂದ ಕೆಲಸಗಳು ನಿಂತುಹೋಗಿವೆ. ಫ್ಯಾಕ್ಟರಿಗಳು ಮುಚ್ಚಿವೆ. ಹಲವು ಕಚೇರಿ ಕೆಲಸಗಳು ಮನೆಯಿಂದಲೇ ನಡೆಯುತ್ತಿವೆ. ಐಟಿ ಕಂಪನಿಗಳಂತೂ ಅರ್ಧ ಮಂದಿಗೆ ಮಾತ್ರ ಕೆಲಸ ಕೊಟ್ಟು, ಉಳಿದರ್ಧ ಮಂದಿಯನ್ನು ಎಲ್ಲಿ ಕಳಚಿಕೊಳ್ಳುವುದು ಎಂಬ ಚಿಂತೆಯಲ್ಲಿವೆ. ಹೀಗಾಗಿ, ಬೀದಿಗಳಲ್ಲಿ ಟ್ರಾಫಿಕ್ ಇಲ್ಲ. ಓಡಾಡುವ, ಕಚೇರಿ ಸಮಯ ಮೀರಿತೆಂದು ಅರ್ಜೆಂಟ್ ಮಾಡಿ ಟೆನ್ಷನ್ ಮಾಡಿಕೊಳ್ಳುವ, ಮುಂದಿನ ಗಾಡಿಯವನಿಗೆ ಗುದ್ದಿ ಕೈಕೈ ಮಿಲಾಯಿಸುವ, ಯರ್ರಾಬಿರ್ರಿ ಓಡಿಸಿ ಆಕ್ಸಿಡೆಂಟ್ ಅಗುವ ಪ್ರಮೇಯವಿಲ್ಲ. ಮನೆಯಲ್ಲಿರುವವರೂ ತಾವು ಆಗಷ್ಟೇ ಬೇಯಿಸಿಕೊಂಡ ತಾಜಾ ಮನೆ ಆಹಾರವನ್ನೇ ಸೇವಿಸುತ್ತಿದ್ದಾರೆ. ಎಲ್ಲರೂ ಅಂತರ ಕಾಯ್ದುಕೊಂಡು, ಆಗಾಗ ಕೈ ತೊಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸೀಸನ್‌ನಲ್ಲಿ ವಕ್ಕರಿಸುತ್ತಿದ್ದ ಸಣ್ಣ ಪುಟ್ಟ ಕಾಯಿಲೆಗಳೂ ಇಲ್ಲ. ಹೀಗಾಗಿ ಆಸ್ಪತ್ರೆಗಳೂ ಕೂಲ್ ಕೂಲ್.
ಕಚೇರಿಗೆ ಹೋಗಿ ಬರುತ್ತಿದ್ದಾಗ ಮನೆಯ ಖರ್ಚು ವೆಚ್ಚ ಎಷ್ಷಿರುತ್ತಿತ್ತು ನೋಡಿ. ಗಾಡಿಗೆ ಪೆಟ್ರೋಲ್ ಹಾಕಿಸಲು ಐದು ಸಾವಿರ ರೂಪಾಯಿ, ವಾರಕ್ಕೊಮ್ಮೆ ಬೇಕರಿ ಐಟಂಗಳಿಗೆ ಒಂದು ಸಾವಿರ ರೂಪಾಯಿ, ವಾರಕ್ಕೊಮ್ಮೆ ಕುಟುಂಬ ಸಮೇತ ಹೋಟೆಲಿಗೆ ಹೋದರೆ ಎರಡು ಸಾವಿರ ರೂಪಾಯಿ. ಇತರ ಖರ್ಚುಗಳು. ಈಗ ಆ ಖರ್ಚುಗಳು ಎಲ್ಲಿ ಹೋದವು? ಖರ್ಚಾಗದೆ ತಮ್ಮಲ್ಲೇ ಉಳಿದಿವೆ. ಖರ್ಚು ಮಾಡೋಣ ಎಂದರೂ ಹೊರಗೆ ಹೋಗಲಾಗದು, ಹೋಟೆಲ್‌ಗಳು ಓಪನ್ ಇಲ್ಲ. ಪಾರ್ಸೆಲ್ ತರುವ ಕ್ರಮವೂ ಬಹುತೇಕ ನಿಂತುಹೋಗಿದೆ. ಇವೆಲ್ಲವೂ ಮನುಷ್ಯನ ಗಳಿಕೆಯನ್ನು ಅವನಲ್ಲೇ ಉಳಿಸಿದೆ. ಅನಗತ್ಯ ಖರ್ಚುವೆಚ್ಚಗಳನ್ನು ಕಡಿಮೆ ಮಾಡಿದೆ.
ನಮ್ಮ ಬೀದಿಗಳನ್ನು ನೋಡಿದರೆ ಸ್ಮಶಾನ ನೋಡಿದಂತೆ ಆಗುತ್ತದಾದರೂ, ಅಲ್ಲಿ ಗಿಜಿಗುಡುವ ವಾಹನ ಸಂದಣೀ ಇಲ್ಲವಾದ್ದರಿಂದ ಬೀಡಾಡಿ ನಾಯಿಗಳೂ, ದನಗಳೂ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಅಲ್ಲಲ್ಲಿ ನವಿಲು, ಕಾಡಾನೆ, ಹಂದಿ, ಜಿಂಕೆಗಳೂ ರೋಡಿಗೆ ಬಂದ ನಿದರ್ಶನಗಳು ಉಂಟು. ಅಂದರೆ ಪ್ರಕೃತಿ ತನ್ನ ನಿಜವಾದ ರೂಪವನ್ನು ತೋರಿಸಲು ಆರಂಭಿಸಿದೆ. ಒಂದು ಕಾಲದಲ್ಲಿ ಈ ರೋಡುಗಳಲ್ಲಿ ಮನುಷ್ಯರು ಈ ಕಡೆಯಿಂದ ಆ ಕಡೆಗೆ ದಾಟಲು ಸಾಧ್ಯವಾಗದಷ್ಟು ವಾಹನ ಜಂಗುಳಿ ಇರುತ್ತಿತ್ತು. ಮಕ್ಕಳೋ, ವೃದ್ಧರೋ ಆ ಕಡೆಗೆ ದಾಟಲು ಆಗುತ್ತಲೇ ಇರಲಿಲ್ಲ. ಈಗ ಮಕ್ಕಳು ಅಲ್ಲಿ ಆರಾಮವಾಗಿ ಕ್ರಿಕೆಟ್ ಆಡುತ್ತಾರೆ. ಹಾಗಿದ್ದರೆ ನಮ್ಮ ಬ್ಯುಸಿ ಬ್ಯುಸಿ ಎಲ್ಲ ಎಲ್ಲಿ ಹೋಯಿತು?
ಪ್ರಧಾನಿ ಮೋದಿಯವರಿಗೆ ಬೆಸ ಸಂಖ್ಯೆ ಮೇಲೇಕೆ ಅಷ್ಟೊಂದು ಪ್ರೀತಿ?
ನಮ್ಮ ವಾರ್ಡ್‌ರೋಬ್‌ಗಳನ್ನು ನೋಡಿ. ಅಲ್ಲಿ ಉಪಯೋಗಿಸದ ನೂರಾರು ಶರ್ಟ್‌ಗಳು, ಹತ್ತಾರು ಪ್ಯಾಂಟ್‌ಗಳು. ಕಳೆದ ಒಂದು ತಿಂಗಳ ಅವಧಿಯಲ್ಲಿ ನಾವು ಉಪಯೋಗಿಸಿದ್ದು ಎರಡು ಶರ್ಟು, ಎರಡು ಲುಂಗಿ ಮಾತ್ರವೇ! ಅಷ್ಟರಲ್ಲೇ ನಾವು ಬದುಕಿದ್ದೇವೆ! ಹಾಗಿದ್ದರೆ ಈ ನೂರಾರು ಶರ್ಟುಗಳ ಪ್ಯಾಂಟುಗಳ ಅಗತ್ಯವಾದರೂ ಏನು? ಮದುವೆ ಛತ್ರಗಳೂ ಮೌನವಾಗಿವೆ. ಎಲ್ಲೋ ಕೆಲವು ಕಡೆ, ಮನೆಗಳಲ್ಲೇ ಸಣ್ಣಪುಟ್ಟದಾಗಿ ಮೊದಲೇ ನಿಶ್ಚಯಿಸಿದ ಮದುವೆಗಳು ಮುಗಿದುಹೋಗಿವೆ. ಕೆಲವೇ ಮಂದಿ ಬಂಧುಮಿತ್ರರ ಸಮ್ಮುಖದಲ್ಲಿ. ಹಾಗಿದ್ದರೆ, ಸಾವಿರಾರು ಜನ ಸೇರಿಸಿ ನಾವು ಮಾಡುತ್ತಿದ್ದ ಅದ್ದೂರಿತನಕ್ಕೆ ಅರ್ಥವಾದರೂ ಏನಿತ್ತು? ಏನೂ ಇರಲಿಲ್ಲ. ಆದರೂ ಮಾಡುತ್ತಿದ್ದೆವು. ರೈಲು, ವಿಮಾನ, ಬಸ್ಸು ನಿಲ್ದಾಣಗಳು ನಿರ್ಜನವಾಗಿವೆ. ಹುಚ್ಚು ಹಿಡಿದವರಂತೆ ನಾವು ಸುತ್ತಾಡುತ್ತಿದ್ದೆವಲ್ಲ! ಈಗ ಆ ಸುತ್ತಾಡುವ ವ್ಯಾಮೋಹ ಎಲ್ಲಿ ಹೋಯಿತು?
ವೈದ್ಯೋ ನಾರಾಯಣೋ ಹರಿಃ: ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ
ನಮಗೆ ಬದಲಾವಣೆ ಸಾಧ್ಯವಿದೆ. ಸಾಧ್ಯವೇ ಇಲ್ಲವೆಂದು ಹೇಳಿಕೊಂಡು ಬರಲಾಗುತ್ತಿತ್ತು. ನಾವು ಐಷಾರಾಮಿ, ಉಪಭೋಗತನದ ಜೀವನಕ್ಕೆ ಒಗ್ಗಿಕೊಂಡುಬಿಟ್ಟಿದ್ದೆವು. ಈಗ ಅಷ್ಟೇನೂ ಅಗತ್ಯವಿಲ್ಲ ,ಮನುಷ್ಯನಿಗೆ ಬದುಕಲು ಸರಳವಾದ ಕೆಲವು ಸಂಗತಿಗಳು ಸಾಕು ಎಂದು ಅರ್ಥವಾಗುತ್ತಿದೆ.