ಸ್ಕಾಚ್ ವಿಸ್ಕಿ ಕುಡಿಯುವವನಿಗೆ ಇಲ್ಲ ಮಾರ್ಯಾದೆ! ಎಲ್ಲಿಗೆ ಬಂತು ಕಾಲ?

By Suvarna News  |  First Published Aug 25, 2022, 4:13 PM IST

ಕೈಲಾಸಂ ಸಿಗರೇಟು ಸೇದುವುದು, ಹೊಗೆಯಲ್ಲೇ ಹೆಸರು ಬರೆಯುವುದು, ಅವರು ಕುಡಿದಾಗ ಆಡುತ್ತಿದ್ದ ಮಾತು, ಅವುಗಳ ಸ್ವಾರಸ್ಯ ಎಲ್ಲವನ್ನು ರುಚಿಕಟ್ಟಾಗಿ ವರ್ಣಿಸುತ್ತಿದ್ದರು. ಆ ವರ್ಣನೆಯನ್ನು ಕೇಳುವಾಗೆಲ್ಲ ಕುಡಿತ ತಪ್ಪು ಅನ್ನಿಸುತ್ತಲೇ ಇರಲಿಲ್ಲ. ಕೈಲಾಸಂ ನಮ್ಮ ಕಣ್ಣಿಗೆ ಕುಡುಕರಂತೆ ಕಾಣಲಿಲ್ಲ. ಅದು ಬದುಕನ್ನು ಪ್ರೀತಿಸುವ, ಆರಾಧಿಸುವ, ಅನುಭವಿಸುವ ಒಂದು ಸರಳ ವಿಧಾನ ಅನ್ನಿಸುತ್ತಿತ್ತು.


Jogi, Kannadaprabha

ಕುಡುಕರಿಗೀಗ ಮರ್ಯಾದೆಯೇ ಇಲ್ಲ. ಆಲ್ಕೋಹಾಲು ಎಂಬ ಪರಮ ಪವಿತ್ರ ಎನರ್ಜಿ ಪೇಯ ಕಸಕ್ಕಿಂತ ಕೀಳಾಗಿಬಿಟ್ಟಿದೆ. ಟೀವಿಗಳಲ್ಲಿ ಸಿನಿಮಾಗಳಲ್ಲಿ ಮದ್ಯದ ಜಾಹೀರಾತು ತೋರಿಸುವಂತಿಲ್ಲ. ಅದನ್ನು ಸೋಡಾ ಅಂತ ತೋರಿಸಿ ಸಮಾಧಾನಪಟ್ಟುಕೊಳ್ಳಬೇಕು. ಕುಡುಕರನ್ನು ಹಿಡಿಯುವುದಕ್ಕೆಂದೇ ವಿಶೇಷ ತನಿಖಾ ದಳ ಬೇರೆ. ಅವರ ಮೂಗೇ ಬ್ರೆಥ್ ಅನಲೈಸರ್. ಕುಡಿದವರ ಮಾತಿನ ಮಧ್ಯೆ ಅವರು ಮೂಗು ತೂರಿಸಿ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಒಟ್ಟಿನಲ್ಲಿ ಈ ಜಗತ್ತು ಕುಡುಕನನ್ನು ವಿಚಿತ್ರ ಅನುಮಾನದಿಂದ ನೋಡುತ್ತದೆ. ಅವಮಾನಿಸುತ್ತದೆ. ಅದಕ್ಕೆ ಕಾರಣ ಕುಡುಕರ ಬಗ್ಗೆ ಜಗತ್ತಿಗಿರುವ ಅಸೂಯೆಯೇ ಕಾರಣ ಎಂದು ನಾನಂತೂ ತೀರ್ಮಾನಕ್ಕೆ ಬಂದಿದ್ದೇನೆ. ಇಲ್ಲದೇ ಹೋದರೆ ಜುಜುಬಿ ಎರಡು ರುಪಾಯಿ ಕೊಟ್ಟು ಬೈಟೂ ಕಾಫಿ ಕುಡಿಯುವ ವ್ಯಕ್ತಿಗಿರುವ ಮರ್ಯಾದೆ ಎರಡು ಸಾವಿರ ರುಪಾಯಿಯ ಸ್ಕಾಚ್ ವಿಸ್ಕಿ ಕುಡಿಯುವವನಿಗೆ ಇಲ್ಲ ಅಂದರೆ? ಕಾಲ ಎಲ್ಲಿಗೆ ಬಂತು?

Tap to resize

Latest Videos

ಮೊನ್ನೆ ಮೊನ್ನೆ ಶಾರದಾಪ್ರಸಾದ್ ಬರೆದ ಪುಸ್ತಕವೊಂದನ್ನು ಓದುತ್ತಿದ್ದೆ. ಅವರ ಒಬ್ಬ ವ್ಯಕ್ತಿಯನ್ನು ಮೆಚ್ಚಿಕೊಳ್ಳುತ್ತಾ ಅವನಿಗೆ ಒಳ್ಳೆಯ ಇಂಗ್ಲಿಷು ಗೊತ್ತಿತ್ತು, ಒಳ್ಳೆಯ ಸಾಹಿತ್ಯ ಓದುತ್ತಿದ್ದ, ವಿದೇಶ ಸುತ್ತುತ್ತಿದ್ದ, ಎಲ್ಲಕ್ಕಿಂತ ಮುಖ್ಯವಾಗಿ ರಾಯಲ್ ಸಲ್ಯೂಟ್ ವಿಸ್ಕಿಯನ್ನು ಹೇಗೆ ಕುಡಿಯಬೇಕು ಅನ್ನುವುದು ಅವನಿಗೆ ಗೊತ್ತಿತ್ತು ಎನ್ನುವ ಮಾತು ಬರೆದಿದ್ದರು. ವಿಸ್ಕಿಯನ್ನು ಕುಡಿಯುವುದು ಕೂಡ ಕಲೆ ಎಂದು ಭಾವಿಸಿದವರ ನಾಡೆಲ್ಲಿ? ವಿಸ್ಕಿ ಕುಡಿದವನು ಅಪರಾಧಿ ಎಂದು ಭಾವಿಸುವ ನಮ್ಮ ನಾಡೆಲ್ಲಿ! ಯಾಕೆ ಕುಡೀತೀರಿ, ಅದಕ್ಕೇನು ಕಾರಣ, ಅದೇನು ಸಂತೋಷ ಕೊಡುತ್ತೆ ಅಂತ ಕೇಳುತ್ತಾರೆ ಕುಡಿತದ ಸೊಗಸನ್ನು ಅರಿಯದೇ ಇದ್ದವರು. ಆಗೆಲ್ಲ ನಾನು ಇಂಗ್ಲಿಷ್ ಕವಿಯೊಬ್ಬ ಬರೆದ ಪದ್ಯವೊಂದನ್ನು ಹೇಳುತ್ತೇನೆ;


If all be true that I do think
There are five reasons
we should drink
Good wine-a Friend-or
being dry Or lest we
should be by and by
Or any other reason Why?

ಸ್ಕಾಚು ಕುಡಿಯುವುದನ್ನು ನಮಗೆ ಕಲಿಸಿದ್ದೇ ಇಂಗ್ಲಿಷರು. ಭಾರತದ ತಣ್ಣನೆಯ ಸ್ಥಳಗಳಲ್ಲಿ ಬೆಚ್ಚನೆಯ ಮನೆಗಳನ್ನು ನಿರ್ಮಿಸಿ ಅಲ್ಲೊಂದು ಸೊಗಸಾದ ಗುಂಡು ರೂಮು ಮಾಡಿಕೊಂಡು ಅಲ್ಲಿ ರೋಸ್ವುಡ್ ಕಪಾಟುಗಳಲ್ಲಿ ವಿಸ್ಕಿ ಬಾಟಲುಗಳನ್ನು ಅಂದವಾಗಿ ಜೋಡಿಸಿಟ್ಟು ಅದನ್ನು ತುಂಬಾ ಅರ್ಥಪೂರ್ಣ ಘನತೆಯಿಂದ ಹೀರುತ್ತಾ ಸುಖಿಸುತ್ತಿದ್ದವರು ಅವರು. ಅಷ್ಟು ಅಚ್ಚುಕಟ್ಟಾಗಿ ಕುಡಿಯುತ್ತಿದ್ದವರು ವೈಎನ್ಕೆ.

ಪದವಿಲ್ಲದ ಪದ್ಯಕ್ಕೆ ಕದವಿಲ್ಲದ ಕವಿತೆ! ಕವಿ, ಕಾವ್ಯಗಳ ಬಗ್ಗೆ ಜೋಗಿ ವಿಮರ್ಶೆ

ಕುಡಿಯೋದು ಸ್ಲೋ ಪಾಯ್ಸನ್ ಅಂತ ಯಾರೋ ಅಂದದ್ದಕ್ಕೆ ಪಕ್ಕಾ ಕುಡುಕನೊಬ್ಬ ಹೇಳಿದನಂತೆ -ಪರವಾಗಿಲ್ಲ ಬಿಡಿ, ನಂಗೇನು ಅಂಥ ಅರ್ಜೆಂಟಿಲ್ಲ. ಅರ್ಜೆಂಟಿದ್ದವರು ವಿಷ ಕುಡೀಲಿ. ಬೇರೆ ಪೇಯಗಳಿಗೂ ಗುಂಡಿಗೂ ಇರುವ ವ್ಯತ್ಯಾಸವನ್ನು ಯಾರೂ ಸರಿಯಾಗಿ ಅರ್ಥಮಾಡಿಕೊಂಡಂತಿಲ್ಲ. ಕಾಫಿಯನ್ನೋ ಟೀಯನ್ನೋ ನಾವು ದಿನವಿಡೀ ಕುಡಿಯುತ್ತಲೇ ಇರುತ್ತೇವೆ. ಯಾಕೆ ಕುಡಿಯುತ್ತೀರಿ ಅಂತ ಕೇಳಿದರೆ ಅದೊಂದು ಚಟ ಸ್ವಾಮಿ ಅಂತೇವೆ. ಆದರೆ ಅದೊಂದು ನಿರುಪಯೋಗಿ ಚಟ.

ಕಾಫಿ ಕುಡಿದಾಗ ಯಾರಲ್ಲೂ ಯಾವ ಬದಲಾವಣೆಯೂ ಆಗಿದ್ದನ್ನು ನಾನು ಈ ವರೆಗೆ ಕಂಡಿಲ್ಲ. ಆದರೆ ಮದ್ಯ ಹಾಗಲ್ಲ. ಅದು ಸುಪ್ತಸಾಗರದಲ್ಲಿ ಅಡಗಿದ್ದ ಆಲೋಚನೆಗಳನ್ನೆಲ್ಲ ಹೊರಗೆ ಹಾಕುತ್ತದೆ. ನಮ್ಮನ್ನು ಒಂದು ಕ್ಪಣ ಅಲ್ಲಾಡಿಸಿಬಿಡುತ್ತದೆ. ನಮ್ಮ ಸ್ಪಿರಿಟ್ಟನ್ನು ಉತ್ತುಂಗಕ್ಕೆ ಒಯ್ಯುತ್ತದೆ. ಗುಂಡಿಲ್ಲದೆ ಯಾರ ಜೊತೆಗಾದರೂ ಆರು ಗಂಟೆಗಳ ಕಾಲ ಸತತವಾಗಿ ಮಾತಾಡಲು ಯತ್ನಿಸಿ. ನೀವು ಬೋರಾಗಿ ಸತ್ತು ಹೋಗುತ್ತೀರಿ. ಅದೇ ಮುಂದೊಂದು ಬಾಟಲಿ ಸ್ಕಾಚ್ ವಿಸ್ಕಿ ಇಟ್ಟುಕೊಳ್ಳಿ. ದೇಶಕಾಲ ಎರಡೂ ಮರೆಯುತ್ತದೆ.


ಗುಂಡು ಕೂಡ ಪ್ರೇಮದಂತೆ; ಮೊದಲ ಹನಿ ಮಾಂತ್ರಿಕ, ಎರಡನೆಯದು ಆತ್ಮೀಯ, ಮೂರನೆಯದು ಯಾಂತ್ರಿಕ ಅಂತ ಅದರ ಸೊಗಸು ಗೊತ್ತಿಲ್ಲದೇ ಇರುವವರು ಹೇಳಿದ್ದನ್ನು ನಾವು ಒಪ್ಪಿಕೊಳ್ಳಬೇಕಿಲ್ಲ. ಗುಂಡಿನ ಮಹಿಮೆ ಗೊತ್ತಿದ್ದವರಿಗಷ್ಟೇ ಗೊತ್ತು. First you take a drink, then the drink takes a drink, then the drink takes you ಅಂದಿದ್ದ ಅನುಭವಿ ಕುಡುಕ. ವೈಎನ್ಕೆ ಅದನ್ನೇ ಸೊಗಸಾಗಿ ಬರೆದಿದ್ದರು. ಪ್ರತಿ ಪೆಗ್ಗಿಗೂ ನಾನು ಹೊಸ ಮನುಷ್ಯ. ಮತ್ತು ಹೊಸ ಮನುಷ್ಯನಿಗೆ ಮತ್ತೊಂದು ಪೆಗ್ಗು. ಮತ್ತೆ ಹೊಸ ಮನುಷ್ಯ, ಮತ್ತೊಂದು ಪೆಗ್ಗು. ಮತ್ತು ಮತ್ತು ಮತ್ತು ಮತ್ತೂ..ಕುಡಿಯದೇ ಒದ್ದಾಡುವವರ ಬಗ್ಗೆ ಬರೆದ ಮತ್ತೊಂದು ಸಾಲು ಇನ್ನೂ ಚೆನ್ನಾಗಿದೆ:

And he that will go to bed sober
Falls with leaf still in october

ಕುಡಿಯದೇ ಮಲಗುವ ಅವಿವೇಕಿ ತಲೆ
ಶಿಶಿರ ಬರುವ ಮುನ್ನವೇ ಉದುರುವ ಎಲೆ


ಕುಡಿತವೆಂದರೆ ತಮಾಷೆಯಲ್ಲ, ಕುಡಿಯುವುದೂ ತಮಾಷೆ ಅಲ್ಲ. ಗುಂಡು ಎಂದರೆ ಗಂಟಲಿಂದ ಹೊರಟು ಅನ್ನನಾಳದಲ್ಲಿ ಸಾಗುವ ಪಂಜಿನ ಮೆರವಣಿಗೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಅಂತ ಸಿದ್ಧಲಿಂಗಯ್ಯ ಬರೆದಿದ್ದಾರೆ ನಿಜ. ಆದರೆ ಹನಿಹನಿಯೂ ಹೋರಾಟಕ್ಕೆ ನಮ್ಮನ್ನು ಪ್ರೇರೇಪಿಸಬಹುದು ಅನ್ನುವುದಕ್ಕೆ ಸಾಕ್ಪಿ ಗುಂಡು. ಹನಿಗೂಡಿ ಹಳ್ಳ ಅನ್ನುವುದು ನಿಜಕ್ಕೂ ಅರ್ಥಪೂರ್ಣವಾಗುವುದು ಗುಂಡು ಹಾಕಿ ಬೈಕು ಓಡಿಸಿದಾಗ. ಕುಡಿದ ಹನಿ ನಮ್ಮನ್ನು ಖಂಡಿತಾ ಹಳ್ಳಕ್ಕೇ ಒಯ್ಯತ್ತದೆ.

ಆಳುವ ವರ್ಗವನ್ನು ಮತ್ತಷ್ಟು ಬಲಪಡಿಸುವ ಪುರೋಹಿತಶಾಹಿ ರಚನೆ ಪುಣ್ಯಕೋಟಿ ಕಥೆ; ಜೋಗಿ ವಿಮರ್ಶೆ
**
ಈ ತಮಾಷೆ ನನ್ನ ಉದ್ದೇಶ ಆಗಿರಲಿಲ್ಲ. ಹಾಗೆ ನೋಡಿದರೆ ಇದು ವಿಷಾದದಿಂದ ಕೂಡಿದ ಲೇಖನ. ಕ್ರಮೇಣ ಜಗತ್ತು ಹೇಗೆ ತನ್ನ ಘನತೆಯನ್ನೂ ಅಭಿರುಚಿಯನ್ನೂ ಸ್ವಾತಂತ್ರವನ್ನೂ ಅರಾಜಕತೆಯನ್ನೂ ಉದ್ದಟತನವನ್ನೂ ಕಳೆದುಕೊಂಡು ಗುಲಾಮಗಿರಿಯತ್ತ ಸಾಗುತ್ತಿದೆ ಎಂದು ಯೋಚಿಸಿ. ಬ್ರಿಟಿಷರೇ ವಾಸಿ, ಅವರು ನಮ್ಮನ್ನು ಮನುಷ್ಯರಂತೆ ಕಂಡರು. ಈಗ ಅಮೆರಿಕನ್ನರ ಸುಖಕ್ಕಾಗಿ, ಅವರು ರಾತ್ರಿ ಸುಖನಿದ್ದೆ ಮಾಡಬೇಕು ಅನ್ನುವ ಕಾರಣಕ್ಕಾಗಿ ನಾವು ಕಾಲ್ ಸೆಂಟರುಗಳಲ್ಲಿ ರಾತ್ರಿ ನಿದ್ದೆಗೆಡುತ್ತೇವೆ!

ಪ್ರಶ್ನೆ ಇದ್ಯಾವುದೋ ಅಲ್ಲ. ಸರಿಯಾದ ಬುದ್ಧಿವಂತರಾದ ಶಿಷ್ಯವರ್ಗವಿಲ್ಲದೇ ಹೋದರೆ ಹೇಗೆ ಒಂದು ಪ್ರತಿಭಾವಂತರ ಸಮೂಹವೇ ಅವಗಣನೆಗೆ ಒಳಗಾಗುತ್ತದೆ ಎಂಬುದನ್ನು ಯೋಚಿಸಿದಾಗ ಗಾಬರಿಯಾಗುತ್ತದೆ. ಅದಕ್ಕೆ ಎರಡು ಉದಾಹರಣೆಗಳನ್ನು ನೋಡೋಣ;


ಒಬ್ಬ ಪ್ರತಿಭಾವಂತರು ಕೈಲಾಸಂ. ಕಂಠಪೂರ್ತಿ ಕುಡಿದು ಅದೇ ಸ್ಥಿತಿಯಲ್ಲಿ ಸೊಗಸಾದ ನಾಟಕ ಬರೆಯುತ್ತಿದ್ದವರು ಅವರು. ಅವರ ಕುಡಿತದ ಬಗ್ಗೆಯೇ ರೋಚಕವಾದ ದಂತಕತೆಗಳಿದ್ದವು. ಅವರ ತೀರ್ಥಯಾತ್ರೆಯ ಬಗ್ಗೆ, ತೀರ್ಥ ಕ್ಪೇತ್ರದ ಬಗ್ಗೆ, ತೀರ್ಥ ಸ್ನಾನದ ಬಗ್ಗೆ ಸೊಗಸಾದ ಕತೆಗಳನ್ನು ಅವರ ಶಿಷ್ಯಂದಿರು ಅತೀವ ಭಕ್ತಿ ಮತ್ತು ಪ್ರೀತಿಯಿಂದ ಹೇಳುತ್ತಿದ್ದರು. ಕೈಲಾಸಂ ಸಿಗರೇಟು ಸೇದುವುದು, ಹೊಗೆಯಲ್ಲೇ ಹೆಸರು ಬರೆಯುವುದು, ಅವರು ಕುಡಿದಾಗ ಆಡುತ್ತಿದ್ದ ಮಾತು, ಅವುಗಳ ಸ್ವಾರಸ್ಯ ಎಲ್ಲವನ್ನು ರುಚಿಕಟ್ಟಾಗಿ ವರ್ಣಿಸುತ್ತಿದ್ದರು. ಆ ವರ್ಣನೆಯನ್ನು ಕೇಳುವಾಗೆಲ್ಲ ಕುಡಿತ ತಪ್ಪು ಅನ್ನಿಸುತ್ತಲೇ ಇರಲಿಲ್ಲ. ಕೈಲಾಸಂ ನಮ್ಮ ಕಣ್ಣಿಗೆ ಕುಡುಕರಂತೆ ಕಾಣಲಿಲ್ಲ.

ಅದು ಬದುಕನ್ನು ಪ್ರೀತಿಸುವ, ಆರಾಧಿಸುವ, ಅನುಭವಿಸುವ ಒಂದು ಸರಳ ವಿಧಾನ ಅನ್ನಿಸುತ್ತಿತ್ತು. ವೈಎನ್ಕೆಯವರ Phd ಕೂಡ ಅಷ್ಟೇ. ಅವರು ತಮ್ಮನ್ನು ಸನ್ ಡೌನರ್ ಅಂತ ಕರೆದುಕೊಳ್ಳುತ್ತಿದ್ದರು. ಅಂದರೆ ಸೂರ್ಯ ಮುಳುಗಿದ ತಕ್ಪಣ ಗುಂಡಿನತ್ತ ಧಾವಿಸುವ ವ್ಯಕ್ತಿ. ಕುಡಿತದ ಸಮಯವನ್ನು PHD, Precious Hours of Drinking ಎನ್ನುತ್ತಿದ್ದರು. ಕುಡಿಯುವ ಮೊದಲು ಚೌಕ ರೂಮು, ಕುಡಿದ ನಂತರ ಗುಂಡು ರೂಮು ಅಂತ ಬರೀತಿದ್ದರು.

ಬೆಳಗ್ಗೆ ಸಂಜೆ ಮಧ್ಯಾಹ್ನ,
ಕುಡೀತೀನ್ ನಾನು ಮದ್ಯಾನ
ಅಂತ ತಮಾಷೆ ಮಾಡುತ್ತಿದ್ದರು. ಗುಡ್ ಮ್ಯಾನ್, ಅವನು ಕುಡೀತಾನೆ ಅಂತ ಮೆಚ್ಕೋತಿದ್ದರು.
ಕರುಣಾಳು ಬಾ ಬೆಳಕೆ
ಮಸುಕಿದೀ ಪಬ್ಬಿನಲಿ
ಕೈ ಹಿಡಿದು ಕುಡಿಸೆನ್ನನು 
ಅಂತ ಹಾಡಿದ್ದೂ ಅವರೇ. ಗುಂಡು ಹಾಕುವ ಪತ್ರಕರ್ತನನ್ನು ಬೀರಬಲ್ ಅಕ್‌ಬಾರಾವಾಲಾ ಅಂದಿದ್ದೂ ಅವರೇ.  ಅವರನ್ನು ಯಾರೂ ಕುಡುಕ ಅನ್ನಲಿಲ್ಲ. ಅವರ ಗುಂಡಿನ ಬಗ್ಗೆ ಗೌರವ, ಪ್ರೀತಿ ಇಟ್ಟುಕೊಂಡವರು ಅದರ ಬಗ್ಗೆ ಕತೆಗಳನ್ನು ಹೇಳುತ್ತಾ, ಆ ಸಾಹಸಕತೆಗಳನ್ನು ಪ್ರಚಾರ ಮಾಡುತ್ತಾ ಅವರ ಜೊತೆಗೆ ಕುಡಿಯುವುದೇ ಒಂದು ಸೌಭಾಗ್ಯ ಎಂದು ಭಾವಿಸುವಂತೆ ಮಾಡುತ್ತಿದ್ದರು.
ಅದು ಬೇರೆಯೇ ಕಾಲ. ಈಗ ಹಾಗಿಲ್ಲ.  ಈಗ ಪತ್ರಿಕೋದ್ಯಮದಂಥ ರೋಚಕ ಕೆಲಸ ಕೂಡ ಗುಮಾಸ್ತಗಿರಿಯಾಗಿದೆ. ಅತಿರೇಕಕ್ಕೆ ಹೋಗದೆ ಸತ್ಯದ ದರ್ಶನ ಆಗುವುದಿಲ್ಲ ಅನ್ನುವ ಸಿದ್ಧಾಂತವನ್ನು ಇವತ್ತು ಯಾರೂ ಒಪ್ಪುವುದಿಲ್ಲ.

ಕವಿತೆಯ ಜತೆ ಜೋಗಿ ಮಾತುಕತೆ!

ಸೊಫಿಸ್ಟಿಕೇಷನ್ ಅನ್ನುವುದು ಶಾಪ. ನಾವು ಹೆಚ್ಚು ಹೆಚ್ಚು ಸೊಫಿಸ್ಟಿಕೇಟ್, ಗೌರವಾನ್ವಿತರಾಗುತ್ತಾ ಹೋದ ಹಾಗೆ, ಜೊಳ್ಳಾಗುತ್ತಾ, ನಕಲಿ ಶಾಮರಾಗುತ್ತಾ, ಯಾರನ್ನೋ ಕಣ್ಣುಮುಚ್ಚಿ ಒಪ್ಪಿಕೊಳ್ಳುವ ಅವಿವೇಕಿಗಳಾಗುತ್ತಾ ಹೋಗುತ್ತೇವೆ. ನಾವು ನಮ್ಮಂತೆಯೇ ಇದ್ದಾಗ, ನಮ್ಮಿಚ್ಛೆಯ ಹಾಗೆ ನಡೆದಾಗ ನಮ್ಮ ನಮ್ಮ ಸತ್ಯಗಳನ್ನು ನಾವು ಕಂಡು ಕೊಂಡಾಗ ಸಿಗುವ ಸಂತೋಷವೇ ಬೇರೆ.

ಗುಂಡು ಇಲ್ಲಿ ನೆಪಮಾತ್ರ. ಅದು ಒಂದು ಭವ್ಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿತ್ತು ಅನ್ನುವುದನ್ನು ನೆನಪಿಸಿಕೊಳ್ಳುತ್ತಾ, ಪ್ರತಿಭಾವಂತರ ಜೊತೆಗೆ ಸುಮ್ಮನೆ ಕೂತು ಅವರ ಅಮಲಿನ ವಚನಗಳನ್ನು ಕೇಳಿ ಹುರುಪುಗೊಳ್ಳುವ ಅವಕಾಶದಿಂದ ವಂಚಿತರಾದವರ ಬಗ್ಗೆ ಅನುಕಂಪ ವ್ಯಕ್ತಪಡಿಸುವುದನ್ನು ಬಿಟ್ಟು ಈಗ ಇನ್ನೇನು ಮಾಡಲು ಸಾಧ್ಯ?
 

click me!