ಆಳುವ ವರ್ಗವನ್ನು ಮತ್ತಷ್ಟು ಬಲಪಡಿಸುವ ಪುರೋಹಿತಶಾಹಿ ರಚನೆ ಪುಣ್ಯಕೋಟಿ ಕಥೆ; ಜೋಗಿ ವಿಮರ್ಶೆ

ಗೋವಿನ ಸತ್ಯವೇ ಬೇರೆ, ಹುಲಿಯ ಸತ್ಯವೇ ಬೇರೆ. ತನಗಿಂತ ಬಲಶಾಲಿಯಾದ ಹುಲಿಯನ್ನು ಹಸುವಿನಂಥ ಹಸು ಸತ್ಯವೆಂಬ ಆಯುಧದ ಮೂಲಕ ಕೊಲ್ಲುವುದೇ ಪುಣ್ಯಕೋಟಿಯ ಕತೆ.

Punyakoti does not represent truth it represents upper class writer Jogi's review

ಬರಹ: ಜೋಗಿ

ಹಾರಿ ಪ್ರಾಣಬಿಟ್ಟ ಹುಲಿಯ ನೆನೆಯುತ್ತಾ, ಒಂದು ಬಿನ್ನಹ ಹುಲಿಯೆ ಕೇಳು, ಕಂದನಿರುವನು ದೊಡ್ಡಿಯೊಳಗೆ, ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ. ಈ ಸಾಲುಗಳನ್ನು ನೆನಪಿಸಿಕೊಂಡಾಗೆಲ್ಲ ಒಂದು ಅನುಮಾನ ಕಾಡುತ್ತಿತ್ತು. ಈಗ ತಮಾಷೆಯಾಗಿ ಕಾಣುವ ಅನುಮಾನ ಇದು. ಪುಣ್ಯಕೋಟಿಯೇನೋ ದೊಡ್ಡಿಯಲ್ಲಿರುವ ಕರುವಿಗೆ ಒಂದು ನಿಮಿಷದಲ್ಲಿ ಹಾಲು ಕುಡಿಸಿ ಬಂದು, ಹುಲಿಗೆ ಆಹಾರವಾಗುವುದಾಗಿ ಮಾತು ಕೊಟ್ಟಿತು ನಿಜ. ಆದರೆ ಒಂದು ನಿಮಿಷದಿ ಹಾಲು ಕೊಟ್ಟು ಬರುತ್ತೇನೆ ಅನ್ನುವ ಪುಣ್ಯಕೋಟಿಯ ಕಾರಣವನ್ನು ಹುಲಿ ಒಪ್ಪಿದ್ದಾದರೂ ಹೇಗೆ? Not a valid reason ಎಂದು ಹುಲಿ ಅದನ್ನು ನಿರಾಕರಿಸಬಹುದಿತ್ತು. ಹಾಗೆ ನಿರಾಕರಿಸುವುದಕ್ಕೆ ಹುಲಿಗೆ ಸಾಕಷ್ಟು ಕಾರಣಗಳೂ ಇದ್ದುವಲ್ಲ. ಮೊದಲನೆಯದಾಗಿ ಸಾಯುತ್ತಿರುವ ಪುಣ್ಯಕೋಟಿ ಒಂದು ನಿಮಿಷ ಹಾಲು ಕುಡಿಸಿ ಬರುತ್ತೇನೆ ಅನ್ನುವ ಮಾತಲ್ಲಿ ಅರ್ಥವೇ ಇಲ್ಲ. ಯಾಕೆಂದರೆ ಹೇಗೂ ಪುಣ್ಯಕೋಟಿ ಸಾಯುತ್ತದೆ. ಮಾರನೆಯ ದಿನ ಅದರ ಕಂದ ಕರುವಿಗೆ ಯಾರು ಹಾಲು ಕುಡಿಸುತ್ತಾರೆ. ಬೇರೆ ಯಾರಾದರು ಹಾಲು ಕುಡಿಸುತ್ತಾರೆ ಎನ್ನುವುದಾದರೆ ಪುಣ್ಯಕೋಟಿ ತಕ್ಷಣವೇ ಹುಲಿಗೆ ಖಂಡವಿದಕೋ ಎಂದು ಕೊಟ್ಟುಬಿಡಬಹುದಿತ್ತಲ್ಲ. ಅದಕ್ಕಿಂತ ಹೆಚ್ಚಾಗಿ ಪುಣ್ಯಕೋಟಿಯ ಕಂದನಷ್ಟೇ ಅರ್ಬುದ ವ್ಯಾಘ್ರನೂ ಹಸಿದಿದ್ದನಲ್ಲ. ಹಸಿದ ಹುಲಿಗೆ ಪುಣ್ಯಕೋಟಿಯ ಕಂದನ ಹಸಿವು ಅದು ಹೇಗೆ ಅರ್ಥವಾಯಿತು. ಹಸಿದವರಿಗಷ್ಟೇ ಮತ್ತೊಬ್ಬರ ಹಸಿವು ಅರ್ಥವಾಗುತ್ತಾ?

ಟೀವಿ ಸೀರಿಯಲ್ ಕತೆಗಾರರಿಗೆ ಕೊಟ್ಟರೆ ಅದೊಂದು ಎಂಥಾ ಸೆಂಟಿಮೆಂಟಿನ ಎಪಿಸೋಡಾಗುತ್ತಿತ್ತು ಊಹಿಸಿ. ಅವರ ಕಲ್ಪನೆಯಲ್ಲಿ ಪುಣ್ಯಕೋಟಿಯನ್ನು ಸುಮ್ಮನೆ ಹೋಗಲು ಬಿಡುತ್ತಲೇ ಇರಲಿಲ್ಲ. ತಕ್ಷಣದ ಹಸಿವು ತೀರಿಸಿಕೊಳ್ಳಲು ಪುಣ್ಯಕೋಟಿಯ ಸ್ವಲ್ಪ ಮಾಂಸವನ್ನು ತಿಂದೇ ಕಳಿಸುತ್ತಿತ್ತು. ಒದ್ದಾಡುತ್ತಾ, ತೆವಳಿಕೊಂಡು ಕಂದಮ್ಮನನ್ನು ಪುಣ್ಯಕೋಟಿ ನೋಡಲು ಹೋಗುವುದನ್ನು ಐವತ್ತು ಎಪಿಸೋಡುಗಳ ತನಕ ಎಳೆದು ಪ್ರೇಕ್ಷಕರನ್ನು ಕಣ್ಣೀರ ಕಡಲಲ್ಲಿ ಮುಳುಗಿಸಬಹುದಿತ್ತು ಎಂಬ ಸಂತೋಷದಲ್ಲಿ ಸೀರಿಯಲ್ ಕತೆಗಾರರ ಪಲ್ಸ್‌ರೇಟ್ ಹೆಚ್ಚಾಗುತ್ತಿತ್ತು. ಇಂಥ ತರಲೆಗಳನ್ನೆಲ್ಲ ಕಸದ ಬುಟ್ಟಿಗೆ ಹಾಕಿ ನೋಡುತ್ತಾ ಹೋದರೆ ‘ಗೋವಿನ ಹಾಡು’ ವಿಚಿತ್ರ ಕಾರಣಗಳಿಗೆ ರಂಜಿಸುತ್ತದೆ. ಇತ್ತೀಚಿಗೆ ಈ ಪದ್ಯವನ್ನು ಮತ್ತೊಂದು ರೀತಿಯಲ್ಲಿ ಸಂಸ್ಕೃತಿ ಕಥನಕಾರರು ವಿವರಿಸುತ್ತಾರೆ. ತನ್ನೆಲ್ಲ ಚಿತ್ರರೂಪಕತೆ ಮತ್ತು ಸೊಗಸಿಗಿಂತ ಆಳವಾದ ಅರ್ಥವೊಂದು ‘ಗೋವಿನ ಹಾಡಿ’ನಲ್ಲಿ ಅಡಗಿದೆ ಎನ್ನುವುದು ಸುಳ್ಳಲ್ಲ. ಅದು ಸಮಾಜದ ನೈತಿಕತೆಯನ್ನು ಹೆಚ್ಚಿಸುತ್ತದೆ ಎಂದು ಹಿಂದೆ ಭಾವಿಸಿದ್ದರೆ, ನೈತಿಕತೆಯನ್ನು ಹೆಚ್ಚಿಸುವುದು ಅಂದರೆ ಶೋಷಣೆಯನ್ನು ಹೆಚ್ಚಿಸುವುದೆ ಎಂಬ ಪ್ರಶ್ನೆಯನ್ನು ಪರಂಪರೆಯನ್ನು ಆಧುನಿಕವಾಗಿ ಪರಿಭಾವಿಸುವ ಮಂದಿ ಕೇಳುತ್ತಾರೆ. ಅವರ ಪ್ರಕಾರ ಗೋವಿನ ಹಾಡು ಶೋಷಿತರನ್ನು ಮತ್ತಷ್ಟು ಶೋಷಿಸುವ, ಆಳುವ ವರ್ಗವನ್ನು ಮತ್ತಷ್ಟು ಬಲಪಡಿಸುವ ಪುರೋಹಿತಶಾಹಿ ರಚನೆ. ಅವರು ತೀರ ಸಂಕೀರ್ಣವಾದ ವಿವರಗಳಲ್ಲಿ ಕೊಡುವ ಕಾರಣಗಳನ್ನು ತೀರ ಸರಳವಾಗಿ ಬರೆದಿಟ್ಟರೆ ಅದು ಇಷ್ಟು; (ಆದರೆ ವಿಮರ್ಶೆಯನ್ನಾಗಲಿ ಅದರ ಪರಿಭಾಷೆಯನ್ನಾಗಲೀ, ಪೂರಕವಾದ ಅಧ್ಯಯನ ಪ್ರಕ್ರಿಯೆಯ ಸ್ವರೂಪವನ್ನೂ, ವಿನ್ಯಾಸವನ್ನೂ, ಸಂರಚನೆಯನ್ನೂ ಸರಳಗೊಳಿಸುವುದು ಸರಿಯಲ್ಲ ಎನ್ನುವುದು ಆಧುನಿಕ ವಿಮರ್ಶಕರ ವಾದ. ಅವರಲ್ಲಿ ಕ್ಷಮೆ.)

ಕವಿತೆಯ ಜೊತೆ ಜೋಗಿ ಮಾತುಕತೆ

ಇಲ್ಲಿ ಪುಣ್ಯಕೋಟಿ ಎಂದರೆ ಆಳುವ ವರ್ಗ, ಪುರೋಹಿತಶಾಹಿಗಳು, ಹುಲಿ ಯೆಂಬುದು ಶ್ರಮಿಸುವ ವರ್ಗ. ಶ್ರಮಿಸುವ ವರ್ಗದವರಿಗೆ ಗೋವಿನ ಕುಟಿಲೋಪಾಯಗಳು ಗೊತ್ತಿಲ್ಲ. ಗೋವು ಸತ್ಯದ ಹೆಸರಿನಲ್ಲಿ ಹುಲಿಯನ್ನು ಕೊನೆಗೂ ಕೊಂದು ಹಾಕುತ್ತದೆ. ಯಾವುದು ‘ಸಾಧು’ವೋ ಅದು ಗೆಲ್ಲುತ್ತದೆ. ಕ್ರೌರ್ಯ ಸೋಲುತ್ತದೆ ಎಂದು ನಾವು ಇದುವರೆಗೂ ತಿಳಿದುಕೊಂಡಿರುವುದು ತಪ್ಪು. ಗೆಲ್ಲುವುದು ಸಾಧುವಲ್ಲ, ನಿಜವಾದ ಕ್ರೌರ್ಯ. ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂದು ಹಸು ತನ್ನನ್ನು ತಾನು ಸತ್ಯಕ್ಕೆ ವಿಧಿಸಿಕೊಳ್ಳುವಂತೆ, ಆ ಮೂಲಕ ಹುಲಿಯೂ ಗೋವಿನ ಸತ್ಯವನ್ನೇ ಅಪ್ಪಿಕೊಳ್ಳುವಂತೆ ಮಾಡುತ್ತದೆ. ಆದರೆ ಇಲ್ಲಿ ಗೋವಿನ ಸತ್ಯವೇ ಬೇರೆ, ಹುಲಿಯ ಸತ್ಯವೇ ಬೇರೆ. ತನಗಿಂತ ಬಲಶಾಲಿಯಾದ ಹುಲಿಯನ್ನು ಹಸುವಿನಂಥ ಹಸು ಸತ್ಯವೆಂಬ ಆಯುಧದ ಮೂಲಕ ಕೊಲ್ಲುವುದೇ ಪುಣ್ಯಕೋಟಿಯ ಕತೆ.

ಇದನ್ನು ಒಪ್ಪಿದರೆ ಗೋವಿನ ಹಾಡು ಎಂಬ ಸರಳ ಪದ್ಯವನ್ನು ಸುಮ್ಮನೆ ಓದಿ ಆನಂದಿಸುವ ಖುಷಿಯಿಂದ ವಂಚಿತರಾಗುತ್ತೇವೆ ಎಂದು ಹೇಳುವವರಿದ್ದಾರೆ. ಇಂಥ ಪದ್ಯಗಳನ್ನು ವಿಶ್ಲೇಷಿಸುವುದು ತಪ್ಪು ಎನ್ನುವವರೂ ಸಿಗುತ್ತಾರೆ. ಆದರೆ ಒಂದು ಪದ್ಯ ಕಾಲಕ್ರಮೇಣ ಪಡೆದುಕೊಳ್ಳುವ ಹೊಸ ಅರ್ಥಗಳ ಬಗ್ಗೆ ಚಿಂತಿಸಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. ಒಂದು ಕವಿತೆಗಿರುವ ಶಕ್ತಿಯ ಬಗ್ಗೆ ನಾವು ಬೆರಗಾಗುತ್ತೇವೆ.

"ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡವ್ಯಾಘ್ರನೆ ನೀನಿದೆಲ್ಲವನುಂಡು ಸಂತಸದಿಂದಿರು."
ಪುಣ್ಯಕೋಟಿ ತನ್ನನ್ನು ತಾನು ಅರ್ಪಿಸಿಕೊಳ್ಳಲೆಂದೇ ಬಂದಿದೆ. ಅದಕ್ಕೆ ತನ್ನ ಹತ್ತಿರ ಏನೇನಿದೆ ಅನ್ನುವುದು ಗೊತ್ತಿದೆ. ಅದನ್ನು ಒಪ್ಪಿಸುವ ಹೊತ್ತಿಗೂ ಹಸು ತನ್ನ ವ್ಯಂಗ್ಯ ಮತ್ತು ಚುಚ್ಚುವ ಶೈಲಿಯನ್ನು ಮರೆಯುವುದಿಲ್ಲ. ನೀನು ಚಂಡವ್ಯಾಘ್ರ- ಕ್ರೂರಿ ಕಣಯ್ಯಾ ಎನ್ನುವುದನ್ನು ಹಸು ನೆನಪಿಸುತ್ತದೆ. ಇದನ್ನೆಲ್ಲ ತಿಂದು ನೀನು ಸುಖವಾಗಿರು ಎಂದು ವ್ಯಂಗ್ಯವಾಗಿ ಹೇಳುತ್ತದೆ. ಆದರೆ ಪುಣ್ಯಕೋಟಿಗೆ ತಾನು ಹುಲಿಯನ್ನು ಕೊಲ್ಲುತ್ತೇನೆ ಅನ್ನುವುದು ಮೊದಲೇ ಗೊತ್ತಿತ್ತೇ? ಅಂಥ ಸುಳಿವು ಸಿಕ್ಕುವುದಿಲ್ಲ. ಯಾಕೆಂದರೆ ಪುಣ್ಯಕೋಟಿ ತನ್ನ ಕಂದನಿಗೊಂದು ಸೂಚನೆ ನೀಡುತ್ತದೆ. ‘ಎಲ್ಲಿಗೆ ಹೋದರೂ ಆ ಬೆಟ್ಟದ ಕಿಬ್ಬಿಯ ಹತ್ತಿರ ಹೋಗಬೇಡ. ಅಲ್ಲಿ ಹುಲಿರಾಯನಿದ್ದಾನೆ ಹುಷಾರ್‌.’ ಒಂದು ವೇಳೆ ಹಸು ಹೋಗದಿದ್ದರೆ ಏನಾಗುತ್ತಿತ್ತು? ಕತೆಯೇ ನಡೆಯುತ್ತಿರಲಿಲ್ಲ ಅಥವಾ ಕತೆ ಜನಪ್ರಿಯವಾಗುತ್ತಿರಲಿಲ್ಲ. ಮುಂದೆ ಯಾವ ಹುಲಿಯೂ ಯಾವ ಹಸುವನ್ನೂ ನಂಬುತ್ತಿರಲಿಲ್ಲ. ಹಸುವನ್ನು ಗೋಮುಖವ್ಯಾಘ್ರ ಎಂದು ಹುಲಿಗಳು ಭಾವಿಸುತ್ತಿದ್ದವೇ?

ಕಥೆ, ಚಿತ್ರಕಥೆ ಸೃಷ್ಟಿಯಾಗುವ ಬಗ್ಗೆ ಜೋಗಿ ಮಾತು

ಹೀಗೆ ಏಕಕಾಲಕ್ಕೆ ಅನೇಕ ಯೋಚನೆಗಳನ್ನು ಕವಿತೆ ಹುಟ್ಟುಹಾಕುತ್ತದೆ. ಅದು ಬೀರುವ ಸಾಮಾಜಿಕ ಪರಿಣಾಮವನ್ನು ಹೊರತುಪಡಿಸಿ ಈ ಕವಿತೆಯನ್ನು ನೋಡುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ ಅದು ಒಳಿತು ಮತ್ತು ಕೆಡಕುಗಳ ನಡುವಿನ ಯುದ್ಧದ ಕತೆ. ಆದರೆ ಯಾವುದು ಒಳಿತು, ಯಾವುದು ಕೆಟ್ಟದ್ದು ಅನ್ನುವುದು ವಿವಾದಾಸ್ಪದ. ಯುವ ಕತೆಗಾರರು ಈ ಕವನವನ್ನು ಇಡಿಯಾಗಿ ಧ್ಯಾನಿಸದೇ ಹೋದರೆ ಅವರು ಮಹತ್ವದ್ದೇನನ್ನೂ ಬರೆಯುವುದಕ್ಕೆ ಸಾಧ್ಯವಾಗದು. ಇದರ ಕಥನ ಶಕ್ತಿ ಅದ್ಭುತವಾದದ್ದು. ಕವಿತೆ ತೀರ ನಿರುಮ್ಮಳವಾದ ಒಂದು ವಾತಾವರಣದ ಚಿತ್ರಣದೊಂದಿಗೆ, ನೆಮ್ಮದಿಯ ಭಾವದಲ್ಲಿ ಶುರುವಾಗುತ್ತದೆ.

"ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ ಕತೆಯಿದು."
ಎಂದೇ ಕತೆ ಆರಂಭವಾದರೂ ಇದು ಗೊಲ್ಲನ ಕತೆಯಲ್ಲ. ಗೊಲ್ಲ ಯಾಕೆ ಮುಖ್ಯನಾಗುತ್ತಾನೆ ಎಂದರೆ ಆತ ಸತ್ಯಸಂಧ ಹಸುವನ್ನು ಸಾಕಿದ್ದಾನೆ ಎನ್ನುವ ಕಾರಣಕ್ಕೆ. ಆ ಹಸುಗಳೋ ಮಾಡುವುದಿಷ್ಟನ್ನೇ; ಗೊಲ್ಲ ದೊಡ್ಡಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲನೊಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ...

ಇಂಥ ಸುಂದರ ಚಿತ್ರ ಮುಂದಿನ ಕ್ಷಣದಲ್ಲೇ ಬದಲಾಗುತ್ತದೆ. ಅದು ಕತೆಗೊಂದು ಅನೀರೀಕ್ಷಿತ ತಿರುವು. ಅದೇ ಬೆಟ್ಟದಲ್ಲಿ ಹಸಿಹಸಿದು ಅಬ್ಬರಿಸುವ ಹುಲಿಯೊಂದಿದೆ. ಮೇವು ಮುಗಿಸಿದ ಹಸುಗಳು ಸಿರಿಸಂಜೆಯ ಸೊಬಗಲ್ಲಿ ಮರಳುವಾಗ ಅದು ಸಿಡಿದು ರೋಷದಿ ಮೊರೆಯುತ್ತ ಘುಡುಘುಡಿಸಿ ಭೋರಿಡುತ ಛಂಗನೆ ಪುಣ್ಯಕೋಟಿಯ ಮುಂದೆ ನೆಗೆಯುತ್ತದೆ. ಆ ಕ್ಷಣ ನಮ್ಮ ಮನಸ್ಸು ಪುಣ್ಯಕೋಟಿಯ ಬಗ್ಗೆ ಮರಮರಗುತ್ತದೆ. ಎಂಥಾ ಹಸುವಿಗೆ ಎಂಥಾ ಕಷ್ಟ ಎಂದುಕೊಳ್ಳುತ್ತೇವೆ. ಆದರೆ ಪುಣ್ಯಕೋಟಿ ಸಾಮಾನ್ಯ ಹಸುವಲ್ಲ. ಅದರ ಕನ್‌ವಿನ್ಸಿಂಗ್ ಕೆಪಾಸಿಟಿಯ ಬಗ್ಗೆ ಅನುಮಾನ ಇಟ್ಟುಕೊಂಡರೆ ಕೆಟ್ಟೀರಿ. ಹಸಿದ ಹುಲಿಗೇ ಅದು ಸಮಜಾಯಿಷಿ ನೀಡಬಲ್ಲದು. ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂದು ಹೇಳಿ ಅದು ತಪ್ಪಿಸಿಕೊಂಡು ಬರುತ್ತದೆ. ಪರಮಾತ್ಮನ ಹೆಸರು ಹೇಳಬೇಕಾದರೆ ಹುಲಿಗೂ ಆ ಪರಮಾತ್ಮನ ಮೇಲೆ ನಂಬಿಕೆ ಇರಬೇಕು ತಾನೆ?

ಅಲ್ಲಿಂದ ಹಸು ತಪ್ಪಿಸಿಕೊಂಡು ಬರುವುದು ಮೂರನೆಯ ಘಟ್ಟ. ಆದರೆ ಹಾಗೆ ತಪ್ಪಿಸಿಕೊಂಡು ಬಂದದ್ದು ಕ್ಷಣಿಕ. ಮತ್ತೆ ಅದು ಮರಳಬೇಕು. ‘ಕಟ್ಟಕಡೆಯಲಿ ಮೇಯ ಬೇಡ, ಬೆಟ್ಟದೊತ್ತಿಗೆ ಹೋಗಬೇಡ, ದುಷ್ಟ ವ್ಯಾಘ್ರನು ಹೊಂಚುತಿರುವನು’ ಎಂದು ಅದು ಎಚ್ಚರಿಕೆ ನೀಡಿ ಹೊರಡುವುದು ಮುಂದಿನ ಘಟ್ಟ. ಅತ್ಯಂತ ಸಮೃದ್ಧವಾದ ಭಾವಾತಿರೇಕ ಸಿಗುವುದು ಇಲ್ಲಿಯೇ. ಈ ದೃಶ್ಯ ಎಂಥವರಲ್ಲೂ ಕಣ್ಣೀರು ತರಿಸುತ್ತದೆ.

ಒಂದು ಅರ್ಥದಲ್ಲಿ ಅಲ್ಲಿಗೆ ಕತೆ ಮುಗಿಯಬೇಕು. ಯಾಕೆಂದರೆ ಹಸುವಿನ ಸತ್ಯಸಂಧತೆ ಚಿರಾಯುವಾಯಿತು. ಆದರೆ ಕವಿಗೆ ಗೊತ್ತು; ಎಲ್ಲರ ಕರುಣೆಗೂ ಪ್ರೀತಿಗೂ ಹಸು ಪಾತ್ರವಾಗಿದೆ. ಅದನ್ನು ಹುಲಿ ಕೊಂದು ತಿಂದರೆ ಕತೆ ಸತ್ವಹೀನವಾಗುತ್ತದೆ. ಕವಿ ತಕ್ಷಣವೇ ಹುಲಿಯನ್ನು ಮತ್ತೊಬ್ಬ ನಾಯಕನನ್ನಾಗಿ ಚಿತ್ರಿಸುತ್ತಾನೆ. ಹಸುವಿನ ಸತ್ಯಸಂಧತೆಗೆ ಬೆರಗಾಗಿ ಹುಲಿಯೇ ತನ್ನನ್ನು ತಾನು ಕೊಂದುಕೊಳ್ಳುತ್ತದೆ. ಅಕ್ಕ ಇವಳನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು ಎಂದು ಹಾರಿ ಪ್ರಾಣವ ಬಿಡುತ್ತದೆ. ಅಲ್ಲಿಗೆ ಕೊನೆಯಲ್ಲಿ ಮನಸಲ್ಲಿ ನಿಲ್ಲುವುದು ಹಸುವಲ್ಲ, ಕಾಳಿಂಗನೆಂಬ ಗೊಲ್ಲನೂ ಅಲ್ಲ. ತ್ಯಾಗಜೀವಿ ಹುಲಿ.

ಇದಕ್ಕಿಂತ ಉತ್ತಮವಾದ ಕೊನೆ ಈ ಕವಿತೆಗೆ ಸಾಧ್ಯವಿತ್ತೇ ಎಂದು ಯೋಚಿಸಿದರೆ ಮತ್ತೇನೂ ಹೊಳೆಯುವುದೇ ಇಲ್ಲ. ಪ್ರತಿಯೊಂದು ಹಂತದಲ್ಲೂ ಅದು ಪ್ರಶ್ನೆಗಳನ್ನೂ ಪರಿಹಾರಗಳನ್ನೂ ಸೃಷ್ಟಿಸುತ್ತಾ ಮುಂದುವರಿಯುತ್ತದೆ. ಹುಲಿಯಿಂದ ಹಸು ಹೇಗೆ ಪಾರಾಗುತ್ತದೆ, ಹಸುವಿನ ಮಾತನ್ನು ಹುಲಿ ನಂಬುತ್ತದೆಯೇ, ತಪ್ಪಿಸಿಕೊಂಡು ಬಂದ ಹಸು ಮತ್ತೆ ಹುಲಿಯ ಹತ್ತಿರ ಹೋಗುತ್ತದೆಯೇ, ಸಾವಲ್ಲದೆ ಹುಲಿಗೆ ಬೇರೆ ದಾರಿ ಯಾವುದಿತ್ತು. ಅತ್ಯಂತ ಘೋರವಾಗಿ ಕವಿತೆ ಕೊನೆಯಾಗುತ್ತದೆ. ಸತ್ತ ಮೇಲೂ ಬದುಕಿ ಉಳಿಯುತ್ತದೆ. ಹುಲಿಯನ್ನು ಕೊಂದದ್ದು ಪುಣ್ಯಕೋಟಿಯ ಒಳ್ಳೆಯತನವೋ, ಹುಲಿಯ ಹುಂಬತನವೋ ಅಥವಾ ಸತ್ಯವೆಂಬ ಆಯುಧವೋ. ನೀವು ಯೋಚಿಸಿ. ಜೊತೆಗೆ ಆ ಕವಿತೆಯ ಬಗ್ಗೆ ಪುತಿನ, ಕೆ.ವಿ. ಸುಬ್ಬಣ್ಣ, ಮೊಗಳ್ಳಿ ಗಣೇಶ್ ಬರೆದಿರುವುದನ್ನು ಓದಿ.

Latest Videos
Follow Us:
Download App:
  • android
  • ios