ಮರಿಗೆ ಜನ್ಮ ನೀಡಿದ ಅಪರೂಪದ ಉದ್ದಕೊಕ್ಕಿನ ರಣಹದ್ದು: ಪರಿಸರ ಪ್ರೇಮಿಗಳಲ್ಲಿ ಸಂತಸ

By Suvarna News  |  First Published Mar 18, 2022, 10:26 AM IST
  • ಪರಿಸರ ಪ್ರೇಮಿಗಳು ಹಾಗೂ ಅರಣ್ಯ ಇಲಾಖೆಗೆ ಸಂತಸ 
  •  ಮರಿಗೆ ಜನ್ಮ ನೀಡಿದ ಅಳಿವಿನಂಚಿನಲ್ಲಿರುವ ಉದ್ದಕೊಕ್ಕಿನ ರಣಹದ್ದು
  • ಶ್ರೀರಾಮದೇವರ ಬೆಟ್ಟ ವನ್ಯಜೀವಿ ಧಾಮದಲ್ಲಿ ಮರಿಗೆ ಜನ್ಮ 

ಜಗದೀಶ್ ಆರ್. ರಾಮನಗರ

ರಾಮನಗರ(ಮಾ. 18): ನಗರದ ರಾಮದೇವರ ಬೆಟ್ಟದಲ್ಲಿ (Ramadevara Betta) ಅಳಿವಿನಂಚಿನಲ್ಲಿರುವ ಉದ್ದಕೊಕ್ಕಿನ ರಣಹದ್ದು ಜೋಡಿಯೊಂದು ಮರಿಗೆ ಜನ್ಮ ನೀಡಿದ್ದು, ಅನೇಕ ವರ್ಷಗಳ ನಂತರ ಹಕ್ಕಿಗಳ ಸಂತಾನೋತ್ತತ್ತಿ ಕಾರ್ಯ ಯಶಸ್ವಿ ಆಗಿದೆ. ನಗರದ ಹೊರವಲಯದಲ್ಲಿ ಇರುವ ರಾಮದೇವರ ಬೆಟ್ಟವು ಉದ್ದಕೊಕ್ಕಿನ ರಣಹದ್ದುಗಳ ವಾಸಸ್ಥಾನವಾಗಿದ್ದು, ಇದನ್ನು ಸರ್ಕಾರ ರಣಹದ್ದು ಸಂರಕ್ಷಣಾ ಧಾಮವನ್ನಾಗಿ (Vulture Conservation Reserve) ಘೋಷಿಸಿದೆ.

Tap to resize

Latest Videos

ಹಿಂದೊಮ್ಮೆ ಸಾವಿರ ಸಂಖ್ಯೆಯಲ್ಲಿ ಇದ್ದ ರಣಹದ್ದುಗಳು ಈಗ ಬೆರಳೆಣಿಕೆಯಷ್ಟು ಮಾತ್ರ ಕಂಡು ಬರುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಅವುಗಳ ಸಂತಾನೋತ್ಪತ್ತಿ ಕಾರ್ಯ ಯಶಸ್ವಿ ಆಗಿರಲಿಲ್ಲ. ಹೀಗಾಗಿ ಈ ಜಾತಿಯ ಹದ್ದುಗಳ ಸಂತತಿ ಸಂಪೂರ್ಣ ನಶಿಸಬಹುದು ಎನ್ನುವ ಆತಂಕ ಪರಿಸರ ಪ್ರಿಯರದ್ದಾಗಿತ್ತು. ಕಳೆದ 18 ದಿನಗಳ ಹಿಂದೆ ಹದ್ದುಗಳ ಜೊತೆ ಮರಿ ಕಂಡುಬಂದಿದ್ದು, ಸುರಕ್ಷಿತವಾಗಿದೆ. ಇದು ಅಳಿವಿನಂಚಿನಲ್ಲಿರುವ ರಣಹದ್ದು ಸಂಕುಲದ ಬೆಳವಣಿಗೆಗೆ ಪೂರಕ ಎನ್ನುವ ಭಾವನೆ ಮೂಡಿಸಿದೆ.

ಅತೀ ವಿರಳವೆನಿಸಿದ ರಣಹದ್ದುಗಳ ಕಳ್ಳಸಾಗಣೆ : ಓರ್ವನ ಬಂಧನ

ಇನ್ನೂ ಉದ್ದಕೊಕ್ಕಿನ ರಣಹದ್ದುಗಳು ಸಾಮಾನ್ಯವಾಗಿ ವರ್ಷಕ್ಕೆ ಒಂದೇ ಮೊಟ್ಟ ಇಟ್ಟು ಮರಿ ಮಾಡುತ್ತವೆ. ನವೆಂಬರ್ ನಿಂದ ಮಾರ್ಚ್ ಅಂತ್ಯದವರೆಗೆ ಮೊಟ್ಟೆ ಇಟ್ಟು ಮರಿಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಮೊಟ್ಟೆಯಿಟ್ಟ ಸುಮಾರು 55-60 ದಿನಗಳಿಗೆ ಮೊಟ್ಟೆಯೊಡೆದು ಮರಿ ಆಚೆ ಬರುತ್ತದೆ. ಇದೀಗ ರಾಮದೇವರ ಬೆಟ್ಟದಲ್ಲಿ ಜೋಡಿ ರಣಹದ್ದು (Vulture)ತನ್ನ ಮರಿಗೆ ಜನ್ಮ ನೀಡಿದ್ದು, ಸುರಕ್ಷಿತವಾಗಿ ಇದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಆಹಾರ ಪೂರೈಕೆ ಮಾಡಲು ಚಿಂತನೆ
ಪ್ರತಿ ದಿನ ಆಹಾರ ಹುಡಕುತ್ತಾ ನೂರಾರು ಕಿ.ಮೀ. ಹಾರುವ ಸಾಮರ್ಥ್ಯವನ್ನು ರಣಹದ್ದುಗಳು ಹೊಂದಿವೆ. ಆದರೂ ಈ ಬಾರಿ ಅಪರೂಪಕ್ಕೆ ಎಂಬಂತೆ ಮರಿ ಆಗಿರುವುದರಿಂದ ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯವಾಗಿಯೇ ರಣಹದ್ದುಗಳಿಗೆ ಆಹಾರ (Food) ದೊರೆಯುವಂತೆ ಮಾಡಲು ವೈದ್ಯರಿಂದ ಅನುಮತಿ ಪಡೆದ ಮಾಂಸವನ್ನು ಸ್ಥಳದಲ್ಲಿಯೇ ಒದಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತಿಸಿದ್ದಾರೆ. ಪಕ್ಕದಲ್ಲಿನ ನೀರಿನ ಹೊಂಡವನ್ನು ಸಹ ಶುಚಿಗೊಳಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿದೆ.

Bengaluru| ಬನ್ನೇರುಘಟ್ಟದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ

ಕಳೆದ ಆರು ವರ್ಷಗಳಿಂದ ಹಲವು ಕಾರಣಗಳಿಂದ ರಣಹದ್ದುಗಳಲ್ಲಿ ಸಂತಾನೋತ್ತತ್ತಿ ಆಗಿರಲಿಲ್ಲ. ಈಗ ಆಗಿರುವುದು ಖುಷಿ ತಂದಿದೆ. ರಣಹದ್ದು ಮರಿ ಮಾಡಿರುವುದು ಅಪರೂಪದ ಘಟನೆ ಎನ್ನುವಂತೆ ಆಗಿದೆ. 6 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮರಿ ಆಗಿದ್ದು , ಪ್ರಸ್ತುತ ಇಲ್ಲಿ ನಾಲ್ಕು ರಣಹದ್ದುಗಳು ಹಾಗೂ ಒಂದು ಮರಿ ಇದೆ. ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುತ್ತಾರೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟಿನ ಅಧ್ಯಕ್ಷ ಚಂದ್ರು(Chandru) ,ಹಾಗೂ ಕಾರ್ಯದರ್ಶಿ ಶಶಿ ಕುಮಾರ್ (Shashikumar) 

ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟವನ್ನು ರಣಹದ್ದುಗಳ ವನ್ಯಜೀವಿಧಾಮವನ್ನಾಗಿ ಘೋಷಣೆ ಮಾಡಿದ್ದರೂ ಇವುಗಳ ಸಂತತಿ ಗಣನೀಯವಾಗಿ ಕ್ಷೀಣಿಸುತ್ತಿದ್ದು, ವಿನಾಶದ ಅಂಚು ತಲುಪಿವೆ. ಜಗತ್ತಿನ ಅಳಿವಿನ ಅಂಚಿನಲ್ಲಿರುವ ಪಕ್ಷಿಗಳ ಪಟ್ಟಿಯಲ್ಲಿ ಇರುವ ಈ ಪಕ್ಷಿಗಳ ಸಂತತಿ ಉಳಿಸಿ ಹೆಚ್ಚಳ ಮಾಡಲು ರಾಜ್ಯ ಅರಣ್ಯ ಇಲಾಖೆ ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರ ಪ್ರಾರಂಭಿಸಲು ಯೋಜನೆ ಸಿದ್ಧಪಡಿಸಿದೆ. ಅಲ್ಲದೆ, ಅವುಗಳ ಸಂತಾನೋತ್ಪತ್ತಿಗೆ ಪೂರಕವಾದ ಪರಿಸರ ನಿರ್ಮಿಸಲು ಸಿದ್ಧತೆ ನಡೆಸಿದೆ.

ರಾಮನಗರದ ಪ್ರಾದೇಶಿಕ ವಿಭಾಗದಲ್ಲಿ ‘ಕನ್ಸರ್‌ವೇಷನ್‌ ಬ್ರೀಡಿಂಗ್‌ ಸೆಂಟರ್‌’ ಎಂಬ ಹೆಸರಿನಲ್ಲಿ ಕೇಂದ್ರ ಸ್ಥಾಪನೆ ಮಾಡಲಾಗುವುದು. ಈ ಕೇಂದ್ರವನ್ನು ಬಾಂಬೆ ನ್ಯಾಚುರಲ್‌ ಹಿಸ್ಟರ್‌ ಸೊಸೈಟಿ (ಬಿಎನ್‌ಎಚ್‌ಎಸ್‌) ಅವರ ಉಸ್ತುವಾರಿಯಲ್ಲಿ ನಿರ್ಮಿಸುತ್ತಿದ್ದು, ಕೇಂದ್ರ ಸ್ಥಾಪನೆ ಬಳಿಕ ಅದಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

click me!