2019ರ ಅವಧಿಯಲ್ಲಿ ಕರ್ನಾಟಕ ರಾಜಕೀಯದಲ್ಲಿ ಅನಿರೀಕ್ಷಿತ ಹಾಗೂ ಬೃಹತ್ ಬದಲಾವಣೆಗಳು ಆಗಿವೆ. ರಾಜ್ಯ ರಾಜಕಾರಣದಲ್ಲಿ ಅನೇಕ ಮಹತ್ವದ ಸ್ಥಿತ್ಯಂತರಗಳನ್ನು ಕಂಡಿದೆ. ಚುನಾವಣೆಗಳು, ರಾಜಕೀಯ ಪಕ್ಷಗಳ ಏಳು-ಬೀಳು, ಪ್ರತಿಭಟನೆ-ಹೋರಾಟಗಳು, ಪರ-ವಿರೋಧದ ಚರ್ಚೆಗಳು, ಹೊಸ ಕಾನೂನುಗಳು, ರಾಜಕೀಯ ಬದ್ಧವೈರಿಗಳ ನಡುವಿನ ಮೈತ್ರಿ, ಮಿತ್ರಪಕ್ಷಗಳ ನಡುವೆ ಕಿತ್ತಾಟ, ಪಕ್ಷದೊಳಗಿನ ಬಂಡಾಯ ಮುಂತಾದವು 2019ರ ಕರ್ನಾಟಕ ರಾಜಕಾರಣದಲ್ಲಿ ನಡೆದಿವೆ. ಅವುಗಳ ಒಂದು ರೌಂಡಪ್ ಈ ಕೆಳಗಿನಂತಿದೆ.
ಬೆಂಗಳೂರು, (ಡಿ.30): 2020ರ ಹೊಸ ವರ್ಷವನ್ನು ಸ್ವಾಗತಿಸುತ್ತಿರುವ ಸಂದರ್ಭದಲ್ಲಿ 2019ರ ಇಸ್ವಿಯಲ್ಲಿ ನಡೆದ ರಾಜಕೀಯ ವಿದ್ಯಮಾನಗಳ ಬಗ್ಗೆ ಗಮನ ಹರಿಸೋಣ
2019ನೇ ವರ್ಷಕ್ಕೆ ವಿದಾಯ ಹೇಳಲು ದಿನಗಣನೆ ಆರಂಭವಾಗಿದೆ. ಕರ್ನಾಟಕದ ರಾಜಕೀಯದ ಈ ವರ್ಷ ರೋಚಕ ತಿರುವುಗಳನ್ನು ಪಡೆದುಕೊಂಡು ದೇಶವೇ ತಿರುಗಿ ನೋಡುವಂತೆ ಮಾಡಿದೆ.
2019ರಲ್ಲಿ ಸದ್ದು ಮಾಡಿದ ಹನಿಟ್ರ್ಯಾಪ್ ಹಗರಣಗಳು, ಯಾರಿದ್ದೆಲ್ಲ ಹೆಸರು ಬಂತು!
2019 ಯಾರಿಗೆ ವರವಾಯ್ತು? ಯಾರಿಗೆ ಶಾಪವಾಯ್ತು? ಯಾರಿಗೆ ಅದೃಷ್ಟ ತಂದು ಕೊಟ್ಟಿತು? ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಮೂರೂ ಪಕ್ಷಗಳ ರಾಜಕೀಯ ಏಳು-ಬೀಳು ಸೇರಿದಂತೆ ಪ್ರಮುಖ ಘಟನಾವಳಿಗಳ ಮಾಹಿತಿ ಇಲ್ಲಿದೆ.
* ಜನವರಿಯಲ್ಲಿ ಕಾಂಗ್ರೆಸ್ ಶಾಸಕರ ಕಿತ್ತಾಟ
2019 ವರ್ಷ ವರುಷದ ಆರಂಭದಲ್ಲಿಯೇ ಕಾಂಗ್ರೆಸ್ ಶಾಸಕರ ಮಾರಾಮಾರಿ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿತ್ತು. ಕಂಪ್ಲಿ ಶಾಸಕ ಗಣೇಶ್ ಹಾಗೂ ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್ ನಡುವೆ ಬಿಡದಿಯ ಈಗಲ್ಟನ್ ರೇಸಾರ್ಟ್‌ನಲ್ಲಿ ಜಗಳವಾಗಿತ್ತು. ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಬಳಿಕ ಅವರು ಕಣ್ಮರೆಯಾಗಿದ್ರು. ಹಲ್ಲೆಗೊಳಗಾಗಿದ್ದ ಆನಂದ್ ಸಿಂಗ್ ಸುಮಾರ್ 15ಕ್ಕೂ ಹೆಚ್ಚು ದಿನ ಶೇಷಾದ್ರಿಪುರಂನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ರು, ಕಣ್ಣು, ಮುಖಕ್ಕೆ ಬಲವಾದ ಏಟು ಬಿದ್ದಿತ್ತು. ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಷ್ಟೇ ಅಲ್ಲದೇ ಗಣೇಶ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಕೊನೆಗೆ ಗಣೇಶ್ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ರು. ತದನಂತರ ಗಣೇಶ್ ಜಾಮೀನಿನ ಹೊರಬಂದಿದ್ದರಿಂದ ಕಾಂಗ್ರೆಸ್ ಅಮಾನತ್ತು ವಾಪಸ್ ಪಡೆದುಕೊಂಡಿತ್ತು.
2019ರ ಕರ್ನಾಟಕ : ಭೀಕರ ಜಲಪ್ರಳಯದ ಹೊರತು ಮತ್ತೇನೆನಾಯ್ತು ?
* ಮೈತ್ರಿ ಸರ್ಕಾರ ಕುಸಿತಕ್ಕೆ ಚಾಲನೆ ದೊರೆತ್ತಿದ್ದೆ ಫೆಬ್ರವರಿಯಲ್ಲಿ
ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗೆ ಚಾಲನೆ ಸಿಕ್ಕಿದೆ 2019ರ ಫೆಬ್ರವರಿ ತಿಂಗಳಲ್ಲಿ. ಅದರಲ್ಲೂ ಮೈತ್ರಿ ಸರ್ಕಾರ ಕುಸಿತಕ್ಕೆ ಚಾಲನೆ ದೊರೆತ್ತಿದ್ದೆ ಇದೇ ಫೆಬ್ರುವರಿಯಲ್ಲಿ. ಹೌದು...ನೂರಕ್ಕೆ ನೂರು ನಿಜ.... ರೆಬೆಲ್ ಶಾಸಕರೆಂದೇ ಗುರುತಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ 7 ಜನ ಶಾಸಕರು ಮುಂಬೈನ ಖಾಸಗಿ ಹೊಟೇಲೊಂದಕ್ಕೆ ಶಿಫ್ಟ್ ಆಗುತ್ತಾರೆ. ಅಷ್ಟೇ ಅಲ್ಲದೇ ವಿಧಾನಮಂಡಲದ ಅಧಿವೇಶನಕ್ಕೆ ಬಾರದೇ ಪಕ್ಷಕ್ಕೆ ವಿಪ್ ಉಲ್ಲಂಘಿಸಿದ್ದರು. ಈ ಮೂಲಕ ಮೈತ್ರಿ ಸರ್ಕಾರಕ್ಕೆ ನಮ್ಮ ಬೆಂಬಲವಿಲ್ಲ ಎಂದು ಸಂದೇಶ ರವಾನಿಸಿದ್ರು.
ಮೈತ್ರಿಯಲ್ಲಿ ಅಸಮಾಧಾನದ ಹೊಗೆ
ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬಿ.ಸಿ.ಪಾಟೀಲ್, ರಾಮಲಿಂಗಾರೆಡ್ಡಿ, ಆರ್.ರೋಷನ್ ಬೇಗ್, ಸತೀಶ್ ಜಾರಕಿಹೊಳಿ, ಡಾ.ಕೆ,ಸುಧಾಕರ್, ಎಂಟಿಬಿ ನಾಗರಾಜ್ ಸೇರಿದಂತೆ 15 ಜನ ಶಾಸಕರು ಬಿಜೆಪಿಗೆ ಹೊಗುತ್ತಾರೆಂಬ ಊಹಾಪೋಹ ಹರಡಿಸಿ ಮೈತ್ರಿ ಸರ್ಕಾರಕ್ಕೆ ಆತಂಕ ಸೃಷ್ಟಿಸಲಾಗುತ್ತದೆ. ಇದೇ ವೇಳೆ ಮೈತ್ರಿ ಸರ್ಕಾರದಲ್ಲಿ ಭಾಗಿಯಾಗಿದ್ದ ಬಿಎಸ್ಪಿ ಶಾಸಕ ಎನ್.ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಮತ್ತೊಂದೆಡೆ ಪ್ರಕೃತಿ ಚಿಕಿತ್ಸೆಗೆಂದು ಹೋದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಧರ್ಮಸ್ಥಳದ ಶಾಂತಿವನದಲ್ಲಿ ಕುಳಿತು ತಮ್ಮ ಆಪ್ತರೊಂದಿಗೆ ಮಾತನಾಡುತ್ತ ಮುಂದಿನ ಮುಖ್ಯಮಂತ್ರಿ ತಾನೇ ಎಂದು ಹೇಳಿದ ವಿಡಿಯೋವೊಂದು ಬಹಿರಂಗವಾಗಿ ಜೆಡಿಎಸ್ ನವರ ನಿದ್ದೆಗೆಡಿಸುವಂತೆ ಮಾಡಿದ್ರು. ಎಚ್‌ಡಿಕೆ ಸಹೋದರ ಎಚ್‌ಡಿ ರೇವಣ್ಣ ಎಲ್ಲ ಇಲಾಖೆಗಳಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂದು ಕೆಲ ಸಚಿವರು ಅಸಮಾಧಾನ ಹೊರಹಾಕುತ್ತಾರೆ. ಅಲ್ಲಿಂದ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಸ್ಪೋಟಗೊಂಡಿತು.
* ಫೆಬ್ರವರಿ 8: ಬಿಎಸ್‌ವೈ ಆಡಿಯೋ ಬಾಂಬ್ ಸ್ಫೋಟ
ಅತ್ತ ಕಾಂಗ್ರೆಸ್ ಶಾಸಕರು ಮುನಿಸಿಕೊಂಡು ಮುಂಬೈ ಸೇರಿದ್ರೆ, ಮತ್ತೊಂದೆಡೆ ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಲು ಮುಂದಾಗಿದ್ದ ಯಡಿಯೂರಪ್ಪನವರ ಆಡಿಯೋ ಸ್ಫೋಟಗೊಂಡಿತ್ತು. ಯಾದಗಿರಿ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಅವರನ್ನು ಬಿಜೆಪಿಗೆ ಸೆಳೆಯಲು ಯಡಿಯೂರಪ್ಪ ಆಮಿಷ ಒಡ್ಡಿದ್ದರು ಎನ್ನಲಾದ ಆಡಿಯೋವನ್ನು ಅಂದು ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಈ ಪ್ರಕರಣ ಕಲಬುರಗಿ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.
* ಮಾರ್ಚ್ 5ಕ್ಕೆ ಕಾಂಗ್ರೆಸ್‌ನ ಫಸ್ಟ್ ವಿಕೆಟ್ ಔಟ್
ಕಲಬುರಗಿಯ ಚಿಂಚೊಳ್ಳಿ ಶಾಸಕ ಉಮೇಶ್ ಜಾಧವ್, ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕುತ್ತಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಇವರು ಅಡ್ಡಗಾಲಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ತೊರೆದು ನಿರೀಕ್ಷೆಯಂತೆ ಬಿಜೆಪಿ ಸೇರುತ್ತಾರೆ. ಮುಂದೆ ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ರುಚಿ ತೋರಿಸುತ್ತಾರೆ. ಅಷ್ಟೇಯಲ್ಲ ತಮ್ಮಿಂದ ತೆರವಾದ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲು ತಮ್ಮ ಮಗ ಅವಿನಾಶ್ ಜಾಧವ್‌ಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ ಗೆಲ್ಲಿಸುವಲ್ಲಿ ಯಶ್ವಸ್ವಿಯಾಗುತ್ತಾರೆ.
ಏಪ್ರಿಲ್ : ಕಾಂಗ್ರೆಸ್ ನಿಂದ ಜಾರಿದ ರಮೇಶ್
ತಮ್ಮ ಸಹೋದರ ಸತೀಶ್ ಜಾರಕಿಹೊಳಿಯವರಿಂದಲೂ ದೂರವಾದ ರೆಬೆಲ್ ಸ್ಟಾರ್ ರಮೇಶ್ ಜಾರಕಿಹೊಳಿ ಕೊನೆಗೆ ಕೆಲದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಗುವುದಿಲ್ಲ. ಈ ವೇಳೆ ಗೋಕಾಕ್ ಸಾಹುಕಾರ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳುತ್ತಾರೆಂಬ ಸುದ್ದಿಯೊಂದು ಹೊರ ಬೀಳುತ್ತದೆ. ರಮೇಶ್ ಜಾರಕಿಹೊಳಿ ಅವರೊಂದಿಗೆ ಕಾಂಗ್ರೆಸ್ ನ ಕೆಲ ಶಾಸಕರೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಯತ್ತ ಮುಖ ಮಾಡುತ್ತಾರೆ. ರಮೇಶ್ ಜಾರಕಿಹೊಳಿ ಮತ್ತು ಅವರ ಟೀಂ ಬಿಜೆಪಿ ಸೇರುವ ಕುರಿತಾಗಿ ಅಮಿತ್ ಶಾ ಅವರೊಂದಿಗೆ ಮೊದಲ ಸುತ್ತಿನ ಮಾತುಕತೆಯೂ ಮುಗಿದಿದೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತದೆ.
ಲೋಕಸಭಾ ಚುನಾವಣೆ
ಈ ರಾಜ್ಯ ರಾಜಕೀಯ ಹೈಡ್ರಾಮದ ನಡುವೆಯೇ 17ನೇ ಲೋಕಸಭೆ ಚುನಾವಣೆ ಎದುರಾಗುತ್ತೆ. ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸೀಟು ಹಂಚಿಕೆಯಲ್ಲಿ ಮತ್ತಷ್ಟು ಹಗ್ಗಜಗ್ಗಾಟ ನಡೆಯುತ್ತೆ. ಕೊನೆಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಎಲ್ಲವೂ ಓಕೆ ಆದ್ರೆ, ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ನಡುವೆ ಹೊಂದಾಣಿಕೆ ಇರಲ್ಲ. ಹೀಗಾಗಿ ಕಾಂಗ್ರೆಸ್ ಕೇವಲ ಒಂದಲ್ಲಿ ಗೆದ್ರೆ, ಬಿಜೆಪಿ 27 ಗೆಲುವು ಸಾಧಿಸಿತು.
ದೋಸ್ತಿ ನಾಯಕರ ಕೆಸರೆರಚಾಟ
ಲೋಕಸಭೆ ಚುನಾವಣೆಯಲ್ಲಿ ತುಮಕೂರಿನಲ್ಲಿ ಸ್ಪರ್ಧಿಸಿದ್ದ ದೇವೇಗೌಡ್ರು, ಮಂಡ್ಯದಿಂದ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಸೋಲು ಕಂಡರು. ಇದ್ರಿಂದ ಜೆಡಿಎಸ್ ನಾಯಕರಿಗೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯ್ತು. ಅಷ್ಟೇ ಅಲ್ಲದೇ ಜೆಡಿಎಸ್-ಕಾಂಗ್ರೆಸ್ ಕಾರ್ಯರ್ತರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಿತ್ತಾಟಗಳು ನಡೆದವು. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಅಪ್ಪ-ಮಕ್ಕಳು ಸಹ ವಾಗ್ದಾಳಿ ನಡೆಸಿದ್ರು.
ಮೇ ತಿಂಗಳ ರಾಜಕೀಯ ಆಟ
ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಮೇ ತಿಂಗಳಲ್ಲಿ ಕಾಂಗ್ರೆಸ್ – ಜೆಡಿಎಸ್ ನಡುವೆ ಸಮನ್ವಯದ ಕೊರತೆ ಎದ್ದು ಕಂಡಿದ್ದು, ಗೊಂದಲ ಮತ್ತಷ್ಟು ಹೆಚ್ಚಾಗುತ್ತದೆ. ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್ ಸೇರಿದಂತೆ ಇನ್ನು ಕೆಲವರು ರಮೇಶ್ ಜಾರಕಿಹೊಳಿ ಅವರೊಂದಿಗೆ ರಾಜೀನಾಮೆ ಕೊಡುತ್ತಾರೆಂಬ ವದಂತಿ ಹರಿದಾಡುತ್ತದೆ. ಇದರ ನಡುವೆ, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಿವಾಜಿನಗರದ ಶಾಸಕ ಆರ್. ರೋಷನ್ ಬೇಗ್ ತಮಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಕೋಪಗೊಂಡು ಪಕ್ಷದಲ್ಲಿ ತಮ್ಮಂಥ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ವಿರುದ್ಧ ಬಹಿರಂಗವಾಗಿ ವಾಚಾಮಗೋಚರ ವಾಗ್ದಾಳಿ ನಡೆಸುತ್ತಾರೆ.
ಜೂನ್ ತಿಂಗಳಲ್ಲಿ ಹೈಡ್ರಾಮಾ
ಮೇ ತಿಂಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಮೈತ್ರಿ ಸರ್ಕಾರ ವಿರುದ್ಧ ಸಿಡಿದೆದ್ದು, ಮುಂಬೈ ಸೇರಿಕೊಂಡರು. ಬಳಿಕ ಜೂನ್‌ನಲ್ಲಿ ಬಂಡಾಯ ಶಾಸಕರು ತಮ್ಮ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗದೇ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆಗಳನ್ನ ನಡೆಸುತ್ತಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ಬಿಜೆಪಿ ನಾಯಕರ ಜತೆ ಸಹ ತಮ್ಮ ರಾಜಕೀಯ ನಡೆ ಬಗ್ಗೆ ಚರ್ಚೆಗಳನ್ನ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತಾರೆ.
ಜುಲೈನಲ್ಲಿ ರಾಜೀನಾಮೆ ಪರ್ವ
ಜೂನ್‌ನಲ್ಲಿ ತೆಗೆದುಕೊಂಡು ಅಂತಿಮ ನಿರ್ಧಾರ ಜುಲೈನಲ್ಲಿ ರಾಜೀನಾಮೆ ಪರ್ವ ನಡೆಯಿತು. ಜುಲೈ 1 ರಂದು ಹೊಸಪೇಟೆಯ ‘ಕೈ’ ಶಾಸಕ ಆನಂದ್ ಸಿಂಗ್ ಮತ್ತು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ. ಜಾರಕಿಹೊಳಿ ರಾಜೀನಾಮೆ ಕೊಟ್ಟ ಬೆನ್ನಲ್ಲೇ ರಾಜಕೀಯ ಮೇಲಾಟಗಳು ಗರಿಗೆದರುತ್ತವೆ. ಕೇವಲ ಒಂದು ವಾರದ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ 12 ಶಾಸಕರು ರಾಜೀನಾಮೆ ನೀಡುತ್ತಾರೆ. ಮತ್ತಷ್ಟು ಶಾಸಕರು ಮುಂಬೈ ರೆಸಾರ್ಟ್ ಸೇರಿಕೊಳ್ಳುತ್ತಾರೆ. ಆಗ ಸರ್ಕಾರದ ವಿರುದ್ಧ ಬಂಡಾಯವೆದ್ದವರ ಸಂಖ್ಯೆ 17 ತಲುಪುತ್ತದೆ. ಅಲ್ಲಿಗೆ ಒಂದು ಮೈತ್ರಿ ಸರ್ಕಾರದ ಭವಿಷ್ಯ ತೂಗುಯ್ಯಾಲೆಯಲ್ಲಿ ಸಿಕ್ಕಂತಾಗುತ್ತದೆ.
ಬರಿಗೈಯಲ್ಲಿ ವಾಪಸ್ ಆದ ಡಿಕೆಶಿ
ಆಗ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ಕಾಂಗ್ರೆಸ್ ಹೈಕಮಾಂಡ್, ಅತೃಪ್ತರ ಮನವೊಲಿಸಿ ಅವರನ್ನು ಹೇಗಾದರೂ ಮಾಡಿ ವಾಪಸ್ಸು ಕರೆತರುವ ಜವಾಬ್ದಾರಿಯನ್ನು ಟ್ರಬಲ್ ಶೂಟರ್ ಎಂದೇ ಖ್ಯಾತರಾದ ಡಿ.ಕೆ.ಶಿವಕುಮಾರ್ ಅವರ ಹೆಗಲಿಗೆ ಹಾಕುತ್ತದೆ. ಅತೃಪ್ತ ಶಾಸಕರನ್ನು ಕರೆತರಲೆಂದು ಹೋದ ಡಿ.ಕೆ ಶಿವಕುಮಾರ್ ಬರಿಗೈಯಿಂದ ವಾಪಸ್ಸಾಗುವಂತಾಗುತ್ತದೆ. ಯಾಕೆಂದರೆ, ರೆಸಾರ್ಟ್ ನ ಒಳಕ್ಕೆ ಹೋಗುವುದಕ್ಕೇ ಡಿಕೆಶಿ ಯವರನ್ನು ಬಿಟ್ಟಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಡಿಕೆಶಿ, ಒಬ್ಬ ಜನಪ್ರತಿನಿಧಿಗೆ ಹೋಟೇಲ್ ನವರು ಒಳಗೆ ಬಿಡದೇ ಅವಮಾನಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ನಮ್ಮ ಶಾಸಕರನ್ನು ಕಾವಲು ಕಾಯುತ್ತಿದೆ ಅಂತೆಲ್ಲಾ ವಾಗ್ದಾಳಿ ನಡೆಸಿದ್ದರು.
ಜುಲೈ 23ಕ್ಕೆ ಬಹುಮತ ಕಳೆದುಕೊಂಡ ದೋಸ್ತಿ ಸರ್ಕಾರ
ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ರಾಜೀನಾಮೆಯಿಂದಾಗಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಯ್ತು. ಅಲ್ಪಮತಕ್ಕೆ ಕುಸಿದ ಕುಮಾರಸ್ವಾಮಿ ಸರ್ಕಾರ ಮುಂದುವರೆಯಕೂಡದು ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಎಚ್‌ಡಿಕೆ ರಾಜೀನಾಮೆ ಕೊಡಬೇಕೆಂದು ಕಮಲಪಾಳಯದ ನಾಯಕರು ಒತ್ತಾಯಿಸುತ್ತಾರೆ. ಆಗ ಸಿಎಂ ಕುಮಾರಸ್ವಾಮಿ ತಾವು ಬಹುಮತ ಸಾಬೀತು ಪಡಿಸುವುದಾಗಿ ಹೇಳುತ್ತಾರೆ. ಜುಲೈ 18 ರಿಂದ ನಡೆಯಲಿರುವ ವಿಧಾನಸಭೆ ಅಧಿವೇಶನದಿಂದ ಅನರ್ಹರು ಹೊರಗುಳಿಯಬಹುದೆಂದು ಕೋರ್ಟ್ ತಿಳಿಸುತ್ತದೆ. ಇದರಿಂದ ವಿಪ್ ಉಲ್ಲಂಘನೆ ಎಂಬ ತೂಗುಗತ್ತಿಯಿಂದ ಎಲ್ಲ ಅನರ್ಹ ಕಾಂಗ್ರೆಸ್ ಶಾಸಕರು ಪಾರಾಗುತ್ತಾರೆ. ದಿನಾಂಕ 23.7.2019 ರಂದು ಬಹುಮತ ಸಾಬೀತು ಎಂಬ ಅಗ್ನಿಪರೀಕ್ಷೆಯಲ್ಲಿ ಕುಮಾರಸ್ವಾಮಿಯವರಿಗೆ ನಿರೀಕ್ಷೆಯಂತೆ ಸೋಲಾಗುತ್ತದೆ. ಮೈತ್ರಿ ಪಕ್ಷಕ್ಕೆ 100 ಮತಗಳು ಬಂದರೆ, ಬಿಜೆಪಿಗೆ 107 ಮತಗಳು ಲಭಿಸುತ್ತವೆ. ಅಂದೇ ಮುಖ್ಯಮಂತ್ರಿ ಸ್ಥಾನಕ್ಕೆ ಎಚ್‌ಡಿಕೆ ರಾಜೀನಾಮೆ ಸಲ್ಲಿಸಿ ಹೊರ ನಡೆಯುತ್ತಾರೆ.
17 ಶಾಸಕರ ರಾಜೀನಾಮೆ ಅಸಿಂಧು
ರಾಜೀನಾಮೆಗಳನ್ನು ಅಂಗೀಕರಿಸಲು ಬರುವುದಿಲ್ಲ. ಯಾಕೆಂದರೆ, ಅತೃಪ್ತರು ಸ್ಪೀಕರ್ ಕಚೇರಿಗೆ ಬಂದು ರಾಜೀನಾಮೆ ಸಲ್ಲಿಸಿಲ್ಲ ಎಂದು ಸ್ಪೀಕರ್ ಸ್ಪೀಕರ್ ರಮೇಶ್ ಕುಮಾರ್ ಬಾಂಬ್ ಸಿಡಿಸಿದದ್ದೇ ತಡ ರೆಸಾರ್ಟ್ ನಿಂದ ಓಡೋಡಿ ಬಂದು ಮತ್ತೊಮ್ಮೆ ತಮ್ಮ ರಾಜೀನಾಮೆ ಸಲ್ಲಿಸಿ ಯಾರ ಕೈಗೂ ಸಿಗದಂತೆ ಹೋಗುತ್ತಾರೆ. ಈ ವೇಳೆ ಸ್ಪೀಕರ್ ರಮೇಶ್ ಕುಮಾರ್ ಈ ಎಲ್ಲ ಶಾಸಕರನ್ನು ನಾನು ಸುಮ್ಮನೆ ಬಿಡಲ್ಲವೆಂದುಕೊಂಡು ಕಾನೂನು ಕ್ರಮಕ್ಕೆ ಮುಂದಾಗುತ್ತಾರೆ. ಪಕ್ಷಾಂತರ ನಿಷೇಧ ಕಾನೂನು ಅಡಿಯಲ್ಲಿ ಎಲ್ಲ 17 ಶಾಸಕರನ್ನು ಅನರ್ಹಗೊಳಿಸುತ್ತಾರೆ. ಇದನ್ನು ಪ್ರಶ್ನಿಸಿ ಎಲ್ಲ ಅನರ್ಹ ಶಾಸಕರು ಜುಲೈ 12 ರಂದು ಕೋರ್ಟ್ ಮೆಟ್ಟಿಲೇರುತ್ತಾರೆ. ಈ ವೇಳೆ, ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನತ್ತ ನೆಟ್ಟಿರುತ್ತೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ವಿಭಾಗೀಯ ಪೀಠದ ಮುಂದೆ 17 ಜನ ಅತೃಪ್ತರ ಪ್ರಕರಣ ವಿಚಾರಣೆಗೆ ಬರುತ್ತದೆ.
ಮತ್ತೆ ಸಿಎಂ ಪಟ್ಟ ಅಲಂಕರಿಸಿದ ಬಿಎಸ್‌ವೈ
ಕುಮಾರಸ್ವಾಮಿ ರಾಜೀನಾಮೆ ಬೆನ್ನಲ್ಲೇ ಇಂಥ ದಿನದ ಬರುವಿಕೆಗಾಗಿಯೆ ಕಾಯುತ್ತಿದ್ದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, 107 ಶಾಸಕರ ಬೆಂಬಲ ತಮ್ಮ ಪಕ್ಷಕ್ಕಿದ್ದು ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಕೋರಿ ರಾಜ್ಯಪಾಲರಲ್ಲಿ ಹಕ್ಕು ಮಂಡಿಸುತ್ತಾರೆ. ಬಳಿಕ ದಿನಾಂಕ 26.7.2019 ರಂದು BSY ನಾಲ್ಕನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.
ಸೆಪ್ಟಂಬರ್‌ನಲ್ಲಿ ಬೈ ಎಲೆಕ್ಷನ್ ಘೋಷಣೆ
ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯ ವಿಧಾನಸಭೆ ಚುನಾವಣೆಯೊಂದಿಗೆ ರಾಜ್ಯದ 15 ಕ್ಷೇತ್ರಗಳಿಗೂ ಅಕ್ಟೋಬರ್ 21 ರಂದು ಉಪಚುನಾವಣೆಯನ್ನು ನಡೆಸುವ ಬಗ್ಗೆ ಚುನಾವಣಾ ಆಯೋಗ ಸೆಪ್ಟಂಬರ್ ಮೂರನೇ ವಾರದಲ್ಲಿ ಅಧಿಸೂಚನೆಯನ್ನು ಹೊರಡಿಸುತ್ತದೆ. ಆದ್ರೆ, 17 ಕ್ಷೇತ್ರಗಳ ಪೈಕಿ ರಾಜರಾಜೇಶ್ವರಿನಗರ ಮತ್ತು ಮಸ್ಕಿ ಕ್ಷೇತ್ರವನ್ನು ಹೊರತುಪಡಿಸಿ ಇನ್ನುಳಿದ 15 ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಿಗದಿಯಾಯ್ತು. ಸ್ಪೀಕರ್ ಆದೇಶ ಪ್ರಶ್ನಿಸಿದ ಅನರ್ಹ ಶಾಸಕರ ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಚುನಾವಣೆಯ ದಿನಾಂಕವನ್ನುಮುಂದೂಡುವಂತೆ ಸುಪ್ರೀಂ ಕೋರ್ಟ್, ಆಯೋಗಕ್ಕೆ ಸೂಚನೆ ನೀಡಿದ ಪರಿಣಾಮ ಚುನಾವಣಾ ದಿನಾಂಕವು ಡಿಸೆಂಬರ್ 5 ಕ್ಕೆ ನಿಗದಿಯಾಗುತ್ತದೆ.
ಅಕ್ಟೋಬರ್‌ನಲ್ಲಿ ಕೆಸರೆರೆಚಾಟ
ಮೈತ್ರಿ ಸರ್ಕಾರ ಪತನದ ಬಳಿಕ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತ ಕಾಂಗ್ರೆಸ್ -ಜೆಡಿಎಸ್ ಮುಖಂಡರು ಒಬ್ಬರಿಗೊಬ್ಬರು ವ್ಯತಿರಿಕ್ತ ಹೇಳಿಕೆ ನೀಡಲಾರಂಭಿಸುತ್ತಾರೆ. ತಮಗೆ ಸರಿಯಾಗಿ ಆಡಳಿತ ಮಾಡಲು ಕೈ ನಾಯಕರು ಬಿಡಲಿಲ್ಲ. ಅದರಲ್ಲೂ ಸಿದ್ದರಾಮಯ್ಯ ಪದೇ ಪದೇ ಮುಂದಿನ ಮುಖ್ಯಮಂತ್ರಿ ತಾನೇ ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಗೊಂದಲ ಉಂಟಾಗಲು ಕಾರಣರಾದರು. ಅಷ್ಟೇಯಲ್ಲ, ಅತೃಪ್ತ ಶಾಸಕರೆಲ್ಲ ಸಿದ್ದರಾಮಯ್ಯ ಬಣದವರೇ ಎಂದು ಕುಮಾರಸ್ವಾಮಿ ಮತ್ತು ಹೆಚ್.ಡಿ.ದೇವೇಗೌಡ ಹರಿಹಾಯುತ್ತಾರೆ. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಜೆಡಿಎಸ್ ನವರ ಸ್ವಾರ್ಥಕ್ಕೆ ಸರ್ಕಾರ ಬೀಳುವಂತಾಯಿತು ಎನ್ನುತ್ತಾರೆ. ಜೆಡಿಎಸ್ ನಿಂದಾಗಿ ಕಾಂಗ್ರೆಸ್ ಪಕ್ಷದ ಘನತೆಗೆ ಚ್ಯುತಿ ಬಂದಿದೆ ಎಂದೂ ಆರೋಪಿಸುತ್ತಾರೆ. ಈ ನಡುವೆ ಟೆಲಿಫೋನ್ ಕದ್ದಾಲಿಕೆ ಆರೋಪ ಕೆಲ ದಿನ ಸದ್ದು ಮಾಡುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಪೊಲೀಸ್ ಅಧಿಕಾರಿ ಸೇರಿದಂತೆ ಹಿಂದಿನ ಸರ್ಕಾರದಲ್ಲಿದ್ದವರನ್ನು ಗುರಿಯಾಗಿರಿಸಿ ತನಿಖೆಗೆ ಆದೇಶಿಸುತ್ತಾರೆ. ಇನ್ನು ಅಕ್ಟೋಬರ್ 25 ರಂದು ಅನರ್ಹ ಶಾಸಕರ ವಿಚಾರಣೆಯನ್ನು ಅಂತ್ಯಗೊಳಿಸಿದ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನವೆಂಬರ್ 13ಕ್ಕೆ ಕಾಯ್ದಿರಿಸುತ್ತದೆ.
ನವೆಂಬರ್ 13ರಂದು ಅನರ್ಹ ಶಾಸಕರ ತೀರ್ಪು
15 ಅತೃಪ್ತ ಶಾಸಕರ ಪರವಾಗಿ ಮುಕುಲ್ ರೋಹಟಗಿ ವಾದ ಮಂಡಿಸಿದರೆ, ಸಿಎಂ ಪರವಾಗಿ ರಾಜೀವ್ ದವನ್ ಸುಪ್ರಿಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಾರೆ.ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ನವೆಂಬರ್ 17 ಕ್ಕೆ ನಿವೃತ್ತಿಯಾಗುವ ಮುನ್ನ ಪ್ರಮುಖ 5-10 ಪ್ರಕರಣಗಳ ತೀರ್ಪು ನೀಡುವುದು ಬಾಕಿ ಇರುತ್ತದೆ. ಅದರಲ್ಲಿ 15 ಅನರ್ಹ ಶಾಸಕರ ಪ್ರಕರಣವೂ ಸೇರಿರುತ್ತದೆ. ಕೊನೆಗೆ ಆ ದಿನ ಬಂದೇ ಬಿಡುತ್ತದೆ. ಸ್ಪೀಕರ್ ತೀರ್ಪನ್ನು ಎತ್ತಿ ಹಿಡಿದ ಕೋರ್ಟ್, ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಆದರೆ, ಅದಕ್ಕೂ ಮುನ್ನ ಅವರು ಸಚಿವರಾಗುವ ಹಾಗಿಲ್ಲ. ಇನ್ನು ವಿಧಾನಸಭಾ ಅಧಿವೇಶನಕ್ಕೆ ಹಾಜರಾಗುವಂತೆ ಅನರ್ಹ ಶಾಸಕರ ಮೇಲೆ ಯಾವುದೇ ರೀತಿಯ ಒತ್ತಡ ಹೇರುವಂತಿಲ್ಲ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶವಿದೆ ಎಂದು ಸುಪ್ರೀಂ ತನ್ನ ತೀರ್ಪಿನಲ್ಲಿ ತಿಳಿಸುತ್ತದೆ. ಇದ್ರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಮುಖಭಂಗವಾದ್ರು, ಅವರನ್ನು ಸುಪ್ರೀಮ ಅನರ್ಹರು ಎಂದು ಹೇಳಿದೆ ಎಂಬ ಮೇಲ್ನೋಟಕ್ಕೆ ಸಂತಸ ವ್ಯಕ್ತಪಡಿಸಿದ್ರು.
ಡಿಸೆಂಬರ್: ಬಿಜೆಪಿಗೆ ಬಿಗ್ ಟಾಸ್ಕ್
ಹೌದು...ಅನರ್ಹರಿಂದ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಡಿಸೆಂಬರ್ 5 ರಂದು ಉಪ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗುತ್ತದೆ. ಹೇಗಾದರೂ ಮಾಡಿ ಅನರ್ಹ 15 ಶಾಸಕರನ್ನು ಗೆಲ್ಲಿಸಿಕೊಂಡು ಬರುವ ಒತ್ತಡಕ್ಕೊಳಗಾದ ಸಿಎಂ ಯಡಿಯೂರಪ್ಪಗೆ ರಾಜ್ಯ ಬಿಜೆಪಿ ನಾಯಕರು ನಿರೀಕ್ಷೆಯಂತೆ ಸಾಥ್ ನೀಡದಿರುವುದು ಸವಾಲಾಗಿ ಪರಿಣಮಿಸುತ್ತದೆ.
ಅನರ್ಹರು ಅರ್ಹರಾದ್ರೆ ಮಂತ್ರಿ
ರಾಜೀನಾಮೆ ಕೊಟ್ಟು ಬಂದು ಬಿಜೆಪಿ ಬಾವುಟ ಹಿಡಿದ ಎಲ್ಲ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸುವ ಭರವಸೆಯನ್ನು ಬಿಎಸ್ವೈ ನೀಡಿರುತ್ತಾರೆ. ಇದು ಬಿಜೆಪಿಯಲ್ಲಿ ಆಂತರಿಕ ಘರ್ಷಣೆಗೆ ನಾಂದಿ ಹಾಡುತ್ತದೆ. ವಲಸಿಗರಿಗೆ ಮಣೆ ಹಾಕಿದರೆ ತಮಗೆ ಸಚಿವ ಸ್ಥಾನ ಕೈತಪ್ಪುತ್ತದೆ. ಮತ್ತು ಬಿಎಸ್ವೈ ಆಮೂಲಕ ಮತ್ತಷ್ಟು ಸ್ಟ್ರಾಂಗ್ ಆಗುತ್ತಾರೆ ಎಂದು ಬಿಜೆಪಿಯಲ್ಲಿನ ಕೆಲವರು ಒಳಗೊಳಗೆ ಕತ್ತಿ ಮಸಿಯುತ್ತಾರೆ.
ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಿದ BSY
ಆತಂಕಕ್ಕೊಳಗಾದ ಅನರ್ಹರಿಗೆ ಇದ್ಯಾವುದಕ್ಕೂ ನೀವ್ಯಾರೂ ತಲೆಕೆಡಿಸಿಕೊಳ್ಳದೆ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿ, ಮುಂದಿನದು ನನಗೆ ಬಿಡಿ ಎಂದು ಬಿಎಸ್ವೈ ಭರವಸೆ ನೀಡುತ್ತಾರೆ. ಜೊತೆಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ತಿರುಗುತ್ತಾರೆ. ಪರಿಣಾಮ ಬಿಜೆಪಿ 12 ಸ್ಥಾನ ಗೆದ್ದು ಬೀಗುತ್ತದೆ. ಕಾಂಗ್ರೆಸ್ ಕೇವಲ 2 ರಲ್ಲಿ (ಶಿವಾಜಿನಗರ, ಹುಣಸೂರು) ಗೆಲ್ಲುವ ಮುಖಭಂಗ ಅನುಭವಿಸಿತು. ಇನ್ನು ಜೆಡಿಎಸ್ ಶೂನ್ಯ ಸಂಪಾದನೆಯಾಗಿರುತ್ತದೆ. ಈ ಉಪಚುನಾವಣೆಯ ಫಲಿತಾಂಶ ಹೀಗೇ ಬರಬಹುದೆಂದು ಚುನಾವಣೋತ್ತರ ಸಮೀಕ್ಷೆಯ ವರದಿಗಳ ಊಹೆಯಾಗಿತ್ತು. ಅದು 11.12.2019 ರಂದು ಪ್ರಕಟಗೊಂಡ ಚುನಾವಣಾ ಫಲಿತಾಂಶವೂ ತಾಳೆಯಾಗುವಂತ್ತಿತ್ತು.
ಸಿದ್ದು, ದಿನೇಶ್ ರಾಜೀನಾಮೆ
ಹೌದು..ಉಪಚುನಾವಣೆಯಲ್ಲಿ ಗೆದ್ದು ಹೇಗಾದ್ರೂ ಮಾಡಿ ಸರ್ಕಾರವನ್ನು ಉರುಳಿಸಬೇಕೆಂಬ ಕಾಂಗ್ರೆಸ್ ಪ್ಲಾನ್ ಫಲಿಸಲಿಲ್ಲ. ಇದರಿಂದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯನವರು ವಿರೋಧ ಪಕ್ಷಕ್ಕೆ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ರಾಜೀನಾಮೆ ನೀಡುತ್ತಾರೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಸಹ ರಿಸೈನ್ ಮಾಡ್ತಾರೆ.
ಪೌರತ್ವ ತಿದ್ದುಪಡಿ ಬೆಂಕಿಗೆ ರಾಜ್ಯದಲ್ಲಿ 2 ಬಲಿ!
ಡಿಸೆಂಬರ್‌ನಲ್ಲಿ ರಾಜಕೀಯ ಹೈಡ್ರಾಮದ ನಡುವೆ ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ಕಿಚ್ಚು ಜೋರಾಯ್ತು. ಇದನ್ನು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗುತ್ತವೆ. ಅದರ ಜ್ವಾಲೆ ಕರ್ನಾಟಕಕ್ಕೂ ಪಸರಿಸುತ್ತದೆ. ಡಿಸೆಂಬರ್ 19ರಂದು ಮಂಗಳೂರಿನಲ್ಲಿನ ನಡೆದ ಗಲಾಟೆ ತಾರಕಕ್ಕೇರಿ ಪೊಲೀಸ್ ಗೋಲಿಬಾರ್ ನಲ್ಲಿ ಇಬ್ಬರು ಬಲಿಯಾಗ್ತಾರೆ. ಈ ಹಿಂದೆ 2008 ರಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆದಿತ್ತು. ಕಾಕತಾಳಿಯವೆಂಬಂತೆ ಅಂದು ಕೂಡ ಇದೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಇದು ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತವೆ.
ಇಷ್ಟು 2019ರ ಒಮದು ವರ್ಷದಲ್ಲಿ ಕರ್ನಾಟಕ ರಾಜಕಾರಣದಲ್ಲಿ ಆದ ಬೆಳವಣಿಗೆಗಳು.