ಸಿಎಂ ಬೊಮ್ಮಾಯಿ‌ ಬಗ್ಗೆ ಹರಡೋ ವದಂತಿಯನ್ನು ಬಹುತೇಕರು ಯಾಕೆ ಅಷ್ಟು ಬೇಗ ನಂಬುತ್ತಾರೆ?

By Girish GoudarFirst Published Aug 10, 2022, 10:43 AM IST
Highlights

ಬಸವರಾಜ ಬೊಮ್ಮಾಯಿ ಬದಲಾವಣೆ ಸದ್ಯದ ಮಾಹಿತಿ ಪ್ರಕಾರ ಕೇವಲ ವದಂತಿ 

ವರದಿ: ರವಿ ಶಿವರಾಮ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಆ.10):  ನಿನ್ನೆಯಿಂದ ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‌ನ ಪ್ರಮುಖ ಸಚಿವರು ಓಡೋಡಿ‌ ಬಂದು, ಮಾಧ್ಯಮಕ್ಕೆ ಹೇಳಿಕೆ ನೀಡುತ್ತಿದ್ದಾರೆ. ಯಾವ ಕಾರಣಕ್ಕೂ ನಮ್ಮ ಮುಖ್ಯಮಂತ್ರಿಗಳು ಬದಲಾಗೋದಿಲ್ಲ. ಇದೆಲ್ಲಾ ಕಾಂಗ್ರೆಸ್ ‌ಕಿತಾಪತಿ. ಕಾಂಗ್ರೆಸ್ ಮನೆ ಕೆಟ್ಟಿದೆ, ಬೇರೆಯವರ ಮನೆ ಕೆಡಿಸೋದು ಹೇಗೆ ಎಂಬ ಚಿಂತೆ ಅವರಿಗೆ ಎಂದು ಸಚಿವರು ವಾಗ್ದಾಳಿ ಮಾಡ್ತಾ ಇದ್ದಾರೆ‌. 

ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಹೈಕಮಾಂಡ್ ಈಗಾಗಲೇ ಸ್ಪಷ್ಟವಾಗಿ ಹೇಳಿದೆ ಎನ್ನುವ ಮಾತುಗಳನ್ನು ಹಿರಿಯ ಸಚಿವರಾದ ಆರ್. ಅಶೋಕ್ ಆದಿಯಾಗಿ, ಸುನೀಲ್ ಕುಮಾರ್, ಸಿಸಿ ಪಾಟೀಲ್, ರೇಣುಕಾಚಾರ್ಯ ಸಿಎಂ ಬದಲಾವಣೆ ಇಲ್ಲ ಅನ್ನೋದನ್ನ ಹೇಳುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ನಾನು ಹೇಳ್ತಿದ್ದೇನೆ ಬೊಮ್ಮಾಯಿ ಬದಲಾವಣೆ ಇಲ್ಲ ಎಂದು ಸಿಟಿ ರವಿ ತನ್ನ ಸ್ಥಾನದ ಮಹತ್ವವನ್ನು ಉಲ್ಲೇಖಿಸಿ ಹೇಳಿದ್ರು. ಅದರೆ, ಕ್ಯಾಬಿನೆಟ್ ಸಚಿವರು ಪಕ್ಷದ ಶಾಸಕರು ಹೀಗೆ ಹೇಳ್ತಾ ಇದ್ದಾರೆ ಸರಿ. ಆದರೆ ಯಡಿಯೂರಪ್ಪರ ಕೆಳಗಿಳಿಯುವ ಸಮಯದಲ್ಲಿ ಅಂದು ಗೃಹ ಮಂತ್ರಿ ಆಗಿದ್ದ ಬೊಮ್ಮಾಯಿ, ಆರ್ ಅಶೋಕ್ ಅಷ್ಟೇ ಯಾಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ಮಾಧ್ಯಮಕ್ಕೆ ಬಂದು ಇದೇ ರೀತಿ ಯಡಿಯೂರಪ್ಪ ಬದಲಾವಣೆ ಇಲ್ಲ ಎಂಬ ಮಾತನ್ನೇ ಹೇಳ್ತಾ ಇದ್ರು, ಮುಂದೆ ಏನಾಯಿತು ಎಲ್ಲರಿಗೂ ಗೊತ್ತಿದೆ. ಆದ್ರೆ ಈಗ ವಿಷಯ ಅದಲ್ಲ. ಬೊಮ್ಮಾಯಿ ಬದಲಾವಣೆ ವದಂತಿಗೆ ಮಹತ್ವ ನೀಡಿ ಕ್ಯಾಬಿನೆಟ್ ಸಚಿವರೆಲ್ಲಾ ಹೇಳಿಕೆ ನೀಡುವ ಮೂಲಕ ಆ ವಿಷಯದ ಗಾಂಭೀರ್ಯವನ್ನು ಯಾಕಿಷ್ಟು ಹೆಚ್ಚು ಮಾಡುತ್ತಿದ್ದಾರೆ ಅನ್ನೋದೆ ಅರ್ಥ ಆಗುತ್ತಿಲ್ಲ. 

ಕರ್ನಾಟಕಲ್ಲಿ 34,432 ಯೋಜನೆಗಳಿಗೆ ಓಕೆ: ಸಿಎಂ ಸಮಿತಿಯಿಂದ ಅನುಮೋದನೆ

ಅಷ್ಟಕ್ಕೂ ಬಸವರಾಜ ಬೊಮ್ಮಾಯಿ ಬದಲಾವಣೆ ಸದ್ಯದ ಮಾಹಿತಿ ಪ್ರಕಾರ ಕೇವಲ ವದಂತಿ. ಗಾಳಿ ಸುದ್ದಿಯೂ ಹೌದು, ಪ್ರತಿಪಕ್ಷಗಳ ಟೀಕೆಯೂ ಹೌದು. ಆದ್ರೆ ಪ್ರತಿಪಕ್ಷಗಳ ಟ್ವೀಟ್‌ಗೆ ಮಹತ್ವ ನೀಡಿ ಸಚಿವರು ಹೇಳಿಕೆ ನೀಡ್ತಾ ಇದ್ದಾರಾ ಅಥವಾ ಸ್ವತಃ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಬಲವಂತವಾಗಿ ಸಚಿವರು ಮಾತಾಡ್ತಾ ಇದ್ದಾರಾ?  ಮುಖ್ಯಮಂತ್ರಿಗಳ ಸೂಚನೆಯೂ ಇರಬಹುದು ಮತ್ತು ಈ ವದಂತಿಯೇ ಸತ್ಯ ಎಂದು ಜನ ನಂಬಿ ಬಿಡ್ತಾರೆ ಎನ್ನುವ ಆತಂಕವೂ ಇರಬಹುದು. ಹಾಗಾದರೆ ಬೊಮ್ಮಾಯಿ ಬದಲಾವಣೆ ವದಂತಿಯನ್ನು ಸಾರ್ವಜನಿಕರು, ಅಥವಾ ಪಕ್ಷದ ಹೊಸ ಹೊಸ ಶಾಸಕರು ಯಾಕೆ ಅಷ್ಟು ಬೇಗ ನಂಬುತ್ತಾರೆ ಅನ್ನೋದನ್ನ ವಿಮರ್ಶೆ ಮಾಡಿ ನೋಡಿದ್ರೆ ಒಂದು ವರ್ಷದ ಹಿಂದಕ್ಕೆ ಹೋಗಬೇಕಾಗುತ್ತದೆ. 

ಒಂದು ವರ್ಷದ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು ಹೇಗೆ?

ನೋಡಿ, ಬಸವರಾಜ ಬೊಮ್ಮಾಯಿಯವರ ತಂದೆ ಎಸ್.ಆರ್.ಬೊಮ್ಮಾಯಿ ಕಮ್ಯುನಿಸ್ಟ್ ಸಿದ್ಧಾಂತದ ಎಮ್.ಎನ್. ರಾಯ್ ಅವರ ಬಲವಾದ ಫಾಲೊವರ್. ಅವರ ಪುತ್ರ ಬಸವರಾಜ ಬೊಮ್ಮಾಯಿ ಈಗ ಬಲಪಂಥೀಯವಾದದ ಬಿಜೆಪಿ  ಪಾರ್ಟಿಯಲ್ಲಿ ಮುಖ್ಯಮಂತ್ರಿ ಆದ್ರು ಎನ್ನುವ ಮಾತನ್ನು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಆಯ್ಕೆಯಾದ ಮೊದಲ ದಿನವೇ ಬಿಜೆಪಿಯ ಹಿರಿಯ ನಾಯಕರೊಬ್ಬರು ಖಾಸಗಿಯಾಗಿ ಹೇಳಿದ್ರು. ಅದು ಹಾಗಿರಲಿ. ಯಡಿಯೂರಪ್ಪ ಸಿಎಂ ಸ್ಥಾ‌ನದಿಂದ ಕೆಳಗಿಳಿದ ಮೇಲೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ರು. ಯಡಿಯೂರಪ್ಪ ಮೂಲಕ ಬೊಮ್ಮಾಯಿ ಮುಖ್ಯಮಂತ್ರಿ ಆದ್ರೊ ಅಥವಾ ಹೈಕಮಾಂಡ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿತೊ, ಹೈಕಮಾಂಡ್ ಯಡಿಯೂರಪ್ಪ ವಿಶ್ವಾಸದ ಪಡೆದು ಬೊಮ್ಮಾಯಿಗೆ ಪಟ್ಟ ಕಟ್ಟಿದ್ರೊ ಎನ್ನುವ ನಿರಂತರ ಚರ್ಚೆ ರಾಜ್ಯ ರಾಜಕೀಯದಲ್ಲಿ ಇದ್ದೇ ಇದೆ. ಆದ್ರೆ ಒಂದು ಮಾತಿನಲ್ಲಿ ಹೇಳಬೇಕು ಅಂದ್ರೆ ಮಹಾಗಣಪತಿ ತನ್ನ ತಂದೆ ತಾಯಿಯಾದ ಈಶ್ವರಪ್ಪ ಪಾರ್ವತಿ ಸುತ್ತವೇ ಸುತ್ತಿ ತ್ರಿಲೋಕ ಸಂಚಾರ ಮಾಡಿದೆ ಎಂದು ಹೇಳಿಕೊಂಡಂತೆ, ಬಸವರಾಜ ಬೊಮ್ಮಾಯಿ‌ ಯಡಿಯೂರಪ್ಪ, ಪ್ರಹ್ಲಾದ್ ಜೋಷಿ ಸುತ್ತವೇ ಸುತ್ತಿ ಸಿಎಂ ಆದ್ರು ಎನ್ನೋದಂತು ನಿಜ. 


‌ಬಸವರಾಜ ಬೊಮ್ಮಾಯಿ ಯಾರು ಊಹಿಸದ ರೀತಿ ಹೇಗೆ ಸಿಎಂ ಪಟ್ಟವನ್ನು ಏರಿದ್ರೋ, ಅಷ್ಟೇ ವೇಗದಲ್ಲಿ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎನ್ನುವ ಗುಲ್ಲು ಹಬ್ಬಿದ್ದು ಇಂದು ನೆನ್ನೆ ಅಲ್ಲ. ಯಾವಾಗ ಅಧಿಕಾರ ಸ್ವೀಕಾರ‌ ಮಾಡಿದ್ರೋ  ಮರುದಿನವೇ ಬೊಮ್ಮಾಯಿ ಅವಧಿ ಹೆಚ್ಚು ಅಂದ್ರೆ ಕೇವಲ‌ ಆರು ತಿಂಗಳು ಎನ್ನುವ ಗಾಳಿ ಸುದ್ದಿ ಕರೋನಾ ಅಲೆಯಂತೆ ಹಬ್ಬಿತ್ತು. ಅದನ್ನು ಜನರು ನಂಬಿದ್ದು ಕೂಡ ಆಶ್ಚರ್ಯ

ಈಗ ಮತ್ತೆ ಬೊಮ್ಮಾಯಿ ಬದಲಾವಣೆ ಸುದ್ದಿ ಜೋರಾಗಿದೆ. ಜನ ಅದನ್ನು ನಂಬಿದ್ದಾರೆ ಯಾಕೆ?

ಕೇಂದ್ರ ಬಿಜೆಪಿ ಹೈಕಮಾಂಡ್ ಯಾವ ಸಮಯದಲ್ಲಿ ಯಾವ ತೀರ್ಮಾನ ಮಾಡುತ್ತದೆ ಎನ್ನುವ ಬಗ್ಗೆ ಯಾರಿಗೂ ಗೊತ್ತಾಗೋದಿಲ್ಲ. ಮೋದಿ‌- ಅಮಿತ್ ಶಾ ತೆಗೆದುಕೊಳ್ಳುವ ತೀರ್ಮಾನ ಹೇಗಿರುತ್ತದೆ. ಅಂದ್ರೆ ಹೌದಾ, ಇವರು ಸಿಎಂ ಆದ್ರಾ ಎನ್ನುವ ಆಶ್ಚರ್ಯ ಚಕಿತ ಚಿಹ್ನೆಯೇ ಕೊನೆಯ ಉತ್ತರ ಆಗಿರುತ್ತದೆ. ಹಾಗಾದರೆ ರಾಜ್ಯದಲ್ಲಿ ಈಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದ ಅವಧಿ ಮುಕ್ತಾಯ ಆಯ್ತು ಎನ್ನುವ ವದಂತಿಗಳು ಹಬ್ಬಿದ್ದು ಸದ್ಯದ ಮಟ್ಟಿಗೆ ಅದು ವದಂತಿಯೇ ಆಗಿದ್ದರು ಕೂಡ ಜನರು ಯಾಕೆ ಅದನ್ನು ಕೇವಲ ವದಂತಿ ಎನ್ನುವಂತೆ ನಂಬುತ್ತಿಲ್ಲ ಎನ್ನೋದನ್ನ ಗಮನಿದ್ರೆ ಅವರ ಕಾರ್ಯವೈಖರಿಯನ್ನು ಪ್ರಶ್ನಾರ್ಥಕವಾಗಿ ನೋಡಬೇಕಾಗುತ್ತದೆ.

ಜನತಾ ಪರಿವಾರದ ಬೊಮ್ಮಾಯಿಯನ್ನು ಬಿಜೆಪಿ ಕಾರ್ಯಕರ್ತರು ಒಪ್ಪಿಲ್ಲವೇ?

ಹೌದು, ಬಸವರಾಜ ಬೊಮ್ಮಾಯಿ ಮೂಲ ಜನತಾ ಪರಿವಾರದ ಜೆ.ಹೆಚ್.ಪಟೇಲ್ ಸಿಎಂ ಆಗಿದ್ದಾಗ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿದ್ದವರು. ಬಳಿಕ ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಕೈಗೆ ಕೇಸರಿ ಜಂಡಾ ಹಿಡಿಸಿದ್ದು ಮಾತ್ರವಲ್ಲ, 2008 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಲೇ, ಬೊಮ್ಮಾಯಿ ಅವರನ್ನು ನೀರಾವರಿ ಸಚಿವರನ್ನಾಗಿ‌ ಮಾಡಿದ್ದು ಕೂಡ ಇದೇ ಬಿಎಸ್ ಯಡಿಯೂರಪ್ಪ ಅವರು. ಹೀಗೆ ಯಡಿಯೂರಪ್ಪ ನೆರಳಲ್ಲಿ ಬೆಳೆದು ಬಂದ ಬೊಮ್ಮಾಯಿ ಮುಖ್ಯಮಂತ್ರಿ ಆಗುವ ಮುನ್ನ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿ ಇದ್ದವರು. ರಾಷ್ಟ್ರೀಯ ಬಿಜೆಪಿಯ ಸೂಚನೆ ಮೇರೆಗೆ ಯಡಿಯೂರಪ್ಪ ಎರಡು ವರ್ಷ ಸಿಎಂ ಆಗಿ ಅಧಿಕಾರಿ ನಡೆಸಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಬಸವರಾಜ ಬೊಮ್ಮಾಯಿ ಹಠಾತ್ ಸಿಎಂ ಆಗಿ ಅಧಿಕಾರದ ಗದ್ದುಗೆ ಏರಿದವರು. ಆದ್ರೆ ಬೊಮ್ಮಾಯಿ ಮುಖ್ಯಮಂತ್ರಿ ಆದಾಗಿನಿಂದ ಬರಿ ವದಂತಿಗಳ ಮೇಲೆ‌ ವದಂತಿ. ಬೊಮ್ಮಾಯಿಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ . ಅವರ ಕಾರ್ಯವೈಖರಿ ಪಕ್ಷದ ವರಿಷ್ಠರಿಗೆ ಇಷ್ಟ ಆಗಿಲ್ಲ. ಅವರು ಕಾರ್ಯಕರ್ತರ ಸಿಎಂ ಅಲ್ಲ. ಅವರು ಹೆಸರಿಗೆ ಮಾತ್ರ ಕಾಮನ್ ಮ್ಯಾನ್ ಸಿಎಂ ಎಂಬ ಸ್ವಘೋಷಿತ ಹೆಸರು ಪಡೆದವರು ಇತ್ಯಾದಿ ಚರ್ಚೆ ಪಕ್ಷದಲ್ಲಿ ನಿತ್ಯ ನಿರಂತರವಾಗಿದೆ.

ಗೃಹ ಮಂತ್ರಿ ಆಗಿದ್ದಾಗ ಡಿಜೆ ಹಳ್ಳಿ ಗಲಭೆ. ಸಿಎಂ ಆದ ಮೇಲೆ ಮಂಗಳೂರಲ್ಲಿ ಕೊಲೆ

ಬೊಮ್ಮಾಯಿ ಸಿಎಂ ಆದ ಮೇಲೂ ಅದಕ್ಕೂ ಮುನ್ನ ಗೃಹ ಮಂತ್ರಿ ಆಗಿದ್ದಾಗಲೂ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರತಿಪಕ್ಷಗಳು ಹೋ ಎಂದು ದನಿ ಏರಿಸುವ ಮಟ್ಟಿಗೆ ಅನೇಕ‌ ಘಟನಾವಳಿಗಳು ನಡೆದು ಹೋದವು. ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಭೆ ನಡೆಯಿತು. ‌ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಲಾಯಿತು ಮಾತ್ರವಲ್ಲ ಪೊಲೀಸ್ ಸ್ಟೇಷನ್ ಗೆ ಬೆಂಕಿ ಇಡಲಾಯಿತು. ಆಗ ಬೊಮ್ಮಾಯಿ ಗೃಹ ಮಂತ್ರಿ. ಅದಾದ ಬಳಿಕ ನಡೆದ ದೊಡ್ಡ ಘಟನೆ ಎಂದರೆ ಹುಬ್ಬಳ್ಳಿಯಲ್ಲಿ ಕೋಮು ಗಲಭೆ. ಆಗ ಬೊಮ್ಮಾಯಿ ಸಿಎಂ ಆಗಿದ್ರು.

ಬೆಂಗ್ಳೂರು ಬಿಡು, ಕ್ಷೇತ್ರದಲ್ಲಿ ಸುತ್ತಾಡು: ಸಂಸದ ಕರಡಿ ಪುತ್ರ ಅಮರೇಶಗೆ ಸಿಎಂ ಬೊಮ್ಮಾಯಿ ಸೂಚನೆ

ಇದಾದ ಬಳಿಕ ಪಕ್ಷದ ಕಾರ್ಯಕರ್ತರು ತಿರುಗಿ ಬೀಳುವ ಮಟ್ಟಿಗೆ, ಕಾರ್ಯಕರ್ತರು ರಾಜ್ಯದ ಬಿಜೆಪಿ ಸರ್ಕಾರವನ್ನು ಪ್ರಶ್ನೆ ಮಾಡುವ ತನಕ ಬಂದು ತಲುಪಿದ ಘಟನೆ ಎಂದರೆ ಒಂದು ಶಿವಮೊಗ್ಗದಲ್ಲಿ ಹರ್ಷ ಕೊಲೆ‌ ಅದರ ಕಿಚ್ಚು ಆರುವ ಮುನ್ನವೇ ಮಂಗಳೂರಿನಲ್ಲಿ ನಡೆದ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ. ಅಲ್ಲಿಗೆ ಬಸವರಾಜ್ ಬೊಮ್ಮಾಯಿ ಮೇಲೆ ಕಾರ್ಯಕರ್ತರು ಮುಗಿ ಬೀಳೊಕೆ ಶುರು ಮಾಡಿದ್ದು ಇನ್ನು ನಿಂತಿಲ್ಲ. ಕಠಿಣ ಕ್ರಮ ಎನ್ನುವ ಪದವೇ ರಾಜ್ಯದಲ್ಲಿ ಜೋಕ್ ಆಗಿ ಹೋಯ್ತು. ಸಿಎಂ ಬಸವರಾಜ ಬೊಮ್ಮಾಯಿ ಈ ಎಲ್ಲಾ ಘಟನೆಗೆ ಯಾವ ಕ್ರಮ ತೆಗೆದುಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು ಕಾರ್ಯಕರ್ತರ ಪಡೆ. ಬೊಮ್ಮಾಯಿ ಸರ್ಕಾರವನ್ನು ಉತ್ತರದ ಯೋಗಿ ಸರ್ಕಾಕ್ಕೆ ಹೋಲಿಕೆ ಮಾಡಿ, ನಮಗೆ ಯೋಗಿಯಂತ ಸಿಎಂ ಬೇಕು, ಕಠಿಣ ಕ್ರಮ ಕೈಗೊಳ್ಳುವ ಸಿಎಂ ಬೊಮ್ಮಾಯಿ ಬೇಡ ಎನ್ನುವ ಹಾಸ್ಯ ಮಿಶ್ರಿತ ಮಾತುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಡೋಕೆ ಆರಂಭಿಸಿದ್ರು.

ಬೊಮ್ಮಾಯಿ ಗೃಹ ಮಂತ್ರಿ ಇದ್ದಾಗಲೇ ಪಿಎಸ್‌ಐ ಅಕ್ರಮ‌ ನೇಮಕ‌ ಹಗರಣ

ಬೊಮ್ಮಾಯಿ ಗೃಹ ಸಚಿವ ಹುದ್ದೆಯಿಂದ ಮುಂಬಡ್ತಿ ಪಡೆದು ರಾಜ್ಯದ ಮುಖ್ಯಮಂತ್ರಿ ಆದ್ರು.‌ ಆದ್ರೆ ಬೊಮ್ಮಾಯಿಯವರ ಬೆನ್ನಿಗೆ ಭೂತದ ರೀತಿ, ಅಂಟಿಕೊಂಡಿದ್ದು ಬರಿ ಕಳಂಕ. ಬಿಟ್ ಕಾಯಿನ್ ಹಗರಣ, ಪಿಎಸ್‌ಐ ಅಕ್ರಮ ಹೀಗೆ ಅತಿ ಗಂಭೀರ ಎನಿಸುವ ಪ್ರಕರಣ ನಡೆದಾಗಲೆಲ್ಲಾ ಬೊಮ್ಮಾಯಿ ಅವರ ಹೆಸರೇ ಅದು ವದಂತಿ ರೂಪದಲ್ಲೋ‌‌ ಇನ್ಯಾವ ರೂಪದಲ್ಲೂ ತಿರುಗಿ ತಿರುಗಿ ಬೊಮ್ಮಾಯಿ ಕಾಲಬುಡಕ್ಕೆ ಬಂದು ನಿಲ್ಲುತ್ತಿದೆ. ಅಲ್ಲಿಗೆ ಸಾರ್ವಜನಿಕವಾಗಿ ಒಂದು ಅಭಿಪ್ರಾಯ ವ್ಯಕ್ತವಾಗ ತೊಡಗಿತು ಮತ್ತು ಅದೇ ಅಭಿಪ್ರಾಯ ಗಟ್ಟಿ ಎನ್ನುವ ಹಂತಕ್ಕೆ ಚಿತ್ರಣ ಬಂದು ವಾಸ್ತವ್ಯ ಹೂಡಿತ್ತು. ಅದೇನೆಂದರೆ ಬೊಮ್ಮಾಯಿ ಬದಲು ಯಡಿಯೂರಪ್ಪನವರೇ ಇದ್ದಿದ್ದರೆ ಉತ್ತಮವಾಗಿತ್ತು ಎನ್ನುವ ಮಾತು.‌

ಸಿಎಂ ಬೊಮ್ಮಾಯಿ ಬಗ್ಗೆ ಸಂಪುಟ ಸಚಿವರ ಒಳ ದನಿ ಏನಿದೆ

ಬಸವರಾಜ ಬೊಮ್ಮಾಯಿ ಅವರ ತಂದೆ ದಿವಗಂತ ಮಾಜಿ‌‌‌ ಸಿಎಂ ಎಸ್.ಆರ್. ಬೊಮ್ಮಾಯಿ ಅವರಿಗಿಂತ ಬುದ್ದಿವಂತ. ಆದರೆ ಆ ಬುದ್ದಿವಂತಿಕೆ ಪಕ್ಷದ ಯೋಚನೆ ಯೋಜನೆ ಅಡಿ ನೋಡಿದಾಗ ಚುನಾವಣೆಯಲ್ಲಿ ಮತವಾಗಿ ಬದಲಾಗಬೇಕು. ಆ ಬುದ್ದಿವಂತಿಕೆ ಕಾರ್ಯಕರ್ತರ ಅಭಿಪ್ರಾಯಕ್ಕೆ ಅಥವಾ ಅವರು ಬಯಸುತ್ತಿರುವ ರೀತಿ ನೀತಿಗಳಿಗೆ ಬಳಕೆ ಆಗಬೇಕು. ಆ ಬುದ್ದಿವಂತಿಕೆ ಬಿಜೆಪಿಯ ನೇಚರ್ ಗೆ ಎಷ್ಟು ಹೊಂದಾಣಿಕೆ ಆಗಿದೆ ಮತ್ತು ಹೊಂದಿಕೊಳ್ಳುವ ಪ್ರಯತ್ನ ಸಿಎಂ ಕಡೆಯಿಂದ ಎಷ್ಟು ಸಾಗಿದೆ ಎನ್ನೋದು ಮುಖ್ಯವಾಗುತ್ತದೆ‌ ಎನ್ನುವ ಮಾತನ್ನು ಬಹುತೇಕ ಮೂಲ ಬಿಜೆಪಿ ಸಚಿವರು ಮಾತಾಡಿಕೊಳ್ತಾರೆ. 

ಬೊಮ್ಮಾಯಿಯನ್ನು ಪಕ್ಷ ಸಿಎಂ ಮಾಡಿದೆ. ಆದ್ರೆ ಸಿಎಂ‌ ಮಾತ್ರ ತಮ್ಮ ಸುತ್ತ ಮುತ್ತ ಅಧಿಕಾರಕ್ಕಾಗಿ ಕಮಲ‌ ಹಿಡಿದ ಬಹುತೇಕ ಸಚಿವರನ್ನೆ ಪಕ್ಕದಲ್ಲಿ ಕೂರಿಸಿಕೊಳ್ತಾರೆ ಎನ್ನುವ ಆರೋಪವನ್ನು ಖಾಸಗಿಯಾಗಿ ಸಿಕ್ಕಾಗ ಮುಕ್ತವಾಗಿ ಹೇಳ್ತಾರೆ. ಫೈಲ್ ಗಳು ಸಿಎಂ ಟೇಬಲ್ ಮೇಲೆ ಹಾಗೆ ಇರುತ್ತವೆ. ಶಾಸಕರು ಬೇಜಾರ್ ಮಾಡಿಕೊಳ್ತಾ ಇದ್ದಾರೆ ಏನ್ ಮಾಡೋದು ನಮ್ಮ ಸಿಎಂ ಕತೆ ಹೀಗೆ ಎನ್ನುತ್ತಾರೆ.  ಸಿಎಂ ಬದಲಾವಣೆ ವದಂತಿ ಜೋರಾದಾಗಲೆಲ್ಲಾ ಪಕ್ಷ ನಿಷ್ಠೆ ಉಳ್ಳ ಸಿಟಿ ರವಿಯಂತ, ಸುನೀಲ್‌ ಕುಮಾರ್ ಅಂತ, ಅಷ್ಟೇ ಯಾಕೆ  ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅಂತವರು ಕುತ್ತಿಗೆಗಿಂತ ಮೇಲೆ ಸಿಎಂ ಬೊಮ್ಮಾಯಿಯವರನ್ನು ಸಮರ್ಥನೆ ಮಾಡಿಕೊಂಡಂತೆ ಕಾಣುತ್ತಿದೆ ಎನ್ನೋದು ಬಿಟ್ಟರೆ ಅವರ್ಯಾರ ಮಾತು ಸಿಎಂ‌ ಪರವಾಗಿ ಮನಸ್ಸಿನಿಂದ ಬರುತ್ತಿದೆ ಎಂದು ಅನಿಸುತ್ತಿಲ್ಲ. 

ಬಿಎಸ್‌ವೈ ಗದರಿದರು ಸುಮ್ಮನಿರುತ್ತಿದ್ದವರು ಬೊಮ್ಮಾಯಿಯನ್ನು ಯಾಕೆ ಸಹಿಸಿಕೊಳ್ಳುತ್ತಿಲ್ಲ?

ಯಡಿಯೂರಪ್ಪ ರಾಜ್ಯದ ಬಿಜೆಪಿಯ ಪ್ರಶ್ನಾತೀಯ ನಾಯಕ‌. ಅದರಲ್ಲಿ ಯಾವುದೇ ಸಂದೇಹ ಬೇಡ.‌ ಇನ್ನೂ ಮುಂದೆ ಹೋಗಿ ಹೇಳಬೇಕು ಎಂದರೆ ಯಡಿಯೂರಪ್ಪ ಇರುವ ತ‌ನಕ ಅವರು ಬಿಜೆಪಿಯ ಯಾರು ಪ್ರಶ್ನೆ ಮಾಡದ ನಾಯಕ ಎಂದರೆ ಅತಿಶಯೋಕ್ತಿ ಆಗೋದಿಲ್ಲ. ಅಂತಯ ಯಡಿಯೂರಪ್ಪ ಮೇಲ್ನೋಟಕ್ಕೆ ಸಿಟ್ಟು ಸಿಡುಕಿನ ರೀತಿ ಕಾಣ್ತಾರೆ.‌ ಆದರೆ ಶಾಸಕರ ಮಾತಿಗೆ ಕಿವಿ ಆಗ್ತಾ ಇದ್ರು. ಸಚಿವರು ನೀಡುವ ಸಲಹೆ ಆಲಿಸುತ್ತಿದ್ದರು. ಹೊರಗಡೆ ನೋಡುವವರಿಗೆ ಯಡಿಯೂರಪ್ಪ ಏ ಸಿಕ್ಕಾಪಟ್ಟೆ ಬೈತಾರಪ್ಪ ಅಂತ ಅನಿಸಿದ್ರು ಯಡಿಯೂರಪ್ಪಗೆ ಶಾಸಕರ‌ ಸಚಿವರ ಸಮಾಧಾನ ಮಾಡುವ ಅಥವ ಅವರಿಗೆ ಒಂದು ಮಾತು ಬೈದರು ಅದನ್ನು ದಕ್ಕಿಸಿಕೊಳ್ಳುವ ತಾಕತ್ತು ಇತ್ತು. ಊಹೂ.. ಬೊಮ್ಮಾಯಿ ಹಾಗಲ್ಲ. ಹೊರಗಡೆ ಸಾಫ್ಟ್ ಆಗಿ ಕಾಣ್ತಾರೆ. ಒಳಗಡೆ ಸಿಕ್ಕಾಪಟ್ಟೆ ಬೈತಾರೆ. ಶಾಸಕರ , ಸಂಸದರ, ಸಚಿವರ ಮೇಲೆ‌ ಸಿಡುಕಾಗ್ತಾರೆ. 

ಬೊಮ್ಮಾಯಿ ಏನೊ‌ ಸಿಟ್ಟಾಗ್ತಾರೆ ನಿಜ, ಆದ್ರೆ ಎದುರಿಗೆ ಇದ್ದವರು ಬೈಯಿಸಿಕೊಳ್ಳುವ ಮನಸ್ಸು ಮಾಡ್ತಾರಾ ಎಂದ್ರೆ ನೋ ವೆ. ಆ ಮನುಷ್ಯ ಯಾವಾಗಲೂ ಗರಂ ಆಗಿ ಇರ್ತಾರಪ್ಪ.‌ ಅವರ ಬಳಿ‌ ಹೋಗದೇ ಇರೋದೆ ಉತ್ತಮ ಎನ್ನುವ ತೀರ್ಮಾನಕ್ಕೆ ಬರೋದು ಮಾತ್ರ ಅಲ್ಲ. ಹೀಗೆ ನಮ್ಮಂತ ಮಾಧ್ಯಮ ಸ್ನೇಹಿತರು ಸಿಕ್ಕಾಗ ಎಲ್ಲವನ್ನೂ ಬಿಚ್ಚು ಮನಸ್ಸಿನಿಂದ ಹೇಳಿಕೊಳ್ತಾರೆ. ಯಡಿಯೂರಪ್ಪ ಬೈದರು ಸುಮ್ಮನೆ ಇರ್ತಿದ್ರು ಯಾಕೆ ಅಂದರೆ ಯಡಿಯೂರಪ್ಪ ಒಂದು ಅರ್ಥದಲ್ಲಿ ರಾಜ್ಯ ಬಿಜೆಪಿಯ ಜನಕ ಅಲ್ಲವೆ? ಆದ್ರೆ ಬೊಮ್ಮಾಯಿ ಹಾಗಲ್ಲ‌ ನೋಡಿ.‌

ಅಂದು ಯಡಿಯೂರಪ್ಪ ಬದಲಾಗುತ್ತಾರೆ ಎಂಬ ಸುದ್ದಿ  ನಂಬುವಂತಿತ್ತು ಯಾಕೆ?

ಸರಿಯಾಗಿ ಒಂದು ವರ್ಷದ ಹಿಂದೆ ಬಿಎಸ್ ಯಡಿಯೂರಪ್ಪನವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್'ನಲ್ಲಿ ಕಣ್ಣೀರು ಹಾಕುತ್ತಲೇ ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ನಾನು ಸಂತೋಷದಿಂದ ಇಂದೇ ರಾಜ್ಯಪಾಲರ ಬಳಿ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಗದ್ಗದಿತರಾಗಿದ್ದರು. ಯಡಿಯೂರಪ್ಪ ರಾಜೀನಾಮೆ ಕೊಡ್ತಾರೆ ಎನ್ನುವ ಸುದ್ದಿ  ಮೊದಲೇ ಟಿವಿ ಮಾಧ್ಯಮ ಪತ್ರಿಕೆಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಅದು ನಿಜವೂ ಆಯ್ತು. ಯಡಿಯೂರಪ್ಪ ಸ್ಥಾನದಿಂದ ಕೆಳಗಿಳಿಯುತ್ತಾರೆ ಮತ್ತು ಅವರನ್ನು ಕೆಳಗಿಳಿಸುವ ಪ್ರಯತ್ನವನ್ನು ಪಕ್ಷದೊಳಗೆ ಅನೇಕರು ಬಹಿರಂಗವಾಗಿ ಮಾಡೋಕೆ ಶುರು ಮಾಡಿದ್ರು. 

ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಮಾಡ್ತಾರೆ ಎನ್ನುವ ಗಂಭೀರ ಆರೋಪವನ್ನು ಕೆಲವು ಹಿರಿಯ ಶಾಸಕರು ಮಾಧ್ಯಮದ ಮುಂದೆ ಬಹಿರಂಗವಾಗಿ ಹೇಳೊಕೆ ಶುರು ಮಾಡಿದ್ರು. ಅರವಿಂದ್ ಬೆಲ್ಲದ್, ಸಿಪಿ ಯೋಗಿಶ್ವರ್, ಯತ್ನಾಳ್ ಇನ್ನೂ ಅನೇಕರು ದೆಹಲಿ ಸುತ್ತೊಕೆ ಅದಾಗಲೇ ಶುರು ಮಾಡಿ ಆಗಿತ್ತು.‌ ಒಮ್ಮೆ ಯಡಿಯೂರಪ್ಪನವರು ಮೋದಿ ಮತ್ತು ಅಮಿತ್ ಶಾ ಭೇಟಿ ಮಾಡಿ ದೆಹಲಿಯಿಂದ ಹೊರಡಬೇಕು ಎನ್ನುವ ಹೊತ್ತಿಗೆ ರಾಷ್ಟ್ರೀಯ ಮಾಧ್ಯಮಗಳು ಯಡಿಯೂರಪ್ಪ ರಾಜೀನಾಮೆ ನೀಡ್ತಾರೆ ಎಂದು ಸುದ್ದಿಯನ್ನು ಬಿತ್ತರಿಸಿ ಆಗಿತ್ತು. 

ಯಡಿಯೂರಪ್ಪ ಇನ್ನೇನು ರಾಜೀನಾಮೆ ನೀಡಬೇಕು ಎನ್ನುವಾಗಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಗೋವಾದಲ್ಲಿ ಕುಳಿತು, ಯಡಿಯೂರಪ್ಪರಿಗೆ ಪಕ್ಷ ಎಲ್ಲವನ್ನೂ ನೀಡಿದೆ ಎನ್ನುವ ಹೇಳಿಕೆ ನೀಡಿದ್ದರು. ಈ ಎಲ್ಲಾ ಕಾರಣಗಳು ಯಡಿಯೂರಪ್ಪ ರಾಜೀನಾಮೆ ನೀಡ್ತಾರೆ ಎನ್ನುವ ವದಂತಿಗೆ ಪುಷ್ಟಿ ನೀಡಿತ್ತು ಮತ್ತು ಅದು ನಿಜವೂ ಆಗಿತ್ತು. 

ಬೊಮ್ಮಾಯಿ ಬದಲಾವಣೆ ನಿಜವೇ?

ಆದ್ರೆ ಇಂದು ಬಸವರಾಜ ಬೊಮ್ಮಾಯಿ ಮೇಲೆ ಬಂದಿರುವ ವದಂತಿ ಸದ್ಯದ ಮಟ್ಟಿಗೆ ಕೇವಲ ವದಂತಿ ಮಾತ್ರ. ಪಕ್ಷದ ಒಳಗೆ ಅಂತಹ ಯಾವುದೇ ಪ್ರಕ್ರಿಯೆಗಳು ದೆಹಲಿ ಮಟ್ಟದಲ್ಲಂತೂ ನಡೆಯುತ್ತಿಲ್ಲ. ಆದ್ರೆ ವಿಪಕ್ಷಗಳೆ ಹೆಚ್ಚಾಗಿ ಬೊಮ್ಮಾಯಿ ರಾಜೀನಾಮೆಗೆ ರೆಕ್ಕೆ ಪುಕ್ಕ ಕಟ್ಟುತ್ತಿದ್ದಾರೆ.‌ ಹೀಗಾಗಿ ರಾಜೀನಾಮೆ ಎನ್ನುವ ವದಂತಿಗೆ  ಜೀವ ಬಂದಿದೆ. ಜನರು ಕೂಡ ಹೌದಿರಬಹುದೇನೊ ಎನ್ನುವಂತೆ ಕೇಳುತ್ತಿದ್ದಾರೆ. 

ಹಾಗಾದರೆ ಯಾಕೆ ಬೊಮ್ಮಾಯಿ ರಾಜೀನಾಮೆ ಸುದ್ದಿ ನಂಬುತ್ತಾರೆ ಜನರು ಅಂದ್ರೆ, ಬಹುಮುಖ್ಯವಾಗಿ ಪಕ್ಷದ ಕಾರ್ಯಕರ್ತರ ಒಲವು ನಿಲುವುಗಳಿಗೆ ಬೊಮ್ಮಾಯಿ ಸ್ಪಂದಿಸಲ್ಲ ಎನ್ನುವ ಬೇಸರ ಇದೆ. ಸಿಎಂ ತಮ್ಮ ಮನೆಯ ನಾಯಿ ಸತ್ತಾಗ ಅತ್ತ ಸಿಎಂ ಅದೆಷ್ಟು ಮೃದು ಮನಸ್ಸುಳ್ಳ ವ್ಯಕ್ತಿ ಇವರು ನಮ್ಮ ಮುಖ್ಯಮಂತ್ರಿ ಆಗಿದ್ದು ಒಳ್ಳೆಯದಾಯ್ತು ಎಂದು ಬಿಜೆಪಿ ಕಾರ್ಯಕರ್ತ ಪಡೆ ಖುಷಿ ಪಟ್ಟಿತ್ತು. ಆದ್ರೆ ಅದೇ ಬೊಮ್ಮಾಯಿ ನಾಯಿ ಸತ್ತಾಗ ಅಳೋರು, ನಾಯಿ ಮೇಲೆ ಮಾಡಿದ ಚಾರ್ಲಿ ಸಿನಿಮಾ ನೋಡಿ ದುಃಖ ಪಟ್ಟವರು, ಆ ಸಿನಿಮಾದ ಮೇಲೆ ಟ್ಯಾಕ್ಸ್ ಫ್ರಿ ಮಾಡಿದ ಈ ಮನುಷ್ಯನಿಗೆ ಪಕ್ಷದ ಕಾರ್ಯಕರ್ತ ಸತ್ತಾಗ ಕಣ್ಣೀರು ಬರೋದಿಲ್ವಲ್ಲ ಎಂದು ಅವರನ್ನು ಹೊಗಳುತ್ತಿದ್ದವರೇ ಗದರೋಕೆ ಶುರು ಮಾಡಿದ್ರು. ಬೊಮ್ಮಾಯಿ ಸಿಎಂ ಆದಮೇಲೆ ಹೆಚ್ಚು ಸಿನಿಮಾ ನೋಡಿ ಒಂದು ಕಡೆ ಸುದ್ದಿ ಆದ್ರೆ, ಮತ್ತೊಂದು ಕಡೆ ಸಿಎಂ ಮದುವೆ ಮುಂಜಿ ಕಾರ್ಯಕ್ರಮಕ್ಕೆ ಹೋಗಿದ್ದು ಸಹ ಅಷ್ಟೇ ಅಪ ಪ್ರಚಾರ ಪಡೆಯಿತು.  ಹೇಳಿ ಕೇಳಿ ಇದು 5g ಕಾಲ. ಆ ಕ್ಷಣದ ಸುದ್ದಿಗಳು ಜನರ ಕೈಯಲ್ಲಿ ಚಿತ್ರ ಇರುತ್ತದೆ. 

ಬೊಮ್ಮಾಯಿ‌ ಜನಪ್ರಿಯ ಯೋಜನೆ ಯಾವುದು?

ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಜನರು ಸದಾ ನೆನಪಿಟ್ಟುಕೊಳ್ಳವಂತ ಭಾಗ್ಯ ಲಕ್ಷ್ಮೀ ಯೋಜನೆ, ಮಕ್ಕಳಿಗೆ ಸೈಕಲ್ ಭಾಗ್ಯ, ಸಂಧ್ಯ ಸುರಕ್ಷಾ ಯೋಜನೆ, ಸಾವಯವ ಕೃಷಿಗೆ ಉತ್ತೇಜನ, ಪ್ರತ್ಯೇಕ ರೈತ ಬಜೆಟ್, ಸಾಲ ಮನ್ನಾ ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯ ಸದಾ ನೆನಪಿಡುವ ಕಾರ್ಯಕ್ರಮ ಜಾರಿಗೆ ತಂದಿದ್ರು. ಹಾಗಂತ ಬಸವರಾಜ ಬೊಮ್ಮಾಯಿ ಅವರಿಂದ ಕೇವಲ‌ ಒಂದು ವರ್ಷದಲ್ಲಿ ಇಷ್ಟೆಲ್ಲಾ ಯೋಜನೆ ನಿರೀಕ್ಷೆ ಮಾಡೋದು ಬಹಳ ಬೇಗ ಆದಿತು. ಆದರೆ ಬೊಮ್ಮಾಯಿ ಅವರಿಂದ ಜನರು ಕೇವಲ ಯೋಜನೆ ನಿರೀಕ್ಷೆ ಮಾಡುತ್ತಿಲ್ಲ. ಸದ್ಯಕ್ಕೆ ಇನ್ನೂ ದಕ್ಷ ಆಡಳಿತದ  ಯೋಚನೆಯನ್ನಾದರೂ ಮಾಡಲಿ, ಈಗ ಘೋಷಣೆ ಮಾಡಿರುವ ಯೋಜನೆಗಳು ತ್ವರಿತವಾಗಿ ಕಾರ್ಯರೂಪಕ್ಕೆ ಬರಲಿ ಎಂದು ಜನರು ಆಶಿಸುತ್ತಿದ್ದಾರೆ. ಇಲ್ಲವಾದರೇ ಇವರ ತಂದೆ ಎಸ್ ಆರ್ ಬೊಮ್ಮಾಯಿ ಎಂಟು ತಿಂಗಳು ಮುಖ್ಯಮಂತ್ರಿ ಆಗಿದ್ದರು ಅವರ ಪುತ್ರ ಬಸವರಾಜ ಬೊಮ್ಮಾಯಿ 1 ವರ್ಷ 8 ತಿಂಗಳು ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದರು ಎಂದಷ್ಟೇ ಜನ ಮಾತಾಡಿಕೊಳ್ಳುತ್ತಾರೆ ಹೊರತಾಗಿ ವಿಶೇಷವಾಗಿ ಏನು ಚರ್ಚೆ ಮಾಡುವ ಸಾಧ್ಯತೆ ಕಡಿಮೆ. 

ಯಾಕೆಂದರೆ ಕಾಮನ್ ಮ್ಯಾನ್ ಸಿಎಂ‌ ಎಂದು ಹಣೆ ಪಟ್ಟಿಯನ್ನು ತನ್ನ ಸುತ್ತ ಇರುವ ನಾಲ್ಕಾರು ಶಾಸಕರು ಹೇಳಿದರೆ ಅಥವಾ ಸ್ವತಃ ಸಿಎಂ ಕಾಮನ್ ಮ್ಯಾನ್ ರೀತಿಯೆ ನಡೆದುಕೊಂಡರು, ಸಾರ್ವಜನಿಕರು ಬಯಸೋದು ಈ ರಾಜ್ಯ ಕೇಳೊದು ನೀವು ಅಧಿಕಾರದಲ್ಲಿ ಇದ್ದಾಗ ಹೇಗೆ ಇದ್ರಿ ಎನ್ನೋದಲ್ಲ. ಯಾವ ರೀತಿ ಅಧಿಕಾರ ನಡೆಸಿದ್ರಿ ನಿಮ್ಮ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು. ನಿಮ್ಮ‌ ಕಾರ್ಯಕರ್ತರ ಯೋಚನೆಗೆ ಬಯಕೆಗೆ ಯಾವ ರೀತಿ ಯೋಜನೆ ರೂಪಿಸಿದ್ದೀರಿ. ಪಕ್ಷದ‌ ತತ್ವ ಸಿದ್ಧಾಂತಕ್ಕೆ ಸರಿಯಾಗಿ ನಿಮ್ಮ ನಡೆ ಹೇಗಿತ್ತು ಎನ್ನೋದನ್ನ ಪಕ್ಷ ನಿರೀಕ್ಷೆ ಮಾಡಿದ್ರೆ, ಸಾರ್ವಜನಿಕ ಬಯಸೋದು ನಿಮ್ಮ ಆಡಳಿತ ಮನಮುಟ್ಟುವಂತೆ ಇತ್ತಾ ಎನ್ನೋದನ್ನ ಮಾತ್ರ. 

ಒಬ್ಬ ಸಚಿವ ಅಥವಾ ಮುಖ್ಯಮಂತ್ರಿ ಸರಳ ಎಂದು ಒಂದು ಉತ್ತಮ ಅಂಗಿ ತೊಡದೆ ತಲೆ ಗೂದಲು ಬಾಚದೆ ಬಂದು ನಿಂತರೆ ಅದು ಸರಳತೆ ಎನಿಸಿಕೊಳ್ಳೋದಿಲ್ಲ. ಬದಲಾಗಿ ಅದು ಅಶಿಸ್ತು ಎಂದು ಪರಿಗಣನೆ ಆಗುತ್ತದೆ. ಹೀಗಾಗಿ ಬೊಮ್ಮಾಯಿ ಕೇವಲ ಕಾಮನ್ ಮ್ಯಾನ್ ಸಿಎಂ ಎಂಬ ನಾಮಾಂಕಿತದಿಂದ ಕರೆಯಲ್ಪಡದೆ ಶಿಸ್ತಿನ ಆಡಳಿತಗಾರ ಎಂದು ಕರೆಸಿಕೊಳ್ಳುತ್ತಾರಾ? ಅಥವಾ ಸಿಎಂ ಬದಲಾವಣೆ ವದಂತಿಯನ್ನೇ ಜನ ನಂಬುವಂತೆ ಇರ್ತಾರಾ ಎನ್ನೋದನ್ನ ನೋಡೊದು ಬಾಕಿ ಇದೆ.
 

click me!