ಯಾವುದೇ ಒಂದು ಚುನಾವಣೆಯಲ್ಲಿ ಮೋದಿ ಸೋತರೂ ಸಾಕು, ಅಬ್ ದಿಲ್ಲಿ ಬಾಕಿ ಹೈ (ಇನ್ನು ಬಾಕಿಯಿರುವುದು ದಿಲ್ಲಿ) ಎಂದು ಷರಾ ಬರೆದು ರಾಜ್ಯದಲ್ಲಿ ಗೆದ್ದ ನಾಯಕ ದಿಲ್ಲಿ ದಂಡಯಾತ್ರೆಗೆ ಹೋಗುವುದಷ್ಟೇ ಬಾಕಿ ಎಂದು ವಿಶ್ಲೇಷಿಸುವುದು ಪ್ರಾಯಶಃ ಬಾಲಿಶ ಆದೀತು.
ನವದೆಹಲಿ (ಮೇ. 07): ಒಂದೇ ಬ್ರ್ಯಾಂಡ್ ಅನ್ನು ಪದೇ ಪದೇ ಹಿಡಿದು ಹಿಡಿದು ಎಳೆದರೆ ಆ ಬ್ರ್ಯಾಂಡ್‌ನ ಮೌಲ್ಯ ಕುಸಿಯುತ್ತದೆ. ತನ್ಮೂಲಕ ಕಂಪನಿಗೆ ನಷ್ಟಉಂಟಾಗುತ್ತದೆ ಎನ್ನುವುದು ಮ್ಯಾನೇಜ್‌ಮೆಂಟ್ ಕ್ಲಾಸ್‌ಗಳಲ್ಲಿ ಹೇಳಿಕೊಡುವ ಮೊದಲ ಪಾಠ. ಬಹುಶಃ ಗೆಲುವಿಗಾಗಿ ಪದೇ ಪದೇ ಮುಸ್ಲಿಂ ವಿರುದ್ಧದ ಧ್ರುವೀಕರಣವನ್ನೇ ಅತಿಯಾಗಿ ಪ್ರಯೋಗಿಸುತ್ತಿರುವ ಬಿಜೆಪಿಗೆ ಪಶ್ಚಿಮ ಬಂಗಾಳದ ಜನ ಇದೇ ಪಾಠ ಹೇಳಿಕೊಡುವ ಪ್ರಯತ್ನ ಮಾಡಿದ್ದಾರೆ.
2019 ರಲ್ಲಿ ಮೋದಿ ಹೆಸರು ಮತ್ತು ಮಮತಾ ತುಷ್ಟೀಕರಣದ ರಾಜಕೀಯ ಬಿಜೆಪಿಗೆ ದೊಡ್ಡ ಲಾಭ ತಂದುಕೊಟ್ಟಿತ್ತು. ಆದರೆ ವಿಧಾನಸಭೆಯಲ್ಲೂ ಬಿಜೆಪಿ ಪ್ರಯೋಗ ಮಾಡಿದ್ದು ಪುನಃ ಅವೇ ಅಸ್ತ್ರಗಳನ್ನು. ಆದರೆ ಒಮ್ಮೆ ಹೊಡೆತ ತಿಂದಿದ್ದ ಮಮತಾ ದಿಲ್ಲಿಯಿಂದ ಅಬ್ಬರಿಸಿ ಬರುವ ಬಿಜೆಪಿ ನಾಯಕರು ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ನಮ್ಮನ್ನು ಉತ್ತರ ಭಾರತೀಯರು ಹಾಗೂ ಗುಜರಾತಿಗಳು ಆಳುತ್ತಾರೆ ಎಂದು ಬಂಗಾಳಿ ಹಿಂದೂಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಇದೇ ದೀದಿ ಗೆಲುವಿಗೆ ಮುಖ್ಯ ಕಾರಣ.
ಇನ್ನೊಂದು ಕಡೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಎಂಬ ಸಂದೇಶದ ಮೇಲೆಯೇ 27 ಪ್ರತಿಶತ ಇರುವ ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಹಾಗೂ ಎಡ ಪಕ್ಷಗಳನ್ನು ಕೆಳಕ್ಕೆ ಹಾಕಿ ಶತ ಪ್ರತಿಶತ ದೀದಿಯನ್ನು ಅಪ್ಪಿಕೊಂಡಿದೆ. ಮಮತಾರ ತೃಣಮೂಲದಿಂದ ಬಿಜೆಪಿಗೆ ಜಿಗಿದಿದ್ದ 148 ಮಂದಿಯಲ್ಲಿ ಬರೀ 6 ಜನ ಮಾತ್ರ ಗೆದ್ದಿದ್ದಾರೆ. ಅಂದರೆ ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಇದ್ದ ಸ್ಥಳೀಯ ಆಡಳಿತ ವಿರೋಧಿ ಅಲೆಯ ನಷ್ಟಕೂಡ ಬಿಜೆಪಿಗೇ ಆಗಿದೆ. ಲೋಕಸಭೆಯಲ್ಲಿ ಬಂಗಾಳಿಗಳು ಮೋದಿಗೆ ವೋಟು ಕೊಟ್ಟಿದ್ದು ಹೌದು.
ಮೋದಿಗೆ ಆಪ್ತರಾಗಿದ್ದ ಪ್ರಶಾಂತ್ ಕಿಶೋರ್ ವಿರೋಧ ಪಾಳಯ ಸೇರಿದ್ಹೇಗೆ..?
ಆದರೆ ಈಗ ನಮ್ಮ ಬಂಗಾಳಿ ದೀದಿ ಇದ್ದಾರಲ್ಲ ಎಂದು ಅವರು ಯೋಚಿಸಿದ್ದರಿಂದ ದಲಿತ ಆದಿವಾಸಿಗಳ 4ರಿಂದ 5 ಪ್ರತಿಶತ ಮತಗಳು ಬಿಜೆಪಿಯ ಕೈಬಿಟ್ಟುಹೋಗಿವೆ. ಪ್ರತಿಯೊಂದು ಚುನಾವಣೆ ರಾಜಕಾರಣಿಗಳು, ಪತ್ರಕರ್ತರು, ಪಂಡಿತರಿಗೆ ಹೊಸ ಪಾಠ ಕಲಿಸುತ್ತವೆ. ಪಶ್ಚಿಮ ಬಂಗಾಳದ ಮತದಾರ ಕಲಿಸಿರುವ ಪಾಠ ಎಂದರೆ, ಗಟ್ಟಿದಿಲ್ಲಿ ನಾಯಕತ್ವದ ಜೊತೆಗೆ ಜನಪ್ರಿಯ ಪ್ರಾದೇಶಿಕ ನಾಯಕತ್ವವೂ ಬೇಕು. ಮತ್ತು ನೀವು ಯಾರ ಮೇಲಾದರೂ ಅತಿಯಾದ ಒತ್ತಡ ಹಾಕಲು ಹೋದರೆ ಅದೇ ಒಮ್ಮೊಮ್ಮೆ ಮುಳುವಾಗುತ್ತದೆ. ವಿಶ್ಲೇಷಣೆಗಳು ಏನೇ ಇರಲಿ ಬೀದಿಯಲ್ಲಿ ನಿಂತು ಒಬ್ಬಳೇ ಹೋರಾಡುವ ದೀದಿಯ ಗಟ್ಟಿತನವನ್ನು ಮೆಚ್ಚಲೇಬೇಕು.
ಕಾಂಗ್ರೆಸ್‌ವೊಂದನ್ನು ಬಿಟ್ಟು
2014ರಿಂದ ಮೋದಿ ಕಾರಣದಿಂದ ಆರಂಭವಾದ ಬಿಜೆಪಿಯ ಬಿರುಗಾಳಿಯನ್ನು ಪ್ರಾಮಾಣಿಕವಾಗಿರುವ ಕಾಂಗ್ರೆಸ್ಸೇತರ ಜನನಾಯಕರು ಗಟ್ಟಿಯಾಗಿ ಚದುರಿಸಿ ತೋರಿಸಿದ್ದಾರೆ. ಕಳೆದ 7 ವರ್ಷಗಳಲ್ಲಿ ಬಿಜೆಪಿಯ ಪ್ರಚಂಡ ಚುನಾವಣಾ ಯಂತ್ರ ತಂತ್ರದ ಮಧ್ಯೆಯೂ ತಮ್ಮ ಗಟ್ಟಿತನ, ಕೆಲಸ ಮತ್ತು ಸಂಘಟನೆ ಮೇಲಿನ ಹಿಡಿತದಿಂದ ಬಿಜೆಪಿಯನ್ನು ಮಣಿಸಿದವರು ಎಂದರೆ ಅರವಿಂದ ಕೇಜ್ರಿವಾಲ್, ನಿತೀಶ್ ಕುಮಾರ್ ಮತ್ತು ಈಗ ಮಮತಾ ಬ್ಯಾನರ್ಜಿ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ ಮೂವರೂ ವೈಯಕ್ತಿಕವಾಗಿ ಶುದ್ಧಹಸ್ತರು, ಆಡಳಿತದ ಮೇಲೆ ಹಿಡಿತ ಇರುವವರು ಮತ್ತು ಮೂವರ ವಿರುದ್ಧವೂ ಬಿಜೆಪಿ ಬಳಿ ಸ್ಥಳೀಯ ಮಟ್ಟದಲ್ಲಿ ಎದುರಾಳಿ ನಾಯಕರು ಇರಲಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಪ್ರಜಾಪ್ರಭುತ್ವ ಮಜಬೂತು ಆಗುವುದೇ ಸ್ಥಾಪಿತ ವ್ಯವಸ್ಥೆಯ ವಿರುದ್ಧ ಆಗಾಗ ಪುಟಿದೇಳುವ ಪರ್ಯಾಯ ಶಕ್ತಿಗಳಿಂದ. ಗೆಲ್ಲುವುದನ್ನೇ ಮರೆತಿರುವ ದಿಲ್ಲಿ ಕಾಂಗ್ರೆಸ್ ನಾಯಕರು ಇಂಥವರಿಂದ ಪಾಠ ಕಲಿಯಬೇಕು. ಇಲ್ಲವಾದರೆ ಬೇರೆಯವರ ಮದುವೆಗೆ ಹೋಗಿ ಪದೇ ಪದೇ ಕುಣಿಯುವ ಭಾಗ್ಯ ಸಿಗಬಹುದು ಅಷ್ಟೇ.
ವಿದೇಶಗಳಿಂದ ಆಕ್ಸಿಜನ್ ಕಂಟೈನರ್ ಏರ್‌ಲಿಫ್ಟ್, ಕೋವಿಡ್ ಹೋರಾಟಕ್ಕೆ ಸೇನೆ ಬಲ
ದಿಲ್ಲಿ ಮೇಲೇನು ಪರಿಣಾಮ?
ಯಾವುದೇ ಒಂದು ಚುನಾವಣೆಯಲ್ಲಿ ಮೋದಿ ಸೋತರೂ ಸಾಕು, ಅಬ್ ದಿಲ್ಲಿ ಬಾಕಿ ಹೈ (ಇನ್ನು ಬಾಕಿಯಿರುವುದು ದಿಲ್ಲಿ) ಎಂದು ಷರಾ ಬರೆದು ರಾಜ್ಯದಲ್ಲಿ ಗೆದ್ದ ನಾಯಕ ದಿಲ್ಲಿ ದಂಡಯಾತ್ರೆಗೆ ಹೋಗುವುದಷ್ಟೇ ಬಾಕಿ ಎಂದು ವಿಶ್ಲೇಷಿಸುವುದು ಪ್ರಾಯಶಃ ಬಾಲಿಶ ಆದೀತು. ಹೀಗಾಗಿಯೇ 7 ವರ್ಷಗಳಲ್ಲಿ ನಿತೀಶ್, ಅಖಿಲೇಶ್, ಕೇಜ್ರಿವಾಲ್ ಮುಂದಿನ ಪ್ರಧಾನಿ ಎಂದು ಬಿಂಬಿಸಲಾಯಿತಾದರೂ ತಮ್ಮ ತಮ್ಮ ರಾಜ್ಯಗಳ ಆಚೆ ಯಾರೂ ಬೆಳೆಯಲಿಲ್ಲ. ಮಮತಾ ದೀದಿ ಈಗ ಬಂಗಾಳ ಗೆದ್ದಿದ್ದಾರೆ ಹೌದು. ಆದರೆ ಮಮತಾ ಆ ಪರಿಮಿತಿಯಿಂದ ಹೊರಬರುವುದು ಕಷ್ಟ.
ಆಕೆ ಒಬ್ಬ ಜನಪ್ರಿಯ ಪ್ರಾದೇಶಿಕ ನಾಯಕಿ ಅಷ್ಟೆ. ಸ್ವಲ್ಪಮಟ್ಟಿಗೆ ಮಮತಾ, ಕೇಜ್ರಿವಾಲ್, ಶರದ್ ಪವಾರ್, ಸ್ಟಾಲಿನ್, ಪಿಣರಾಯಿ ವಿಜಯನ್, ಜಗನ್ ರೆಡ್ಡಿ ಸೇರಿಕೊಂಡು ಒಂದು ಮೋದಿ ವಿರುದ್ಧದ ಪ್ರಾದೇಶಿಕ ನಾಯಕರ ವೇದಿಕೆ ರಚಿಸುವ ಪ್ರಯತ್ನ ನಿಶ್ಚಿತವಾಗಿ ನಡೆಯಬಹುದು. ಆದರೆ ದಿಲ್ಲಿ ಗದ್ದುಗೆ ದೃಷ್ಟಿಯಿಂದ ಹೇಳುವುದಾದರೆ ಕೋವಿಡ್ ನಿರ್ವಹಣೆಯ ಸಾಧಕ-ಬಾಧಕಗಳ ನಂತರ ಮುಂದಿನ ವರ್ಷ ನಡೆಯುವ ಬಿಜೆಪಿ ಅಧಿಕಾರ ಇರುವ ಉತ್ತರ ಪ್ರದೇಶ ಮತ್ತು ಗುಜರಾತ್‌ನ ಚುನಾವಣೆಗಳು ನಿಜಕ್ಕೂ ಪರೀಕ್ಷೆಗಳು. ಅಲ್ಲಿ ಬಿಜೆಪಿ ಗೆಲ್ಲುವುದೋ, ಸೋಲುವುದೋ ಎನ್ನುವುದು ದಿಲ್ಲಿ ಸಮೀಕರಣ ಬದಲಾಯಿಸಬಲ್ಲದು.
ಶಹಬ್ಬಾಸ್ ಶ್ರೀನಿವಾಸ
ಕಳೆದ 20 ದಿನಗಳಿಂದ ದಿಲ್ಲಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಭದ್ರಾವತಿ ಶ್ರೀನಿವಾಸ ಮಾಡುತ್ತಿರುವ ಕೆಲಸ ಬಹಳವೇ ಪ್ರಶಂಸೆಗೆ ಪಾತ್ರ ಆಗುತ್ತಿದೆ. ಯಾರೇ ವಿನಂತಿ ಮಾಡಿದರೂ ಬೆಡ್‌ಗಳು, ಆಮ್ಲಜನಕದ ಸಿಲೆಂಡರ್, ಪ್ಲಾಸ್ಮಾ ಕಿಟ್‌ಗಳನ್ನು ಸ್ವತಃ ಹೋಗಿ ತಲುಪಿಸುವ ಶ್ರೀನಿವಾಸ್ ದಿಲ್ಲಿ ನೋಯ್ಡಾ, ಗಾಜಿಯಾಬಾದ್‌ನಲ್ಲಿ ಎಲ್ಲೇ ಇರಲಿ ಸ್ವತಃ ಆಸ್ಪತ್ರೆಗೆ ಹೋಗಿ ನಿಂತು ಸಹಾಯ ಮಾಡುತ್ತಾರೆ. ಕೋವಿಡ್‌ನ ಹೊಡೆತಕ್ಕೆ ಬಹುತೇಕ ದೊಡ್ಡ ಜನ ಪ್ರತಿನಿಧಿಗಳು ಮನೆಯಲ್ಲೇ ಇದ್ದು ಫೋನ್‌ನಲ್ಲಿ ಕೆಲಸ ಸಾಗಿಸುತ್ತಿರುವಾಗ, ಹೊರ ದೇಶದ ರಾಯಭಾರಿ ಕಚೇರಿಗಳು ಕೂಡ ಆಮ್ಲಜನಕದ ಸಿಲೆಂಡರ್ ಬೇಕೆಂದು ಶ್ರೀನಿವಾಸ್ ಅವರಿಗೆ ಟ್ವೀಟ್ ಮಾಡಿ ವಿನಂತಿ ಮಾಡುತ್ತಿವೆ. ಇದು ದೊಡ್ಡ ಚರ್ಚೆಯಾಗಿ ವಿದೇಶಾಂಗ ಇಲಾಖೆಗೂ ಇರಿಸು ಮುರುಸು ಆಗಿ ಕೊನೆಗೆ ನ್ಯೂಜಿಲಾಂಡ್‌ನ ಪ್ರಧಾನಿ ಹೇಳಿಕೆ ನೀಡುವವರೆಗೆ ಹೋಗಿದೆ. ಒಟ್ಟಿನಲ್ಲಿ ಕನ್ನಡದ ಯುವಕನೊಬ್ಬ ದಿಲ್ಲಿ ಮಟ್ಟದಲ್ಲಿ ಗಟ್ಟಿಯಾಗಿ ಬೆಳೆಯುತ್ತಿರುವುದರಂತೂ ನಿಜ. ಕಾಂಗ್ರೆಸ್‌ಗೆ ಇಂಥವರೇ ಆಶಾಕಿರಣ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ