ರಾಜ್ಯದ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ತಾವು ಸ್ಪರ್ಧೆ ಮಾಡುವ ಆಯ್ಕೆಯನ್ನು ಸಿದ್ದರಾಮಯ್ಯ ಮುಕ್ತವಾಗಿರಿಸಿಕೊಂಡಿದ್ದಾರೆ. ಇದು ಒಬ್ಬ ಜನನಾಯಕನ ಪ್ರತಿಭೆ. ಕ್ಷೇತ್ರ ಹುಡುಕಾಟ ಎಂದು ಟೀಕಿಸುವ ಅವರ ವಿರೋಧಿಗಳು ರಾಜ್ಯದ ಯಾವುದೇ ಮೂಲೆಯಲ್ಲಿ ಸ್ಪರ್ಧಿಸುವ ಛಾಪುಳ್ಳ ಎಷ್ಟುನಾಯಕರ ಹೆಸರು ಹೇಳಲು ಸಾಧ್ಯವಿದೆ?
ರಮೇಶ್ ಬಾಬು, ವಿಧಾನ ಪರಿಷತ್ ಮಾಜಿ ಸದಸ್ಯ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಪ್ರತಿ ಚುನಾವಣೆಯಲ್ಲೂ ಅನೇಕ ವಿಶೇಷಗಳಿರುತ್ತವೆ. ರಾಜಕಾರಣದಲ್ಲಿ ಜನನಾಯಕರು ಕ್ಷೇತ್ರ ಪಲ್ಲಟ ಮಾಡಿದಾಗ ಅಥವಾ ಒಂದೇ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದಾಗ ಸ್ವಾಭಾವಿಕವಾಗಿ ಅಂತಹ ಕ್ಷೇತ್ರಗಳು ಜನರ ಗಮನ ಸೆಳೆಯಲು ಕಾರಣವಾಗುತ್ತವೆ. ಇದನ್ನು ‘ಹೈವೋಲ್ಟೇಜ್ ಕ್ಷೇತ್ರ’ವೆಂದು ಕರೆಯಲಾಗುತ್ತದೆ.
ಹಿಂದೆ ಮುಖ್ಯಮಂತ್ರಿಗಳಾಗಿದ್ದ ಎಸ್.ನಿಜಲಿಂಗಪ್ಪ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 1962ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿ ರಂಗಪ್ಪ ಟಿ.ಜಿ. ವಿರುದ್ಧ ಪರಾಭವಗೊಂಡರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾಗಿದ್ದ ಎಸ್.ನಿಜಲಿಂಗಪ್ಪನವರ ಸೋಲು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. ತದನಂತರ ಬಾಗಲಕೋಟೆ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗುವುದರ ಮೂಲಕ ಮತ್ತೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿಯ ಸೋಲು ಒಂದು ದಾಖಲೆಯಾಗಿ ಉಳಿಯಿತು.
ದೇವೇಗೌಡ ಮತ್ತು ಬಂಗಾರಪ್ಪ ಸ್ಪರ್ಧೆ
1985ರಲ್ಲಿ ಎಚ್.ಡಿ.ದೇವೇಗೌಡ ಹೊಳೆನರಸಿಪುರ ಮತ್ತು ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಏಕಕಾಲಕ್ಕೆ ಸ್ಪರ್ಧೆ ಮಾಡುವುದರ ಮೂಲಕ ಸುದ್ದಿಯಾದರು. ಮತ್ತು ಎರಡೂ ಕಡೆ ಆಯ್ಕೆಯಾಗಿ, ಸಾತನೂರು ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದರು. 1989ರಲ್ಲಿ ಮತ್ತೆ ಅವರು ಹೊಳೆನರಸಿಪುರ ಹಾಗೂ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಎರಡು ಕಡೆ ಸ್ಪರ್ಧೆ ಮಾಡಿ ಎರಡೂ ಕ್ಷೇತ್ರದಲ್ಲಿ ಪರಾಭವಗೊಂಡರು. ನಂತರ ಪುನಃ 2004ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಮತ್ತು ಕನಕಪುರ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಹಾಸನ ಲೋಕಸಭಾ ಕ್ಷೇತ್ರದಿಂದ ಗೆಲುವನ್ನು ಕಂಡರು.
Bus Yatra: ಜ.11ಕ್ಕೆ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಬಸ್ ಯಾತ್ರೆ
ಅದೇ ರೀತಿ 2004ರಲ್ಲಿ ಎಸ್.ಬಂಗಾರಪ್ಪ ಸೊರಬ ಮತ್ತು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಿಗೆ ಸ್ಪರ್ಧೆ ಮಾಡಿ, ಸೊರಬ ಕ್ಷೇತ್ರದಲ್ಲಿ ಮಾತ್ರ ಗೆಲುವನ್ನು ಕಂಡರು. 2018ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ, ಎರಡೂ ಕಡೆ ಜಯಗಳಿಸಿದರು. ಇದೇ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಕಡೆ ಸ್ಪರ್ಧೆ ಮಾಡಿದ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಮಾತ್ರ ಗೆಲುವನ್ನು ಕಂಡರು. 2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎಂಬುದು ಅನೇಕ ರೀತಿಯ ಚರ್ಚೆಗಳಿಗೆ ಅವಕಾಶವನ್ನು ಕೊಟ್ಟಿದೆ.
ಎರಡು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ
ವೃತ್ತಿಯಲ್ಲಿ ವಕೀಲರಾಗಿದ್ದ ಸಿದ್ದರಾಮಯ್ಯ ಈಗ ಒಬ್ಬ ಜನನಾಯಕ. ಸಮಾಜವಾದದ ಚಳವಳಿಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ನಂತರ ತಾಲೂಕು ಬೋರ್ಡ್ ಸದಸ್ಯರಾಗಿ ಆಯ್ಕೆಯಾಗುವುದರ ಮೂಲಕ ರಾಜಕಾರಣ ಪ್ರಾರಂಭಿಸಿದರು. 1983ರಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸಭೆಗೆ ಪ್ರವೇಶಿಸಿದರು. ತದನಂತರ 1985, 1994, 2004 ಮತ್ತು 2006ರ ಉಪಚುನಾವಣೆಯಲ್ಲಿ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡರು. ಕ್ಷೇತ್ರ ಮರುವಿಂಗಡಣೆಯ ಕಾರಣಕ್ಕಾಗಿ 2008 ಮತ್ತು 2013ರಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. 2018ರ ಚುನಾವಣೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರವನ್ನು ತಮ್ಮ ಪುತ್ರ ಡಾ.ಯತೀಂದ್ರ ಅವರಿಗೆ ಬಿಟ್ಟುಕೊಟ್ಟು, ಏಕಕಾಲಕ್ಕೆ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರು. ಒಬ್ಬ ಮುಖ್ಯಮಂತ್ರಿಯಾಗಿ ಎರಡು ಕಡೆ ಸ್ಪರ್ಧೆ ಮಾಡಿ ಒಂದು ಕಡೆ ಗೆಲುವನ್ನು ಕಂಡರೂ ಚಾಮುಂಡೇಶ್ವರಿ ಕ್ಷೇತ್ರದ ಸೋಲು ಸ್ವತಃ ಸಿದ್ದರಾಮಯ್ಯನವರಿಗೆ ಮತ್ತು ಅವರ ಅನುಯಾಯಿಗಳಿಗೆ ಅಘಾತ ಉಂಟುಮಾಡಿತು.
ಸಿದ್ದುಗೆ 3 ರೀತಿಯ ಎದುರಾಳಿಗಳು!
ಬಾದಾಮಿ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿರುವ ಸಿದ್ದರಾಮಯ್ಯನವರಿಗೆ ಅದೇ ಕ್ಷೇತ್ರದಲ್ಲಿ ಮರು ಆಯ್ಕೆ ಆಗುವುದು ಕಷ್ಟವಲ್ಲ. ಆದರೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯು ರಾಜಧಾನಿಯಿಂದ ಅತಿ ಹೆಚ್ಚು ದೂರ ಇರುವುದರಿಂದ ನಿರಂತರವಾಗಿ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲವೆಂದು ಮರುಸ್ಪರ್ಧೆಯನ್ನು ಸಿದ್ದರಾಮಯ್ಯನವರೇ ಬೇಡವೆಂದು ಹೇಳುತ್ತಿದ್ದಾರೆ. ಸ್ವಾಭಾವಿಕವಾಗಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬಹುದೆಂಬ ರಾಜಕೀಯ ಲೆಕ್ಕಚಾರಗಳು ಕಳೆದ ಒಂದು ವರ್ಷದಿಂದ ನಡೆಯುತ್ತಿವೆ. ಅವರ ರಾಜಕೀಯ ನಡೆಗಾಗಿ ಸಿದ್ದರಾಮಯ್ಯ ಮೂರು ರೀತಿಯ ಪ್ರತಿಸ್ಪರ್ಧಿಗಳನ್ನು ತಾವು ಸ್ಪರ್ಧಿಸುವ ಕ್ಷೇತ್ರದಲ್ಲಿ ಎದುರಿಸಬೇಕಾಗಿದೆ. ಸಾಂಪ್ರದಾಯಿಕವಾಗಿ ರಾಜಕೀಯ ಎದುರಾಳಿಗಳಾದ ಬಿಜೆಪಿ, ಜೆಡಿಎಸ್ ಮತ್ತು ಕೆಲವು ಸ್ವಪಕ್ಷೀಯರ ನಡೆಯನ್ನು ಎದುರಿಸಿ ಸಿದ್ದರಾಮಯ್ಯ 2023ರ ವಿಧಾನಸಭೆಯನ್ನು ಪ್ರವೇಶ ಮಾಡಬೇಕಾಗಿದೆ.
ಬಾದಾಮಿ ಕ್ಷೇತ್ರದ ಹಾಲಿ ಶಾಸಕರಾಗಿರುವ ಸಿದ್ದರಾಮಯ್ಯ ಬಾದಾಮಿ ಒಳಗೊಂಡಂತೆ ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ಪಕ್ಷದ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ರಾಜಕೀಯ ಟೀಕೆ ಟಿಪ್ಪಣಿಗಳ ನಡುವೆಯೂ ಬಾದಾಮಿ, ಚಾಮರಾಜಪೇಟೆ, ಕೊಪ್ಪಳ, ಕೋಲಾರ, ಹರಿಹರ, ತುಮಕೂರು, ಕಲಘಟಗಿ, ಹುಣಸೂರು, ಚಾಮುಂಡೇಶ್ವರಿ, ವರುಣಾ ಮತ್ತು ಇತರೆ ಹಲವಾರು ಕ್ಷೇತ್ರಗಳಲ್ಲಿ ಅವರ ಹೆಸರು ಪ್ರಸ್ತಾಪಗೊಳ್ಳುತ್ತಿದೆ. ಸಿದ್ದರಾಮಯ್ಯನವರಿಗೆ ಒಂದು ನೆಲೆಯಿಲ್ಲ ಮತ್ತು ಕ್ಷೇತ್ರಕ್ಕಾಗಿ ಅಲೆದಾಡುತ್ತಿದ್ದಾರೆ ಎಂದು ರಾಜಕೀಯ ವಿರೋಧಿಗಳು ಟೀಕಿಸುತ್ತಿದ್ದಾರೆ. ವಾಸ್ತವದಲ್ಲಿ ಸಿದ್ದರಾಮಯ್ಯನವರಿಗಿಂತ ಅವರ ವಿರೋಧಿಗಳೇ ಅವರ ಸ್ಪರ್ಧೆಯ ಕುರಿತು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅವರ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮ ನಿರೀಕ್ಷೆ ಮೀರಿ ಸಫಲವಾಗಲು ವಿರೋಧಿಗಳ ಅತಿ ಆಸಕ್ತಿಯೇ ಕಾರಣವಾಯಿತು!
2 ಕ್ಷೇತ್ರಗಳಲ್ಲಿ ಏಕೆ ಸ್ಪರ್ಧಿಸುತ್ತಾರೆ?
ಕ್ಷೇತ್ರ ಪರ್ಯಟನೆ ಅಥವಾ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದನ್ನು ಕೆಲವು ಪ್ರಮುಖ ರಾಜಕೀಯ ಕಾರಣಗಳಿಗಾಗಿ ವಿಶ್ಲೇಷಣೆ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಗೆಲುವು ಕಷ್ಟಕರವೆಂದು ಒಬ್ಬ ಅಭ್ಯರ್ಥಿ ಭಾವಿಸಿದಲ್ಲಿ ಅಥವಾ ಆ ಕ್ಷೇತ್ರಕ್ಕಿಂತ ಮತ್ತೊಂದು ಕ್ಷೇತ್ರ ಸುರಕ್ಷಿತವೆಂದು ಭಾವಿಸಿದಲ್ಲಿ ಪರ್ಯಾಯ ಕ್ಷೇತ್ರದ ಬಗ್ಗೆ ಆಲೋಚಿಸುತ್ತಾರೆ. ಇಂತಹ ಆಯ್ಕೆಯಲ್ಲಿ ಜಾತಿ, ಉಪಜಾತಿ, ಸಂಪನ್ಮೂಲ ಹಾಗೂ ಭೌಗೋಳಿಕ ಅಂಶಗಳನ್ನು ಪರಿಗಣಿಸುತ್ತಾರೆ. ಕೆಲವೊಮ್ಮೆ ಮುಂಜಾಗ್ರತೆಯ ಕ್ರಮವಾಗಿ ಎರಡು ಕಡೆ ಸ್ಪರ್ಧೆ ಮಾಡಿ, ಎರಡರಲ್ಲೂ ಆಯ್ಕೆಯಾದರೆ ಒಂದು ಸ್ಥಾನವನ್ನು ತೆರವುಗೊಳಿಸುತ್ತಾರೆ. ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯ ಒಬ್ಬ ಅಭ್ಯರ್ಥಿ ಎರಡು ಕಡೆ ಸ್ಪರ್ಧೆ ಮಾಡದಂತೆ ನಿಯಮಾವಳಿ ರೂಪಿಸಲು ಚುನಾವಣಾ ಆಯೋಗಕ್ಕೆ ಸೂಚನೆಗಳನ್ನು ನೀಡಿದ್ದರೂ, ಅದು ಜಾರಿಗೆ ಬಂದಿಲ್ಲ. ಇದೇ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಕೆಲವು ನಾಯಕರು ಲೋಕಸಭಾ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆ.
ಎಲ್ಲಿ ಬೇಕಾದರೂ ಸ್ಪರ್ಧಿಸಬಲ್ಲ ಸಿದ್ದು
ರಾಜ್ಯ ಕಂಡ ಬೆರಳೆಣಿಕೆಯ ಸಮೂಹ ನಾಯಕರಲ್ಲಿ ಸಿದ್ದರಾಮಯ್ಯ ಒಬ್ಬರು. 2013ರಲ್ಲಿ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಈ ರಾಜ್ಯದ ಬಹುತೇಕ ಜನಸಮುದಾಯಗಳು ಪ್ರೀತಿಸುವ ನಾಯಕ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಏರಿಳಿತಗಳನ್ನು ಕಂಡಿರುವ ಅವರಿಗೆ ಯಾವುದೋ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಆಶೀರ್ವಾದದೊಂದಿಗೆ ಸ್ಪರ್ಧೆ ಮಾಡುವುದು ದೊಡ್ಡ ವಿಷಯವೇನಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ, ಹಳೆ ಮೈಸೂರು ಭಾಗದ ಚಾಮುಂಡೇಶ್ವರಿ ಮತ್ತು ವರುಣ ಕ್ಷೇತ್ರದಲ್ಲಿ ಗೆದ್ದಿರುವ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲೂ ಗೆಲ್ಲುತ್ತಾರೆ. ಅವರಿಗೆ ಸ್ಪರ್ಧೆ ಮಾಡಲು ಕೊಪ್ಪಳ ಜಿಲ್ಲೆ, ದಾವಣಗೆರೆ ಜಿಲ್ಲೆ, ಕೋಲಾರ ಜಿಲ್ಲೆ, ಬೆಂಗಳೂರು ನಗರ ಮತ್ತು ಮೈಸೂರು ಜಿಲ್ಲೆಗಳಲ್ಲೂ ಆಹ್ವಾನ ಬರುತ್ತದೆ. ರಾಜ್ಯದ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ತಾವು ಸ್ಪರ್ಧೆ ಮಾಡುವ ಕ್ಷೇತ್ರದ ಆಯ್ಕೆಯನ್ನು ಸಿದ್ದರಾಮಯ್ಯ ಮುಕ್ತವಾಗಿರಿಸಿಕೊಂಡಿದ್ದಾರೆ. ಇದು ಒಬ್ಬ ಜನನಾಯಕನ ಪ್ರತಿಭೆಯೆಂದು ಭಾವಿಸಬೇಕಾಗುತ್ತದೆ. ಕ್ಷೇತ್ರ ಹುಡುಕಾಟ ಎಂದು ಟೀಕಿಸುವ ಅವರ ವಿರೋಧಿಗಳು ರಾಜ್ಯದ ಯಾವುದೇ ಮೂಲೆಯಲ್ಲಿ ಸ್ಪರ್ಧಿಸುವ ಛಾಪುಳ್ಳ ಎಷ್ಟುನಾಯಕರ ಹೆಸರು ಹೇಳಲು ಸಾಧ್ಯವಿದೆ?
ಕರ್ನಾಟಕದಲ್ಲಿ ಜಾತಿ ಎನ್ನುವುದು ವಾಸ್ತವ. ಪ್ರತಿಯೊಂದು ರಾಜಕೀಯ ಪಕ್ಷವೂ ಜಾತಿ ಆಧಾರಿತವಾಗಿ ಗೆಲುವನ್ನು ಮಾನದಂಡ ಮಾಡಿಕೊಂಡು ಟಿಕೆಟ್ ಹಂಚಿಕೆ ಮಾಡುತ್ತದೆ. ಅಭ್ಯರ್ಥಿಗಳು ತಮ್ಮ ಸಮುದಾಯದ ಮತಗಳ ಸಮೀಕರಣದ ಮೇಲೆ ಗೆಲುವಿನ ಲೆಕ್ಕಚಾರವನ್ನು ಮಾಡುತ್ತಾರೆ. ಆದರೆ ಯಾವುದೇ ಅಭ್ಯರ್ಥಿ ಕೇವಲ ಒಂದು ಜಾತಿಯ ಹೆಸರಿನಲ್ಲಿ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ. ಕೆಲವೊಂದು ರಾಜಕೀಯ ಪಕ್ಷಗಳೇ ಕೇವಲ ಮೂರ್ನಾಲ್ಕು ಜಿಲ್ಲೆಗೆ ಸೀಮಿತವಾಗಿರುವಾಗ, ಸಿದ್ದರಾಮಯ್ಯನಂತಹ ನಾಯಕರ ಹೆಸರು ರಾಜ್ಯದ ವಿವಿಧ ಭಾಗಗಳಲ್ಲಿ ಸ್ಪರ್ಧೆ ಮಾಡಲು ಪ್ರಸ್ತಾಪಗೊಳ್ಳುವುದು ಸಣ್ಣ ವಿಷಯವೇನಲ್ಲ. ಅಷ್ಟರಮಟ್ಟಿಗೆ ಅವರೊಬ್ಬ ಜನನಾಯಕರಾಗಿ ಕಾಣುತ್ತಾರೆ.
ಸಿದ್ದು ತಮ್ಮ ಆಡಳಿತದಲ್ಲಿ ಬೆಳಗಾವಿ ಸಮಸ್ಯೆಯನ್ನು ಏಕೆ ಬಗೆಹರಿಸಲಿಲ್ಲ?: ಸಚಿವ ಕಾರಜೋಳ
ಸಿದ್ದು ಸ್ಫರ್ಧೆ ಎಲ್ಲಿ: ಈ ಬಾರಿ ಸಸ್ಪೆನ್ಸ್
2004ರಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿದ್ದರಾಮಯ್ಯ ತಮ್ಮ ರಾಜಕೀಯ ಬದ್ಧತೆಗಾಗಿ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮತ್ತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ 2006ರ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಕೇವಲ 257 ಮತಗಳ ಅಂತರದಲ್ಲಿ ಮರು ಆಯ್ಕೆಯಾಗುತ್ತಾರೆ. ಕ್ಷೇತ್ರ ಮರುವಿಂಗಡಣೆಯ ಮೇಲೆ 2008ರಲ್ಲಿ ನೂತನ ವಿಧಾನಸಭಾ ಕ್ಷೇತ್ರವಾದ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎರಡು ಬಾರಿ ಗೆಲ್ಲುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯ್ಕೆಯಾಗಿದ್ದಾರೆ. ಐದು ಬಾರಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ, ಎರಡು ಬಾರಿ ವರುಣ ಕ್ಷೇತ್ರ ಮತ್ತು ಒಂದು ಬಾರಿ ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ 2023ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಆಯ್ಕೆಯನ್ನು ಕುತೂಹಲಕಾರಿಯಾಗಿ ಉಳಿಸಿಕೊಂಡಿದ್ದಾರೆ.
ಶಾಸಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಸಿದ್ದರಾಮಯ್ಯ ಈ ನಾಡು ಕಂಡ ಉತ್ತಮ ಸಂಸದೀಯ ಪಟು. ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಆಯ್ಕೆಯಾಗಿ ವಿಧಾನಸಭೆಯಲ್ಲಿರುವುದನ್ನು ಜನಸಾಮಾನ್ಯರು ಬಯಸುತ್ತಾರೆ. ಕೇವಲ ಸಿದ್ದರಾಮಯ್ಯ ಮಾತ್ರವಲ್ಲ, ಇದೇ ರೀತಿಯ ಸಂಸದೀಯ ಪಟುಗಳು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ವಿಧಾನಸಭೆ ಪ್ರವೇಶ ಮಾಡಿದರೆ ಸಂಸದೀಯ ವ್ಯವಸ್ಥೆ ಶ್ರೀಮಂತಗೊಳ್ಳುತ್ತದೆ. ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ, ವಿಧಾನಸಭೆ ಪ್ರವೇಶ ಮಾಡುವುದರ ಮೂಲಕ ಸಂಸದೀಯ ಮೌಲ್ಯಗಳನ್ನು ಮತ್ತಷ್ಟುಗಟ್ಟಿಗೊಳಿಸಲಿ ಎಂಬುದು ನಮ್ಮೆಲ್ಲರ ಅಪೇಕ್ಷೆ. ಅವರು ಸ್ಪರ್ಧೆ ಮಾಡುವ ಕ್ಷೇತ್ರದ ಕುತೂಹಲಕ್ಕೆ ಬೇಗ ತೆರೆ ಬೀಳಲಿ ಎಂಬುದು ಜನರ ಆಶಯ.