ಪ್ರತಿ ಬಾರಿ ಐಪಿಎಲ್ ಆರಂಭವಾದಾಗಲೆಲ್ಲ ಈ ಬಾರಿ ಕಪ್ ನಮ್ಮದೇ ಎಂಬ ಆರ್‌ಸಿಬಿ ತಂಡದ ಪರವಾಗಿ ವ್ಯಕ್ತಗೊಳ್ಳುವ ಭಾವಾವೇಶದ ನುಡಿಗಳು ಹಾಗೂ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಲ್ಲಿನ ಕಾಂಗ್ರೆಸ್‌ನ ಅಭಿವ್ಯಕ್ತಿ ಹೆಚ್ಚು ಕಡಿಮೆ ಒಂದೇ ರೀತಿ ಇದೆ.
ಚಿಕ್ಕಪ್ಪನಹಳ್ಳಿ ಷಣ್ಮುಖ
ಚಿತ್ರದುರ್ಗ (ಮೇ.06): ಪ್ರತಿ ಬಾರಿ ಐಪಿಎಲ್ ಆರಂಭವಾದಾಗಲೆಲ್ಲ ಈ ಬಾರಿ ಕಪ್ ನಮ್ಮದೇ ಎಂಬ ಆರ್‌ಸಿಬಿ ತಂಡದ ಪರವಾಗಿ ವ್ಯಕ್ತಗೊಳ್ಳುವ ಭಾವಾವೇಶದ ನುಡಿಗಳು ಹಾಗೂ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಲ್ಲಿನ ಕಾಂಗ್ರೆಸ್‌ನ ಅಭಿವ್ಯಕ್ತಿ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಚುನಾವಣೆ ಬಂದಾಗಲೆಲ್ಲ ಈ ಬಾರಿ ಜಯ ಕಾಂಗ್ರೆಸ್ಸಿನದೇ ಎಂಬ ಹುಮ್ಮಸ್ಸಿನ ಮಾತುಗಳು ಕೇಳಿ ಬರುತ್ತವೆ. ಆದರೆ ಕಡೇ ಗಳಿಗೆಯಲ್ಲಿ ತಿಪ್ಪಾರೆಡ್ಡಿ ಗೆಲುವಿನ ನಗೆ ಬೀರುತ್ತಾರೆ. ಜಾತಿ, ಮತ, ಹಣದ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ಈ ಬಾರಿಯೂ ಇದು ಪುನರಾವರ್ತನೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಈಗ ಮತ್ತೊಂದು ಚುನಾವಣೆ ಎದುರಾಗಿದ್ದು, ಚಿತ್ರದುರ್ಗ ಕ್ಷೇತ್ರದಿಂದ 21 ಮಂದಿ ಕಣದಲ್ಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯ ತಿಪ್ಪಾರೆಡ್ಡಿ, ಕಾಂಗ್ರೆಸ್‌ನ ವೀರೇಂದ್ರ ಪಪ್ಪಿ, ಜೆಡಿಎಸ್‌ನ ರಘು ಆಚಾರ್ ನಡುವೆ ತೀವ್ರ ಪೈಪೋಟಿಯಿದೆ. ಆಪ್‌ನಿಂದ ಜಗದೀಶ್ ಸ್ಪರ್ಧಿಸಿದ್ದರೂ, ಒಂದಷ್ಟುಲಿಂಗಾಯತ ಮತಗಳನ್ನು ಪಡೆಯಲಿಕ್ಕಷ್ಟೇ ಅವರು ಶಕ್ತರಾಗಬಹುದು. ಪ್ರತಿ ಚುನಾವಣೆಯಲ್ಲಿ ನಿರಾಯಾಸವಾಗಿ ಗೆದ್ದು ಬರುತ್ತಿದ್ದ ಕ್ಷೇತ್ರದ ಅನಭಿಷಿಕ್ತ ದೊರೆ ಎಂದೇ ಬಿಂಬಿತರಾಗಿರುವ ತಿಪ್ಪಾರೆಡ್ಡಿಗೆ ಈ ಬಾರಿ ಪವಾಡಗಳು ನಡೆಯುತ್ತವೆ ಎಂಬ ಗ್ಯಾರಂಟಿಗಳಿಲ್ಲ. ಈ ಮಧ್ಯೆ, ಪಕ್ಷೇತರರಾಗಿ ಕಣಕ್ಕಿಳಿದಿದ್ದ ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಮೇ 4ರಂದು ಕಣದಿಂದ ಹಿಂದೆ ಸರಿದು, ಬಿಜೆಪಿ ಕೈ ಹಿಡಿದಿರುವುದು ತಿಪ್ಪಾರೆಡ್ಡಿಗೆ ಪ್ಲಸ್ ಪಾಯಿಂಟ್. ಆದರೂ ಅವರಿಗೆ ಗೆಲುವು ಅಷ್ಟುಸುಲಭವಾಗಿಲ್ಲ.
ಮಂಡ್ಯದಲ್ಲಿ ನಿಖಿಲ್ ಸೋಲಿಸಿದ್ದಕ್ಕೆ ಕಾಂಗ್ರೆಸ್‌ಗೆ ಈಗ ಪಶ್ಚಾತ್ತಾಪ: ಎಚ್.ಡಿ.ಕುಮಾರಸ್ವಾಮಿ
ಬಿಎಸ್‌ವೈ ಕಾರಣಕ್ಕೆ ಗೆಲುವು ಕಂಡಿದ್ದ ತಿಪ್ಪಾರೆಡ್ಡಿ: 2008ರಲ್ಲಿ ಎಸ್.ಕೆ.ಬಸವರಾಜನ್ ಗೆದ್ದ ನಂತರ ತಿಪ್ಪಾರೆಡ್ಡಿ ಇಲ್ಲಿ ಸತತ ಗೆಲುವು ದಾಖಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ತಿಪ್ಪಾರೆಡ್ಡಿಗೆ ತೀವ್ರ ವಿರೋಧದ ಅಲೆ ಎದ್ದಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆಂಬ ಕಾರಣಕ್ಕೆ ಲಿಂಗಾಯತ ಸಮುದಾಯದವರು ಬೆಂಬಲಕ್ಕೆ ನಿಂತಿದ್ದರಿಂದ ತಿಪ್ಪಾರೆಡ್ಡಿ ಮತ್ತೆ ವಿಧಾನಸೌಧದ ಕಡೆ ಮುಖ ಮಾಡಿದ್ದರು. ಕಳೆದ ಬಾರಿ ಜೆಡಿಎಸ್‌ನ ವೀರೇಂದ್ರ ಪಪ್ಪಿ ಎರಡನೇ ಸ್ಥಾನ ಹಾಗೂ ಕಾಂಗ್ರೆಸ್‌ನ ಷಣ್ಮುಖಪ್ಪ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಕೈ ಗೆಲುವಿಗೆ ರಘು ಆಚಾರ್ ಅಡ್ಡಿ: ಈ ಬಾರಿ ಕಾಂಗ್ರೆಸ್‌ನಿಂದ ವೀರೇಂದ್ರ ಪಪ್ಪಿ ಕಣಕ್ಕಿಳಿದಿದ್ದು, ಜೆಡಿಎಸ್‌ನಿಂದ ಕಾಂಗ್ರೆಸ್ ಟಿಕೆಟ್ ವಂಚಿತ ರಘು ಆಚಾರ್ ಸ್ಪರ್ಧಿಸಿದ್ದಾರೆ. ಸೌಭಾಗ್ಯ ಬಸವರಾಜನ್ ನಿವೃತ್ತಿಯಾಗಿರುವುದರಿಂದ ಅವರು ಪಡೆಯುತ್ತಿದ್ದ ಮತಗಳು ಯಾರ ಪಾಲಾಗಲಿವೆ ಎಂಬುದರ ಮೇಲೆ ಫಲಿತಾಂಶ ನಿರ್ಣಯವಾಗಲಿದೆ. ರಘು ಆಚಾರ್ ಕಣಕ್ಕಿಳಿಯದಿದ್ದರೆ ಕ್ಷೇತ್ರ ಕಾಂಗ್ರೆಸ್‌ಗೆ ಸುಲಭದ ತುತ್ತಾಗುತ್ತಿತ್ತು. ಕಾಂಗ್ರೆಸ್ ಸೋಲಿಸಿಯೇ ತೀರುತ್ತೇನೆಂಬ ರೊಚ್ಚಿನಿಂದ ಕಣಕ್ಕಿಳಿದಿರುವ ರಘು ಆಚಾರ್, ಎಷ್ಟೇ ಮತಗಳನ್ನು ಪಡೆದರೂ ಅವು ಕಾಂಗ್ರೆಸ್ ಗುಂಪಿನಿಂದ ಚದುರಿದವೇ ಆಗಿರುತ್ತವೆ.
ಸೌಭಾಗ್ಯ ಬಸವರಾಜನ್ ಅವರು ಲಿಂಗಾಯತರು, ಮುಸ್ಲಿಮರು, ಎಸ್ಸಿ, ಎಸ್ಟಿ, ಓಬಿಸಿ ಮತಗಳನ್ನು ಪಡೆಯುವ ಶಕ್ತಿ ಹೊಂದಿದ್ದರು. ಇವೂ ಕೂಡಾ ಕಾಂಗ್ರೆಸ್ಸಿನ ಮತಗಳೇ ಆಗಿರುತ್ತವೆ. ಆದರೆ ಅವರೀಗ ಬಿಜೆಪಿಗೆ ಸೇರಿದರೂ, ಅವರು ಪಡೆಯುತ್ತಿದ್ದ ಎಲ್ಲ ಮತಗಳು ಬಿಜೆಪಿಗೆ ಹೋಗುತ್ತವೆ ಎಂದು ನಿರೀಕ್ಷಿಸುವಂತಿಲ್ಲ. ಈ ಮಧ್ಯೆ, ಮುಸ್ಲಿಮರು ಈ ಬಾರಿ ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಇಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಜೊತೆಗೆ, ರಘು ಆಚಾರ್ ಅವರು ಪಡೆಯುವ ಮತಗಳಿಕೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
2018ರ ಫಲಿತಾಂಶ
ಬಿಜೆಪಿ- 82,896
ಜೆಡಿಎಸ್- 49,910
ಕಾಂಗ್ರೆಸ್- 49,015
ಬೊಂಬೆನಗರಿಯಲ್ಲಿ ಕುಮಾರಸ್ವಾಮಿಯನ್ನು ಮಣಿಸಿ ಯೋಗೇಶ್ವರ್ ವಿಧಾನಸೌಧ ಪ್ರವೇಶಿಸುತ್ತಾರಾ?
ಜಾತಿ ಲೆಕ್ಕಾಚಾರ
ಒಟ್ಟು ಮತದಾರರು-262419
ಲಿಂಗಾಯತರು ----60,000
ಮುಸ್ಲಿಮರು------40,000
ಪರಿಶಿಷ್ಟ ಜಾತಿ, ಪಂಗಡ-60,000
ಕುರುಬರು---------20,000
ಗೊಲ್ಲರು ---------20,000
ರೆಡ್ಡಿ ------------12,000
ಇತರೆ------------50,000