ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗಿ 5 ವರ್ಷವಾದರೂ ಸಾಮಾನ್ಯ ಜನರಲ್ಲಿ ಇನ್ನೂ ಖಡಕ್ ಮನುಷ್ಯ ಎಂಬ ಒಳ್ಳೆ ಅಭಿಪ್ರಾಯ ಇದೆ. ವ್ಯಕ್ತಿಗತವಾಗಿ ಶುದ್ಧಹಸ್ತ, ವ್ಯವಹಾರಗಳಲ್ಲಿ ಪ್ರಾಮಾಣಿಕ, ನಿರ್ಣಯ ತೆಗೆದುಕೊಳ್ಳುವುದರಲ್ಲಿ ಖಡಕ್‌ತನ ಇದೆ.
ನವದೆಹಲಿ (ಜೂ. 04): ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಮೋದಿ ಮತ್ತು ಬಿಜೆಪಿ ಸರ್ಕಾರದ ಕೆಲಸದ ಬಗ್ಗೆ ಪರ ವಿರೋಧದ ಚರ್ಚೆ ಏನೇ ಇದ್ದರೂ ಅಂತಿಮವಾಗಿ ಇದು ಪರೀಕ್ಷೆ ಆಗಬೇಕಾಗಿರುವುದು 75 ಜಿಲ್ಲೆಗಳ, 403 ವಿಧಾನಸಭಾ ಕ್ಷೇತ್ರಗಳಿರುವ, ದೇಶದ 23 ಕೋಟಿ ಜನಸಂಖ್ಯೆ ಇರುವ, ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗಿರುವ ಉತ್ತರ ಪ್ರದೇಶದಲ್ಲಿ.
ಇಂದಿಗೆ ಸುಮಾರು 8 ತಿಂಗಳ ನಂತರ ನಡೆಯುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಏನಕೇನ ಬಿಜೆಪಿ ಗೆಲ್ಲಬೇಕು, ಇಲ್ಲವಾದರೆ 2024ಕ್ಕೆ ಋುಣಾತ್ಮಕ ಕ್ಷಣಗಣನೆ ಅಲ್ಲಿಂದಲೇ ಆರಂಭವಾಗುತ್ತದೆ ಎನ್ನುವ ಕಾರಣದಿಂದಲೇ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಂಗಾಳದ ಸೋಲಿನ ನಂತರ ಯುಪಿ ಬಿಜೆಪಿ ನಾಯಕರಿಂದ ಫೀಡ್‌ಬ್ಯಾಕ್ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಜೂನ್‌ನಿಂದ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಪ್ರತಿ ತಿಂಗಳು ಉತ್ತರ ಪ್ರದೇಶ ಪ್ರವಾಸ ಮಾಡುವಂತೆ ಪ್ರಧಾನಿಯೇ ಸೂಚಿಸಿದ್ದಾರೆ. ಇನ್ನು ಮೋದಿ ಅವರ ಗುಜರಾತ್ ದಿನಗಳಿಂದಲೂ ಪರಮಾಪ್ತ ಅಧಿಕಾರಿ ಆಗಿದ್ದ ಅರವಿಂದ ಶರ್ಮಾಗೆ ಐಎಎಸ್‌ನಿಂದ ನಿವೃತ್ತಿ ಕೊಡಿಸಿ ವಿಧಾನ ಪರಿಷತ್‌ಗೆ ಆಯ್ಕೆ ಮಾಡಲಾಗಿದ್ದು, ಬಿಜೆಪಿ ಪ್ರಬಲವಾಗಿರುವ ಕಾಶಿ ಸುತ್ತಮುತ್ತಲಿನ ಅಭಿವೃದ್ಧಿ ಕಾರ್ಯಗಳು ತ್ವರಿತ ಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿದೆ.
undefined
ಹಿಂದೆ ಕರ್ನಾಟಕದಲ್ಲಿ ಮಾಸ್ ಲೀಡರ್ ಮುಖ್ಯಮಂತ್ರಿಗಳನ್ನು ಬದಲಿಸಿದಾಗ ಏನಾಗಿತ್ತು.?
ಅಷ್ಟೇ ಅಲ್ಲ, ಯೋಗಿ ಮೇಲೆ ಸಿಟ್ಟಾಗಿರುವ ಪೂರ್ವಾಂಚಲದ ಬ್ರಾಹ್ಮಣರನ್ನು ಸಮಾಧಾನ ಮಾಡಲು ಅರವಿಂದ್ ಶರ್ಮಾರನ್ನು ಉಪ ಮುಖ್ಯಮಂತ್ರಿ ಮಾಡುವ ಸಾಧ್ಯತೆಯೂ ಇದೆ. ಅಯೋಧ್ಯೆಯ ಪಕ್ಕದಲ್ಲಿರುವ ಫೈಜಾಬಾದ್, ಮೋದಿ ಅವರ ಸ್ವಕ್ಷೇತ್ರ ವಾರಣಾಸಿ, ಯೋಗಿ ಕ್ಷೇತ್ರ ಗೋರಖಪುರ, ದಿಲ್ಲಿ ಪಕ್ಕದಲ್ಲೇ ಇರುವ ಮಥುರಾದಲ್ಲಿ ಕಳೆದ ತಿಂಗಳು ನಡೆದ ಪಂಚಾಯತ್ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಭಾರೀ ಪ್ರಮಾಣದಲ್ಲಿ ಚಿಗಿತುಕೊಂಡಿರುವುದು ಬಿಜೆಪಿಯ ಚಿಂತೆ ಹೆಚ್ಚಿಸಿದೆ. ಚುನಾವಣೆ ಹತ್ತಿರ ಬರುತ್ತಿರುವಾಗ ಮೇ ಮೊದಲ ವಾರದಲ್ಲಿ ವಿಪರೀತ ಪ್ರಮಾಣದಲ್ಲಿ ಏರಿಕೆ ಆಗಿದ್ದ ಸೋಂಕಿನ ಪ್ರಮಾಣ ಈಗ ಕಡಿಮೆ ಆಗಿದೆ.
ಆದರೂ ದಿಲ್ಲಿ, ಮುಂಬೈ, ಪುಣೆ, ಬೆಂಗಳೂರು ಶಹರಗಳು ಲಾಕ್‌ಡೌನ್ ಆಗಿರುವುದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಯುವಕರು ವಾಪಸ್ ಹಳ್ಳಿಗೆ ಬಂದಿದ್ದು, ಇದೂ ಬಿಜೆಪಿಯ ಹೊಸ ತಲೆನೋವಿಗೆ ಕಾರಣ. ಚುನಾವಣೆ ಹೊಸ್ತಿಲಲ್ಲಿ ಇದು ನಿಧಾನವಾಗಿ ಆಡಳಿತ ವಿರೋಧಿ ಅಲೆಗೆ ಕಾರಣ ಆಗಬಹುದು ಎಂಬ ಸಹಜ ಆತಂಕದ ಕಾರಣದಿಂದ ಮುಖ್ಯಮಂತ್ರಿ ಯೋಗಿ ಪ್ರತಿ ಜಿಲ್ಲೆಗೆ ಭೇಟಿ ನೀಡಲು ಆರಂಭಿಸಿದ್ದಾರೆ.
ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಸಮರ್ಥಕರು ಕೊರೋನಾ ಕಾರಣದಿಂದ ಸಂಕಟದಲ್ಲಿ ಇದ್ದಾಗಲೂ ಪಾರ್ಟಿ ಕಡೆಯಿಂದ ಯಾರೂ ಸಹಾಯಕ್ಕೆ ಧಾವಿಸಲಿಲ್ಲ ಎಂಬ ಆಕ್ರೋಶ ಕಾರ್ಯಕರ್ತರಲ್ಲಿ ಇದ್ದು, ಇದಕ್ಕಾಗಿ ಕಾರ್ಯಕರ್ತರ ಮನೆ ಮನೆಗಳಿಗೆ ಭೇಟಿ ನೀಡುವ ಅಭಿಯಾನ ಪಕ್ಷದ ಕಡೆಯಿಂದ ಆರಂಭಿಸಲಾಗಿದೆ. ಯಾವ ತರಹದಿಂದ ನೋಡಿದರೂ ಯುಪಿ ಗೆಲ್ಲದೇ ದಿಲ್ಲಿ ಉಳಿಸಿಕೊಳ್ಳೋದು ಕಷ್ಟಬಿಡಿ. ಹೀಗಾಗಿ ಇಷ್ಟೆಲ್ಲಾ ಕಸರತ್ತು.
ಯೋಗಿ ಜನಪ್ರಿಯ. ಆದರೆ...
ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗಿ 5 ವರ್ಷವಾದರೂ ಸಾಮಾನ್ಯ ಜನರಲ್ಲಿ ಇನ್ನೂ ಖಡಕ್ ಮನುಷ್ಯ ಎಂಬ ಒಳ್ಳೆ ಅಭಿಪ್ರಾಯ ಇದೆ. ವ್ಯಕ್ತಿಗತವಾಗಿ ಶುದ್ಧಹಸ್ತ, ವ್ಯವಹಾರಗಳಲ್ಲಿ ಪ್ರಾಮಾಣಿಕ, ನಿರ್ಣಯ ತೆಗೆದುಕೊಳ್ಳುವುದರಲ್ಲಿ ಖಡಕ್‌ತನ ಇದೆ. ಇದನ್ನು ವಿರೋಧಿಗಳೂ ಒಪ್ಪುತ್ತಾರೆ. ಆದರೆ ಯೋಗಿ ಕಾರ್ಯಶೈಲಿ ಬಗ್ಗೆ ಪಕ್ಷದ ನಾಯಕರಲ್ಲಿ ಬಹಳ ಅಸಂತೋಷವಿದೆ. ದಿಲ್ಲಿಯಲ್ಲಿ ಕುಳಿತಿರುವ ಯೋಗಿ ಅವರದ್ದೇ ಠಾಕೂರ್ ಸಮುದಾಯದ ರಾಜನಾಥ್ ಸಿಂಗ್‌ರಿಂದ ಹಿಡಿದು, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಸುನೀಲ್ ಬನ್ಸಾಲರ ಸಂಬಂಧಗಳು ರೀಪೇರಿ ಮಾಡಲು ಆಗದಷ್ಟುಹಳಸಿಹೋಗಿವೆ.
ನಾಯಕತ್ವ ಬದಲಾವಣೆ ಅಂತೆ- ಕಂತೆ, ಬಿಎಸ್‌ವೈಗೆ ಪರ್ಯಾಯ ನಾಯಕ ಯಾರು?
ಮೊದಮೊದಲಿಗೆ ಯೋಗಿ ಸರ್ಕಾರವನ್ನು ಅಧಿಕಾರಿ ವರ್ಗವೇ ನಡೆಸುತ್ತದೆ ಎನ್ನುವ ಅಸಮಾಧಾನ ಇತ್ತಾದರೂ, ಈಗ ಸರ್ಕಾರ ಮತ್ತು ಆಡಳಿತ ಪೂರ್ತಿ ಯೋಗಿ ಹಿಡಿತದಲ್ಲಿದೆ. ಆದರೆ ಬಿಜೆಪಿ ಸಂಘಟನೆ ಮೇಲೆ ಯೋಗಿಗೆ ಹಿಡಿತವಿಲ್ಲ. ಯುಪಿಯ ಪೂರ್ವಾಂಚಲದಲ್ಲಿ ಮೊದಲಿನಿಂದಲೂ ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೂ ಅಷ್ಟಕಷ್ಟೆ. ಪೂರ್ವಾಂಚಲದ ಬಹಳಷ್ಟುಡಾನ್‌ಗಳು ಬ್ರಾಹ್ಮಣರು. ವಿಕಾಸ್ ದುಬೆ ಎನ್‌ಕೌಂಟರ್ ಒಂದು ನೆಪ ಅಷ್ಟೆ. ಗೂಂಡಾಗಳ ವಿರುದ್ಧ ಕಠಿಣವಾಗಿ ಮಾತನಾಡುವ ಯೋಗಿ ವಿರುದ್ಧ ಬ್ರಾಹ್ಮಣರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ.
ಪೂರ್ತಿ ಉತ್ತರ ಪ್ರದೇಶದಲ್ಲಿ 12 ಪ್ರತಿಶತ ಇರುವ, ಬಿಜೆಪಿ ಕೇಡರ್‌ನಲ್ಲಿ 30 ಪ್ರತಿಶತಕ್ಕೂ ಮೇಲಿರುವ ಬ್ರಾಹ್ಮಣರು ಯೋಗಿಯಿಂದ ಮುನಿಸಿಕೊಂಡು ದೂರ ಹೋದರೆ ಒಂದು ಹೊಸ ಸಮೀಕರಣ ರಚನೆ ಆಗಬಹುದು. ಇದನ್ನು ಸರಿ ಪಡಿಸಲು ಮೋದಿ ತಮ್ಮ ಪರಮಾಪ್ತ ಅಧಿಕಾರಿ ಪೂರ್ವಾಂಚಲದ ಬ್ರಾಹ್ಮಣ ಅರವಿಂದ ಶರ್ಮರನ್ನು ಯುಪಿಗೆ ಕಳುಹಿಸಿದ್ದಾರೆ. ಪುನರಪಿ ಉತ್ತರ ಪ್ರದೇಶ ಗೆಲ್ಲುವುದು ಯೋಗಿ ಮತ್ತು ಮೋದಿ ಇಬ್ಬರ ಅನಿವಾರ್ಯತೆಯೂ ಹೌದು.
ಮಾಯಾ, ಅಖಿಲೇಶ್ ಸ್ಥಿತಿ ಏನು?
ಯುಪಿಯ ಹಳ್ಳಿಹಳ್ಳಿಗಳಲ್ಲಿ ಜನ ಮೋದಿಗಿಂತ ಒಂದು ಹೆಜ್ಜೆ ಖಡಕ್ ಆಗಿ ಮಾತನಾಡುವ ಯೋಗಿ ಅವರನ್ನು ಜಾತಿ ಹೊರತುಪಡಿಸಿ ನೋಡಿದಾಗ ಇಷ್ಟಪಡುತ್ತಾರೆ. ಯೋಗಿ ಜನಪ್ರಿಯತೆ ಹಾಗೇ ಉಳಿಯಲು ಯೋಗಿ ಹೇಳುವ ಹಿಂದುತ್ವ ದೊಡ್ಡ ಕಾರಣ. ಆದರೆ ಚುನಾವಣೆಗೆ 8 ತಿಂಗಳು ಇರುವಾಗಲೂ ಮಾಯಾವತಿ ಇನ್ನೂ ಗ್ರೌಂಡ್‌ನಲ್ಲಿ ಕಾಣುತ್ತಿಲ್ಲ. ಅಖಿಲೇಶ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿ ತಂತ್ರ ಹೆಣೆಯಲು ಓಡಾಡುತ್ತಿದ್ದಾರೆ. ಭೀಮ್ ಆರ್ಮಿಯ ಚಂದ್ರಶೇಖರ ಅಜಾದ್ ಸಮಾಜವಾದಿಗಳ ಜೊತೆ ವಿಲೀನ ಆಗುವ ಸಾಧ್ಯತೆಗಳಿವೆ.
2017ರಲ್ಲಿ ಬಿಜೆಪಿ ಗೆಲ್ಲಲು ಬ್ರಾಹ್ಮಣರು, ಕ್ಷತ್ರಿಯರು, ಬನಿಯಾಗಳ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಯಾದವ ರಹಿತ ಹಿಂದುಳಿದ ವರ್ಗ ಮತ್ತು ಜಾಟವ ರಹಿತ ದಲಿತರು ಬಿಜೆಪಿ ಬೆನ್ನಿಗೆ ನಿಂತಿದ್ದರು. ಹಿಂದುಳಿದ ವರ್ಗದ ಮೋದಿ ಪ್ರಧಾನಿಯಾಗಿ ಇರುವುದು ಕೂಡ ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳು ಯುಪಿಯಲ್ಲಿ ಬಿಜೆಪಿ ಜೊತೆಗೆ ನಿಲ್ಲಲು ಮುಖ್ಯ ಕಾರಣ. ಯೋಗಿ ಮರಳಿ ಗೆಲ್ಲಲು ಈ ಸಣ್ಣ ಸಮುದಾಯಗಳ ವೋಟ್ ಬ್ಯಾಂಕ್ ನಿಸ್ಸಂದೇಹವಾಗಿ ಬೇಕು.
ಕೇಶವ ಮೌರ್ಯ ಮತ್ತೆ ಅಧ್ಯಕ್ಷ?
ಬರೀ ಮೇಲ್ಜಾತಿಗಳ ಮತಗಳನ್ನು ಇಟ್ಟುಕೊಂಡು ಉತ್ತರ ಪ್ರದೇಶ, ಬಿಹಾರದಲ್ಲಿ ಪಾಲಿಟಿಕ್ಸ್ ಮಾಡುವುದು ಸಾಧ್ಯವಿಲ್ಲ. ಗೆಲ್ಲೋದಂತೂ ದೂರದ ಮಾತು. ಕಾಂಗ್ರೆಸ್ ಇದನ್ನು ಅರ್ಥ ಮಾಡಿಕೊಳ್ಳದೇ ಎರಡು ರಾಜ್ಯಗಳಲ್ಲಿ ಶಿಥಿಲವಾಯಿತು. ಇದಕ್ಕಾಗಿಯೇ 1967ರಷ್ಟುಹಿಂದೆಯೇ ದೀನ್‌ದಯಾಳ ಮತ್ತು ನಾನಾಜಿ ದೇಶಮುಖ್ ಅವರು ಚೌಧರಿ ಚರಣ ಸಿಂಗ್ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ ಲೋಧ ಹಿಂದುಳಿದ ವರ್ಗದಿಂದ ಬಂದಿದ್ದ ಕಲ್ಯಾಣ್ ಸಿಂಗ್ ಮತ್ತು ಅಟಲ್ ಬಿಹಾರಿ ತಿಕ್ಕಾಟದಿಂದ ಬಿಜೆಪಿ 17 ವರ್ಷ ವನವಾಸ ಅನುಭವಿಸಿತು.
ಬಂಗಾಳ ಗದ್ದುಗೆ ಗೆದ್ದ ಮಮತಾ ಬ್ಯಾನರ್ಜಿ ಮೋದಿಗೆ ಪರ್ಯಾಯವಾಗಿ ನಿಲ್ಲಬಲ್ಲರೇ?
ಮೇಲ್ಜಾತಿಗಳ ಪಾರ್ಟಿ ಆಗಿ ಉಳಿದಿದ್ದ ಬಿಜೆಪಿಗೆ ಮರಳಿ ಅಧಿಕಾರ ಸಿಕ್ಕಿದ್ದು ನರೇಂದ್ರ ಮೋದಿ ಹಿಂದುಳಿದ ವರ್ಗದ ನಾಯಕ ಎಂದು ಬಿಜೆಪಿ ಬಿಂಬಿಸಿದ ಕಾರಣದಿಂದ. 2017ರಲ್ಲಿ ಬಿಜೆಪಿ ತನ್ನ ರಾಜ್ಯ ಅಧ್ಯಕ್ಷರಾಗಿದ್ದ ಹಿಂದುಳಿದ ವರ್ಗದ ಕೇಶವ ಪ್ರಸಾದ ಮೌರ್ಯರನ್ನು ಪರೋಕ್ಷವಾಗಿ ಸಿಎಂ ಅಭ್ಯರ್ಥಿಯಾಗಿ ಬಿಂಬಿಸಿತ್ತು. ಆದರೆ ಮುಖ್ಯಮಂತ್ರಿಯಾಗಿದ್ದು ಮಾತ್ರ ಯೋಗಿ ಆದಿತ್ಯನಾಥ್. ಈಗ ಚುನಾವಣೆ ಹತ್ತಿರ ಬರುತ್ತಿದೆ. ಯೋಗಿ ಜೊತೆಗೆ ಇನ್ನೊಬ್ಬ ಹಿಂದುಳಿದ ವರ್ಗದ ಮುಖ ತೋರಿಸಬೇಕು ಎನ್ನುವುದು ಬಿಜೆಪಿಗೆ ಅರ್ಥವಾಗುತ್ತಿದೆ. ಹೀಗಾಗಿ ಮರಳಿ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯರನ್ನು ಬಿಜೆಪಿ ಅಧ್ಯಕ್ಷ ಮಾಡಿ, ಮೋದಿ ಮನುಷ್ಯ ಪ್ರಧಾನಿ ಕಾರಾರಯಲಯದಿಂದ ಬಂದು ಶಾಸಕ ಆಗಿರುವ ಅರವಿಂದ ಶರ್ಮಾರನ್ನು ಉಪ ಮುಖ್ಯಮಂತ್ರಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಯಾರೇ ಇರಲಿ ರಾಜ್ಯ ರಾಜಕಾರಣದಲ್ಲಿ ಜಾತಿಯನ್ನು ಮೀರೋದು ಬಹಳ ಕಷ್ಟ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ