ಕರ್ನಾಟಕದ ಮುಖ್ಯಮಂತ್ರಿಯಾಗಿ ಮತ್ತೆ ಸಿದ್ದರಾಮಯ್ಯ ಅವರನ್ನೇ ಆಯ್ಕೆ ಮಾಡಲಾಗಿದೆ, ಡಿಕೆಶಿ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಬೆಂಗಳೂರು (ಮೇ.17): Karnataka Assembly Election 2023 ಫಲಿತಾಂಶ ಹೊರಬಿದ್ದು ನಾಲ್ಕು ದಿನಗಳಾದರೂ ಮುಖ್ಯಮಂತ್ರಿ ಆಯ್ಕೆ ವಿಷಯ ಕಾಂಗ್ರೆಸ್ ಗೆ ಕಗ್ಗಂಟಾಗಿತ್ತು, ಸಿಎಂ ಕುರ್ಚಿಯ ಆಕಾಂಕ್ಷಿಗಳಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಮನವೊಲಿಸುವಲ್ಲಿ ಹೈ ಕಮಾಂಡ್ ಯಶಸ್ವಿಯಾಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಜೊತೆಗೆ, ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗುವ ಜೊತೆಗೆ, ಎರಡು ಪ್ರಬಲ ಖಾತೆಗಳನ್ನು ನೀಡಲು ತೀರ್ಮಾನಿಸಲಾಗಿದೆ.
ಈ ವಿಷಯವಾಗಿ ಖುದ್ದು ರಾಹುಲ್ ಗಾಂಧಿಯೇ, ಜೋಡೆತ್ತಿನ ರೀತಿ ಕಾರ್ಯ ನಿರ್ವಹಿಸಿದ ಇಬ್ಬರೂ ನಾಯಕರನ್ನು ಜೊತೆಯಾಗಿರಿಸಿಕೊಂಡು, ಪ್ರೆಸ್ ಮೀಟ್ ಮಾಡುವ ನಿರೀಕ್ಷೆ ಇದ್ದು, ಮತ್ತಷ್ಟು ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ. ಮೇ 18ರಂದೇ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇಬ್ಬರು ನಾಯಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದ್ದರೂ, ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಒಟ್ಟಿನಲ್ಲಿ ನಡುವಿನ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಕಂಡಿದ್ದು, ಇಡೀ ಕರ್ನಾಟಕದ ಜನತೆಯೇ ನಿರಾಳವಾಗಿದೆ. ಕರ್ನಾಟಕ ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆಗೆ ಇಂದು ಮದ್ಯಾಹ್ನ ಅಧಿಕೃತ ತೆರೆ ಬೀಳಲಿದೆ. ಮದ್ಯಾಹ್ನವೇ ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳಲಿದೆ. ಈ ಮೂಲಕ ಕಾಂಗ್ರೆಸ್ ಹೈ ಕಮಾಂಡ್ ಸಿಎಂ ಆಗಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಡಿ.ಕೆ.ಶಿವಕುಮಾರ್ ಅವರ ಮನವೊಲಿಸಿ ಸಂಧಾನ ಯಶಸ್ವಿಯಾಗಿಸಿದೆ.
ಖರ್ಗೆ ಮೀಟಿಂಗ್‌ನತ್ತ ಎಲ್ಲರ ಚಿತ್ತ
ಸರಣಿ ಸಭೆ ನಡೆದಿತ್ತು:
ಕರ್ನಾಟಕ ಕಾಂಗ್ರೆಸ್‌ನ ದಿಗ್ಗಜ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ‘ಮುಖ್ಯಮಂತ್ರಿ ಹುದ್ದೆ ದಂಗಲ್’ ಚುನಾವಣೆ ಫಲಿತಾಂಶ ಪ್ರಕಟವಾದ ದಿನದಿಂದಲೇ ಅರಂಭವಾಗಿದ್ದು, ಬೆಂಗಳೂರು ಹಾಗೂ ದೆಹಲಿಯಲ್ಲಿ ಸರಣಿ ಸಭೆ ಮತ್ತು ಎಐಸಿಸಿ ಅಧ್ಯಕ್ಷರ ಮಧ್ಯಸ್ಥಿಕೆ ಮಾತುಕತೆಯಾದರೂ ಬಗೆಹರಿದಿರಲಿಲ್ಲ. 4ನೇ ದಿನವಾದ ಬುಧವಾರ ದೆಹಲಿಯಲ್ಲಿ ಖುದ್ದು ವರಿಷ್ಠ ರಾಹುಲ್ ಗಾಂಧಿ ಸಮ್ಮುಖದಲ್ಲಿ ಉಭಯ ನಾಯಕರ ಸಭೆ ನಡೆದಿತ್ತು. ಈ ಹೈವೋಲ್ಟೇಜ್ ಸಭೆಯಲ್ಲಿ ನಿರೀಕ್ಷಿಸಿದಂತೆ ಕಗ್ಗಂಟು ಪರಿಹಾರವಾದಂತೆ ಕಾಣಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆ ಗಮದಲ್ಲಿಟ್ಟುಕೊಂಡು, ಈ ಕರ್ನಾಟಕದ ಉಭಯ ನಾಯಕ ಜೋಡೆತ್ತಿನ ಪ್ರದರ್ಶನ ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ. ಇದನ್ನು ಇಬ್ಬರಿಗೂ ಮನವರಿಕೆ ಮಾಡಿಕೊಡುವಲ್ಲಿ ಹೈ ಕಮಾಂಡ್ ಯಶಸ್ವಿಯಾದಂತೆ ಕಾಣಿಸುತ್ತಿದೆ.
ಡಿಕೆಶಿ ವಾದವೇನಾಗಿತ್ತು:
‘ಈ ಬಾರಿಯ ಚುನಾವಣೆಯಲ್ಲಿ ಕಳೆದ 30 ವರ್ಷಗಳಿಂದ ಕಾಂಗ್ರೆಸ್‌ನಿಂದ ವಿಮುಖವಾಗಿದ್ದ ಒಕ್ಕಲಿಗ ಹಾಗೂ ದಲಿತ ಮತ ಬ್ಯಾಂಕ್ ಮತ್ತೆ ಪಕ್ಷದತ್ತ ಮುಖ ಮಾಡಿದೆ. ದಲಿತರು ನಿಮ್ಮ (ಖರ್ಗೆ) ಮುಖ ನೋಡಿ ಕಾಂಗ್ರೆಸ್ ಪರ ಬಂದಿದ್ದರೆ, ಒಕ್ಕಲಿಗ ಸಮುದಾಯ ನನ್ನ ಮುಖ ನೋಡಿ ಕಾಂಗ್ರೆಸ್‌ಗೆ ಬಂದಿದೆ. ಇದರ ಜತೆಗೆ, ಬೇರೆ ಕಾರಣಗಳಿಗಾಗಿ ಲಿಂಗಾಯತ ಸಮುದಾಯವೂ ಕಾಂಗ್ರೆಸ್ ಅನ್ನು ಬೆಂಬಲಿಸಿದೆ. ಲೋಕಸಭಾ ಚುನಾವಣೆ ಮುಂದಿನ ಸವಾಲು ಆಗಿರುವ ಈ ಹಂತದಲ್ಲಿ ಒಕ್ಕಲಿಗ, ದಲಿತ ಹಾಗೂ ಲಿಂಗಾಯತ ಸಮುದಾಯವನ್ನು ಕಳೆದುಕೊಳ್ಳಬೇಕೇ ಅಥವಾ ಅವರನ್ನು ಜತೆಗಿಟ್ಟುಕೊಳ್ಳಬೇಕೇ ಯೋಚಿಸಿ’ ಎಂಬ ವಾದವನ್ನು ಡಿ.ಕೆ.ಶಿವುಕಮಾರ್ ಹೈ ಕಮಾಂಡ್ ಮೇಲಿಟ್ಟಿದ್ದರು.
‘ಕಳೆದ ಬಾರಿ ಪಕ್ಷ ಚುನಾವಣೆಯಲ್ಲಿ ವೈಫಲ್ಯ ಕಂಡಾಗ ಸಿದ್ದರಾಮಯ್ಯ ಹಾಗೂ ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು. ಇದೀಗ ಭಾರಿ ಬಹುಮತದ ಗೆಲ್ಲುವ ಹಂತಕ್ಕೆ ಪಕ್ಷ ಸಂಘಟಿಸಿ, ಬೆಳೆಸಿದ್ದೇನೆ. ಕೇಂದ್ರದ ಬಿಜೆಪಿ ಸರ್ಕಾರ ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ನಡೆಸಿದರೂ, ಯಾವುದಕ್ಕೂ ಜಗ್ಗದೇ ಪಕ್ಷದ ಪರ ಕೆಲಸ ಮಾಡಿದ್ದೇನೆ. ಪಕ್ಷದ ಸಂಘಟನೆ ಹಾಗೂ ಅನಂತರ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ಸಂಪನ್ಮೂಲ ಸಂಗ್ರಹ ಹಾಗೂ ಹಂಚಿಕೆ ಮಾಡಿದ್ದೇನೆ,’ ಎಂದು ತಮ್ಮ ವಾದ ಮುಂದಿಟ್ಟಿದ್ದರು.
ಕರ್ನಾಟಕದಲ್ಲಿ ಗೆದ್ದೆವು ಎಂದ ಮಾತ್ರಕ್ಕೆ ಇವಿಎಂ ಬಗೆಗಿನ ನಮ್ಮ ಪ್ರಶ್ನೆಗಳು ನಿಲ್ಲಲ್ಲ: ಕಾಂಗ್ರೆಸ್ ನಾಯಕ ಪವನ್ ಖೇರಾ
ಸಿದ್ದರಾಮಯ್ಯ ವಾದವೇನಾಗಿತ್ತು?:
‘ಲೋಕಸಭಾ ಚುನಾವಣೆ ಸಮೀಪವಿದೆ. ಈ ಹಂತದಲ್ಲಿ ಪಕ್ಷದ ಜಾತಿ ಸಮೀಕರಣಕ್ಕೆ ಹಾಗೂ ಪಕ್ಷದ ಸಾಂಪ್ರದಾಯಿಕ ವೋಟ್ ಬ್ಯಾಂಕ್‌ಗೆ ಘಾಸಿಯಾಗುವಂತಹ ನಿರ್ಧಾರ ತೆಗೆದುಕೊಳ್ಳಬಾರದು. ಈ ಬಾರಿಯ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಮೂಡಲು ಶ್ರೀಸಾಮಾನ್ಯರು ಬಿಜೆಪಿ ಆಡಳಿತವನ್ನು ಅದಕ್ಕೆ ಹಿಂದಿನ ನನ್ನ ಐದು ವರ್ಷಗಳ ಆಡಳಿತದ ಜತೆ ಹೋಲಿಸಿಕೊಂಡಿದ್ದು ಕಾರಣ. ನನ್ನ ಅವಧಿಯ ಕಾರ್ಯಕ್ರಮಗಳು ಈಗಲೂ ಜನಪ್ರಿಯ. ಇದರಿಂದಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ವರ್ಚಸ್ಸು ಬಂದಿದೆ,’ ಎಂದು ಸಿದ್ದರಾಮಯ್ಯ ತಮ್ಮನ್ನು ಸಿಎಂ ಮಾಡುವಂತೆ ಆಗ್ರಹಿಸಿದ್ದರು.
ಅಲ್ಲದೆ, ‘ಈ ಬಾರಿಯ ಮುಖ್ಯಮಂತ್ರಿ ಹುದ್ದೆಗೆ ಯಾರು ಅರ್ಹ ಎಂದು ನಡೆಸಿದ ಸರ್ವೇಯಲ್ಲಿ ಶೇ. 42ಕ್ಕೂ ಹೆಚ್ಚು ಮಂದಿ ನನ್ನ ಹೆಸರನ್ನೇ ಹೇಳಿದ್ದಾರೆ. ಹಾಲಿ ಶಾಸಕರ ಬೆಂಬಲವೂ ನನಗಿದೆ. ಈ ಬಾರಿಯ ಚುನಾವಣೆ ನನ್ನ ಕಡೆಯ ಚುನಾವಣೆ ಎಂದು ಹೇಳಿದ್ದೆ. ಚುನಾವಣಾ ರಾಜಕೀಯದಿಂದ ನಿವೃತ್ತನಾಗುವ ಮಾತು ಹೇಳಿದ್ದೇನೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆ ನನಗೆ ನೀಡಬೇಕು. ಇಲ್ಲದಿದ್ದರೆ ಅಹಿಂದ ವರ್ಗದ ಬೆಂಬಲಕ್ಕೆ ಧಕ್ಕೆ ಬರುತ್ತದೆ’ ಎಂದು ವಾದಿಸಿದರು ಎನ್ನಲಾಗಿದೆ.
DK Shivakumar: ಮಕ್ಕಳಿಗೆ ಏನು ನೀಡಬೇಕೆಂದು ತಾಯಿಗೆ ಗೊತ್ತು: ಡಿಕೆಶಿ ಭಾವುಕ ನುಡಿ